ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಅಲ್ಲಿ ನಮಗೊಂದು ಅಚ್ಚರಿ ಕಾದಿತ್ತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

41

ಹ್ಯಾಮ್ಲೆಟ್ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದವರು ರಾಮಚಂದ್ರದೇವ. ಆ ವೇಳೆಗಾಗಲೇ ಒಳ್ಳೆಯ ಕತೆಗಾರ—ನಾಟಕಕಾರರಾಗಿ ಪ್ರಸಿದ್ಧರಾಗಿದ್ದ ದೇವ ಅವರು ಅತ್ಯಂತ ಸಮರ್ಥವಾಗಿ, ಪರಿಣಾಮಕಾರಿಯಾಗಿ ಹ್ಯಾಮ್ಲೆಟ್ ನಾಟಕವನ್ನು ಅನುವಾದಿಸಿದ್ದರು.

ಶೇಕ್ಸ್ ಪಿಯರ್ ಮಹಾಕವಿಯ ಹ್ಯಾಮ್ಲೆಟ್, ಬಹುಚರ್ಚಿತ ಹಾಗೂ ಬಹು ಜನಪ್ರಿಯ ನಾಟಕ; ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಲ್ಲೂ ತರ್ಜುಮೆ ಅಥವಾ ರೂಪಾಂತರಗೊಂಡಿರುವ ನಾಟಕ. ಕನ್ನಡದಲ್ಲಿ ರಾಷ್ಟ್ರಕವಿ ಕುವೆಂಪು ಅವರು ‘ರಕ್ತಾಕ್ಷಿ’ ನಾಟಕವನ್ನು ರಚಿಸಿರುವುದು ಹ್ಯಾಮ್ಲೆಟ್ ನಾಟಕದ ಆಧಾರದ ಮೇಲೆಯೇ.ಅಷ್ಟೇ ಅಲ್ಲ, ಜಗತ್ತಿನಲ್ಲಿ ಸಿಂಡ್ರೆಲಾ ಕಥೆಯನ್ನು ಬಿಟ್ಟರೆ ಅತಿ ಹೆಚ್ಚು ಚಿತ್ರಗಳಿಗೆ ಕಥಾಸಾಮಗ್ರಿ ಒದಗಿಸಿರುವುದು ಹ್ಯಾಮ್ಲೆಟ್ ನ ಕಥೆಯೇ—ಎಂದು ಹೇಳುವುದುಂಟು!

1599—1601 ರ ನಡುವೆ ಈ ನಾಟಕವನ್ನು ಶೇಕ್ಸ್ ಪಿಯರ್ ಬರೆದು ಪೂರ್ಣಗೊಳಿಸಿದನಂತೆ. ಸ್ಥೂಲವಾಗಿ ಕಥಾಹಂದರವನ್ನು ನೋಡುವುದಾದರೆ:
ಡೆನ್ಮಾರ್ಕ್ ನ ದೊರೆಯ ಭೂತ ತನ್ನ ಮಗ ಹ್ಯಾಮ್ಲೆಟ್ ಗೆ ಕೆಲವು ರಹಸ್ಯಗಳನ್ನು ಅರುಹುತ್ತದೆ:’ ನನ್ನದು ಸಹಜ ಸಾವಲ್ಲ..ಕೊಲೆ.ಕೊಲೆಗಾರ ಬೇರಾರೂ ಅಲ್ಲ,ನನ್ನ ತಮ್ಮನೂ ನಿನ್ನ ಚಿಕ್ಕಪ್ಪನೂ ಆಗಿರುವ ಕ್ಲಾಡಿಯಸ್…ನನ್ನನ್ನು ಕೊಂದು ನನ್ನ ಪತ್ನಿ ಗರ್ಟ್ರೂಡಳನ್ನು ವಿವಾಹವಾಗಿ ತಾನೇ ರಾಜನಾಗಿ ಮೆರೆಯುತ್ತಿರುವ ಕ್ಲಾಡಿಯಸ್ ನನ್ನು ಸುಮ್ಮನೆ ಬಿಡಬೇಡ..ಸೇಡು ತೀರಿಸಿಕೊ.’ ಸೇಡು ತೀರಿಸಿಕೊಳ್ಳಲು ಹ್ಯಾಮ್ಲೆಟ್ ಹುಚ್ಚುತನವನ್ನು ನಟಿಸುತ್ತಾ ಸಾವು—ಬದುಕುಗಳ ನಡುವೆ ಹೊಯ್ದಾಡುತ್ತಾ ಕ್ಲಾಡಿಯಸ್ ನನ್ನು ಮುಗಿಸಲು ಚಿಂತಿಸುತ್ತಿರುತ್ತಾನೆ. ಇತ್ತ ಕ್ಲಾಡಿಯಸ್ ಕೂಡಾ ಸಾವಿನ ಭಯದಲ್ಲಿ ನಡುಗುತ್ತಲೇ ಹ್ಯಾಮ್ಲೆಟ್ ನನ್ನು ಕೊಲ್ಲಲು ಸಂಚು ಹೂಡತೊಡಗುತ್ತಾನೆ.ಹೀಗೆ ತಂತ್ರ ಪ್ರತಿ ತಂತ್ರಗಳ ಒಂದು ಗೂಢ ವ್ಯೂಹದಲ್ಲಿ ಕಟ್ಟಿಕೊಳ್ಳುತ್ತಾ ಹೋಗುವ ಹ್ಯಾಮ್ಲೆಟ್ ನಾಟಕ, ಮನುಷ್ಯನ ಗೂಢ ವಿಕ್ಷಿಪ್ತ ಕರಾಳ ಮುಖಗಳನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತದೆ. ಹ್ಯಾಮ್ಲೆಟ್ ನ ಸಿಟ್ಟು—ರೋಷ—ದ್ವಂದ್ವ—ಆತ್ಮನಿರೀಕ್ಷಣೆ—ಸ್ವಾನುಕಂಪಗಳು ನಾಟಕದಲ್ಲಿ ಪ್ರಧಾನವಾಗಿ ಅಭಿವ್ಯಕ್ತಗೊಂಡಿರುವ ಸಂಗತಿಗಳು.

ಹ್ಯಾಮ್ಲೆಟ್ ಪಾತ್ರನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವ ವೇಳೆಗಾಗಲೇ ಹ್ಯಾಮ್ಲೆಟ್ ಆಧಾರದ ಮೇಲೆ ರೂಪುಗೊಂಡಿದ್ದ ಕೆಲ ಚಲನಚಿತ್ರಗಳನ್ನು ನೋಡಿದ್ದೆ. ಮೊದಲಿನದು ಲಾರೆನ್ಸ್ ಆಲಿವಿಯರ್ ಹ್ಯಾಮ್ಲೆಟ್ ಆಗಿ ಅಭಿನಯಿಸಿದ್ದ ಚಿತ್ರ; ಎರಡನೆಯದು ಹ್ಯಾಮ್ಲೆಟ್ ನಾಟಕವನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿ ಚಿತ್ರಮಾಧ್ಯಮಕ್ಕೆ ಒಗ್ಗಿಸಿಕೊಂಡಿದ್ದ ರಷ್ಯನ್ ಭಾಷೆಯ ಚಲನಚಿತ್ರ; ಹಾಗೂ ನಾಟಕವನ್ನೇ ಇಡಿಯಾಗಿ ಅಭಿನಯಿಸಿ ಹಾಗೆಯೇ ಚಿತ್ರೀಕರಿಸಿ ರೂಪಿಸಿದ್ದ film theatre ಮಾದರಿಯ ಒಂದು ಇಂಗ್ಲೀಷ್ ಚಿತ್ರ.

ರಷ್ಯನ್ ಹ್ಯಾಮ್ಲೆಟ್ ಚಿತ್ರದ ಒಂದು ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ: ಬಹುಶಃ “to be or not to be” ಸ್ವಗತ ಭಾಗದ ದೃಶ್ಯವೆಂದು ನೆನಪು..ಹ್ಯಾಮ್ಲೆಟ್ ಸಮುದ್ರ ದಂಡೆಯಲ್ಲಿ ನಿಂತಿದ್ದಾನೆ; ಒಂದು ಬದಿಗೆ ಕಡಲ ಅಲೆಗಳು ಎತ್ತರೆತ್ತರಕ್ಕೆ ಉಬ್ಬರಿಸಿ ಬಂದು ಹಾಗೇ ಕೆಳಗಿಳಿದು ನೆಲಮುಟ್ಟಿ ಸರಿದು ಹೋಗುತ್ತಿವೆ; ಮತ್ತೊಂದು ಬದಿಗೆ ಎತ್ತರದ ನಿಶ್ಚಲ ಹೆಬ್ಬಂಡೆಗಳು.. ನಡುವೆ ಗೊಂದಲಪುರದ ಅಧಿಪತಿಯಂತೆ ನಿಂತಿರುವ ಹ್ಯಾಮ್ಲೆಟ್! ಹ್ಯಾಮ್ಲೆಟ್ ನ ವ್ಯಕ್ತಿತ್ವದ ಅಂತರ್ಗತ ದ್ವಂದ್ವದ ಅತ್ಯಂತ ಪ್ರಭಾವೀ ಪ್ರತೀಕವಾಗಿ ಈ ಚಿತ್ರಿಕೆ ಕಂಡು ನನ್ನನ್ನು ಚಕಿತಗೊಳಿಸಿತ್ತು. ಆದರೆ ರಂಗಭೂಮಿಯಲ್ಲಿ ಈ ಪಾತ್ರವನ್ನು ಅಭಿನಯಿಸಲು ಲಾರೆನ್ಸ್ ಆಲಿವಿಯರನ ನಿರರ್ಗಳ ವಾಗ್ಝರಿಯ ಅಭಿನಯ ಶೈಲಿಯೇ ಹೆಚ್ಚು ಸೂಕ್ತವೆನಿಸಿತು. ಮೆಥಡ್ ಅಭಿನಯ ಪದ್ಧತಿಯನ್ನೇ ಅಳವಡಿಸಿಕೊಂಡು ಪಾತ್ರವನ್ನು ಕಟ್ಟಿಕೊಳ್ಳುವುದು ಸಮಂಜಸವಾಗಬಹುದು ಎನ್ನಿಸಿತು.ಈ ದಿಸೆಯಲ್ಲೇ ನನ್ನ ಮೊದಲ ಹಂತದ ಮಾನಸಿಕ ತಯಾರಿಯೂ ಸಾಗಿತು.

ರಿಹರ್ಸಲ್ ಗಳಿಗೆ ಆಗಾಗ್ಗೆ ರಾಮಚಂದ್ರದೇವರೂ ಬರುತ್ತಿದ್ದರು.ಸ್ವಭಾವತಃ ಅಂತರ್ಮುಖಿಯೇ ಆದರೂ ಪರಮ ಸ್ನೇಹ ಜೀವಿಯೂ ಸ್ಫುರದ್ರೂಪಿಯೂ ಆಗಿದ್ದ ದೇವ ಅವರು ಬಲು ಬೇಗ ನನಗೆ ಆತ್ಮೀಯರಾಗಿಬಿಟ್ಟರು. ಅಷ್ಟೇ ಅಲ್ಲ.. ನಾಟಕದ ಯಾವುದಾದರೂ ಭಾಗದಲ್ಲಿ ಸಂಭಾಷಣೆಯಲ್ಲಿ ಕೊಂಚ ತೊಡಕಿದೆ, ಹೇಳಲು ಕಷ್ಟವಾಗುತ್ತಿದೆ ಎಂದೇನಾದರೂ ಅನ್ನಿಸಿ ನಾವು ಅದನ್ನು ಅವರ ಗಮನಕ್ಕೆ ತಂದರೆ ಅಲ್ಲೇ ಕುಳಿತು ಸಂಭಾಷಣೆಯನ್ನು ಬದಲಿಸಿಕೊಡುತ್ತಿದ್ದರು.

ಹಿಂದಿನ ಪುಟಗಳಲ್ಲಿ ಈಗಾಗಲೇ ಹೇಳಿರುವಂತೆ ಎರಡು ತಂಡಗಳನ್ನು ರೂಪಿಸಿಕೊಂಡು ಅಶೋಕ ತಾಲೀಮು ಶುರು ಮಾಡಿದ್ದನಷ್ಟೇ.. ವೈಶಾಲಿ ಕಾಸರವಳ್ಳಿ/ನಳಿನಿ ಅಕ್ಕ (ತಾಯಿ ಗರ್ಟ್ರೂಡ್ ಪಾತ್ರ), ಸುಂದರರಾಜ್/ವೆಂಕಟೇಶ ಪ್ರಸಾದ್ (ಚಿಕ್ಕಪ್ಪ ಕ್ಲಾಡಿಯಸ್ ಪಾತ್ರ), ರೇಖಾ ಹಂದೆ/ಪದ್ಮಶ್ರೀ(ಒಫೀಲಿಯಾ ಪಾತ್ರ), ರಾಮಚಂದ್ರಾಚಾರ್/ಅಶೋಕ್ ಬಾದರದಿನ್ನಿ (ಪೊಲೋನಿಯಸ್ ಪಾತ್ರ), ಜಯಂತ್ (ಹೊರೇಶಿಯೋ), ಎನ್.ಕೆ.ರಾಮಕೃಷ್ಣ ( ರೋಸೆನ್ ಕ್ರಾಟ್ಸ್ ), ಜೆರ್ರಿ ಅನಂತರಾಂ (ಗಿಲ್ಡನ್ ಸ್ಟರ್ನ್), ಚಂದ್ರು(ಲಾರ್ಟೆಸ್ ), ಮಲ್ಲಿಗೆ ನಾಗರಾಜ್ (ಗುದ್ದು ತೋಡುವವ) ಮೊದಲಾದವರು ಹ್ಯಾಮ್ಲೆಟ್ ನಾಟಕದ ಎರಡೂ ತಂಡಗಳ ಕಲಾವಿದರು. ಇವರಲ್ಲಿ ಸುಂದರ್ ರಾಜ್ ಅದಾಗಲೇ ಅನೇಕ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿ ಹೆಸರು ಗಳಿಸಿ ನಮ್ಮ ನಡುವಿನ ಹೆಮ್ಮೆಯ ಸ್ಟಾರ್ ನಟನೇ ಆಗಿದ್ದ. ಮತ್ತೂ ಒಂದು ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು: ಆಗೆಲ್ಲಾ ನಾಟಕ ತಂಡಗಳಳು ಆರ್ಥಿಕವಾಗಿ ಸಬಲವಾಗೇನೂ ಇರಲಿಲ್ಲ.

ಮಹತ್ವಾಕಾಂಕ್ಷೆಯ ನಾಟಕ ಕೈಗೆತ್ತಿಕೊಂಡರೆ ಸಾಲ ಮಾಡಿಯೇ production ಮಾಡುವುದು ಅನಿವಾರ್ಯವಾಗಿತ್ತು. ಹ್ಯಾಮ್ಲೆಟ್ ನಾಟಕವೂ ಐತಿಹಾಸಿಕ ನಾಟಕವಾದ್ದರಿಂದ costumes ಹಾಗೂ set ಗಳಿಗಾಗಿ ಹೆಚ್ಚಿನ ಬಂಡವಾಳದ ಅವಶ್ಯಕತೆ ಇತ್ತು. ಈ ನಮ್ಮ ಗೆಳೆಯ ಸುಂದರ ರಾಜ ಆ ಕಾಲಕ್ಕೆ ಹ್ಯಾಮ್ಲೆಟ್ ನಾಟಕವನ್ನು ಸಿದ್ಧ ಪಡಿಸುವುದಕ್ಕಾಗಿ 5000 ರೂಪಾಯಿಗಳನ್ನು ಕೊಟ್ಟು ಬೆನಕ ತಂಡಕ್ಕೆ ಹಾಗೂ ಅಶೋಕನಿಗೆ ಬೆಂಬಲವಾಗಿ ನಿಂತಿದ್ದ. ಅವನ ಪ್ರಶ್ನಾತೀತ ರಂಗಭೂಮಿ ಬದ್ಧತೆಗೆ ಇದೊಂದು ಪುಟ್ಟ ಸಾಕ್ಷಿಯಾದ್ದರಿಂದ ಪ್ರಾಸಂಗಿಕವಾಗಿ ನೆನೆಸಿಕೊಂಡಿದ್ದೇನಷ್ಟೇ. ವೈಶಾಲಿ ಕಾಸರವಳ್ಳಿ ಹಾಗೂ ನಳಿನಿ ಮೂರ್ತಿ (ಅಕ್ಕ) ಕೂಡಾ ಅದಾಗಲೇ ರಂಗಭೂಮಿಯಲ್ಲಿ ಶ್ರೇಷ್ಠ ನಟಿಯರೆಂದು ಹೆಸರಾಗಿದ್ದವರು. ಪದ್ಮಶ್ರೀ ಗುಬ್ಬಿ ಕಂಪನಿ ಕುಟುಂಬದ ಕುಡಿ;ಶ್ರೇಷ್ಠ ನಟಿ ಬಿ.ಜಯಶ್ರೀ ಅವರ ಸೋದರಿ. ರೇಖಾ ಹಂದೆಯವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದವರು; ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರು! ಹೀಗೆ ಖ್ಯಾತ ನಾಮರ ದಂಡೇ ನಮ್ಮ ತಂಡದಲ್ಲಿ ನೆರೆದಿತ್ತು!

ರಿಹರ್ಸಲ್ ಆರಂಭವಾಗಿ ಒಂದೆರಡು ದಿನಗಳಷ್ಟೇ ಉರುಳಿದ್ದವು..ಒಂದು ಸಂಜೆ ರಂಗಾ ಅವರು ನನಗೂ ಅಶೋಕನಿಗೂ nmh ಹೋಟಲ್ ಗೆ ಬರಲು ಹೇಳಿದರು. ಅಲ್ಲಿ ನಮಗೊಂದು ಅಚ್ಚರಿ ಕಾದಿತ್ತು.

“ನಿಮ್ಮ ಹತ್ರ ಈ ವಿಷಯ ಹ್ಯಾಗೆ ಹೇಳೋದು ಅಂತ ತೋಚದೇ ಒದ್ದಾಡ್ತಿದ್ದೆ ಅಶೋಕ್ , ಈಗ ಪ್ರಭು ಬಂದಿರೋದರಿಂದ ಧೈರ್ಯವಾಗಿ ಹೇಳ್ತಿದೀನಿ..ದಯವಿಟ್ಟು ಹ್ಯಾಮ್ಲೆಟ್ ಪಾತ್ರದ ಜವಾಬ್ದಾರೀನ ನನ್ನ ಹೆಗಲಿಂದ ಸರಿಸಿಬಿಡಿ..ನಾನು ನನ್ನ ಸಿನೆಮಾ ಮೇಲೆ ಪೂರ್ತಿ concentrate ಮಾಡಬೇಕೂಂತಿದೀನಿ” ಅಂದರು ರಂಗಾ. ನಾನು ,ಅಶೋಕ ಎಷ್ಟೇ ಒತ್ತಾಯ ಮಾಡಿದರೂ ರಂಗಾ ಜಗ್ಗಲಿಲ್ಲ. ಕೊನೆಗೆ ನಾವೇ ಅವರ ಹಠದ ಮುಂದೆ ಸೋಲಬೇಕಾಯಿತು. ಆ ವೇಳೆಗಾಗಲೇ ಎಲ್ಲಾ ಕಲಾವಿದರಿಗೂ ವಿಷಯ ತಿಳಿಸಿಯಾಗಿತ್ತಾದ್ದರಿಂದ ಎರಡೂ ತಂಡಗಳಲ್ಲಿ ನಾನೇ ಹ್ಯಾಮ್ಲೆಟ್ ಆಗಿ ಅಭಿನಯಿಸಬೇಕಾಯಿತು.

ಅಶೋಕ ಹ್ಯಾಮ್ಲೆಟ್ ಪ್ರಸ್ತುತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದ. ಒಂದು ರೀತಿಯಲ್ಲಿ ಭಾರತೀಕರಣದ ಒಂದು ಸ್ಪರ್ಶ ನೀಡಲೂ ಪ್ರಯತ್ನಿಸಿದ ಎಂದೇ ಹೇಳಬೇಕು. ಅದೇನೆಂದರೆ ನಾಟಕದುದ್ದಕ್ಕೂ ವಿಶೇಷ ಸಂದರ್ಭಗಳಲ್ಲಿ ಮೇಳವನ್ನು ಬಳಸಿದ್ದು. ಮೇಳದವರು ಕೆಲ ಸಂದರ್ಭಗಳಲ್ಲಿ—ಅದರಲ್ಲೂ ಭಾವಪೂರ್ಣ ಸನ್ನಿವೇಶಗಳಲ್ಲಿ—ಕೆಲ ರಾಗಗಳ ಆಲಾಪ್ ಗಳನ್ನೂ, ಮತ್ತೆ ಕೆಲ ಸಂದರ್ಭಗಳಲ್ಲಿ ಲಯವಾದ್ಯದ ಬೋಲ್ ಗಳನ್ನೂ ಮೇಳದವರಿಂದ ಹಾಡಿಸಿ ದೃಶ್ಯಕ್ಕೆ ಮತ್ತಷ್ಟು ಮೆರುಗು—ಮೊನಚು ತುಂಬಲು ಯೋಜಿಸುತ್ತಿದ್ದ. ಹಾಗೆಯೇ ಮೂಲ ನಾಟಕ ಸಾಕಷ್ಟು ದೀರ್ಘವಾಗಿರುವುದರಿಂದ ಪ್ರದರ್ಶನ ಸಮಯವನ್ನು ಕಡಿಮೆ ಮಾಡಲು ಕೆಲ ಮುಖ್ಯ ದೃಶ್ಯಗಳಿಗೆ ಕತ್ತರಿ ಹಾಕಿದ್ದ.ಆಗಿನ ರಾಜಕೀಯ ಪಲ್ಲಟಗಳನ್ನು ಸೂಕ್ಷ್ಮವಾಗಿ ದಾಖಲಿಸಿದ್ದ ಫೋರ್ಟಿನ್ ಬ್ರಾಸ್ ನ ಒಂದೆರಡು ಮುಖ್ಯ ದೃಶ್ಯಗಳು ಹಾಗೂ ಕ್ಲಾಡಿಯಸ್ ದೊರೆ ಪ್ರಾರ್ಥನೆಯ ಹೊತ್ತಿನಲ್ಲಿ ತನ್ನದೇ ಕುಕೃತ್ಯಗಳನ್ನು ನೆನೆದು ಪಶ್ಚಾತ್ತಾಪದಿಂದ ದುಃಖಿಸುತ್ತಿರುವಾಗ ಅನಾಯಾಸವಾಗಿ ಸಿಕ್ಕಿದ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ಹ್ಯಾಮ್ಲೆಟ್ ಕೈಚೆಲ್ಲುವ ದೃಶ್ಯಗಳು ಹೀಗೆ ಕತ್ತರಿ ಪ್ರಯೋಗಕ್ಕೆ ಒಳಗಾದ ಪ್ರಮುಖ ದೃಶ್ಯಗಳು. ವೈಯಕ್ತಿಕವಾಗಿ ಪ್ರಾರ್ಥಿಸುತ್ತಿರುವ ವ್ಯಕ್ತಿಯನ್ನು ಕೊಲ್ಲಲು ಹ್ಯಾಮ್ಲೆಟ್ ಹಿಂದೇಟು ಹೊಡೆಯುವ ದೃಶ್ಯ ನನಗೆ ತುಂಬಾ ಇಷ್ಟವಾದ ದೃಶ್ಯವೇ ಆಗಿದ್ದರೂ ನಾನು ಆ ದೃಶ್ಯವನ್ನು ತೆಗೆದುಹಾಕಿದ್ದರ ಕುರಿತಾಗಿ ಅಶೋಕನೊಂದಿಗೆ ಚರ್ಚಿಸಲಿಲ್ಲ.

ಅಂತೆಯೇ ಹ್ಯಾಮ್ಲೆಟ್ ನಾಟಕದ ಕೊನೆ ಕೊನೆಗೆ ಬರುವ— ಸ್ಮಶಾನದಲ್ಲಿ ಗುದ್ದು ತೋಡುವವನೊಂದಿಗೆ ಹ್ಯಾಮ್ಲೆಟ್ ಮಾತಾಡುವ ದೃಶ್ಯ ಕೂಡಾ ಬಹು ಚರ್ಚಿತ ದೃಶ್ಯ.ಒಬ್ಬ ವಿಮರ್ಶಕ ಹೇಳುವಂತೆ: “Philosophical puzzle, memento mori, bleak joke on the nature of existence: interpret it however you want,but Hamlet lifting a skull is one of the defining dramatic images of all time.”

ಈ ದೃಶ್ಯದಲ್ಲಿ ಬರುವ ಒಂದು ಸಂಭಾಷಣೆ ಹೀಗಿದೆ: ಹ್ಯಾಮ್ಲೆಟ್ ಗುದ್ದು ತೋಡುವವನನ್ನು ಕೇಳುತ್ತಾನೆ: ” ಮನುಷ್ಯ ಕೊಳೆಯುವುದಕ್ಕೆ ಎಷ್ಟು ಸಮಯ ಬೇಕು?”. ಅದಕ್ಕೆ ಗುದ್ದು ತೋಡುವವ ಕೊಡುವ ಉತ್ತರ ನೋಡಿ: “ಸಾಯುವ ಮೊದಲೇ ಕೊಳೆತಿಲ್ಲವಾದರೆ ಎಂಟು ಅಥವಾ ಒಂಬತ್ತು ವರ್ಷ.”

ಇಂಥ ಅನೇಕ ಮಾರ್ಮಿಕ ಮಾತುಗಳು ಈ ದೃಶ್ಯದಲ್ಲಿ ಇಡುಕಿರಿದಿವೆ. ಮಹಾರಾಜರ ಹಾಸ್ಯಗಾರನಾಗಿದ್ದ ಯೋರಿಕ್ ನ ಬುರುಡೆಯನ್ನು ಕೈಲಿ ಹಿಡಿದು ಹ್ಯಾಮ್ಲೆಟ್ ಆಡುವ ಮಾತುಗಳಂತೂ ಬಹು ಕಾಲ ಕಾಡುವಂಥವು.ಈ ದೃಶ್ಯವನ್ನೂ ಸಹಾ ಉಳಿಸಿಕೊಳ್ಳಬೇಕೇ ಬೇಡವೇ; ಉಳಿಸಿಕೊಂಡರೂ ಎಷ್ಟು ಭಾಗವನ್ನು ಉಳಿಸಿಕೊಳ್ಳಬೇಕು… ಎಂದು ಅಶೋಕ ಜಿಜ್ಞಾಸೆ ನಡೆಸಿದ್ದೂ ಉಂಟು. ಆದರೆ ಸ್ವತಃ ರಾಮಚಂದ್ರ ದೇವ ಅವರೇ ಈ ದೃಶ್ಯ ಇರಲೇಬೇಕೆಂದು ಖಡಾಖಂಡಿತವಾಗಿ ಹೇಳಿದ್ದರಿಂದ ಹೆಚ್ಚು ಚರ್ಚೆಗೆ ಅವಕಾಶವಾಗದೆ ದೃಶ್ಯ ಹೆಚ್ಚುಕಡಿಮೆ ಪೂರ್ಣ ಪ್ರಮಾಣದಲ್ಲಿಯೇ ಉಳಿದುಕೊಂಡಿತು.

ಸುಮಾರು ಎರಡು ತಿಂಗಳ ಕಾಲ ಸತತವಾಗಿ ಹಗಲಿರುಳೂ ಹ್ಯಾಮ್ಲೆಟ್ ನಾಟಕದ ತಾಲೀಮು ನಡೆಯಿತು. ಆ ದಿನಗಳಲ್ಲಿ ಹ್ಯಾಮ್ಲೆಟ್ ನ ಹೊರತಾಗಿ ಮತ್ತೇನನ್ನಾದರೂ ನಾನು ಚಿಂತಿಸಿದ್ದೇ ಇಲ್ಲ ಎನ್ನಬೇಕು. ಶೇಕ್ಸ್ ಪಿಯರನ ಮಾತುಗಳ ಮೋಡಿಯಿಂದ, ಹ್ಯಾಮ್ಲೆಟ್ ನ ನಿಗೂಢ ವ್ಯಕ್ತಿತ್ವದ ಪ್ರಭಾವ ವಲಯದಿಂದ ಬಿಡಿಸಿಕೊಂಡು ಹೊರಬರುವುದು ಅಸಾಧ್ಯದ ಮಾತೇ ಸರಿ! ಎಲ್ಲರೂ ತಾಲೀಮಿಗೆ ಸಂಜೆಯ ವೇಳೆಯಲ್ಲಿಯೇ ಬರುತ್ತಿದ್ದರೂ ನಾನು ಬೆಳಗಿನಿಂದಲೇ ತಾಲೀಮು ಆರಂಭಿಸಿಬಿಡುತ್ತಿದ್ದೆ.

ಹ್ಯಾಮ್ಲೆಟ್ ನ ಸುಪ್ರಸಿದ್ಧ ‘ಸ್ವಗತ’ಗಳನ್ನು ಪದೇ ಪದೇ ಅಭ್ಯಸಿಸುತ್ತಾ ರಾಜಕುಮಾರ ಹ್ಯಾಮ್ಲೆಟ್ ಗೆ ಹೊಂದುವ ‘ಶರೀರ ಭಾಷೆ’ಯನ್ನು ರೂಢಿಸಿಕೊಳ್ಳುತ್ತಾ ಸಂಭಾಷಣೆಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ಹ್ಯಾಮ್ಲೆಟ್ ನಾಟಕದಲ್ಲಿ ಬರುವ ಅತಿ ಮುಖ್ಯವಾದ ಏಳು ಸ್ವಗತಗಳಿಗೆ ಒಂದು ವಿಶೇಷ ಸ್ಥಾನವೇ ಕಲ್ಪಿತವಾಗಿದೆ. ಅದರಲ್ಲಿಯೂ “to be or not to be: that is the question”..”ಇರಲೆ ಇರದಿರಲೆ—ಇದು ಮಾತ್ರವೇ ಪ್ರಶ್ನೆ”…ಈ ಸ್ವಗತವಂತೂ ಜಗತ್ಪ್ರಸಿದ್ಧವಾದುದು..ಮತ್ತೆ ಮತ್ತೆ ಓದಿ ಓದಿ ಮನನ ಮಾಡಿಕೊಂಡು ಅಭ್ಯಸಿಸಬೇಕಾದ್ದು.

ಅಶೋಕನಾದರೂ ಅಷ್ಟೇ: ಹ್ಯಾಮ್ಲೆಟ್ ನಾಟಕವನ್ನು ರಂಗದ ಮೇಲೆ ಅನನ್ಯವಾದ ರೀತಿಯಲ್ಲಿ ಪ್ರಸ್ತುತ ಪಡಿಸಬೇಕೆಂಬ ಹಂಬಲ—ಕನಸುಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದ. ರೇಖಾ ಹಂದೆಯವರೊಬ್ಬರು ಮಾತ್ರ ರಂಗಭೂಮಿಗೆ ಹೊಸಬರಾಗಿದ್ದು ಉಳಿದವರೆಲ್ಲರೂ ಹತ್ತಾರು ವರ್ಷಗಳ ಅನುಭವವಿದ್ದ ಶ್ರೇಷ್ಠ ಕಲಾವಿದರೇ ಆಗಿದ್ದರು.

ನೋಡನೋಡುತ್ತಿದ್ದಂತೆಯೇ ಪ್ರದರ್ಶನದ ದಿನಗಳು ಬಂದೇ ಬಿಟ್ಟವು! ಸೆಪ್ಟೆಂಬರ್ ತಿಂಗಳ ಮಧ್ಯಭಾಗ,1980 —ಹ್ಯಾಮ್ಲೆಟ್ ನಾಟಕದ ಪ್ರಥಮ ಪ್ರದರ್ಶನಗಳ ದಿನಗಳು! ನಾಟಕಶಾಲೆಯ ತರಬೇತಿ ಮುಗಿಸಿಕೊಂಡು ಬಂದಮೇಲೆ ಪ್ರಪ್ರಥಮವಾಗಿ,ಪೂರ್ಣ ಪ್ರಮಾಣದ ನಾಯಕ ಪಾತ್ರದಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರೇಕ್ಷಕರಿಗೆ ಮುಖಾಮುಖಿಯಾಗಲು ಸಿದ್ಧನಾಗಿ ನಿಂತಿದ್ದೆ.ಸಾಕಷ್ಟು ತಾಲೀಮು ನಡೆಸಿದ್ದರಿಂದ ಆತ್ಮವಿಶ್ವಾಸಕ್ಕೇನೂ ಕೊರತೆಯಿರಲಿಲ್ಲವಾದರೂ ರಂಗದ ಮೇಲೆ ಹೋಗುವ ಮುನ್ನ ಒಂದು ಪುಟ್ಟ ಅಳುಕು.. ಒಂದು ಸಣ್ಣ ನಡುಕ..ರಂಗದ ಮೇಲೆ ಪ್ರವೇಶವಾದ ಕೆಲ ನಿಮಿಷಗಳಲ್ಲಿ ಎಲ್ಲವೂ ಮಾಯ! ಪ್ರೇಕ್ಷಕರೂ ಸಹಾ ಸೊಗಸಾಗಿ ಪ್ರತಿಕ್ರಿಯಿಸುತ್ತಾ ಉತ್ತಮ ಸಂಭಾಷಣೆಗಳಿಗೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ನಾಟಕವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು.

ಹ್ಯಾಮ್ಲೆಟ್ ರಂಗದ ಮೇಲೆ ಗೆದ್ದಿದ್ದ! ಅಶೋಕ ಒಬ್ಬ ಪ್ರತಿಭಾವಂತ ನಿರ್ದೇಶಕನೆಂಬ ಪ್ರಶಂಸೆಗೆ ಪಾತ್ರನಾದ. ನಾನು ಕನ್ನಡ ರಂಗಭೂಮಿಯಲ್ಲಿ ನಟನಾಗಿ ದಾಖಲಾದೆನಲ್ಲದೆ ‘ಹ್ಯಾಮ್ಲೆಟ್ ಪ್ರಭು’ ಎಂಬ ಬಿರುದನ್ನೂ ಗಳಿಸಿಕೊಂಡೆ ! ಎಲ್ಲ ಕಲಾವಿದರೂ —ಅದರಲ್ಲಿಯೂ ವೈಶಾಲಿ ಕಾಸರವಳ್ಳಿ/ನಳಿನಿ ಅಕ್ಕ, ಸುಂದರ ರಾಜ್ /ವೆಂಕಟೇಶ ಪ್ರಸಾದ್ , ಪದ್ಮಶ್ರೀ/ರೇಖಾ ಹಂದೆ,ಜಯಂತ್—ಇವರುಗಳು ಅದ್ಭುತವಾಗಿ ಅಭಿನಯಿಸಿ ನಾಟಕದ ಪ್ರಚಂಡ ಯಶಸ್ಸಿಗೆ ಕಾರಣರಾದರು.ಚಂದ್ರಕುಮಾರ ಸಿಂಗ್ ಅವರ ಬೆಳಕಿನ ಸಂಯೋಜನೆಯೂ ಸಹಾ ಸೊಗಸಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಪ್ರಜಾವಾಣಿಯಲ್ಲಿ ಬಂದ ವಿಮರ್ಶೆಯ ಕೆಲ ಮಾತುಗಳು ಒಟ್ಟಾರೆ ಜನಾಭಿಪ್ರಾಯವನ್ನು ಪ್ರತಿನಿಧಿಸುತ್ತಾದ್ದರಿಂದ ನಿಮ್ಮ ಜತೆ ಹಂಚಿಕೊಂಡು ಬಿಡುತ್ತೇನೆ:

” ಅಶೋಕ ಬಾದರದಿನ್ನಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಸುಮ್ಮನೆ ಮಣ್ಣುಹೊತ್ತಿಲ್ಲ ಎಂಬುದನ್ನು ಅವರ ಮೊದಲ ಮಹತ್ವಾಕಾಂಕ್ಷೆಯ ‘ಹ್ಯಾಮ್ಲೆಟ್’ ನಾಟಕ ರುಜುವಾತು ಪಡಿಸಿತು…ರಾಮಚಂದ್ರದೇವ ಅವರ ಕನ್ನಡ ಅನುವಾದ ಉದ್ದಕ್ಕೂ ಹೊಸೆದ ಹುರಿಯ ಬಿಗುವಿನಲ್ಲಿ ಸಾಗುತ್ತದೆ..ಹ್ಯಾಮ್ಲೆಟ್ ನ ಮಾತುಗಳ ಝರಿ ಹರಿಯುವ ಈ ನಾಟಕದ ಕೆಲ ಸನ್ನಿವೇಶಗಳನ್ನು “ದೃಶ್ಯ’ವತ್ತಾಗಿ ಕಲ್ಪಿಸಿರುವುದು ನಿರ್ದೇಶಕ ಬಾದರದಿನ್ನಿಯ ಸಾಧನೆ. ಉದಾಹರಣೆಗೆ ಹ್ಯಾಮ್ಲೆಟ್ ಭೂತದೊಡನೆ ಮಾತಾಡುವ ಮೊದಲ ಸನ್ನಿವೇಶದಲ್ಲಿ ಮೇಳದವರನ್ನು ‘ಕ್ರಾಸ್ ‘ಗಳ ಕಲ್ಪನೆ ಬರುವಂತೆ ಆಕಾರ ಕೊಟ್ಟು ನಿಲ್ಲಿಸಿ ಮಂದ ಬೆಳಕು ಕೊಟ್ಟಿದ್ದು; ನಾಟಕದೊಳಗಿನ ನಾಟಕಕ್ಕೆ ‘ಮೈಮ್’ಅನ್ನು ಪರಿಣಾಮಕಾರಿಯಾಗಿ ಬಳಸಿದ್ದು; ಒಫೀಲಿಯಾ ಸತ್ತ ನಂತರ ಅವಳನ್ನು ರುದ್ರಭೂಮಿಗೆ ತರುವ ಸನ್ನಿವೇಶ.. ಮೊದಲಾದವು ಮನಸ್ಸಿನಲ್ಲಿ ನಿಲ್ಲುತ್ತವೆ. ಹ್ಯಾಮ್ಲೆಟ್ ಮತ್ತು ಲಾರ್ಟೆಸ್ ನ ಕತ್ತಿ ಕಾಳಗದಲ್ಲಿ ಮೇಳದವರನ್ನು ಉಪಯೋಗಿಸಿಕೊಂಡ ರೀತಿಯೂ ಪರಿಣಾಮಕಾರಿಯಾಗಿತ್ತು.

ನೆರಳು ಬೆಳಕು ನಿರ್ವಹಿಸಿದ ಚಂದ್ರಕುಮಾರ್ ಸಿಂಗ್ ಬೆನ್ನು ತಟ್ಟಬಹುದು.ಆದರೆ ಮೇಳದ ‘ಥೈದಾದ ಥೈ’ ಸ್ವರ ಮೇಳ ನಾಟಕದಲ್ಲಿ ಮೇಳವಿಸುವುದಿಲ್ಲ…ಆದರೆ ಇವೆಲ್ಲಕ್ಕಿಂತ ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್ಟೇ ಜೀವಾಳ. ಡೆನ್ಮಾರ್ಕಿನ ‘ಪ್ರಭು”ವಾಗಿ ಶ್ರೀನಿವಾಸ ಪ್ರಭು ಉದ್ದಕ್ಕೂ ಪ್ರೇಕ್ಷಕರ ಆಸಕ್ತಿ ತಮ್ಮಲ್ಲಿ ಉಳಿಯುವಂತೆ ಸಾಗಿಸಿಕೊಂಡು ಹೋದರು. ಹ್ಯಾಮ್ಲೆಟ್—ಅನುಮಾನ, ಶಂಕೆ, ಪ್ರತೀಕಾರದ ರೊಚ್ಚು ಮತ್ತು ಅತ್ಯಂತ ಮುಖ್ಯವಾಗಿ ದ್ವಂದ್ವ ಹಾಗೂ ಅದರಿಂದಾಗಿ ಆತನ ವ್ಯಕ್ತಿತ್ವದಲ್ಲಿ ವ್ಯಕ್ತವಾಗುವ ವಿಷಾದ—ಇವೆಲ್ಲವುಗಳ ಮೊತ್ತ.

ಆತ ನಟಿಸುವ ಹುಚ್ಚನ್ನು ವಿಚಿತ್ರ ಲವಲವಿಕೆಯಲ್ಲೂ ರೊಚ್ಚನ್ನು ತಕ್ಕ ವಾಗ್ಝರಿಯಿಂದಲೂ ಪ್ರಭು ಅಸಾಧಾರಣ ರೀತಿಯಲ್ಲಿ ಪ್ರಕಟಿಸಿದರು.ಪ್ರಭು ಜನಪ್ರಿಯ ಹ್ಯಾಮ್ಲೆಟ್ ಆಗುವುದರಲ್ಲಿ ಸಂಶಯವಿಲ್ಲ.ಆದರೆ ಹ್ಯಾಮ್ಲೆಟ್ ನ ದ್ವಂದ್ವದ ತೊಳಲಾಟ, (‘ಇರಲೆ..ಇರದಿರಲೆ..’ ಸ್ವಗತ ಒಂದು ಉದಾಹರಣೆ) ಅದರಿಂದಾಗಿ ವಿಷಾದದ ಪ್ರತಿಮೂರ್ತಿಯಂತೆ ಕಾಣಬೇಕಾದ ರಾಜಕುಮಾರ ಅಷ್ಟಾಗಿ ಪ್ರಭುವಿನಲ್ಲಿ ವ್ಯಕ್ತವಾಗದೆ ಕೊಂಚ ಗ್ಲಾಮರಸ್ ಆದಂತೆ ಅನ್ನಿಸಿತು. ಆದರೆ ಅವರ ಚುರುಕಾದ ನಡೆದಾಟ, ಸಪೂರ ಮಾಟದೇಹ, ಮಾತುಗಳ ಉಚ್ಚಾರದ ಏರು ಇಳಿಯಲ್ಲಿ ಒಬ್ಬ ಒಳ್ಳೆಯ ನಟನನ್ನು ಕಾಣಬಹುದು. ಉಳಿದವರಲ್ಲಿ ಸುಂದರ ರಾಜ್ ಗಮನ ಸೆಳೆದರು. ನಳಿನಿ ಮೂರ್ತಿ ಕೆಲವು ಭಾವೋತ್ಕಟ ಸನ್ನಿವೇಶಗಳಲ್ಲಿ ಮಿಂಚಿದರು. ಶೇಕ್ಸ್ ಪಿಯರ್ ಎಂದರೆ ಕನ್ನಡ ರಂಗಭೂಮಿಯಲ್ಲಿ ಹೆದರಿಕೊಳ್ಳಬೇಕೆಂಬ ಅನಿಸಿಕೆಯನ್ನು ‘ಹ್ಯಾಮ್ಲೆಟ್’ ತೊಡೆದುಹಾಕುತ್ತದೆ.”

ಹೀಗೆ ‘ಹ್ಯಾಮ್ಲೆಟ್’ ನಾಟಕ ಹಾಗೂ ಪಾತ್ರನಿರ್ವಹಣೆಯ ಪ್ರಚಂಡ ಯಶಸ್ಸಿನಿಂದ ಉತ್ತೇಜಿತನಾದ ನಾನು ಖುಷಿಯಿಂದ ಬೀಗುತ್ತಾ ‘ಉದ್ಭವ’ ನಾಟಕದ ತಾಲೀಮು ಪ್ರಾರಂಭಿಸಿದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

17 March, 2022

1 Comment

  1. T S SHRAVANA KUMARI

    ಹ್ಯಾಮ್ಲೆಟ್ ನಾಟಕದ ಸೊಗಸಾದ ವಿವರಣೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading