ರಜನಿ ಅಮ್ಮೆಂಬಳ
ಕೆ.ಎಸ್.ನರಸಿಂಹಸ್ವಾಮಿಯವರ “ಶಾನುಭೋಗರ ಮಗಳು” ಕವನದಲ್ಲಿ ಚಿತ್ರಣಗೊಂಡಿರುವ ಹುಡುಗಿ ನಮಗೆ ಬಲು ಗುರ್ತಿನವಳು. ತನ್ನ ಸಂಕೋಚದಿಂದ, ಕಡಿಮೆ ಮಾತುಗಳಿಂದ ಮತ್ತು ಇಷ್ಟವಿಲ್ಲದ್ದನ್ನು ಒಲ್ಲೆನೆಂಬ ನೇರವಂತಿಕೆಯಿಂದಲೇ ಮನಸ್ಸು ಗೆಲ್ಲುವ ಹುಡುಗಿ ಆಕೆ.
ತಾಯಿಯಿಲ್ಲದ ಆ ಹುಡುಗಿಯ ಬಗ್ಗೆ ಅಕ್ಕರೆಯಿಂದ ವರ್ಣಿಸುವ ಕವಿ, ತಾವರೆಕೆರೆಯ ಜೋಯಿಸರ ಮೊಮ್ಮಗ ಆಕೆಯನ್ನು ನೋಡಲು ಅವರ ಮನೆಗೆ ಬಂದಾಗಿನ ಪ್ರಸಂಗವನ್ನು ಹೇಳುತ್ತಾರೆ. ಆಕೆ ಕೋಣೆಯೊಳಗಿಂದಲೇ “ವೈದಿಕರ ಮನೆಯಲ್ಲಿ ಊಟ ಹೊತ್ತಾಗುತ್ತೆ, ಒಲ್ಲೆ” ಎಂದುಬಿಡುತ್ತಾಳೆ.
ಆದರೆ ನಿಜವಾಗಿಯೂ ಅವಳು ಈ ಸಂಬಂಧ ನಿರಾಕರಿಸಲು ಕಾರಣ ಅದಾಗಿರುವುದಿಲ್ಲ. ತನ್ನನ್ನು ನೋಡಲು ಬಂದಿದ್ದ ಆ ಗಂಡು, ಕೂದಲಿಗಿಂತ ಕಪ್ಪು ಎಂಬ ಕಾರಣದಿಂದಾಗಿ ಅವನನ್ನು ತಿರಸ್ಕರಿಸುತ್ತಾಳೆ. ಆದರೆ ಯಾರಿಗೂ ನೋವಾಗದಂಥ ಕಾರಣ ಹೇಳುವ ಜಾಣತನವನ್ನು ತೋರಿಸುತ್ತಾಳೆ.
ಈ ಹುಡುಗಿಯ ತಂದೆ ಶಾನುಭೋಗರು ಕೂಡ ಮಗಳ ಬಗ್ಗೆ ಬಲು ವಾತ್ಸಲ್ಯವುಳ್ಳವರು. ಅದಕ್ಕಿಂತ ಹೆಚ್ಚಾಗಿ ಅವಳ ಭಾವನೆಗಳ ಬೆಲೆಯನ್ನರಿತವರು. ಕವಿ ಹೇಳುತ್ತಾರೆ- “ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ.” ಅಲ್ಲಿಗೆ, ಅವಳ ಮಾತೇ ಅಂತಿಮ, ತಾನು ಮತ್ತೆ ಹೇಳುವುದಕ್ಕೆ ಏನೂ ಇಲ್ಲ ಎಂತಲೇ ಅವರ ಸೂಚನೆ.
ಹುಡುಗಿಯ ಇಷ್ಟ ಮತ್ತು ಇಂಗಿತವನ್ನು ಅರಿವ, ಪರಿಗಣಿಸುವ ಅಪ್ಪ-ಅಮ್ಮಂದಿರಿದ್ದರೆ ಮದುವೆಗಳು ವ್ಯವಹಾರವಾಗುವುದು ತಪ್ಪೀತು. ನಿಜ ಒಲವಿನ ಸಾಕ್ಷಿಯಲ್ಲಿ ಅಕ್ಷತೆಗಳು ಹೂವಾದಾವು. ಶಾನುಭೋಗರ ಮಗಳಂತೆ ಎಲ್ಲ ಹುಡುಗಿಯರೂ, ಸರಿಯಾದ ಗಂಡೊದಗಿ ಸುಖವಾಗಿರಲಿ. ಕವಿಯೇ ಆಶಿಸುವಂತೆ, ತಡವಾದರೂ ನಷ್ಟವಿಲ್ಲ.



0 Comments