ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 168
—————
ನಾನು ಅಭಿನಯಿಸಿದ ಚಿತ್ರಗಳ ಹಾಗೂ ಧಾರಾವಾಹಿಗಳ ಲೆಕ್ಕವಿಟ್ಟವನಲ್ಲ. ಹಾಗೆ ಒಂದೆಡೆ ಅವುಗಳ ಹೆಸರುಗಳನ್ನೂ ಅಭಿನಯಿಸಿದ ಇಸವಿಗಳನ್ನೂ ಬರೆದಿಡಬೇಕೆಂಬುದೂ ನನ್ನ ಮನಸ್ಸಿಗೆಂದೂ ಬರಲಿಲ್ಲ. ಬರೆದಿಟ್ಟಿದ್ದರೆ ಅದೊಂದು ದಾಖಲೆಯಾಗಿ ಉಳಿದುಕೊಂಡು ಈ ಆತ್ಮಕಥನದ ಬರವಣಿಗೆಯ ಸಂದರ್ಭದಲ್ಲಾದರೂ ನೆರವಿಗೆ ಬರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ!! ಎಲ್ಲವನ್ನೂ ನೆನಪಿನ ಗವಿಯಿಂದ ಪ್ರಯತ್ನಪೂರ್ವಕವಾಗಿ ಹೆಕ್ಕಿ ತೆಗೆದು ಒಂದು ಸೂತ್ರದಲ್ಲಿ ಜೋಡಿಸುತ್ತಿರುವುದರಿಂದ ನಡುನಡುವೆ ಕೆಲ ತಪ್ಪುಗಳು (ಕಾಲಮಾನಕ್ಕೆ ಸಂಬಂಧ ಪಟ್ಟ ಹಾಗೆ) ನುಸುಳಿರಬಹುದು; ಕೆಲ ಸಂಗತಿಗಳು ಬಿಟ್ಟೇಹೋಗಿರಬಹುದು; ಕೆಲವು ಪ್ರಸಂಗಗಳು ಅದಲುಬದಲಾಗಿರಬಹುದು..ಸಾಧ್ಯವಾದಷ್ಟೂ ವಿಷಯಗಳು ತಪ್ಪಿಹೋಗದಂತೆ ಎಚ್ಚರ ವಹಿಸಿದ್ದೇನೆ. ಉಳಿದದ್ದು ‘ನೆನಪಿ’ನ ಚಿತ್ತ!!
ನಾಲ್ಕಾರು ವರ್ಷಗಳ ಆ ಒಂದು ಕಾಲಮಾನದಲ್ಲಿ ಸುಮಾರು ಚಿತ್ರಗಳಲ್ಲಿ ಅಭಿನಯಿಸಿದೆ. ನೆನಪಿರುವ ಕೆಲವು ಹೆಸರುಗಳು: ಡಾರ್ಲಿಂಗ್ ಕೃಷ್ಣರ ಮದರಂಗಿ, ಯೋಗರಾಜಭಟ್ಟರ ಮುಗುಳ್ನಗೆ, ರವಿಚಂದ್ರನ್ /ಎಂ ಎಸ್ ರಮೇಶ್ ಅವರ ದಶರಥ, ರವೀನ್ ನಿರ್ದೇಶನದ ನಡುವೆ ಅಂತರವಿರಲಿ, ದಾನಿಶ್ ಸೇಠ್ ಅವರ ಹಂಬಲ್ ಪೊಲಿಟೀಶಿಯನ್ ನೋಗರಾಜ್ , ಶಿವಣ್ಣ ನಾಯಕರಾಗಿದ್ದ ಕವಚ, ಸಚಿನ್ ನಿರ್ದೇಶನದ ಭೂತಕಾಲ, ಹಾರರ್ ಚಿತ್ರ ಶ್ವೇತಾ, ಚಿಕ್ಕಣ್ಣ ನಿರ್ದೇಶನದ ಕಾಲ್ ‘ಏಜ್’ , ಭರತ್ ನಾವುಡರ ಅಡಚಣೆಗಾಗಿ ಕ್ಷಮಿಸಿ, ಪುನೀತ್ ರಾಜಕುಮಾರ್ ಅವರ ನಿನ್ನಿಂದಲೇ , ಪಿ.ವಾಸು ಅವರ ದೃಶ್ಯಂ 2, ಡೇವಿಡ್ ಅವರ ಮಾನ, ಸುಚೇಂದ್ರಪ್ರಸಾದರ ಸಂದಿಗ್ಧ,….ಇತ್ಯಾದಿ ಇತ್ಯಾದಿ.
ಕಿವಿ ಮೇಲೆ ಹೂವಿಡಿಸಿಕೊಂಡ ಹಲವು ಪ್ರಸಂಗಗಳನ್ನು ಹಿಂದೆ ನೆನಪಿಸಿಕೊಂಡಿದ್ದೆನಷ್ಟೇ. ಇನ್ನೂ ಕೆಲ ವಿಶೇಷ ಪ್ರಸಂಗಗಳನ್ನು ಈ ಕಂತಿನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ರವಿಚಂದ್ರನ್ ನಟನೆಯ ದೃಶ್ಯಂ ಚಿತ್ರ ಜನಪ್ರಿಯವಾದ ಮೇಲೆ ಅದರ ಮುಂದುವರಿದ ಭಾಗವೂ ಬಂದಿತು: ದೃಶ್ಯಂ 2. ಅದರಲ್ಲಿ ಒಂದು ಪಾತ್ರ ನಿರ್ವಹಿಸಲು ಮ್ಯಾನೇಜರ್ ಅವರಿಂದ ಕರೆ ಬಂದಿತು. DGP ಅವರ ಪಾತ್ರ. ಯಥಾ ಪ್ರಕಾರ ಒಂದೇ ದೃಶ್ಯದ ಪಾತ್ರ! ಪುಣ್ಯವಶಾತ್ ಪಾತ್ರದಲ್ಲಿ ಕೊಂಚ ಕಸುವಿತ್ತು! ತೀರಾ ‘ಗೌರವ ಗೌಣ’ ಪಾತ್ರವಲ್ಲ! ಮುಖ್ಯ ನಿರ್ದೇಶಕರಾದ ಪಿ ವಾಸು ಅವರಿಗೆ ನನ್ನ ಅಭಿನಯ ಇಷ್ಟವಾಯಿತು! ನನ್ನ ದೃಶ್ಯದ ಚಿತ್ರೀಕರಣ ಮುಗಿದಮೇಲೆ ನನ್ನನ್ನು ಅಭಿನಂದಿಸಿ ‘you deserve more’ ಎಂದು ಬೆನ್ನು ತಟ್ಟಿದರು! ಇದೇ ಅರ್ಥದ ಬೇರೆ ಬೇರೆ ವಾಕ್ಯಗಳನ್ನು ಅದಾಗಲೇ ಸಾಕಷ್ಟು ಕೇಳಿದ್ದರೂ ಪ್ರಸಿದ್ಧ ಹಿರಿಯ ನಿರ್ದೇಶಕರು ಮೆಚ್ಚಿ ನುಡಿದಾಗ ಖುಷಿಯಾಗದೇ ಇರುತ್ತದೆಯೇ! ‘ಸಮಾಧಾನಕರ ಬಹುಮಾನ’ಕ್ಕೂ ಒಂದು ತೂಕವಿದ್ದೇ ಇದೆಯಲ್ಲವೇ!!
ಮತ್ತೊಂದು ವಿಶಿಷ್ಟ ಅನುಭವ ನೀಡಿದ ಚಿತ್ರ ‘ನಿನ್ನಿಂದಲೇ’. ತೆಲುಗಿನ ಪ್ರಸಿದ್ಧ ನಿರ್ದೇಶಕ ಜಯಂತ್ ಪರಾಂಜೀ ಅವರು ನಿರ್ದೇಶಿಸಿದ್ದ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವದು. ನಾಯಕಿಯ ತಂದೆಯ ಪಾತ್ರ ನನ್ನದು ಎಂದು ಹೇಳಿದ್ದರು. ನಾನೊಬ್ಬ ಹೋಟಲ್ ಮಾಲೀಕ ಆ ಚಿತ್ರದಲ್ಲಿ. ಒಂದು ದಿನ ಹೈದರಾಬಾದ್ ನಲ್ಲಿ ಚಿತ್ರೀಕರಣಕ್ಕೆಂದು ಕರೆಸಿಕೊಂಡಿದ್ದರು. ಅಲ್ಲಿ ಹೋಟಲ್ ಸೆಟ್ ನಲ್ಲಿಯೇ ಒಂದು ದೃಶ್ಯದ ಚಿತ್ರೀಕರಣವಾಯಿತು. ನಿರ್ದೇಶಕ ಜಯಂತ್ ಅವರು ಯಾವುದೇ ಉದ್ವೇಗಕ್ಕೊಳಗಾಗದೇ ಸಮಾಧಾನವಾಗಿ ಕೆಲಸ ಮಾಡುತ್ತಿದ್ದ ರೀತಿ ನನಗಿಷ್ಟವಾಯಿತು. ಆ ದೃಶ್ಯದಲ್ಲಿ ಮಗಳ ಪಾತ್ರಧಾರಿಯೂ ಇದ್ದಳೆಂದು ತೋರುತ್ತದೆ, ಈಗ ನೆನಪಿಲ್ಲ. ಆ ದೃಶ್ಯ ಮುಗಿಸಿಕೊಂಡು ಬೆಂಗಳೂರಿಗೆ ಬಂದುಬಿಟ್ಟೆ. ಕೆಲದಿನಗಳ ನಂತರ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಕರೆ ಬಂತು. ಮಲ್ಲೇಶ್ವರದ ಒಂದು ಆಸ್ಪತ್ರೆಯಲ್ಲಿ ಚಿತ್ರೀಕರಣ. ಸಾಕಷ್ಟು ಜನ ಕಲಾವಿದರು ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ವಾಸ್ತವವಾಗಿ ಚಿತ್ರದ ಕಥೆಯೇ ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಅದು ಪ್ರೇಮಿಗಳ ಸಮ್ಮಿಲನದ ದೃಶ್ಯವಂತೆ. ಕಥಾನಾಯಕಿಗೆ (ಅರ್ಥಾತ್ ನನ್ನ ಮಗಳಿಗೆ) ಅಪಘಾತವಾಗಿ ಆಸ್ಪತ್ರೆ ಸೇರಿದ್ದಾಳೆ; ಅಲ್ಲಿಗೆ ಬರುವ ಕಥಾನಾಯಕ ಇದ್ದ ಎಲ್ಲಾ ತಪ್ಪು ತಿಳುವಳಿಕೆಗಳೂ ದೂರವಾದ ಮೇಲೆ ನಾಯಕಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನೆ. ಮಗಳು ಆಸ್ಪತ್ರೆಯ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ; ನಾವೆಲ್ಲರೂ ಆಸ್ಪತ್ರೆಯ ಬಾಗಿಲುಗಳ ಗಾಜಿನ ಕಿಂಡಿಯಿಂದ ಆತಂಕದಿಂದ ಇಣುಕಿ ಇಣುಕಿ ನೋಡುತ್ತಿರುತ್ತೇವೆ. ಅಷ್ಟು ಬಿಟ್ಟರೆ ನಮಗೆ ದೃಶ್ಯದಲ್ಲಿ ಬೇರೇನೂ ಮಾತಾಗಲೀ ಅಭಿನಯದ ಅವಕಾಶವಾಗಲೀ ಇರಲಿಲ್ಲ. ದೃಶ್ಯದ ಚಿತ್ರೀಕರಣ ಮುಗಿಯಿತು. ಆ ದೃಶ್ಯದ ಚಿತ್ರೀಕರಣದೊಂದಿಗೆ ಚಿತ್ರವೂ ಸಂಪೂರ್ಣವಾಯಿತಂತೆ! ಓ! ಅಂದರೆ ಈ ಚಿತ್ರದಲ್ಲಿ ನಮ್ಮ ಪಾತ್ರವೆ ಮುಗಿಯಿತು! ಸ್ವಲ್ಪ ಪಿಚ್ಚೆನಿಸಿತು. ನಾಯಕಿಯ ತಂದೆಯಾಗಿ ಒಂದಾದರೂ ಭಾವಪೂರ್ಣ ಸನ್ನಿವೇಶ ಇರುವುದು ಬೇಡವೇ?
ಸರಿ, ಅಲ್ಲಿ ಸೇರಿದ್ದ ಕಲಾವಿದರೆಲ್ಲರೂ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಕೆಲ ಪರಿಚಿತ ಕಲಾವಿದರೊಂದಿಗೆ ಕೆಲವರು ಹೊಸಬರೂ ಅಲ್ಲಿದ್ದರು. ನನ್ನ ಜೊತೆ ಫೋಟೋಗೆ ನಿಂತಿದ್ದ ಒಬ್ಬಾಕೆಯನ್ನು ನಾನು ಕೇಳಿದೆ: “ನಿಮ್ಮದು ಈ ಚಿತ್ರದಲ್ಲಿ ಯಾವ ಪಾತ್ರ”? ಆಕೆ ಹೇಳಿದರು: “ನಾಯಕಿಯ ತಾಯಿಯ ಪಾತ್ರ.”
ಅರೆ! ನನ್ನದು ನಾಯಕಿಯ ತಂದೆಯ ಪಾತ್ರವಾಗಿತ್ತು! ಅಂದರೆ ಈಕೆಯದು ನನ್ನ ಪತ್ನಿಯ ಪಾತ್ರ! ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ಮೇಲೆ ಗಂಡ ಹೆಂಡತಿಯರು ಭೇಟಿಯಾಗುತ್ತಿದ್ದೇವೆ!
ಆ ಕ್ಷಣಕ್ಕೆ ತಮಾಷೆ ಅನ್ನಿಸಿದರೂ ಪೋಷಕ ಪಾತ್ರಗಳಿಗೆ ಕೊಂಚವಾದರೂ ‘ಪೋಷಣೆ’ ಇಲ್ಲದಿದ್ದರೆ ಹೇಗೆ ಸೊರಗಿಹೋಗುತ್ತವೆಂಬುದನ್ನು ನೆನೆದು ಸಂಕಟವೂ ಆಯಿತು.
ಮತ್ತೊಂದು ಪ್ರಸಂಗ ಇವೆಲ್ಲಕ್ಕಿಂತ ಭಿನ್ನವಾದುದು. ಒಬ್ಬ ನಿರ್ದೇಶಕರು ಅವರ ಹೊಸ ಚಿತ್ರದ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಮನೆಗೆ ಬಂದಿದ್ದರು. ಕನ್ನಡದ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಒಂದು ಪ್ರಾಯೋಗಿಕ ಚಿತ್ರವನ್ನು ಮಾಡುತ್ತಿರುವುದಾಗಿ ಹೇಳಿ ಆ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಲು ಸಾಧ್ಯವೇ ಎಂದು ನನ್ನನ್ನು ಕೇಳಿದರು. ನಾನು ಹೇಳಿದೆ: “ಖಳನ ಪಾತ್ರವನ್ನು ನಿರ್ವಹಿಸಲು ನನಗೇನೂ ಬೇಸರವಿಲ್ಲ. ಆದರೆ ಆ ಪಾತ್ರದ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಬಹುದೇ?” ಎಂದೆ. “ವಿಲನ್ ಪಾತ್ರ, ಅಷ್ಟೇ ಸರ್” ಎಂದರವರು! ನಾನು ಪಾತ್ರದ ರೂಪುರೇಷೆಗಳನ್ನು ತಿಳಿಸಿರೆಂದು ಪರಿಪರಿಯಾಗಿ ಕೇಳಿಕೊಂಡರೂ ಅವರದೂ ಅದೊಂದೇ ಸಿದ್ಧ ಉತ್ತರ: ” ವಿಲನ್ ಪಾರ್ಟು ಸರ್.” ಕೊನೆಗೆ ನಾನೇ ಸೋತು ಸುಮ್ಮನಾಗಿ ಸಂಭಾವನೆ ಹಾಗೂ ಅಗತ್ಯ ದಿನಗಳ ಬಗ್ಗೆ ಮಾತಾಡಿ ಕಳಿಸಿಕೊಟ್ಟೆ. ಚಿತ್ರೀಕರಣ ಆರಂಭವಾಯಿತು. ಗಟ್ಟಿ ಕಥೆ ಹಾಗೂ ಚಿತ್ರಕಥೆಯನ್ನು ಸಿದ್ಧ ಪಡಿಸಿಕೊಂಡದ್ದರಿಂದ ಚಿತ್ರೀಕರಣ ಚೆನ್ನಾಗಿಯೇ ಆಯಿತು. ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಾ ಶೋಷಿಸುತ್ತಿದ್ದ ಒಬ್ಬ ದುಷ್ಟನ ಪಾತ್ರ ನನ್ನದಾಗಿತ್ತು. ನಾಲ್ಕು ದಿನಗಳ ಚಿತ್ರೀಕರಣದ ನಂತರ ಮನೆಗೆ ಹೊರಟು ನಿಂತಿದ್ದ ನನಗೆ ನಿರ್ದೇಶಕರು ಹೇಳಿದರು: “ಸರ್ , ನಾಳೆ ಮಧ್ಯಾಹ್ನದ ಮೇಲೆ ಶೂಟಿಂಗ್ ಇರುತ್ತೆ. ರಾತ್ರಿ ಕೊಂಚ ತಡ ಆಗುತ್ತೆ”. ನಾನೂ ಪ್ರಾಸಂಗಿಕವಾಗಿ ಕೇಳಿದೆ: “ನಾಳೆ ಯಾವ ದೃಶ್ಯ ಮಾಡ್ತಿದೀರಿ?”. ನಿರ್ದೇಶಕರು ಸಾವಧಾನವಾಗಿ, “ಅದೇ..ಹೀರೋ ನಿಮ್ಮ ಮೇಲೆ ಮೂತ್ರ ಮಾಡುವ ಸೀನ್ ಸರ್” ಎಂದರು! ನನಗೆ ಗಾಬರಿಯಾಗಿ,”ಆಂ? ಏನಂದ್ರಿ? ಇನ್ನೊಂದ್ಸಲ ಹೇಳಿ” ಎಂದೆ. ಅವರು ಮೊದಲು ಹೇಳಿದ ಮಾತನ್ನೇ ಚಾಚೂತಪ್ಪದೆ ಮತ್ತೊಮ್ಮೆ ಹೇಳಿದರು. ಈಗ ಗಾಬರಿಯ ಜಾಗವನ್ನು ಸಿಟ್ಟು ಆವರಿಸಿಕೊಂಡು ನಾನು ಕೊಂಚ ಜೋರಾಗಿಯೇ ಕೇಳಿದೆ: “ಏನು ಸರ್ , ತಮಾಷೆ ಮಾಡ್ತಿದೀರಾ?”.
ನಿರ್ದೇಶಕರು ,”ಖಂಡಿತ ಇಲ್ಲ ಸರ್..ಸೀನ್ ವಿವರಿಸಿಬಿಡ್ತೀನಿ ಕೇಳಿ..ನೀವು ತಡರಾತ್ರೀಲಿ ಹೀರೋ ಮನೆ ಹಿತ್ತಲಿಗೆ ಬಂದು ಅಲ್ಲಿದ್ದ ಪುಟ್ಟ ತೋಟಾನೆಲ್ಲಾ ಹಾಳುಮಾಡಬೇಕೂಂತ ಹೊರಟಿರ್ತೀರಾ…ಅದೇ ಹೊತ್ತಿಗೆ ಹೀರೋ ಮನೆ ಒಳಗಿಂದ ಬಾಗಿಲು ತೆಕ್ಕೊಂಡು ಹಿತ್ತಲಿಗೆ ಬರ್ತಾನೆ..ನೀವು ಗಾಬರಿಯಾಗಿ ಹೆದರಿಕೊಂಡು ಒಂದು ಗಿಡದ ಮರೇಲಿ ಬಚ್ಚಿಟ್ಟುಕೋತೀರಾ..ಹೀರೋ ಬಂದು ಆ ಗಿಡದ ಇನ್ನೊಂದು ಬದೀಲಿ ಕೂತು ಮೂತ್ರ ಮಾಡ್ತಾನೆ..ಅದೆಲ್ಲಾ ನಿಮ್ಮ ಮೈಮೇಲೆ ಬೀಳುತ್ತೆ..ಕೂಗಿದ್ರೆ ಸಿಕ್ಕಿಹಾಕ್ಕೋತೀರಿ ಅಲ್ಲವಾ! ಅದಕ್ಕೇ ಬೇರೆ ದಾರಿ ಇಲ್ಲದೆ ಹಿಂಸೆ ಆದ್ರೂ ತಡಕೊಂಡಿರ್ತೀರಾ..ಇದು ಸರ್ ದೃಶ್ಯ. ಹ್ಯಾಗಿದೆ ಸರ್?” ಎಂದರು. ಒಂದು ಕ್ಷಣ ಈ ಮೂತ್ರ ವೃತ್ತಾಂತದ ಶಾಕ್ ನಿಂದ ಚೇತರಿಸಿಕೊಂಡು ನಂತರ ಹೇಳಿದೆ: “ದೃಶ್ಯ ಭಾಳ ಸೊಗಸಾಗಿದೆ ಸರ್..ಆದರೆ ನಾನು ಈ ದೃಶ್ಯ ಮಾಡೋಲ್ಲ”. ಗಾಬರಿಯಾಗುವ ಸರದಿ ಈಗ ನಿರ್ದೇಶಕರದಾಗಿತ್ತು! “ಅಯ್ಯಯ್ಯೋ! ಹಾಗಂದ್ರೆ ಹೇಗೆ ಸರ್! ಭಾಳ ಇಂಪಾರ್ಟೆಂಟ್ ದೃಶ್ಯ ಸರ್ ಇದು! ಆಗೋಲ್ಲ ಅಂದುಬಿಟ್ರೆ ಹ್ಯಾಗೆ?” ಎಂದು ನರಳತೊಡಗಿದರು. ನಾನವರಿಗೆ ಸ್ಪಷ್ಟವಾಗಿ ಹೇಳಿದೆ: “ನೋಡಿ ಸ್ವಾಮೀ, ಇಂಥದೊಂದು ದೃಶ್ಯ ಇರುತ್ತೆ ಅಂತ ನೀವು ಪೂರ್ವಭಾವಿಯಾಗಿ ನನಗೆ ತಿಳಿಸಿರಲಿಲ್ಲ. ತಿಳಿಸಿದ್ದರೆ, ಒಂದೋ ನಾನು ಮಾನಸಿಕವಾಗಿ ಈ ದೃಶ್ಯ ಮಾಡಲು ಸಿದ್ಧನಾಗಿರುತ್ತಿದ್ದೆ ಅಥವಾ ಈ ಪಾತ್ರವನ್ನೇ ನಿರಾಕರಿಸಿಬಿಡುತ್ತಿದ್ದೆ. ನಾನೆಷ್ಟು ಕೇಳಿದರೂ ‘ವಿಲನ್ ಪಾರ್ಟು’ ಅಂತ ನೀವು ನಾಲ್ಕು ಸಲ ಹೇಳಿದ್ರೇ ಹೊರತು ಇಂಥದೊಂದು ದೃಶ್ಯ ಇದೆ ಅಂತ ಹೇಳಲೇ ಇಲ್ಲ! ಈಗ ಕೊನೇ ಕ್ಷಣದಲ್ಲಿ ಹೇಳ್ತಿದೀರಿ ಆದರೆ ನನ್ನ ಉತ್ತರ ಅದೇ: ಸಾಧ್ಯವಿಲ್ಲ!”
“ಸರ್ , ನೀವು ಇಷ್ಟು ಹಿರಿಯ ಕಲಾವಿದರು..ನೀವೇ ಹೀಗಂದುಬಿಟ್ರೆ ಹೇಗೆ ಸರ್? ಕಲಾವಿದರು ಎಂಥಾ ಪಾತ್ರ ಆದರೂ ಮಾಡೋಕೆ ಸಿದ್ಧವಾಗಿರಬೇಕು ಅಲ್ಲವಾ ಸರ್?” ಎಂದರು ನಿರ್ದೇಶಕರು.
“ನನ್ನ ನಾಟಕ ಶಿಬಿರಗಳಲ್ಲಿ ಇಂಥ ಬೇಕಾದಷ್ಟು ಭಾಷಣಗಳನ್ನು ನಾನು ಮಾಡಿದೇನೆ ಸ್ವಾಮೀ..ಎಂಥ ಪಾತ್ರವಾದರೂ ಕಲಾವಿದನಾದವನು ಮಾಡಬೇಕು ನಿಜ; ಆದರೆ ಔಚಿತ್ಯ ಅನ್ನೋದೊಂದಿರುತ್ತೆ..ನಮಗೆ ನಮ್ಮದೇ ಆದಂಥ ಒಂದು ಇಮೇಜ್ ಇರುತ್ತೆ..ನಮ್ಮದೇ ಆದಂಥ ಪ್ರೇಕ್ಷಕರಿರ್ತಾರೆ..ಅವರದೊಂದಷ್ಟು ನಿರೀಕ್ಷೆಗಳಿರುತ್ವೆ…ಇದೆಲ್ಲವನ್ನೂ ಮೀರಿ ಅಂಥ ದೃಶ್ಯಗಳನ್ನು ಮಾಡಬೇಕೂಂದ್ರೆ ಆ ಪಾತ್ರ ಅತ್ಯಂತ ವಿಶೇಷವಾದದ್ದಾಗಿರಬೇಕಾಗುತ್ತೆ..ಒಬ್ಬ ಕಲಾವಿದನಾಗಿ ನನಗೆ ಸವಾಲುಗಳನ್ನೊಡ್ಡಿ ನನ್ನ ಸಾಮರ್ಥ್ಯವನ್ನೆಲ್ಲಾ ಒರೆಗೆ ಹಚ್ಚುವಂಥದ್ದಾಗಿರಬೇಕಾಗುತ್ತೆ..ಅರ್ಥವಾಯ್ತೇ?” ಎಂದು ಅರ್ಥ ಮಾಡಿಸಲು ಯತ್ನಿಸಿದೆ. ಕೊನೆಗೆ ಆ ನಿರ್ದೇಶಕರು ತೀರಾ ಪೆದ್ದುಪೆದ್ದಾಗಿ, “ಸರ್ , ಅವರು ನಿಮ್ಮ ಮೇಲೆ ನಿಜವಾಗಲೂ ಮೂತ್ರ ಮಾಡೋಲ್ಲ ಸರ್! ಅವರು ಕೂತ್ಕೋತಾರೆ..ನಾವು ನಿಮ್ಮ ಮೇಲೆ ನೀರು ಸಿಂಪಡಿಸ್ತೀವಿ ಅಷ್ಟೇ!” ಎಂದರು. ನನಗಂತೂ ತಲೆ ತಲೆ ಚಚ್ಚಿಕೊಳ್ಳುವಂತಾಯಿತು! ಖಡಾಖಂಡಿತವಾಗಿ ನಾನವರಿಗೆ ಹೇಳಿಬಿಟ್ಟೆ: ” ನೀವು ಏನು ಹೇಳಿದರೂ ಅಷ್ಟೇ ಸ್ವಾಮೀ..ಈಗಿರೋ ರೀತೀಲಿ ನಾನು ಈ ದೃಶ್ಯ ಮಾಡೋಲ್ಲ. ಬೇರೆ ಏನಾದ್ರೂ ಯೋಚನೆ ಮಾಡಿ ದೃಶ್ಯ ಬದಲಾಯಿಸಿ” ಎಂದು ನುಡಿದವನೇ ಅಲ್ಲಿಂದ ಹೊರಟುಬಿಟ್ಟೆ.
ದಾರಿಯುದ್ದಕ್ಕೂ ನನಗೆ ನನ್ನ ನಿಲುವಿನದೇ ವಿಮರ್ಶೆ! ಕಲಾವಿದನಾಗಿ ನಾನು ಮಾಡಿದ್ದು ಸರಿಯೇ?
ಹಿಂದೆ ಗೆಳೆಯ ಅಶೋಕ ಬಾದರದಿನ್ನಿ ಒಂದು ಚಿತ್ರದಲ್ಲಿ ಇಂಥದೇ ಒಂದು ದೃಶ್ಯದಲ್ಲಿ ಪಾಲ್ಗೊಂಡಿದ್ದ. ಹಳ್ಳಿಯಲ್ಲಿ ಹುಡುಗಿಯರನ್ನು ಛೇಡಿಸಿದ್ದ ತಪ್ಪಿಗೆ ಊರ ಪಂಚಾಯ್ತಿ ಮುಖಂಡರು, ಬೆಳಗಿನಿಂದ ಸಂಜೆಯವರೆಗೆ ಅವನನ್ನು ಕುತ್ತಿಗೆ ತನಕ ಮಣ್ಣಿನಲ್ಲಿ ಹೂತಿಡುವ ಶಿಕ್ಷೆ ವಿಧಿಸುತ್ತಾರೆ!
ಕೈಕಾಲು ಆಡಿಸಲೂ ಆಗದ ಸ್ಥಿತಿಯಲ್ಲಿ ಅವನಿರುವಾಗ ನಾಯಿಯೊಂದು ಬಂದು ಅವನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿಬಿಡುತ್ತದೆ! ಹಾಸ್ಯನಟನೆಂಬ ಹೆಸರು ಹೊತ್ತದ್ದಕ್ಕೆ ಸಿಗುವಂತಹ ಅಪರೂಪದ ದೃಶ್ಯ ರತ್ನಗಳಿವು. ಯಾರ ಅಭಿಪ್ರಾಯಗಳು ಏನೇ ಇರಲಿ, ಅಶೋಕನಂತಹ ಪ್ರತಿಭಾವಂತ ಕಲಾವಿದ ಅಂಥ ದೃಶ್ಯಗಳಲ್ಲಿ ಅಭಿನಯಿಸಿದ್ದು ನನಗಂತೂ ಇಷ್ಟವಾಗಿರಲಿಲ್ಲ. ಅವನು ಸಿಕ್ಕಿದಾಗ ಅವನಿಗೂ ಈ ಮಾತು ಹೇಳಿದ್ದೆ ಕೂಡಾ. ಅದಕ್ಕವನು, “ಲೇ ಮಬ್ಬಿಡಿಸಿಗಂಡ..ನಿನಗೇನಪಾ..ಛಂದಂಗ ದಿರಿಸು ಹಾಕ್ಕೊಂಡು ಆಫೀಸ್ನಾಗ ಕುಂದ್ರತೀಯಾ…(ಆಗ ನಾನು ದೂರದರ್ಶನದಲ್ಲಿ ಅಧಿಕಾರಿಯಾಗಿದ್ದೆ) ಒಂದನೇ ತಾರೀಖಿಗ ಛಲೋತ್ನಾಗ ಪಗಾರ ಎಣಿಸ್ತೀಯಾ..ನನಗ್ಯಾವ ನನ್ಮಗ ಹೆಂಡ್ರು ಮಕ್ಳನ್ನ ನೋಡ್ಕಳಾಕ ಪಗಾರ ಕೊಡ್ತಾನಪಾ! ಕೋತಿ ಹಂಗ ಕುಣಿಸ್ತಾರಾ, ಕಾಮಿಡಿ ಅಂತ ಕಪ್ ಕಪಾಳಕ್ಕೆ ಹೊಡೀತಾರಾ, ನೆಲದಾಗ ಹೂಳ್ತಾರಾ, ನಾಯಿ ಉಚ್ಚಿ ಹುಯ್ಯೋಹಂಗ ಮಾಡ್ತಾರ…ಏನು ಮಾಡ್ಲಿ? ನಾ ಮಾಡ್ಲಿಲ್ಲ ಅಂದ್ರ ಮತ್ತೊಬ್ಬ ಮಾಡ್ತಾನ! ಬಿಡು.. ನಾಟಕ ಮಾಡಿ ಈ ನೋವನ್ನೆಲ್ಲಾ ಮರೀತೀನಿ” ಎಂದು ಬಿಕ್ಕಿದಾಗ ನನ್ನ ಕಣ್ಣೂ ಮಂಜಾಗಿತ್ತು.
ಇದರ ಜತೆಗೇ ಹಿಂದೆ ನಮ್ಮ ರಂಗಭೂಮಿಯ ಹಿರಿಯ ನಟ ಲೋಹಿತಾಶ್ವ ಅವರು ಹೇಳಿದ್ದ ಪ್ರಸಂಗವೊಂದರ ನೆನಪು ನುಗ್ಗಿ ಬಂತು. ಅವರು ಹೀಗೇ ಒಂದು ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದರಂತೆ. ಆ ಚಿತ್ರದಲ್ಲೊಂದು ಹೊಡೆದಾಟದ ದೃಶ್ಯ. ಒಂದು ಸಂದರ್ಭದಲ್ಲಿ ನಾಯಕನೋ ಅವನ ಗೆಳೆಯರೋ ಇವರ ತಲೆಯನ್ನು ಕಮೋಡ್ ನಲ್ಲಿ ಅದ್ದಿ ತೆಗೆಯುವಂತೆ ಸಾಹಸ ನಿರ್ದೇಶಕರು ದೃಶ್ಯ ಸಂಯೋಜಿಸಿದ್ದರಂತೆ. ದೃಶ್ಯದ ವಿವರಗಳನ್ನು ಕೇಳುತ್ತಿದ್ದಂತೆ ಲೋಹಿತಾಶ್ವ ನಖಶಿಖಾಂತ ಉರಿದುಹೋದರಂತೆ. “ಕೋಟಿ ರೂಪಾಯಿ ಕೊಟ್ಟರೂ ಇಂಥ ದೃಶ್ಯದಲ್ಲಿ ನಾನು ಅಭಿನಯಿಸಲಾರೆ. ನಾನೊಬ್ಬ ಶಿಕ್ಷಕ. ಸಾವಿರಾರು ಮಕ್ಕಳು ನನ್ನ ಪಾಠ ಕೇಳುತ್ತಾರೆ. ನನ್ನನ್ನು ಅವರ ಆದರ್ಶ ಗುರು ಎಂದು ಅಭಿಮಾನದಿಂದ ಆರಾಧಿಸುತ್ತಾರೆ. ಇಂಥ ದೃಶ್ಯಗಳಲ್ಲಿ ನಾನು ಪಾಲ್ಗೊಂಡದ್ದನ್ನು ನೋಡಿದರೆ ನನ್ನ ಮೇಲಿನ ಅವರ ಗೌರವ ಅಭಿಮಾನಗಳೆಲ್ಲಕ್ಕೂ ಚ್ಯುತಿ ಬರುವುದಿಲ್ಲವೇ? ನಾನು ಈ ದೃಶ್ಯದಲ್ಲಿ ಭಾಗವಹಿಸುವುದಿಲ್ಲ..ಇದು ಶತಸ್ಸಿದ್ಧ. ಇದರ ಪರಿಣಾಮಗಳು ಏನೇ ಆದರೂ ಎದುರಿಸಲು ನಾನು ಸಿದ್ಧ” ಎಂದು ಗುಡುಗಿದರಂತೆ! ಅಲ್ಲೂ ಹೀಗೆಯೇ ‘ಕಲಾವಿದರು…ಬದ್ಧತೆ’…ಇತ್ಯಾದಿ ಇತ್ಯಾದಿ ಗೊಣಗಾಟಗಳು ಕೇಳಿಬಂದಿದ್ದವಂತೆ. “ಬದ್ಧತೆ ಇರಬೇಕಾದ್ದು ಕಲಾವಿದರಿಗೆ ಮಾತ್ರವಲ್ಲ, ನಿರ್ಮಾಪಕ ನಿರ್ದೇಶಕರಿಂದ ಹಿಡಿದು ಇಲ್ಲಿ ದುಡಿಯುವ ಪ್ರತಿಯೊಬ್ಬ ಕೆಲಸಗಾರನವರೆಗೂ ಪ್ರತಿಯೊಬ್ಬರಿಗೂ ಬದ್ಧತೆ ಇರಬೇಕು..ದುಡಿದವರಿಗೆ ಸಂಭಾವನೆ ಕೊಡಲು ಸತಾಯಿಸುವ ನಿರ್ಮಾಪಕರು, ಪೂರ್ವಸಿದ್ಧತೆಗಳೇ ಇಲ್ಲದೆ ಚಿತ್ರೀಕರಣಕ್ಕೆ ಬಂದು ನಗೆಪಾಟಲಾಗುವ ನಿರ್ದೇಶಕರು…ಇವರುಗಳಿಂದ ಬದ್ಧತೆಯ ಪಾಠ ಕಲಿಯಬೇಕೆ?
ನಾನು ಮೇಷ್ಟ್ರು..ನನಗೇ ಪಾಠ ಮಾಡೋದಕ್ಕೆ ಬರಬೇಡಿ” ಎಂದು ದೊಡ್ಡದನಿಯಲ್ಲಿ ಹೂಂಕರಿಸಿದ ಮೇಲೆ ತೆಪ್ಪಗಾಗಿ ದೃಶ್ಯವನ್ನು ಬೇರೆ ರೀತಿಯಲ್ಲಿ ಸಂಯೋಜಿಸಿದರಂತೆ. ಈ ಪ್ರಸಂಗ ನೆನಪಿಗೆ ಬಂದದ್ದೇ ತಡ ನನ್ನ ಅಳುಕು-ದ್ವಂದ್ವಗಳು ಮಾಯವಾಗಿ ನನ್ನ ನಿರ್ಧಾರ ಗಟ್ಟಿಯಾಯಿತು. ಆನಂತರವೇ ನಾನು ನೆಮ್ಮದಿಯಿಂದ ನಿದ್ದೆ ಮಾಡಿದ್ದು! ಮರುದಿನ ಚಿತ್ರೀಕರಣಕ್ಕೆ ಹೋದಾಗ ನಿರ್ದೇಶಕರು ಮೊದಲು ಹೇಳಿದ ಮಾತು—”ಪ್ರಭು ಸರ್..ನೀವು ಹೇಳಿದ ಹಾಗೇ ದೃಶ್ಯ ಬದಲಾಯಿಸಿದೀನಿ. ಹೀರೋಗೆ ‘ಅಲ್ಲಿ ಗಿಡದ ಹಿಂದೆ ಯಾರೋ ಇದಾರೆ ‘ ಅಂತ ಅನುಮಾನ ಬಂದು ಕಲ್ಲುಗಳನ್ನ ತೊಗೊಂಡು ನಿಮ್ಮ ಕಡೆಗೆ ಬೀರ್ತಾನೆ. ಒಂದೆರಡು ಕಲ್ಲು ನಿಮಗೆ ಬಿದ್ದು ಚೂರು ಪೆಟ್ಟಾಗುತ್ತೆ ನಿಮಗೆ…ಇಷ್ಟು ಓಕೆ ಅಲ್ಲವಾ ಸರ್?”.
ಆಗಲಿ ಸರ್..ಹಾಗೇ ಮಾಡಿ ಎನ್ನುತ್ತಾ ನಾನು ಸಿದ್ಧನಾಗಲು ಒಳನಡೆದೆ.
ಒಟ್ಟಿನಲ್ಲಿ ನನಗನ್ನಿಸಿದ್ದಿಷ್ಟು: ಇಲ್ಲಿ ತಪ್ಪು ಸರಿಗಳ ವಿಚಾರ ವಿಮರ್ಶೆ ಮುಖ್ಯವಲ್ಲ. ಪೂರ್ಣ ಮಾತುಕತೆ ಪಾರದರ್ಶಕವಾಗಿದ್ದಾಗ ನಮ್ಮ ಮಿತಿಗಳನ್ನರಿತುಕೊಂಡು ನಾವೇ ಲಕ್ಷ್ಮಣ ರೇಖೆಯನ್ನು ಎಳೆದುಕೊಳ್ಳಬೇಕಷ್ಟೇ.
ಮನುಷ್ಯ ತನ್ನ ಕರ್ಮಗಳ ಶಿಲುಬೆಯನ್ನು ಹೊತ್ತುಕೊಂಡೇ ಬದುಕಿನ ಪಥದಲ್ಲಿ ಕ್ರಮಿಸುತ್ತಾನಂತೆ; ನಟ ತನ್ನ ಪಾತ್ರದ ಶಿಲುಬೆಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಾನೆ! ನನಗೆ ನಾನೇ ಹೇಳಿಕೊಳ್ಳುತ್ತೇನೆ:
ಹೊರಲು ಸಾಧ್ಯವಾಗುವಷ್ಟು ಭಾರದ ಶಿಲುಬೆಯನ್ನಷ್ಟೇ ಆರಿಸಿಕೋ!! ಇಲ್ಲದಿದ್ದರೆ ಶಿಲುಬೆಯ ಭಾರದಡಿ ಸಿಕ್ಕಿಕೊಂಡು ನಜ್ಜುಗುಜ್ಜಾಗಿ ಹೋಗುತ್ತೀಯಾ! ಹೇಳಹೆಸರಿಲ್ಲದಂತೆ ಗಾಳಿಯಲ್ಲಿ ಬೆರೆತುಹೋಗುತ್ತೀಯಾ! ಅದಕ್ಕೇ—
ಎಚ್ಚರ ಪ್ರಭೂ ಎಚ್ಚರ!!!






0 Comments