
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
64
ಬೆಂಗಳೂರಿಗೆ ಬಂದು ಒಂದೆರಡು ದಿನ ಅಮ್ಮನ ಆರೈಕೆಯಲ್ಲಿ ಚೇತರಿಸಿಕೊಂಡು ನಂತರ ಒಂದು ಸಂಜೆ ಕಲಾಕ್ಷೇತ್ರಕ್ಕೆ ಹೋದೆ. ಗೆಳೆಯ ಫಣಿಗೆ ಮೊದಲೇ ಫೋನ್ ಮಾಡಿ ಹೇಳಿದ್ದರಿಂದ ಫಣಿ, ಪ್ರಸಾದಿ, ಗೋಪಿ, ಗುರುದತ್ತ ಹಾಗೂ ಸುಶೀಲೇಂದ್ರ ನಾನು ಹೋಗುವ ಮೊದಲೇ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ವಿರಾಜಮಾನರಾಗಿದ್ದರು.
ಮೊದಲಿನ ಲವಲವಿಕೆ ಹಾಗೂ ಸಂಭ್ರಮಗಳಿಲ್ಲದಿದ್ದರೂ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಹರಟೆ ಹೊಡೆದು ಮೆಟ್ರೋದಲ್ಲಿ ಟೀ ಕುಡಿದು ಬಂದಮೇಲೆ ಪ್ರಸಾದಿ ನಿಧಾನಕ್ಕೆ ತನ್ನ ಚೀಲದಿಂದ ಒಂದು ಪೇಪರ್ ತೆಗೆದ.ಅದರಲ್ಲಿ ಒಂದು ಪುಟವನ್ನು ಹುಡುಕಿ ತೆಗೆದು ಅದರಲ್ಲಿ ಪ್ರಕಟವಾಗಿದ್ದ ಒಂದು ಜಾಹೀರಾತನ್ನು ತೋರಿಸುತ್ತಾ ‘ಇದನ್ನ ಒಂದು ಸಲ ಓದಿನೋಡು’ ಎಂದ.ನೋಡಿದರೆ ಅದು ದೂರದರ್ಶನದಲ್ಲಿ staff artist ಹುದ್ದೆಗಾಗಿ ಬಂದಿದ್ದ ಜಾಹೀರಾತು! ನಾನು ಪೇಪರ್ ಹಿಂದಿರುಗಿಸುತ್ತಾ, “ಇದನ್ನ ನನಗ್ಯಾಕೆ ತೋರಿಸ್ತಿದೀಯಾ ಪ್ರಸಾದಿ?’ ಎಂದೆ. “ಇನ್ನು ಯಾತಕ್ಕೆ? ನಿನ್ನ ಕೈಲಿ apply ಮಾಡಿಸೋದಕ್ಕೆ” ಎಂದ ಪ್ರಸಾದಿ.ನನ್ನದು ಖಚಿತ ದನಿಯಲ್ಲಿ ನಿರಾಕರಣೆಯ ಉತ್ತರ: “ಇಲ್ಲ ಪ್ರಸಾದಿ.ನಾನು ಯಾವುದೇ ಸರ್ಕಾರಿ ಕೆಲಸಕ್ಕೂ ಅರ್ಜಿ ಹಾಕ್ಕೊಳೋಲ್ಲ. ಅದಕ್ಕೂ ನನಗೂ ಆಗಿಬರೋಲ್ಲ.ಜೊತೇಗೆ ಈಗಷ್ಟೇ ಉಡುಪಿಯಲ್ಲಿ ಹೊಸ ಕೆಲಸಕ್ಕೆ ಸೇರಿದೀನಿ…ಬಿಟ್ಟು ಬರೋದಾದರೂ ಹೇಗೆ? ಅದೆಲ್ಲಾ ಆಗೋಲ್ಲ”.
ಪ್ರಸಾದಿಯ ಮಾರುತ್ತರ ಸಿದ್ಧವಾಗಿತ್ತು:
“ಅಯ್ಯೋ ದೇವರೇ! application ಏ ಹಾಕಿಲ್ಲ..ಆಗಲೇ ಬಿಟ್ಟುಬರೋ ಯೋಚನೆ ಮಾಡ್ತಿದೀಯಲ್ಲಾ! ಸ್ವಲ್ಪ calm ಆಗಿ ಕೂತು ಯೋಚನೆ ಮಾಡು. ಬೆಂಗಳೂರಲ್ಲೇ ದೂರದರ್ಶನ ಕೇಂದ್ರ ಶುರುವಾಗ್ತಿದೆ..ದೂರದರ್ಶನ ಮುಂದಿನ ವರ್ಷಗಳಲ್ಲಿ ಅದೆಷ್ಟು ಅಗಾಧವಾಗಿ ಬೆಳೆಯುತ್ತೆ ಅನ್ನೋದನ್ನ ನೀನು ಊಹಿಸೋದಕ್ಕೂ ಸಾಧ್ಯವಿಲ್ಲ. ಮೇಲಾಗಿ ಇದೂ ಕೂಡಾ ಒಂದು ದೃಶ್ಯ ಮಾಧ್ಯಮಾನೇ.ನಿನಗೆ ನಾಟಕ ಮಾಡಿಸೋದಕ್ಕೆ, ಕಿರುಚಿತ್ರಗಳನ್ನ ಮಾಡೋದಕ್ಕೆ ಹೇರಳವಾದ ಅವಕಾಶಗಳಿರುತ್ವೆ..ಸರ್ಕಾರಿ ಕೆಲಸ ಆದ್ದರಿಂದ ಬೇಕಾದಷ್ಟು ಸವಲತ್ತು—ಅನುಕೂಲಗಳು ದೊರೆಯುತ್ವೆ..ನಮಗಳ ಥರಾ ಆಫೀಸಲ್ಲಿ ಕೂತು ನೀನೇನೂ ಗುಮಾಸ್ತಗಿರಿ ಮಾಡಬೇಕಾಗಿಲ್ಲ.ನನ್ನ ಕೇಳಿದರೆ ನೀನು apply ಮಾಡೋದು ತುಂಬಾ ಒಳ್ಳೇದು.”
ಉಳಿದ ಗೆಳೆಯರೂ ಬಿಡುವು ಕೊಡದಂತೆ ಪ್ರಸಾದಿಯ ಮಾತುಗಳನ್ನು ಅನುಮೋದಿಸತೊಡಗಿದರು. ನಾನು ಇನ್ನಿಲ್ಲದಂತೆ ನನ್ನ ವಾದ ಸರಣಿಯನ್ನು ಮಂಡಿಸುತ್ತಲೇ ಹೋದೆ. ಈ ಹಗ್ಗ ಜಗ್ಗಾಟ ಸಾಕಷ್ಟು ಹೊತ್ತು ಮುಂದುವರಿಯಿತು. ಕೊನೆಗೆ ಕಡ್ಡಿ ಎರಡು ತುಂಡು ಮಾಡಿದಂತೆ ಪ್ರಸಾದಿ ಹೇಳಿಬಿಟ್ಟ:
“ಇನ್ನು ಹೆಚ್ಚು ಚರ್ಚೆ ಬೇಡ. ನಿನಗೇ ಬಿಟ್ಟರೆ ನೀನು apply ಮಾಡೋದಿಲ್ಲ ಅಂತ ನನಗೆ ಗೊತ್ತು. ಹೀಗೆ ಮಾಡೋಣ: ಒಂದು ಬಿಳಿ ಹಾಳೆಗೆ ನೀನು ನಿನ್ನ ಸಹಿ ಹಾಕಿಕೊಡು.. ನಾಳೆ ಮನೇಗೆ ಬಂದು ನಿನ್ನ ಮಾರ್ಕ್ಸ್ ಕಾರ್ಡು—ಸರ್ಟಿಫಿಕೇಟ್ ಗಳನ್ನು ತೊಗೊಂಡು ಬಂದು ನಿನ್ನ ಪರವಾಗಿ ನಾವೇ application ಹಾಕ್ತೀವಿ. ಮುಂದೆ ಏನಾಗುತ್ತೋ ನೋಡಿಕೊಳ್ಳೋಣ. apply ಮಾಡಿದಾಕ್ಷಣಕ್ಕೆ ಕೆಲಸ ಸಿಕ್ಕಿಬಿಡೋಲ್ಲ.. ಕೆಲಸ ಸಿಕ್ಕಿದಾಕ್ಷಣಕ್ಕೆ ಸೇರಬೇಕೂಂತಾನೂ ಇಲ್ಲ.. ಸೇರಿದಾಕ್ಷಣಕ್ಕೆ ಬಿಟ್ಟುಬರಬಾರದು ಅಂತಾನೂ ಇಲ್ಲ! ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಏನು ಮಾಡಬೇಕು ಅಂತ ನಿರ್ಧಾರ ಮಾಡಿದರಾಯ್ತು”.

ಇದರ ಮಧ್ಯೆ ಗುರುದತ್ತನ ಒಗ್ಗರಣೆ: “ನಿನಗೆ ಡೆಲ್ಲೀಗೆ interview ಗೆ ಹೋಗಿಬರೋ ಖರ್ಚಿಗೆ ಈ ಸಲ ನಮ್ಮ ABC ಬ್ಯಾಂಕ್ ನ ಚೀಟಿ ದುಡ್ಡನ್ನ ನಾವು reserve ಮಾಡಿದೀವಿ.ನಿನಗೆ ಆ ತಲೆಬಿಸಿ ಏನೂ ಬೇಡ”.
ಜೊತೆಗೆ ಫಣಿಯ ಪಕ್ಕವಾದ್ಯ:
“ಹಾಗೂ ದುಡ್ಡು ಕಮ್ಮಿ ಬೀಳುತ್ತೇಂದ್ರೆ ನಮ್ಮ canara bank ಇದೆ—ಆಪದ್ಬಾಂಧವನಾಗಿ! ತಲೇನೇ ಕೆಡಿಸ್ಕೋಬೇಡಿ!”
ಗೆಳೆಯರ ಪ್ರೀತಿಯ —ಕಾಳಜಿಯ ಒತ್ತಾಯಕ್ಕೆ ನಾನು ಮಣಿಯದೇ ಬೇರೆ ದಾರಿಯೇ ಇರಲಿಲ್ಲ.ನನ್ನ ಒಳಮನಸ್ಸು ಬೇರೆ, “ನಿನಗೆಲ್ಲಿ ಸಿಗುತ್ತೆ ಸರ್ಕಾರಿ ಕೆಲಸ! ಈ ಗೆಳೆಯರ ಒತ್ತಾಯಕ್ಕೆ ಒಂದ್ಸಲ ಡೆಲ್ಲಿ ಯಾತ್ರೆ ಮಾಡಿ ಅಲ್ಲಿ ಸುಬ್ಬಣ್ಣನ ಜೊತೆ ಎರಡು ದಿನ ಇದ್ದು ಬರೋ ಹೊತ್ತಿಗೆ ಡೆಲ್ಲಿಯಿಂದ rejection letter ಬಂದಿರುತ್ತೆ.. ನಿರಾಳವಾಗಿ ಉಡುಪಿಗೆ ಹೋಗಿ ಕೆಲಸ ಮುಂದುವರಿಸಿದರಾಯ್ತು ಬಿಡು” ಎಂದು ಸಮಾಧಾನ ಹೇಳುತ್ತಿತ್ತು. ಪ್ರಸಾದಿ ಅಲ್ಲೇ ತನ್ನ ಚೀಲದಿಂದ ಬಿಳಿಹಾಳೆ ತೆಗೆದು ನನ್ನ ಸಹಿ ಹಾಕಿಸಿಕೊಂಡೇ ಬಿಟ್ಟ! ಮರುದಿನ ನೆಚ್ಚಿನ ಬಂಟ ಗೋಪಿ ಬಂದು ಅಗತ್ಯವಿದ್ದ ದಾಖಲೆಗಳನ್ನು ತೆಗೆದುಕೊಂಡು ಹೋದ.ಏನಾದರೂ ಮಾಡಿ ನನ್ನನ್ನು ದೂರದರ್ಶನಕ್ಕೆ ಸೇರಿಸಿ ಬಿಡಬೇಕೆಂದು ಗೆಳೆಯರು ಶಪಥ ಮಾಡಿದಂತಿತ್ತು! ಇಂಥ ಅಪರೂಪದ ಗೆಳೆಯರ ಈ ನಿಸ್ಸಂಶಯ ಪ್ರೀತಿ—ಕಾಳಜಿಗಳಿಗೆ ಶರಣಾಗತಿಯಲ್ಲದೇ ಅನ್ಯಮಾರ್ಗವಾದರೂ ಏನಿದೆ?!
ಇದಾದ ಎರಡು ದಿನಕ್ಕೆ ನಾನು ಉಡುಪಿಗೆ ಹೊರಟುಬಿಟ್ಟೆ.ಅನಾರೋಗ್ಯದ ನಿಮಿತ್ತ ಹೆಚ್ಚುಕಡಿಮೆ ಹದಿನೈದು ದಿನಗಳೇ ಗೈರಾಗಿದ್ದುದರಿಂದ ರಾಶಿ ಕೆಲಸ ಒಟ್ಟುಗೂಡಿತ್ತು.ಅದನ್ನೆಲ್ಲಾ ಮುಗಿಸುವುದರಲ್ಲಿ ಮಗ್ನನಾಗಿ ಹೋದ ನನಗೆ ಬೆಂಗಳೂರು—ದೂರದರ್ಶನಗಳೆಲ್ಲವೂ ಹಿನ್ನೆಲೆಗೆ ಜಾರಿ ಮರೆತಂತೇ ಆಗಿಬಿಟ್ಟವು.
1983 ಡಿಸೆಂಬರ್ ಮಾಹೆಯ ಆರಂಭದ ದಿನಗಳು.
ನಮ್ಮ ಕೇಂದ್ರದ ಕಛೇರಿಗೆ ಬೆಂಗಳೂರಿನಿಂದ ಕುಮಾರಣ್ಣಯ್ಯನ ಕರೆ ಬಂತು: ದೆಹಲಿ ದೂರದರ್ಶನದಿಂದ ಸಂದರ್ಶನಕ್ಕೆ ಟೆಲಿಗ್ರಾಂ ಸಂದೇಶ ಬಂದಿದೆ! ಟೆಲಿಗ್ರಾಂ ಕೈ ಸೇರಿರುವುದು ಡಿಸೆಂಬರ್ 9ನೆಯ ತಾರೀಖು.. ಡಿಸೆಂಬರ್ 12 ರಂದು ಸಂದರ್ಶನ! ನಾನು 10 ನೆಯ ತಾರೀಖು ಬೆಳಿಗ್ಗೆ ಜಿ ಟಿ ಎಕ್ಸ್ ಪ್ರೆಸ್ ಗೆ ಹೊರಡಲೇಬೇಕು!ಅದಕ್ಕೆ ಟೆಕೆಟ್ ಈಗಾಗಲೇ ಕಾದಿರಿಸಿಯಾಗಿದೆ! ಅಂದರೆ ಆ ರಾತ್ರಿಯೇ ನಾನು ಉಡುಪಿಯಿಂದ ಬೆಂಗಳೂರಿಗೆ ಹೊರಡಬೇಕು! ಕೇಂದ್ರದಲ್ಲಿ ಕು.ಶಿ.ಯವರು ಇರಲಿಲ್ಲ. ಬೇರಾವುದೋ ಕಾರ್ಯ ನಿಮಿತ್ತ ಅವರು ಕಾರವಾರಕ್ಕೆ ಹೋಗಿದ್ದರು.ನಾನು ನಮ್ಮ ಕೇಂದ್ರದ ನಿರ್ದೇಶಕರಾಗಿದ್ದ ಶಂಕರ್ ಅವರ ಅನುಮತಿಯನ್ನು ಪಡೆದುಕೊಂಡು ರಾತ್ರಿ ಬೆಂಗಳೂರು ಬಸ್ ಹತ್ತಿದೆ. ಜಿ.ಟಿ.ಎಕ್ಸ್ ಪ್ರೆಸ್ ಬೆಂಗಳೂರಿನಿಂದ ಹೊರಡುತ್ತಿದ್ದುದು ಬೆಳಿಗ್ಗೆ 6.30ರ ಸುಮಾರಿಗೆ. ಉಡುಪಿಯ ಬಸ್ ಬೆಂಗಳೂರು ತಲುಪುತ್ತಿದ್ದುದು ಬೆಳಿಗ್ಗೆ 5.30 ರ ಸುಮಾರಿಗೆ ಆದ್ದರಿಂದ ಬಸ್ ನಿಲ್ದಾಣದಿಂದ ಮನೆಗೆ ಹೋಗಿ ಮತ್ತೆ ಮರಳಿ ರೈಲ್ವೇನಿಲ್ದಾಣಕ್ಕೆ ಬರುವಷ್ಟು ಸಮಯವಿರಲಿಲ್ಲ. ಹಾಗಾಗಿ ಕುಮಾರಣ್ಣಯ್ಯ ಟಿಕೆಟ್ ಹಾಗೂ ಕೆಲ ಅಗತ್ಯ ಸಾಮಗ್ರಿಗಳೊಂದಿಗೆ ರೈಲ್ವೇ ಸ್ಟೇಷನ್ ಮುಂದೆ ನನಗಾಗಿ ಕಾಯುತ್ತಿರುವುದಾಗಿ ಮುಂಚಿತವಾಗಿಯೇ ಫೋನ್ ಮಾಡಿ ತಿಳಿಸಿದ್ದ. ಅಂತೆಯೇ ಬೆಂಗಳೂರಿನ ಬಸ್ ಸ್ಟಾಂಡ್ ನಲ್ಲಿ ಬಸ್ ನಿಂದ ಇಳಿದವನೇ ನಾನು ರೈಲ್ವೇಸ್ಟೇಷನ್ ಗೆ ಧಾವಿಸಿದೆ. ಅದಾಗಲೇ ಅಲ್ಲಿ ಬಂದು ಕಾಯುತ್ತಿದ್ದ ಅಣ್ಣಯ್ಯನ ಕೈಯಿಂದ ಟಿಕೆಟ್ ಅನ್ನೂ ಅವನ ಶುಭ ಹಾರೈಕೆಗಳನ್ನೂ ಪಡೆದುಕೊಂಡು ಸ್ಟೇಷನ್ ಒಳಗೋಡಿ ಹೊರಡಲು ಸಿದ್ಧವಾಗಿ ನಿಂತಿದ್ದ ಬಂಡಿಯನ್ನೇರಿ ನನ್ನ ಸೀಟ್ ಹುಡುಕಿ ಕೂರುತ್ತಿದ್ದಂತೆಯೇ ರೈಲು ಹೊರಟೇಬಿಟ್ಟಿತು.
ಎರಡು ದಿನಗಳ ಸುದೀರ್ಘ ಪ್ರಯಾಣದ ನಂತರ ದೆಹಲಿ ತಲುಪಿ ಸೀದಾ ಸುಬ್ಬಣ್ಣನ ಮನೆಗೆ ಹೋದೆ. ಸುಬ್ಬಣ್ಣನೂ ನನಗಾಗಿಯೇ ಕಾಯುತ್ತಿದ್ದ. ಒಂದಷ್ಟು ಹೊತ್ತು ಅವನೊಂದಿಗೆ ಹರಟಿ ಸ್ನಾನಾದಿಗಳನ್ನು ಮುಗಿಸಿಕೊಂಡು ಸಂದರ್ಶನಕ್ಕೆ ಸಿದ್ಧನಾಗಿ ಹೊರಟೆ. ದೂರದರ್ಶನ ಕೇಂದ್ರವಿದ್ದುದೂ ನಮ್ಮ ನಾಟಕ ಶಾಲೆಯಿದ್ದ ಮಂಡಿ ಹೌಸ್ ಬಡಾವಣೆಯಲ್ಲಿಯೇ…ಶಾಲೆಯಿಂದ ಕೇವಲ ನೂರಿನ್ನೂರು ಮೀಟರ್ ಗಳಷ್ಟು ದೂರದಲ್ಲಿಯೇ. ಸಂದರ್ಶನಕ್ಕಾಗಿ ನಾನು ಯಾವುದೇ ರೀತಿಯ ಪೂರ್ವಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ. ಅಸಲಿಗೆ ಈ ಸರ್ಕಾರಿ ಕೆಲಸ ನನಗೆ ಸಿಗುತ್ತದೆಂಬ ಭರವಸೆಯೇ ನನಗೆ ಇರಲಿಲ್ಲವಾದ್ದರಿಂದ ಒಂದು ರೀತಿಯ ಉಡಾಫೆ—ಭಂಡತನ ನನ್ನಲ್ಲಿ ಮನೆ ಮಾಡಿತ್ತು. ಈ ಭಂಡತನವೇ ನಾನು ಸಂದರ್ಶನಕ್ಕೆಂದು ಒಳಗೆ ಹೋಗುವಾಗ ಒಂದು ವಿಚಿತ್ರ ಆತ್ಮವಿಶ್ವಾಸವನ್ನು ನನ್ನಲ್ಲಿ ತುಂಬಿಬಿಟ್ಟಿತ್ತು!
ಅಚ್ಚರಿಯ ಸಂಗತಿ ಎಂದರೆ ಬಹುಶಃ ಇಷ್ಟೂ ವರ್ಷಗಳಲ್ಲಿ ನಾನು ಎದುರಿಸಿದ ಸಂದರ್ಶನಗಳಲ್ಲೆಲ್ಲಾ ಇದು ಅತ್ಯಂತ ಯಶಸ್ವೀ ಸಂದರ್ಶನವಾಗಿತ್ತು! ನಾನು NSD ಯಲ್ಲಿ ಕಲಿತವನೆಂದು ತಿಳಿದ ಕೂಡಲೇ ಸಂದರ್ಶಕರ ಮಾತಿನ ವರಸೆಯೇ ಬದಲಾಗಿ ಹೋಯಿತು. ಅವರೆಲ್ಲಾ ಪ್ರಶ್ನೆಗಳೂ ನಾಟಕ—ಸಿನೆಮಾಗಳನ್ನೇ ಕೇಂದ್ರವಾಗಿಟ್ಟುಕೊಂಡಿದ್ದು ನನಗೆ ಉತ್ತರಿಸುವುದು ಎಳ್ಳುಕಾಳಿನಷ್ಟೂ ಕಷ್ಟವಾಗಲಿಲ್ಲ. ಸಂದರ್ಶನ ಮುಗಿಸಿಕೊಂಡು ಹೊರಬಂದರೆ ಅದಾಗಲೇ ಸುಬ್ಬಣ್ಣ ಅಲ್ಲಿ ಬಂದು ಕಾಯುತ್ತಿದ್ದ.
ಅಲ್ಲಿಂದ ನಮ್ಮ ನಾಟಕಶಾಲೆಗೆ ಹೋಗಿ ಹಳೆಯ ಗೆಳೆಯರನ್ನೂ ಅಧ್ಯಾಪಕರನ್ನೂ ಭೇಟಿ ಮಾಡಿ ಒಂದಷ್ಟು ಹೊತ್ತು ಉಭಯಕುಶಲೋಪರಿ ನಡೆಸಿ ಸುಬ್ಬಣ್ಣನೊಟ್ಟಿಗೆ ಅವನ ಕೋಣೆಗೆ ಮರಳಿದೆ. ಆ ವೇಳೆಗಾಗಲೇ ಸಂದರ್ಶನ..ದೂರದರ್ಶನ..ಕೆಲಸ..ಇತ್ಯಾದಿ ಸಂಗತಿಗಳೆಲ್ಲಾ ನೆನಪಿನಿಂದಲೇ ಮರೆಯಾಗಿಹೋಗಿದ್ದವು.ಎರಡು ದಿನಗಳು ಸುಬ್ಬಣ್ಣನೊಟ್ಟಿಗೆ ಕಳೆದು ನಂತರ ಬೆಂಗಳೂರಿಗೆ ಮರಳಿದೆ.ಉಡುಪಿಗೆ ಹೊರಡುವುದನ್ನು ತಡ ಮಾಡುವಂತಿರಲಿಲ್ಲವಾದ್ದರಿಂದ ಮರುದಿನದ ಬಸ್ ಗೆ ಸ್ಥಳ ಕಾದಿರಿಸಿದೆ.ಅಂದು ಸಂಜೆ ಗೆಳೆಯರೊಂದಿಗೆ ಸೌತ್ ಎಂಡ್ ಸರ್ಕಲ್ ಬಳಿ ಇದ್ದ ಶಾಂತಿ ಥಿಯೇಟರ್ ಗೆ ಶ್ಯಾಮ್ ಬೆನಗಲ್ ರ ‘ಮಂಡಿ’ ಸಿನೆಮಾ ನೋಡಲು ಹೋದೆ.
ಟೆಕೆಟ್ ತೆಗೆದುಕೊಂಡ ಮೇಲೆ ಶೋ ಪ್ರಾರಂಭವಾಗಲು ಇನ್ನೂ ಸಮಯವಿದ್ದುದರಿಂದ ಹೊರಗಡೆಯೇ ಗೆಳೆಯರೊಂದಿಗೆ ಹರಟುತ್ತಾ ನಿಂತಿದ್ದೆ. ಇದ್ದಕ್ಕಿದ್ದಂತೆ ಅಲ್ಲಿಗೆ ಕುಮಾರಣ್ಣಯ್ಯನ ಆಗಮನವಾಯಿತು! ನಾವು ಸಿನೆಮಾ ನೋಡಲು ಆ ಥಿಯೇಟರ್ ಗೆ ಬಂದಿರುವುದು ಅವನಿಗೆ ತಿಳಿದಿದ್ದರೂ ಹಾಗೆ ಅವನು ಧಿಡೀರನೆ ಬಂದದ್ದು ನನಗೆ ಒಂದೆಡೆ ಅಚ್ಚರಿ.. ಇನ್ನೊಂದೆಡೆ ಸಣ್ಣ ಆತಂಕ! ಕುಮಾರಣ್ಣಯ್ಯ ಹಿಗ್ಗಿನಿಂದ ಹೇಳಿದ: “congrats!ದೆಹಲಿಯಿಂದ ಟೆಲಿಗ್ರಾಂನಲ್ಲಿ order ಬಂದಿದೆ! ನೀನು ದೂರದರ್ಶನದಲ್ಲಿ ಪ್ರೊಡ್ಯೂಸರ್ ಹುದ್ದೆಗೆ ಆಯ್ಕೆಯಾಗಿದ್ದೀಯಾ! ಮುಂದಿನ ವಾರವೇ ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ಗೆ ಹೋಗಿ ರಿಪೋರ್ಟ್ ಮಾಡಿಕೋಬೇಕು! ಅಲ್ಲಿ ನಾಲ್ಕು ತಿಂಗಳ ಟ್ರೈನಿಂಗ್ ಇದೆಯಂತೆ”! ಅಣ್ಣಯ್ಯನ ಮಾತುಗಳು ನನ್ನ ಕಿವಿಗಳಿಂದ ಪ್ರಜ್ಞೆಯ ಮಟ್ಟಕ್ಕೆ ಇಳಿದು ದಾಖಲಾಗುವುದಕ್ಕೆ ಹಲ ನಿಮಿಷಗಳೇ ಬೇಕಾದುವು! ಅಷ್ಟು ಹೇಳಿ ಅಣ್ಣಯ್ಯ, “ಸಿನೆಮಾ ಮುಗಿಸಿಕೊಂಡು ಮನೆಗೆ ಬಾ..ಎಲ್ಲಾ ಡೀಟೇಲ್ ಆಗಿ ಮಾತಾಡೋಣ” ಎಂದು ನುಡಿದು ಹೊರಟುಹೋದ. ಜತೆಯಲ್ಲಿದ್ದ ನನ್ನ ಗೆಳೆಯರಿಗೆ ಖುಷಿಯೋ ಖುಷಿ! ಅವರುಗಳೇ ಅಲ್ಲವೇ ಈ ಕೆಲಸಕ್ಕೆ ಅರ್ಜಿ ಹಾಕಲು ನನ್ನ ಮನ ಒಲಿಸಿದ್ದು! ಅಂದರೆ ನನಗೆ ಸರ್ಕಾರಿ ಕೆಲಸ ಸಿಕ್ಕಿಯೇಬಿಟ್ಟಿದೆ! ಕನಸುಮನಸಿನಲ್ಲೂ ಊಹಿಸಿರದಿದ್ದ ಪವಾಡ ಘಟಿಸಿಯೇ ಬಿಟ್ಟಿದೆ! ಮತ್ತೊಮ್ಮೆ ಕವಲುದಾರಿಯಲ್ಲಿ ಬಂದು ನಿಂತೆನೇ ನಾನು?! ಈ ಅನಿರೀಕ್ಷಿತ ಬೆಳವಣಿಗೆಯಿಂದ ಮತ್ತೆ ಮನಸ್ಸು ಗೊಂದಲದ ಗೂಡಾಗಿಹೋಯಿತು.ಈ ಗೊಂದಲ—ದ್ವಂದ್ವಗಳ ಭರಾಟೆಯಲ್ಲಿ ‘ಮಂಡಿ’ ಚಿತ್ರದ ಒಂದೇ ಒಂದು ಚಿತ್ರಿಕೆಯಾಗಲೀ ಸಂಭಾಷಣೆಯಾಗಲೀ ನನ್ನ ಮನಸ್ಸಿನಲ್ಲಿ ದಾಖಲಾಗಲೇ ಇಲ್ಲ!
ಮುಂದಿನೆರಡು ದಿನ ಮನೆಯಲ್ಲಿ ಹಾಗೂ ಮಿತ್ರರೊಡನೆ ಇದೇ ವಿಚಾರದ ಕುರಿತು ಚರ್ಚೆ—ಮಾತುಕತೆ! ಮನೆಯಲ್ಲಂತೂ ಹೆಚ್ಚುಕಡಿಮೆ ಎಲ್ಲರದೂ ಒಂದೇ ಅಭಿಪ್ರಾಯ: ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ಮುಂಬರುವ ವರ್ಷಗಳಲ್ಲಿ ದೂರದರ್ಶನ, ಮಾಧ್ಯಮ ಲೋಕದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಲಿದೆ.ಈ ಪ್ರಾರಂಭದ ದಿನಗಳಿಂದಲೇ ಆ ಸಂಸ್ಥೆಯೊಟ್ಟಿಗಿದ್ದರೆ ಉತ್ತಮ ಭವಿಷ್ಯ ಸುನಿಶ್ಚಿತ; ಕೇಂದ್ರಸರ್ಕಾರಿ ನೌಕರಿಯಾದ್ದರಿಂದ ಸುರಕ್ಷತೆಯ ಜತೆಗೆ ಅನೇಕ ಅನುಕೂಲಗಳು ಒದಗಿಬರುತ್ತವೆ; ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಕೆಲದಿನಗಳು ಕಳೆದರೆ ನನ್ನ ವಯಸ್ಸು ಕೆಲಸಗಳಿಗೆ ಅರ್ಜಿ ಹಾಕಲು ಇರುವ ಗರಿಷ್ಠ ವಯೋಮಿತಿಯನ್ನು ದಾಟಿಬಿಡುವುದರಿಂದ, ನನಗೆ ಬೇಕೆಂದರೂ ಅರ್ಜಿ ಹಾಕುವ ಅರ್ಹತೆ ಇರುವುದಿಲ್ಲ! ಇನ್ನು ಗೆಳೆಯರಂತೂ ನನ್ನನ್ನು ದೂರದರ್ಶನಕ್ಕೆ ಸೇರಿಸಲೇಬೇಕೆಂದು ಪಣ ತೊಟ್ಟಂತಿತ್ತು!”ಕೆಲಕಾಲ ಕೆಲಸ ಮಾಡಿನೋಡು..ತೀರಾ ನಿನ್ನ ಮನೋಧರ್ಮಕ್ಕೆ ಆಗಿಯೇ ಬರದಿದ್ದರೆ ರಾಜೀನಾಮೆ ಎಸೆದು ಬಂದರಾಯಿತು; ಸೇರುವ ಮೊದಲೇ ಪೂರ್ವಗ್ರಹ ನಿರ್ಧಾರಗಳು ಕಾಡುವುದು ಬೇಡ”!
ಇವರೆಲ್ಲರ ಒತ್ತಾಸೆಯ ಜತೆಗೆ ಕಷ್ಟಪಟ್ಟು ಬೆಳೆಸಿದ್ದ ನಮ್ಮ ನಾಟಕ ತಂಡ ಕಣ್ಣೆದುರಿಗೇ ಒಡೆದುಹೋದ ಯಾತನಾಮಯ ಪ್ರಸಂಗದ ನೆನಪೂ ಹಸಿಯಾಗಿಯೇ ಇದ್ದುದರಿಂದ ಮನಸ್ಸು ದೂರದರ್ಶನದೆಡೆಗೆ ಸಹಜವಾಗಿಯೇ ವಾಲಿದರೂ ಮತ್ತೊಂದು ವಿಚಾರ ನನ್ನನ್ನು ಬಾಧಿಸತೊಡಗಿತು:ನಾನೀಗ ಈ ಕೆಲಸಕ್ಕೆ ಸೇರಬೇಕಾದರೆ ಉಡುಪಿ ಸಂಶೋಧನಾ ಕೇಂದ್ರದ ಕೆಲಸ ಬಿಡಬೇಕು! ಆಗ ಕು.ಶಿ.ಅವರಿಗಾಗಬಹುದಾದ ನಿರಾಸೆ—ತೊಂದರೆಗಳನ್ನು ನೆನೆದು ಒಂದು ರೀತಿಯ ಅಪರಾಧೀಭಾವ ನನ್ನನ್ನು ಕಾಡತೊಡಗಿತು.

ನಾನು ಉಡುಪಿಯ ಸಂಶೋಧನಾ ಕೇಂದ್ರದಲ್ಲಿ ಯಾವುದೇ ಕರಾರುಪತ್ರಕ್ಕೆ ಸಹಿಯನ್ನೇನೂ ಮಾಡಿರಲಿಲ್ಲ, ಅಥವಾ ಇಂತಿಷ್ಟು ವರ್ಷ ಕೆಲಸ ಮಾಡಬೇಕೆಂಬ ಒಪ್ಪಂದವೂ ಆಗಿರಲಿಲ್ಲ. ಆದರೆ ಇದು ಕಾನೂನಾತ್ಮಕವಾದ ಪ್ರಶ್ನೆಗಿಂತ ತಾತ್ವಿಕ— ನೈತಿಕ ಹಾಗೂ ಬದ್ಧತೆಯ ಪ್ರಶ್ನೆಯಾದ್ದರಿಂದ ಬಿಟ್ಟುಹೋಗುವುದು ಖಂಡಿತವಾಗಿಯೂ ತಪ್ಪಾಗುತ್ತದೆ ಎಂದು ಒಳಮನಸ್ಸು ಚೀರತೊಡಗಿತು. ಕೊನೆಗೆ ಎಲ್ಲ ಪ್ರಶ್ನೆ—ಸಮಸ್ಯೆಗಳಿಗೂ ನಮಗೆ ಬೇಕಾದಂತಹ ಉತ್ತರವನ್ನೇ ನಮ್ಮ ಮನಸ್ಸು ಕಂಡುಕೊಂಡು ಬಿಡುತ್ತದಾದ್ದರಿಂದ, ‘ನಾನೇನೂ ಆ ಸಂಸ್ಥೆಗೆ ಅಷ್ಟು ಅನಿವಾರ್ಯನಲ್ಲ; ಮತ್ತೊಬ್ಬ ಸಮರ್ಥರು ನನ್ನ ಜಾಗಕ್ಕೆ ಬಂದೇ ಬರುತ್ತಾರೆ ; ಅವರಿಗೇನೂ ತೊಂದರೆ ಆಗುವುದಿಲ್ಲ’ ಎಂಬ ಸಮಾಧಾನ ನನ್ನ ಮನಸ್ಸಿಗೆ ದೊರಕಿಯೇಬಿಟ್ಟಿತು! ಅಂತೂ ಇಂತೂ ದೂರದರ್ಶನಕ್ಕೆ ಸೇರಲು ನನ್ನ ಮನಸ್ಸು ಸಜ್ಜಾಗಿಹೋಯಿತು.
ಈ ತೀರ್ಮಾನವಾದೊಡನೆ ಉಡುಪಿಗೆ ಹೋಗಿ ಕು.ಶಿ.ಯವರಿಗೆ ಎಲ್ಲವನ್ನೂ ವಿವರಿಸಿ ಅವರ ಕ್ಷಮೆ ಯಾಚಿಸಿ ಅಲ್ಲಿಂದ ಬೀಳ್ಕೊಂಡು ಬರಲು ನಿರ್ಧರಿಸಿ ಹೊರಟೆ. ದುರದೃಷ್ಟವಶಾತ್ ಈ ಬಾರಿಯೂ ಕು.ಶಿ.ಯವರು ಕಾರ್ಯನಿಮಿತ್ತ ಬೇರೆ ಊರಿಗೆ ಹೊರಟುಹೋಗಿದ್ದರು. ಬೇರೆ ದಾರಿಯೇ ಇಲ್ಲದೆ ಅಲ್ಲಿನ ಆಡಳಿತ ವರ್ಗದವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ ರಾಜೀನಾಮೆ ಪತ್ರವನ್ನು ನೀಡಿ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಮರಳಿ ಬಂದೆ. ಅಲ್ಲಿಗೆ ಉಡುಪಿಯ ಒಂದು ಪುಟ್ಟ—ಸುಂದರ ಅಧ್ಯಾಯಕ್ಕೆ ತೆರೆ ಬಿದ್ದಂತಾಯಿತು. ಬಂದ ಒಂದೆರಡು ದಿನಗಳಿಗೇ ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳಬೇಕಿದ್ದರಿಂದ ಆ ಸಂಬಂಧವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ.
ಉಡುಪಿಯ ಅಲ್ಪಕಾಲದ ಉದ್ಯೋಗವನ್ನು ಹೊರತು ಪಡಿಸಿದರೆ ದೂರದರ್ಶನದಲ್ಲಿ ಈಗ ದೊರೆತಿರುವುದು ನನ್ನ ಪ್ರಥಮ ಪ್ರಮುಖ ಉದ್ಯೋಗವೆಂದೇ ಹೇಳಬೇಕು. ರಾಷ್ಟ್ರಮಟ್ಟದ ಒಂದು ದೊಡ್ಡ ಸಂಸ್ಥೆಯೊಂದಿಗೆ ಬಹುಶಃ ದೀರ್ಘಕಾಲದ ಬಂಧವೊಂದರ ಹೊಸ್ತಿಲಲ್ಲಿದ್ದೇನೆ!
| ಇನ್ನು ಮುಂದಿನ ವಾರಕ್ಕೆ ।






0 Comments