ಕಿರುಗತೆಗಳು
ಶಾಂತ
ಆಕಸ್ಮಿಕವೋ?
ಅವಳಿಗೂ ಇವಳಿಗೂ ಮದ್ಯೆ ತುಂಬಾ ಪ್ರೀತಿ ಇದೆ. ಆದರೆ ಅವರಿಬ್ಬರೂ ಸದಾ ಜಗಳ ಆಡುತ್ತಾ ಇರುತ್ತಾರೆ. ಇವಳು ಬೈದಾಗ ಅವಳು ಬಾಲ್ಕನಿಯ ತುದಿಗೆ ಹೋಗಿ ನಿಲ್ಲುತ್ತಾಳೆ , ಇಲ್ಲ, ಸೀಲಿಂಗ್ ಫ್ಯಾನ್ ನನ್ನು ದಿಟ್ಟಿಸುತ್ತಿರುತ್ತಾಳೆ . ಮೊನ್ನೆ ಅವಳು ಬಸ್ ಚಕ್ರಕ್ಕೆ ಸಿಕ್ಕಿ ಸತ್ತು ಹೋದಳು. ಅದು ಆಕಸ್ಮಿಕವಲ್ಲ ಅಂತ ನನ್ನ ಅನಿಸಿಕೆ.
*
ಕಾಯುವಿಕೆಗಿಂತ …
ಅವನು ರಮೇಶನಿಗೆ ಒಂದು ಸಾವಿರ ರೂಪಾಯಿ ಸಾಲ ಕೊಟ್ಟಿದ್ದ . ದಿನವೂ ನೋಡಿದರೂ ವಾಪಾಸ್ ಕೊಡುವ ಮಾತೇ ಬರುತ್ತಿರಲಿಲ್ಲ . ರಮೇಶ ಸಾವಿರ ರೂಪಾಯಿ ವಾಪಸ್ ಕೊಟ್ಟಿದ್ದರೆ ಅವನು ‘ಇಟ್ಟುಕೊಂಡಿರು , ಮತ್ತೆ ಯಾವಾಗಲಾದರೂ ಇಸ್ಕೊತಿನಿ’ ಅಂತ ಹೇಳಬೇಕು ಅಂತ ಇದ್ದ. ಇದ್ದಾನೆ .
*
ಬಿಗಿಯುಸಿರು
ರೆಸ್ಟೋರೆಂಟಿಗೆ ಹೋದಾಗ ಮುಂದೆ ಇದ್ದ ಗಂಡ -ಹೆಂಡತಿ ಇವಳು ಯಾಕೆ ಒಂಟಿಯಾಗಿ ಬಂದು ಊಟ ಮಾಡ್ತಾ ಇದ್ದಾಳೆ ಅಂತ ಕೇಳಲೂ ಇಲ್ಲ ಮಾತಾಡಿಕೊಳ್ಳಲೂ ಇಲ್ಲ . ಅವಳೇ ಬೇಗ ಬೇಗ ಊಟ ಮುಗಿಸಿ ಹೊರಗೆ ಬಂದು ಉಸಿರಾಡಿದಳು.
*
ಸಾತ್ವಿಕ ಅಹಂಗೊಂದು ಪೆಟ್ಟು
ಕೆಳಗಿನ ಮನೆಯವರಿಗೆ ಇವರನ್ನು ನೋಡಿ ಹೊಟ್ಟೆ ಉರಿ. ಹತ್ತು-ಹಲವು ಬಗೆಯ ಕಿರುಕುಳ ಕೊಟ್ಟಿದ್ದರು. ಉರಿ ಕಡಿಮೆ ಮಾಡಲು ಇವರು ಅವರಿಗೆ ಊಟ-ಐಸ್ ಕ್ರೀಮ್ ಕೊಡಿಸಿದರು. ಅವರ ಮಗನಿಗೆ ಬಹುಮಾನ ಸಹ ಕೊಟ್ಟರು. ಮಾರನೆ ದಿನ ಇವರ ಕಾರ್ ಟೈಯರ್ ಪಂಚರ್ ಆಗಿತ್ತು .
*
ನಿಟ್ಟುಸಿರಿನಲ್ಲೆನಿದೆ?
ಅವಳು ಅಪರೂಪಕ್ಕೊಮ್ಮೆ ತನ್ನ ಪ್ರೀತಿಯನ್ನು ಅವನ ಮೈದಡವಿ, ನೇವರಿಸಿ ವ್ಯಕ್ತಪಡಿಸಿದರೆ ಅವನು ಉದ್ರೇಕಗೊಳ್ಳುತ್ತಾನೆ . ಅವನ ಏದುಸಿರು ಅವಳ ನಿಟ್ಟುಸಿರು ಒಮ್ಮೆಗೇ ಹೊರಹೊಮ್ಮತ್ತವೆ.
*
ಆಕ್ಸಿಡೆಂಟ್
ಮೂರು ಜನ ಹುಡುಗರು ಒಂದೇ ಬೈಕನ್ನೇರಿ ಸ್ಪೀಡಾಗಿ ಬಂದು ಗೋಡೆಗೆ ಹೊಡೆದು ಸತ್ತದನ್ನು ನೋಡಿ ಆ ಇನ್ಸಪೆಕ್ಟರ್ ರಾತ್ರಿ ಮನೆಗೆ ಬಂದಾಗ ಅವರ ಅಪಾರ್ಟ್ ಮೆಂಟ್ ನ ಮೂರು ಹುಡುಗರು ಒಂದೇ ಬೈಕ್ ಹತ್ತಿ ಕೂತಿದ್ರು.
*







ನಿಜಕ್ಕೂ ಇಷ್ಟವಾದವು. 10-15 ನಿಮಿಷ ಸಮಯ ತೆಗೆದುಕೊಂಡು ಕೊನೆಗೆ ಹೊರಡುವ ಅರ್ಥವ್ಯಾಪಕತೆ, ಪರಿಣಾಮವನ್ನು ನಾಲ್ಕು ಸಾಲಿನ ನ್ಯಾನೋ ಕತೆಗಳು ನೀಡುತ್ತಿವೆ. ಪ್ರಯೋಗ ಇಷ್ಟವಾಯಿತು.