ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವ ರಂಗಭೂಮಿ ದಿನದ ಸಂದೇಶ 2022…

ಸಂದೇಶಕಾರರು: ಪೀಟರ್ ಸೆಲ್ಲರ್ಸ್

ಪೀಟರ್ ಸೆಲ್ಲರ್ಸ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್‌ಬರ್ಗ್ ನಗರದಲ್ಲಿ ಜನಿಸಿದವರು. ಅಪೇರಾ ಮತ್ತು ರಂಗಭೂಮಿ ನಿರ್ದೇಶಕರು ಹಾಗು ಹಲವು ಸಾಂಸ್ಕೃತಿಕ ಉತ್ಸವಗಳ ಪ್ರಧಾನ ನಿರ್ದೇಶಕರಾಗಿ ಜನಪ್ರಿಯರು.

ಕನ್ನಡಕ್ಕೆ: ಬಿ ಸುರೇಶ

ಪ್ರಿಯ ಸಂಗಾತಿಗಳೇ,

ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿರುವಾಗ, ಸೃಜನಶೀಲ ವೃತ್ತಿಯವರಾದ ನಾವೆಲ್ಲರೂ ನಮ್ಮ ನೈಜ ಶಕ್ತಿ, ಸಾಮರ್ಥ್ಯ, ದೃಷ್ಟಿಕೋನ ಬಳಸಿ ಈ ಮಹಾಕಾಲದ, ಮಹಾ ಬದಲಾವಣೆಯ ಪರ್ವದ, ಮಹಾನ್ ತಿಳುವಳಿಕೆಯ, ಮಹಾನ್ ಪ್ರತಿಬಿಂಬದ, ಮಹಾನ್ ದೃಷ್ಟಿಯನ್ನು ನಮ್ಮ ಕ್ರಿಯಾಶೀಲತೆಗೆ ಆಹ್ವಾನಿಸಬಹುದೇ? ನಾವೀಗ ಮನುಕುಲದ ಚರಿತ್ರೆಯ ಮಹಾನ್  ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಈ ಅವಧಿಯಲ್ಲಿ ನಮ್ಮೊಳಗೆ ಆಗುತ್ತಿರಬಹುದಾದ ತೀವ್ರ ಹಾಗೂ ಮುಖ್ಯವಾದ ಬದಲಾವಣೆಗಳನ್ನು, ನಮ್ಮ ನಡುವಿನ ಸಂಬಂಧಗಳನ್ನು ಗ್ರಹಿಸುವುದು ಮತ್ತು ಅವುಗಳನ್ನು ಮಾತು, ಭಾವದ ಮೂಲಕ ಪ್ರಕಟಗೊಳಿಸುವುದು ಸುಲಭವಲ್ಲ.

ದಿನವೆಲ್ಲಾ ನಾವು ಕೇವಲ ಸುದ್ದಿಚಕ್ರದಲ್ಲಿ ಸಿಲುಕಿಲ್ಲ ಬದಲಿಗೆ ಕಾಲದ ಅಂಚಿನಲ್ಲಿರುವವರಂತೆ ಜೀವಿಸಿದ್ದೇವೆ. ನಮ್ಮ ಅನುಭವದ ಗಾಢತೆಯನ್ನು ತಿಳಿಸಲು ದಿನಪತ್ರಿಕೆಗಳಾಗಲಿ, ಇನ್ನಿತರ ಮಾಧ್ಯಮಗಳಾಗಲಿ ಸಿದ್ಧವಾಗಿಲ್ಲ. ಯಾವ ಭಾಷೆಗೆ, ಯಾವ ಚಲನೆಗೆ ಯಾವ ಪ್ರತಿಮೆಗೆ ನಮ್ಮ ಅನುಭವವನ್ನು ಕಟ್ಟಿಕೊಡುವ ಸಾಮರ್ಥ್ಯ ಇದೆ? ಬದುಕಿನ ಅನುಭವವನ್ನು ಜಾಳಾದ ಸುದ್ದಿ ಆಗಿಸುವುದರ ಹೊರತಾಗಿ ನೋಡುಗನಲ್ಲಿ ಅನುಭೂತಿ ಮೂಡಿಸುವಂತೆ ದಾಟಿಸುವುದು ಹೇಗೆ?

ರಂಗಭೂಮಿಯೊಂದೇ ನಿಜವಾದ ಅರ್ಥದಲ್ಲಿ ನಮ್ಮ ಅನುಭವ ದಾಟಿಸಬಲ್ಲ ಮಾಧ್ಯಮ.

ನಿರಂತರ ಸುಳ್ಳು ಸುದ್ದಿಗಳ, ಕಪಟ ಪ್ರಚಾರಿಗಳ, ಹುಸಿ ಮುನ್ಸೂಚನೆಗಳ ಬಲೆಯಿಂದಾಚೆಗೆ ಸಾಗಿ ಬದುಕಿನ ಅನಂತತೆಯನ್ನು, ಸಾತತ್ಯವನ್ನು, ಸಾಂಗತ್ಯವನ್ನು ತಿಳಿ ನೀಲಿ ಬಾನಿನಂತೆ ಇತರರಿಗೆ ತಲುಪಿಸುವುದಾದರೂ ಹೇಗೆ? ಕಳೆದರೆಡು ವರುಷಗಳ ಕೋವಿಡ್ ಮಹಾಮಾರಿ ಜನರ ಮನಸ್ಸನ್ನು ಮುದುಡಿಸಿದೆ, ಬದುಕುಗಳನ್ನು ಸಂಕುಚಿತಗೊಳಿಸಿದೆ, ಸಂಬಂಧಗಳನ್ನು ಮುರಿದಿದೆ ಮತ್ತು ನಮ್ಮನ್ನು ಮರಳಿ ಸೊನ್ನೆಯಾಗಿಸಿದೆ.

ಈಗ ಅದ್ಯಾವ ಬೀಜಗಳನ್ನು ಬಿತ್ತುವುದು? ಯಾವ ಭೂಮಿಯನ್ನು ಮರುಪೂರಣಗೊಳಿಸುವುದು? ಅತಿಯಾಗಿರುವ, ಅತಿಕ್ರಮಿಸಿರುವ ಅನಗತ್ಯ ವಿಷಯಗಳನ್ನು ತೆಗೆಯಬೇಕಿದೆ. ಹಲವರು ಅಂಚಿನಲ್ಲಿ ಬದುಕುತ್ತಿದ್ದಾರೆ. ಹಿಂಸೆ ಎಂಬುದು ಅತಾರ್ಕಿಕವಾಗಿ ಅನಪೇಕ್ಷಿತವಾಗಿ ತಾಂಡವ ಆಡುತ್ತಿದೆ. ವ್ಯವಸ್ಥೆಯ ಹಲವು ಅಂಗಗಳು ಈ ಹಿಂಸೆಗೆ ಮೂಕ ಸಾಕ್ಷಿಗಳಾಗಿವೆ.

ಈ ಹಂತದಲ್ಲಿ ನೆನಪಿನ ಕಣಜ ತೆರೆದಿಡಬಲ್ಲ ಆಚರಣೆ ಯಾವುದು? ನಾವು ಯಾವ ನೆನಪಿನ ಕೋಶ ತೆರೆಯಬೇಕು? ನಮ್ಮ ಯಾವ ಚಲನೆಗಳನ್ನು ಮರುರೂಪಿಸಬೇಕು? ಮರಳಿ ತಾಲಿಮು ಆರಂಭಿಸಲು ಸರಿ ದಾರಿ ಯಾವುದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಬಲ್ಲ ಹೊಸ ಆಚರಣೆಗಳನ್ನುಳ್ಳ ಹೊಸ ರಂಗಭೂಮಿ ಕಟ್ಟಬೇಕಿದೆ. ಅದಕ್ಕಾಗಿ ನಾವೆಲ್ಲರೂ ಸೇರಬೇಕಿದೆ. ನಮ್ಮೆಲ್ಲ ತಲ್ಲಣಗಳನ್ನು ಹಂಚಿಕೊಳ್ಳಬೇಕಿದೆ. ಸಂಕಟಗಳ ಕೈ ತುತ್ತು ಪಡೆದು ಸಮಾನತೆಯ, ಸಹನೆಯ ನೋಡುಗ – ಕೇಳುಗ ಸೇರಬಲ್ಲಂತಹ ತೆರಪುಗಳನ್ನು ರೂಪಿಸಬೇಕಿದೆ.

ಮನುಷ್ಯರು, ದೇವರುಗಳು, ಗಿಡಗಂಟಿಗಳು, ಪಶುಪಕ್ಷಿಗಳು, ಮಳೆಯ ಹನಿ, ಕಣ್ಞೀರ ಬಿಂದುಗಳ ಜೊತೆಗೆ ಮರುಜೀವ ಪಡೆಯಬಹುದಾದ ಎಲ್ಲವುಗಳಿಗೆ ಸ್ವಾಸ್ಥ್ಯ ನೀಡಬಲ್ಲ ಭೂಮಿ ಎಂದರೆ ಅದು ರಂಗಭೂಮಿ. ಸಮಾನತೆ, ಸಹನತೆಯ ದೀಪಗಳು ಈ ರಂಗಭೂಮಿಯನ್ನು ಬೆಳಗುತ್ತಿವೆ. ಸಮಚಿತ್ತತೆ, ಸಮಾನ ಕ್ರಿಯೆ, ಸಹನೆಗಳ ಜೊತೆಗೆ ಅಪಾಯಗಳನ್ನು ತೊಡೆಯಬಲ್ಲ ಸಾವಯವ ಸಂಬಂಧದಿಂದ ರಂಗಭೂಮಿ ಜೀವಂತವಾಗಿದೆ.

ಬುದ್ದನು ತನ್ನ “ಅವತಂಸಕ ಸುತ್ತ”ದಲ್ಲಿ  ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಹತ್ತು ಸಹನೆಗಳ ಬಗ್ಗೆ ತಿಳಿಸಿದ್ದಾನೆ. ಅವುಗಳಲ್ಲಿ ಒಂದು – ಎಲ್ಲವನ್ನೂ ಕೇವಲ ಮರೀಚಿಕೆ ಎಂದು ಗುರುತಿಸಬಲ್ಲ ಸಹನೆ. ರಂಗಭೂಮಿಯು ಯಾವಾಗಲೂ ಇಂತಹ ಮರೀಚಿಕೆಗಳನ್ನು ಪರಿಚಯಿಸುವ ಸಾಧನವಾಗಿದೆ. ಆ ಮೂಲಕ ಭ್ರಮೆಗಳನ್ನು, ಅಂಧಶ್ರದ್ಧೆಗಳಿಂದ ಬಿಡುಗಡೆ ನೀಡುವ ಶಕ್ತಿ ರಂಗಭೂಮಿಗಿದೆ. ನಾವಿಂದು ಬದಲಿ ವಾಸ್ತವಗಳನ್ನು ಗುರುತಿಸಲಾಗದ, ಭಿನ್ನ ದಾರಿಗಳನ್ನು ಹುಡುಕದ, ಅಸ್ಪಷ್ಟವಾಗಿರುವ ಸಂಬಂಧದ ಕೊಂಡಿಗಳನ್ನು ಗಮನಿಸದ ಹಾಗೆ ಗ್ರಸ್ಥರಾಗಿದ್ದೇವೆ.

ನಮ್ಮ ಮನಸ್ಸು, ಇಂದ್ರಿಯ, ಜಿಹ್ವೆ, ಗ್ರಹಣ ಮತ್ತು ಕಲ್ಪನಾ ಶಕ್ತಿಗಳ ಮೂಲಕ ನಮ್ಮ ಚರಿತ್ರೆಯ ಮರು ಓದು ಮಾತ್ರವಲ್ಲದೆ, ಭವಿಷ್ಯವನ್ನು ಸಹ ಹೊಸದಾಗಿ ರೂಪಿಸಬೇಕಿದೆ. ಈ ಕೆಲಸ ಏಕಾಂತದಲ್ಲಿ ಸಾಧಿತವಾಗುವುದಿಲ್ಲ. ಹಾಗಾಗಿ ನಾವೆಲ್ಲರೂ ಕೈ ಜೋಡಿಸಬೇಕು. ಎಲ್ಲರೂ ಒಂದಾಗಿ ರಂಗಕ್ರಿಯೆ ನಡೆಸಬೇಕು ಎಂದು ತಿಳಿಸಲು ಇದು ಆಹ್ವಾನ.

ಈ ವರೆಗಿನ ನಿಮ್ಮೆಲ್ಲರ ದುಡಿಮೆಗೆ ಧನ್ಯವಾದ ತಿಳಿಸುತ್ತಾ….

ಪೀಟರ್ ಸೆಲ್ಲರ್ಸ್

‍ಲೇಖಕರು Admin

12 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading