-ರವಿ ಮಡೋಡಿ
ಒಂದು ಮೇಳದಲ್ಲಿ ಶಕುಂತಲಾ ಪರಿಣಯ ಅತ್ಯಂತ ಜನಪ್ರಿಯ ಪ್ರಸಂಗವಾಗಿತ್ತು. ಆ ಪ್ರಸಂಗದಲ್ಲಿ ಮೇಳದ ಯಜಮಾನರು ದುಷ್ಯಂತನ ಪಾತ್ರ ಮಾಡುತ್ತಿದ್ದರು, ಮತ್ತು ಮತ್ತೊಬ್ಬ ಸ್ತ್ರೀವೇಷಧಾರಿ ಶಕುಂತಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸಂಗದ ಮುಖ್ಯ ಭಾಗವಾದ ದುಷ್ಯಂತನು ಶಕುಂತಲೆಗೆ ಮುದ್ರೆಯ ಉಂಗುರ ತೊಡಿಸುವ ದೃಶ್ಯವಿರುತ್ತಿತ್ತು. ಆ ದೃಶ್ಯವನ್ನು ನೈಜವಾಗಿ ತೋರಿಸಲು ಹುಮ್ಮಸ್ಸಿನಿಂದ ಯಜಮಾನರು ತಮ್ಮ ನಿಜವಾದ ಚಿನ್ನದ ಉಂಗುರವನ್ನೇ ಬಳಸಿ ಶಂಕುತಲೆಗೆ ತೊಡಿಸುತ್ತಿದ್ದರು. ಆಟ ಮುಗಿದ ನಂತರ ಶಕುಂತಲೆ ಪಾತ್ರಧಾರಿ ಆ ಉಂಗುರವನ್ನು ಹಿಂತಿರುಗಿಸುತ್ತಿದ್ದರು.
ಆದರೆ ಒಂದು ಬಾರಿ, ಅನಿವಾರ್ಯ ಕಾರಣದಿಂದ ಯಜಮಾನರು ಸ್ತ್ರೀವೇಷಧಾರಿಗೆ ಸಂಬಳ ನೀಡುವುದರಲ್ಲಿ ವಿಳಂಬ ಮಾಡಿದರು.. ಇದಕ್ಕೆ ಸ್ತ್ರೀವೇಷಧಾರಿಗಳು ಬೇಸರಗೊಂಡಿದ್ದರು. ಆ ಸಂದರ್ಭದಲ್ಲಿ ಶಕುಂತಲ ಪರಿಣಯ ಪ್ರಸಂಗ ನಿಶ್ಚಯವಾಗಿತ್ತು. ಎಂದಿನಂತೆ ಯಜಮಾನರು ತಮ್ಮ ನಿಜವಾದ ಚಿನ್ನದ ಉಂಗುರವನ್ನೇ ರಂಗದಲ್ಲಿ ತೊಡಿಸಿದರು. ಆದರೆ ಇದನ್ನು ಬಳಸಿಕೊಂಡ ಶಕುಂತಲೆ ಪಾತ್ರಧಾರಿ, ರಾತ್ರೋರಾತ್ರಿ ಚಿನ್ನದ ಉಂಗುರವನ್ನು ತೆಗೆದುಕೊಂಡು ನೇರವಾಗಿ ಮನೆಗೆ ತೆರಳಿಬಿಟ್ಟರು. ಇತ್ತ ಮೇಳದ ಯಜಮಾನರಿಗೆ ಸ್ತ್ರೀ ವೇಷಧಾರಿಯೂ ಇಲ್ಲ, ಉಂಗುರವೂ ಇಲ್ಲ ಎನ್ನುವ ಸ್ಥಿತಿ.
ಆ ಘಟನೆಯ ನಂತರದಿಂದ ಮೇಳದ ಯಜಮಾನರು ಮತ್ತೆಂದೂ ಚಿನ್ನದ ಉಂಗುರ ತೊಡಿಸುವ ದೃಶ್ಯವನ್ನೇ ಮಾಡಲಿಲ್ಲವಂತೆ!!






0 Comments