-ನಾರಾಯಣ ರಾಯಚೂರ್
ಅಂದೊಂದು ಸಂಜೆ ವೈ.ಏನ್.ಕೆ. ಜೊತೆ ವಾಕ್ ಮಾಡುತ್ತಿದ್ದಾಗ ಸಡನ್ ಆಗಿ’ ‘ವಿದ್ಯಾ ಭವನ್’ಗೆ ಹೋಗೋಣ,ನಡೀರಿ’-ಎಂದರು. ಸರಿ, ಆಟೋ ಹಿಡಿದು ವಿದ್ಯಾ-ಭವನ್ ತಲುಪಿದೆವು. ಅಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ. ಸಾಹಿತ್ಯ,ರಂಗ-ಭೂಮಿಯ ಕೆಲವು ಗಣ್ಯರು ಸೇರಿದ್ದರು.ಪುಸ್ತಕದ ಹೆಸರು ‘ಸಂಸ-ಸ್ಮರಣೆ’; ರಚನನೆಕಾರರು-,ಸಂಸರ ಸಹೋದರ ಸಂಬಂಧಿ, ನಿವೃತ್ತ ವಿದೇಶಿ ರಾಯಭಾರಿ, ಅ.ನ.ಸುಬ್ರಹ್ಮಣ್ಯಂ. ಅವರ ಈ ಕೃತಿಯ ಕಥಾ-ನಾಯಕ ಅಸಾಮಾನ್ಯ,ಅಪ್ರತಿಮ,ಪ್ರಚಂಡ ಪ್ರತಿಭೆಯ ನಾಟಕಕಾರ-ಸಂಸ.
ನನಗೆ ಸಂಸರ ಬಗ್ಗೆ ಆಗ ತಿಳಿದದ್ದು ಅಷ್ಟಕ್ಕಷ್ಟೇ. ಲಂಕೇಶರು ಬರೆದಿರುವ ಕಿರು-ನಾಟಕ ‘ಪೊಲೀಸರಿದ್ದಾರೆ ಎಚ್ಚರಿಕೆ’ಯ ಪರಿಚಯವಿತ್ತು-ಅದೂ ಅದರ ಶೀರ್ಷಿಕೆಯ ಕುತೂಹಲಕ್ಕಾಗಿ. ಸಂಸಾರ ತೊಳಲಾಟ,ವಿಕ್ಷಿಪ್ತತೆಗಳ ಆಳ-ಅಗಲದ ಪರಿವೆ ಇರಲಿಲ್ಲ. ಸುಬ್ರಮ್ಮಣ್ಯರ ಮಾತುಗಳನ್ನು ಕೇಳಿಸಿಕೊಂಡ ಮೇಲೆ ಕುತೂಹಲ ಇನ್ನೂ ಹೆಚ್ಚಿತು. ಪುಸ್ತಕ ಕೊಂಡು ತಂದು ಓದಿದ ಮೇಲಂತೂ ಕುತೂಹಲ ಮೇರೆ ಮೀರಿತು. ಕಾಡ ತೊಡಗಿದ ಸಂಸ!!
ಎಂಬತ್ತರ ದಶಕದ ಕೊನೆಯ ವರ್ಷಗಳಲ್ಲಿ ಬಿ,ವಿ.ವೈಕುಂಠರಾಜು ನಾಟಕ ಅಕಾಡೆಮಿಯ ಅಧ್ಯಕ್ಷರಾದಾಗ ಸಂಸರ ಬದುಕು,ಬರಹ ಹಾಗೂ ಸಮಗ್ರ ನಾಟಕಗಳ ಸಂಗ್ರಹವೊಂದನ್ನು ಹೊರತರಲು ನಿರ್ಧರಿಸಿ ಈ ಕಾರ್ಯದಲ್ಲಿ ಸಂಗ್ರಹಣಕಾರನಾಗಿ ಕೆಲಸ ಮಾಡಲು ನನಗೆ ಅವಕಾಶ ನನಗೆ ಒದಗಿ ಬಂದಿತು. ಪ್ರೊಫೆಸರ್ ಕ.ವೆಂ.ರಾಜಗೋಪಾಲ್ ಅವರ ಪೂರಕ ಮಾರ್ಗದರ್ಶನವೂ ದೊರೆತು, ಮೈಸೂರಿಗೆ ತೆರಳಿ ಸುಬ್ರಮಣ್ಯಂ ಅವರನ್ನು ಭೇಟಿಮಾಡಿ ಮತ್ತಷ್ಟು ವಿಷಯ/ದಾಖಲೆ ಸಂಗ್ರಹಣೆಗೆ ತೊಡಗಿ ಹಲವು ಮೂಲಗಳಿಂದ ಹತ್ತಾರು ವಿಷಯಗಳನ್ನು ಒಳಗೊಂಡ ಏಳು ನೂರಕ್ಕೂ ಮಿಕ್ಕ ಪುಟಗಳ ‘ಸಂಸ ನಾಟಕಗಳು’ (೭೬೫ ಪುಟಗಳ) ಉದ್ಗ್ರಂಥದ ಕಾರ್ಯ ಪೂರೈಸಲು ಸಾಧ್ಯವಾಯಿತು. ಇಷ್ಟೊತ್ತಿಗೆ ಸಂಸ ನನ್ನ ಮನದಾಳಕ್ಕೆ ಇಳಿದುಬಿಟ್ಟಾಗಿತ್ತು.
ಮುಂದೊಂದೈದಾರು ವರ್ಷಗಳ ನಂತರ ಪ್ರೊ. ಕಿ. .ರಂ “‘ನೀಗಿಕೊಂಡ ಸಂಸ” ನಾಟಕ ರಚನೆಗೆ ತೊಡಗಿದಾಗ ಮತ್ತೆ ಸಂಸ ಮುನ್ನೆಲೆಗೆ ಬಂದ.ಕಲಾಕ್ಷೇತ್ರದಿಂದ ಕೀ.ರಂ ಅವರ ಡಿ.ವಿ.ಜಿ ರೋಡ್ ಮನೆ ಕಡೆ ಹೆಜ್ಜೆ ಹಾಕುತ್ತ, ಸಜ್ಜನರಾವ್ ಸರ್ಕಲ್ ನಲ್ಲಿ ಬೆಣ್ಣೆ-ಗುಲ್ಕಂದ ಸವಿಯುತ್ತ, ಅಲೆಮಾರಿ,ವಿಚಿತ್ರ-ವ್ಯಕ್ತಿತ್ವದ ಸಂಸ ನನ್ನ ಸ್ಮರಿಸುತ್ತ ಬೆರಗುಗೊಳ್ಳುತ್ತ, ತಲೆ ತುಂಬಾ ಸಂಸ ನನ್ನೇ ತುಂಬಿಕೊಂಡು ದಿನ ಕಳೆದ ನೆನಪು ಮಾಸದೇ ಮತ್ತೆ ನೆನಪಿಗೆ ಬರುತ್ತಿದೆ.
ಹಾಗಾದರೆ ಏನಿದು ‘ಸಂಸ”?!- ಸಂಸ ಅವರ ನಿಜ-ಹೆಸರು ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಹುಟ್ಟೂರು ಯಳಂದೂರು ತಾಲೂಕಿನ ಅಗರ.ಜನನ ಜನವರಿ ೧೩,೧೮೯೮; ಅವರ ಜನ್ಮ ದಿನೋತ್ಸವಕ್ಕಿದು ೧೨೫ ರ ಗರಿ.
ಅವರೊಮ್ಮೆ ವಿಗಡ ವಿಕ್ರಮರಾಯ ಎಂಬ ನಾಟಕಕ್ಕೆ “ಕಂಸ” -ಕಾವ್ಯನಾಮದಿಂದ ಪ್ರಕಟಣೆಗೆ ನೀಡಿದಾಗ ಮುದ್ರಣ ದೋಷದಿಂದ ಅದು “ಸಂಸ” ಎಂದಾಯಿತಂತೆ. ಆ ಹೆಸರೇ ಅವರ ಕಾವ್ಯನಾಮವಾಗಿ ಶಾಶ್ವತವಾಗಿ ಉಳಿದು ಕೊಂಡಿರಬಹುದೆಂಬ ಪ್ರತೀತಿ.ಸ್ವಾಮಿಯವರು ಸಂಸ ಎನ್ನುವ ಕಾವ್ಯನಾಮವನ್ನು ಉದ್ದೇಶಪೂರ್ವಕವಾಗಿಯೇ ಇಟ್ಟುಕೊಂಡಿರಬೇಕೆಂಬ ವಾದವೂ ಇದೆ. ಕಿಟ್ಟೆಲ್ ನಿಘಂಟುವಿನಲ್ಲಿ ಸಂಸ ಎಂಬ ಪದಕ್ಕೆ ಸಂಶಯ ಎನ್ನುವ ಅರ್ಥವನ್ನೂ ಕೊಡಲಾಗಿದೆಯಂತೆ. ಸಂಶಯ-ಸ್ಯಾಮ್-ಸಯ ,ಸಂಸಯ ಸಂಸೆ- ಡೌಟ್ ಇತ್ಯಾದಿ. ಆದರೆ ಆ,ನ,ಸುಬ್ರಮಣ್ಯಮ್ ಅವರ ಪ್ರಕಾರ ಸಂಸ ಎಂದರೆ ಸಂಶಯ ಎಂಬ ಅರ್ಥದ ಜೊತೆಗೆ ತೊಂದರೆ,ಅಪಾಯ ಎನ್ನುವ ಅರ್ಥಗಳನ್ನೂ ಗಮಿನಿಸಬೇಕು-ಎನ್ನುತ್ತಾರವರು. ತಾವು ಆಪಾಯದಲ್ಲಿದ್ದೇವೆ ಎನ್ನುವ ಭಯ ಅವರನ್ನು ಅಪಾರವಾಗಿ ಕಾಡುತ್ತಿತ್ತು.. ಎಂದೆಲ್ಲ ಹೇಳಲಾಗಿದೆಯಾದರೂ ನಿಖರ ಕಾರಣ ಸಂಸರಿಗೆ ಮಾತ್ರ ಗೊತ್ತೇನೋ!!ಈಜಿಪ್ಟ್ ದೇಶಕ್ಕೆ ಅನೇಕ ಬಾರಿ ಅನುಪತಿ ಪಾತ್ರ ಪಡೆದಿದ್ದ ಸಂಸರು ಈಜಿಪ್ಟ್ನಲ್ಲಿ ಕೆಲಸ ಮಾಡಿದ್ದಾರೆ? ದಕ್ಷಿಣ ಆಫ್ರಿಕಾ, ದುರ್ಬಾನ್, ಫಿಜಿ, ಅಫಘಾನಿಸ್ತಾನಗಳಿಗೆ ಹೋಗಿದ್ದರೆಂದೂ ಅಲ್ಲಿ ಕೂಲಿಯಾಗಿ ಕೂಡ ಕೆಲಸಮಾಡಿದ್ದಾರೆಂದು ವರದಿ. ಇದು ದೇಶಾಂತರದ ಮಾತಾದರೆ, ಧರ್ಮಾಂತರದ ಬಗ್ಗೆಯೂ ಸಂಸರ ನಡೆ ಅಷ್ಟೇ ವಿಚಿತ್ರ-ವಿಸ್ಮಯಕರ. ಒಮ್ಮೆ ಮುಸ್ಲಿಂ ಮಠಕ್ಕೆ,ಒಮ್ಮೆ ಕ್ರಿಶ್ಚಿಯನ್ ಮತಕ್ಕೆ, ಮಗದೊಮ್ಮೆ ಬೌದ್ಧ ಧರ್ಮದ ಬಾಗಿಲನ್ನೂ ಸಂಸರು ಬಡಿದು ಬಂದ್ದುಂಟಂತೆ!!ಇಷ್ಟಾಗಿ ‘ತನಗೆ ಯಾವುದೇ ಧರ್ಮದಲ್ಲಿ ನಂಬಿಕೆಯಿಲ್ಲವೆಂದು’ ತಮ್ಮ ಮರಣ-ಪಾತ್ರದಲ್ಲಿ ಅವರು ಘೋಷಿಸಿದ್ದಾರೆ ಕೂಡ.ಇಂಥ ವರ್ಣ ರಂಜಿತ,ರಹಸ್ಯಮಯ ಬದುಕು ಸಂಸರದು!
೧೯೧೯-ಆಧುನಿಕ ಕನ್ನಡ ರಂಗಭೂಮಿಯ ಬಹು-ಮಹತ್ವದ ವರ್ಷವೆಂದೇ ಗುರುತಿಸಲ್ಪಡುವಂಥದು. ಆ ವರ್ಷವೇ ಟಿ,ಪಿ,ಕೈಲಾಸಂ ಅವರ ‘ಟೊಳ್ಳು-ಗಟ್ಟಿ’, ಪ್ರತಿಷ್ಠಿತ ಎ .ಡಿ.ಎ ನಾಟಕ ರಚನಾ ಸ್ಫರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಕನ್ನಡ ರಂಗಭೂಮಿಗೆ ಗಟ್ಟಿತನ ಒದಗಿಸಿತು. ಆದೇ ಸ್ಫರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದ ಕೃತಿಯೇ ಸಂಸರ ‘ಸುಗುಣ ಗಂಭೀರ’ನಾಟಕ. ಸಂಸರ ಸಾಹಿತ್ಯ ಸಂರಚನೆಯ ಕೌಶಲ,ಗುಣ,ಸಾಮರ್ಥ್ಯಗಳನ್ನು ಪ್ರಕಟಗೊಳಿಸಲು ಈ ಪುರಸ್ಕಾರ ಬಹುಮಟ್ಟಿಗೆ ಕಾರಣವಾಯಿತೆನ್ನಲೇಬೇಕು.
ಅವರು ರಚಿಸಿದ್ದರೆನ್ನಲಾದ ಇಪ್ಪತ್ಮೂರು ನಾಟಕಗಳಲ್ಲಿ ಈಗ ಲಭ್ಯವಿರುವಂಥವು ಆರು ಮಾತ್ರ. ಬೆಟ್ಟದ ಅರಸು,ವಿಗಡ ವಿಕ್ರಮರಾಯ,ಸುಗುಣ ಗಂಭೀರ,ಮಂತ್ರ ಶಕ್ತಿ,ಬಿರುದೆಂತೆಂಬರ ಗಂಡ ಹಾಗೂ ವಿಜಯ ನರಸಿಂಹ. ಅದಕ್ಕೆ ಅವರು ಒಂದರ್ಥದಲ್ಲಿ , ಐತಿಹಾಸಿಕ ನಾಟಕಗಳ ಪಿತಾಮಹ!
ಪ್ಲೇ ಈಸ್ ದಿ ಥಿಂಗ್ !!
ಸಂಸರ ನಾಟಕ ‘ವಿಗಡ ವಿಕ್ರಮರಾಯ’ -೧೯೩೧ ರಲ್ಲಿ ಮಹಾರಾಜರಾದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಸಮ್ಮುಖದಲ್ಲಿ ಪ್ರದರ್ಶನ. ನಾಟಕ ಮುಗಿದು ಕರ್ಟನ್-ಕಾಲ್ ಸಮಯದಲ್ಲಿ,ನಾಟಕವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಮಹಾರಾಜರು ಸಂಸರನ್ನು ಅಭಿನಂದಿಸಲು ಅಪೇಕ್ಷೆಪಟ್ಟರಂತೆ. ಆದರೆ ಸಂಸರು ನಾಪತ್ತೆ!!’ಪ್ಲೇ ಐಸ್ ದಿ ಥಿಂಗ್’..(ನಾಟಕವೇ ಪ್ರಧಾನ)-ಎಂದು ಹೇಳುತ್ತಾ ಸಂಸರು ಅಲ್ಲಿಂದ ಜಾಗ ಖಾಲಿ ಮಾಡಿಬಿಟ್ಟಿದ್ದರಂತೆ!. ಎಷ್ಟುದಿಟವಲ್ಲವೇ? ಇಂಥವರು ಯಾರುಂಟು ಈಗ? ಕೃತಿ ಮುಖ್ಯವಲ್ಲವೇ!!-ಕೃತಿಕಾರ ಏನಿದ್ದರೂ ಆನಂತರ.
ನಿಷ್ಟುರವಾದಿ ಸ್ವಾಭಿಮಾನಿ…!!
ಒಮ್ಮೆ ಕತೆಗಾರ ಆನಂದರು ಸಂಸರ ಭೇಟಿಗೆ ಹೋದಾಗ, ಬೀಡಿ ಸೇದುವ ಚಟವಿದ್ದ ಸಂಸರ ಕೋಣೆ ಯಲ್ಲಿ ಸಿಗರೇಟು ಪ್ಯಾಕ್ ಒಂದನ್ನು ಬೇಕಂತಲೇ ಬಿಟ್ಟು ಬಂದರಂತೆ. ಈ ಜಾಣ ಮರೆವನ್ನು ಗಮನಿಸಿ,ಸ್ವಾಭಿಮಾನದ ಸಂಸರು, ಮುಂದೊಮ್ಮೆಆನಂದರು ಬಂದಾಗ ಆ ಸಿಗರೇಟು ಪ್ಯಾಕನ್ನು ಹಿಂದಿರುಗಿಸಿ” ನಿಮ್ಮ ಭಿಕ್ಷೆ ನನಗೆ ಬೇಕಿಲ್ಲ” ಎಂದು ಮುಖದ ಮೇಲೆ ಹೊಡೆದಂತೆಯೇ ಹೇಳಿಬಿಟ್ಟರಂತೆ. ದುಡ್ಡಿನ ವಿಚಾರವಾಗಿಯೂ ಸಂಸರದು ಇದೆ ಧೋರಣೆ. ಸಾಲ ಕೇಳಿದಾಗ ಎದುರಿನವರು ಕಡಿಮೆ ಕೊಡಲು ಮುಂದಾದರೆ ‘ನಿನಗೆ ಯೋಗ್ಯತೆ ಇಲ್ಲದಿದ್ದರೆ ತೆಪ್ಪಗೆ ದಾರಿ ಹಿಡಿ’ ಎನ್ನುತ್ತಿದ್ದರಂರೆ; ಒಂದು ವೇಳೆ ಕೇಳಿದ್ದಕ್ಕಿಂತ ಹೆಚ್ಚಿಗೆ ಕೊಡಲು ಮುಂದಾದರೆ-” ನಿನ್ನ ಭಿಕ್ಷೆ ನನಗೆ ಬೇಕಿಲ್ಲ” ಎಂಬ ಸಿಡಿಮಿಡಿ! -ರಾಜರತ್ನಂ ಅವರ ‘ಸಂಸ ಕವಿ’ ,ನಾಟಕದ -ಪ್ತ್ರತಿಯನ್ನು ಒತ್ತೆ ಇಡುವ ಪ್ರಸಂಗವೂ ಸೇರಿದಂತೆ ಇಂತಹ ಅನೇಕ,ಅಪರೂಪದ,ವಿಸ್ಮಯಕರ ಪ್ರಸಂಗಗಳನ್ನು ತೆರೆದಿಡುತ್ತದೆ.
ಮತ್ತೆ-ಮತ್ತೆ ಆತ್ಮಹತ್ಯಾ ಯತ್ನ…
ಅಪ್ರತಿಮ ಪ್ರತಿಭಾಶಾಲಿ,ಶ್ರೇಷ್ಠ -ಕೃತಿ-ರಚನಾ ಸಾಮರ್ಥ್ಯದ ಸಂಸ, ಸ್ವಪೀಡನೆ,ದಕ್ಕದ ಮನ್ನಣೆ ಇವುಗಳಿಂದ ನೊಂದು-“ಮನಮಿಂದು ಶೂನ್ಯಂ/ಮನೆ ಶೂನ್ಯಂ,ಬೀಡು ಶೂನ್ಯ ಮಾದುದು,ಸಾಕಲಾವಣಿಶೂನ್ಯಮಾಯ್ತು “ಎಂಬ ಶ್ರೀ ಅವರ ಗದಾಯುದ್ಧ ನಾಟಕದ ಮಾತಿನಂತೆ, ‘ಬಾಳಿನಲ್ಲಂತೂ ಅರ್ಥವಿಲ್ಲ; ಸಾವಿನಲ್ಲಾದರೂ ಅರ್ಥವಿರಬಹುದೇ?” ಎಂದು ಹತಾಶ ಭಾವಕ್ಕಿಳಿದು ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಒಮ್ಮೆ, ಹಾಗೂ ತಮ್ಮ ಮೂವತ್ತೇಳನೆಯ ವಯಸ್ಸಿನಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾದರು. ಕೊನೆಗೆ ೧೪, ಫೆಬ್ರವರಿ ೧೯೩೯ ರಂದು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ..ಅವರ ಲೇಖನಿಯಿಂದ ಹೊರಹೊಮ್ಮಬೇಕಿದ್ದ ಉತ್ತಮೋತ್ತಮ ಕೃತಿಗಳ ನಿರೀಕ್ಷೆಗೆ ಇತಿಶ್ರೀ ಹಾಡಿದರು.






0 Comments