ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದುರಾಶ್ವತ್ಥದ ಮೇಲೆ ಬಲಪಂಥೀಯರ ಕೆಂಗಣ್ಣು…

ಜಿ ಪಿ ಬಸವರಾಜು

ಆಜಾದಿ ಕಾ ಅಮೃತ ಮಹೋತ್ಸವ ಎನ್ನುವುದು ಭಾರತ ಸ್ವಾತಂತ್ರ್ಯದ ೭೫ನೇ ವರ್ಷದ ಸಂಭ್ರಮ. ಯಾವುದೇ ರಾಷ್ಟ್ರವಾದರೂ ತನ್ನ ಸ್ವಾತಂತ್ರ್ಯದ ಹುಟ್ಟನ್ನು ಉಮೇದಿನಿಂದಲೇ ಆಚರಿಸುತ್ತದೆ. ಪ್ರತಿಯೊಂದು ಮೈಲಿಗಲ್ಲೂ ಮಹತ್ವದ್ದೇ. ಭಾರತದಂಥ ವಿಶಾಲವಾದ, ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರಕ್ಕಂತೂ ೭೫ ವರ್ಷ ಎನ್ನುವುದು ಸಾಧಾರಣ ಸಂಗತಿಯಲ್ಲ.

ಇದು ಕೇವಲ ಹಬ್ಬದ, ಸಂತೋಷದ, ಸಂಭ್ರಮದ ಆಚರಣೆಯಲ್ಲ. ಇಷ್ಟು ವರ್ಷಗಳ ಹಾದಿಯಲ್ಲಿ ಮಾಡಿದ ಪ್ರಗತಿ, ಏಳು ಬೀಳುಗಳ ವಿಶ್ಲೇಷಣೆ, ಮುಂದೆ ನಡೆಯಬೇಕಾದ ಹಾದಿಯ ಅವಲೋಕನ ಇವೆಲ್ಲ ಸೇರಿದಾಗಲೇ ಇದಕ್ಕೆ ಅರ್ಥ.

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ. ರಾಜ್ಯದಲ್ಲಿಯೂ ಇದೇ ಪಕ್ಷ ಸದ್ಯ ಅಧಿಕಾರದಲ್ಲಿದೆ. ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷ ಯಾವುದೂ ಇರಬಹುದು. ಇದು ಜನರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಯಾವ ಪಕ್ಷವಾದರೂ ರಾಷ್ಟ್ರದ ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಹುಮ್ಮಸ್ಸು ತೋರಿಸಬೇಕು.

ಬಿಜೆಪಿಗೆ ಈ ಆಚರಣೆಯ ಸಂದರ್ಭದಲ್ಲಿ ಇರುವ ಮುಖ್ಯವಾದ ತೊಡಕೆಂದರೆ, ನಡೆದುಬಂದ ಹಾದಿಯನ್ನು ನೆನೆಯುವುದು. ಹೇಗೇ ನೆನೆದರೂ ಇಲ್ಲಿ ಗಾಂಧಿ, ನೆಹರೂ, ನೆಹರೂ ಕುಟುಂಬಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರು, ಮಡಿದವರು, ತ್ಯಾಗಿಗಳು ಎಲ್ಲರ ಚಿತ್ರಗಳೂ ಕಣ್ಮುಂದೆ ಬರುತ್ತವೆ. ಹಿಂದು, ಮುಸ್ಲಿಂ, ಸಿಖ್‌, ಫಾರಸಿ, ಬೌದ್ಧ ಇತ್ಯಾದಿ ಭೇದಭಾವವಿಲ್ಲದೆ ಎಲ್ಲರೂ, ಸ್ವಾತಂತ್ರಕ್ಕಾಗಿ ಸೆಣಸಿದ ಎಲ್ಲ ನಾಯಕರೂ ಗಮನ ಸೆಳೆಯುತ್ತಾರೆ. ಇದು ಬಿಜೆಪಿಗೆ ನುಂಗಲಾಗದ ತುತ್ತು. ಮುಸ್ಲಿಮರನ್ನು ಭಾರತದ ಚರಿತ್ರೆಯಿಂದ, ಭೂಪಟದಿಂದ ಮತ್ತು ವರ್ತಮಾನದ ಬದುಕಿನಿಂದ  ಕಿತ್ತೊಗೆಯಲು ದಿನಬೆಳಗಾದರೆ ಹುನ್ನಾರಗಳನ್ನು ಹೆಣೆಯುತ್ತಿರುವ ಆರ್‌ ಎಸ್‌ ಎಸ್‌, ವಿಶ್ವಹಿಂದೂ ಪರಿಷತ್ತು, ಹಿಂದೂ ಜಾಗರಣ ಸಮಿತಿ, ಭಜರಂಗ ದಳ-ಹೀಗೆ ಹಲವಾರು ಹಿಂದೂ ಸಂಘಟನೆಗಳು, ಇವರ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುತ್ತಿರುವ ಬಿಜೆಪಿ ಸರ್ಕಾರ, ಅಮೃತ ಮಹೋತ್ಸವದಲ್ಲಿ ಮನಸ್ಸನ್ನು ತಿಳಿಯಾಗಿಟ್ಟುಕೊಂಡು ಎಲ್ಲರನ್ನೂ ಗೌರವಿಸುವ ಸರಳ ವಿಧಾನವನ್ನು ಅನುಸರಿಸುವುದು ಹೇಗೆ ಸಾಧ್ಯ? ಜೊತೆಗೆ ಇತಿಹಾಸದಲ್ಲಿನ ತಮ್ಮ ನಾಯಕರನ್ನು ಮೆರೆಸುವ ಹುಮ್ಮಸ್ಸಿಗೆ ಸಿಕ್ಕುವ ನಾಯಕರ ಸಂಖ್ಯೆಯೂ ದೊಡ್ಡದಿಲ್ಲ. ಕೆಲವರು ಆರಂಭದಲ್ಲಿ ಹೋರಾಟ ಮಾಡಿದರೂ ನಂತರ ಬ್ರಿಟಿಷರಿಗೆ ಶರಣಾಗಿ ತಮ್ಮ ಧ್ವನಿಯನ್ನೇ ಅಡಗಿಸಿಕೊಂಡವರು. ಇಲ್ಲವೇ ಬ್ರಿಟಿಷರ ಜೊತೆಗೆ ಶಾಮೀಲಾಗಿ ದೇಶದ್ರೋಹಕ್ಕೆ ಒಳಗಾದವರು. ಇಂಥ ಹಿನ್ನೆಲೆಯಲ್ಲಿ ಈ ಸಂಘಟನೆಗಳು ಇತಿಹಾಸವನ್ನು ನೆನೆಯುವುದು ಹೇಗೆ?

ಅದಕ್ಕಾಗಿಯೇ ಇತಿಹಾಸವನ್ನು ಬದಲಾಯಿಸಲು ಈ ಸಂಘಟನೆಗಳು ನೋಡುತ್ತಿವೆ. ತಮ್ಮ ಅಧಿಕಾರವನ್ನು ಬಳಸಿ, ತಮ್ಮ ಸರ್ಕಾರಗಳ ಮೂಲಕ ಚರಿತ್ರೆಯ ಪುಟಗಳನ್ನು ತಿದ್ದಲು ಯತ್ನಿಸುತ್ತಿವೆ. ಮುಗ್ಧ ಮಕ್ಕಳು ಓದುವ ಪಠ್ಯಗಳಿಗೆ ಕೈಹಾಕಿ ಬದಲಾವಣೆಗೆ ಮುಂದಾದ ಪ್ರಯತ್ನವನ್ನು ಕನ್ನಡಿಗರು ಇನ್ನೂ ನೋಡುತ್ತಲೇ ಇದ್ದಾರೆ. ಸಮುದಾಯಗಳ ಮೇಲಿನ ದ್ವೇಷ, ಸಮಾಜವನ್ನು ಒಡೆಯುವ ಕುಕೃತ್ಯಗಳು, ಅಧಿಕಾರದ ದುರ್ಬಳಕೆ, ಸಂವಿಧಾನ ತತ್ವಗಳಿಗೆ ಅಪಚಾರ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಹೀನ ನಡೆ-ಇದೆಲ್ಲವನ್ನು ಭಾರತದ ಮತ್ತು ಕರ್ನಾಟಕದ ಜನತೆ ನೋಡುತ್ತಲೇ ಇದ್ದಾರೆ. ಹಿಜಾಬ್‌, ಹಲಾಲ್‌, ದನದ ಮಾಂಸ, ಮಸೀದಿ, ಮಸೀದಿಯ ಅಡಿಯಲ್ಲಿ ದೇವಾಲಯ ಹುಡುಕುವುದು, ಟಿಪ್ಪು ಮೇಲೆ ಕೆಂಡ ಕಾರುವುದು ಇತ್ಯಾದಿ ಹಲವಾರು ಕೃತ್ಯಗಳ ಹಿಂದಿನ ಹುನ್ನಾರ ಯಾರದು ಮತ್ತು ಯಾಕಾಗಿ ಎಂದು ವಿವರಿಸಬೇಕಾದ ಅಗತ್ಯವೇ ಇಲ್ಲ.

ಇದು ಸಾಲದೋ ಎನ್ನುವಂತೆ ಮತ್ತೊಂದು ಹೊಸ ಹೆಜ್ಜೆಯನ್ನೂ ಇಡಲಾಗಿದೆ. ಕಿತ್ತೂರು, ಶಿವಪುರ ಮತ್ತು ವಿದುರಾಶ್ವತ್ಥಗಳ ಮೇಲೆ ಈಗ ಹಿಂದೂ ಸಂಘಟನೆಗಳ ಕಣ್ಣುಬಿದ್ದಿದೆ. ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ತಾವು ಏನು ಬೇಕಾದರೂ ಮಾಡಬಹುದೆಂಬ ಧೈರ್ಯ ಈ ಸಂಘಟನೆಗಳ ಕಾರ್ಯಕರ್ತರಿಗೆ ಇರುವುದರಿಂದಲೇ ವಿಧ್ವಂಸಕ ಕೃತ್ಯಗಳು, ಬೆದರಿಕೆಗಳು, ಇತಿಹಾಸವನ್ನುತಿರುಚಲು ಮುಂದಾಗುವುದು ಇತ್ಯಾದಿ ಚಟುವಟಿಕೆಗಳು ಆರಂಭವಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಒಂದು ಧಾರ್ಮಿಕ ಸ್ಥಳ; ಪುರಾಣ ಕತೆಯ ಪ್ರಕಾರ ವಿದುರ ಇಲ್ಲಿಗೆ ಬಂದು ನದಿಯಲ್ಲಿ ಮಿಂದು, ನದಿಯಲ್ಲಿ ಸಿಕ್ಕ ಅಶ್ವತ್ಥ ಸಸಿಯನ್ನು ನೆಟ್ಟುಹೋದ. ಈ ಸಸಿಯೇ ಬೆಳದು ದೊಡ್ಡದಾಗಿ ಜನರನ್ನು ಆಕರ್ಷಿಸಿತು; ಜೊತೆಗೆ ಅಶ್ವತ್ಥನಾರಾಯಣ ದೇವಾಲಯವೂ ಇಲ್ಲಿದೆ. ಹೀಗಾಗಿ ಭಕ್ತರನ್ನು ಈ ತಾಣ ವರ್ಷದ ಉದ್ದಕ್ಕೂ ಸೆಳೆಯುತ್ತಿದೆ.

ಇಲ್ಲಿ ನಡೆದ ಧ್ವಜ ಸತ್ಯಾಗ್ರಹ (೧೯೩೮ ಏಪ್ರಿಲ್‌ ೨೫) ಒಂದು ಮಹತ್ವದ ಸ್ವಾತಂತ್ರ್ಯ ಚಳವಳಿ. ಇಲ್ಲಿ ನಡೆದ ಗೋಲಿಬಾರ್‌ನಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಸತ್ತವರು  ೧೦ ಮತ್ತು ಗಾಯಗೊಂಡವರು ೧೫.  ಆದರೆ ಇದು ಸರಿಯಾದ ಲೆಕ್ಕವಲ್ಲ. ಯಾಕೆಂದರೆ  ಇಲ್ಲಿ ಸೇರಿದವರ ಸಂಖ್ಯೆಯೇ ಹತ್ತು ಸಾವಿರ. ಮೂರು ಬಾರಿ ೯೬ ಸುತ್ತು ಗುಂಡು ಹಾರಿದ್ದು ದಾಖಲಾಗಿದೆ. ಬಿದ್ದ ಹೆಣಗಳ ಲೆಕ್ಕ ಖಚಿತವಾಗಿ ಸಿಕ್ಕೇ ಇಲ್ಲ. ವಿಚಾರಣಾ ಸಮಿತಿ ಗೋಲಿಬಾರಿನಲ್ಲಿ ೩೨ ಜನ ಸತ್ತು, ೪೮ ಜನ ಗಾಯಗೊಂಡರೆಂದು ಅಂತಿಮವಾಗಿ ಹೆಳಿದರೂ, ಸತ್ತವರ ಸಂಖ್ಯೆ ಇನ್ನು ದೊಡ್ಡದು ಎಂದು ಚಳವಳಿಯಲ್ಲಿ ಭಾಗವಹಿಸಿ, ಎಲ್ಲವನ್ನೂ ಕಣ್ಣಾರೆ ಕಂಡ ಹಲವರು ಹೇಳಿದ್ದು ಕೂಡಾ ದಾಖಲಾಗಿದೆ.

ವಿದುರಾಶ್ವತ್ಥವನ್ನು ಕರ್ನಾಟಕದ ಜಲಿಯನ್ವಾಲಾ ಬಾಗ್‌  ಎಂದು ಕರೆದಿರುವುದು ಇಲ್ಲಿ ನಡೆದಿರಬಹುದಾದ ಹಿಂಸೆಯ ಭೀಕರತೆಯನ್ನು ಮತ್ತು ಸಾವು ನೋವುಗಳ ಕತೆಯನ್ನು ಹೇಳುತ್ತದೆ. ಇದು ಅತ್ಯಂತ ಮಹತ್ವದ ಐತಿಹಾಸಿಕ ಜಾಗ.

ಹುತಾತ್ಮರ ಗೌರವಾರ್ಥ ಇಲ್ಲಿ ೧೯೭೩ರಲ್ಲಿ ಸ್ಮಾರಕ ಶಿಲೆ ಮತ್ತು ೨೦೦೪ರಲ್ಲಿ ಸ್ಥೂಪ ಹಾಗೂ ವೀರಸೌಧವನ್ನು ನಿರ್ಮಿಸಲಾಗಿದೆ. ನಾಲ್ಕೂವರೆ ಎಕರೆ ಜಾಗದಲ್ಲಿ ರೂಪಗೊಂಡಿರುವ ಬಯಲು ರಂಗಮಂದಿರ, ಗ್ರಂಥಾಲಯ, ಉದ್ಯಾನವನ, ಯಾತ್ರಿ ನಿವಾಸ, ಚಿತ್ರ ಗ್ಯಾಲರಿ, ಕಾರಂಜಿ ಇತ್ಯಾದಿ ಬರುವವರ ಮನಸೆಳೆಯುತ್ತವೆ.

ಈಗ ಹಿಂದೂ ಸಂಘಟನೆಗಳ ಕಣ್ಣುಬಿದ್ದಿರುವುದು ಚಿತ್ರ ಗ್ಯಾಲರಿಯ ಮೇಲೆ. ಇದು ಸಾಮಾನ್ಯ ಗ್ಯಾಲರಿಯಲ್ಲ. ಇಡೀ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಅಧಿಕೃತ ಇತಿಹಾಸವನ್ನು ಫೋಟೋಗಳ ಮೂಲಕ, ಪೇಂಟಿಂಗ್‌ಗಳ ಮೂಲಕ ಹೇಳುವ ಗ್ಯಾಲರಿ ಇದು.  ಸಮಗ್ರ ಚಿತ್ರ ಕೊಡುವಂಥ ೧೦೪ ಪ್ಯಾನಲ್‌ಗಳು ಇಲ್ಲಿವೆ. ಜೊತೆಗೆ ಸಂಕ್ಷಿಪ್ರ ಮಾಹಿತಿಯೂ ತಲೆಬರಹದ ರೂಪದಲ್ಲಿ ಪ್ರತಿಯೊಂದು ಚಿತ್ರದ ಅಡಿಯಲ್ಲಿಯೂ ಇದೆ. ಪ್ಲಾಸಿ ಕದನದಿಂದಲೇ (೧೭೫೭) ನಮ್ಮ ಸ್ವಾತಂತ್ರ್ಯ ಚಳವಳಿ ಆರಂಭವಾಗುವುದರಿಂದ ಹಿಡಿದು ಗೋವಾ ವಿಮೋಚನೆಯವರೆಗೆ ವಿವಿಧ ಹಂತಗಳಲ್ಲಿ, ವಿವಿಧ ರೂಪಗಳಲ್ಲಿ ನಡೆದ ಹೋರಾಟವನ್ನು  ಇಲ್ಲಿ ತೋರಿಸಲಾಗಿದೆ. ಜಾತಿ ಮತ ಪಂಥಗಳನ್ನು ಮೀರಿ, ಪ್ರದೇಶ, ಭಾಷೆ, ಸಂಸ್ಕೃತಿಗಳ ಆಚೆಗೂ ಚಾಚಿ ಹಲವು ಸಮುದಾಯಗಳು ಬಿಡುಗಡೆಯ ಈ ಹೋರಾಟದಲ್ಲಿ ಭಾಗಿಯಾದದ್ದು ನಮ್ಮ ಇತಿಹಾಸದ ಪುಟಗಳಲ್ಲಿ ಸೇರಿದೆ.

ಈ ಹೋರಾಟದಲ್ಲಿ ಹೈದರಾಲಿ, ಟಿಪ್ಪು, ಟಿಪ್ಪುವಿನ ಹಿರಿಯ ಮಗ ಇವರಲ್ಲದೆ ಅನೇಕ ಮುಸ್ಲಿಂ ಹೋರಾಟಗಾರರು ಇರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ತನ್ನಿಬ್ಬರು ಎಳೆಯ ಮಕ್ಕಳನ್ನು ಟಿಪ್ಪು ಬ್ರಿಟಿಷರಿಗೆ ಒತ್ತೆಯಿಟ್ಟ ಚಿತ್ರವೂ ಇಲ್ಲಿದೆ. ಹೋರಾಟದ ಹಿಂದಿನ ಬಹುದೊಡ್ಡ ಸಾತ್ವಿಕ ಚೇತನವಾದ ಮಹಾತ್ಮಾ ಗಾಂಧಿಯವರ ಚಿತ್ರ ಇರಲೇ ಬೇಕಲ್ಲ.   ಈ ಇತಿಹಾಸವನ್ನು ರೂಪಿಸಿದ ಹಿನ್ನೆಲೆಯಲ್ಲಿ ಅಗಾಧ ಪರಿಶ್ರಮ ಮತ್ತು ಸಂಶೋದನೆ ಇದೆ. ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾದ (ಗೌರಿಬಿದನೂರು ನ್ಯಾಷನಲ್‌ ಕಾಲೇಜು) ಪ್ರೊ. ಬಿ. ಗಂಗಾಧರ ಮೂರ್ತಿ ನಾಲ್ಕಾರು ವರ್ಷಗಳ ಕಾಲ ಸತತವಾಗಿ ಅಧ್ಯಯನ ನಡೆಸಿ, ರಾಷ್ಟ್ರದ ಅನೇಕ ಭಾಗಗಳಲ್ಲಿ ಸುತ್ತಿಇತಿಹಾಸದ ಖಚಿತ ದಾಖಲೆಗಳನ್ನು ಸಂಗ್ರಹಿಸಿ ಈ ಪ್ಯಾನಲ್‌ಗಳನ್ನು ಕಲಾವಿದರ ನೆರವಿನಿಂದ ಸಿದ್ಧಪಡಿಸಿದ್ದಾರೆ. ಇವರ ಬೆಂಬಲಕ್ಕೆ ಇತಿಹಾಸದ ಪ್ರಾಧ್ಯಪಕರಾದ ನಿವೃತ್ತ ಪ್ರಿನ್ಸಿಪಾಲ್‌ ಡಾ.ಸಿ.ನಾಗರತ್ನ ಮತ್ತು ಅವರ ಪತಿ ಮೃತ್ಯುಂಜಯಪ್ಪ ನಿಂತು ಈ ಗ್ಯಾಲರಿಯನ್ನು ಗಂಭೀರ ಇತಿಹಾಸ ಅಧ್ಯಯನಕ್ಕೆ ಯೋಗ್ಯವಾಗಿ ಮಾಡಿದ್ದಾರೆ. ಐದು ಬಾರಿ ಶಾಸನ ಸಭೆಗೆ ಆಯ್ಕೆಯಾದ, ಒಮ್ಮೆ ಮಂತ್ರಿಯಾಗಿದ್ದ ಗೌರಿಬಿದನೂರಿನ ಶಾಸಕರಾದ ಎನ್‌.ಎಚ್‌. ಶಿವಶಂಕರ ರೆಡ್ಡಿ ಈ ಎಲ್ಲ ಕಾರ್ಯಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ. ಸುತ್ತಮುತ್ತಲ ಜನರಿಗೂ ಇದರ ಮಹತ್ವ ತಿಳಿದಂತೆ ತೋರುತ್ತದೆ. ತಿಂಗಳಿಗೆ ಸರಾಸರಿ ೨೫,೦೦೦ ಜನ ಈ ಗ್ಯಾಲರಿಗೆ ಭೇಟಿಕೊಡುತ್ತಾರೆ. ಅನೇಕ ಗಣ್ಯರು, ಇತಿಹಾಸತಜ್ಞರು ಭೇಟಿನೀಡಿ ತಮ್ಮ ಅಭಿಪ್ರಾಯ ದಾಖಲಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಮುಸ್ಲಿಂ ದ್ವೇಷದ ತಮ್ಮ ಕಾರ್ಯಸೂಚಿಯನ್ನು ಮುಂದುಮಾಡಿಕೊಂಡು ಇಲ್ಲಿಗೆ ಬಂದು ಬೆದರಿಕೆ ಹಾಕುತ್ತಿರುವ ಭಜರಂಗದಳ, ಹಿಂದು ಜಾಗರಣ ವೇದಿಕೆ,  ಆರ್‌ ಎಸ್‌ ಎಸ್‌ ಕಾರ್ಯಕರ್ತರು ಟಿಪ್ಪು ಮತ್ತು ಮುಸ್ಲಿಂ ಹೋರಾಟಗಾರರ ಚಿತ್ರಗಳನ್ನು ತೆಗೆಯಲು ಮತ್ತು ಸಾವರ್ಕರ್‌ ಮೊದಲಾದವರ ಚಿತ್ರಗಳನ್ನು ಸೇರಿಸಲು  ಒತ್ತಡ ಹೇರುತ್ತಿವೆ.  ಒಂದು ದೊಡ್ಡ ಬೈಕ್‌ ರ್ಯಾಲಿಯನ್ನೂ ಇವರು ಮಾಡಿದರು. ದಿನದಿಂದ ದಿನಕ್ಕೆ ಗದ್ದಲ ಗಲಾಟೆ ಬೆದರಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಆದರೆ ಗೌರಿಬಿದನೂರಿನ ಪೊಲೀಸ್‌ ಅಧಿಕಾರಿಗಳು ನ್ಯಾಯವಂತಿಕೆಯಿಂದ ರಕ್ಷಣೆಗೆ ನಿಂತಿದ್ದಾರೆ. ಸ್ಥಳೀಯ ಡಿಎಸ್‌ಎಸ್‌, ಮತ್ತು ರೈತಸಂಘಗಳು ಬಹುದೊಡ್ಡ ಬೆಂಬಲವಾಗಿದ್ದಾರೆ. ರಾಜ್ಯದ ಬೇರೆಬೇರೆ ಭಾಗಗಳಿಂದ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಇಲ್ಲಿಗೆ ಭೇಟಿ ನೀಡಿ ಬೆಂಬಲ ಸೂಚಿಸಿವೆ.

ಇತಿಹಾಸ ಎನ್ನುವುದು ನಮ್ಮ ಕಣ್ಣಿನ ನೇರಕ್ಕೆ, ನಮ್ಮ ಅಪೇಕ್ಷೆಯ ಮೇರೆಗೆ ನಡೆದ ನಾಟಕವಲ್ಲ. ಕಾಲದ ಒತ್ತಡ ಮತ್ತು ಸಮುದಾಯಗಳ ಬೇಕು ಬೇಡಗಳನ್ನು ಅನುಸರಿಸಿ ಜನತೆ ನಡೆಸಿದ ಬಂಡಾಯ; ಅನಿರೀಕ್ಷಿತ ಘಟನೆಗಳ ಸರಮಾಲೆಯ ಚಿತ್ರ. ಹಿಂದಿರುಗಿ ನೋಡಬೇಕಾದ, ಸ್ಪಂದಿಸಬೇಕಾದ ಘಟನಾವಳಿಯ ಇತಿಹಾಸವನ್ನು ನಮಗೆ ಬೇಕಾದಂತೆ ತಿರುಚಲು ಬರುವುದಿಲ್ಲ. ಅದರಲ್ಲಿರುವ ವೀರರು, ಧೀರರು ಎಲ್ಲ ಕಾಲಕ್ಕೂ ಹಾಗೆಯೇ ನಿಲ್ಲುತ್ತಾರೆ. ಹೊರಗುಳಿದವರು ಹೊರಗೇ ನಿಲ್ಲಬೇಕಾಗುತ್ತದೆ. ಇದು ಕೆಲವರಿಗೆ ಕಹಿಯಾದರೂ ಒಪ್ಪಬೇಕಾದ ಸತ್ಯ.

ತುಂಬ ಮಹತ್ವದ ಕೆಲಸವನ್ನು ಮಾಡಿರುವ ಪ್ರೊ.ಗಂಗಾಧರ ಮೂರ್ತಿ ಮತ್ತವರ ತಂಡವನ್ನು ಅಭಿನಂದಿಸಬೇಕಾದ ಹೊತ್ತಿನಲ್ಲಿ ಅವರ ವಿರುದ್ಧ ನಿಲ್ಲುವುದು ಮತ್ತು ಭೀತಿಯನ್ನು ಬಿತ್ತುವುದು ಅನಾಗರಿಕ ವರ್ತನೆ; ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾದ ಕೆಲಸ.

‍ಲೇಖಕರು Admin

9 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading