ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ತಲೆಗೊಂದು ಗುಂಗೀಹುಳ ಬಿಟ್ಟು ಹೋದರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

25

‘ಮಾರೀಚನ ಬಂಧುಗಳು’ ನಾಟಕದ ಪ್ರಚಂಡ ಯಶಸ್ಸಿನಿಂದ ಉತ್ತೇಜಿತರಾದ ಅಬ್ಬೂರು ಜಯತೀರ್ಥ ಅವರು ಕನ್ನಡ ಸಾಹಿತ್ಯ ಕಲಾ ಸಂಘಕ್ಕೆ ಮತ್ತೊಂದು ನಾಟಕವನ್ನು ಮಾಡಿಸಿದರು: ‘ಮಾನವ ಜನ್ಮ ದೊಡ್ಡದೋ’. ಅದರಲ್ಲಿ ಹೀಗೆ ಬಂದು ಹಾಗೆ ಹೋಗುವ ಒಂದು ಚಿಕ್ಕ ಪಾತ್ರವಷ್ಟೆ ನನಗೆ ದಕ್ಕಿದ್ದು. ಏನೇ ಆದರೂ ಪ್ರತಿ ಸಂಜೆ ರಿಹರ್ಸಲ್ ಗೆ ಹೋಗಿ ನಾಟಕ ಹಂತ ಹಂತವಾಗಿ ಕಟ್ಟಿಕೊಳ್ಳುವುದನ್ನು ನೋಡುವುದೇ ಒಂದು ಅಪೂರ್ವ ಅನುಭವವಾಗಿತ್ತು.

ಒಂದು ಸಾಹಿತ್ಯ ಕೃತಿ ರಂಗಕೃತಿಯಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆ; ವ್ಯಷ್ಟಿಯಿಂದ ಸಮಷ್ಟಿ—ಅಂದರೆ ಏಕ ವ್ಯಕ್ತಿಯ ಓದಿನ ಮನೋಭೂಮಿಕೆಯಿಂದ ಸಾವಿರಾರು ಪ್ರೇಕ್ಷಕರ ಏಕಕಾಲದ ವೀಕ್ಷಣೆಗೆ ಒದಗುವ ರಂಗಕ್ರಿಯೆಯಾಗುವ ವಿಸ್ಮಯಕರ ಪ್ರಕ್ರಿಯೆ— ಈ ಕಾರಣಗಳಿಗಾಗಿಯೇ ‘ಕಾವ್ಯೇಷು ನಾಟಕಂ ರಮ್ಶಂ’ ಎಂಬ ಉದ್ಗಾರ ಹೊಮ್ಮಿತೋ ಏನೋ! ಹೀಗೆ ದಿನದಿಂದ ದಿನಕ್ಕೆ ರಂಗಭೂಮಿಯೆಂಬ ಸಜೀವ ಚಟುವಟಿಕೆಯ ಬೆರಗು ನನ್ನನ್ನು ನಿಧಾನವಾಗಿ ಆವರಿಸಿಕೊಳ್ಳತೊಡಗಿತು.

ಇದೇ ಸಮಯದಲ್ಲಿ ನಾನು ಆಗಾಗ್ಗೆ ಪ್ರಜಾವಾಣಿ ಕಛೇರಿಗೆ ಹೋಗಿ YNK ಅವರನ್ನು ಭೇಟಿಯಾಗಿ ಬರುತ್ತಿದ್ದೆ. ಕೆಲವೊಮ್ಮೆ ಅವರ ಮನೆಗೂ ಹೋಗಿ ಅವರೊಟ್ಟಿಗೆ ‘ತೀರ್ಥಯಾತ್ರೆ’ಯಲ್ಲಿ ಪಾಲುಗೊಳ್ಳುತ್ತಿದ್ದುದೂ ಉಂಟು. YNK ಅವರ ಮಾತಿನ ಶೈಲಿಯೇ ಬಲು ವಿಚಿತ್ರ. ಪ್ರಾರಂಭಿಸಿದ ಯಾವ ವಾಕ್ಶವನ್ನೂ ಪೂರ್ಣಗೊಳಿಸದೆ ವಿಷಯದಿಂದ ವಿಷಯಕ್ಕೆ ನೆಗೆಯುತ್ತಾ ವೇಗವಾಗಿ ಮಾತಾಡುತ್ತಾ ದಿಗ್ಭ್ರಮೆಗೊಳಿಸುತ್ತಿದ್ದ YNK ಅವರ ನೂರು ಮಾತುಗಳಲ್ಲಿ ಐವತ್ತು ಅರ್ಥವಾದರೆ ಅದೇ ಒಂದು ಪವಾಡ. ನಡುನಡುವೆ, ‘ಅರ್ಥವಾಯ್ತೇನ್ರೀ ‘ಘಾ’? ಅರ್ಥವಾಗದಿದ್ರೆ ಕೇಳಿ. ಸುಮ್ಮನೆ ಪೆದ್ದುಬಸವನ ಹಾಗೆ ತಲೆ ಆಡಿಸಬೇಡಿ’ ಎಂದು ಬೇರೆ ಬೈಯುತ್ತಿದ್ದರು. ಎಷ್ಟೋ ಸಲ ಅದಕ್ಕೂ ನಾನು ತಲೆ ಆಡಿಸುತ್ತಿದ್ದೆ. ‘ಬರೀ ಕಾಮೂ, ಕಾಫ್ಕಾ,ದಾಸ್ತಾವಸ್ಕಿ ಅಂತ ಕನವರಿಸಿಕೊಂಡಿರಬೇಡಿ.. ಈಗ ಅದೇ fashion ಆಗಿಬಿಟ್ಟಿದೆ… ಜಾಕ್ ಲಂಡನ್ ಓದಿ.. ವುಡ್ ಹೌಸ್ ಓದಿ.. ಶೆರ್ಲಾಕ್ ಹೋಮ್ಸ್ ಕಥೆಗಳನ್ನ ಓದಿ…They are simply fantastic! ಎಲ್ರೂ ಹೇಳೋದನ್ನೇ ಕೇಳಿಕೊಂಡು ಅಲ್ಲೇ ಗಿರಕಿಹೊಡಕೊಂಡು ಗೊಡ್ಡಾಗಬೇಡಿ’ ಎಂದು ತಿಳಿ ಹೇಳುತ್ತಿದ್ದರು. ಅವರ ಅಂದಿನ ಆ ಮಾತುಗಳು ನನ್ನ ಓದಿನ ಪರಿಧಿಯನ್ನು ವಿಸ್ತರಿಸಿದ್ದಷ್ಟೇ ಅಲ್ಲ, ‘ಜನಪ್ರಿಯ-ಜನರಂಜಕವಾದುದೆಲ್ಲಾ ಅಶುದ್ಧ ಸಾಹಿತ್ಯವೇನಲ್ಲ; ಹಾಗೆ ನೋಡಿದರೆ ಅಂಥ ಕೃತಿರಚನೆ ಹೆಚ್ಚು ಸವಾಲಿನದು’ ಎಂಬ ಅರಿವನ್ನೂ ಮೂಡಿಸಿತು. ಹಾಗೆ ವಿಭಿನ್ನ ಓದಿಗೆ ಅಂದು ಒಡ್ಡಿಕೊಂಡ ಪರಿಣಾಮದ ಫಲವಾಗಿಯೇ ಮುಂದಿನ ದಿನಗಳಲ್ಲಿ ನಾನು ‘ಗುಳ್ಳೆನರಿ’, ‘ಪರಮೇಶಿ ಪ್ರೇಮ ಪ್ರಸಂಗ’ ಮೊದಲಾದ ನಾಟಕಗಳನ್ನೂ, ‘ಅಜಿತನ ಸಾಹಸಗಳು’, ‘ಡಿಟೆಕ್ಟಿವ್ ಧನುಷ್’ ಮೊದಲಾದ ಧಾರಾವಾಹಿಗಳನ್ನೂ ಬರೆದು ನಿರ್ದೇಶಿಸಲು ಸಾಧ್ಯವಾಗಿ ಅವು ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡವು.

ಮುಂದಿನ ಪುಟಗಳಲ್ಲಿ ಈ ಬಗ್ಗೆ ಹೆಚ್ಚು ವಿವರವಾಗಿ ಬರೆಯುತ್ತೇನೆ. ಅಷ್ಟೇ ಅಲ್ಲದೆ ಬರವಣಿಗೆಯಲ್ಲಿ ಪಳಗುವ ಸಲುವಾಗಿ ಒಂದಷ್ಟು ಏಕಾಂಕಗಳನ್ನು ಅನುವಾದಿಸಲು ಸೂಚಿಸಿದ್ದರು YNK. ಅವರ ಸಲಹೆಯ ಮೇರೆಗೆ ‘Monkey’s Paw’, ‘The Bear’ ಮೊದಲಾದ ಏಕಾಂಕಗಳನ್ನು ಅನುವಾದಿಸಿ ಅವರ ಮುಂದೆ ಓದಿಯೂ ತೋರಿಸಿದ್ದೆ. ನಾನು ಓದುತ್ತಿದ್ದಾಗ ಒಮ್ಮೊಮ್ಮೆ ಚೆನ್ನಾಗಿದೆ ಅನ್ನುತ್ತಿದ್ದವರು ಮತ್ತೆ ಕೆಲವೊಮ್ಮೆ ಜೋರಾಗಿ ನಕ್ಕು, ‘ಘಾ.. ಘಾ.. ಹೀಗೇ ಏನ್ರೀ ಬರೆಯೋದು?’ ಎಂದು ಗೇಲಿ ಮಾಡಿಬಿಡುತ್ತಿದ್ದರು. ‘ಡಿಕ್ಷನರಿ ಇಟ್ಟುಕೊಂಡು ಅನುವಾದ ಮಾಡಿದರೆ ಹೀಗೇ ಅವಾಂತರಗಳಾಗುತ್ವೆ… ಯಾವುದೇ ಸಂಭಾಷಣೆಯ context ಗಮನಿಸಬೇಕು.. ಆ ನಿರ್ದಿಷ್ಟ ಸಂದರ್ಭದಲ್ಲಿ ಆ ಮಾತಿನ ಅರ್ಥ ಏನು ಅನ್ನೋದನ್ನ ಯೋಚಿಸಿ ಅನುವಾದ ಮಾಡಬೇಕು’ ಎಂದು ಕಿವಿಮಾತು ಹೇಳುತ್ತಿದ್ದರು. ‘ಘಾ’ ಅವರ ಅತ್ಯಂತ ಪ್ರೀತಿಯ ಬೈಗುಳ. ‘ಗುಂಡು ಹಾಕದ ಆಸಾಮಿ’ ಅನ್ನುವುದು GHA ದ ವಿಸ್ತೃತರೂಪವೆಂದು ಕಾಲಕ್ರಮದಲ್ಲಿ ನನಗೆ ಅರ್ಥವಾಗಿದ್ದರೂ ಎಷ್ಟೋ ಬಾರಿ ಅವರು ‘ಗುಂಡು ಹಾಕುವ ಆಸಾಮಿ’ಗಳಿಗೂ ಘಾ ಎಂದು ಪ್ರೀತಿಯಿಂದ ಬೈದದ್ದುಂಟು. ನಾನೇ ಹಾಗೆ ಸಾಕಷ್ಟು ಸಲ ಬೈಸಿಕೊಂಡಿದ್ದೆನಲ್ಲಾ!

ಒಮ್ಮೆ ಪ್ರಜಾವಾಣಿ ಕಛೇರಿಗೆ ವೈಎನ್ಕೆ ಅವರನ್ನು ನೋಡಲು ಹೋಗಿದ್ದಾಗ ಅವರು ಧಿಡೀರನೆ ಕೇಳಿದರು: ‘ನಿಮಗೇನು ಬೆಂಗಳೂರಲ್ಲೇ ಕೆಲಸ ಸಿಗಬೇಕೋ ಬೇರೆ ಕಡೆ ಆದ್ರೂ ಆಗುತ್ತೋ?’ ‘ಬೆಂಗಳೂರಲ್ಲೇ ಆದರೆ ತುಂಬಾ ಒಳ್ಳೇದು ಸರ್.. ಇಲ್ಲಿ ಆಗದಿದ್ದರೆ ಎಲ್ಲಿಯಾದರೂ ಹೋಗೋದಕ್ಕೆ ನಾನು ಸಿದ್ಧ ಸರ್’ ಎಂದೆ ನಾನು. ‘ಸರಿ ಹಾಗಾದ್ರೆ… ಹುಬ್ಬಳ್ಳೀಲಿ ಪ್ರಜಾವಾಣೀದು ಒಂದು edition ಶುರುವಾಗ್ತಿದೆ.. ಒಂದು application ಕೊಟ್ಟುಬಿಡಿ ನೋಡೋಣ’ ಎಂದರು ವೈಎನ್ಕೆ. ನಾನು ಪರಮ ಉತ್ಸಾಹದಿಂದ ಮರುದಿನವೇ ಅರ್ಜಿ ಸಿದ್ಧ ಪಡಿಸಿಕೊಂಡು ವೈಎನ್ಕೆ ಅವರಿಗೆ ಕೊಟ್ಟುಬಂದೆ. ಒಂದೆರಡು ದಿನಗಳಲ್ಲೇ ಪ್ರಧಾನ ಸಂಪಾದಕರಿಂದ ಸಂದರ್ಶನಕ್ಕೆ ಕರೆ ಬಂತು. ಆಗ ಪ್ರಜಾವಾಣಿಯ ಮುಖ್ಯ ಸಂಪಾದಕರಾಗಿದ್ದವರು ಟಿ. ಎಸ್. ರಾಮಚಂದ್ರರಾಯರು; ತಮ್ಮ ‘ಛೂಬಾಣ’ದ ಮೂಲಕ ನಾಡಿನಲ್ಲೆಲ್ಲಾ ಮನೆ ಮಾತಾಗಿದ್ದವರು. ನಿಗದಿತ ದಿನದಂದು ಸಂದರ್ಶನಕ್ಕೆಂದು ಪ್ರಜಾವಾಣಿ ಕಛೇರಿಗೆ ಹೋದ ನನ್ನನ್ನು ವೈಎನ್ಕೆಯವರೇ TSR ಅವರ ಬಳಿಗೆ ಕರೆದುಕೊಂಡು ಹೋದರು. ನಿಜ ಹೇಳಬೇಕೆಂದರೆ ಅದೊಂದು ತೀರಾ ಅನೌಪಚಾರಿಕವಾದ ಸಂದರ್ಶನವಾಗಿತ್ತು. ಮಾತಿನ ಮಧ್ಯೆ ವೈಎನ್ಕೆಯವರು, ‘ಇವರ ಹೆಸರಷ್ಪೇ ಪ್ರಭು… ಇವರು ಕೊಂಕಣಿಯೂ ಅಲ್ಲ, ದ.ಕ.ಮೊದಲೇ ಅಲ್ಲ… ಇವರು ಸಂಕೇತಿಗಳು’ ಎಂದರು.

ಕೆಲದಿನಗಳ ಹಿಂದಷ್ಟೇ ವೈಎನ್ಕೆಯವರು ಚೋಮಾಯಿ —ಒತ್ತುಶಾವಿಗೆ—ತಿನ್ನಬೇಕೆಂದು ಅಪೇಕ್ಷೆ ಪಟ್ಟಿದ್ದರು. ಚೋಮಾಯಿ ಸಂಕೇತಿಗಳ ಮನೆಗಳಲ್ಲಿ ಮಾಡುವ ವಿಶೇಷ ತಿನಿಸು.ವೈಎನ್ಕೆಯವರ ಚೋಮಾಯಿ ಹಂಬಲವನ್ನು ಕಂಡು ಒಂದುದಿನ ಅವರನ್ನು ಚೋಮಾಯಿ ಉಪಾಹಾರಕ್ಕೆ ಮನೆಗೆ ಆಹ್ವಾನಿಸಿದ್ದೆ. ಅಮ್ಮ ವಿವಿಧ ಬಗೆಯ ಚೋಮಾಯಿಗಳನ್ನೂ ಗಸಗಸೆ ಪಾಯಸವನ್ನೂ ಅದ್ಭುತವಾಗಿ ಮಾಡಿ ವೈಎನ್ಕೆಯವರಿಗೆ ಬಡಿಸಿದ್ದರು. ವೈಎನ್ಕೆ ಅವರೂ ಕೂಡಾ ಚೂರೂ ಸಂಕೋಚವಿಲ್ಲದೆ ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡು ಮನದಣಿಯೆ ಚೋಮಾಯಿ ತಿಂದು ಸಂತೃಪ್ತರಾಗಿದ್ದರು. ಅಂದಿನ ಚೋಮಾಯಿಯ ಅಮೋಘ ರುಚಿಯನ್ನು ನೆನೆಸಿಕೊಂಡು ಚಪ್ಪರಿಸುತ್ತಾ ವೈಎನ್ಕೆಯವರು, ‘ಆಹಾ! ಚೋಮಾಯಿ ತಿಂದರೆ ಸಂಕೇತಿಗಳ ಮನೆಯಲ್ಲಿ ತಿನ್ನಬೇಕು’ ಎಂದು ಉದ್ಗರಿಸಿದರು. ಸಂಕೇತಿ ಅನ್ನುವ ಶಬ್ದ ಕಿವಿಗೆ ಬೀಳುತ್ತಲೇ T S R ಅವರ ಕಿವಿ ನೆಟ್ಟಗಾಯಿತು! ಕೆಲ ದಿನಗಳ ಹಿಂದಷ್ಟೇ ಅವರು ಶಿವಮೊಗ್ಗೆಯ ಕಡೆ ಪ್ರವಾಸ ಹೋಗಿದ್ದಾಗ ಸಂಕೇತಿಗಳೊಬ್ಬರ ಮನೆಯಲ್ಲಿ ಅವರಿಗೆ ದೊರೆತ ಅಪೂರ್ವ ಆದರಾತಿಥ್ಯಗಳನ್ನೂಅವರು ಮಾಡಿ ಬಡಿಸಿದ ಬಗೆಬಗೆಯ ಅಡುಗೆಗಳ ರುಚಿ ವೈಭವವನ್ನೂ ಬಣ್ಣಿಸಿ, ಛೂಬಾಣದಲ್ಲಿ ಒಂದು ವಿಶೇಷ ಲೇಖನವನ್ನೇ ಬರೆದಿದ್ದರು. ಈಗ ಮತ್ತೆ ಅವರ ನೆನಪಿನ ಸುರುಳಿಗಳು ಬಿಚ್ಚಿಕೊಳ್ಳತೊಡಗಿದವು. ಸಂಕೇತಿಗಳ ಸಂಗೀತ ಕಲಾಸಕ್ತಿ-ಪೌಢಿಮೆಗಳು,ಅವರ ವೇದ ವಿದ್ವತ್ತು, ದಂತಕಥೆಗಳಂತೆ ಪ್ರಚುರಗೊಂಡಿದ್ದ ಅವರ ಅಡುಗೆ—ಊಟಗಳ ಸ್ವಾರಸ್ಯಕರ ಪ್ರಸಂಗಗಳು, ಅವರ ಇಸ್ಪೀಟ್ ಆಟದ ಮೋಹ…

ಹೀಗೆ ಅನೇಕ ವಿಷಯಗಳಿಗೆ ಸಂಬಂಧ ಪಟ್ಟಹಾಗೆ ಸುಮಾರು ಮುಕ್ಕಾಲು ಗಂಟೆ ಅವರು ರಸವತ್ತಾಗಿ ಮಾತಾಡುತ್ತಲೇ ಇದ್ದರು. ಅವರು ಹೇಳಿದ್ದರಲ್ಲಿ ಎಷ್ಟೋ ಸಂಗತಿಗಳು ನನ್ನ ಅರಿವಿಗೇ ಬಂದಿರಲಿಲ್ಲ! ಕೊನೆಗೆ, ‘ಆಗಲಿ… ವೈಎನ್ಕೆಯವರು ನಿಮ್ಮ ಬಗ್ಗೆ ಸಾಕಷ್ಟು ಹೇಳಿದಾರೆ.. ಸಂದರ್ಶನಕ್ಕೇಂತ ನಾನೇನೂ ನಿಮ್ಮನ್ನು ವಿಶೇಷವಾಗಿ ಪ್ರಶ್ನಿಸಬೇಕಾದ ಅಗತ್ಯವಿಲ್ಲ.. ಆದರೆ ಒಂದು ಮಾತು: ಮುಂದಿನ ಸಲ ವೈಎನ್ಕೆ ಜೊತೆ ನಾನೂ ಬರ್ತೀನಿ ನಿಮ್ಮ ಮನೆಗೆ..ಚೋಮಾಯಿ ತಿನ್ನೋಕೆ! Welcome to Prajavani… ಹುಬ್ಬಳ್ಳಿಯಲ್ಲಿ ಕೆಲಸ ಶುರುವಾಗ್ತಿದ್ದ ಹಾಗೇ ಕರೆ ಕಳಿಸ್ತೀವಿ.. ಬಂದು join ಆಗುವಿರಂತೆ. Good luck’ ಎಂದು ಹಾರೈಸಿ ಬೀಳ್ಕೊಟ್ಟರು. ಇಬ್ಬರಿಗೂ ಧನ್ಯವಾದಗಳನ್ನರ್ಪಿಸಿ ಹೊರಬಂದೆ.

ಅಷ್ಟು ದಿನಗಳಿಂದ ಅನುಭವಿಸುತ್ತಿದ್ದ ಬವಣೆಗೆ ಕೊನೆಗಾದರೂ ಒಂದು ನಿಲುಗಡೆ ಸಿಕ್ಕುತ್ತಿದೆಯಲ್ಲಾ ಎಂದು ನಾನು ಸಂತಸದಿಂದ ಸಂಭ್ರಮಿಸುತ್ತಿದ್ದೆ. ಮನಸ್ಸು ಪರಮೋಲ್ಲಾಸದಿಂದ ಹಕ್ಕಿಯಂತೆ ಹಾರುತ್ತಿತ್ತು.

ಆದರೆ ಅದಾವ ಶಾಪವೋ ಏನೋ, ನನ್ನ ಯಾವ ಖುಷಿ- ಸಂತಸಗಳೂ ಬಹುಕಾಲ ಉಳಿಯದೇ ಗೋಣು ಮುರಿದುಕೊಂಡು ಗತಪ್ರಾಣವಾಗಿ ನೆಲಕ್ಕೆ ಅಪ್ಪಳಿಸಿಬಿಡುತ್ತಿದ್ದವು. ಸಂದರ್ಶನ ಕಳೆದು ನಾಲ್ಕಾರು ದಿನಗಳ ಮೇಲೆ ವೈಎನ್ಕೆಯವರ ಮನೆಗೆ ಹೋದರೆ ಅಲ್ಲಿ ನನ್ನೆಲ್ಲಾ ಸಂಭ್ರಮ—ಸಂತಸಗಳಿಗೆ ತಣ್ಣೀರೆರಚುವ ಕೆಟ್ಟ ಸುದ್ದಿ ಕಾಯುತ್ತಿತ್ತು: ‘ಹುಬ್ಬಳ್ಳಿಯ ಪ್ರಜಾವಾಣಿ ಪತ್ರಿಕೆಯ ಪ್ರಕಟಣೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ’. ಸುದ್ದಿ ಕೇಳಿ ನಿರಾಸೆ—ಹತಾಶೆಗಳಿಂದ ನಾನು ಅಕ್ಷರಶಃ ಕುಸಿದೇ ಹೋದೆ. ಮಂಕು ಬಡಿದು ಹೋದವನಂತೆ ಕುಳಿತಿದ್ದ ನನ್ನನ್ನು ನೋಡಿ ವೈಎನ್ಕೆ ಅವರಿಗೇ ಕೆಟ್ಟೆನಿಸಿತೇನೋ… ನನ್ನನ್ನು ಸಮಾಧಾನ ಪಡಿಸುತ್ತಾ, ‘ಏ ಘಾ, ಅಷ್ಟೊಂದು upset ಆಗಬೇಡಿ.. ಆ ಕೆಲಸ ನಿಮಗೆ ಆಗೇ ಆಗುತ್ತೆ.. question of time ಅಷ್ಟೇ… ಇಷ್ಟು ದಿನ ಕಾದಿದೀರಾ… few more days ಅಂದುಕೊಳ್ಳಿ’ ಎಂದರು. ನಾನೂ ಪೆಚ್ಚಾಗಿ ತಲೆ ಆಡಿಸಿದೆ. ತುಸು ಹೊತ್ತು ಮೌನವಾಗಿದ್ದ ವೈಎನ್ಕೆ ಇದ್ದಕ್ಕಿದ್ದಂತೆ ಕೇಳಿದರು: ‘ಸಿನೆಮಾದಲ್ಲಿ act ಮಾಡ್ತೀರೇನ್ರೀ?’ ಏನು!!? ಸಿನೆಮಾದಲ್ಲಿ ಪಾತ್ರ ಮಾಡುವುದೇ!! ಯಾವ ಕನಸಿನ ಲೋಕದಲ್ಲಿ ಹಗಲಿರುಳೂ ಮುಳುಗೇಳುತ್ತಿದ್ದೆನೋ ಆ ಮಾಯಾ ಜಗತ್ತಿಗೆ ನೇರ ಪ್ರವೇಶ ಮಾಡಿ ತೊಡಗಿಕೊಳ್ಳುವುದೇ!! ಇದಕ್ಕಿಂತ ದೊಡ್ಡ ಸುವರ್ಣಾವಕಾಶ ಬೇರೇನು ತಾನೇ ಅರಸಿಕೊಂಡು ಬರಲು ಸಾಧ್ಯ?! ಹಿಂದೆ ಮುಂದೆ ನೋಡದೆ ‘ಖಂಡಿತ ಮಾಡ್ತೀನಿ ಸರ್!’ ಎಂದೆ ಅತ್ಯುತ್ಸಾಹದಿಂದ. ‘ಸರಿ.. T.S.ರಂಗಾ ಅಂತ ಒಬ್ರು director ಉ… ಟಿ.ಆರ್.ಶಾಮಣ್ಣ ಅವರ ಮಗ… ಅವರೊಂದು film ಮಾಡ್ತಿದಾರೆ ‘ಗೀಜಗನ ಗೂಡು’ ಅಂತ… art filmಉ.. ಅದರಲ್ಲಿ hero ಪಾತ್ರಕ್ಕೆ ಕಲಾವಿದನ್ನ ಹುಡುಕ್ತಿದಾರೆ.. ನಾನು ನಿಮ್ಮ ಹೆಸರನ್ನ suggest ಮಾಡ್ತೀನಿ.. ಒಂದು ಕೆಲಸ ಮಾಡಿ… ನಾಳೆ 11ಗಂಟೇಗೆ ಮಿನರ್ವ ಟಾಕೀಸ್ ಹತ್ರ NMH ಹೋಟಲ್ ಇದೆಯಲ್ಲಾ, ಅಲ್ಲೀಗೆ ಹೋಗಿ ರಂಗಾ ಅವರನ್ನ ಭೇಟಿಯಾಗಿ… ನಾನು ರಾತ್ರಿ phone ಮಾಡಿ ಅವರಿಗೆ ವಿಷಯ ತಿಳಿಸಿರ್ತೀನಿ’ ಎಂದರು ವೈಎನ್ಕೆ.

ಅಂದು ಆ ಮೊದಲು ಅನುಭವಿಸಿದ್ದ ಪರಮ ನಿರಾಸೆಯನ್ನು ಮರೆಸುವಂತೆ ಈ ಚೇತೋಹಾರಿ ಸುದ್ದಿ ಬಂದಿತ್ತು. ಅಂದು ರಾತ್ರಿಯೆಲ್ಲಾ ಏನೋ ಸಂಭ್ರಮ… ಕಾತರ… ಒಂದೇ ಒಂದು ಕ್ಷಣದ ಮಟ್ಟಿಗೂ ಕಣ್ಣುರೆಪ್ಪೆ ಮುಚ್ಚಲಿಲ್ಲ! ರಾತ್ರಿಯಿಡೀ ಚಿಂತನ ಮಂಥನದಲ್ಲೇ ಕಳೆದುಹೋಯಿತು. ‘ನನ್ನನ್ನು ನಾಯಕನ ಪಾತ್ರಕ್ಕೆ ಸೂಚಿಸಿದ್ದಾರಲ್ಲಾ ವೈಎನ್ಕೆ, ಸೊಣಕಲು ಸ್ವರೂಪದ, ಬರೋಬ್ಬರಿ 48 ಕೆಜಿ ತೂಕದ ನಾನು ಸಿನೆಮಾ hero ಆಗಬಲ್ಲೆನೇ?’ ಎಂದು ಒಂದು ಪ್ರಶ್ನೆ ಎದ್ದರೆ ಮಗ್ಗುಲಲ್ಲೇ ಉತ್ತರ ಸಿದ್ಧವಾಗಿರುತ್ತಿತ್ತು: ‘ಇದು ಹೇಳಿಕೇಳಿ ಕಲಾತ್ಮಕ ಚಿತ್ರ.. hero ಹೇಗಿದ್ರೂ ನಡೆಯುತ್ತೆ.. ಕಥೆ—ಅಭಿನಯ ಮುಖ್ಯ ಅಷ್ಟೇ… ಹೀರೋ ಮೈಕಟ್ಟಲ್ಲ.. ಎಷ್ಟು ಜನ ನನ್ನ ಸ್ವರೂಪದವರೇ art cinema ಗಳಲ್ಲಿ hero ಗಳಾಗಿಲ್ವಾ?’ ನನ್ನದೇ ಪ್ರಶ್ನೆ—ನನ್ನದೇ ಸಮಾಧಾನ: ಹೀಗೆ ಈ ದ್ವಂದ್ವ ಸಮಾಲೋಚನೆಯ ಸಂಭ್ರಮದಲ್ಲಿ ರಾತ್ರಿ ಕಳೆದೇ ಹೋಯಿತು. ಲಗುಬಗೆಯಿಂದ ಎದ್ದು ಸಿದ್ಧನಾಗಿ 10:30ರ ಸುಮಾರಿಗೇ NMH ಹೋಟಲ್ ಗೆ ಹೋಗಿ ರಂಗಾ ಅವರಿಗಾಗಿ ಕಾಯುತ್ತಾ ಕುಳಿತೆ. 11:00ರ ಸುಮಾರಿಗೆ ರಂಗಾ ಅವರ ಆಗಮನವಾಯಿತು. ಅವರೇ ರಂಗಾ ಎಂದು ಖಾತ್ರಿ ಪಡಿಸಿಕೊಂಡು ಅವರ ಬಳಿ ಹೋಗಿ ನನ್ನ ಪರಿಚಯ ಮಾಡಿಕೊಂಡು, ‘ವೈಎನ್ಕೆಯವರು ನಿಮ್ಮನ್ನ ನೋಡೋದಕ್ಕೆ ಹೇಳಿದರು’ ಎಂದೆ.

ರಂಗಾ ಅವರು ಒಮ್ಮೆ ಅಡಿಯಿಂದ ಮುಡಿಯವರೆಗೆ ನನ್ನ ಸ್ವರೂಪವನ್ನು ಪರಿಶೀಲಿಸಿದರು. ನನ್ನ ಸ್ವರೂಪ ದರ್ಶನದಿಂದ ಅವರಿಗಾದ ಭಯಂಕರ ನಿರಾಸೆ ಅವರ ಮುಖದ ಮೇಲೆ ಅದೆಷ್ಟು ಢಾಳಾಗಿ ಪ್ರತಿಫಲಿಸುತ್ತಿತ್ತೆಂದರೆ ಕ್ಷಣಾರ್ಧದಲ್ಲಿ ನಾನದನ್ನು ಗ್ರಹಿಸಿಬಿಟ್ಟಿದ್ದೆ. ಇಂಥದೊಂದು ಪ್ರಸಂಗ ಎದುರಾದರೆ ಏನು ಮಾಡಬೇಕೆಂದು ಮೊದಲೇ ಯೋಚನೆ ಮಾಡಿ ನಿರ್ಧರಿಸಿಕೊಂಡಿದ್ದೆನಾದ್ದರಿಂದ ಕೊಂಚವೂ ತಡಮಾಡದೆ ಮಾತಾಡತೊಡಗಿದೆ: ‘ನೋಡಿ ಸರ್, ನನಗೆ ನಾಯಕನ ಪಾತ್ರಾನೇ ಬೇಕೂಂತಿಲ್ಲ.. ನನಗೆ ಹೊಂದಿಕೆಯಾಗೋ ಬೇರೆ ಯಾವುದೇ ಪಾತ್ರ ಇದ್ದರೂ ನಾನು ಮಾಡ್ತೀನಿ.. ಅದಕ್ಕಿಂತ ಮುಖ್ಯ ಅಂದರೆ, ನನಗೆ ನಿರ್ದೇಶನದಲ್ಲಿ ತುಂಬಾ ಆಸಕ್ತಿ… ಅವಕಾಶ ಇದ್ದರೆ ನಿಮ್ಮ assistant ಆಗಿ ಕೆಲಸ ಮಾಡೋದಕ್ಕೆ ನಾನು ಸಿದ್ಧವಾಗಿದೀನಿ.. ಸಾಹಿತ್ಯದ ವಿದ್ಯಾರ್ಥಿಯಾದ್ದರಿಂದ script ನಲ್ಲಿ ಕೂಡಾ ಸಹಾಯ ಮಾಡಬಲ್ಲೆ.. ಒಟ್ಟಿನಲ್ಲಿ ನನ್ನನ್ನ ನಿಮ್ಮ team ಗೆ ಸೇರಿಸಿಕೊಳ್ಳಿ.’ ನನ್ನ ಮಾತು ಕೇಳಿ ರಂಗಾ ಅವರಿಗೂ ಖುಷಿಯೇ ಆದಂತನ್ನಿಸಿತು. ‘ಸರಿ ಪ್ರಭೂ.. ನೀವು ನನ್ನ ಒಬ್ಬ assistant ಆಗಿ ಕೆಲಸ ಮಾಡಿ.. ಇವತ್ತಿನಿಂದಾನೇ ಸಂಜೆ ಹೊತ್ತು ಇಲ್ಲಿಗೇ ಬಂದುಬಿಡಿ.. scene ಗಳು ready ಆಗ್ತಿದ್ದ ಹಾಗೆ ಅವನ್ನ copy ಮಾಡೋ ಕೆಲಸ ಇರುತ್ತೆ. ಜೊತೇಗೆ ನಮ್ಮ film ನಲ್ಲಿ ನಾಲ್ಕು ವಿದ್ಯಾರ್ಥಿಗಳು ಬರ್ತಾರೆ.. ನೀವು ಒಬ್ಬ ವಿದ್ಯಾರ್ಥಿಯ ಪಾತ್ರ ಮಾಡಬಹುದು..’ ಎಂದರು ರಂಗಾ. ‘ಸರಿ ಸರ್’ ಎಂದು ಅವರಿಂದ ಬೀಳ್ಕೊಂಡು ಅಲ್ಲಿಂದ ಹೊರಟೆ. ಸಧ್ಯ.. ಮನೆಯಲ್ಲಿ ಖಾಲಿ ಕೂರದೇ ಯಾವುದೋ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರಲು ಅವಕಾಶವಾಯಿತಲ್ಲಾ ಎಂದು ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು.

ಇದಾದ ಒಂದೆರಡು ದಿನಕ್ಕೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಅಡ್ಡಾಡುತ್ತಿದ್ದಾಗ ರಂಗ ನಿರ್ದೇಶಕ ಪ್ರಸನ್ನ ಅವರ ಭೇಟಿಯಾಯಿತು. ಪ್ರಸನ್ನ ಆ ವೇಳೆಗಾಗಲೇ ಕನ್ನಡ ರಂಗಭೂಮಿಯ ಒಬ್ಬ ಮಹತ್ವದ ನಿರ್ದೇಶಕರೆಂದು ಹೆಸರು ಪಡೆದಿದ್ದರು. ಕನ್ನಡ ರಂಗಭೂಮಿಯಲ್ಲಿ ಹೊಸ ಆಲೋಚನೆಗಳನ್ನು, ಚಿಂತನೆಗಳನ್ನು ಬಿತ್ತುವಂತಹ ನಾಟಕಗಳನ್ನು ಮಾಡಿಸಿದವರು ಪ್ರಸನ್ನ. ಆಗ ಪ್ರಸನ್ನ ರಂಗಸಂಪದ ತಂಡಕ್ಕೆ ಮಾಡಿಸಿದ್ದ ಜಿ.ಬಿ.ಜೋಶಿಯವರ ‘ಕದಡಿದ ನೀರು’ ನಾಟಕ ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಗಳಿಸಿದ್ದಲ್ಲದೆ ‘ಮನ ಕದಡಿದ ನೀರು’ ಎಂಬಂತಹ ಸೊಗಸಾದ ತಲೆಬರಹದ ಪತ್ರಿಕಾ ಪ್ರಶಂಸೆಗೂ ಪಾತ್ರವಾಗಿತ್ತು.

ದೆಹಲಿಯ ನಾಟಕ ಶಾಲೆಯ ಪದವಿ ಗಳಿಸಿ ಬಂದ ಪ್ರಸನ್ನ, KMS ಮೇಷ್ಟ್ರು, ಕಿ.ರಂ.ನಾಗರಾಜ, ಕಾ.ನಂ.ನಾಗರಾಜು, ಶೂದ್ರ ಶ್ರೀನಿವಾಸ, ಗುಂಡಣ್ಣ.. ಮೊದಲಾದ ಕೆಲ ಸಮಾನ ಧರ್ಮಿಗಳೊಂದಿಗೆ ಸೇರಿ ‘ಸಮುದಾಯ’ ವೆಂಬ ರಂಗತಂಡವನ್ನು ಕಟ್ಟಿ ರಂಗಭೂಮಿಯನ್ನು ಹೊಸ ದಿಕ್ಕಿನತ್ತ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದವರು. ಇವರ ಹುತ್ತವ ಬಡಿದರೆ’, ‘ತಾಯಿ’ ಮೊದಲಾದ ನಾಟಕಗಳಿಗೆ ಬೆಳಕಿನ ಸಂಯೋಜನೆ ಮಾಡುವಲ್ಲಿ ಪರೇಶನಿಗೆ ನಾನೂ ನೆರವಾಗುತ್ತಿದ್ದೆ. ಪ್ರಸನ್ನರ ದೃಶ್ಯ ಸಂಯೋಜನೆಯ ಮಾಂತ್ರಿಕತೆಯನ್ನು ಕಂಡು ಬೆರಗಾಗಿದ್ದೆ ಕೂಡಾ. ‘ತಾಯಿ’ ನಾಟಕದಲ್ಲಿ ಜಯಶ್ರೀ ಅವರು ಕರಪತ್ರಗಳನ್ನು ಎಸೆಯುವ ದೃಶ್ಯಕ್ಕೆ ವಿ.ರಾಮಮೂರ್ತಿ—ಪರೇಶರು ಮಾಡಿದ್ದ ಅದ್ಭುತ ಬೆಳಕಿನ ಸಂಯೋಜನೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಆ ನಾಟಕದಲ್ಲಿ ತಾಯಿಯಾಗಿ ಬಿ. ಜಯಶ್ರೀಯವರ ಅಭಿನಯವಂತೂ ಚಿರಸ್ಮರಣೀಯ. ಪಾವೆಲ್ ಪಾತ್ರ ನಿರ್ವಹಿಸಿದ್ದ ಎಂ.ಕೆ. ಶಂಕರನೇ ಮುಂದೆ ‘ಗೀಜಗನ ಗೂಡು’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು! ಇರಲಿ… ಇಂಥ ಪ್ರಸನ್ನ ಅಂದು ನನ್ನನ್ನು ಕೇಳಿದರು: ‘ಏನು ಮಾಡ್ತಿದೀರಿ ಪ್ರಭೂ?’ ಎಷ್ಟು ಒದ್ದಾಡಿದರೂ ನನಗೆ ಕೆಲಸ ಸಿಗದ್ದರ ಬಗ್ಗೆ, ಯೂನಿವರ್ಸಿಟಿ ರಾಜಕೀಯದ ಬಗ್ಗೆ ಅವರ ಬಳಿ ತೋಡಿಕೊಂಡೆ. ತಮ್ಮ ಫ್ರೆಂಚ್ ಗಡ್ಡವನ್ನು ತುರಿಸಿಕೊಳ್ಳುತ್ತಾ ಗಂಭೀರ ಧ್ವನಿಯಲ್ಲಿ ಪ್ರಸನ್ನ ಹೇಳಿದರು: ‘ಒಂದು ಮಾತು ಹೇಳ್ತೀನಿ ಕೇಳಿ ಪ್ರಭೂ… stupid ಆಗಿ ಯಾವುದೋ ಒಂದು lecturer ಕೆಲಸಕ್ಕೋ research scholar ಕೆಲಸಕ್ಕೋ ನಿಮ್ಮನ್ನ ನೀವು limit ಮಾಡ್ಕೋಬೇಡಿ… ಅದೆಲ್ಲಾ ಯಾರು ಬೇಕಾದರೂ ಮಾಡಬಹುದಾದ ಕೆಲಸ… ಜೀವನದಲ್ಲಿ ಘನವಾದ ಉದ್ದೇಶಗಳನ್ನ—ಗುರಿಗಳನ್ನ ಇಟ್ಟುಕೋಬೇಕು ನೀವು.. ನಿಮಗೆ ಹೇಗೂ ಸಾಹಿತ್ಯದ ಹಿನ್ನೆಲೆ ಇದೆ.. ಜತೆಗೆ ರಂಗಭೂಮಿಯಲ್ಲೂ ನಿಮಗೆ ತುಂಬಾ ಆಸಕ್ತಿ ಇದೆ ಅಲ್ಲವಾ? ಒಂದು ಕೆಲಸ ಮಾಡಿ: ದೆಹಲಿಯ ನಾಟಕಶಾಲೆಗೆ ಹೋಗಿ ಮೂರು ವರ್ಷ ವ್ಯಾಸಂಗ ಮಾಡಿಕೊಂಡು ಬನ್ನಿ.. ನಾಟಕಗಳನ್ನ ಬರೀರಿ… direct ಮಾಡಿ… act ಮಾಡಿ… ಏನು ಮಾಡಬಹುದೋ ಅದನ್ನ ಮಾಡೋದು ಬಿಟ್ಟುಬಿಟ್ಟು ಕೈಲಾಸಂ ನಾಟಕದ ಹಳೇ ಮುದುಕೀರ ಥರಾ ಅಲ್ಲಿ ಅದು ಸಿಗಲಿಲ್ಲ ಇಲ್ಲಿ ಇದು ಸಿಗಲಿಲ್ಲ ಅಂತ ಗೊಣಗಾಡಿಕೊಂಡು ಜೀವನ ಯಾಕೆ ಹಾಳು ಮಾಡಿಕೋತಿದೀರಾ?’ ಅವರ ಮೃದು ಟೀಕೆ ಚುಚ್ಚಿದರೂ ಅದನ್ನು ತೋರಿಸಿಕೊಳ್ಳದೆ, ‘ಹಾಗಲ್ಲ ಪ್ರಸನ್ನ.. ದೆಹಲಿಗೆ ಹೋಗಿ ಓದಿಕೊಂಡು ಬರುವಷ್ಟು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ.. ಈಗ ಈ ಕಾರಣಕ್ಕೆ ಮತ್ತೆ ಮನೆಯವರಿಗೆ ಹೊರೆಯಾಗೋದು ನನಗೆ ಖಂಡಿತಾ ಇಷ್ಟವಿಲ್ಲ’ ಎಂದೆ. ‘ನನ್ನ ಮಾತು ಪೂರ್ತಿ ಕೇಳಿಸಿಕೊಳ್ಳಿ.. ಈ ಸಲದಿಂದ NSD ಯಲ್ಲಿ ಓದೋದಕ್ಕೆ ಮೂರು ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರ scholarship ಕೊಡ್ತಿದೆ… ತಿಂಗಳಿಗೆ ಮುನ್ನೂರು ರೂಪಾಯಿ.. ಅಲ್ಲಿ ಹಾಸ್ಟೆಲ್, ಮೆಸ್ ವ್ಯವಸ್ಥೆ ಎಲ್ಲಾ ಇದೆ. ಸ್ವಲ್ಪ ಕಷ್ಟಪಟ್ಟರೆ 300 ರೂಪಾಯಲ್ಲಿ ಹೇಗೋ manage ಮಾಡಿಕೋಬಹುದು.. ಯಾತಕ್ಕೂ ಮೊದಲು ಒಂದು application ಹಾಕಿ. ಕಷ್ಟಪಟ್ಟರೂ ಇಷ್ಟದ ಕೆಲಸ ಮಾಡಬೇಕು ಕಣ್ರೀ.. good luck’ ಎಂದು ಹೇಳಿ ತಲೆಗೊಂದು ಗುಂಗೀಹುಳವನ್ನು ಬಿಟ್ಟು ಪ್ರಸನ್ನ ಹೊರಟುಹೋದರು.

ಮನಸ್ಸಿನಲ್ಲಿ ಹೊಸ ಆಸೆಗಳು ಗರಿಗೆದರತೊಡಗಿದವು. ಪ್ರಾಣಪ್ರಿಯವಾದ ರಂಗಭೂಮಿಯಲ್ಲೇ ಸದಾಸರ್ವಕಾಲ ತೊಡಗಿಕೊಂಡಿರಲು ಅನುವಾಗುವಂತಹ ಇಂತಹ ಅಪೂರ್ವ ಅವಕಾಶಕ್ಕಿಂತ ಉತ್ತಮವಾದುದೇನನ್ನು ತಾನೇ ನಾನು ನಿರೀಕ್ಷಿಸಬಹುದು? ಮರುದಿನವೇ ಸಂಸ್ಕೃತಿ ಇಲಾಖೆಗೆ ಹೋಗಿ ಅರ್ಜಿ ತಂದು ಮುತುವರ್ಜಿಯಾಗಿ ತುಂಬಿ ಅಗತ್ಯವಿದ್ದ ಸರ್ಟಿಫಿಕೇಟ್ ಗಳ ಪ್ರತಿಗಳೊಂದಿಗೆ ಇಲಾಖೆಗೆ ತಲುಪಿಸಿಯೂ ಬಂದುಬಿಟ್ಟೆ. ಒಂದೆಡೆ ನಾನು ತೊಡಗಿಕೊಳ್ಳುತ್ತಿರುವ ಪ್ರಪ್ರಥಮ ಚಲನ ಚಿತ್ರ ‘ಗೀಜಗನ ಗೂಡು’ ವಿನ ಪೂರ್ವಭಾವೀ ಸಿದ್ಧತೆಗಳು… ಮತ್ತೊಂದೆಡೆ ಬದುಕಿನ ಹಾದಿಯನ್ನೇ ಬದಲಿಸಬಲ್ಲಂಥ, NSD ಯಲ್ಲಿ ಓದುವ ಅಪೂರ್ವ ಅವಕಾಶದ ಹೊಸ್ತಿಲು… ನಿಂತ ನೀರಿನಂತಾಗಿ ಹೋಗಿದ್ದ ನನ್ನ ಬದುಕೂ ಕೂಡಾ ಮೆಲ್ಲಗೆ, ಸದ್ದಿಲ್ಲದೇ ಹೊಸ ಅರ್ಥಗಳನ್ನು ಕಟ್ಟಿಕೊಳ್ಳುತ್ತಿದೆ ಅನ್ನಿಸಿ ಮೈ ಹಾಗೇ ಒಮ್ಮೆ ಹಗುರಾಗಿ ಕಂಪಿಸಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

11 November, 2021

1 Comment

  1. Nagesh

    Thumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading