ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿಕ್ಷಕಿಯ ಬೈಕಿನ ಸೀಟನ್ನೇ ಕತ್ತರಿಸಿ ಹಾಕಿದ್ದರು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 25

ಆಶ್ರಮದ ಋಣ

avadhi-column-rahul bw-edited2

ಸೋಮವಾರ ಬೆಳಗ್ಗೆ ಮೂವರಿಗೂ ಅಗಲುವ ವೇದನೆ. ನನಗೂ ಅವರ ಸಖ್ಯ ತುಂಬಾ ಇಷ್ಟವಾಗಿತ್ತು. ಯಾರೂ ಮಾತಾಡಲಿಲ್ಲ. ಸುಮ್ಮನೆ ತಿಂಡಿ ತಿಂದು ನಮ್ಮ ನಮ್ಮ ದಾರಿ ಹಿಡಿದೆವು. ನನ್ನ ವಿಳಾಸ, ದೂರವಾಣಿ ಸಂಖ್ಯೆ ಕೊಟ್ಟು ಮೈಸೂರಿಗೆ ಬರುವಂತೆ ಆಮಂತ್ರಿಸಿ ಅಲ್ಲಿಂದ ಹೊರಟು ಕೊಡಿಹಾಳದ ಶ್ರೀ ಬಸವೇಶ್ವರ ಪ್ರೌಢಶಾಲೆಯನ್ನು ತಲುಪಿದೆ. ಎಂದಿನಂತೆ ಶಾಲೆಯ ಪ್ರಾರ್ಥನೆ ನಂತರ ಮಕ್ಕಳಿಗೆ ಉಪನ್ಯಾಸ ಕೊಟ್ಟು ಮುಗಿಸಿದೆ. ಇಬ್ಬರು ಮುಸಲ್ಮಾನ ಮಕ್ಕಳು ಚಂದವಾಗಿ ಕನ್ನಡದಲ್ಲಿ ಮಾತನಾಡಿ ನಾಟಕವಾಡಿದರು. ಮುಸಲ್ಮಾನ ಮಕ್ಕಳು ಕನ್ನಡ ಮಾತನಾಡುವುದನ್ನು ಕೇಳುವುದೇ ಚೆಂದ. ಶಿಕ್ಷಕರಾದ ಸುರಲಿಂಗಯ್ಯನವರು ಸುಭಾಷ್‍ಚಂದ್ರ  ಬೋಸ್‍ರವರ ಜೀವನ ಕಥೆಯ ಒಂದು ಪುಸ್ತಕವನ್ನು ನನಗೆಕೊಟ್ಟು ಗೌರವಿಸಿ ಬೀಳ್ಕೊಟ್ಟರು.

avadhi- column- rahul- low res- editedಭದ್ರಾ ನದಿಯ ಸೇತುವೆಯನ್ನು ದಾಟಿ ರಾಘವೇಂದ್ರ ಮಠದ ಎದುರಿಗೆ, ಸೇತುವೆಯ ಬಲಕ್ಕೆ ಇರುವ ಬಾಪೂಜಿ ಪ್ರೌಢಶಾಲೆಯನ್ನು ತಲುಪಿದೆ. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮೊದಲು ಅವಕಾಶಕೊಡಲು ಆಗುವುದಿಲ್ಲವೆಂದು ಕಿರಿಕಿರಿ ಮಾಡಿದರು. ನಾನೂ ಕೂಡ ಸಾಧ್ಯವಾದಷ್ಟು ವಿನಂತಿಸಿಕೊಂಡು ಹೊರಡಲು ಸಿದ್ಧನಾಗಿದ್ದೆ. ಅಷ್ಟರಲ್ಲಿ ಶಿಕ್ಷಕರೊಬ್ಬರು ಬಂದು ಮುಖ್ಯೋಪಾಧ್ಯಾಯರನ್ನು ಒಪ್ಪಿಸಿ ಎರಡು ತರಗತಿಯ ಮಕ್ಕಳನ್ನು ಒಟ್ಟಿಗೆ ಸೇರಿಸಿ ನನಗೆ ಉಪನ್ಯಾಸ ಮಾಡಲು ಅವಕಾಶ ಮಾಡಿಕೊಟ್ಟರು.

ಉಪನ್ಯಾಸ ಭರ್ಜರಿಯಾಗಿ ನಡೆಯಿತು. ಶಿಕ್ಷಕರನ್ನೂ ಸೇರಿ ವಿದ್ಯಾರ್ಥಿಗಳು ಕೆಲವು ಪ್ರಶ್ನೆಗಳನ್ನು ಕೇಳಿ ಬಗೆಹರಿಸಿಕೊಂಡರು. ಎಲ್ಲರಿಗೂ ಉಪನ್ಯಾಸ ಒಪ್ಪಿಗೆಯಾಯಿತು. ನಂತರ ಶಾಲೆಯಲ್ಲಿ ಮಕ್ಕಳ ಜೊತೆಯಲ್ಲೇ ಕುಳಿತು ಊಟಮಾಡಿ ಅಲ್ಲಿಂದ ಮುಂದಿನ ಶಾಲೆಗೆ ಹೊರಟೆ. ಇನ್ನೂ ಮಿಕ್ಕ ಮಕ್ಕಳಿಗೆ ನನ್ನ ಉಪನ್ಯಾಸ ಕೊಡಿಸಬಹುದಿತ್ತು ಎಂದು ಶಿಕ್ಷಕರಿಗೆ ಎಂದೆನಿಸದಿರಲಿಲ್ಲ.

ಅಲ್ಲಿಂದ ಹೊರಟು ನೇರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣವನ್ನು ಹೊಕ್ಕು ಮುಖ್ಯಸ್ಥರಿಂದ ಅವಕಾಶ ಪಡೆದು ಉಪನ್ಯಾಸಕೊಟ್ಟು ಮುಗಿಸಿದೆ. ಉಪನ್ಯಾಸದುದ್ದಕ್ಕೂ ರಾಜಿಃಯಾ ಹಾಗೂ ಅಂಜಲಿ ಎಂಬ ಹುಡುಗಿಯರಿಬ್ಬರೇ ಎಲ್ಲಾ ಹಂತಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಭಾಗವಹಿಸಿ ನನ್ನ ಮನಗೆದ್ದರು. ಅಂಜಲಿ ಅಂತೂ ಆಲ್ರೌಂಡ್ ಪ್ರದರ್ಶನ ಕೊಟ್ಟಳು. ಅವಳು ಕೇಳುತ್ತಿದ್ದ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲು ಹೆಣಗಾಡುತ್ತಿದ್ದೆ. ಇಬ್ಬರಿಗೂ ಪೆನ್ನು ಮತ್ತು ಒಂದು ಕಿರು ಪುಸ್ತಕವನ್ನು ಉಡುಗೆರೆಯಾಗಿ ಕೊಟ್ಟು ಗೌರವಿಸಿದೆ.

ಅಂಜಲಿ ಒಂದು ಕಡುಬಡತನದಿಂದ ಶಿಕ್ಷಣ ಪಡೆಯುತ್ತಿರುವ ಹುಡುಗಿ. ಪ್ರತೀ ದಿನವೂ ಶಾಲೆಗೆ ಬರುವ ಮುನ್ನ ಎರಡು ಮನೆಯಲ್ಲಿ ಕೆಲಸಮಾಡಿ ಬರಬೇಕು. ಅಬ್ಬಾ, ಹುಡುಗಿಯೆಂದರೆ ಅವಳ ತರಹ ಇರಬೇಕು. ಅವಳೇನಾದರು ಒಪ್ಪಿದರೆ ನಾನೇ ಅವಳನ್ನು ದತ್ತು ಪಡೆದು ಶಿಕ್ಷಣಕೊಡಿಸುವ ಇಂಗಿತವನ್ನು ಮುಖ್ಯೋಪಾಧ್ಯಾಯರ ಹತ್ತಿರ ತಿಳಿಸಿದೆ. ಮಕ್ಕಳಿಗೆ ಪರಿಸರ ದಿನಾಚರಣೆ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ತಿಳಿಸಿ ಅದನ್ನು ಸರಿಪಡಿಸಲು ಪ್ರಯತ್ನಿಸಿದೆ. ನಾನು ಕೇಳಿದೆ.

“ಈಗ ಏನು ಆಗ್ತಾ ಇದೆ. ನಾವು ಬರೀ ಪರಿಸರ ದಿನಾಚರಣೆಯ ದಿನದಲ್ಲಿ ಮಾತ್ರ ಕೆಲವು ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಕಾಳಜಿ ಮೆರೆಯುತ್ತೇವೆ. ಆನಂತರ ನಮ್ಮ ಕಾಳಜಿ ಮಾಯವಾಗುತ್ತದೆ, ನೆಟ್ಟ ಸಸಿಗಳು ಕಾಲ ಕ್ರಮೇಣ ಸಾಯುತ್ತವೆ. ಇದು ಆಗುತ್ತಿರುವುದು ಪರಿಸರ ದಿನಾಚರಣೆ ಬಗ್ಗೆ ಇರುವ ತಪ್ಪು ಗ್ರಹಿಕೆಯಿಂದ. ಈಗ ನನ್ನದೊಂದು ಪ್ರಶ್ನೆ? ಇವತ್ತು ಯಾವ ದಿನ?”

“ಸೋಮವಾರ ಸರ್” ಎಂದು ಕೂಗಿದರು.

“ಸೋಮವಾರ ಸರೀ ರೀ. ಈ ದಿನವನ್ನು ಯಾವ ದಿನವನ್ನಾಗಿ ಆಚರಿಸುತ್ತಿದ್ದೀರ?”

“ಸ್ನೇಹಿತರ ದಿನಾಚರಣೆ ಸರ್” ಎಂದರು.

“ಹಾಂ ಸ್ನೇಹಿತರ ದಿನ, ಈಗ ಇವತ್ತು ಮಾತ್ರ ನಮ್ಮ ಸ್ನೇಹಿತರನ್ನು ಅಭಿನಂದಿಸಿ, ಪ್ರೀತಿಸಿ. ನಾಳೆಯಿಂದ ಅವರನ್ನು ಮರೆತೇ ಬಿಡುತ್ತೇವಾ?” ಎಂಬ ಪ್ರಶ್ನೆ ಇಟ್ಟೆ.

“ಇಲ್ಲಾ ಸರ್” ಎಂದರು.

“ಹಾಂ, ಅದೇ ತರಹ ತಾಯಂದಿರ ದಿನಾಚರಣೆ. ಅವತ್ತು ಒಂದು ದಿನ ತಾಯಿಯನ್ನು ಪ್ರೀತಿಸಿ, ಪೂಜಿಸಿ, ಗೌರವಿಸಿ ನಂತರ ಮುಂದಿನ ವರ್ಷದ ತಾಯಂದಿರ ದಿನಾಚರಣೆ ಬರುವ ತನಕ ಮರೆತುಬಿಡುತ್ತೇವೆ ಏನು?” ಎಂದು ಕೇಳಿದೆ.

“ಇಲ್ಲಾ ಸರ್” ಎಂದರು.

“ಹಾಂ. ಯಾವ ದಿನಾಚರಣೆಗಳು ಹಾಗೆ. ವರ್ಷವಿಡೀ ಆಚರಣೆ ಇರಬೇಕು. ವರ್ಷವಿಡೀ ಮಾಡಿದ ಕೆಲಸಕ್ಕೆ ಆ ಒಂದು ದಿನ ಹಬ್ಬದ ರೀತಿ ಆಚರಿಸಬೇಕು. ಪರಿಸರ ದಿನಾಚರಣೆಯೂ ಹಾಗೆಯೇ. ವರ್ಷವಿಡೀ ಪರಿಸರದ ಬಗ್ಗೆ ಕಾಳಜಿ ಇಟ್ಟು ಶ್ರದ್ಧೆಯಿಂದ ಕೆಲಸಮಾಡಬೇಕು. ಪರಿಸರ ದಿನಾಚರಣೆಯ ದಿನ ಯಾವ ಸಸಿಯನ್ನೂ ನೆಡದೇ, ಈಗಾಗಲೇ ನೆಟ್ಟು ಬೆಳೆದಿದ್ದ ಗಿಡಮರಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡು, ತಮ್ಮ ಕೆಲಸದ ಯಶಸ್ಸನ್ನು ಸಿಹಿ ಹಂಚಿ ಆಚರಿಸಬೇಕು. ಗೊತ್ತಾಯಿತಾ?” ಎಂದು ವಿವರಿಸಿದೆ.

“ಹೂಂ ಸರ್” ಎಂದರು.

“ಇನ್ನು ಮೇಲೆ ಇದೇ ತರಹ ಮಾಡುತ್ತೀರ ತಾನೆ?” ಎಂದು ಕೇಳಿದೆ.

“ಹೂಂ ಸಾರ್” ಎಂದು ಒಕ್ಕೊರಲಿನಿಂದ ಉತ್ತರಿಸಿದರು.

“ಹಾಗಾದರೆ. ನಮ್ಮ ಉಪನ್ಯಾಸ ಮುಕ್ತಾಯವಾಯಿತು. ಧನ್ಯವಾದಗಳು. ಶುಭದಿನ” ಎಂದು ಹೇಳಿ ಹೊರಟೆ.

ecologyದಾವಣಗೆರೆ ತಲುಪಬೇಕಿದ್ದ ನನಗೆ ಯಾಕೋ ರಾಮಕೃಷ್ಣಾಶ್ರಮದ ಋಣ ಇನ್ನೂ ತೀರಿರಲಿಲ್ಲ ಎನಿಸಿತು. ವಿಳಾಸ ನೆನಪಿದ್ದರಿಂದ, ಶಾಲೆಯಿಂದ ನೇರ ಆಶ್ರಮಕ್ಕೆ ಹೋದೆ. ಸ್ವಾಮೀಜಿ ನನ್ನ ಕಂಡು ತುಂಬಾ ಖುಷಿಯಾಗಿ ಅಲ್ಲಿದ್ದ ಭಕ್ತರಿಗೆ ಪರಿಚಯ ಮಾಡಿಸಿದರು. ಅಲ್ಲಿಗೆ ಬಂದಿದ್ದ ದಂಪತಿಯ ಮಗ ತಬಲ ನುಡಿಸಿ, ಮಗಳು ಹಾರ್ಮೋನಿಯಂ ನುಡಿಸಿ ಒಂದು ಚಿಕ್ಕ ಸಂಗೀತ ಕಚೇರಿ ನಡೆಸಿದರು. ನನಗಂತೂ ಅವರ ಮುದ್ದು ಗಾಯನವನ್ನು ಕಂಡು ಖುಷಿಯೋ ಖುಷಿ. ಆ ಮಕ್ಕಳನ್ನು ಕರೆದು ನನ್ನಲ್ಲಿದ್ದ ನೂರು ರೂಪಾಯಿ ಕೊಟ್ಟು ಆನಂದಿಸಿದೆ. ಆಶ್ರಮದಲ್ಲೇ ರಾತ್ರಿಯ ಹೋಳಿಗೆ ಊಟ ಮುಗಿಸಿ ಮಾತಾಡಿಕೊಂಡು ಮಲಗಿದೆವು.

ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಆಶ್ರಮದ ಬೆಳಗಿನ ಪೂಜೆ, ಭಜನೆಯಲ್ಲಿ ಪಾಲ್ಗೊಂಡೆ. ನಾನು ಸ್ವಾಮೀಜಿಯವರು ಇಬ್ಬರೇ ಇದ್ದ ಕಾರಣ, ನಾನು ಕೂಡ ಅವರ ರಾಗಕ್ಕೆ ರಾಗ ಸೇರಿಸಿ, ತಾಳಕ್ಕೆ ತಾಳ ಸೇರಿಸಿ ಹಾಡಿ ಖುಷಿಪಟ್ಟೆ. ಪಾರ್ಥನೆಯಾದ ನಂತರ ಗುರುಗಳು ನನ್ನನ್ನು ಉದ್ದೇಶಿಸಿ ಮಾತನಾಡಿ “ನೀನು ಹೇಗೆ ಪ್ರಕೃತಿಯನ್ನು ದೇವರು ಎಂದು ಸ್ವೀಕರಿಸಿದ್ದೀಯೋ ಅದೇ ರೀತಿ ನಿನಗೆ ನಿನ್ನ ಗುರಿ ಮುಟ್ಟಲು ಒಬ್ಬ ಗುರು ಬೇಡವೇ? ನಿನಗೆ ಗುರುವನ್ನು ದಯಪಾಲಿಸಲು ಆ ದೇವರೇ ನಿನ್ನನ್ನು ಮತ್ತೆ ಈ ಆಶ್ರಮಕ್ಕೆ ಕರೆತಂದಿದ್ದಾನೆ ಎಂಬುದು ನನ್ನ ವಾದ” ಎಂದರು. ನಾನು ಸಮ್ಮತಿಸಿದೆ.

ಅವರು ಪುಸ್ತಕಗಳ ಕೊಠಡಿಗೆ ಹೋಗಿ, ತಮ್ಮ ಕೈಯಲ್ಲಿ ಹಲವಾರು ವಿವೇಕಾನಂದರ ಪುಸ್ತಕಗಳನ್ನು ತಂದು, “ದಿನವೂ ಬೆಳಗ್ಗೆ ಬೇಗನೆ ಎದ್ದು ಸ್ವಲ್ಪ ಹೊತ್ತು ಧ್ಯಾನ ಮಾಡಿ, ನಾನು ಕೊಡುವ ಈ ವಿವೇಕಾನಂದರ ಪುಸ್ತಕಗಳನ್ನು ಓದಲು ಶುರುಮಾಡು. ವಿವೇಕಾನಂದರು ನಿನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಒದಗಿಸಿ ನಿನಗೆ ನಿನ್ನ ಗುರಿ ಮುಟ್ಟಲು ಮಾರ್ಗದರ್ಶನ ಮಾಡುತ್ತಾರೆ. ವಿವೇಕಾನಂದರನ್ನು ನಿನ್ನ ಗುರುವನ್ನಾಗಿ ಸ್ವೀಕರಿಸು. ನಿನಗೆ ಒಳ್ಳೆಯದಾಗಲಿ” ಎಂದು ಒಟ್ಟು ಆರು ಪುಸ್ತಕಗಳನ್ನು ನನ್ನ ಕೈಗಿಟ್ಟರು. ಪೂಜಾಳಿಗೂ ಕೊಡುವಂತೆ ಒಂದು ಪುಸ್ತಕವನ್ನು ಕೊಟ್ಟರು.

ನನಗೆ ಖುಷಿಕೊಟ್ಟ ವಿಷಯವೇನೆಂದರೆ, ಅವರು ಕೂಡ ನನ್ನಿಂದ ಪ್ರೇರಿತರಾಗಿ, ತಾವು ಕೂಡ ಯಾತ್ರೆ ಹೊರಟು ರಾಮಕೃಷ್ಣ ಪರಮಹಂಸರ ಮತ್ತು ವಿವೇಕಾನಂದರ ಪುಸ್ತಕಗಳನ್ನು ಊರೂರು ಅಲೆದು ಮಾರಾಟ ಮಾಡಿ, ಅವರುಗಳ ಬಗ್ಗೆ ಪ್ರಚಾರ ಕಾರ್ಯ ಹಮ್ಮಿಕೊಳ್ಳಲು ಯೋಚಿಸುತ್ತಿದ್ದರು. ಅಲ್ಲಿಯೇ ಬೆಳಗಿನ ತಿಂಡಿ ತಿಂದು ಹರಿಹರದ ದ.ರಾ.ಮಾ ಪ್ರೌಢಶಾಲೆಯನ್ನು ಹುಡುಕಿಕೊಂಡು ಹೊರಟೆ.

ಆವರಣದಲ್ಲಿ ನಿಂತು ನೋಡಿದರೆ ಪ್ರೌಢಶಾಲೆ, ಕಾಲೇಜು ಎಲ್ಲಾ ಒಂದೇ ಕಡೆ ಇದ್ದರಿಂದ, ಎಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ನಾಲ್ಕು ದಿಕ್ಕಿನಿಂದ ಜನ ಓಡಾಡುತ್ತಿದ್ದರು. ಪ್ರೌಢಶಾಲೆಯ ಕಥೆ ನೋಡಿದರೆ ಅಲ್ಲಿ ಕೂಡ ಕನ್ನಡ, ಆಂಗ್ಲ ಮತ್ತು ಉರ್ದು ಮಾಧ್ಯಮಗಳಿವೆ. ಎಲ್ಲವೂ ಅಯೋಮಯ. ಶಾಲೆಯ ಮುಖ್ಯೋಪಾಧ್ಯಾಯರು ರಜೆಯಲ್ಲಿದ್ದುದರಿಂದ ಉಳಿದಿದ್ದ ಶಿಕ್ಷಕ ಮಹಾಶಯರನ್ನು ಭೇಟಿ ಮಾಡಿ ನನ್ನ ಉಪನ್ಯಾಸಕ್ಕೆ ಸಮಯ ಗಿಟ್ಟಿಸಿಕೊಂಡೆ. ಪಾರ್ಥನೆಯ ನಂತರ ಹತ್ತು ಹದಿನೈದು ನಿಮಿಷ ಬರೀ ಧ್ವನಿವರ್ದಕವನ್ನು ಸರಿ ಮಾಡುವುದರಲ್ಲೇ ಹಾಳುಮಾಡಿದರು. ನನಗೆ ಧ್ವನಿವರ್ಧಕ ಬೇಡವೆಂದು ಎಷ್ಟು ಹೇಳಿದರೂ ಕೇಳಲಿಲ್ಲ.

ನನ್ನ ಉಪನ್ಯಾಸ ಶುರುವಾಗುವ ಹೊತ್ತಿಗೆ, ಮಕ್ಕಳಲ್ಲಿ ಉತ್ಸಾಹ ಕಳೆದು ಹೋಗಿತ್ತು. ಶಾಲೆಯ ವಿದ್ಯಾರ್ಥಿಗಳು ಉಪನ್ಯಾಸದ ವೇಳೆ ತುಂಬಾ ಗಲಾಟೆ ಮಾಡಿಬಿಟ್ಟರು. ಶಿಕ್ಷಕರು ಕೈಚೆಲ್ಲಿ ಕುಳಿತರು. ಎಲ್ಲರನ್ನೂ ನನ್ನ ಏರು ಧ್ವನಿಯಲ್ಲಿ ಹಿಡಿದಿಟ್ಟುಕೊಂಡು ನನ್ನ ಉಪನ್ಯಾಸ ಮುಗಿಸುವಷ್ಟರಲ್ಲಿ ನನಗೆ ರೋಸಿಹೋಗಿತ್ತು. ಇಲ್ಲೂ ಕೂಡ ಪ್ರೌಢಶಾಲಾ ಮಕ್ಕಳು ಅದೇ ಆವರಣದಲ್ಲಿದ್ದ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಭಾವಿತರಾಗಿದ್ದರು. ಅದೂ ಒಂದು ಮುಖ್ಯ ಕಾರಣ. ಈ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡ ಎಂಬತ್ತು ಪ್ರತೀಶತ ಮಕ್ಕಳು, ಬೇರೆ ಖಾಸಗಿ ಶಾಲೆಗಳಿಂದ ವಜಾ ಆಗಿಯೋ ಅಥವಾ ವರ್ಗಾವಣೆ ಪಡೆದೋ ಬಂದಿರುತ್ತಾರೆ. ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿವರೆಗೆ ಇದ್ದು, ಅಲ್ಲಿ ಸರಿಯಾಗಿ ಓದದೆ, ದಾಂಧಲೆ ಮಾಡಿ, ಕೆಟ್ಟ ಹೆಸರು ಪಡೆದುಕೊಂಡು, ಸರ್ಕಾರಿ ಶಾಲೆಗಳಿಗೆ ವರ್ಗಾವಣೆಗೊಂಡಿರುತ್ತಾರೆ.

ಖಾಸಗಿ ಶಾಲೆಗಳ ಬುದ್ಧಿವಂತಿಕೆ ನೋಡಿ, ಒಂದರಿಂದ ಎಂಟನೇ ಅಥವಾ ಒಂಬತ್ತನೇ ತರಗತಿಯ ತನಕ ಇಂತಹ ಮಕ್ಕಳಿಂದ ಹಣ ಪಡೆದು ಉಂಡು ತೇಗಿ ನೀರು ಕುಡಿದು, ಕೊನೆಗೆ ಈ ತುಂಟ ಮಕ್ಕಳನ್ನು ಯಾವಾಗ ತಿದ್ದಲು ಸಾಧ್ಯವೇ ಇಲ್ಲ ಎಂದು ಗೊತ್ತಾದ ತಕ್ಷಣ, ಸರ್ಕಾರಿ ಶಾಲೆಗಳಿಗೆ ಹೋಗಿ ಸೇರುವಂತೆ ವರ್ಗಾವಣೆ ಪತ್ರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಇದು ಈ ಒಂದು ಸರ್ಕಾರಿ ಶಾಲೆಯ ಕಥೆಯಲ್ಲ, ಎಲ್ಲಾ ನಗರ ಪಟ್ಟಣಗಳಲ್ಲಿ ನಡೆಯುತ್ತಿರುವ ಸಾಮಾನ್ಯ ಸಂಗತಿ ಎಂದು ಶಿಕ್ಷಕರು ಮನಸ್ಸು ಬಿಚ್ಚಿ ಮಾತನಾಡಿದರು. ನಂತರ ಶುರುವಾದ ಮಳೆಯಲ್ಲೇ  ನಡೆದುಕೊಂಡು ಹೊರಟು, ಹೆದ್ದಾರಿ ಹಿಡಿದು ಎಡಕ್ಕೆ ತಿರುಗಿ ಶ್ಯಾಮನೂರಿನ ಕಡೆಗೆ ನಡೆದುಕೊಂಡು ಹೊರಟೆ. ಮಾರ್ಗ ಮಧ್ಯೆ ಟ್ರ್ಯಾಕ್ಟರ್‍ನಲ್ಲಿ ಹೋಗುತ್ತಿದ್ದ ಒಬ್ಬ ಯುವಕ, ತನ್ನ ಗಾಡಿಯಲ್ಲಿ ನನ್ನನ್ನು ಒಂದೆರಡು ಮೈಲು ಕರೆದು ತಂದು ಬಿಟ್ಟ.

globeಶ್ಯಾಮನೂರಿನ ಸರ್ಕಾರಿ ಪ್ರೌಢಶಾಲೆಯನ್ನು ತಲುಪಿದಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಮೊದಲು ಕಿರಿಕಿರಿ ಮಾಡಿದ ಮುಖ್ಯೋಪಾಧ್ಯಾಯರು, ನಂತರ ಆ ದಿನದ ಕೊನೆಯ ಪಾಠದ ಸಮಯದಲ್ಲಿ ನನ್ನ ಉಪನ್ಯಾಸವನ್ನು ಕೊಡುವಂತೆ ಸೂಚಿಸಿ ತಮ್ಮ ಸ್ವಂತ ಕೆಲಸದ ಮೇಲೆ ನಿರ್ಗಮಿಸಿದರು. ಅಲ್ಲಿಯ ವಿಜ್ಞಾನ ಶಿಕ್ಷಕಿ ತುಂಬಾ ಲವಲವಿಕೆಯಿಂದ ಓಡಾಡಿಕೊಂಡು ತಮ್ಮ ಶಾಲೆಯ ಇಕೋ-ಕ್ಲಬ್ ವತಿಯಿಂದ ನನ್ನ ಉಪನ್ಯಾಸಕ್ಕೆ ಅನುವುಮಾಡಿಕೊಟ್ಟರು.

ಎರಡು ಗಂಟೆ ಕಾಯ್ದು ಉಪನ್ಯಾಸಕೊಡಲು ಹೋದರೆ ಶಾಲೆಯ ಮಕ್ಕಳು ಗಲಾಟೆ, ಶಿಳ್ಳೆ, ಕೇಕೆ ಹಾಕಿ ನನಗೆ ಸ್ವಾಗತ ಕೋರಿದರು. ವಿಜ್ಞಾನದ ಶಿಕ್ಷಕಿಯ ಕೋಪದ ಕಟ್ಟೆ ಒಡೆಯಿತು. ಶಾಲೆಗೆ ಬಂದ ಅತಿಥಿಯನ್ನು ಹೀಗೆ ಅವಮಾನ ಮಾಡುತ್ತೀರ? ಎಂದು ಜೋರು ಮಾಡಿದರು. ಇನ್ನೊಬ್ಬ ಶಿಕ್ಷಕಿಯು ತನ್ನ ಬೈಕಿನ ಸೀಟನ್ನು ವಿದ್ಯಾರ್ಥಿಗಳು ಕತ್ತರಿಸಿದ್ದರಿಂದ ಕೋಪಗೊಂಡು ಬಯ್ದರು. ಉಪನ್ಯಾಸದ ಶುರುವಿನಿಂದ ಕೊನೆಯವರೆಗೂ ಪರಿಸರ ಜಾಗೃತಿಯ ಜೊತೆ ನೀತಿ ಪಾಠವನ್ನೂ ಕೂಡ ಹೇಳಿ ಆ ಮಕ್ಕಳನ್ನು ಸುಧಾರಿಸಲು ಪ್ರಯತ್ನ ಪಟ್ಟೆ. ಉಪನ್ಯಾಸ ಮುಗಿದ ನಂತರ ಶಾಲೆಯ ಶಿಕ್ಷಕರು ಬಂದು ವಿದ್ಯಾರ್ಥಿಗಳ ನಡತೆಯಿಂದ ತಮಗೆ ಬೇಜಾರಾಗಿದ್ದರೆ ಕ್ಷಮಿಸಿ ಎಂದು ನನ್ನ ಕ್ಷಮೆ ಕೇಳಿದರು.

ಮುಂದಿನ ಊರಾದ ಶಿರಮಗೊಂಡನಹಳ್ಳಿಗೆ ಹೋಗಿ ಉಳಿಯೋಣವೆಂದುಕೊಂಡೆ. ಅಷ್ಟರಲ್ಲಿ ಶಾಲೆಯ ಸಹಾಯಕರಾದ ಚೆನ್ನಬಸವರಾಜ್‍ರವರು ತಾವೇ ನನಗೆ ವ್ಯವಸ್ಥೆ ಮಾಡುವುದಾಗಿ ಹೇಳಿ ದಾವಣಗೆರೆಯಲ್ಲೇ ಉಳಿಸಿಕೊಂಡರು. ಅವರ ಸ್ನೇಹಿತೆಯಾದ ಪ್ರೌಢಶಾಲೆಯ ಶಿಕ್ಷಕಿ ಅನುಸೂಯರವರ ಮನೆಗೆ ಹೋಗಿ ಅವರು ಕೊಟ್ಟ ಉಪ್ಪಿಟ್ಟು ತಿಂದು, ಚಹಾ ಕುಡಿದೆವು. ಅನುಸೂಯ ಅಂಗವಿಕಲೆಯಾದರೂ ಬಹುಮುಖ ಪ್ರತಿಭೆ. ಅವರುಬರೆದ “ಕಲ್ಪನೆಯ ಕೂಸು” ಎಂಬ ಕವನ ಸಂಕಲನ ಪುಸ್ತಕವನ್ನು ನನಗೆ ಉಡುಗೊರೆಯಾಗಿ ಕೊಟ್ಟು, ಪುಸ್ತಕ ಮುದ್ರಣದ ಬಗ್ಗೆ ಕೆಲವು ಮಾಹಿತಿ ಕೊಟ್ಟರು.

ಅವರ ಮನೆಯನ್ನು ಬಿಟ್ಟು ತಮ್ಮ ಸ್ನೇಹಿತ, ಶಿಕ್ಷಣ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ರೇವಣ್ಣಸಿದ್ದೇಶ್ವರರವರ ಮನೆಗೆ ತಲುಪಿ, ಅವರ ಮನೆಯ ಎರಡನೇ ಅಂತಸ್ತಿನಲ್ಲಿರುವ ಅವರ ಮಗ ರಂಜಿತ್‍ನ ಕೋಣೆಯಲ್ಲಿ ಉಳಿದುಕೊಳ್ಳುವಂತೆ ಸೂಚಿಸಿ ಚೆನ್ನಬಸವರಾಜ್‍ರವರು ತಮ್ಮ ಮನೆಗೆ ಹೊರಟರು. ರಂಜಿತ್ ಮನೆಯವರೂ ಕೂಡ, ನನಗೆ ರಾತ್ರಿಯ ಊಟಕ್ಕೆ ರಾಗಿಮುದ್ದೆ, ಹೋಳಿಗೆ ಕೊಟ್ಟು ಸತ್ಕರಿಸಿದರು. ಬಟ್ಟೆ ಒಗೆದು, ಪೂಜಾಳ ಜೊತೆ ದೂರವಾಣಿಯಲ್ಲಿ ಮಾತನಾಡಿ, ಮಲಗುವ ಮುನ್ನ ರಂಜಿತ್‍ನಿಗೆ ನನ್ನ ಈ ಪ್ರಯಾಣದ ಕಥೆಯನ್ನು ಹೇಳಿ, ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಕೆಲವು ಸಲಹೆಗಳನ್ನು ಕೊಟ್ಟು ನಿದ್ರೆಗೆ ಜಾರಿದೆ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 194 ಮೈಲುಗಳು]

‍ಲೇಖಕರು admin

8 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading