ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಕೃಷ್ಣಭಟ್ಟರ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

43

‘ಉದ್ಭವ’ ಹಾಗೂ ‘ಹ್ಯಾಮ್ಲೆಟ್’ — ಈ ಎರಡೂ ನಾಟಕಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡದ್ದಷ್ಟೇ ಅಲ್ಲದೆ ನಾಡಿನಾದ್ಯಂತ ಅನೇಕ ಪ್ರದರ್ಶನಗಳನ್ನೂ ಕಂಡವು.ಅನೇಕ ನೆನಪುಗಳು ಈ ನಾಟಕಗಳ ವಿವಿಧ ಪ್ರದರ್ಶನಗಳೊಂದಿಗೆ ತಳುಕು ಹಾಕಿಕೊಂಡಿದ್ದು ಅವಗಳನ್ನೆಲ್ಲಾ ಇಲ್ಲಿಯೇ ಮೆಲುಕು ಹಾಕುವ ಪ್ರಯತ್ನ ಮಾಡುತ್ತೇನೆ.

ಬೆಳ್ಳಿಗುಂಡು ನಾಟಕದಲ್ಲಿ ಅನಂತನಾಗ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರ ಬಗ್ಗೆ ಈಗಾಗಲೇ ವಿವರವಾಗಿ ಹೇಳಿದ್ದೇನಷ್ಟೇ..ಆ ನಂತರವೂ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ಮೊಬೈಲ್ ಯುಗ ಇನ್ನೂ ಆರಂಭವಾಗದ ಕಾರಣಕ್ಕೆ ಹೆಚ್ಚಿನಂಶ ನಮ್ಮ ಮಾತುಕತೆಗಳು ಪತ್ರಮುಖೇನವೇ ನಡೆಯುತ್ತಿತ್ತು. ಇಂಗ್ಲೀಷ್ ನಲ್ಲಿ ಟೈಪ್ ಮಾಡಿದ ಪತ್ರಗಳನ್ನು ಅನಂತ್ ಅವರು ನನಗೆ ಕಳಿಸಿದ್ದುಂಟು.ಒಂದು ಪತ್ರದಲ್ಲಿ ಕೊನೆಯಲ್ಲಿ ಸಹಿ ಮಾಡುವಲ್ಲಿ ‘an ant’ ಎಂಬ ಅವರ ಹೆಸರನ್ನು ‘an ant’ ಎಂದು ಟೈಪ್ ಮಾಡಿ ಕಳಿಸಿ ಹಾಸ್ಯ ಪ್ರಜ್ಞೆ ಮೆರೆದಿದ್ದರು! ನಾನು ಹಾಗೂ ರಿಚರ್ಡ್, ಅನಂತ್ ಅವರೊಂದಿಗೆ ಉದ್ಭವ ನಾಟಕದ ಬಗ್ಗೆಯೂ ಚರ್ಚೆ ಮಾಡಿದ್ದೆವು.

ಅನಂತ್ ಅವರು ಆಗಲೇ ಉದ್ಭವ ನಾಟಕವನ್ನು ಸಿನೆಮಾ ಮಾಡುವುದಕ್ಕೆ ತುಂಬಾ ಉತ್ಸುಕರಾಗಿದ್ದರು! ಅನೇಕ ಬಾರಿ ಈ ಕುರಿತಾಗಿ ಅವರೊಂದಿಗೆ ನಾವು ಚರ್ಚಿಸಿದ್ದೂ ಉಂಟು. ಆದರೆ ಆ ವೇಳೆಗೆ ಅನಂತ್ ಅವರು ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ಅಭಿನಯಿಸತೊಡಗಿ ಬಿಡುವೇ ಇಲ್ಲದಂತಾಗಿ ಹೋದ್ದರಿಂದಲೂ ನಾವೂ ನಮ್ಮ ನಾಟಕ ಪ್ರದರ್ಶನಗಳಲ್ಲಿ ತೊಡಗಿಕೊಂಡದ್ದರಿಂದಲೂ ನಮ್ಮ “ಉದ್ಭವ” ಸಿನೆಮಾ ಯೋಜನೆ ಅಲ್ಲಿಯೇ ಸ್ಥಗಿತವಾಗಿ ಬಿಟ್ಟಿತು.ಮುಂದೆ ಹಲವಾರು ವರ್ಷಗಳ ನಂತರ ಬೇರೊಬ್ಬ ನಿರ್ದೇಶಕರು ಅನಂತನಾಗ್ ಅವರನ್ನೇ ನಾಯಕರನ್ನಾಗಿ ಮಾಡಿಕೊಂಡು ‘ಉದ್ಭವ’ ಸಿನೆಮಾ ಮಾಡಿದ್ದು ಹಾಗೂ ಅದು ಪ್ರಚಂಡ ಯಶಸ್ಸನ್ನು ಗಳಿಸಿದ್ದು ಈಗ ಇತಿಹಾಸ.

ನಾನು ಉದ್ಭವ ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವಾಗ ಮಾಡಿಕೊಂಡಿದ್ದ ಬದಲಾವಣೆಗಳೆಲ್ಲವೂ ಚಿತ್ರದಲ್ಲಿಯೂ ಸ್ಥಾನ ಗಳಿಸಿಕೊಂಡಿದ್ದವಾದರೂ ಒಂದು ಸಣ್ಣ ಕೃತಜ್ಞತೆಯ ಸ್ಮರಣೆಯೂ ನನಗಾಗಲೀ ನನ್ನ ನಾಟಕಕ್ಕಾಗಲೀ ಸಲ್ಲದೇ ಹೋದುದು ಆಗ ಒಂದಷ್ಟು ಸಮಯ ನನ್ನನ್ನು ಕಾಡಿದ ನೋವಿನ ಸಂಗತಿ. ಆ ವೇಳೆಗಾಗಲೇ ವೈಕುಂಠರಾಜು ಅವರೇ ಮುತುವರ್ಜಿ ವಹಿಸಿ ‘ಉದ್ಭವ’ ನಾಟಕ ರೂಪವನ್ನು ಪುಸ್ತಕವಾಗಿ ಪ್ರಕಟಿಸಿದ್ದರು. ನನ್ನ ನಾಟಕಗಳ ಪ್ರಕಟಣೆಯ ಬಗ್ಗೆ ನಾನೆಂದೂ ಆಸಕ್ತಿ ತೋರಿದವನಲ್ಲ. ‘ಯಶಸ್ವೀ ನಾಟಕಗಳು ಪುಸ್ತಕ ರೂಪದಲ್ಲಿ ಲಭ್ಯವಾದರೆ ನಾಡಿನ ಬೇರೆ ಬೇರೆ ತಂಡಗಳವರೂ ಆ ನಾಟಕವನ್ನು ಮಾಡಿಸಲು ಅನುಕೂಲವಾಗಿ ರಂಗಭೂಮಿಯ ಬೆಳವಣಿಗೆಗೆ ಸಹಾಯವಾಗುತ್ತದೆ; ಬರಹಗಾರರಿಗೂ ಚೂರು ಪಾರು ರಾಯಲ್ಟಿ ಬರುತ್ತದೆ’ ಎಂದು ರಾಜು ಅವರೇ ನನ್ನನ್ನು ಹುರಿದುಂಬಿಸಿ ನಾಟಕ ಪ್ರಕಟಿಸಿದ್ದರು.ನನಗೆ ಅದೆಷ್ಟೋ ಪ್ರತಿಶತ ರಾಯಲ್ಟಿ ಎಂದು ನಿಗದಿಯಾಗಿದ್ದರೂ, ಅದುವರೆಗೆ ನಮ್ಮ ತಂಡದಿಂದ ಆದ ‘ಉದ್ಭವ’ ನಾಟಕ ಪ್ರದರ್ಶನಗಳಿಗೆ ಮೂಲ ಬರಹಗಾರರಿಗೆ ಸಲ್ಲಬೇಕಾದ ಗೌರವಧನಕ್ಕೆ ಅದು ಚುಕ್ತಾ ಆಗಿಹೋಯಿತು!

ನನ್ನ ಪಾಲಿಗೆ ಬಂದ ನನ್ನ ಪ್ರಪ್ರಥಮ ಪ್ರಕಟಿತ ನಾಟಕದ 25 ಪ್ರತಿಗಳನ್ನು ಆಪ್ತೇಷ್ಟರಿಗೆ ಕೊಟ್ಟು ಸಂಭ್ರಮಿಸಿ ಸಮಾಧಾನ ಮಾಡಿಕೊಂಡೆ. ಮತ್ತಷ್ಟು ವರ್ಷಗಳ ನಂತರ ನಡೆದ ಮತ್ತೊಂದು ಸಂಗತಿಯನ್ನೂ ಈ ಸಂದರ್ಭದಲ್ಲೇ ನೆನಪಿಸಿಕೊಂಡು—ಹಾಗೆ ನೆನೆಸಿಕೊಳ್ಳಲು ಇದು ಸೂಕ್ತ ಸ್ಥಳವಾಗಿರುವುದರಿಂದ—ನನ್ನ ಕಥೆಗೆ ಮರಳುತ್ತೇನೆ: ಒಮ್ಮೆ ನನ್ನ ಮಿತ್ರರೊಬ್ಬರು ಮೈಸೂರಿನಿಂದ ಫೋನ್ ಮಾಡಿ, “ನಿಮ್ಮ ಉದ್ಭವ’ ನಾಟಕವನ್ನು ಇಲ್ಲಿ ಯಾವುದೋ ಒಂದು ಕೋರ್ಸ್ ಗೆ ಪಠ್ಯವಾಗಿ ನೇಮಿಸಿದ್ದಾರೆ” ಎಂಬ ಸುದ್ದಿಯನ್ನು ತಿಳಿಸಿದರು. ಸುದ್ದಿ ಕೇಳಿ ಆನಂದವೂ ಆಯಿತು, ನನಗೊಂದು ಮಾತು ತಿಳಿಸುವ ಸೌಜನ್ಯವೂ ಇಲ್ಲದೇ ಹೋಯಿತೇ—ಎಂದು ಬೇಸರವೂ ಆಯಿತು.

ಈ ಅಚಾತುರ್ಯಕ್ಕೆ ಏನಾದರೂ ಕಾನೂನು ಕ್ರಮ ತೆಗೆದುಕೊಳ್ಳಬಹುದೇ ಎಂದು ನಾನು ಮನಸ್ಸಿನಲ್ಲೇ ಚಿಂತಿಸುತ್ತಿರುವಾಗಲೇ ನನ್ನ ಯೋಚನಾ ಲಹರಿಯನ್ನು ಕತ್ತರಿಸಿ ಹಾಕುವಂತೆ ಮಿತ್ರರ ಮಾತು ನುಗ್ಗಿ ಬಂತು: “ನಾಟಕರೂಪದಲ್ಲಿ ಎಲ್ಲೂ ನಿಮ್ಮ ಹೆಸರಿಲ್ಲ..ಮೂಲ ಬರಹಗಾರರ ಹೆಸರು ಮಾತ್ರವೇ ಇದೆ!”. ನನಗೊಂದು ಕ್ಷಣ ಏನು ಹೇಳಲೂ ತೋಚಲಿಲ್ಲ! ಹೀಗೂ ಆಗಬಹುದೇ?! ಒಂದು ಕ್ಷಣ ಸಾವರಿಸಿಕೊಂಡು ಮಿತ್ರರನ್ನು ಕೇಳಿದೆ: “ನಿಮಗೆ ನನ್ನ ನಾಟಕ ಗೊತ್ತು…ಈಗ ಪಠ್ಯವಾಗಿರುವ ನಾಟಕದ ಆವೃತ್ತಿ ನನ್ನ ನಾಟಕಕ್ಕಿಂತ ತುಂಬಾ ಭಿನ್ನವಾಗೇನಾದರೂ ಇದೆಯೇ?”. ಮಿತ್ರರಂದರು: “ಇಲ್ಲ ಪ್ರಭೂ..ಯಾವ ವ್ಯತ್ಯಾಸವೂ ಇಲ್ಲ..ಹಾಡುಗಳು ಬದಲಾಗಿವೆ ಅಷ್ಟೇ..ಎಂ ಎನ್ ವ್ಯಾಸರಾವ್ ಅವರ ಹಾಡುಗಳನ್ನು ತೆಗೆದುಹಾಕಿ ದಾಸರ ಪದಗಳನ್ನು ಆ ಜಾಗದಲ್ಲಿ ಬಳಸಲಾಗಿದೆ..ಅಷ್ಟೇ ವ್ಯತ್ಯಾಸ ಆಗಿರುವುದು”. “ಆಯಿತು ಬಿಡಿ..ಈ ನೆಪದಲ್ಲಿ ಇನ್ನಷ್ಟು ಜನಕ್ಕೆ—ಅದರಲ್ಲೂ ಯುವ ಪೀಳಿಗೆಗೆ—ನನ್ನ ನಾಟಕ ತಲುಪುವಂತೆ ಆಗಿದೆಯಲ್ಲಾ,ಅಷ್ಟೇ ಸಾಕು” ಎಂದು ನುಡಿದು ಫೋನ್ ಕೆಳಗಿಟ್ಟೆ.ಒಂದು ಬಗೆಯ ನಿರಾಸೆ—ಖಿನ್ನತೆಯ ಭಾವಗಳು ಮೇಲೆ ಹೇಳಿದ ಎರಡೂ ಸಂದರ್ಭಗಳಲ್ಲಿ ಕಾಡಿದ್ದಂತೂ ದಿಟ. ಮುಂದೆಯೂ ಹಲಬಾರಿ ಇಂಥದೇ ಪ್ರಸಂಗಗಳ ಪುನರಾವರ್ತನೆಯಾಗಿ ಹಾಗೆ ನೋವು ತಿನ್ನುವುದು ಒಂದು ರೀತಿಯಲ್ಲಿ ನನಗೆ ರೂಢಿಯೇ ಆಗಿಹೋಯಿತು ಅನ್ನುವುದೂ ಅಷ್ಟೇ ದಿಟ! ಇರಲಿ..ಸಂದರ್ಭಾನುಸಾರವಾಗಿ ಆ ಘಟನೆಗಳನ್ನು ನೆನಪಿಸಿಕೊಳ್ಳುತ್ತೇನೆ. ಈಗ ಮತ್ತೆ ನಾಟಕ ರಂಗದ ನನ್ನ ಪಯಣದತ್ತ ಹೊರಳುತ್ತೇನೆ.

ಒಂದು ದಿನ ಬೆಳಿಗ್ಗೆ ಅಚಾನಕ್ಕಾಗಿ ಟಿ.ಎಸ್.ರಂಗಾ ಅವರು ಆಟೋದಲ್ಲಿ ನಮ್ಮ ಮನೆಗೆ ಬಂದಿಳಿದರು! ಆಟೋ ಅಂದರೆ ಅವರದ್ದೇ ಸ್ವಂತ ಆಟೋ.ರಂಗಾ ಅವರು ತಮ್ಮ ಓಡಾಟಕ್ಕೆ ಅನುಕೂಲವಾಗಲೆಂದು ಒಂದು ಆಟೋ ಇಟ್ಟುಕೊಂಡಿದ್ದರು. ರಂಗಾ ತಮ್ಮ ಜೊತೆಗೆ ಸ್ನೇಹಿತರೊಬ್ಬರನ್ನೂ ಕರೆತಂದಿದ್ದರು.’ಇವರು ಎಸ್.ಕೆ. ಶ್ರೀಧರ್ ಅಂತ..ಮಂಗಳೂರಿನವರು..ನಮ್ಮ ಒಳ್ಳೇ ಸ್ನೇಹಿತರು’ ಎಂದು ರಂಗಾ ಪರಿಚಯ ಮಾಡಿಕೊಟ್ಟ ಆ ವ್ಯಕ್ತಿಯತ್ತ ತಿರುಗಿ ‘ನಮಸ್ಕಾರ’ ಎಂದು ಹೇಳಿ ಒಮ್ಮೆ ಅವರನ್ನೇ ದಿಟ್ಟಿಸಿದೆ. ವಿಶಿಷ್ಟ ಸ್ವರೂಪದ ವ್ಯಕ್ತಿ..ಜೀನ್ಸ್ —ಟೀ ಶರ್ಟ್ ಧರಿಸಿದ್ದ ಗುಂಡುಗುಂಡಗಿದ್ದ ಆ ವ್ಯಕ್ತಿಯ ತಲೆಯ ತುಂಬಾ ದಟ್ಟ ಗುಂಗುರು ಕೂದಲು…ಕುರುಚಲು ಗಡ್ಡ…ಬೀಟಲ್ಸ್ ಹಾಡುಗಾರರನ್ನು ನೆನಪಿಸುವ ಸ್ವರೂಪ.. ಕಣ್ಣುಗಳಲ್ಲಿ ಮಾತ್ರ ಮಗುವಿನ ಮುಗ್ಧತೆ. ನೋಡಿದೊಡನೆ ಯಾಕೋ ಆ ವ್ಯಕ್ತಿ ತುಂಬಾ ಇಷ್ಟವಾಗಿಬಿಟ್ಟರು. “ನಿನ್ನೆ ಕಲಾಕ್ಷೇತ್ರದಲ್ಲಿ ನಿಮ್ಮ ಉದ್ಭವ ನಾಟಕದ show ನೋಡಿದೆ. ತುಂಬಾ ಇಷ್ಟವಾಯಿತು.

ನಮ್ಮ ಮಂಗಳೂರಿನಲ್ಲಿ ನಿಮ್ಮ ನಾಟಕ ಮಾಡಿಸಬೇಕು. ಆ ವಿಷಯ ಮಾತಾಡೋದಕ್ಕೇ ಬಂದೆ” ಎಂದರು ಶ್ರೀಧರ್. ಮಾತುಕತೆಯ ನಂತರ ಮಂಗಳೂರು ಹಾಗೂ ಸುತ್ತಮುತ್ತ ಎರಡು ಮೂರು ಪ್ರದರ್ಶನಗಳನ್ನು ನೀಡಿ ಬರುವುದೆಂದು ನಿರ್ಧಾರವಾಯಿತು.ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಪ್ರಚಾರದ ವ್ಯವಸ್ಥೆಯನ್ನು ತುಂಬಾ ವಿಶಿಷ್ಟ ರೀತಿಯಲ್ಲಿ ಶ್ರೀಧರ್ ಆಯೋಜಿಸಿದ್ದರು. ನಾಟಕ ಪ್ರದರ್ಶನದ ಹತ್ತು ದಿನ ಮೊದಲು ಊರ ತುಂಬಾ—”ಉದ್ಭವ: ಎಲ್ಲಿ?” ಎಂದಷ್ಟೇ ಬರಹವಿದ್ದ ಪೋಸ್ಟರ್ ಗಳು ರಾರಾಜಿಸತೊಡಗಿದವು! ಎರಡು ದಿನಗಳ ನಂತರ “ಉದ್ಭವ—ಹೇಗೆ? ಮಾಡಿದ್ದಾರು?” ಎಂಬರ್ಥದ ಬರಹದ ಪೋಸ್ಟರ್ ಗಳನ್ನು ಊರ ತುಂಬಾ ಹಚ್ಚಿದರು. ಇದೇನೆಂದು ಜನ ಕುತೂಹಲಭರಿತರಾಗಿ ವಿಚಾರಿಸತೊಡಗಿದಾಗಲೇ ನಮ್ಮ ನಾಟಕ ಪ್ರದರ್ಶನದ ಪೋಸ್ಟರ್ ಗಳು ಅವರಿಗೆದುರಾದವು! ಹೀಗೆ ಒಂದು ಹೊಸರೀತಿಯ ಪ್ರಚಾರ ತಂತ್ರವನ್ನು ಅಳವಡಿಸಿದ್ದೇ ಕಾರಣವಾಗಿ ನಾಟಕ ಪ್ರದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರು.

ಪ್ರದರ್ಶನವೂ ಸೊಗಸಾಗಿ ಮೂಡಿಬಂದಿತಾದರೂ ಪ್ರೇಕ್ಷಕರು ಯಾಕೋ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿಲ್ಲವೇ ಅನ್ನಿಸತೊಡಗಿ ಕೊಂಚ ಗೊಂದಲವಾಯಿತು. ತೆಳು ಹಾಸ್ಯದ ಅನೇಕ ಮಾತುಗಳಿಗೆ—ಸನ್ನಿವೇಶಗಳಿಗೆ ಪ್ರೇಕ್ಷಕರದು ಮಾತ್ರ ನೀರಸ ಪ್ರತಿಕ್ರಿಯೆ! ಪ್ರೇಕ್ಷಕರ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯೇ ಇಲ್ಲದೆ ಕಲಾವಿದರಿಗೆ ಉತ್ತೇಜನ ದೊರೆಯುವುದಾದರೂ ಹೇಗೆ..ನಾಟಕ ಕಳೆಗಟ್ಟುವುದಾದರೂ ಹೇಗೆ? ಆದರೂ ನಮ್ಮ ಕಲಾವಿದರು ತುಂಬು ಉತ್ಸಾಹದಿಂದಲೇ ಪ್ರದರ್ಶನವನ್ನು ನೀಡಿ ಮುಗಿಸಿದರು.

ನಂತರ ನಮಗೆ ತಿಳಿದು ಬಂದ ಸಂಗತಿಗಳಿವು: ಅಲ್ಲಿ ನಾಟಕ ಮಾಡಿದ ಅನೇಕ ರಂಗ ತಂಡಗಳಿಗೆ ಇಂಥದೇ ಅನುಭವ ಆಗಿದೆ! ಆದರೆ ಪ್ರೇಕ್ಷಕರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿಲ್ಲ ಎಂದ ಮಾತ್ರಕ್ಕೆ ಅವರು ನಾಟಕವನ್ನು ಆಸ್ವಾದಿಸುತ್ತಿಲ್ಲ ಎಂದಾಗಲೀ ಅವರಿಗೆ ನಾಟಕ ಅರ್ಥವಾಗುತ್ತಿಲ್ಲ ಎಂದಾಗಲೀ ಅಲ್ಲ! ಅವರು ತಮ್ಮ ಮೆಚ್ಚುಗೆಯನ್ನು ಸೂಚಿಸುವ, ನಾಟಕಕ್ಕೆ ಪ್ರತಿಕ್ರಿಯಿಸುವ ಕ್ರಮ ಬೇರೆ ಅಷ್ಟೇ! ಕಲಾವಿದರ ಏಕಾಗ್ರತೆಗೂ ಭಂಗ ಬಾರದಂತೆ ಮೆಲುದನಿಯಲ್ಲಿ ಮೆಚ್ಚುವುದು..ನಗುವುದು..ಕೇಕೆಯ ಜಾಗದಲ್ಲಿ ಒಂದು ಕಿರುನಗೆ..ಇದು ಮಂಗಳೂರು ಪ್ರೇಕ್ಷಕರ ಕರಾರುವಾಕ್ಕಾದ ಶಿಸ್ತಿನ ಪ್ರತಿಕ್ರಿಯೆಯ ವಿಧಾನ.ಈ ವಿಚಾರ ತಿಳಿದುಕೊಂಡ ಮೇಲೆ ಮುಂದೆಯೂ ಇಂತಹ ಸಂದರ್ಭಗಳನ್ನು ಎದುರಿಸಬೇಕಾಗಿ ಬಂದಾಗ ನಮಗೆ ತೀವ್ರ ನಿರಾಸೆಯೇನೂ ಆಗಲಿಲ್ಲ! ನಾಟಕ ತುಂಬಾ ಚೆನ್ನಾಗಿ ಆಯಿತೆನ್ನುವುದು ಶ್ರೀಧರ್ ಹಾಗೂ ಅವರ ಪತ್ನಿ ಲೂಸಿ ಅವರಿಗೆ ಸಮಾಧಾನ—ತೃಪ್ತಿ ತಂದದ್ದಷ್ಟೇ ಅಲ್ಲ, ನಮ್ಮ ನಡುವಿನ ಒಂದೊಳ್ಳೆಯ ಸ್ನೇಹ ಸಂಬಂಧಕ್ಕೆ ಸೇತುವೆಯೂ ಆಯಿತು.

ಮಂಗಳೂರಿನಲ್ಲಿ ‘ಉದ್ಭವ’ ಪ್ರದರ್ಶನ ನೀಡಿದ ಸಮಯದಲ್ಲೇ ಉಡುಪಿಯಲ್ಲೂ ಪ್ರದರ್ಶನದ ವ್ಯವಸ್ಥೆ ಮಾಡಲು ಶ್ರೀಧರ್ ಪ್ರಯತ್ನಿಸಿದ್ದರೂ ಕಾರಣಾಂತರಗಳಿಂದ ಅದು ಆಗಿರಲಿಲ್ಲ.ನಂತರದ ಕೆಲ ದಿನಗಳಲ್ಲೇ ಉಡುಪಿಯಲ್ಲಿ ಎಂ ಜಿ ಎಂ ಕಾಲೇಜಿನ ಬಯಲು ರಂಗಮಂದಿರದಲ್ಲಿ ಉದ್ಭವ ನಾಟಕ ಪ್ರದರ್ಶನ ನೀಡಲು ನಿರ್ಧಾರವಾಯಿತು.ನಮ್ಮ ಪರಿಚಯದವರದ್ದೇ ಎರಡು ಮೆಟಡಾರ್ ವ್ಯಾನ್ ಗಳನ್ನು ಬಾಡಿಗೆಗೆ ತೆಗೆದುಕೊಂಡು, ಸಾಮಾನು ಸರಂಜಾಮು ಹೇರಿಕೊಂಡು ಪರಮೋತ್ಸಾಹದಿಂದ ನಮ್ಮ ದೊಡ್ಡ ತಂಡದೊಂದಿಗೆ ಉಡುಪಿಯತ್ತ ಪ್ರಯಾಣ ಹೊರಟೆವು. ವ್ಯಾನ್ ಗಳ ಮಾಲೀಕರು ನಾವು ಹೊರಟಾಗ ಒಂದು ಕಿವಿ ಮಾತು ಎಲ್ಲರಿಗೂ ಹೇಳಿದ್ದರು: “ದಾರಿಯಲ್ಲಿ ಅಕಸ್ಮಾತ್ ಏನಾದರೂ ಯಾರಾದರೂ ತನಿಖೆ—ತಪಾಸಣೆಗೆ ಬಂದರೆ ನಮ್ಮ ಸ್ವಂತ ಉಪಯೋಗಕ್ಕೆ ಬಳಸುತ್ತಿದ್ದೇವೆ; ಬಾಡಿಗೆಗಲ್ಲ ಎಂದು ಹೇಳಿಬಿಡಿ.”

ನನಗೆ ಈ ನಿಯಮಾವಳಿ ಇತ್ಯಾದಿಗಳ ಕಿಂಚಿತ್ತೂ ಅರಿವಿರದಿದ್ದರಿಂದ ಹಾಗೂ ಏನೇ ಆದರೂ ರಿಚಿ ನಿಭಾಯಿಸುತ್ತಾನೆ ಎಂಬ ವಿಶ್ವಾಸವಿದ್ದುದರಿಂದ ನಿಶ್ಚಿಂತನಾಗೇ ಇದ್ದೆ. ಬಹುಶಃ ಅದು ಮಹಾ ಮಸ್ತಕಾಭಿಷೇಕದ ಸಮಯವಿದ್ದಿರಬೇಕು: ಹಾಸನದ ಬಳಿ ಆರ್ ಟಿ ಓ ಅಧಿಕಾರಿಗಳು ತಪಾಸಣೆಗಾಗಿ ನಮ್ಮ ವ್ಯಾನ್ ಗಳನ್ನು ನಿಲ್ಲಿಸಿಯೇ ಬಿಟ್ಟರು! ತಪಾಸಣೆಗೆ ಬಂದಿದ್ದವರು ಗೋಪಾಲಪ್ಪ ಎಂಬ ಖಡಕ್ ಅಧಿಕಾರಿ. ನಮಗಳ ಸ್ವರೂಪದರ್ಶನ ಮಾತ್ರದಿಂದಲೇ,ತೆತೆ ಪೆತ್ತೆ ತೊದಲು ಮಾತುಗಳ ಶ್ರವಣ ಮಾತ್ರದಿಂದಲೇ ಆ ನುರಿತ ಅಧಿಕಾರಿಗೆ ಮನದಟ್ಟಾಗಿ ಹೋಯಿತು: ಇವು ಪರ್ಮಿಟ್ ಇಲ್ಲದೆ ಬಾಡಿಗೆಗೆ ಓಡುತ್ತಿರುವ ಬಂಡಿಗಳು! ದಂಡ ಕಟ್ಟದೇ ವ್ಯಾನ್ ಗಳು ಒಂದೇ ಒಂದು ಅಂಗುಲವೂ ಜರುಗಲು ಬಿಡುವುದಿಲ್ಲ ಎಂದು ಹಠ ಹಿಡಿದು ಕುಳಿತುಬಿಟ್ಟರು ಆ ನಿಷ್ಠಾವಂತ ಅಧಿಕಾರಿ! ನಾವೂ ಇನ್ನಿಲ್ಲದಂತೆ ಗೋಗರೆದು ಕೇಳಿಕೊಂಡೆವು:—”ಇದೊಂದು ಬಾರಿ ಕ್ಷಮಿಸಿ ಕಳಿಸಿಕೊಡಿ,ಬೆಂಗಳೂರಿಗೆ ಹೋದಮೇಲೆ ಖಂಡಿತ ಎಲ್ಲಾ ಸರಿ ಪಡಿಸಲು ಹೇಳುತ್ತೇವೆ” ಎಂದು.

ಉಂಹೂಂ…ಗೋಪಾಲಪ್ಪನವರು ಜಪ್ಪಯ್ಯ ಅನ್ನಲಿಲ್ಲ! ‘ನಾನು ಸಾಮಾನ್ಯ ಯಾರನ್ನೂ ಹೀಗೆ ತಡೆಯೋಲ್ಲ ಕಣ್ರೀ..ತಡೆದೆ ಅಂದಮೇಲೆ ಮುಗಿದ್ಹೋಯ್ತು..ದಂಡ ಕಟ್ಟಿಸದೇ ಬಿಡೋಲ್ಲ..ನಿಮ್ಮ bad luck ಉ..ನನ್ನ ಕೈಗೆ ಸಿಕ್ಕಿಹಾಕಿಕೊಂಡು ಬಿಟ್ರಿ!..ಇನ್ನೂ ಒಂದು bad news ಹೇಳ್ತೀನಿ ನಿಮಗೆ..ನಾನು ಅಮೇದ್ಯ ತಿಂದು ಬಿಟ್ಟುಬಿಡೋ ಭ್ರಷ್ಟರ ಜಾತಿಗೂ ಸೇರಿದೋನಲ್ಲ..ಹಾಗೆಲ್ಲಾದ್ರೂ ಪ್ರಯತ್ನ ಪಡೋಕೆ ಹೋಗಬೇಡಿ..ಪರಿಸ್ಥಿತಿ ಇನ್ನೂ ಬಿಗಡಾಯಿಸಿ ಬಿಡುತ್ತೆ” ಎಂದು ಗುಡುಗಿದರು. ಮೊಟ್ಟಮೊದಲ ಬಾರಿಗೆ ನಮ್ಮ ರಿಚಿಯ ಮಾತುಗಾರಿಕೆಯೂ ಕೆಲಸಕ್ಕೆ ಬಾರದೆ ಅವನು ಹತಾಶನಾಗಿ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟ! ನನಗಂತೂ ಗೋಪಾಲಪ್ಪನವರ ಮಾತುಗಾರಿಕೆಯಲ್ಲಿ ಒಬ್ಬ ನಟನ ಛಾಯೆ ಹೊಡೆದುಕಾಣುತ್ತಿತ್ತು! ಆ ನನ್ನ ಊಹೆಯೂ ಸರಿಯಾಗಿಯೇ ಇತ್ತು! ರಿಚಿ ತನ್ನ ಕೊನೆಯ ಅಸ್ತ್ರ ಪ್ರಯೋಗಿಸಿದ: “ನಾವು ಕಲಾವಿದರು ಸರ್, ನಾಟಕ ಮಾಡೋದಕ್ಕೆ ಉಡುಪಿಗೆ ಹೋಗ್ತಾ ಇದೀವಿ..ಇನ್ನೂ ತುಂಬಾ ದೂರದ ಪ್ರಯಾಣ..ಸಾಯಂಕಾಲ 6.30ಕ್ಕೆ show…ಈಗಲೇ ತಡ ಆಗ್ತಿದೆ…please sir, ಕಲಾವಿದರಿಗೆ ಸಹಾಯ ಮಾಡಿ” ಎಂದು ಬೇಡಿಕೊಂಡ.

“ಥೂ ನಿಮ್ಮ! ಕಲಾವಿದರು ಅಂತ ಮೊದಲೇ ಹೇಳೋದಲ್ಲವೇನ್ರೀ? ನಾನೂ ಕಲಾವಿದಾನೇ ಕಣ್ರೀ! ಬೇಕಾದಷ್ಟು ಪೌರಾಣಿಕ ನಾಟಕಗಳಲ್ಲಿ ಪಾರ್ಟ್ ಮಾಡಿದೀನಿ..” ಎಂದರು ಗೋಪಾಲಪ್ಪ. ಅವರ ಮಾತು ಕೇಳುತ್ತಿದ್ದಂತೆಯೇ ಸಮಸ್ಯೆ ಪರಿಹಾರವಾಗಬಹುದು ಅನ್ನುವ ಆಸೆ ಗರಿಗೆದರಿತು! ಮರುಕ್ಷಣದಲ್ಲೇ ಅದೂ ಥುಸ್ಸೆಂದು ಹೋಯಿತು! “ಆದ್ರೆ ಏನು ಮಾಡಲಿ ನಾನು? ಹಿಡಿದು case ಹಾಕಿಬಿಟ್ಟಿದೀನಿ ಅಂದಮೇಲೆ ಮುಗಿದುಹೋಯ್ತು! ಈಗ ನಿಮ್ಮನ್ನ ಹಾಗೇ ಬಿಟ್ಟುಬಿಟ್ರೆ ನನ್ನ ಸಹೋದ್ಯೋಗಿಗಳೆಲ್ಲಾ ‘ನಾನು ಅಮೇದ್ಯ ತಿಂದಿದೀನಿ’ ಅಂದುಕೊಂಡುಬಿಡ್ತಾರೆ ಕಣ್ರೀ… sorry… I cant help you” ಎಂದು ಕೈ ಆಡಿಸಿಯೇ ಬಿಟ್ಟರು ಗೋಪಾಲಪ್ಪ! ಕೊನೆಗೆ ಯಾರುಯಾರನ್ನೋ ಹಿಡಿದು ಹಣ ಹೊಂದಿಸಿ ದಂಡ ಕಟ್ಟಿ ವ್ಯಾನ್ ಗಳನ್ನು ಬಿಡಿಸಿಕೊಂಡು ಹೊರಟು ಉಡುಪಿ ಎಂ ಜಿ ಎಂ ಕಾಲೇಜ್ ತಲುಪುವ ವೇಳೆಗೆ ಸಂಜೆ 6 ಗಂಟೆ ದಾಟಿತ್ತು.

ನೋಡಿದರೆ ಹಾಕಿದ್ದ ಕುರ್ಚಿಗಳನ್ನೆಲ್ಲಾ ಲಾರಿಗೆ ತುಂಬಿ ಕಟ್ಟಿದ್ದ ಸ್ಟೇಜ್ ಅನ್ನು ಬಿಚ್ಚುತ್ತಿದ್ದಾರೆ! ಅಯ್ಯೋ ದೇವರೇ! ಇದೇನು ಅವಸ್ಥೆಯಾಯಿತು! ಅಲ್ಲಿ ದಂಡ ಕಟ್ಟಿ ಬಂದು ಇಲ್ಲಿ ಪ್ರದರ್ಶನವನ್ನೂ ನೀಡಲಾಗದಿದ್ದರೆ ನಷ್ಟ ದುಪ್ಪಟ್ಟಾಗಿ ಬಿಡುತ್ತದೆಯೇ! ಎಂಬ ಹಳಹಳಿಕೆ ಶುರುವಾಯಿತು. ಆ ವೇಳೆಗೆ ಅಲ್ಲಿನ ಮೇಲ್ವಿಚಾರಕರಂತೆ ತೋರುತ್ತಿದ್ದವರೊಬ್ಬರು ನಮ್ಮ ಬಳಿ ಬಂದವರೇ ಕೇಳಿದರು: “ತಾವು ನಾಟಕ ಮಾಡಲು ಬಂದದ್ದೋ?” ಹೌದು ಸರ್ ಎಂದು ನಾವು ತಲೆ ಆಡಿಸಿದೆವು. “ಬಹಳ ಬೇಗನೇ ಬಂದ ಹಾಗೆ ತೋರುತ್ತಿದೆಯಲ್ಲಾ! ಇನ್ನು ಹತ್ತು ಮಿನಿಟ್ ತಡ ಆಗಿದ್ದಿದ್ದರೆ ಇಲ್ಲಿ ಸ್ಟೇಜ್ ಕಟ್ಟಿದ್ದೂ ಕೂಡಾ ನಿಮಗೆ ಗುರ್ತಾಗ್ತಿರಲಿಲ್ಲ! ಅಷ್ಟು ಕಷ್ಟಪಟ್ಟು ಕಟ್ಟಿದ್ದು ಬರೆ ಕೆಡವುವುದಕ್ಕಾಯಿತಲ್ಲಾ ಮಾರಾಯ್ರೇ!” ಎಂದು ತುಸು ವ್ಯಂಗ್ಯ—ತುಸು ನೋವಿನಿಂದ ನುಡಿದರು ಆ ವ್ಯಕ್ತಿ.

ವಾಸ್ತವವಾಗಿ ಅವರು ನಮ್ಮ ನಾಟಕದ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಅಲ್ಲಿಯ ಒಬ್ಬ ಹಿರಿಯ ಅಧಿಕಾರಿಯಾದ ಕೃಷ್ಣಭಟ್ಟರು! ಅವರಿಗೆ ದಾರಿಯಲ್ಲಿ ನಮಗೊದಗಿದ ಸಂಕಷ್ಟಗಳನ್ನೆಲ್ಲಾ ವಿವರಿಸಿ ಹೇಳಿದ ಮೇಲೆ ತುಸು ಸಮಾಧಾನವಾದಂತೆನ್ನಿಸಿತು. “ಸರಿ..ಈಗೆಂತ ಮಾಡುವುದು ಮಾರಾಯ್ರೇ…ಮತ್ತೆ ಈ ಸ್ಟೇಜ್ ಕಟ್ಟುವುದು ಆಗದ ಮಾತು..ಒಳಗೊಂದು ಆಡಿಟೋರಿಯಂ ಉಂಟು.. ಆದರೆ ಅಲ್ಲಿ ಹೆಚ್ಚು ದೀಪಗಳಿಲ್ಲ..ಅಲ್ಲಿ ನಿಮ್ಮ ಉದ್ಭವವಾಗಬಹುದೋ?” ಎಂದು ಕೇಳಿದರು ಭಟ್ಟರು. “ಖಂಡಿತಾ ಮಾಡುತ್ತೇವೆ..ನಮಗೆ ಅರ್ಧ ತಾಸು ಸಮಯ ಕೊಡಿ..ಪ್ರೇಕ್ಷಕರಿಗೆ ಅರ್ಧತಾಸು ಬಿಟ್ಟುಬರಲು ಕೇಳಿಕೊಳ್ಳಿ..ನಾವು ಬೇಗ ಸಿದ್ಧರಾಗಿಬಿಡ್ತೇವೆ” ಎಂದವರೇ ನಾವು ಸೀದಾ ಒಳಗೋಡಿದೆವು. ಮಿಂಚಿನ ವೇಗದಲ್ಲಿ ಇದ್ದ ಸಾಮಗ್ರಿಗಳಿಂದಲೇ ರಂಗಸಜ್ಜಿಕೆ ಸಿದ್ಧಪಡಿಸಿಕೊಂಡು ಎಲ್ಲರಿಗೂ ಪ್ರವೇಶ—ನಿರ್ಗಮನಗಳ ಸೂಚನೆಗಳನ್ನಿತ್ತು ಮೇಳದವರ ಚಲನವಲನಗಳನ್ನು ರೂಪಿಸಿಕೊಟ್ಟು ಇದ್ದ ಲೈಟ್ ಗಳನ್ನೇ ಅನುಕೂಲಕ್ಕೆ ತಕ್ಕಂತೆ ಯೋಜಿಸಿಕೊಂಡು ನಾಟಕ ಆರಂಭಿಸಿಯೇ ಬಿಟ್ಟೆವು! ರಂಗಸಜ್ಜಿಕೆ—ಬೆಳಕಿನ ವ್ಯವಸ್ಥೆಯ ಕೊರತೆಗಳನ್ನು ಮುಚ್ಚಿಹಾಕುವಂತೆ ಕಲಾವಿದರು ತುಂಬು ಉತ್ಸಾಹದಿಂದ—ಲವಲವಿಕೆಯಿಂದ ಅಭಿನಯಿಸಿದರು.

ಉಡುಪಿಯ ಪ್ರೇಕ್ಷಕರೂ ತುಂಬಾ ಚೆನ್ನಾಗಿ ಪ್ರತಿಕ್ರಿಯಿಸಿದ್ದೇ ಅಲ್ಲದೆ ನಾಟಕವನ್ನು ಮನಸಾರೆ ಮೆಚ್ಚಿಕೊಂಡರು. ನಾಟಕ ಮುಗಿಯುವ ವೇಳೆಗೆ ಕೃಷ್ಣಭಟ್ಟರ ಮುಖದ ಮೇಲಿದ್ದ ಚಿಂತೆ—ಒತ್ತಡಗಳ ಗೆರೆಗಳೂ ಮಾಯವಾಗಿ ಅಲ್ಲಿ ಮಂದಹಾಸ ಮೂಡಿತ್ತು. ನಮ್ಮ ಆತ್ಮೀಯ ವರ್ಗಕ್ಕೆ ಅತ್ಯಲ್ಪ ಸಮಯದಲ್ಲೇ ಸೇರ್ಪಡೆಯಾಗಿ ಹೋದ ಕೃಷ್ಣಭಟ್ಟರು ನಾವು ಹೊರಟಾಗ ಹೇಳಿದ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ: “ಹೋಯ್! ನಿಮ್ಮ ಉದ್ಭವ ಉಡುಪಿಯಲ್ಲಿ ಸೊಗಸಾಗಿ ಆಗಿಹೋಯ್ತಲ್ಲಾ ಮಾರಾಯ್ರೇ! ಉದ್ಭವ ಈಗ ಆಯ್ತು..ಮೊದಲ ಹೆಜ್ಜೆ ಇಡಲಿಕ್ಕೆ ಯಾವಾಗ ಬರುವುದು ನೀವು?!!”

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

31 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading