ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವಾದಾತ್ಮಕ ನಾಟಕ `ಸಖಾರಾಮ್ ಬೈಂಡರ್'

ವೈ ಕೆ  ಸಂಧ್ಯಾಶರ್ಮ

ಎಪ್ಪತ್ತರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಗಿದ್ದ ನಾಟಕ `ಸಖಾರಾಮ್ ಬೈಂಡರ್’ ಆಗಲೇ ಸಂಪ್ರದಾಯಸ್ಥರ ಹುಬ್ಬೇರುವಂತೆ ಮಾಡಿತ್ತು. ಅನಂತರ ಅದನ್ನು ಕನ್ನಡಕ್ಕೆ ತರುವ ಪ್ರಯತ್ನ ಹುಬ್ಬಳ್ಳಿಯಲ್ಲಿ ನಡೆದು ಅದು ವಿವಾದಕ್ಕೀಡಾಗಿ ಅರ್ಧದಲ್ಲೇ ನಿಂತುಹೋದ ಬಗ್ಗೆ ಅಸ್ಪಷ್ಟ ನೆನಪು. 1972 ರಲ್ಲಿ ರಚಿತವಾದ ಈ ನಾಟಕ ಮರಾಠಿ ರಂಗಭೂಮಿಯಲ್ಲಿ ಹೊಸ ಅಲೆ, ವಿವಾದವನ್ನೇ ಹುಟ್ಟು ಹಾಕಿತು. ಮದುವೆಯಾಗದೆ ಒಂದೇ ಮನೆಯಲ್ಲಿ ಸಂಸಾರ ಮಾಡುವಂಥ ವಿಷಯವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿ ಆಗಿರದೆ ಈ ಕೃತಿ ಸೆನ್ಸಾರ್ ಮಂಡಳಿಯಿಂದ ನಿಷೇಧಿಸಲ್ಪಟ್ಟು ಅನಂತರ ಮಡಿವಂತಿಕೆಯ ಸಮಾಜದ ತೀವ್ರ ಪ್ರತಿಭಟನೆಯ ನಡುವೆಯೂ ಕೋರ್ಟ್ ಮೆಟ್ಟಿಲೇರಿ ಅನೇಕ ಸ್ತರಗಳಲ್ಲಿ ವಾದ-ಪ್ರತಿ ವಾದ, ಚರ್ಚೆಗಳು ನಡೆದು ಕಟಕಟೆಯಿಂದಾಚೆ ಬಂದು ಮರಾಠಿ, ಹಿಂದೀ ಭಾಷೆಗಳಲ್ಲಿ ಕೆಲವು ಪ್ರಯೋಗಗಳನ್ನು ಕಂಡಿತು. ಕನ್ನಡ ನೆಲದಲ್ಲಿ ವಿವಾದವಾದ ನಾಲ್ಕು ದಶಕಗಳ ನಂತರ `ಸರ್ವಸ್ವ’ ರಂಗ ಸಂಸ್ಥೆಯ `ವೈಖರಿ’ ಕಲಾತಂಡ ಇತ್ತೀಚೆಗೆ ನಗರದ ಕೆ.ಹೆಚ್. ಕಲಾಸೌಧದಲ್ಲಿ ಮೊದಲ ಪ್ರದರ್ಶನ ನೀಡುವ ಸಾಹಸ ಮಾಡಿದೆ. ಮೂಲ ಮರಾಠೀ ನಾಟಕ ವಿಜಯ್ ತೆಂಡೂಲ್ಕರ್, ಅದನ್ನು ಕನ್ನಡಕ್ಕೆ ತಂದವರು ಡಾ. ಗೀತಾ ತೆಕ್ಕೆವಾರಿ.

ಪಾಶ್ಚಿಮಾತ್ಯ ದೇಶಗಳಲ್ಲಿ ಹಲವು ಕಾಲದಿಂದ ಪ್ರಚಲಿತವಾಗಿದ್ದ `ಲಿವಿಂಗ್ ಇನ್ ರಿಲೇಷನ್ಷಿಪ್’ ಮಾದರಿಯ ಸಂಬಂಧ ಈಗ ಭಾರತದಲ್ಲೂ ನಡೆದುಕೊಂಡು ಬರುತ್ತಿದೆಯಾದರೂ ಅದಕ್ಕೆ ಮಾನ್ಯತೆ ದೊರೆತಿಲ್ಲ. ಆದರೂ ಸಮಾಜದ ಯಾವುದೋ ಪದರದಲ್ಲಿ ಮುಚ್ಚು ಮರೆಯಾಗೋ ಇಲ್ಲವೋ ಗೊತ್ತೂ ಗೊತ್ತಿಲ್ಲದಂತೆಯೋ ಅಸ್ಥಿತ್ವದಲ್ಲಿದೆ. ಇಂಥ ಒಂದು ಕೂಡಿ ಬಾಳುವ ಸಂಬಂಧವೊಂದರ ಸುತ್ತ ಹಾಗೂ ಅದರ ಆನುಷಂಗಿಕ ಸಂಗತಿಗಳ ಬಗ್ಗೆ ಹೆಣೆದ ಕಥಾವಸ್ತು ಈ ನಾಟಕದ್ದು.
ಪ್ರೆಸ್ಸಿನಲ್ಲಿ ಬೈಂಡರ್ ವೃತ್ತಿಯಲ್ಲಿದ್ದ ಕೆಳ ಮಧ್ಯಮ ವರ್ಗದ ಬೈಂಡರ್ ಸಖಾರಾಂ ಎಂಬುವವನು ತನ್ನ ದುಶ್ಚಟಗಳ ಮಧ್ಯೆ ತನ್ನ ಹೆಣ್ಣುಬಾಕುತನದ ಹಸಿವು ನಿವಾರಣೆಗೆ, ಅನಾಥ, ತ್ಯಕ್ತ ಹೆಣ್ಣುಮಕ್ಕಳಿಗೆ ಆಶ್ರಯ ಕೊಡುವ ನೆಪದಲ್ಲಿ ಶೋಷಣೆ ಮಾಡುವುದು ಮೇಲ್ಮೈ ನೋಟದಲ್ಲಿ ಕಂಡುಬರುವ ಹೂರಣ. ಅವನ ಸ್ವಂತ ಸುಖ ಸಾಧನೆಯೇ ಮೂಲಮಂತ್ರ. ಅವನ ಜೀವನದಲ್ಲಿ ಆಗಿ ಹೋದ ಆರು ಜನ ಹೆಣ್ಣುಮಕ್ಕಳ ಪೈಕಿ ಕಡೆಯ ಇಬ್ಬರ ಕಥೆ-ವ್ಯಥೆಯ ಸುತ್ತ ಇಲ್ಲಿನ ಕಥಾನಕ ತೆರೆದುಕೊಳ್ಳುತ್ತದೆ.
ಈ ವಿಕ್ಷಿಪ್ತ ಮನಸ್ಸಿನ, ನಡವಳಿಕೆಯ ಬೈಂಡರನ ಸಾಂಗತ್ಯದಲ್ಲಿ ಅವರ ಬದುಕು ನಲುಗುವ ಪರಿ , ಬಿಚ್ಚಿಕೊಳ್ಳುವ ದೃಶ್ಯಗಳು ಅತಿಶಯೋಕ್ತಿಯೇ ಸರಿ. ಅವನ ಸುತ್ತ ಮುತ್ತಲ ಮನೆಯವರ ಕೊಂಕು, ಆಕ್ಷೇಪಣೆಗಳಿಗಳಿಗೆ ಸೊಪ್ಪು ಹಾಕದೆ, ಅವನು ತನ್ನ ಪಾಡಿಗೆ ತಾನು ಯಾವ ಎಗ್ಗೂ ಇಲ್ಲದೆ ಬೀಡಿ, ಗಾಂಜಾ, ಹೆಂಡ ಕುಡಿಯುತ್ತ ಮದುವೆಯ ಬಂಧನವಿಲ್ಲದೆ ಹೆಂಗಸರನ್ನು ಕರೆತಂದು ಅವರಿಂದ ಮನೆಗೆಲಸ, ಅಡುಗೆ ಹಾಗೂ ತನ್ನ ಕಾಮನೆಗಳನ್ನು ನೀಗಿಸಿಕೊಳ್ಳುವ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾನೆ. ಅದೂ ಮೆತ್ತಗಿದ್ದವರ ಮೇಲೆ ಸವಾರಿ ಮಾಡುತ್ತ, ಬಜಾರಿಯರ ಮುಂದೆ ನಡುಗಿ ಅವರ ಕೈಂಕರ್ಯ ನೆರವೇರಿಸುತ್ತ ಸುಖ ಹೀರುವ ಪ್ರಾಣಿಯಾಗಿರುತ್ತಾನವನು. ಸಂದರ್ಭಕ್ಕೆ ತಕ್ಕಂತೆ ಕುಣಿಯುವ ವ್ಯಕ್ತಿ.
ರಂಗದ ಮೇಲೆ ಮೊದಲು ಕಾಣಿಸಿಕೊಳ್ಳುವ ಲಕ್ಷ್ಮಿ ಮಡಿವಂತಿಕೆಯ, ಅತೀ ಸಂಪ್ರದಾಯಸ್ಥೆ, ದೇವರಲ್ಲಿ ಅತ್ಯಂತ ನಂಬಿಕೆಯುಳ್ಳ ಸಾಧುಪ್ರಾಣಿ. ಆಶ್ರಯವಿತ್ತ ಸಖಾರಾಮನನ್ನೇ ಗಂಡನೆಂದು ತಿಳಿದು ತಾಳಿ ಕಟ್ಟಿಕೊಂಡು, ದಿನನಿತ್ಯ ಅವನಿಂದ ಸಾಯಾ ಬೀಳ ಹೊಡೆತ, ಒದೆತ ತಿಂದು ನಾಯಿಯ ಬಾಳು ದಯನೀಯವಾಗಿ ಬದುಕುತ್ತಿರುವವಳು. ವಿಕ್ಷಿಪ್ತ ಮನಸ್ಸಿನ ಸಖಾರಾಮ ಇಲ್ಲಸಲ್ಲದ ಕಾರಣ ತೆಗೆದು ಅವಳನ್ನು ಮನೆಯಿಂದಟ್ಟುವನು. ಅನಂತರ ಬಂದ ಚಂಪಾ ಪಕ್ಕಾ ದಂಧೆಯಲ್ಲಿ ಪಳಗಿದವಳು. ತಾಳಿ ಕಟ್ಟಿದ ಗಂಡನನ್ನು ತ್ಯಜಿಸಿ, ಇಟ್ಟುಕೊಂಡ ಸಖಾರಾಮನಿಂದ ಸೇವೆ ಮಾಡಿಸಿಕೊಳ್ಳುತ್ತ, ಅವನ ಮೇಲೆ ಜೋರು- ದರ್ಬಾರು ಮಾಡುತ್ತ, ತಿಂದು-ಕುಡಿದೂ ಮಾಡುವ ಸ್ವೇಚ್ಛಾಚಾರಿ. ಈ ಅತಿರೇಕದಲ್ಲೇ ಅವನಿಗೆ ಮಜ-ಸುಖ. ಅವನನ್ನು ತನಗೆ ಬೇಕಾದಂತೆ ಆಟವಾಡಿಸುತ್ತಾಳೆ. ಇಂಥ ಸೊಕ್ಕಿನ ಹೆಂಗಸಿನಲ್ಲೂ ಕೊಂಚ ಮಾನವೀಯತೆ ಇದೆಯೆಂಬಂತೆ ಮರಳಿ ಬಂದ ಲಕ್ಷ್ಮಿಗೆ ಅವನ ಪ್ರತಿಭಟನೆಯ ನಡುವೆಯೂ ಆಶ್ರಯ ಕೊಡುತ್ತಾಳೆ. ಕೊನೆಗೆ ಅವನಿಗೆ ಗೊತ್ತಿಲ್ಲದಂತೆ ಇನ್ನೊಬ್ಬನ ಸಂಗ ಮಾಡಿ ಅವನಿಂದ ಕೊಲೆಯಾಗುತ್ತಾಳೆ.

ಹಾದರ, ಕ್ರೌರ್ಯ, ದುಶ್ಚಟ, ದಬ್ಬಾಳಿಕೆ, ತೆವಲುಗಳು ಇವೆಲ್ಲವನ್ನೂ ಮೀರಿಸುವ ಸಖಾರಾಮನ ತಿಕ್ಕಲುತನವನ್ನು ತೋರಿಸುವುದೇ ನಾಟಕದ ಉದ್ದೇಶವೇ ಎಂಬ ಯಕ್ಷಪ್ರಶ್ನೆ ಎದುರಾಗುತ್ತದೆ. ಯಾವ ಪುರುಷಾರ್ಥಕ್ಕೆ, ಯಾವ ಮಹದುದ್ದೇಶಕ್ಕೆ, ಯಾವ ಸಂದೇಶ ನೀಡಲು ಈ ನಾಟಕ ರಚನೆಯಾಗಿದೆ ಎಂಬ ತುಮುಲ ಅಯೋಮಯ ಸ್ತರಕ್ಕೆ ಕೊಂಡೊಯ್ಯುತ್ತದೆ. ನಾಟಕದ ವಸ್ತುವನ್ನು ನಿಭಾಯಿಸುವಲ್ಲಾದರೂ ನಿರ್ದೇಶಕ ಪ್ರದೀಪ್ ತಿಪಟೂರು ಅವರು ಪ್ರದರ್ಶನದಲ್ಲಿ ಕೊಂಚ ಜಾಣ್ಮೆ ತೋರಬೇಕಿತ್ತು. ನಾಟಕದ ಮೊದಲಿನಿಂದ ಕಡೆಯವರೆಗೂ ರಂಗದ ಮೇಲೆ ಲಕ್ಷ್ಮಿಯನ್ನು ರಂಗದ ತುಂಬಾ ಇಟ್ಟಾಡಿಸಿ ಓಡಿಸಿಕೊಂಡು ಒದ್ದದ್ದೇ ಒದ್ದದ್ದು, ಕೈ ತಿರುಚಿದ್ದು, ಬೆಲ್ಟಲ್ಲಿ ಹೊಡೆದಿದ್ದು, ಮಾತು ಮಾತಿಗೂ ಸೂ…..ಮುಂತಾದ ಕೆಟ್ಟ ಕೊಳಕ ಮಾತುಗಳ ಸುರಿಮಳೆ ಧಾರಾಕಾರ…ಅಬ್ಬಬ್ಬಾ ಘನ ಘೋರ ದೃಶ್ಯ-ಹಿಂಸೆಯ ಪರಾಕಾಷ್ಠೆ….ಚಂಪಳೊಡನೆ ರಮಿಸುವ ಸರಸ-ಸಲ್ಲಾಪ, ಮಲಗುವ, ಹೊರಳಾಡಿ ಮುಲುಕುವ ರತಿ-ಮದನ್ಮೋನ್ಮತ್ತ ನೋಟಗಳೂ ಅಸಹನೀಯವೆನಿಸಿದವು. ಕೆಲ ಪ್ರೇಕ್ಷಕರು ಅರ್ಧದಲ್ಲೇ ಹೇಸಿಕೊಂಡು ಎದ್ದು ಹೋದ ಪ್ರಸಂಗವೂ ನಡೆಯಿತು.
ಸಮಾಜದ, ಮಹಿಳಾ ಸಂಘಟನೆಗಳ ವಿರೋಧ ಕಟ್ಟಿಕೊಳ್ಳಬಹುದಾದ ಇಂಥ ನಾಟಕ ಪ್ರದರ್ಶಿಸಲೇಬೇಕೆಂಬ ಹಟವಿದ್ದರೆ ನಿರ್ದೇಶಕರು ಹಿತಮಿತವಾಗಿ ಮೂಲ ಕೃತಿಯನ್ನು ಹದಮಾಡಿಕೊಂಡು ಕ್ರೌರ್ಯವನ್ನು ಸಾಂಕೇತಿಕವಾಗಿ ತೋರಿಸಬಹುದಿತ್ತು. ಸೊಗಸಾಗಿ ಅಭಿನಯಿಸಿದ ಲಕ್ಷ್ಮಿ( ರಾಜೇಶ್ವರಿ ತಳವಾರ) ಯದು ಸಹಜಾಭಿನಯ. ಅತ್ತೂ ಅತ್ತು ಕೆಂಪಾದ ಆಕೆಯ ಮುಖ, ಬಡಿತದಿಂದ ಹಣ್ಣಾದ ಆಕೆಯ ಮೈ ಕಂಡಾಗ ಮಾತ್ರ ಇದೆಂಥ ನಾಟಕ ಎನಿಸಿದರೂ, ಉಳಿದೆಲ್ಲರ ಅಭಿನಯಗಳೂ ಪಾತ್ರಗಳ ಸಹಜತೆಗೆ ನ್ಯಾಯ ಒದಗಿಸಿದ್ದವು.
 

‍ಲೇಖಕರು avadhi

20 April, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading