ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಿಶ್ವ ಚಲನಚಿತ್ರ ಇತಿಹಾಸ’ ಮತ್ತು ಅದಕ್ಕೆ ಎಚ್ ಎಸ್ ವಿ ಬರೆದ ಮುನ್ನುಡಿ

ಶನಿವಾರ ಪಿ ಆರ್ ರಾಮದಾಸ ನಾಯ್ಡು ಅವರ ವಿಶ್ವ ಚಲನಚಿತ್ರ ಇತಿಹಾಸ ಪುಸ್ತಕ ಬಿಡುಗಡೆ ಆಯಿತು

ಪುಸ್ತಕದ ಮುಖಪುಟ ಮತ್ತು ಅದಕ್ಕೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ.

ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮುನ್ನುಡಿ

ಶ್ರೀ ರಾಮದಾಸನಾಯ್ಡು ಅವರು ನನ್ನ ಸಂಪರ್ಕಕ್ಕೆ ಬಂದದ್ದು ಅವರು ಕೇವಲ ೧೪-೧೫ ವರ್ಷದ ಬಾಲಕನಾಗಿದ್ದಾಗ. ಮಲ್ಲಾಡಿಹಳ್ಳಿಯ ಪ್ರೌಢಶಾಲೆಯಲ್ಲಿ ಅವರು ವಿದ್ಯಾರ್ಥಿ; ನಾನು ಅಧ್ಯಾಪಕ. ತೆಳ್ಳನೆಯ ಮೈಕಟ್ಟಿನ, ಚೂಪುಗಣ್ಣಿನ ಈ ತುಂಟ ಹುಡುಗ ಮುಂದೊಂದು ದಿನ ಕನ್ನಡ ಸಿನಿಮಾ ಜಗತ್ತಿನಲ್ಲಿ ತನ್ನ ಸಿನಿಮಾಗಳಿಂದ ಖ್ಯಾತನಾಗುತ್ತಾನೆಂದು ನಾನು ಕಲ್ಪಿಸುವುದೂ ಸಾಧ್ಯವಿರಲಿಲ್ಲ! ಅದಕ್ಕೇ ಕಾಲನಂಥ ಪವಾಡಪುರುಷ ಮತ್ತೊಬ್ಬ ಇಲ್ಲ ಎಂದು ನನಗೆ ಮತ್ತೆ ಮತ್ತೆ ಅನ್ನಿಸುತ್ತದೆ. ರಾಮದಾಸ ನಾಯ್ಡು ವಿದ್ಯಾರ್ಥಿನಿಲಯದಲ್ಲಿ ಇದ್ದರು. ನಾನು ವಿದ್ಯಾರ್ಥಿನಿಲಯದ ವಾರ್ಡನ್. ಹಾಗಾಗಿ ತರಗತಿಯಲ್ಲಿ ಮಾತ್ರವಲ್ಲ, ತರಗತಿಯ ಹೊರಗೂ ನಾನು ಈ ಹುಡುಗನನ್ನು ಎಚ್ಚರದಿಂದ ಗಮನಿಸುವ ಅವಕಾಶವಿತ್ತು. ನಾನು ಮೊದಲೇ ಸೂಚಿಸಿರುವಂತೆ ಈ ಹುಡುಗ ಸ್ವಲ್ಪ ತುಂಟನೂ ಆಗಿದ್ದನು! ಹಾಗಾಗಿ ಆಗಾಗ ನನ್ನಿಂದ ಬೈಸಿಕೊಳ್ಳುತ್ತಾ, ಆದರೆ ತನ್ನ ಚುರುಕು ಬುದ್ಧಿಯಿಂದ ನನ್ನ ಗುಟ್ಟಾದ ಪ್ರೀತಿಗೂ ಪಾತ್ರನಾಗಿದ್ದ ನಾಯ್ಡು ತರಗತಿಯಲ್ಲಿ ಇದ್ದಾಗ ಮಾತ್ರ ತನ್ಮಯತೆಯಿಂದ ಅಭ್ಯಾಸದಲ್ಲಿ ಮಗ್ನನಾಗುತ್ತಿದ್ದ ವಿದ್ಯಾರ್ಥಿ! ತರಗತಿಯ ಹೊರಗೆ ಈತನ ವರ್ಧಮಾನದ ವರಾತವನ್ನು ನಿಯಂತ್ರಿಸುವುದೇ ಕಷ್ಟವಾಗುವಂತಿತ್ತು. ಇಂಥ ಹುಡುಗರು ಬೇಗ ಅಧ್ಯಾಪಕರ ಸಮೀಪವರ್ತಿಗಳಾಗುತ್ತಾರೆ. ಹಾಗೆ ನನಗೆ ಅತ್ಯಂತ ಸಮೀಪವರ್ತಿಗಳಾಗಿದ್ದ ಕೆಲವೇ ಮಕ್ಕಳಲ್ಲಿ ನಾಯ್ಡು ಒಬ್ಬರು!
ನಾನು ಬೆಂಗಳೂರಿಗೆ ಕಾಲೇಜು ಉಪನ್ಯಾಸಕನಾಗಿ ಬಂದಮೇಲೆ ಬೇರೆ ಬೇರೆ ಸಂದರ್ಭಗಳಲ್ಲಿ ರಾಮದಾಸ ನಾಯ್ಡು ಅವರನ್ನು ನೋಡುವ ಅವಕಾಶ ಒದಗುತ್ತಾ ಇತ್ತು. ಈ ಹಳೆಯ ಮೇಷ್ಟ್ರ ಬಗ್ಗೆ ಆತನಿಗೆ ಅಪರಿಮಿತ ಅಭಿಮಾನ. ಅದರ ಕಾರಣ ಈವತ್ತಿಗೂ ನನಗೆ ನಿಗೂಢವೇ! ನನ್ನ ವಿದ್ಯಾರ್ಥಿಗಳು ನನ್ನನ್ನು ವಿಪರೀತ ಹಚ್ಚಿಕೊಳ್ಳುತ್ತಾರೆ. ಹಾಗೇ ನಾನೂ ನನ್ನ ವಿದ್ಯಾರ್ಥಿಗಳನ್ನು ತುಂಬ ಹಚ್ಚಿಕೊಳ್ಳುತ್ತೇನೆ. ನಲವತ್ತು ಐವತ್ತು ವರ್ಷಗಳಷ್ಟು ಹಿಂದಿನ ವಿದ್ಯಾರ್ಥಿಗಳು ಈವತ್ತೂ ನನ್ನ ಸಂಪರ್ಕದಲ್ಲಿ ಇದ್ದಾರೆ. ಅಂಥವರಲ್ಲಿ ರಾಮದಾಸ ನಾಯ್ದು ಒಬ್ಬರು. ಜೊತೆಗೆ ತಮ್ಮ ಕ್ಷೇತ್ರದಲ್ಲಿ ಬೆಲೆಯುಳ್ಳ ಸಾಧನೆ ಮಾಡಿ, ಅನೇಕ ರಾಜ್ಯಮಟ್ಟದ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ನನ್ನ ಅಭಿಮಾನ ಹೆಮ್ಮೆಗೆ ಕಾರಣರಾದವರು. ನಮ್ಮ ಮಕ್ಕಳು ನಮ್ಮ ಕಣ್ಮುಂದೆ ಬೆಳೆದು ವಿಕಾಸಗೊಳ್ಳುವುದನ್ನು ನೋಡುವುದರಲ್ಲಿ ಇರುವ ಆನಂದ ಮತ್ತೆ ಯಾವುದರಲ್ಲಿ ಇರುವುದು ಸಾಧ್ಯ?

ತಮ್ಮನ್ನು ಬರವಣಿಗೆಗೆ ಹಚ್ಚಿದವನು ನಾನೇ ಎಂದು ನಾಯ್ಡು ಹೇಳುತ್ತಾರೆ. ಅದು ಮತ್ತೆ ಅವರು ನನ್ನ ಬಗ್ಗೆ ಇಟ್ಟಿರುವ ಪ್ರೀತಿಯ ದ್ಯೋತಕ. ಅವರು ಸಿಕ್ಕಾಗಲೆಲ್ಲಾ “ನಾಯ್ಡು, ನಿಮ್ಮ ಕ್ಷೇತ್ರದ ಅನುಭವ ಕುರಿತೇ ಒಂದು ಸಣ್ಣ ಪುಸ್ತಕ ಬರೆದುಕೊಡಿ. ನನ್ನ ವಿದ್ಯಾರ್ಥಿಗಳು ಬರೆದ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇನೆ. ಈಗಾಗಲೇ ಹತ್ತು ಪುಸ್ತಕಗಳು ಆ ಮಾಲೆಯಲ್ಲಿ ಬಂದಿವೆ! ನೀವು ಪುಸ್ತಕ ಬರೆಯುವ ಮೂಲಕ, ನಾಯ್ಡು ಎಚ್ಚೆಸ್ವಿಯ ಶಿಷ್ಯನೆಂದು ಜಗಜ್ಜಾಹೀರುಗೊಳಿಸಿ ಎಂದು ಅವರನ್ನು ನಗುನಗುತ್ತಾ ನಾನು ವಿನಂತಿಸಿದ್ದು ಉಂಟು. ಆದರೆ ಮಾತುಕೊಟ್ಟಂತೆ ನನಗೆ ಪುಸ್ತಕ ಬರೆದು ನಯ್ಡು ಕೊಡಲೇ ಇಲ್ಲ. ಹೀಗೇ ಮಾತು ಕೊಟ್ಟು, ಬರವಣಿಗೆ ಮಾಡದಿರುವ ನನ್ನ ಇನ್ನೊಬ್ಬ ವಿದ್ಯಾರ್ಥಿಮಿತ್ರರು ನಮ್ಮ ಪ್ರಕಾಶ್ ರೈ! ಆದರೆ ನಾನು ಮಾತ್ರ ನನ್ನ ಹಳೆಯ ರಾಗವನ್ನು ಬಿಡುವಂಥವನಲ್ಲ! ನಾಯ್ಡು ಸಿಕ್ಕಾಗಲೆಲ್ಲಾ ಏನಪ್ಪಾ? ನನಗೆ ಯಾವಾಗ ಗುರುಕಾಣಿಕೆ ಕೊಡುತ್ತೀರಿ ಎಂದು ಕೇಳುತ್ತಲೇ ಇದ್ದೆ. ಕಳೆದ ತಿಂಗಳು ಇದ್ದಕ್ಕಿದ್ದಂತೇ ನಾಯ್ಡು ಅವರ ಫೋನ್. ಸರ್…ನಿಮ್ಮನ್ನು ತುರ್ತಾಗಿ ನೋಡಬೇಕಾಗಿದೆ…ಮನೆಗೆ ಬರುತ್ತೇನೆ!. ಏನು ವಿಷಯ ಇರಬಹುದು ಎಂದು ಕುತೂಹಲದಿಂದ ಕಾಯುತ್ತಾ ಇರುವಾಗ ಒಂದು ಬೆಳಿಗ್ಗೆ ನಾಯ್ಡು ಒಂದು ಬೃಹದ್ ಹಸ್ತಪ್ರತಿ ಸಮೇತ ನಮ್ಮ ಮನೆಯ ಮುಂದೆ ಪ್ರತ್ಯಕ್ಷರಾದರು! ನೋಡುತ್ತೇನೆ: ವಿಶ್ವ ಚಲನ ಚಿತ್ರ ಇತಿಹಾಸ ಎಂಬ ಈ ತೂಕದ ಕೃತಿ!ಇಂಥ ಆಕಸ್ಮಿಕಗಳು ಯಾರಿಗೆ ತಾನೇ ಪ್ರಿಯವಾಗುವುದಿಲ್ಲ. ನೀವು ನನ್ನ ಈ ಬೃಹದ್ ಕೃತಿಯನ್ನು ಪ್ರಕಟಿಸಬೇಕಾಗಿಲ್ಲ; ಮುನ್ನುಡಿಯ ರೂಪದಲ್ಲಿ ನಾಲಕ್ಕು ಮಾತು ಬರೆದುಕೊಟ್ಟರೆ ಸಾಕು! ಎಂದು ಮುಗುಳ್ನಗುತ್ತಿದ್ದಾರೆ ರಾಮದಾಸ ನಾಯ್ಡು!

*

ರಾಮದಾಸ ನಾಯ್ಡು ಅವರ ವಿಶ್ವ ಚಲನಚಿತ್ರದ ಇತಿಹಾಸ ಎಂಬ ಈ ಕೃತಿಯನ್ನು ಕುತೂಹಲದಿಂದ ಓದಿದ್ದೇನೆ. ನಾಯ್ಡು ಅವರ ಏಕಮೇವ ಸಾಹಸ ಕಂಡು ಬೆರಗಾಗಿದ್ದೇನೆ. ಕನ್ನಡದಲ್ಲಿ ಇಂಥ ಕೃತಿ ಇದೇ ಮೊದಲನೆಯದು ಎಂದಿಕೊಂಡಿದ್ದೇನೆ. ಜಗತ್ತಿನ ಚಲನಚಿತ್ರದ ಇತಿಹಾಸ, ವಿಕಾಸ, ಮೀಮಾಂಸೆಯನ್ನು ಪರಿಚಯಮಾಡಿಕೊಡುವ ಈ ಕೃತಿಯ ಹಸ್ತಪ್ರತಿಯಲ್ಲಿ ಪುಟ ಪುಟಗಳಲ್ಲಿ ನನ್ನ ಅಡ್ಡಗೆರೆಗಳಿವೆ. ಎಷ್ಟೊಂದು ಬೆರಗು ಹುಟ್ತಿಸುವ ಮಾಹಿತಿಗಳು. ಅನೇಕ ಮೂಲಗಳಿಂದ ಸಂಗ್ರಹಿಸಿ ಅಚ್ಚುಕಟ್ಟಾಗಿ, ಸುಲಲಿತವಾದ ಸರಳ ನೇರ ಭಾಷೆಯಲ್ಲಿ, ಪ್ರಾಸಂಗಿಕ ಚಿತ್ರಗಳ ಸಮೇತ ಮಂಡಿಸುವ ಎನ್ಸೈಕ್ಲೋಪೀಡಿಯಾದ ಮಾದರಿಯ ಈ ಕೃತಿ ಯಾವುದಾದರೂ ಅಕಾಡೆಮಿ ಮಾಡಬಹುದಾದ ಕೆಲಸ. ನಾಯ್ಡು ಏಕಾಂಗಿಯಾಗಿ ಈ ಸಾಹಸ ಮಾಡಿದ್ದಾರೆ. ಈ ಕೃತಿ ಅವರ ಬಗೆಗಿನ ನನ್ನ ಅಭಿಮಾನವನ್ನು ಇಮ್ಮಡಿಗೊಳಿಸಿದೆ.
ಚಲನಚಿತ್ರದ ಎಲ್ಲ ಮೂಲಾಂಶಗಳೂ, ಆದ್ಯ ಪುರುಷರೂ, ಕಲಾಕಾರರು, ವಿಜ್ಞಾನಿಗಳು, ಕಲಾಚಿಂತಕರು ಇಲ್ಲಿ ಕ್ರಮಾನುಗತವಾಗಿ ಚರ್ಚಿತರಾಗಿದ್ದಾರೆ. ಕೇವಲ ಸಾಹಿತ್ಯದ ವಿದ್ಯಾರ್ಥಿಗಳಾದ ನಮ್ಮಂಥವರಿಗೆ ಒಂದೊಂದು ಸಂಗತಿಯೂ ಬೆರಗು ಹುಟ್ಟಿಸುವಂಥದ್ದೇ. ಚಲನಚಿತ್ರದ ಬಗ್ಗೆ ಆಸಕ್ತಿ ಉಳ್ಳ ಸಾಮಾನ್ಯ ಓದುಗರಿಗೆ ಸಮಗ್ರವಾಗಿ ಈ ಅದ್ಭುತ ಕಲಾ ಉದ್ಯಮವನ್ನು ಪರಿಚಯಿಸುವ ಇಂಥ ಕೃತಿಯೊಂದು ಕನ್ನಡದಲ್ಲಿ ಬರುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿತ್ತು. ಬಹುದಿನಗಳ ಆ ಅರಕೆಯನ್ನು ರಾಮದಾಸ ನಾಯ್ಡು ಪೂರೈಸಿದ್ದಾರೆ. ಈ ಕಾರಣಕ್ಕಾಗಿ ಅವರು ಅಭಿನಂದನೆಗೆ ಪಾತ್ರರು. ಚಲನಚಿತ್ರದ ಭಾಷೆ ಮತ್ತು ವ್ಯಾಕರಣಗಳನ್ನು ಅವರು ಬಲ್ಲರು. ಆದರೆ ಸಾಹಿತ್ಯದ ಭಾಷೆ ಮತ್ತು ವ್ಯಾಕರಣಗಳನ್ನೂ ಇಷ್ಟು ಚೆನ್ನಾಗಿ ಅವರು ರೂಢಿಸಿಕೊಂಡಿರುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ಒಂದು ಕಲೆಯಲ್ಲಿ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದು ಬೇರೆ. ಆದರೆ ಆ ಕಲೆಯ ಬಗ್ಗೆ ಮೀಮಾಂಸಾ ರೂಪಿಯಾದ ಬರವಣಿಗೆಯನ್ನು ಮಾಡುವುದು ವಿಶೇಷವಾದ ಮಾತು. ಅದಕ್ಕೆ ಬೇಕಾದ ಪಾರದರ್ಶಕವಾದ ಭಾಷೆಯನ್ನು ರೂಢಿಸುವುದು ಇನ್ನೂ ಕಷ್ಟದ ಮಾತು. ರಾಮದಾಸನಾಯ್ಡು ಅವರ ಭಾಷೆ ಸ್ಪಷ್ಟವಾಗಿದೆ; ಖಚಿತವಾಗಿದೆ. ಅನಗತ್ಯ ಪಾರಿಭಾಷಿಕಗಳ ಭಾರದಿಂದ ಅದು ನರಳುತ್ತಿಲ್ಲ.
ಇವೆಲ್ಲಾ ಮೆಚ್ಚಬೇಕಾದ ಸಂಗತಿಗಳು. ಈವರೆಗೆ ಕೇವಲ ಪದಗಳೋ, ಶಬ್ದಗುಚ್ಛಗಳೋ ಆಗಿ ನಮ್ಮ ಮನಸ್ಸಲ್ಲಿ ಎಡೆ ಪಡೆದಿದ್ದ ಅನೇಕ ಸಂಗತಿಗಳು ಈ ಕೃತಿಯ ಓದಿನ ನಂತರ ವ್ಯಕ್ತಿಗಳಾಗಿ, ಕಲ್ಪನೆಗಳಾಗಿ, ಐತಿಹಾಸಿಕ ವಿವರಗಳಾಗಿ, ಸುದೀರ್ಘ ಸಾಧನಾ ಮಾರ್ಗದ ಸೋಪಾನ ಪಂಕ್ತಿಗಳಾಗಿ ವಿಸ್ತೃತಗೊಳ್ಳುವ ರೀತಿ ಅಚ್ಚರಿ ತರಿಸುವಂಥದ್ದು. ಕೆಲವು ಪುಟಗಳನ್ನು ಆಂಗ್ಲ ಉದ್ಧರಣೆಯ ರೂಪದಲ್ಲೇ ನಾಯ್ಡು ಉಳಿಸಿಕೊಂಡಿದ್ದಾರೆ. ಆ ಭಾಗಗಳನ್ನೂ ಕನ್ನಡಕ್ಕೆ ತರುವುದು ಉಚಿತ ಎಂದು ಭಾವಿಸುತ್ತೇನೆ. ಆಂಗ್ಲ ಉಲ್ಲೇಖಗಳನ್ನು ಅಡಿ ಟಿಪ್ಪಣಿಗಳಲ್ಲಿ ಬೇಕಾದರೆ ಉಳಿಸಿಕೊಳ್ಳಬಹುದು. ಹಾಗೇ ಬಳಕೆಯಾಗುವ ಬೇರೆ ಬೇರೆ ಸ್ಥಳ ವ್ಯಕ್ತಿಗಳ ಹೆಸರುಗಳ ಸರಿಯಾದ ರೂಪಗಳ ಬಗ್ಗೆ ನಾಯ್ಡು ಇನ್ನಷ್ಟು ಎಚ್ಚರವಹಿಸಬಹುದು. ಅನೇಕ ವೇಳೆ ಬರೆಯುವ ಮತ್ತು ಅದನ್ನು ಉಚ್ಚರಿಸುವ ರೀತಿ ಭಿನ್ನವಾಗಿರುತ್ತದೆ. ಈ ಅಂಶದ ಬಗ್ಗೆಯೂ ನಾಯ್ಡು ಗಮನಹರಿಸಿದಲ್ಲಿ ಬರವಣಿಗೆ ಇನ್ನಷ್ಟು ಅಧಿಕೃತತೆ ಪಡೆಯುವುದು.
ಸಿನಿಮಾ ಎಂಬ ಮಾಯಕ ಕಲೆಯಲ್ಲಿ, ಮತ್ತು ಉದ್ಯಮದಲ್ಲಿ ಆಸಕ್ತಿಯುಳ್ಳ ಎಲ್ಲರೂ, ವಿಶೇಷವಾಗಿ ಕನ್ನಡಿಗರು ಮತ್ತೆ ಮತ್ತೆ ಓದಬೇಕಾದ ಒಂದು ಪಾರಮಾರ್ಷಿಕ ಕೃತಿಯನ್ನು ನಾಯ್ಡು ರಚಿಸಿದ್ದಾರೆ. ನಿಜವಾದ ಅರ್ಥದಲ್ಲಿ ಇದೊಂದು ರೆಫರೆನ್ಸ್ ವರ್ಕ್. ನಾಯ್ಡು ಅವರ ದಶಕಗಳ ಏಕಾಗ್ರ ಸಾಧನೆ ಮತ್ತು ಸಾಹಸಗಳ ಫಲ ಇದಾಗಿದೆ. ಇಂಥ ಒಂದು ಅಮೂಲ್ಯ ಕೃತಿಗಾಗಿ ಅವರನ್ನು ನಾನು ಅತ್ಯಂತ ಅಭಿಮಾನದಿಂದ ಅಭಿನಂದಿಸುತ್ತೇನೆ.

‍ಲೇಖಕರು avadhi

15 July, 2013

1 Comment

  1. na.. damora shetty

    kritiya bgge innshtu bareyaddu kandaaga ‘vishwa cinema’ avara niriiksheya mattakke baralillaveno annisthu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading