
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
52
ಉದ್ಭವ ಹಾಗೂ ಹ್ಯಾಮ್ಲೆಟ್ ನಾಟಕಗಳು ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ಹೊಸ ನಾಟಕದ ತಾಲೀಮು ಪ್ರಾರಂಭಿಸಬೇಕೆಂಬ ತುಡಿತ ಆರಂಭವಾಗಿತ್ತು! ‘ಮಂಡೂಕರಾಜ್ಯ’ ನಾಟಕ ಹೆಚ್ಚುಕಡಿಮೆ ಪೂರ್ಣಗೊಳ್ಳುವ ಹಂತದಲ್ಲಿತ್ತು. ಆ ಸಂದರ್ಭದಲ್ಲಿಯೇ ನಾಟಕಕಾರ—ಕತೆಗಾರ ಎ.ಎನ್.ಪ್ರಸನ್ನ ಅವರ ಪರಿಚಯವಾಗಿ ಅವರು ಆನ್ವಿಯ ಬೆಕೆಟ್ ನಾಟಕವನ್ನು ಅನುವಾದಿಸಿರುವುದಾಗಿಯೂ ನನಗೆ ಆಸಕ್ತಿ ಇದ್ದರೆ ಆ ನಾಟಕವನ್ನು ಮಾಡಿಸಬಹುದೆಂದೂ ಹೇಳಿದರು.ಅದೇ ನಾಟಕ—ಕಥೆಯನ್ನಾಧರಿಸಿ ರೂಪುಗೊಂಡಿದ್ದ ‘ಬೆಕೆಟ್’ ಇಂಗ್ಲೀಷ್ ಚಲನಚಿತ್ರವನ್ನು ನಾನು ವಿದ್ಯಾರ್ಥಿಯಾಗಿದ್ದಾಗಲೇ ರೆಕ್ಸ್ ಥಿಯೇಟರ್ ನಲ್ಲಿ ನೋಡಿದ್ದ ನೆನಪು ನುಗ್ಗಿ ಬಂತು.
ಆ ದಿನಗಳಿಂದಲೂ ನನ್ನನ್ನು ಬಹುವಾಗಿ ಕಾಡಿದ್ದ ಕಥೆ ಅದು. ಸ್ನೇಹ—ಧರ್ಮ—ರಾಜಕಾರಣಗಳ ನಡುವಣ ವಿಶಿಷ್ಟ ಹಾಗೂ ಸಂಕೀರ್ಣ ಸಂಬಂಧವನ್ನೂ ಅವುಗಳ ನಡುವಿನ ತಾತ್ವಿಕ ಸಂಘರ್ಷವನ್ನೂ ಅನನ್ಯವಾದ ರೀತಿಯಲ್ಲಿ ಅಭಿವ್ಯಕ್ತಿಸಿದ್ದ ಅಪರೂಪದ ಚಿತ್ರವಾಗಿತ್ತು ‘ಬೆಕೆಟ್’. ರಿಚರ್ಡ್ ಬರ್ಟನ್ ಬೆಕೆಟ್ ನ ಪಾತ್ರದಲ್ಲಿ ಹಾಗೂ ಪೀಟರ್ ಓ ಟೂಲ್ ಹೆನ್ರಿ ದೊರೆಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಕಿಕ್ಕಿರಿದ ನಕ್ಷತ್ರಗಳ ಆಗಸದ ಹಾಸಿನ ಕೆಳಗೆ ವಿಶಾಲವಾದ ಬಯಲಿನಲ್ಲಿ ಹೆನ್ರಿ ದೊರೆ ಹಾಗೂ ಬೆಕೆಟ್ ಕುದುರೆಗಳ ಮೇಲೆ ಕುಳಿತು ಮುಖಾಮುಖಿಯಾಗುವ ಅದ್ಭುತ ದೃಶ್ಯ ಇಷ್ಟು ವರ್ಷಗಳ ನಂತರವೂ ನನ್ನ ನೆನಪಿನಿಂದ ಮರೆಯಾಗಿಲ್ಲ!ಇದೇ ಚಿತ್ರದಿಂದ ಸ್ಫೂರ್ತಿ ಪಡೆದು ಹೃಷಿಕೇಶ್ ಮುಖರ್ಜಿಯವರು ಹಿಂದಿಯಲ್ಲಿ ‘ನಮಕ್ ಹರಾಮ್’ ಎಂಬ ಚಿತ್ರವನ್ನು ನಿರ್ಮಿಸಿದ್ದರು.
ಧಾರ್ಮಿಕ ಸಂಘರ್ಷದ ಆಯಾಮವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದ ಹೃಷಿಕೇಶ್ ಮುಖರ್ಜಿಯವರು ಟ್ರೇಡ್ ಯೂನಿಯನ್—ರಾಜಕಾರಣ—ಸ್ನೇಹ ಸಂಬಂಧಗಳ ನಡುವಣ ಸಂಘರ್ಷಕ್ಕೆ ಪ್ರಾಮುಖ್ಯತೆ ನೀಡಿದ್ದರು.ರಾಜೇಶ್ ಖನ್ನಾ—ಅಮಿತಾಬ್ ಬಚ್ಚನ್ —ಓಂ ಶಿವಪುರಿಯವರ ಅಪೂರ್ವ ಅಭಿನಯದಿಂದ ಚಿತ್ರ ಸಾಕಷ್ಟು ಜನಪ್ರಿಯವಾದದ್ದಲ್ಲದೆ ಅಮಿತಾಬ್ ಬಚ್ಚನ್ ಎಂಬ ಮಹಾನ್ ತಾರೆಯ ಬರವನ್ನು ದಾಖಲಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿತು.ಈ ನಾಟಕವನ್ನು ರಂಗಕ್ಕೆ ಅಳವಡಿಸಿಕೊಳ್ಳಲು ನನಗೆ ಆಸಕ್ತಿ ಇತ್ತಾದರೂ ಬರವಣಿಗೆಯನ್ನು ಇನ್ನೂ ಪ್ರಾರಂಭಿಸಿರಲಿಲ್ಲ.
ಪ್ರಸನ್ನ ಅವರು ಸಿದ್ಧ ಹಸ್ತಪ್ರತಿಯನ್ನೇ ನೀಡಿದಾಗ ತಡ ಮಾಡುವುದೇಕೆಂದು ಯೋಚಿಸಿ ಪ್ರಾಥಮಿಕ ತಯಾರಿಯನ್ನು ಆರಂಭಿಸಿಯೇ ಬಿಟ್ಟೆ. ನಮ್ಮ ತಂಡದ ಅಪ್ರತಿಮ ಕಲಾವಿದ ಎಲ್.ಎಸ್.ಸುಧೀಂದ್ರ ಹೆನ್ರಿ ದೊರೆಯ ಪಾತ್ರಕ್ಕೆ ಸೂಕ್ತ ಆಯ್ಕೆಯಾಗಬಹುದೆನ್ನಿಸಿತು. ಬೆಕೆಟ್ ನ ಪಾತ್ರವನ್ನು ನಾನೇ ನಿರ್ವಹಿಸುವುದೆಂದು ತೀರ್ಮಾನಿಸಿದೆ. ಸ್ವಾರಸ್ಯದ ಸಂಗತಿಯೆಂದರೆ ಸುಧೀಂದ್ರನಿಗೂ ಹೆನ್ರಿ ದೊರೆಯ ಪಾತ್ರವನ್ನು ನಿರ್ವಹಿಸಬೇಕೆನ್ನುವ ಮಹದಾಸೆಯಿತ್ತಂತೆ!

ಇದೇ ವೇಳೆಯಲ್ಲಿಯೇ ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿ ವಿಭಾಗಕ್ಕೆ ಪುಸ್ತಕ ವಿಮರ್ಶೆ ಮಾಡಿಕೊಡುತ್ತಿದ್ದೆ. ಈ ಸಂಬಂಧವಾಗಿ ನನಗೆ ನೆರವಾದವರೆಂದರೆ ವೈಕುಂಠರಾಜು ಹಾಗೂ ಪ್ರಸಿದ್ಧ ಸಾಹಿತಿ—ವಿಮರ್ಶಕ ಜಿ.ಎನ್.ರಂಗನಾಥ ರಾವ್ ಅವರು.
ಉದ್ಭವ ನಾಟಕದ ನಂತರ ರಾಜು ಅವರು ತಾವೇ ಸ್ವತಂತ್ರ ನಾಟಕ ಬರೆಯಲು ತೀರ್ಮಾನಿಸಿದ್ದರ ಬಗ್ಗೆ ಈಗಾಗಲೇ ಹೇಳಿದ್ದೇನೆ. ಹಾಗೆ ಅವರು ಬರೆದ ಮೊದಲ ನಾಟಕ ‘ಸಂದರ್ಭ’.ನಾಟಕದ ಮೊದಲ ಕರಡು ಸಿದ್ಧವಾದ ಮೇಲೆ ನಾಲ್ಕಾರು ದಿನಗಳು ರಾಜು ಅವರ ಮನೆಗೇ ಹೋಗಿ ಕುಳಿತು ನಾಟಕದ ಶಿಲ್ಪ ವಿನ್ಯಾಸಕ್ಕೆ ಸಂಬಂಧ ಪಟ್ಟ ಹಾಗೆ ಕೆಲ ಸಲಹೆಗಳನ್ನು ನೀಡಿ ಸಂಪೂರ್ಣವಾಗಿ ಸಿದ್ಧವಾದ ನಾಟಕದ ಹಸ್ತಪ್ರತಿಯನ್ನು ಬರೆದು ಸಿದ್ಧ ಪಡಿಸಿದೆ.ಈಗ ಆ ನಾಟಕದ ವಸ್ತು—ಪಾತ್ರಗಳು ಅಷ್ಟಾಗಿ ನೆನಪಿಲ್ಲವಾದರೂ ಅಂದಿನ ಸ್ಧಿತಿಗತಿಗಳಿಗೆ ಕನ್ನಡಿ ಹಿಡಿಯುವ ರಾಜಕೀಯ ನಾಟಕವಾಗಿತ್ತು ‘ಸಂದರ್ಭ’.
ಹೀಗೆ ನಾಟಕ ಸಿದ್ಧವಾದ ಮೇಲೆ ಒಂದುದಿನ ಇದ್ದಕ್ಕಿದ್ದಂತೆ ರಾಜು ಅವರು,” ಪ್ರಭೂ,ನೀನೇ ನಿಮ್ಮ ನಾಟ್ಯದರ್ಪಣ ತಂಡಕ್ಕೆ ‘ಸಂದರ್ಭ’ ನಾಟಕ ಮಾಡಿಸಿಬಿಡೋ” ಎಂದರು!ನಾಟಕ ಮಾಡಿಸುವುದು ವಾಸ್ತವವಾಗಿ ದೊಡ್ಡ ವಿಷಯವಾಗಿರಲಿಲ್ಲವಾದರೂ ಅಂದಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಆ ನಾಟಕ ಮಾಡಿಸುವುದು ನನಗೇಕೋ ಅಷ್ಟು ಹಿಡಿಸದ ವಿಚಾರವಾಯಿತು.ಕಾರಣ ಇಷ್ಟೇ: ಆ ದಿನಗಳಲ್ಲಿ ಪ್ರಜಾವಾಣಿಯ ಪುರವಣಿ ವಿಭಾಗ ಹಾಗೂ ನಾಟಕ ವಿಮರ್ಶೆ ವಿಭಾಗ ತುಂಬಾ ಜನಪ್ರಿಯವಾಗಿತ್ತು. ಈ ಮಟ್ಟಿನ ಜನಾದರಣೆ ಗಳಿಸಿಕೊಳ್ಳುವುದರ ಹಿಂದೆ ರಾಜು—ಜಿ ಎನ್ ರಂಗನಾಥರಾವ್—ಸದಾಶಿವ ಜಿ.ಎಸ್. ಎಂಬ ‘ತ್ರಿಮೂರ್ತಿ’ಗಳ ನಿಶಿತಮತಿ ಹಾಗೂ ಅಪಾರ ಪರಿಶ್ರಮಗಳು ಅಡಗಿದ್ದವು.
ಪ್ರಜಾವಾಣಿಯಲ್ಲಿ ನಾಟಕಕ್ಕೆ ಒಳ್ಳೆಯ ವಿಮರ್ಶೆ ಬಂದುಬಿಟ್ಟರೆ ಆ ನಾಟಕದ ಹಲವಾರು ಪ್ರದರ್ಶನಗಳಿಗೆ ಪರವಾನಗಿ ಸಿಕ್ಕಂತೆ ಆಗಿಬಿಡುತ್ತಿತ್ತು ಅನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.ನಾನು ಈಗಾಗಲೇ ಸದಾಶಿವರ ‘ಸಿಕ್ಕು’ ಹಾಗೂ ರಾಜು ಅವರ ‘ಉದ್ಭವ’ ಕತೆ—ಕಾದಂಬರಿಗಳನ್ನಾಧರಿಸಿ ನಾಟಕ ಮಾಡಿಸಿ ಅವು ವಿಮರ್ಶಕರ ಹಾಗೂ ಸಹೃದಯರ ಅಪಾರ ಮೆಚ್ಚುಗೆಗೂ ಪಾತ್ರವಾಗಿದ್ದವು.
ರಂಗಭೂಮಿ ವಲಯದಲ್ಲಿ ಅದಾಗಲೇ ಸಣ್ಣಗೆ ಅಪಸ್ವರಗಳೂ ನುಡಿಯತೊಡಗಿದ್ದವು:’ಪ್ರಭು ಜಾಣ;’ಕೋಟೆ'(ಪ್ರಜಾವಾಣಿಯ ಪುರವಣಿ ವಿಭಾಗ) ಯವರನ್ನು ಒಳಗೆ ಹಾಕಿಕೊಂಡು ಪ್ರಸಿದ್ಧನಾಗ್ತಿದಾನೆ!”
ವಾಸ್ತವವಾಗಿ ಹಾಗೊಂದು ಲೆಕ್ಕಾಚಾರಕ್ಕೆ ನಾನು ಪಕ್ಕಾಗದಿದ್ದರೂ ಆಡುವ ಮಾತುಗಳನ್ನು ತಡೆಯಲಾದೀತೇ? ಪುಣ್ಯವಶಾತ್ ನಾಟಕಗಳು ಯಶಸ್ವಿಯಾದವು;ಇಲ್ಲದಿದ್ದರೆ ಇನ್ನೂ ಅದೆಷ್ಟು ಕುಹಕ-ಲೇವಡಿಗಳು ಬೆನ್ನ ಹಿಂದೆ ಮೊಳಗುತ್ತಿದ್ದವೋ! ರಾಜು ಅವರಿಗೆ ನೇರವಾಗಿ ಈ ವಿಚಾರಗಳನ್ನೇ ಹೇಳಿ,”ಈ ಕೂಡಲೇ ಸಂದರ್ಭ ನಾಟಕವನ್ನು ನಾನು ಮಾಡಿಸಿದರೆ ನನಗೆ ನಿಮ್ಮ ಚೇಲಾನೆಂಬ ಹಣೆಪಟ್ಟಿ ಹಚ್ಚಿ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಜಡಿದೇ ಬಿಡುತ್ತಾರೆ;ಆ ಕಾರಣಕ್ಕೆ ಈಗ ನಾನು ಈ ನಾಟಕ ಮಾಡಿಸುವುದು ಸೂಕ್ತವಲ್ಲ;ಬೇರೆ ಒಂದೆರಡು ನಾಟಕ ಮಾಡಿಸಿ ಕೆಲ ದಿನಗಳ ನಂತರ ಬೇಕಾದರೆ ಸಂದರ್ಭ ನಾಟಕವನ್ನು ಕೈಗೆತ್ತಿಕೊಳ್ಳಬಹುದು” ಎಂದು ಸಲಹೆ ನೀಡಿದೆ. ಅರೆ ಕ್ಷಣ ಯೋಚಿಸಿದ ರಾಜು ಅವರು,”ಆಯ್ತು ಬಿಡೋ..ಬೇರೆ ಯಾರಿಗಾದರೂ ಹೇಳ್ತೀನಿ” ಎಂದರು. ಯಾಕೋ ಧ್ವನಿಯಲ್ಲಿ ಅಷ್ಟು ಸಮಾಧಾನವಿದ್ದಂತೆ ಅನ್ನಿಸಲಿಲ್ಲ ನನಗೆ. ನಾಟಕ ನನಗಿಷ್ಟವಾಗಿಲ್ಲ; ಆ ಕಾರಣಕ್ಕೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೇನೆಂದು ಅವರು ಭಾವಿಸಿರಲಿಕ್ಕೂ ಸಾಕು. ನಾಟಕ ನನಗಿಷ್ಟವಾಗಿರಲಿಲ್ಲ ಎಂಬುದು ಸತ್ಯದೂರವಾದ ಮಾತಾಗಿದ್ದರೂ ಆ ನಾಟಕ ಮಾಡಿಸಲೇಬೇಕೆಂಬ ತೀವ್ರ ಕಾಂಕ್ಷೆಯಂತೂ ಖಂಡಿತ ಇರಲಿಲ್ಲ. ಮತ್ತೆರಡು ಚಣ ಬಿಟ್ಟು ,”ಹೋಗಲಿ..ನಾಟಕ ಸಧ್ಯದಲ್ಲೇ ಪಬ್ಲಿಷ್ ಆಗ್ತಾ ಇದೆ..ನೀನು ಹೇಗೂ ಈ ನಾಟಕ ಸಿದ್ಧ ಪಡಿಸೋದಕ್ಕೆ ಸಹಾಯ ಮಾಡಿದೀಯಾ..ನೀನೇ ಒಂದು ಮುನ್ನುಡಿ ಬರಕೊಟ್ಟುಬಿಡು” ಎಂದರು ರಾಜು! ಅಯ್ಯಯ್ಯೋ! ಇದು ಮತ್ತೊಂದು ಧರ್ಮ ಸಂಕಟವಾಯಿತೇ! ನಾಟಕವನ್ನು ತೀರಾ ಹೊಗಳಿ ಬರೆದರೆ ಉತ್ಪ್ರೇಕ್ಷೆ ಹಾಗೂ ಆತ್ಮ ವಂಚನೆ; ಒಂದಿಷ್ಟು ವಿಮರ್ಶಾತ್ಮಕವಾಗಿ ಬರೆದರೂ ಲೇಖಕರ ಅವಕೃಪೆ ಖಚಿತ! ಜತೆಗೆ ನಾನು ಆಗಷ್ಟೇ ರಂಗಭೂಮಿಯಲ್ಲಿ ಮೊದಮೊದಲ ಹೆಜ್ಜೆಗಳನ್ನಿಡುತ್ತಿರುವವ;ಮುನ್ನುಡಿ ಬರೆಯುವಷ್ಟು ಘನತೆವೆತ್ತ ವ್ಯಕ್ತಿತ್ವ ನನ್ನದಲ್ಲ!ಹೀಗೆಲ್ಲಾ ಯೋಚಿಸಿ ಕೊನೆಗೆ,”ನಾನಿನ್ನೂ ಈಗ ಬೆಳಕಿಗೆ ಬರುತ್ತಿರುವ ನಿರ್ದೇಶಕ; ದಯವಿಟ್ಟು ಯಾರಾದರೂ ಹಿರಿಯರಿಗೆ ಈ ಜವಾಬ್ದಾರಿ ಒಪ್ಪಿಸಿ..ಅವರು ಕೃತಿಗೆ ನ್ಯಾಯ ಒದಗಿಸಿಯಾರು” ಎಂದು ಬಿನ್ನವಿಸಿಕೊಂಡೆ. ಅಲ್ಲಿಯೂ ರಾಜು ಅವರಿಗೆ ‘ನಾಟಕ ನನಗೆ ಹಿಡಿಸಿಲ್ಲ’ವೆಂಬ ಶಂಕೆಯ ಘಾಟು ಬಡಿದಿರಬೇಕು… ಆದರೂ ಸಾವರಿಸಿಕೊಂಡು,”ನೀನು ಹೇಳೋದೂ ಸರೀನೇ..ಯಾರಾದರೂ ದೊಡ್ಡವರಿಗೇ ಹೇಳ್ತೀನಿ ಬಿಡು…ನೀನು ನಾಲ್ಕು ಸಾಲು ಬ್ಲರ್ಬ್ ಬರೆದುಕೊಟ್ಟುಬಿಡು ಸಾಕು..ಅಷ್ಟು ಕೆಲಸ ಮಾಡಿಕೊಟ್ಟವನಿಗೆ ಇಷ್ಟಾದರೂ ಬೇಡವಾ?”ಎಂದರು ರಾಜು. ಇನ್ನು ಅದಕ್ಕೂ ಕೊಸರಾಡಿದರೆ ಉದ್ದೇಶ ಪೂರ್ವಕವಾಗಿಯೇ ನಾನು ಜವಾಬ್ದಾರಿ ತಪ್ಪಿಸಿಕೊಳ್ಳುತ್ತಿದ್ದೇನೆಂದು ಅವರು ತೀರ್ಮಾನಿಸಿಯೇ ಬಿಡುತ್ತಾರೆನ್ನಿಸಿ ಬ್ಲರ್ಬ್ ಬರೆದುಕೊಡಲು ಒಪ್ಪಿಕೊಂಡೆ;ಒಂದೆರಡು ದಿನಗಳಲ್ಲೇ ನಾಟಕದ ಧನಾತ್ಮಕ ಅಂಶಗಳನ್ನು ಪ್ರಧಾನವಾಗಿ ಪ್ರಸ್ತಾಪಿಸಿ ಬ್ಲರ್ಬ್ ಬರೆದುಕೊಟ್ಟೆ.
ಇದಾದ ಕೆಲವು ದಿನಗಳಿಗೇ ವರ್ತಮಾನ ಬಂತು: ಅಶೋಕ ಬಾದರದಿನ್ನಿ ರಂಗಸಂಪದ ತಂಡಕ್ಕೆ ‘ಸಂದರ್ಭ’ ನಾಟಕವನ್ನು ನಿರ್ದೇಶಿಸುತ್ತಿದ್ದಾನೆ;ಅಷ್ಟೇ ಅಲ್ಲ,ರಾಜು ಅವರೇ ನಾಟಕದಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸುತ್ತಿದ್ದಾರೆ! ರಂಗಸಂಪದ ತಂಡ ಜೆ ಲೋಕೇಶ್—ಚಡ್ಡಿ ನಾಗೇಶ್ ಅವರ ನೇತೃತ್ವದಲ್ಲಿ ಒಂದು ಅತ್ಯುತ್ತಮ ತಂಡವಾಗಿ ರೂಪುಗೊಂಡಿತ್ತು. ಮೈಕೊ ಚಂದ್ರು,ರಾಮಮೂರ್ತಿ, ನಾಗೇಶ್ ಕಶ್ಯಪ್ ಮೊದಲಾದ ಅನೇಕ ಪ್ರತಿಭಾವಂತ ನಟರು ಈ ತಂಡದಲ್ಲಿದ್ದರು.ಮುಂದೆ ಸಿಜಿಕೆ ‘ಒಡಲಾಳ’,’ಮಹಾಚೈತ್ರ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದು ಈ ತಂಡಕ್ಕಾಗಿಯೇ.
ಒಡಲಾಳ ನಾಟಕದಲ್ಲಿ ಉಮಾಶ್ರೀ ಅವರಂತೂ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಅಭಿನಯವನ್ನು ನೀಡಿದ್ದರು.ಅಂತೆಯೇ ಇದೇ ತಂಡದ ‘ಸಂಗ್ಯಾ ಬಾಳ್ಯಾ’ ನಾಟಕದಲ್ಲಿ ವಿಜಯಕಾಶಿ ಹಾಗೂ ವೈಜಯಂತಿ ಕಾಶಿ ಅಮೋಘವಾಗಿ ಅಭಿನಯಿಸಿದ್ದರು.ಇಂಥದೊಂದು ಪ್ರಮುಖ ರಂಗತಂಡಕ್ಕೆ ಅಶೋಕ ನಾಟಕ ನಿರ್ದೇಶಿಸುತ್ತಿರುವುದು ನನಗೆ ಸಂತಸದ ವಿಷಯವೇ ಆಗಿತ್ತು. ಅದೇ ವೇಳೆಗೆ ನಾನೂ ನಮ್ಮ ನಾಟ್ಯದರ್ಪಣ ತಂಡಕ್ಕೆ ಬೆಕೆಟ್ ನಾಟಕದ ತಾಲೀಮು ಆರಂಭಿಸಿದ್ದೆ. ಇಡಿಯ ರಂಗವನ್ನು ವ್ಯಾಪಿಸಿಕೊಳ್ಳುವಂತೆ ಒಂದು ದೊಡ್ಡ ಶಿಲುಬೆಯ ಆಕಾರದಲ್ಲಿ ಮರದ ಚೌಕದ ಹಾಸುಗಳನ್ನು ಜೋಡಿಸಿ ರಂಗವಿನ್ಯಾಸವನ್ನು ರೂಪಿಸಿದ್ದೆ.ತಾಲೀಮೂ ಸಹಾ ಸೊಗಸಾಗಿ ನಡೆಯುತ್ತಿತ್ತು.ಪ್ರಸನ್ನ ಅವರು ನಾಟಕವನ್ನು ಸಮರ್ಥವಾಗಿ ಅನುವಾದಿಸಿಕೊಟ್ಟಿದ್ದರು.ಕಲಾವಿದರೆಲ್ಲರೂ ಸೊಗಸಾಗಿ ಅಭಿನಯಿಸುತ್ತಿದ್ದರು.ಸುಧೀಂದ್ರನಂತೂ ಹೆನ್ರಿ ದೊರೆಯನ್ನೇ ಆವಾಹಿಸಿಕೊಂಡಂತೆ ಅಭಿನಯಿಸುತ್ತಿದ್ದ. ಅಬ್ಬೂರು ಜಯತೀರ್ಥ ಅವರು ತುಂಬಾ ಶ್ರಮ ವಹಿಸಿ ಆ ನಾಟಕದ ಕಾಲಮಾನಕ್ಕೆ ಹೊಂದುವಂತಹ ಸಂಗೀತದ ಭಾಗಗಳನ್ನು ಆರಿಸಿ ಸಿದ್ಧ ಮಾಡಿಟ್ಟಿದ್ದರು. ನಿಜವಾದ ಸವಾಲು-ಸಮಸ್ಯೆ ನಮಗೆದುರಾದದ್ದೇ ಪಾತ್ರಗಳಿಗೆ ಬೇಕಾದ ಉಡುಗೆ ತೊಡುಗೆಗಳನ್ನು ಹೊಂದಿಸುವ ವಿಚಾರ ಬಂದಾಗ. ಸಂಶೋಧನೆ ಮಾಡಿ ಆ ಕಾಲದ ಆಯಾ ಪಾತ್ರಗಳ ಉಡುಗೆಯ ವಿನ್ಯಾಸವನ್ನೇನೋ ಸಿದ್ಧ ಪಡಿಸಿದೆವು;ಆದರೆ ಅವುಗಳನ್ನು ಹೊಂದಿಸುವುದು ಹೇಗೆ? ಅಷ್ಟೆಲ್ಲಾ ಉಡುಗೆ ತೊಡುಗೆಗಳನ್ನು ನಾವೇ ಹೊಲಿಸಿ ಸಿದ್ಧ ಪಡಿಸಿಕೊಳ್ಳುವಷ್ಟು ಆರ್ಥಿಕ ಕ್ಷಮತೆ ನಮಗಿರಲಿಲ್ಲ;ನಮಗೆ ಬೇಕಾದ ವಿನ್ಯಾಸದ ವಸ್ತ್ರಗಳು ಬಾಡಿಗೆಗೂ ಎಲ್ಲಿಯೂ ಲಭ್ಯವಿಲ್ಲ! ಇಂಥದೊಂದು ಮಹತ್ವಾಕಾಂಕ್ಷೆಯ ದೊಡ್ಡ ನಾಟಕವನ್ನು ಆರಿಸಿಕೊಂಡದ್ದೇ ತಪ್ಪಾಯಿತೇ ಎಂದು ಸಣ್ಣಗೆ ಒಳಗೇ ಕೊರೆಯಲು ಆರಂಭವಾಯಿತು.ಅದುವರೆಗಿನ ನನ್ನ ನಾಟಕಗಳೆಲ್ಲಾ ಅಕ್ಷರಶ: ‘ಬಡ ರಂಗಭೂಮಿ’ಯ ನಾಟಕಗಳು! ಬಾದಲ್ ಸರ್ಕಾರ್ ಅವರ poor theatre ಸಿದ್ಧಾಂತದಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ,ನಟ ನಟಿಯರನ್ನೇ ಮುಖ್ಯ ಬಂಡವಾಳವಾಗಿಟ್ಟುಕೊಂಡು ಮಾಡಿಸುತ್ತಿದ್ದ ನಾಟಕಗಳು.ಈಗ ಎದುರಾಗಿರುವ ಈ ಸಮಸ್ಯೆಗೆ ಪರಿಹಾರವಾದರೂ ಏನು? ತಂಡದ ಮುಖ್ಯ ‘ಮುನಿರಂಗಪ್ಪ’—ಸಾರಥಿಯಾಗಿದ್ದ ರಿಚರ್ಡ್ ಜಿ ಲೂಯಿಸ್ ಒಂದು ದಿನ ಅತ್ಯಂತ ಸಿಹಿ ಸುದ್ದಿಯೊಂದನ್ನು ತಂದ: ಒಂದೆರಡು ವರ್ಷಗಳ ಹಿಂದೆ ಅಶೋಕ್ ಮಂದಣ್ಣ ಅವರು(ಇವರೂ nsd ಪದವೀಧರರು) ಇಂಗ್ಲೀಷ್ ನಲ್ಲಿ ಬೆಕೆಟ್ ನಾಟಕವನ್ನು ಮಾಡಿಸಿದ್ದರಂತೆ.ಆಗ ಅವರೇ ಎಲ್ಲಾ ಪಾತ್ರಗಳ ಉಡುಗೆ ತೊಡುಗೆಗಳನ್ನೂ ಹೊಲಿಸಿ ಸಿದ್ಧ ಪಡಿಸಿಕೊಂಡಿದ್ದರಂತೆ. ಈಗಲೂ ಅವೆಲ್ಲವೂ ಅವರ ಮನೆಯ ಅಟ್ಟದಲ್ಲಿ ಪೆಟ್ಟಿಗೆಯೊಂದರಲ್ಲಿ ಭದ್ರವಾಗಿವೆ!”ವಿಷಯ ತಿಳಿದದ್ದೇ ತಡ,ಅರೆಕ್ಷಣವೂ ತಡಮಾಡದೆ ಅಶೋಕ್ ಮಂದಣ್ಣ ಅವರನ್ನು ಹುಡುಕಿಕೊಂಡು ಹೊರಟೆವು. ಅವರಾದರೂ ಒಂದಿಷ್ಟೂ ಬೇಸರಿಸಿಕೊಳ್ಳದೆ ಅಷ್ಟೂ ಉಡುಗೆ ತೊಡುಗೆಗಳನ್ನು ಗಂಟುಕಟ್ಟಿ ನಮ್ಮ ಕೈಗಿತ್ತು,” ನಾಟಕದ ಪ್ರದರ್ಶನಗಳೆಲ್ಲಾ ಮುಗಿಯುವವರೆಗೂ ಇವು ನಿಮ್ಮಲ್ಲೇ ಇರಲಿ..ಆಮೇಲೆ ಮರಳಿಸಿ” ಎಂದು ನುಡಿದು ನಾಟಕದ ಯಶಸ್ಸಿಗೆ ಶುಭ ಹಾರೈಸಿ ಕಳಿಸಿಕೊಟ್ಟರು.ಅಂತೂ ಸಂಕಟದ ಗಳಿಗೆಗಳಲ್ಲೆಲ್ಲಾ ಒಬ್ಬ ‘ಆಪ್ತ ಮಿತ್ರ’ ಹೀಗೆ ಧುತ್ತೆಂದು ಕಾಣಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಡುವುದು ಅದೆಂಥಾ ಸೋಜಿಗವೆಂದು ನಾನು ಎಷ್ಟೋ ಬಾರಿ ಚಿಂತಿಸಿದ್ದುಂಟು.
ಈ ಸಮಯದಲ್ಲಿಯೇ ನಾಟಕದ ತಾಲೀಮಿನ ನಂತರ ರಂಗಾ ಅವರ(ಗೀಜಗನ ಗೂಡು ಚಿತ್ರದ ನಿರ್ದೇಶಕ) ಆಹ್ವಾನದ ಮೇರೆಗೆ nmh ಹೋಟಲ್ ಗೆ ಹೋಗಿ ಅವರ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದೇ ವೇಳೆಯಲ್ಲಿ ಅಶೋಕನೂ ಕೆಲದಿನ ಅದೇ ಹೊಟಲ್ ನಲ್ಲಿ ಮತ್ತೊಂದು ಕೋಣೆಯಲ್ಲಿ ತಂಗಿದ್ದ.ಆಗಾಗ್ಗೆ ಭೇಟಿಯಾಗುತ್ತಿದ್ದರೂ ಯಾಕೋ ಮೊದಲಿನ ಬಿಸುಪು ನಮ್ಮ ಸ್ನೇಹ ಸಂಬಂಧದಲ್ಲಿ ಉಳಿದಿಲ್ಲವೆಂದು ನನಗೆ ಭಾಸವಾಗತೊಡಗಿತ್ತು.’ನಿನ್ನ ನೆರವಿಲ್ಲದೇ ನಾನು ನಾಟಕ ಮಾಡಿಸಬಲ್ಲೆ;ನೀನೇನೂ ನನಗೆ ಅನಿವಾರ್ಯವಲ್ಲ’ ಎಂಬೊಂದು ಭಾವ ಅವನ ಚಹರೆಯಲ್ಲಿ ಹೊಡೆದು ಕಾಣುತ್ತಿತ್ತು.ಅಂಥದೊಂದು ಭಾವ ನನ್ನಲ್ಲಿ ಎಳ್ಳುಕಾಳಿನಷ್ಟೂ ಮೂಡಿರಲಿಲ್ಲವೆಂದು ಅವನಿಗೆ ತಿಳಿಸಿಕೊಡುವುದಾದರೂ ಹೇಗೆಂದು ತೋಚದೆ ನಾನೂ ಸುಮ್ಮನಾಗಿಬಿಟ್ಟಿದ್ದೆ.

ಬೆಕೆಟ್ ನಾಟಕದ ಪ್ರದರ್ಶನಕ್ಕೆ ಕೆಲ ದಿನಗಳು ಮೊದಲು ‘ಸಂದರ್ಭ’ ನಾಟಕದ ಪ್ರದರ್ಶನಗಳಾದವು.ರಾಜು ಅವರು ನಟನಾಗಿ ದೊಡ್ಡ ಯಶಸ್ಸನ್ನು ಕಾಣದಿದ್ದರೂ ನಾಟಕ ರಂಗದ ಮೇಲೆ ಗೆದ್ದಿತು; ಅಶೋಕ ನಾಟಕವನ್ನು ಸ್ವಾರಸ್ಯಕರವಾಗಿ ರಂಗದ ಮೇಲೆ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದ. ಇದಾದ ಒಂದು ವಾರಕ್ಕೆ ಬೆಕೆಟ್ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದವು.ಅಂದೊಂದು ಸಂಜೆ ರಂಗಾ ಅವರ ಅಡ್ಡಾದಲ್ಲಿ ಗೋಷ್ಠಿ ನಡೆದಿತ್ತು.ಗೋಷ್ಠಿಯ ಮುಖ್ಯ ಚರ್ಚೆಯ ವಿಷಯವೇ ‘ಸಂದರ್ಭ’ ನಾಟಕವಾಗಿತ್ತು! ಅಲ್ಲಿದ್ದ ಬಹಳಷ್ಟು ಮಂದಿಗೆ ನಾಟಕ ಇಷ್ಟವಾಗಿರಲಿಲ್ಲ—ವೈಯಕ್ತಿಕ ಸಿಟ್ಟು ಆಕ್ರೋಶಗಳ ಕಾರಣಕ್ಕಾಗಿಯೂ ಸಹಾ! ಮತ್ತೆ ಕೆಲವರು ‘ಬ್ಲರ್ಬ್ ನಲ್ಲಿ ಇರುವುದು ಅತಿಶಯದ ಅನಗತ್ಯ ಪ್ರಶಂಸೆ;ನಿನ್ನ ಚಮಚಾಗಿರಿಯನ್ನು ಸಾಬೀತು ಮಾಡುವಂತಿದೆಯೇ ಹೊರತು ವಸ್ತುನಿಷ್ಠ ಅನಿಸಿಕೆಯಾಗಿಲ್ಲ’ ಎಂದು ನನ್ನನ್ನು ನೇರವಾಗಿಯೇ ಟೀಕಿಸಿಬಿಟ್ಟರು! ನಾನು ಏನೇ ಸಮಜಾಯಿಷಿ ಕೊಡಲು ಯತ್ನಿಸಿದರೂ ಯಾರೂ ಕೇಳಲು ಸಿದ್ಧರಿರಲಿಲ್ಲ.ಟೀಕೆಗಳಿಂದಾಗಿ ಮನಸ್ಸು ಕುಗ್ಗಿಹೋದರೂ “ಸಧ್ಯ ನಾಟಕವನ್ನು ನಾನೇ ನಿರ್ದೇಶಿಸಲಿಲ್ಲವಲ್ಲ!” ಎಂದು ಎಷ್ಟೋ ಸಮಾಧಾನವೂ ಆಯಿತು!
ಇದಾದ ಎರಡು ದಿನಕ್ಕೆ ಬೆಕೆಟ್ ನಾಟಕ ಪ್ರದರ್ಶನಕ್ಕೆ ಆಹ್ವಾನ ನೀಡಲು ನಾನು ರಿಚಿಯೊಂದಿಗೆ ಪ್ರಜಾವಾಣಿ ಕಛೇರಿಗೆ ಹೋದೆ. ‘ಬಾರಯ್ಯ ಹ್ಯಾಮ್ಲೆಟ್’ ಎಂಬ ರಾಜು ಅವರ ಸ್ವಾಗತದಲ್ಲಿ ನನಗೆ ಯಾಕೋ ಕೊಂಚ ವ್ಯಂಗ್ಯಅಡಗಿದೆ ಅನ್ನಿಸಿಬಿಟ್ಟಿತು! ನಾವಿನ್ನೂ ಕುರ್ಚಿಯ ಮೇಲೆ ಸರಿಯಾಗಿ ಕುಳಿತಿಲ್ಲ,ಅಷ್ಟರಲ್ಲೇ ಅವರ ವಾಗ್ದಾಳಿ ಆರಂಭವಾಗಿಯೇ ಬಿಟ್ಟಿತು! “ಏನೋ…ನನ್ನ ನಾಟಕ ಚೆನ್ನಾಗಿಲ್ಲ ಅಂತ ಭಾರೀ ಭಾರೀ ಚರ್ಚೆ ಅಂತೆ nmh ನಲ್ಲಿ?ತೋಪು ನಾಟಕ ಹಾಗೆ ಹೀಗೆ ಅಂತ ಕಿಚಾಯಿಸಿ ಮಾತಾಡಿದೆಯಂತೆ ನೀನು!?” ಎಂದವರೇ ನನ್ನನ್ನೇ ದಿಟ್ಟಿಸಿ ನೋಡತೊಡಗಿದರು. ಮಾತಿನ ಬೆಂಕಿಯ ಜತೆಗೆ ಅವರ ತುಟಿಗಳ ನಡುವೆ ಉರಿಯುತ್ತಿದ್ದ ಸಿಗರೇಟಿನ ಹೊಗೆಯೂ ಸೇರಿ ಉಸಿರು ಕಟ್ಟಿದಂತಾಗಿಹೋಯಿತು. ಏನು ಹೇಳಲೂ ತೋಚದೆ ಗರ ಬಡಿದವನಂತೆ ಕುಳಿತುಬಿಟ್ಟೆ. ಅವರಿಗೆ ಈ ಸುದ್ದಿಯನ್ನು—ಅದೂ ತಿರುಚಿದ ಸುದ್ದಿಯನ್ನು ಮುಟ್ಟಿಸಿದವರಾದರೂ ಯಾರು ಅನ್ನುವುದೇ ಯಕ್ಷಪ್ರಶ್ನೆಯಾಗಿತ್ತು.ಉತ್ತರವೆಂಬಂತೆ ಮತ್ತೊಂದು ವಾಗ್ಬಾಣ ಸಿಡಿಯಿತು:”ಬಂದುಬಿಡುತ್ತೆ ಕಣೋ..ಸುದ್ದಿ ಬಂದುಬಿಡುತ್ತೆ..ಕಿಟಕಿಗಳಿಗೆ,ಬಾಗಿಲುಗಳಿಗೆ ಕೂಡಾ ಕಿವಿ ಇರುತ್ತೆ! ಮಾತಾಡೋವಾಗ ಹುಷಾರಾಗಾರಬೇಕು ನೀನು! ನನ್ನ ಮೇಲೇ ಮಾತಾಡೋ ಹಾಗಾಗಿಬಿಟ್ಟೆಯಾ ನೀನು!”
ನಾನು ಇದ್ದುದರಲ್ಲೇ ತುಸು ಸಾವರಿಸಿಕೊಂಡು,”ಸರ್ ,ನಾನು ಯಾವ ಸಮಜಾಯಿಷೀನೂ ಕೊಡೋಲ್ಲ..ಅದರ ಅಗತ್ಯವೂ ಇಲ್ಲ.ಒಂದಂತೂ ಸತ್ಯ:ಬಾಗಿಲ ಹಿಂದಿನ ಕಿವಿಗಳು ಆಡದೆ ಇರೋ ಮಾತುಗಳನ್ನೂ ಕೇಳಿಸಿಕೊಂಡುಬಿಟ್ಟಿವೆ! ನನ್ನನ್ನ ನಂಬಿ ಅಂತ ನಾನು ನಿಮ್ಮನ್ನ ಕೇಳಿಕೊಳ್ಳೋದಿಲ್ಲ..ಯಾಕೇಂದ್ರೆ ನಂಬಿಕೆ ಅನ್ನೋದು ಹೃದಯದೊಳಗೆ ಇರೋ ಅಂಥದ್ದೇ ಹೊರತು ಅಂಗಲಾಚಿದರೆ ಬರೋ ಅಂಥದಲ್ಲ..ಇರಲಿ.ನಮ್ಮ ನಾಟಕದ ಪ್ರದರ್ಶನಕ್ಕೆ ಆಹ್ವಾನ ಇಲ್ಲಿದೆ. ದಯವಿಟ್ಟು ಬನ್ನಿ” ಎಂದು ನುಡಿದು ರಿಚಿಯೊಂದಿಗೆ ಅಲ್ಲಿಂದ ಹೊರನಡೆದುಬಿಟ್ಟೆ.
“ಯಾರು ಅವರಿಗೆ ಹೀಗೆ ತಿರುಚಿದ ಸುದ್ದಿಯನ್ನು ಮುಟ್ಟಿಸಿರಬಹುದು? ಅಲ್ಲಿದ್ದವರಲ್ಲಿ ಯಾರಾದರೂ ಆ ಕೆಲಸ ಮಾಡಿರಬಹುದೆಂದು ನನಗನ್ನಿಸಲಿಲ್ಲ.”ಬಾಗಿಲಿಗೆ ಇದ್ದ ಕಿವಿಗಳು ಯಾರದಾದರೇನು, ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗಿವೆ..ಇನ್ನು ಅದರ ಬಗ್ಗೆ ಚಿಂತಿಸಿ ಫಲವಿಲ್ಲ” ಎಂದು ಎಷ್ಟೇ ಅಂದುಕೊಂಡರೂ ಮತ್ತೆ ಮತ್ತೆ ಅವರ ಮಾತುಗಳೇ ಕಿವಿಗಳಲ್ಲಿ ಅನುರಣಿಸುತ್ತಿದ್ದವು.ಇನ್ನೆರಡು ದಿನಕ್ಕೆ ನಾಟಕ; ಪಾತ್ರದ ಮೇಲೆ ಗಮನ ಕೇಂದ್ರೀಕರಿಸಬೇಕೆಂದು ನಿರ್ಧರಿಸಿ ಹೆಚ್ಚುಹೆಚ್ಚಾಗಿ ತಾಲೀಮಿನಲ್ಲಿ ತೊಡಗಿಕೊಂಡೆ.’ಬೆಕೆಟ್’ ನಾಟಕದ ಮೊದಲ ಪ್ರದರ್ಶನ ಸೊಗಸಾಗಿ ಮೂಡಿಬಂದಿತು.
ಮಂದಣ್ಣ ಅವರಿಂದ ಎರವಲು ತಂದಿದ್ದ ಉಡುಗೆ ತೊಡುಗೆಗಳೆಲ್ಲವೂ ನಮ್ಮ ಕಲಾವಿದರಿಗೆ ಹೊಂದಿಕೆಯಾಗುವ ಅಳತೆಯವೇ ಆಗಿದ್ದು ಒಟ್ಟಾರೆ ನಾಟಕದ ದೃಶ್ಯ ಪರಿಣಾಮವನ್ನು ಹೆಚ್ಚಿಸಲು ನೆರವಾದವು.ಸುಧೀಂದ್ರನಂತೂ ತನ್ನ ಪಾತ್ರದಲ್ಲಿ ಸಂಪೂರ್ಣ ತಲ್ಲೀನನಾಗಿ ಸೊಗಸಾಗಿ ಅಭಿನಯಿಸಿದ.
ಮರುದಿನವೇ ನಾವು ಪತ್ರಿಕೆಗಳವರನ್ನು ಆಹ್ವಾನಿಸಿದ್ದು ಅಂದು ಮತ್ತಷ್ಟು ಹುರುಪು—ಉತ್ಸಾಹಗಳಿಂದ ಅಭಿನಯಿಸಬೇಕೆಂದು ಮಾತಾಡಿಕೊಂಡೆವು.
ಸಂಜೆ ಏಳು ಗಂಟೆಗೆ ನಾಟಕ ಆರಂಭವಾಗಬೇಕು. ಎಲ್ಲರೂ ಸಿದ್ಧರಾಗಿ ನಮ್ಮ ನಮ್ಮ ಪ್ರವೇಶ ಕಕ್ಷೆಯಲ್ಲಿ ನಿಂತಿದ್ದೇವೆ. ಕೊನೆಯ ಬೆಲ್ ಮೊಳಗಿ ರಂಗದಲ್ಲಿ ಕತ್ತಲು ಕವಿದು ಇನ್ನೇನು ಪಾತ್ರಪ್ರವೇಶವಾಗಬೇಕು, ಅಷ್ಟರಲ್ಲಿ ಒಂದು ಅಚಾತುರ್ಯ ಘಟಿಸಿಯೇ ಬಿಟ್ಟಿತು!!
| ಇನ್ನು ಮುಂದಿನ ವಾರಕ್ಕೆ ।






0 Comments