ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಶಂಕರಾಚಾರ್ಯರು ಪ್ರತಿಗಾಮಿಯೇ’ – ಜಿ ಎನ್ ನಾಗರಾಜ್

ಚರಕ ಎಂಬ ವೈದ್ಯರ ವಿಚಾರಗಳಿಗೂ ವಚನ ಚಳುವಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

ಭಾಗ ೫

(ಭಾಗ ೪ ಓದಲು ಇಲ್ಲಿ ಕ್ಲಿಕ್ಕಿಸಿ)

ಆ ಕಾಲದಲ್ಲಿ ವೇದಾಂತದ ಹೆಸರಿನಲ್ಲಿ ಪ್ರಚುರವಾಗಿದ್ದ ಹಾಗೂ ಸಮಾಜದ ಮೇಲೆ ಹಿಡಿತ ಸಾಧಿಸಿದ್ದ , ಜಾತಿವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದ ಆಧ್ಯಾತ್ಮ ವಿಚಾರಗಳನ್ನು ಧಿಕ್ಕರಿಸುವ ವಿಚಾರಗಳು ವಚನಕಾರರಿಗೆ ಮೂಡಿದ್ದು ಹೇಗೆ ? ಈ ಸಮಾನತೆಯ ತತ್ವದ ಹಿಂದೆ ಭಾರತದ ವೈದ್ಯ ವಿಜ್ಞಾನದ ಅಧ್ವರ್ಯುಗಳಾದ ಚರಕರ ವೈದ್ಯಕೀಯ ಅನುಭವದ ಮೂಸೆಯಲ್ಲಿ ಪಡೆದ ಅರಿವಿನ ಬೆಳಗಿದೆ. ಎಲ್ಲ ದೇಹಗಳೂ ಒಂದೇ ಎಂಬ ಸತ್ಯ ವೈದ್ಯರಿಗೆ ತಿಳಿವಂತೆ ಬೇರೇ ಯಾರಿಗಾದರೂ ತಿಳಿಯಲು ಸಾಧ್ಯವೇ ? ಹೀಗಾಗಿ ಚರಕ ಸಂಹಿತೆಯಲ್ಲಿ ಅಂಗ ತತ್ವಗಳ ನಿರೂಪಣೆ ಅವರ ವೈದ್ಯಕೀಯ ಅನುಭವದ ಹಿಂದಿನ ತಾತ್ವಿಕತೆಯಾಗಿ ವಿವರಿಸಲ್ಪಟ್ಟಿದೆ. 25 ಅಥವಾ ಪಂಚವಿಂಶತಿ ತತ್ವಗಳೆಂದು ಅದನ್ನು ಕರೆಯಲಾಗಿದೆ. ವಚನಗಳಲ್ಲಿಯೂ ಪಂಚ ವಿಂಶತಿ ತತ್ವಗಳನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದಾರೆ, ವಿವರಿಸಿದ್ದಾರೆ. ವಚನಗಳ ಪ್ರಧಾನ ತತ್ವ ಷಟ್ತ್ರಿಂಶತಿ ತತ್ವಗಳು ಅಥವಾ 36 ತತ್ವಗಳೇ. ಈ ತತ್ವಗಳ ಮೂಲವಾದ ಪಂಚವಿಂಶತಿ ತತ್ವಗಳಿಗೂ ಅದೇ ರೀತಿಯ ಮಾನ್ಯತೆ ನೀಡಲಾಗಿದೆ. ಈ ಅಂಗ ತತ್ವಗಳು ಚರಕ ಸಂಹಿತೆಗಿಂತಲೂ ಹಿಂದಿನ ಕ್ರಿಸ್ತ ಪೂರ್ವ ಕಾಲದ ಸಾಂಖ್ಯ ದರ್ಶನದಿಂದ ಪಡೆದುಕೊಂಡವು. ಜಗತ್ತನ ಸೃಷ್ಠಿ ಹಾಗೂ ವಿಕಾಸದ ತತ್ವವಾಗಿ ಅದರಲ್ಲಿ ಪ್ರಕೃತಿಯ ಪ್ರಾಧಾನ್ಯತೆಯನ್ನು ಪ್ರತಿಪಾದಿಸುವ ತತ್ವಶಾಸ್ತ್ರವಾಗಿ ಭಾರತೀಯ ಪರಂಪರೆಯಲ್ಲಿ ತನ್ನ ಗಟ್ಟಿ ಛಾಪು ಮೂಡಿಸಿದೆ.

ಈ ತತ್ವಶಾಸ್ತ್ರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಪಕ ಪ್ರಭಾವವನ್ನು ಬೀರಿತು. ಕಾಶ್ಮೀರದ ಪ್ರತ್ಯಭಿಜ್ಞಾ ಸಿದ್ಧಾಂತ, ತಮಿಳುನಾಡಿನ ಶೈವಧರ್ಮಗಳು ಸಾಂಖ್ಯ ದರ್ಶನದ ಪ್ರಭಾವದಲ್ಲಿ ಬೆಳೆದವು. ಭಾರತದಾದ್ಯಂತ ಸ್ವತಂತ್ರವಾಗಿ ಹಾಗೂ ವಿವಿಧ ಧಾರ್ಮಿಕ ಪಂಥಗಳ ಮೇಲೆ ಪ್ರಭಾವ ಬೀರಿದ್ದ ತಾಂತ್ರಿಕ ಪಂಥ ಪ್ರಕೃತಿಯ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯುವ ಸಾಂಖ್ಯ ದರ್ಶನವನ್ನು ಅಪ್ಪಿಕೊಂಡಿತು. ಈ ತಾಂತ್ರಿಕ ಪಂಥಗಳ ಮೂಲಕ ಬೌದ್ಧ ವಜ್ರಯಾನ, ಚೌರಾಸೀ (84) ಸಿದ್ಧರ ಪರಂಪರೆ, ನವನಾಥರ ಪರಂಪರೆ ಇವುಗಳು ಸಾಂಖ್ಯದರ್ಶನದ ತತ್ವಗಳನ್ನು ಸ್ವೀಕರಿಸಿದವು. ಆ ಮೂಲಕ ಇಡೀ ದೇಶದ ಭಕ್ತಿ ಪಂಥಗಳ ಪರಂಪರೆಯ ಮೇಲೇ ವಿವಿಧ ಪ್ರಮಾಣದ ಪ್ರಭಾವ ಬೀರಿತು. ಉದಾಹರಣೆಗೆ ಮಹಾರಾಷ್ಟ್ರದ ಜ್ಞಾನದೇವ, ಮೊದಲಾದವರ ವಾರ್ಕರಿ ಭಕ್ತಿ ಪಂಥ, ನವನಾಥರು ಹಾಗೂ ಕಾಶ್ಮೀರದ ಪ್ರತ್ಯಭಿಜ್ಞಾ ಶೈವ ಸಿದ್ಧಾಂತದ ಮೂಲಕ ಸಾಂಖ್ಯ ಸಿದ್ಧಾಂತದ ಪ್ರಭಾವದಲ್ಲಿ ವಿವಿಧ ರೀತಿ ಹಾಗೂ ಪ್ರಮಾಣದಲ್ಲಿ ಜಾತಿ ವ್ಯವಸ್ಥೆಯನ್ನು ಲಿಂಗ ಬೇಧವನ್ನು ವಿರೋಧಿಸಿದವು. ಪಂಜಾಬಿನಲ್ಲಿ ಪ್ರತ್ಯೇಕ ಧರ್ಮವೇ ಆಗಿ ಮಾರ್ಪಟ್ಟ ಸಿಖ್ ಧರ್ಮವೂ ಈ ಭಕ್ತಿ ಪಂಥಗಳ ಪ್ರಭಾವಕ್ಕೆ ಒಳಗಾಗಿ ಜಾತಿ ಪದ್ಧತಿಯನ್ನು , ಕಂದಾಚಾರ ಗಳನ್ನು ವಿರೋಧಿಸಿತು.
ಯೋಗ ದರ್ಶನ ಮತ್ತು ಕಾಯಕ
 
ಕಾಯಕಕ್ಕೆ ದೃಢವಾದ ಕಾಯವೂ ಬೇಕು ಎಂಬುದು ಸ್ವಾಭಾವಿಕವಾಗಿಯೇ ವಚನಕಾರರನ್ನು ಷಡ್ದರ್ಶನಗಳಲ್ಲೊಂದಾದ ಯೋಗ ದರ್ಶನದ ಕಡೆಗೆ ಆಕಷರ್ಿಸಿತು . ಅಷ್ಟೇ ಅಲ್ಲದೆ ಆ ವೇಳೆಗಾಗಲೇ ಯೋಗ ದರ್ಶನ ಸಾಂಖ್ಯ ದರ್ಶನಗಳು ಒಂದರಲ್ಲೊಂದು ಬೆರೆತು ಸಾಂಖ್ಯ- ಯೋಗವೆಂದು ಹೆಸರಾಗಿತ್ತು.ಆದ್ದರಿಂದ ಸಾಂಖ್ಯದ ಜೊತೆಗೇ ಯೋಗವನ್ನೂ ವಚನಕಾರರು ಸ್ವೀಕರಿಸಿದರು. ಅವರ ವಚನಗಳಲ್ಲಿ ಯೋಗದ ಹಲವಾರು ಪರಿಕಲ್ಪನೆಗಳನ್ನು ತಮ್ಮವೇ ಆಗಿಸಿಕೊಂಡಿದ್ದಾರೆ. ಅದರಲ್ಲಿಯೂ ವಚನ ಧರ್ಮದ ತಾತ್ವಿಕ ಅರಿವನ್ನು ಪಡೆಯಲು ಅವರು ರೂಪಿಸಿಕೊಂಡ ಮಾರ್ಗ ಷಟ್ಸ್ಥಲ ಸಿದ್ಧಾಂತ ಯೋಗದ ಷಟ್ಚಕ್ರದ ಅಚ್ಚಿನಿಂದ ಮೂಡಿ ಬಂದದ್ದು. ಇದಕ್ಕೂ ಜಾತಿ ವ್ಯವಸ್ಥೆಯ ವಿರೋಧಕ್ಕೂ ಏನು ಸಂಬಂಧ ? ಅದು ಕೇವಲ ಆಧ್ಯಾತ್ಮ ಎಂಬ ವಾದವನ್ನು ಮಂಡಿಸಲಾಗಿದೆ. ಆದರೆ ಈ ಸ್ಥಲಗಳ ಪ್ರತಿಯೊಂದು ಹಂತದಲ್ಲಿಯೂ ಜಾತಿ ವಿರೋಧ ಅಡಕವಾಗಿದೆ. ಒಂದೊಂದು ಸ್ಥಲವನ್ನೂ ಈ ಆಯಾಮದ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಬಹುದು. ಆದರೆ ಸ್ಥಳಾಭಾವದಿಂದಾಗಿ ಒಂದೆರಡು ಸ್ಥಲಗಳಿಗೆ ಸೀಮಿತಗೊಳ್ಳಬೇಕಾಗಿದೆ.
ಭಕ್ತ ಸ್ಥಲ : ಭವಿಯಾಗಿದ್ದವನು ಗುರುವಿನಿಂದ ದೀಕ್ಷೆಯನ್ನು ಪಡೆದು ಪುನರ್ಜಾತನಾಗುತ್ತಾನೆ ಎಲ್ಲ ಧಾರ್ಮಿಕ ಪಂಥಗಳ ದೀಕ್ಷೆಯಲ್ಲಿಯೂ ಇದು ಸಾಮಾನ್ಯ. ದೀಕ್ಷೆಯನ್ನು ಹೊಸ ಹುಟ್ಟು ಎಂದು ಪರಿಗಣಿಸುತ್ತಾರೆ. ಹಿಂದಿನೆಲ್ಲ ಸಂಬಂಧಗಳನ್ನು ಕಳೆದುಕೊಳ್ಳತ್ತಾರೆ. ಆದರೆ ಈ ಹೊಸ ಹುಟ್ಟು ಸನ್ಯಾಸ ದೀಕ್ಷೆ ಪಡೆದ ಕೆಲವರಿಗೆ ಮಾತ್ರ ಅನ್ವಯವಗುವಂತಹದು. ಆದರೆ ವಚನಕಾರರ ಧರ್ಮದಲ್ಲಿ ಜನ ಸಾಮಾನ್ಯರು ಲಕ್ಷೊಪ ಲಕ್ಷ ಸಂಖ್ಯೆಯಲ್ಲಿ ಸಂಸಾರದಲ್ಲಿದ್ದುಕೊಂಡೇ ದೀಕ್ಷೆ ತೆಗೆದುಕೊಳ್ಳುವುದು ಮತ್ತು ಅದನ್ನು ಹೊಸ ಹುಟ್ಟೆಂದು ಪರಿಗಣಿಸುವುದು ಅಪರೂಪದ ಸಂಗತಿ. ಬಹಳಷ್ಟು ಸನ್ಯಾಸ ದೀಕ್ಷೆಗಳಲ್ಲಿಯೂ ಅವರು ತಮ್ಮ ತಂದೆ ತಾಯಿ, ಬಂಧುಗಳೋಡನೆಯ ಸಂಬಂಧವನ್ನು ಕಳೆದುಕೊಳ್ಳುತ್ತಾರೆಯೇ ಹೊರತು ತಮ್ಮ ಜಾತಿಯನ್ನಲ್ಲ . ಹಾಗೆ ಜಾತಿಯನ್ನು ತ್ಯಜಿಸಿ ಸನ್ಯಾಸ ಅಥವಾ ಇತರ ದೀಕ್ಷೆ ಪಡೆಯುವವರು ಸಾಮಾನ್ಯವಾಗಿ ವೈದಿಕ ಪಂಥಗಳಲ್ಲ.
ವಚನಕಾರರ ಪ್ರಕಾರ ಭಕ್ತನಾಗುವುದೆಂದರೆ ಶಿವಾಚಾರವನ್ನು ತಪ್ಪದೆ ಆಚರಿಸಬೇಕು. ಈ ಮೊದಲೇ ವಿವರಿಸಿದಂತೆ ಅವರ ಹಿಂದಿನ ಜಾತಿಯನ್ನು ಪರಿಗಣಿಸದೇ ಎಲ್ಲ ಭಕ್ತರನ್ನೂ ತನ್ನ ಬಂಧುಗಳೆಂದೇ ಪರಿಗಣಿಸಬೇಕು.ಅವರೊಡನೇ ಮಾತ್ರ ವೈವಾಹಿಕ ಸಂಬಂಧವನ್ನು ಬೆಳೆಸಬೇಕು. ಗುರು ಹಾಗೂ ಜಂಗಮರನ್ನೂ ಅವರ ಜಾತಿಯನ್ನು ಪರಿಗಣಿಸದೇ ಅವರಿಗೆ ಎಲ್ಲ ಗೌರವ, ಸತ್ಕಾರ ಮಾಡಬೇಕು. ಗುರು, ಜಂಗಮರೂ ಕೂಡ ಭಕ್ತರಾಗಿ ದೀಕ್ಷೆ ನೀಡಿದ ಬಳಿಕ ಜಾತಿಯನ್ನು ಪರಿಗಣಿಸದೇ ಅವರ ಮನೆಯಲ್ಲಿ ಊಟೋಪಚಾರಗಳನ್ನು ಸ್ವೀಕರಿಸಬೇಕು. ಇದೆಲ್ಲವೂ ಇಲ್ಲಿಯವರೆಗೆ ವಿವರಿಸಿದ ವಚನಕಾರರ ಆಧ್ಯಾತ್ಮಿಕ ಸಿದ್ಧಾಂತದ ಆಚರಣೆಯೇ ಹೊರತು ಮತ್ತೇನಲ್ಲ.
ಭಕ್ತರ ವಿಷಯದಲ್ಲಿ ಮಾತ್ರವೇ ಅಲ್ಲದೇ ಭವಿಗಳ ವಿಷಯದಲ್ಲಿಯೂ ಜಾತಿ ವ್ಯವಸ್ಥೆಯ ವಿರೋಧವನ್ನು ಕಾಣಬಹುದು. ಭವಿಗಳು ಯಾವ ಜಾತಿಯೇ ಆಗಿರಬಹುದು ನೀವು ಅವರನ್ನೆಲ್ಲಾ ಒಂದೇ ಎಂದು ಭಾವಿಸಬೇಕು. ಯಾರ ಮನೆಯಲ್ಲಿಯೂ ಊಟ , ಮೊದಲಾದ ಯಾವ ಸಾಮಾಜಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ನಿಷೇಧಿಸಲಾಗಿದೆ. ಶಿವಾಚಾರ ದೀಕ್ಷೆ ತೆಗೆದುಕೊಳ್ಳುವ ಮೊದಲು ನೀವು ಕೆಳ ಜಾತಿಯವರೇ ಆಗಿದ್ದಿರಬಹುದು ಆದರೆ ನೀವು ಬ್ರಾಹ್ಮಣರನ್ನು ಮೇಲ್ಜಾತಿ ಎಂದು ಪರಿಗಣಿಸಿ ಅವರು ಮಾಡಿದ ಅಡುಗೆಯನ್ನು ಊಟಮಾಡುವಂತಿಲ್ಲ. ಇದು ಕೂಡ ಸಮಾಜದಲ್ಲಿ ಆಚರಣೆಯಲ್ಲಿರುವ ಜಾತಿಯ ಆಚರಣೆಗಳನ್ನು ಧಿಕ್ಕರಿಸಿದಂತೆಯೇ. ಹೀಗೆ ಕೇವಲ ಭಕ್ತ ಮಾತ್ರವಲ್ಲ ಭವಿಯ ಪರಿಕಲ್ಪನೆಯೂ ಕೂಡ ಜಾತಿ ಪದ್ಧತಿಯ ವಿರುದ್ಧ ಸೆಟೆದು ನಿಲ್ಲುವ ವಿಚಾರವನ್ನು ತನ್ನೊಳಗೆ ಬಚ್ಚಿರಿಸಿಕೊಂಡಿದೆ.

ಪುರುಷ ಸೂಕ್ತಕ್ಕೆ ಪ್ರತಿ ಸೂಕ್ತ
ಚಾತುರ್ವರ್ಣದ ಉಗಮಕ್ಕೆ ಅತ್ಯಂತ ಪ್ರಾಚೀನ ಉಲ್ಲೇಖವಾದ ಋಗ್ವೇದದ ಪುರುಷ ಸೂಕ್ತ ಪ್ರಸಿದ್ಧವಾದುದು. ತಲೆಯಿಂದ ಬ್ರಾಹ್ಮಣ, ಭುಜಗಳಿಂದ ಕ್ಷತ್ರಿಯ ಇತ್ಯಾದಿ ಈ ಶರೀರದ ಮೇಲು  (ಉತ್ತಮಾಂಗ) ಕೀಳಿನ ಕಲ್ಪನೆಗೆ ಅನುಗುಣವಾಗಿ ವರ್ಣ ವಿಭಜನೆಯಲ್ಲಿ ಮೇಲು ಕೀಳಿನ ಕಂದರವನ್ನು ಸೃಷ್ಠಿಸುವ ಈ ಸೂಕ್ತ ಅಂದಿನಿಂದ ಇಂದಿನವರೆಗೆ ಶಾಸ್ತ್ರ, ಪುರಾಣಗಳಲ್ಲಿ ಅನೇಕ ಬಾರಿ ಉದಾಹರಿಸಲ್ಪಟ್ಟಿದೆ. ಈ ಸೂಕ್ತಕ್ಕೆ ಸೆಡ್ಡು ಹೊಡೆವಂತೆ ವಚನಕಾರರು ಪ್ರತಿ ಸೂಕ್ತವೊಂದನ್ನು ಕಲ್ಪಿಸಿದ್ದಾರೆ.
ಸಿದ್ದರಾಮನ ಒಂದು ವಚನದಲ್ಲಿ ಶಿವನ ಪಂಚ ಮುಖಗಳಿಂದ ವರ್ಣಗಳ ಉತ್ಪತ್ತಿಯಾಯಿತೆಂದು ವಿವರಿಸಲಾಗಿದೆ. ಶಿವನಿಗೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಐದು ಮುಖಗಳು. ಅದರಲ್ಲಿ ಅದ್ಯೋಜಾತ ಮುಖದಿಂದ ಬ್ರಾಹ್ಮಣನೂ, ವಾಮದೇವ ಮುಖದಿಂದ ಕ್ಷತ್ರಿಯನೂ, ಅಘೋರ ಮುಖದಿಂದ ವೈಶ್ಯನೂ, ತತ್ಪುರುಷ ಮುಖದಿಂದ ಶೂದ್ರನೂ ಜನಿಸಿದನೆಂದು ಹೇಳುತ್ತಾನೆ . ಹೀಗೆ ಋಗ್ವೇದದ ಪುರುಷ ಸೂಕ್ತಕ್ಕೆ ಪ್ರತಿ ಸೂಕ್ತವೊಂದನ್ನು ಸೃಷ್ಠಿಸಿ ಜಾತಿ ಬೇಧವನ್ನು ಒಡೆಯಲು ಪ್ರಯತ್ನಿಸಿದ ವಚನಕಾರರ ಪ್ರತಿಭೆ ಅಚ್ಚರಿಯನ್ನು ಮೂಡಿಸುತ್ತದೆ. ಈ ವಚನದ ಸಾರವೂ ಸ್ಪಷ್ಠ, ಶಿವನ ಮುಖಗಳೆಲ್ಲವೂ ಸಮಾನ.ಅವುಗಳಿಂದ ಜನಿಸಿದ ಈ ವರ್ಣಗಳೂ ಸಮಾನ ಎಂಬುದನ್ನು ಈ ಪ್ರತಿ ಸೃಷ್ಠಿಯ ಮೂಲಕ ಸಾರುತ್ತಾರೆ. ವರ್ಣ ವ್ಯವಸ್ಥೆ ಹೋಗಬೇಕು ಎಂದು ಈ ವಚನದಲ್ಲಿ ಎಲ್ಲಿ ಹೇಳಿದೆ? ವರ್ಣಗಳೆಲ್ಲವೂ ಶಿವನಿಂದಲೇ ಹುಟ್ಟಿತೆಂದು ಹೇಳುವ ಮೂಲಕ ವಚನಗಳು ಭಗವದ್ಗೀತೆಯ ಶ್ಲೋಕವನ್ನು ಸಮರ್ಥಿಸಿದೆ ಎಂದು ವಾದ ಮಾಡಿದರೆ ಅವರು ಜಾಣ ಕುರುಡರೆನ್ನದೆ ಮತ್ತೇನೆಂದು ಕರೆಯಲು ಸಾಧ್ಯ.
ಶಂಕರರೂ ಜಾತಿ ವ್ಯವಸ್ಥೆಯೂ
ಆಧ್ಯಾತ್ಮ ಸಾಧನೆಯ ಕುರಿತು ಮಾತನಾಡಿರುವ ಚಿಂತಕರೆಲ್ಲರೂ ಜಾತಿಯ ಕುರಿತು ಈ ರೀತಿಯ ವಿಚಾರಗಳನ್ನೇ ಹೇಳಿದ್ದು. ಬೇಕಾದರೆ ಆದಿಶಂಕರರ ಕೃತಿಗಳನ್ನು ನೋಡಿ. ಎಂದು ತಮ್ಮ ವಾದದ ಸಮರ್ಥನೆಗೆ ಶಂಕರರನ್ನು ಎಳೆದು ತರುವ ಝಳಕಿಯವರು ಜಾತಿ ಬೇಧವನ್ನು ಮತ್ತು ವೇದಗಳನ್ನು ಅಲ್ಲಗಳೆಯುವ ಅವರ ಆತ್ಮ ಷಟ್ಕಂನ ಕೆಲವು ಸಾಲುಗಳನ್ನು ಉದಾಹರಿಸುತ್ತಾರೆ. ಆದರೆ ಪ್ರಶ್ನೆ ಇರುವುದು ಅವರು ಶಂಕರರ ಅದ್ವೈತ ಸಿದ್ಧಾಂತವನ್ನು ಅದರೆ ಸಮಗ್ರತೆಯಲ್ಲಿ ಅಧ್ಯಯನ ಮಾಡಿದ್ದಾರೆಯೇ ? ಅವರ ಒಟ್ಟಾರೆ ತಾತ್ವಿಕ ರಚನೆ ಸಮಾಜದ ಬಗ್ಗೆ, ಜಾತಿ ವ್ಯವಸ್ಥೆಯ ಬಗ್ಗೆ ತಳೆಯುವ ನಿಲುವೇನು ? ಬಾದರಾಯಣರ ಬ್ರಹ್ಮ ಸೂತಕ್ಕೆ ಶಂಕರರು ಬರೆದ ಭಾಷ್ಯದಲ್ಲಿ ಅಪ ಶೂದ್ರಾಧಿಕರಣ ಎಂಬ ಪ್ರಕರಣದ ಬಗ್ಗೆ ಕಣ್ಣು ಹಾಯಿಸಿದ್ದಾರೆಯೇ ?
ಝಳಕಿಯವರು ಆತ್ಮ ಷಟ್ಕಂನ ಉದಾಹರಣೆ ಯನ್ನು ಕೊಡುವಾಗ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೆ ಈ ತಂಡ ಇಳಿಯುತ್ತದೆ ಎಂಬುದಕ್ಕೆ ತಾವೇ ಸ್ಪಷ್ಠ ಉದಾಹರಣೆಯಾಗಿದ್ದಾರೆ. ಆತ್ಮ ಷಟ್ಕಂ ಅದರ ಹೆಸರೇ ಸೂಚಿಸುವಂತೆ ಆತ್ಮಕ್ಕೆ ಸಂಬಂಧಿಸಿದ್ದು. ಕೇವಲ ಆರು ಚೌಪದಿಗಳ ಈ ರಚನೆ ಇಡೀ ಷಟ್ಕದಲ್ಲಿ ಆತ್ಮದ ಲಕ್ಷಣ ಬಗ್ಗೆ ವಿವರಿಸಿದ್ದಾರೆಯೇ ಹೊರತು ಮನುಷ್ಯರ ಬಗ್ಗೆ ಅಲ್ಲ.
ನಿರ್ವಿಕಲ್ಪವೂ ನಿರಾಕಾರವೂ ಆದ ಆತ್ಮನಿಗೆ ಲೋಕದ ಜೊತೆ ಯಾವ ಸಂಬಂಧವೂ ಇಲ್ಲ, ಆದ್ದರಿಂದ ಮುಕ್ತಿಯ ಪ್ರಶ್ನೆ ಉದ್ಭವಿಸುವುದೂ ಇಲ್ಲ. ಅದಕ್ಕೆ ಸುಖವೂ ಇಲ್ಲ ದುಃಖವೂ ಇಲ್ಲ. ಅದಕ್ಕೆ ಧರ್ಮವೂ ಇಲ್ಲ ಅರ್ಥ ಕಾಮ, ಮೋಕ್ಷವೂ ಇಲ್ಲ. ಮೃತ್ಯುಭಯವೂ ಇಲ್ಲ, ಹುಟ್ಟಿನ ಬೇಧವೂ ಇಲ್ಲ ಅದಕ್ಕೆ ವೇದವೂ ಇಲ್ಲ, ಯಜ್ಞವೂ ಇಲ್ಲ.
ಈ ಮಾತುಗಳಲ್ಲಿ ಮನುಷ್ಯರ ಜಾತಿಗಳ ಬಗ್ಗೆ ಅಥವಾ ಜಾತಿ ಬೇಧದ ಬಗ್ಗೆ ಒಂದಾದರೂ ಮಾತಿದೆಯೇ ? ಅಥವಾ ವೇದಗಳ ನಿರಾಕರಣೆ ಎಂದು ಇದನ್ನು ಅರ್ಥೈಸಬಹುದೇ ? ಧರ್ಮವೂ ಇಲ್ಲದ ಮೋಕ್ಷವೂ ಇಲ್ಲದ ಮೃತ್ಯುವೂ ಇಲ್ಲದ ಈ ವಸ್ತುವಿಗೆ ಜಾತಿ ಇರುವುದು ಸಾಧ್ಯವೇ ?ಆತ್ಮಕ್ಕೆ ಜಾತಿ ಬೇಧ ಇಲ್ಲವೆಂದರೆ ಮನುಷ್ಯರಲ್ಲಿ ಇರುವ ಜಾತಿ ಬೇಧವನ್ನು ವಿರೋಧಿಸುವ ಹೇಳಿಕೆ ಎನ್ನಬಹುದೇ? ಯಾರನ್ನು ಮೂರ್ಖರನ್ನಾಗಿ ಮಾಡಲು ಬಯಸುತ್ತಾರೆ ಈ ಜನ ? ಈ ಆತ್ಮ ಷಟ್ಕಂ ನ ಕಡೆಗೆ ಯಾರೂ ನೋಡುವುದಿಲ್ಲ ಆದ್ದರಿಂದ ಏನು ಬೇಕಾದರೂ ಹೇಳಿ ಪಾರಾಗಬಹುದು ಎಂದು ಭಾವಿಸಿದ್ದಾರೆಯೇ ?
(ಮುಂದುವರೆಯುವುದು…)

‍ಲೇಖಕರು avadhi

20 July, 2013

8 Comments

  1. Umesh

    “……ಅವರೊಡನೇ ಮಾತ್ರ ವೈವಾಹಿಕ ಸಂಬಂಧವನ್ನು ಬೆಳೆಸಬೇಕು” ಅಂತ ಹೇಳಿದ್ದೀರಿ. ಇದು ಒಂದು ರೀತಿಯ ಪ್ರತ್ಯೇಕತೆಯ ಹಾಗು ಶ್ರೇಷ್ಟತೆಯ ವ್ಯಸನವಲ್ಲವೇ? ಹಾಗಿದ್ದಲ್ಲಿ ಮಾನವ ಕುಲ ತಾನೊಂದೆವಲಂ ಎನ್ನುವ ತತ್ತ್ವಕ್ಕೆ ಹೇಗೆ ಹೊಂದುತ್ತದೆ?

    • Aravind

      ಅವರ ಹಿಂದಿನ ಜಾತಿಯನ್ನು ಪರಿಗಣಿಸದೇ ಎಲ್ಲ ಭಕ್ತರನ್ನೂ ತನ್ನ ಬಂಧುಗಳೆಂದೇ ಪರಿಗಣಿಸಬೇಕು… I think you should have read this line first before going to the next. It could have answered your doubt

      • Umesh

        ನನ್ನ ಪ್ರಶ್ನೆ ಇರುವುದೇ ಅಲ್ಲಿ. ಕೇವಲ ಭಕ್ತರೊಡನೆ ಮಾತ್ರವೇ ವಿವಾಹ ಸಂಭಂದ ಇರಬೇಕೆ? ಇದು ಒಂದು ರೀತಿಯ ಪ್ರತ್ಯೇಕತೆ ಅಥವಾ ಶ್ರೇಷ್ಠತೆಯ attitude ಎಂದು ತೋರುವುದಿಲ್ಲವೇ?

  2. DR. KIRAN .M GAJANUR

    “The truth is not always beautiful, nor beautiful words the truth.”

  3. Sharadhi

    I think Avadhi should stop publishing such articles. Vachanas, Vedas – all are outdated, we stick to the constitution of the country and live materializing the best possible ethics. It doesn’t help the society in any way to dig the past. Common man!, Germany stood up from her past, Russia transcended its bloody past, now why can’t India??

    • ವಿಜಯ್

      ಶರಧಿ..
      ಇಂಥ ಲೇಖನಗಳು ಬರಬೇಕು. ಆಗಲೇ ನಮಗೆ ಇವರನ್ನು ಪ್ರಶ್ನಿಸುವ ಅವಕಾಶ ಸಿಗುತ್ತದೆ. ಮೊದಲಾದರೆ ಇವರ ಪ್ರಚಾರಗಳೆಲ್ಲ ಕೆಲವು ವಾರಪತ್ರಿಕೆ/ದಿನಪತ್ರಿಕೆ ಪೋಷಿತವಾಗಿ, ಒಮ್ಮುಖವಾಗಿದ್ದವು. ಈಗ ಪೇಪರನಲ್ಲಿ ಕೊರೆದರೂ, ಅದನ್ನು ಇಲ್ಲಿಗೆ ತಂದು ಚರ್ಚಿಸುವ ಸಾಧ್ಯತೆಯಿದೆ..ತಪ್ಪನ್ನು ಪ್ರಶ್ನಿಸುವ ಅವಕಾಶವಿದೆ. ಇವರು ನಂಬಿಸಿದ್ದನ್ನೇ ನಾವು ನಂಬಬೇಕಾದ ಅವಶ್ಯಕತೆಯಿಲ್ಲ..ಸರಿ ಇದ್ದದ್ದನ್ನು ಸರಿ ಅನ್ನೋಣ, ತಪ್ಪನ್ನು ತಪ್ಪು ಅನ್ನೋಣ..ಅಷ್ಟೇ.
      ‘ತಮ್ಮ ಸಾಧಕರನ್ನು ಆಚಾರ್ಯರೆಂದು..ಉಳಿದ ಸಾಧಕರನ್ನು ದಾಸರೆಂದು ಕರೆದರು’ ಎಂದು ವಿಷಾಧ ಪಡಿಸಿದ ಹಿರಿಯ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳಿಂದ ಹಿಡಿದು, ವಿನೋದ ಕಾಂಬ್ಳಿಯನ್ನು ದಲಿತ ಎಂಬ ಕಾರಣಕ್ಕಾಗಿ, ವ್ಯವಸ್ಥಿತವಾಗಿ ದಾರಿ ತಪ್ಪಿಸಿ ಕೆಡವಲಾಯಿತು ಎಂಬ ಕಿರಿಯ ಸಾಕ್ಷಿಪ್ರಜ್ಞೆಗಳ ಹೇಳಿಕೆಗಳನ್ನು ನಾನು ಕೇಳಿದ್ದೇನೆ. ಈ ಪ್ರಚಾರ ಕಾರ್ಯ ಮತ್ತು ಅದಕ್ಕೆ ಪೂರಕವಾಗಿ ‘ಹೆಗಲ ಮೇಲೆ ಪಿಕಾಸಿ, ಬಾಯಲ್ಲಿ ಕಂದಕ ಮುಚ್ಚೊಣ’ ಎಂಬ ಹಿರಿಯ ಸಾಕ್ಷಿಪ್ರಜ್ಞೆಗಳ ಕಾರ್ಯನೀತಿ ..ಇವು ಸಧ್ಯದ ವಾಸ್ತವ.

  4. chayadevi

    `i don’t have facility to reply in kannada’. S.ACHARYA was able to describe only to an extent. Everybody has their own limitations right? intrepreations are not enforced.

  5. ಲಿಂಗರಾಜು ಬಿ.ಎಸ್.

    ಕೇವಲ ಭಕ್ತಗಣದೊಳಗೆ ಮಾತ್ರ ವೈವಾಹಿಕ ಸಂಬಂಧಗಳನ್ನು ಹೊಂದಬೇಕು ಎಂಬುದು ಸಾಲು ಪ್ರತ್ಯೇಕತೆಯನ್ನು ಹೇಳಿದಂತಾಗುತ್ತದೆ ಎಂಬ ಗೊಂದಲ ಮೂಡಿಸುವುದು ಸಹಜ. ವೇದಗಳು, ಕರ್ಮ ಸಿದ್ಧಾಂತ, ಹಲವು ಭಾಷ್ಯಗಳು ಸೇರಿದಂತೆ ವಿವಿಧ ಬಗೆಯ ಸಿದ್ಧಾಂತಗಳು ಅಸಮಾನ ಸಮಾಜವನ್ನು ಸೃಷ್ಟಿಸಿದ್ದಲ್ಲದೆ ಇವು ದೇವರಿಂದಲೇ ಸೃಷ್ಟಿಯಾದವೆಂದು ಹೇಳಿ ಅದನ್ನು ಹೇರಲಾಗಿತ್ತು. ಬಹುಷಃ ಇದೇ ಮುಂದೆ ಸಂಸ್ಕೃತಿ (ವೈದಿಕ ಸಂಸ್ಕೃತಿ ಎಂದರೆ ಸೂಕ್ತವಗಬಹುದು) ಹೆಸರನ್ನು ಪಡೆಯಿತು ಎನ್ನಬಹುದು. ಸಂಸ್ಕೃತಿ ರೂಪುಗೊಳ್ಳಲು ಕಾರಣವಾದ ವಿವಿಧ ಸಿದ್ಧಾಂತಗಳು ನಂತರ ಜನಮಾನಸದಿಂದ ಕಾಣೆಯಾದರೂ ಸಂಸ್ಕೃತಿ ಹೆಸರಿನಲ್ಲಿ ಹಾಗೇ ಇದ್ದವು.
    ಭಕ್ತಗಣದೊಳಗೆ ವಿವಾಹ ಎಂಬ ನಿಬಂಧನೆ ಕೇವಲ ಒಡೆದು ಹೋಗಿದ್ದ ಸಮಾಜವನ್ನು ಒಂದುಗೂಡಿಸುವ ವಚನಕಾರರ ಆಶಯವಾಗಿತ್ತೇ ಹೊರತು ಹೊರಗಿಡುವ ಹುನ್ನಾರವಾಗಿರಲಿಲ್ಲ. ಹಾಗೆಯೇ ಭಕ್ತಗಣದವರಲ್ಲದವರೊಡೆನೆಯೂ ಸಂಬಂಧ ಹೊಂದುವ ಅವಕಾಶಗಳಿದ್ದವು. ಇದರಲ್ಲಿ ಗೊಂದಲ ಬೇಡ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading