ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವಾಹೇತರ ಲೈಂಗಿಕ ಸಂಬಂಧ ರಾಧಾಕೃಷ್ಣನ್ ಅವರ ವೈಯಕ್ತಿಕ ವಿಚಾರ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.

ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ

ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ 

ಈಗ ಕಂಠೀರವ ಅವರ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇವೆ 

೧. ಎಸ್ ರಾಧಾಕೃಷ್ಣನ್ ಅವರ ಜನ್ಮ ದಿನಾಂಕದ ಬಗ್ಗೆ ಅವರಿಗೇ ಸಂದೇಹವಿತ್ತು ಎಂದು ಗೋಪಾಲ್ ಬರೆದಿದ್ದಾರೆಯೇ ಹೊರತು ಖಚಿತ ಮಾಹಿತಿ ಅವರಿಗೂ ಇರಲಿಲ್ಲ.

೨. ವಿವಾಹೇತರ ಲೈಂಗಿಕ ಸಂಬಂಧಗಳನ್ನು ರಾಧಾಕೃಷ್ಣನ್ ಹೊಂದಿದ್ದರು ಎಂಬುದು ಅವರ ವೈಯಕ್ತಿಕ ವಿಚಾರ. ಸಾರ್ವಜನಿಕ ಬದುಕಿನ ಮಾನದಂಡಗಳೇ ಬೇರೆ. ರಾಧಾಕೃಷ್ಣನ್ ಅವರು ತಮ್ಮ ಸಂಬಂಧಗಳ ಮುಸುಕಿನಲ್ಲಿ ಸಾರ್ವಜನಿಕ ನಷ್ಟ ಉಂಟು ಮಾಡುವ ಅವ್ಯವಹಾರಗಳಲ್ಲಿ ತೊಡಗಿರಲಿಲ್ಲ. ಅವರು ಯಾರಿಗೂ “ಹೀಗೇ ಜೀವನ ಮಾಡಿ” ಎಂದು ಬೋಧನೆ ಮಾಡಿದ್ದು ನನಗೆ ಗೊತ್ತಿಲ್ಲ. “ಹೀಗೆ ಜೀವನ ಮಾಡಿ” ಎಂದು ನಮ್ಮ ಫಿಲಾಸಫಿ ಹೇಳುತ್ತದೆ ಎಂದು ವಿಚಾರ ಮಾಡಿರಬಹುದು. ವಿಚಾರ ಮಾಡುವ ಹಕ್ಕು ಅವರದ್ದು. ಬೇರೆಯವರಿಗೆ ಹೀಗೆಯೇ ಮಾಡಿ ಎಂದು ಹೇಳಿ ತಾವು ಅದನ್ನು ಅನುಸರಿಸದೇ ಹೋದಾಗ ಅದು ಆತ್ಮ ವಂಚನೆ ಆಗುತ್ತದೆ. ಸಾರ್ವಜನಿಕವಾಗಿ ಗೊತ್ತಾಗದ ಆತ್ಮ ವಂಚನೆಗಳಿಗೆ ಯಾರಿಗೂ ಕೊರತೆ ಇರುವುದಿಲ್ಲ.

೩. ಎಸ್. ರಾಧಾಕೃಷ್ಣನ್ ಅವರ ವಿದ್ವತ್ತಿನ ಗುಣಮಟ್ಟವೂ ಚರ್ಚಾರ್ಹ ಆಗಿರಬಹುದು. ನನಗೆ ಅವರ ಹಿಂದೂ ಫಿಲಾಸಫಿ ಅಥ್ವಾ ಇನ್ನಾವುದೇ ಬಗೆಗಿನ ಸಾಹಿತ್ಯ ಕೆಲಸದ ಬಗ್ಗೆ ಹೆಚ್ಚು ಗೊತ್ತಿಲ್ಲ. “ಸುಮಾರು ಗುಣಮಟ್ಟ” ಹೊಂದಿದ ಚಿಂತಕರ ದಂಡೇ ಅಂದಿನ ಭಾರತದಲ್ಲಿ ಇತ್ತು, ಇವತ್ತು ಇನ್ನೂ ಹೆಚ್ಚಾಗಿದ್ದಾರೆ. “ಶ್ರೇಷ್ಠತೆ”ಯ ಅಳತೆಗೋಲು ಮೊಳದ ಕೈ ಇದ್ದ ಹಾಗೆ.

೪. ಎಸ್. ರಾಧಾಕೃಷ್ಣನ್ ಅವರ ವೈಯಕ್ತಿಕ ಆಯ್ಕೆಗಳನ್ನು “ಭ್ರಷ್ಟತೆ” ಎಂದು ಬಿಂಬಿಸುವ ಸ್ವಾತಂತ್ರ್ಯ ವಡ್ಡಗೆರೆ ಅವರಿಗಿದೆ. ಆದರೆ, ವಡ್ಡಗೆರೆ ಅವರು ಒಂದು ಅಂಶವನ್ನು ಗಮನಿಸಿಯೂ ಗಮನಿಸಿಲ್ಲ. ಎಸ್. ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಬರೆದಿರುವುದು ಅವರ ಮಗನೇ ಆಗಿದ್ದ ಎಸ್ ಗೋಪಾಲ್. ಮಗನಾದವನು ತಂದೆಯ ಬಗ್ಗೆ ಬರೆಯುವಾಗ ಇಷ್ಟು ಪರದೆ ಇಲ್ಲದ ವಿವರಗಳನ್ನು ಕೊಟ್ಟಿರುವ ಸಂಗತಿಯೇ ವಿಶೇಷವಾದುದು. ಭಾರತದಲ್ಲಿ ಈವರೆಗೆ ಬಂದಿರುವ ಖ್ಯಾತನಾಮರ ಜೀವನ ಚರಿತ್ರೆಗಳಲ್ಲಿ ಅತ್ಯಂತ ನೇರವಾದ ಮತ್ತು ಯಾವುದೇ ವ್ಯಕ್ತಿನಿಷ್ಠ ಕಟ್ಟುಪಾಡುಗಳಿಗೆ ಸಿಲುಕದ ಬರವಣಿಗೆಗಳಲ್ಲಿ ಗೋಪಾಲ್ ಅವರ ಬರವಣಿಗೆಯನ್ನು ಮುಂಚೂಣಿಯಲ್ಲಿದೆ ಎಂದು ಪರಿಗಣಿಸುತ್ತಾರೆ ಅನೇಕರು.

೫. ಸಾವಿತ್ರಿ ಬಾಯಿ ಫುಲೆ ಅವರು ಮಾದರಿ ಸಾರ್ವಜನಿಕ ಜೀವನ ನಡೆಸಿರಬಹುದು. ಅವರ ಜನ್ಮ ದಿನಾಂಕ ೧೮೩೧ ರಲ್ಲಿಯದ್ದು. ಅದರ ಬಗ್ಗೆ ಖಚಿತವಾದ ದಾಖಲೆಗಳು ಇವೆಯೇ ಎಂಬ ಅನುಮಾನ ಯಾರಿಗಾದರೂ ಬರುತ್ತದೆ. ಮೊದಲ ಸೆಪ್ಟೆಂಬರ್ ೫ ನ್ನು ಅರ್ಹರಿಗೆ ಕೊಟ್ಟಿಲ್ಲ ಎನ್ನುವ ವಾದ ಒಂದು ಮಿತಿ, ಫುಲೆ ಒಬ್ಬರೇ ಮಾದರಿ ಶಿಕ್ಷಕಿಯಾಗಿ ನಿಮಗೆ ಗೋಚರಿಸುವುದು ಇನ್ನೂ ದೊಡ್ಡ ಮಿತಿ. ಜೊತೆಗೆ ಆಕೆಯ ಸಾಮಾಜಿಕ ಹಿನ್ನೆಲೆ (ಜಾತಿ ಒಂದೇ ಅಲ್ಲ) ಯೂ ನಿಮ್ಮನ್ನು ಆಕೆಯತ್ತ ಆಕರ್ಷಿಸಬಹುದು. ಇದು ಒಂದು ಥರಾ ಮೂಲದಲ್ಲಿದ್ದ ದಾರ್ಶನಿಕರಿಗೆ ಹೆಚ್ಚಿನ ಸ್ಥಾನಮಾನಗಳನ್ನು ಕೊಡಿಸುವ ಆಸೆ ಎನ್ನಬಹುದು. ಪ್ರತಿಯೊಂದು ಜಾತಿಗೂ ಒಬ್ಬ ದಾರ್ಶನಿಕನ/ಳ ಜಯಂತಿ (ಅದಕ್ಕೆ ಸರ್ಕಾರಿ ರಜೆ) ಬೇಕೆನ್ನುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಜನವರಿ ಮೂರನ್ನು ಶಿಕ್ಷಕರ ಎರಡನೇ ದಿನ ಎಂದು ಘೋಷಿಸಿದರೆ ಆಶ್ಚರ್ಯವಿಲ್ಲ.

‍ಲೇಖಕರು avadhi

9 September, 2019

1 Comment

  1. Samvartha 'Sahil'

    ಶಿಕ್ಷಕರ ದಿನ ಅಂತ ಆಚರಿಸುವುದು ಅನಿವಾರ್ಯವೇ ಅಂತಾದರೆ ಅದಕ್ಕೆ ರಾಧಾಕೃಷ್ಣನ್ ಅವರ ಸ್ಮರಣಾರ್ಥ ಅವರ ಜನ್ಮದಿನದಂದು ಆಚರಿಸುವುದಕ್ಕಿಂತ ಸಾವಿತ್ರಿಬಾಯಿ ಫುಲೆ ಅವರ ಸ್ಮರಣಾರ್ಥ ಅವರ ಜನ್ಮ ದಿನ ಶಿಕ್ಷಕರ ದಿನದ ಆಚಾಹರಣೆಗೆ ಹೆಚ್ಚು ಸೂಕ್ತ ಮತ್ತು ಅರ್ಥಪೂರ್ಣ ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ತಾಯಿ ಫುಲೆ ಅವರ ಜಾತಿ ಕಾರಣವಲ್ಲ. ಅವರು ಮಾಡಿದ ಕೆಲಸ ಅವರ ದೇಶ-ಕಾಲದ ಮಟ್ಟಿಗೆ ಕ್ರಾಂತಿಕಾರಿಯಾದದ್ದು. ಸಾಮಾಜಿಕ ನ್ಯಾಯದ ಪ್ರಜ್ಞೆ ಇದ್ದವರಿಗೆ ಇದು ಅರ್ಥವಾಗುವುದು ಕಷ್ಟವಲ್ಲ. ತಾಯಿ ಫುಲೆ ಅವರ ಕೆಲಸದ ದೂರದೃಷ್ಟಿ, ಆಶಯ ಹಾಗು ಅವರ ಕೆಲಸದ ಪರಿಣಾಮ, ಫಲ ಇವನ್ನೆಲ್ಲ ಗಮನಿಸಿದರೆ ತಾಯಿ ಫುಲೆ ಅವರ ಸ್ಮರಣೆಯಲ್ಲಿ ಶಿಕ್ಷಕರ ದಿನ ಆಚರಿಸುವುದು ಸೂಕ್ತ ಮತ್ತು ಅರ್ಥಪೂರ್ಣ ಎಂದು ತಿಳಿಯುತ್ತದೆ.

    ಶಿಕ್ಷಕರ ದಿನ ಆಚರಿಸಲು ರಾಧಾಕೃಷ್ಣನ್ ಅವರ ಜನ್ಮದಿನ ಯಾಕೆ ಆಯ್ದುಕೊಳ್ಳಲಾಯಿತು ಅನ್ನುವ ವಿಷಯ ಗುರುತಿಸುವುದು ಅಗತ್ಯವಾದರೂ ಅದನ್ನು ಸಮಜಾಯಿಷಿಯಂತೆ ಮಂಡಿಸುವುದು ಸರಿಯೋ ಗೊತ್ತಿಲ್ಲ. ಯಾಕೆಂದರೆ ಶಿಕ್ಷಕರ ದಿನ ಎಂದು ಆಚರಿಸುವುದು ಮುಖ್ಯವೇ ಅಂತಾದರೆ, ನಮ್ಮ ಸಮಾಜವು (ಬೇಕಿದ್ದರೆ ದೇಶ ಎಂದು ಓದಿಕೊಳ್ಳಿ) ಎಂತಾ ಶಿಕ್ಷಕರನ್ನು ಮಾದರಿ, ಆದರ್ಶ ಎಂದು ಒಪ್ಪಿಕೊಳ್ಳುತ್ತದೆ ಎಂಥಾ ಮೌಲ್ಯಗಳನ್ನು ಮೈಗೂಡಿಸ್ಕಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಕಾರ್ಯನಿರ್ವಸಬೇಕೆಂದು ನಿರೀಕ್ಷಿಸುತ್ತದೆ ಎಂಬುವುದು ಮುಖ್ಯ. ಯಾಕೆಂದರೆ ಈ ದಿನಾಚರಣೆಗಳು ಈ ಎಲ್ಲಾ ಕನಸು, ನಿರೀಕ್ಷೆ, ಜವಾಬ್ದಾರಿಗಳನ್ನು ನೆನಪಿಸುವ ದಿನ ಆಗಬೇಕೆ ಹೊರತು ಸುಮ್ಮನೆ ಲಾಡೋ ಇಲ್ಲ ಮೈಸೂರ್ ಪಾಕ್ ಹಂಚುವ ಕಾರ್ಯಕ್ರಮ ಆಗಬಾರದು. ಹಾಗಿರುವಾಗ ಶಿಕ್ಷಕರ ದಿನ ಆಚರಿಸುವುದೇ ಎಂದಾದರೆ ಆ ದಿನ ಯಾರ ಸ್ಮರಣಾರ್ಥ ನೆಡೆಸುವುದು ಆರೋಗ್ಯಕರ ಮತ್ತು ಸಮಾನತೆಯ ಸಮಾಜದ ಕನಸು ಕಾಣುವ ನಮಗೆ ಯಾರು ಮುಖ್ಯ ಯಾವ ಮೌಲ್ಯಗಳು ಮುಖ್ಯ ಎಂದು ಪರೀಕ್ಷಿಸಿದರೆ, ರಾಧಾಕೃಷ್ಣನ್ ಅವರಗಿಂತ ತಾಯಿ ಫುಲೆ ಅವರ ನೆನಪಿನಲ್ಲಿ ಆಚರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲು ಕಷ್ಟವಾಗುವುದಿಲ್ಲ. ಪ್ರೊವೈಡೆಡ್, ಸಮಾಜಿಕ ನ್ಯಾಯ ನಮಗೆ ಮುಖ್ಯ ಎಂತಾದರೆ. ಅದು ಮುಖ್ಯ ಅಲ್ಲ ಎನ್ನುವವರ ಅಭಿಪ್ರಾಯ ಬೇರೆ ಇರಬಹುದು.

    ರಾಧಾಕೃಷ್ಣನ್ ಅವರ ಖಾಸಗಿ ಬದುಕಿನ ವಿಚಾರ ಅಮುಖ್ಯವೇ? ಅಥವಾ ಅದು ಅವರ ವೈಯಕ್ತಿಕ ವಿಚಾರ ಅದರ ಬಗ್ಗೆ ನಾವ್ಯಾರೂ ಏನೂ ಹೇಳುವ ಹಾಗಿಲ್ಲ ಎಂದರ್ಥವೇ? ಒಂದು ವೇಳೆ ಈ ಮಾತನ್ನು ಒಪ್ಪಿಕೊಂಡರೆ, ವರದಕ್ಷಿಣೆ, ಕೌಟುಂಬಿಕ ಹಿಂಸೆ (ನಾವು ಕೌಟುಂಬಿಕ ಹಿಂಸೆ ಕುರಿತು ಮಾತನಾಡುವಾಗ ಕೇವಲ ಹೆಂಡತಿಯ ಮೇಲೆ ಗಂಡ ನೆಡೆಸುವ ಹಿಂಸೆ ಕ್ರೌರ್ಯದ ಕುರಿತು ಮಾತ್ರ ಮಾತನಾಡುತ್ತೇವೆ, ಆದರೆ ಮಕ್ಕಳ ಮೇಲೆ ತಂದೆ-ತಾಯಿ ತಮ್ಮ ವಯಸ್ಸಿನ ಹಿರಿತನದ ಅಸ್ತ್ರ ಹಿಡಿದುಕೊಂಡೆ ನೆಡೆಸುವ ಅಗೋಚರ ದಬ್ಬಾಳಿಕೆ ಕುರಿತು ಮಾತನಾಡುವುದೇ ಇಲ್ಲ), ಮರ್ಯಾದೆ ಹತ್ಯೆ ಇತ್ಯಾದಿಗಳ ಕುರಿತು ನಾವು ಏನೂ ಹೇಳುವ ಹಾಗೆ ಇಲ್ಲ ಎಂದಾಗುತ್ತದೆ. ಹಾಗೆಂದ ಮಾತ್ರಕ್ಕೆ ೨೧ನೆ ಶತಮಾನದ ಪೊಲಿಟಿಕಲಿ ಕರೆಕ್ಟ್ ಅಳತೆಗೋಲನ್ನು ಹಿಡಿದುಕೊಂಡು ಬೇರೆಯದೇ ಕಾಲಮಾನದ ಬದುಕನ್ನು ಅಳೆಯುವುದು ಸರಿಯೇ? ಮತ್ತು ಖಾಸಗಿ ಬದುಕಿನ ವಿಚಾರಗಳಿಗೆ ಜೋತುಬಿದ್ದು ಒಂದು ವ್ಯಕ್ತಿಯ ಸಂಪೂರ್ಣ ಬದುಕಿನ ಬೇರೆಲ್ಲ ವಿವರಗಳನ್ನು ಮರೆತು ಅಂಕಪಟ್ಟಿ ತಯಾರಿಸಿ ಅವರ ಕುರಿತು ನಿರ್ಣಾಯಕ ಮಾತುಗಳನ್ನಾಡುವುದು ಸರಿಯೇ? ಹೇಗೆ ಓರ್ವ ವ್ಯಕ್ತಿಯ ಸಾರ್ವಜನಿಕ ಬದುಕಿನ ಸಾಧನೆ ಅವರ ಖಾಸಗಿ ಬದುಕಿನ ತಪ್ಪುಗಳಿಗೆ ಕ್ಲೀನ್ ಚಿಟ್ ಕೊಡಿಸಲು ಸಾಧ್ಯವಿಲ್ಲವೋ, ಹಾಗೆಯೇ ಖಾಸಗಿ ಬದುಕಿನ ಮಿತಿಗಳು ಅವರ ಸಾರ್ವಜನಿಕ ಬದುಕಿನ ಮಹತ್ವ, ಕೊಡುಗೆಗೆಳನ್ನು ನೆಗೇಟ್ ಮಾಡಲು ಸಾಧ್ಯವಿಲ್ಲ. ಹಾಗಿರುವಾಗ ಖಾಸಗಿ ಬದುಕಿನ ಇತಿಮಿತಿಗಳನ್ನು ಸಾರ್ವಜನಿಕ ಬದುಕಿನ ಅಳತೆಗೆ ಎಳೆದು ತರುವುದು ಅವಶ್ಯವೇ? ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತ ಹಿಪೋಕ್ರಸಿ ಇದ್ದಾಗ ವಿಚಾರ ಬೇರೆ.

    ಬದುಕನ್ನು ಸಜೀವವಾಗಿ ನೋಡಲಾಗದ ಮಿತಿ ನಮ್ಮನ್ನು ಬದುಕಿನ ಮತ್ತು ಮನುಷ್ಯರ ಓರೆಕೋರೆಗಳಿಗೆ ಅಸಹನೀಯರನ್ನಾಗಿಸುತ್ತದೆ.

    ತಿಂಡಿ ತಿಂದ ಹೋಟೆಲ್ ಅನ್ನು, ಬಟ್ಟೆ ಕೊಂಡ ಬ್ರಾಂಡ್ ಅಂಗಡಿಯನ್ನು, ಪುಸ್ತಕ ತರಿಸಿಕೊಂಡ ವೆಬ್ಸೈಟ್ ಅನ್ನು, ಟಿವಿಯಲ್ಲಿ ನೋಡಿದ ಕಾರ್ಯಕ್ರಮವನ್ನು, ಮೋಜಿಗಾಗಿ ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಿ ಆಡಿದ ಆಟವನ್ನು- ಹೀಗೆ ಎಲ್ಲವನ್ನು ಐದರಲ್ಲಿ ನಾಲ್ಕೋ, ಇಲ್ಲ ಎರಡೂ ಎಂದು ರೇಟ್ ಮಾಡುವ ಅಭ್ಯಾಸ ಆಗಿ ಆಗಿ ನಾವೆಲ್ಲಾ ಈಗ ಮನುಷ್ಯರನ್ನು ರೇಟ್ ಮಾಡುವ ಒಂದು ಅಂಪೈರ್ ಸಿಂಡ್ರೋಮ್ ಗೆ ಬಲಿಯಾದಂತಿದೆ. ನಮ್ಮ ಅನಾಲಿಸಿಸ್ – ಅದು ಜನರ ಕುರಿತಾಗಿರಲಿ ಇಲ್ಲ ಯಾವುದೇ ವಿಷಯದ ಕುರಿತಾಗಿರಲಿ- ಎಲ್ಲವೂ ಅರ್ಥ ಮಾಡಿಕೊಳ್ಳುವುದನ್ನು ಅಮುಖ್ಯಗೊಳಿಸಿ ಬರಿ ರೇಟ್ ಮಾಡುವುದು ಮುಖ್ಯ, ರೇಟ್ ಮಾಡಿ ನಿರ್ಣಯ ಪಾಸ್ ಮಾಡುವುದೇ ಮುಖ್ಯ ಎಂಬಲ್ಲಿಗೆ ಬಂದು ನಿಂತಿದೆ. ಇದು ದುರಂತ.

    ರಾಧಾಕೃಷ್ಣನ್ ಅವರ ಕುರಿತು ಒಂದು ಸಣ್ಣ ಲೇಖನದಲ್ಲಿ ಎ.ಏನ್. ಮೂರ್ತಿರಾಯರು ಒಂದು ಮನಮಿಡಿಯುವ ಘಟನೆ ಕುರಿತು ಹೇಳುತ್ತಾರೆ. ಒಮ್ಮೆ ರಾಧಾಕೃಷ್ಣನ್ ರಶಿಯಾ ದೇಶದ ಸ್ಟಾಲಿನ್ ಅನ್ನು ಭೇಟಿ ಮಾಡಿದ್ದರಂತೆ. ಹೇಳಿಕೇಳಿ ಮೇಷ್ಟ್ರಾಗಿದ್ದ ರಾಧಾಕೃಷ್ಣನ್ ಬಹಳ ಮಮತೆಯಿಂದ ಸ್ಟಾಲಿನ್ ಜೊತೆ ಮಾತನಾಡುತ್ತಿರುವಾಗ ಸ್ಟಾಲಿನ್ ಕಣ್ಣಲ್ಲಿ ನೀರಿಳಿಯಲು ಆರಂಬಿಸಿತು. ಹೌದು, ನಿಹೃದಯಿ ಸ್ಟಾಲಿನ್ ಕಣ್ಣಲ್ಲಿ ಕಂಬನಿ! ಸ್ಟಾಲಿನ್ ಅಳುವಿಗೆ ಕಾರಣ ತಿಳಿಯದ ರಾಧಾಕೃಷ್ಣನ್ ಅವನ ಬಳಿ ಏನಾಯಿತು ಎಂದು ಕೇಳಿದಾಗ ಸ್ಟಾಲಿನ್ ಕೊಟ್ಟ ಉತ್ತರ, “ನನ್ನನ್ನು ಇಷ್ಟು ಪ್ರೀತಿಯಿಂದ, ಇಷ್ಟು ಆಪ್ತವಾಗಿ ಮಾತನಾಡಿಸಿದ್ದೇ ಇಲ್ಲ.”

    ಪ್ರೇಮರಾಹಿತ್ಯ ಮನುಷ್ಯನನ್ನು ಏನಾಗಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಂತಿರುವ ಈ ಘಟನೆಯನ್ನು ನೆನಪಿಸ್ಕೊಳ್ಳುವುದು ಮತ್ತು ಸ್ಟಾಲಿನ್ ಮೇಲೆ ಈ ವಿಷಯಕ್ಕೆ ಕರುಣೆ ತೋರುವುದು ಎಂದರೆ ಆತ ಮಾಡಿದ ತಪ್ಪುಗಳಿಗೆ ಕ್ಲೀನ್ ಚಿಟ್ ಕೊಡುವುದು ಎಂದರ್ಥವಲ್ಲ. ಹಾಗೆಯೇ ಸ್ಟಾಲಿನ್ ಅಂಥಾ ಸ್ಟಾಲಿನ್ ಒಳಗಿನ ಮನುಷ್ಯನನ್ನು ಕಾಣಿಸಿದ ರಾಧಾಕೃಷ್ಣನ್ ಅವರ ನಡೆ-ನುಡಿ ಅವರ ಮಿತಿಗಳಿಗೆ ಕ್ಲೀನ್ ಚಿಟ್ ನೀಡುವುದಿಲ್ಲ.

    ಈ ಚರ್ಚೆಯಲ್ಲಿ ಶಿಕ್ಷಕರ ದಿನಕ್ಕೆ ರಾಧಾಕೃಷ್ಣನ್ ಅವರ ಜನ್ಮದಿನ ಸೂಕ್ತವೋ ಇಲ್ಲವೋ ಎಂಬ ವಿಷಯ ಮತ್ತು ಖಾಸಗಿ ಬದುಕಿನ ವಿಚಾರಗಳಿಗೆ ಸಾರಾಸಗಟಾಗಿ ವ್ಯಕ್ತಿಯ ಇಡೀ ಬದುಕನ್ನು ತಿರಸ್ಕರಿಸಬಹುದೇ ಎಂಬ ವಿಷಯಗಳು ಇವೆ. ಅವೆರಡನ್ನು ಬೇರೆಬೇರೆಯಾಗಿಯೇ ನೋಡುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ.

    ನನ್ನ ಮಾತಿನಲ್ಲೇನಾದರು ತಪ್ಪಿದ್ದರೆ ಇಲ್ಲ ಉಡಾಫೆ ಕಂಡುಬಂದರೆ ಕ್ಷಮಿಸಿ.

Trackbacks/Pingbacks

  1. ಫುಲೆ ನೆನಪಿನಲ್ಲಿ ಶಿಕ್ಷಕರ ದಿನ ಆಚರಿಸುವುದು ಸೂಕ್ತ.. – . - […] ಕಂಠೀರವ ಅವರ ಪ್ರತಿಕ್ರಿಯೆ ಹೀಗಿದೆ. ಅದು ಇಲ್ಲಿದೆ  […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading