– ವಿದ್ಯಾಶಂಕರ್ ಹರಪನಹಳ್ಳಿ
Every man must decide whether he will walk in the light of creative altruism or in the darkness of destructive selfishness.
– Martin Luther King, Jr.
ಕಾಲದ ತಹತಹ, ಸುತ್ತಲಿನ ಪರಿಸರ ಹುಟ್ಟಿ ಹಾಕುವ ಹಿಂಸೆ ವ್ಯಾಂಪೈರ್-ಗಳನ್ನ, ರಕ್ತದಾಹಿಗಳನ್ನ ಹುಟ್ಟಿಹಾಕುತ್ತೆ. ಒಂದು ಸಲ ಹಿಂಸೆಯ ಗೀಳಿಗೆ ಬಿದ್ದ ಮನುಷ್ಯ, ನರ ಮಾಂಸದ ರುಚಿ ಕಂಡ ಹುಲಿಯಂತೆ ಮತ್ತೆ ಮತ್ತೆ ಹಿಂಸೆಗೆ ಮರಳುತ್ತಾನೆ. ಅದನ್ನೇ ಗೀಳನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ. ಉದಾತ್ತ ಭಾವನೆಗಳು, ಉನ್ನತ್ತ ವಿಚಾರಗಳು, ವಿಶಾಲ ಮನೋಭಾವ ಇದೆಲ್ಲಾ ಮಾತಾಡಲಿಕ್ಕೆ, ಬರೆಯಲಿಕ್ಕೆ ಚೆನ್ನ. ನಿಜ ಜೀವನದಲ್ಲಿ ನಮ್ಮೊಳಗೇ ಪಿಸುಣತನ, ದುಷ್ಟ ಬುದ್ಧಿ, ಸಣ್ಣತನ ಎಲ್ಲಾ ಹಾಸುಹೊಕ್ಕಾಗಿರುತ್ತದೆ. ಆದರೆ ನಾವು ತೋರಿಸಿಕೊಳ್ಳಲ್ಲ ಅಷ್ಟೇ! ಎಚ್ಚರವಿದ್ದಾಗ ನಾವೇನೋ ಎಲ್ಲವನ್ನೂ ಅದುಮಿಟ್ಟು ಸಭ್ಯ ಮುಖವಾಡ ತೊಟ್ಟುಬಿಡುತ್ತೇವೆ. ಆದರೆ ಮಲಗಿದಾಗ? ಕನಸಲ್ಲಿ ಎಲ್ಲಾ ವಿಕಾರಗಳು ಎದ್ದೆದ್ದು ಕುಣಿಯುತ್ತವೆ. ಮನಸು, ದೇಹ ಬುದ್ಧಿಯ ನಿಯಂತ್ರಣ ಮೀರಿ ಸ್ಪಂದಿಸುತ್ತೆ.
ಎಚ್ಚರವಿದ್ದಾಗ ಮನಸನ್ನ ಹೇಗೋ ನಿಯಂತ್ರಿಸಬಹುದು, ವಿಷಾಯಂತರ ಮಾಡಬಹುದು, ಬೇರೆ ಕಡೆ ಬಲವಂತದಿಂದ ಗಮನಹರಿಸಬಹುದು. ಆದರೆ ಕನಸುಗಳನ್ನ? ನನಗೆ ಇತ್ತೀಚಿಗೆ ಮಲಗುವುದೆಂದರೆ ಭಯ. ಕನಸಗಳ ಭಯ. ಮನಸಿನ ವಿಕಾರದ ಅನಾವರಣದ ಭಯ.
~*~
ಇತ್ತೀಚಿಗೆ ಮಲಗಿದ್ದಾಗ ತುಂಬಾ ಹೊರಳಾಡುತ್ತೇನೆ, ಏನೇನೋ ಬಡಬಡಿಸುತ್ತೇನೆ ಎಂದು ನನ್ನ ಹೆಂಡತಿ ದೂರಿದಳು. ಏನೋ ಸಮಜಾಯಿಷಿ ಕೊಟ್ಟು ಸುಮ್ಮನಾದೆ. ಅಲ್ಲಾ! ಹೆಂಡತಿಯೊಡನೆ ಎಲ್ಲಾ ವಿಚಾರ, ವಿಕಾರ ಹೇಳಿಕೊಳ್ಳಲಾಗುತ್ತದೆಯೇ? ಕೊನೆಗೆ ಹೊರಳಾಟ, ಬಡಬಡಿಸುವಿಕೆ ವಿಪರೀತಕ್ಕೆ ಹೋಗಿ ಹೆಂಡತಿ ಬೇರೆ ಮಲಗಲು ಪ್ರಾರಂಭಿಸಿದಳು. ಮೊದಲಿಗೆ ಕೊಂಚ ಮುಜುಗರವಾದರೂ, ಅನುಕೂಲವೇ ಆಯಿತು ಎಂದುಕೊಂಡೆ, ಮೇಲೆ ಮಾತ್ರ ಬೇಸರವನ್ನು ನಟಿಸಿದೆ.
ಎಂಟು ವರುಷ ಮಗಳು ಕೂಡ ಯಾಕೋ ನನ್ನ ಕಂಡರೆ ಮುಖ ತಪ್ಪಿಸಲು ಪ್ರಾರಂಭಿಸಿದಳು. ಭಯವೋ ಏನೋ… ಮಕ್ಕಳಿಗೆ ನಮ್ಮ ವಿಕಾರದ ಸುಳಿವು ಬಹು ಬೇಗ ಹತ್ತಿಬಿಡುತ್ತದೆ ಎಂದು ಕಾಣುತ್ತದೆ. ಆದರೆ ನಾನು ಏನು ಮಾಡಲಿ. ನಾನು ಅಸಹಾಯಕ, ಕತ್ತಲಿನ ದಾಸ್ಯಕ್ಕೆ, ರಕ್ತದ ರುಚಿಗೆ ಶರಣಾದವ.
~*~
“ಗುಪ್ತ, ಅವನು ಕೆಲಸಕ್ಕೆ ಸೇರಿ ಇನ್ನೂ ಮೂರು ತಿಂಗಳಾಗಿಲ್ಲ… ಹೇಗೆ ಕಂಪನಿ ಬಿಡು ಅಂತ ಹೇಳಲಿ ಹೇಳು…” ನನಗೇ ರಾಜೀನಾಮೆ ಕೇಳಿದಷ್ಟು ಗಾಬರಿಯಾಗಿತ್ತು.
“ನೋಡು ನಮ್ಮ ಕೆಲಸದಲ್ಲಿ ಭಾವನೆಗಳಿಗೆ ಜಾಗವಿಲ್ಲ… ಪ್ರಾಜೆಕ್ಟ್ ಬರುತ್ತೆ ಎಂಬ ಅಂದಾಜಿನಲ್ಲಿ ಅವನು ಕೇಳಿದಷ್ಟು ಸಂಬಳಕ್ಕೆ ಒಪ್ಪಿ ಕೆಲಸಕ್ಕೆ ಸೇರಿಸಿಕೊಂಡೆವು… ಈಗ ಪ್ರಾಜೆಕ್ಟ್ ಬರಲಿಲ್ಲ… we have no option other than firing him… hire and fire ಎಂಬುದನ್ನು ನಾನು, ನೀನು ಕಂಡುಹಿಡಿದಿದ್ದಲ್ಲ… ಈ ಕೆಲಸ ಬೇಗ ಮಾಡದಿದ್ದರೆ ನಿನ್ನ, ನನ್ನ ಕೆಲಸಕ್ಕೆ ಸಂಚಕಾರ…ಬೇರೆ ದಾರಿಯಿಲ್ಲ” ರಾಜೀವ್ ಗುಪ್ತ ತಣ್ಣಗೆ ಮತ್ತು ಸ್ಪಷ್ಟವಾಗಿಯೇ ಹೇಳಿದ. ಸದ್ದಿಲ್ಲದ ತಣ್ಣನೆ ಎ.ಸಿ ರೂಮ್ನಲ್ಲಿ ಬಿಸಿನೆಸ್-ನ ಬಿಸಿ ಅಂತರ್ಗತವಾಗಿತ್ತು. ಅವನ ಮಾತಿನ ಧಾಟಿಯಲ್ಲಿ ಅವನ ಕೆಲಸಕ್ಕಿಂತ ನನ್ನ ಕೆಲಸಕ್ಕೇ ಸಂಚಕಾರ ಅಂತ ಸೂಚನೆಯಿತ್ತು. ಅಪ್ಪಟ ಸಸ್ಯಾಹಾರಿಯನ್ನು ಹಿಡಿದುಕೊಂಡು ದುಡ್ಡು ಕೊಡುತ್ತೇನೆ ರಕ್ತ ಕುಡಿ ಎಂದ ಹಾಗಿತ್ತು. ಕೊಂಚ ಕಸಿವಿಸಿ, ಹಿಂಜರಿಕೆ… ಆದರೆ ಏನೂ ಮಾಡುವ ಹಾಗಿಲ್ಲ, ಈ ಕೆಲಸ ನಾನು ಮಾಡದಿದ್ದರೆ ಅದನ್ನು ಇನ್ನೊಬ್ಬ ಮಾಡುತ್ತಾನೆ ಎಂದು ಆತ್ಮ ಸಮರ್ಥನೆ ಮಾಡಿಕೊಂಡೆ. ಬೇರೆ ದಾರಿಯಾದರೂ ಎಲ್ಲಿತು?! ಇತ್ತಾ?

ಮನೋಜನನ್ನು ಕಾನ್ಫರೆನ್ಸೆ ರೂಂಗೆ ಅರ್ಜೆಂಟಾಗಿ ಬರಲು ಫೋನ್ ಮಾಡಿ ಹೇಳಿ, ಉಪಾಯಗಳನ್ನು ಯೋಚಿಸುತ್ತಾ ಕುಳಿತೆ. ಸುಲಭವಾಗಿ ರಕ್ತ ಕುಡಿಯಬೇಕಾದರೆ, ರಕ್ತದ ಬಗ್ಗೆ ಮಮಕಾರ, ದಾಹ ಹೆಚ್ಚಿಸಿಕೊಳ್ಳಬೇಕು. ಸ್ವಲ್ಪ ದಿನದ ನಂತರ ಅಭ್ಯಾಸ ತಾನಾಗೇ ಆಗುತ್ತೆ. ಪ್ರಾಜೆಕ್ಟ್ ಮೀಟಿಂಗ್ ಎಂದುಕೊಂಡು ಮನೋಜ್ ಗಡಿಬಿಡಿಯಲ್ಲಿ ಬಂದ. ತುಂಬು ಉತ್ಸಾಹದ ಯುವಕ. ಅವನಿಗೆ ಕೂಡಲು ಹೇಳಿದೆ, ಧ್ವನಿಯಲ್ಲಿ ಗಂಭೀರತೆ ತೋರುತ್ತ. ನಂತರ ಮನೋಜನ ಬಗ್ಗೆ ಅಪಾರ ಪ್ರೀತಿಯಿಂದ ನಟಿಸುತ್ತಾ, ಅವನಿಗೆ ರಾಜೀನಾಮೆ ಕೊಡಲು ಸೂಚಿಸತೊಡಗಿದೆ. ಒಂದು ಕ್ಷಣ ಅವನು ದಂಗಾದ. ಕಳವಳದಿಂದ ವಿವರ ಕೇಳಿದ. ಕ್ಲುಪ್ತವಾಗಿ ಹೇಳಿದೆ. ಸ್ವಲ್ಪ ಸಮಯದ ನಂತರ ಕಂಪನಿಯ ಬಗ್ಗೆ ವಾಚಾಮಗೋಚರ ಬೈಯತೊಡಗಿದ. ಸ್ವಲ್ಪ ಹೊತ್ತಿನ ನಂತರ ತನ್ನ ಹೊಸ ಕಾರು, ಮನೆ ಸಾಲ ನೆನೆದು ಗೋಳಾಡಿದ. ಕರಗದಿರಲು ನಿರ್ಧರಿಸಿ ಅವನು ಕೆಲಸಕ್ಕೆ ಸೇರುವ ಮುನ್ನ ಹೆಚ್ಚಿನ ಸಂಬಳಕ್ಕೆ ತುಂಬಾ ಜೋರಾಗಿ ಚೌಕಾಸಿ ಮಾಡಿದ್ದು ನೆನಪು ಮಾಡಿಕೊಳ್ಳುತ್ತ ಕುಳಿತೆ. ನನಗೆ ಆಶ್ಚರ್ಯವಾಗುವಂತೆ ಅವನ ಗೋಳಾಟ ಹೆಚ್ಚಾದಷ್ಟು ನನ್ನಲ್ಲಿ ಕಾಠಿಣ್ಯ ಹೆಚ್ಚಾಗತೊಡಗಿತ್ತು. ಮೆಲ್ಲನೆ ನನ್ನಲ್ಲಿ ರಕ್ತದ ಉನ್ಮಾದ ಕೆರಳತೊಡಗಿತ್ತು.
ಸ್ವಲ್ಪ ಹೊತ್ತಿನ ಮನೋಜ್ ನಂತರ ಉಗ್ರಪ್ರತಾಪದಿಂದ ತನ್ನ ಸಾಮರ್ಥ್ಯ, ಮಾರುಕಟ್ಟೆಯಲ್ಲಿ ತನಗಿರುವ ಮೌಲ್ಯ, ತನಗಿರುವ ಡಿಮಾಂಡ್ ಬಗ್ಗೆ ಕೊಚ್ಚಿಕೊಳ್ಳತೊಡಗಿದ. ನಾನು ನಿರ್ಲಿಪ್ತತೆಯನ್ನು ನಟಿಸುತ್ತ ಅವನನ್ನೇ ದಿಟ್ಟಿಸುತ್ತ ಕುಳಿತೆ. ಕೆಲ ಸಮಯದ ನಂತರ ರಕ್ತದ ದಾಹ ಕೊಂಚ ಶಮನವಾದಂತೆ ಅನಿಸಿ, ಕೋಪ-ಗೋಳಾಟ- ಉಗ್ರಪ್ರತಾಪದ ಮತ್ತೊಂದು ರೌಂಡ್ ಶುರು ಮಾಡುವ ಮೊದಲೇ ಮನೋಜನ ಕೈ ಕುಲುಕಿ ಎದ್ದು ಬಿಟ್ಟೆ.
‘Done!’ ಎಂದು ಕ್ಲುಪ್ತವಾಗಿ ಗುಪ್ತನಿಗೆ ಎಸ್ಸೆಮ್ಮೆಸ್ಸು ಕಳುಹಿಸಿದೆ. ನಂತರ ಹೊರಗಡೆ ಸಿಗರೇಟು ಸೇದುತ್ತಾ ಹೊಸ ಉನ್ಮಾದದ ಖುಷಿ ಅನುಭವಿಸುತ್ತಿರುವಾಗ, ಗುಪ್ತನ ನೆನಪಾಯಿತು. ಅವನನ್ನು ತುಳಿದು, ಅವನ ಕುರ್ಚಿಯಲ್ಲಿ ನಾನು ಕುಳಿತಂತೆ ಕಲ್ಪಿಸಿಕೊಂಡೆ. ಹೊಸ ರೋಮಾಂಚನದಿಂದ ನಡುಗತೊಡಗಿದೆ. ಅದಕ್ಕೆ ತಂತ್ರ ರೂಪಿಸಬೇಕಿತ್ತು. ಈ ದಿನ ಮನೋಜನ ಸ್ಥಾನದಲ್ಲಿ ಗುಪ್ತನನ್ನು ಕಲ್ಪಿಸಿಕೊಳ್ಳುವ ಸ್ಫೂರ್ತಿ ತಾನಾಗಿಯೇ ಬಂದಿತು. ಹಾಗೆಯೇ ಹೊಸ ಹೊಸ ಉಪಾಯಗಳು ಹೊಳೆಯತೊಡಗಿತು. ತುಟಿಯಂಚಿನಲ್ಲಿ ಇದ್ದ ರಕ್ತದ ಹನಿಯನ್ನು ನಾಲಿಗೆಯಲ್ಲಿ ತೀಡಿ ಚಪ್ಪರಿಸತೊಡಗಿದೆ.
ಇದು ಇಲ್ಲಿಗೆ ಸುಲಭದಲಿ ಮುಗಿಯುವುದಿಲ್ಲ, ಕೊನೆಗೆ ನನ್ನ ಜೀವವನ್ನೆ ಬೇಡುತ್ತದೆ ಎಂಬುದು ಅರಿವಾಯಿತಾ? ನಾನೇ ಆತ್ಮದ ಪಿಸುಮಾತಿಗೆ ಜಾಣ ಕಿವುಡುತನ ತೊರಿದೆನಾ? ಉತ್ತರ ದೊರುಕುವ ಹೊತ್ತಿಗೆ ಬಹುದೂರ ನಾನು ಸಾಗಿಬಂದಾಗಿತ್ತು. ಮುಂದೆ ಆರೇ ತಿಂಗಳಿಗೆ ಗುಪ್ತ ಔಟ್! ಮನೋಜನ ಜೊತೆ ಮಾತಾಡಿದ ಕಾನ್ಫರೆನ್ಸ್ ರೂಮಿನಲ್ಲೇ ನನ್ನ ಎದುರಿಗೆ ಗುಪ್ತ ಅವಡುಗಚ್ಚಿ ಕೂತಿದ್ದಾಗ ನನಗಾದ ರೋಮಾಂಚನ ಎಂದಿಗೂ ಮರೆಯಲಾರೆ. ಅವನು ಕಲಿಸಿದ ಕಾರ್ಪೊರೇಟ್ ಪಟ್ಟುಗಳ ಜೊತೆ ಹೊಸ ಪಟ್ಟುಗಳನು ಹಾಕಿ ಅವನನ್ನು ನಾಶ ಮಾಡಿದ್ದೆ. ಅವನು ಆಡಲಾರದ, ಅನುಭವಿಸಲಾರದ ಸ್ಥಿತಿ ತಲುಪಿದ್ದ. ಆ ಸಮಯಕ್ಕೆ ಕಾದು ಕೊನೆಯ ಮೃತ್ಯುಬಂಧ ಬಿಗಿದಿದ್ದೆ. Gupta was finished once for all! ಜೀವನದಲ್ಲಿ ಮತ್ತೆಂದು ಅವನು ನನ್ನ ಎದುರಿಸಬಾರದು ಹಾಗೆ ಭಯ ಬಿತ್ತಿದ್ದೆ. ಆಮೇಲೆ ಸಲೀಸಾಗಿ ಕಾರ್ಪೊರೇಟಿನ ಒಂದೊಂದೇ ಯಶಸ್ಸಿನ ಮೆಟ್ಟಿಲು ಏರುತ್ತಾ ಹೋದೆ.
ಹಾಂ! ನನಗೆ ಗೊತ್ತೇ ಇರಲಿಲ್ಲ. ಸಮಾಜದಲ್ಲಿ ರಕ್ತದಾಹಿಗಳ ಗುಂಪೇ ಇದೇ! ಅವರವೇ ಪ್ರತೇಕ ಕೂಟಗಳಿವೆ, ಸಹಕಾರ ಸಂಘಗಳಿವೆ. ಮತ್ತು ಅವರರವರಲ್ಲೇ ವಿಪರೀತ ಪೈಪೋಟಿ ಇದೆ. ಅವರಲ್ಲೂ ನನ್ನ ಸ್ಥಾನಮಾನ ರೂಪಿಸಿಕೊಳ್ಳಬೆಕಿತ್ತು, ರೂಪಿಸಿಕೊಂಡೆ ಕೂಡ. ಹೆಚ್ಚು ಹೆಚ್ಚು ಜನರನ್ನು ಹಣಿದಷ್ಟು ನನ್ನ ಕೀರ್ತಿ ಹೆಚ್ಚಾಯಿತು, ಹಾಗೆಯೇ ನನ್ನ ದಾಹ.
~*~
ಇದೆಲ್ಲಾ ಶುರುವಾಗಿ ದಶಕಗಳೇ ಆಗಿ ಹೋಯಿತು. ಹೃದಯ ಕಠಿಣವಾದಷ್ಟು, ಮಾತು ಮಧುರವಾಗಿದೆ. ಮೊದಲಿದ್ದ ಹಿಂಜರಿಕೆ ಮಾಯವಾಗಿ, ಕ್ರಮೇಣ ಹಿಂಸೆಯ ಆಟ, ರಕ್ತದಾಹ ಅಭ್ಯಾಸವಾಯಿತು. ನಂತರ ಅದೇ ಗೀಳಾಗಿ, ಮುಂದೆ ಅದೇ ಸಹಜ ಸ್ವಭಾವವೇ ಆಗಿಹೋಯಿತು. ಹೆಚ್ಚು ಅಧಿಕಾರ ಗಳಿಸಿದಷ್ಟು ನನ್ನ ಅಸ್ಥಿರತೆ ಹೆಚ್ಚಾಗುತ್ತಲೇ ಹೋಯಿತು.
ಗಾಬರಿ ಬಿದ್ದ ಹೆಂಡತಿ, ಮಗಳಿನೊಂದಿಗೆ ದೂರವಾದಳು. ಮನೆ ದೊಡ್ಡದಾಯಿತು. ಆಸ್ತಿ, ಅಂತಸ್ತು, ಸಾಮಾಜಿಕ ಸ್ಥಾನಮಾನ ಎಲ್ಲಾ ಹೆಚ್ಚಾಯಿತು, ಹಾಗೆಯೇ ನನ್ನ ರಕ್ತದಾಹ… ಈಗ ಕಂಪನಿ ಆಡಳಿತವೇ ನನ್ನ ಕೈಯಲ್ಲಿದೆ… I have complete control! I rule! I am the boss!! ಅದರೇ ಇನ್ನೂ ಸಮಾಧಾನವಿಲ್ಲ. ನನಗಿಂತ ಮೇಲಿರುವವರನ್ನು ಕಂಡು ಕೊರಗುತ್ತಲೇ ಇರುತ್ತೇನೆ. ಹೊಸ ಹೊಸ ಷಡ್ಯಂತ್ರಗಳ ಹೆಣೆಯುತ್ತಲೇ ಇರುತ್ತೇನೆ. ಇದೊಂದು ಗೀಳು. ಇದಕ್ಕೆ ನನ್ನನ್ನು ಸಮರ್ಪಿಸಿಕೊಂಡಮೇಲೆ ನನ್ನ ಸಹಜ ಬದುಕು ಮುಗಿದೇ ಹೋಗಿದೆ. ಮೊದಲಿಗೆ ಗಳಿಸುವ ಹುಚ್ಚು ನಂತರ ಉಳಿಸಿಕೊಳ್ಳುವ ಹುಚ್ಚು.
~*~
ನನ್ನ ದುಡ್ಡನ್ನು ನೋಡಿ, ಅಂತಸ್ತಿಗೆ ಬೆರಗಾಗಿ ಅನೇಕ ಬೆಡಗಿಯರು ಬೆನ್ನುಬಿದ್ದರು. ಕೆಲವರು ಮನೆತನಕ ಬಂದರು. ಆದರೆ ನನ್ನ ದಾಹಕ್ಕೆ , ವಿಕೃತೆಗೆ ಗಾಬರಿಯಾಗಿ ಓಡಿ ಹೋದರು. ಗಟ್ಟಿಯಾಗಿ ಉಳಿಯಲು ಪ್ರಯತ್ನಿಸಿದವರು ಬಲಿಯಾದರು. ಮತ್ತೇ ಮತ್ತೇ ನಾ ಒಂಟಿಯೇ. ನಾ ನಿಶಾಚರನೆ.
ಯಾಕೋ ಗೊತ್ತಿಲ್ಲ ಬೆಳಕು ಮತ್ತು ಮಕ್ಕಳನ್ನು ಕಂಡರೆ ವಿಪರೀತ ಗಾಬರಿಬೀಳುತ್ತೇನೆ. ಬಹುಶಃ ನನ್ನ ವಿಕೃತಿ ಸುಲಭದಲಿ ಬಯಲಾಗುತ್ತದೆ ಎಂದಿರಬೇಕು. ಕತ್ತಲಿನ ವ್ಯಾಮೋಹಕ್ಕೆ ಬಿದ್ದಿದ್ದೇನೆ. ಮೇಲೆ ಎಷ್ಟೇ ಧೈರ್ಯವಂತ ಅಂತ ತೋರಿಸಿಕೊಂಡರೂ ಈ ಹುಲಿ ಸವಾರಿಯಿಂದ ಕೆಳಗಿಳಿಯುವ ಧೈರ್ಯ ಮಾತ್ರವಿಲ್ಲ!
ಆದರೆ ಇತ್ತೀಚಿಗೆ ಬೆಳಕಿನ ಕನಸು ಬೀಳುತಿದೆ. ಮನಸ್ಸನ್ನು ನಿಯಂತ್ರಿಸಬಹುದು, ಆದರೆ ಕನಸನ್ನು ಹೇಗೆ ನಿಯಂತ್ರಿಸಲಿ? ನನಗೂ ಸುಸ್ತಾಗುತಿದೆಯಾ? ಆಯಾಸ? ದಣಿವಾರಿಸಿಕೊಳ್ಳಲು ಕೂತರೆ ಬಲಿಯಾಗುವ ಭಯ.
~*~
ಒಂದು ದಿನ ರಾತ್ರಿ ಯಥಾ ಪ್ರಕಾರ ನಿದ್ದೆ ಬರದೆ ಹೊರಗೆ ಸುತ್ತಲು ಹೋಗಿದ್ದೆ. ಕೆಲವು ಬಿಸಿನೆಸ್ ಜನರನ್ನು ಬೇಟಿ ಮಾಡುವುದಿತ್ತು. ಎಲ್ಲಾ ವ್ಯವಹಾರ-ಅವ್ಯವಹಾರ ಮುಗಿಸಿ ಹೊರಟೆ. ಮರಳಿ ಬರುವಾಗ ಇನ್ನೇನೂ ಬೆಳಕು ಹರಿಯುವ ಸಮಯ. ಬೆಳಗಾಗುವುದರವೊಳಗೆ ಮನೆಯೆಂಬ ನನ್ನ ಕೋಟೆ ಸೇರಬೇಕು. ಕತ್ತಲೆಗೆ ಪ್ರತೇಕ ಅಸ್ತಿತ್ವವಿಲ್ಲ. ಬೆಳಕು ಬಂದರೆ ಕತ್ತಲೆ ಮಟಾಮಾಯಾ. ನಾನು ಬೆಳಕಿಂದ ಓಡುತ್ತಲೇ ಇರಬೇಕು. ಇಲ್ಲದಿದ್ದರೆ ಬೆಳಕು ನನ್ನನ್ನೇ ನುಂಗಿತು ಎಂಬ ಭಯ.
ಬೆಳಕು ಮೂಡವ ಮುನ್ನ ಟ್ರಾಫಿಕ್ ಕಮ್ಮಿಯಿತ್ತು. ಆಕಾಶ ಕತ್ತಲಿಂದ ರಕ್ತವರ್ಣಕ್ಕೆ ತಿರುಗುತಿತ್ತು. ಬೇಗನೆ ಮನೆ ಸೇರಬೆಕಿತ್ತು. ಬೆಳಕು ಮೂಡುವ ಮುನ್ನ. ಗಡಿಬಿಡಿಯಲ್ಲಿ ಹುಚ್ಚು ವೇಗದಲ್ಲಿ ಡ್ರೈವ್ ಮಾಡುತ್ತಾ ಹೊರಟೆ. ಹಲವು ಕಡೆ ಸ್ವಲ್ಪದರಲ್ಲೇ ಅಪಘಾತ ತಪ್ಪಿತು. ಕೆಲವಡೆ ನಾನೇ ಗುದ್ದಿದೆ. ಆದರೆ ಹೇಗೋ ಸಾವರಿಸಿಕೊಂಡು ನಿಲ್ಲಿಸದೆ ಡ್ರೈವ್ ಮುಂದುವರಿಸಿದೆ. ಆಗ ದಾರಿಗಡ್ಡವಾಗಿ ದೊಡ್ಡದೊಂದು ಲಾರಿ ಪ್ರಖರ ಬೆಳಕು ಬೀರುತ್ತಾ ಬಂತು. ಎಷ್ಟು ಬೇಡವೆಂದು ಕೊಂಡರು ಕಣ್ಣು ಅತ್ತಲೇ ಸೆಳೆಯಿತು. ಕಣ್ಣು ಬೆಳಕಲ್ಲೇ ನೆಟ್ಟೆ. ಬೆಳಕು! ದಿವ್ಯ ಬೆಳಕು! ಬೆಳಕಲ್ಲಿ ಯಾವುದೇ ನೋವಿಲ್ಲ, ಭಯವಿಲ್ಲ, ಆತಂಕವಿಲ್ಲ ಮುಖ್ಯವಾಗಿ ರಕ್ತದ ಹಪಾಹಪಿಯಿಲ್ಲ. ಕೆಲವೇ ಕ್ಷಣದಲ್ಲಿ ಬೆಳಕು ಕತ್ತಲೆಯ ಬೇಟಿಯಾಯಿತು. ಕತ್ತಲೆ ಮಾಯ! ದಿವ್ಯ ಬೆಳಕಿನ ಪ್ರವಾಹದಲ್ಲಿ ಮುಳುಗಿಹೋದೆ. ಹಾಗೇ ಬೆಳಕಲ್ಲಿ ಒಂದಾಗಿ ಹೋದೆ. ಬೆಳಕಲ್ಲಿ ಕತ್ತಲೆಗೆ ಅಸ್ತಿತ್ವವಿಲ್ಲ. ನನಗೂ…
ತಮಸೋಮಾ ಜ್ಯೋತಿರ್ಗಮಯ…






ಎಂಥ ವೈಚಿತ್ರ್ಯ …. ಸರ್ …. ತುಂಬಾ ಚೆನ್ನಾಗಿದೆ ….
abbaa..yeshtu nijaa annistu!!
A VERY NICE STORY.