-ಹೆಚ್ ಎಂ ಮಯಬ್ರಹ್ಮಚಾರ್
ನಾಟಕ ಬೆಂಗ್ಳೂರ್ -18 ರ ರಂಗ ಸಂಭ್ರಮದ ಒಂಬತ್ತನೇ ನಾಟಕ “ವರ್ಣ ಪಲ್ಲಟ” ವನ್ನು ‘ಅನಾವರಣ’ ತಂಡದ ಸಂಚಾಲಕರಾದ ಎಂ. ರವಿ ಅವರ ಸಾರಥ್ಯದಲ್ಲಿ, ಕೆ. ವೈ. ನಾರಾಯಣಸ್ವಾಮಿಯವರಿಂದ ರಚಿತಗೊಂಡ ನಾಟಕವನ್ನು ಶಶಿಧರ ಭಾರಿಘಾಟ್ ರವರ ನಿರ್ದೇಶನದಲ್ಲಿ ಮಲ್ಲತಹಳ್ಳಿ ಕಲಾಗ್ರಾಮದ ಸಮುಚ್ಚಯ ರಂಗಮಂದಿರದಲ್ಲಿ ದಿನಾಂಕ 11/12/2025 ರಂದು ಪ್ರದರ್ಶನಗೊಂಡಿತು.
ಜಾತಿ,ಸಮುದಾಯ, ಪಂಗಡಗಳ ಬಣ್ಣ,ಕಾಂತಿ, ರೂಪ,ಆಕೃತಿಗಳ ಬದಲಾವಣೆಯನ್ನು ಪ್ರತಿಬಿಂಬಿಸುವ ನಾಟಕಕ್ಕೆ ‘ ‘ವರ್ಣ ಪಲ್ಲಟ’ ವೆಂಬ ಸುಂದರ ಶೀರ್ಷಿಕೆಯನಿಟ್ಟು, ಇಡೀ ನಾಟಕದ ಮೂಲಕ ಸಮಾಜದಲ್ಲಿರುವ ಅನಿಷ್ಠ ಆಚಾರ, ಪದ್ಧತಿ,ಕಟ್ಟಳೆ, ಸಂಪ್ರದಾಯಗಳನ್ನು ಬೇರು ಸಮೇತ ಕಿತ್ತೊಗೆದಾಗ ಮಾತ್ರ ಬಲಿಷ್ಠ ಸಮಾಜ ಕಟ್ಟಲು ಸಾಧ್ಯವೆನ್ನುವ ಧನಾತ್ಮಕ ಕಥನವೇ ‘ವರ್ಣ ಪಲ್ಲಟ’.
ಮೇಲ್ವರ್ಗದ ರಾಧಾ ತಳ ಸಮುದಾಯದ ಮಾಧವರ ಪ್ರೀತಿಯು ಬೆಸೆದು ಗಟ್ಟಿಗೊಳ್ಳುವ ಮುನ್ನವೇ ನಿಗೂಢವಾಗಿ ಕಣ್ಮರೆಯಾಗಿ ಹೋದದ್ದು, “ಎಲ್ಲಿ ಹೋದಳೋ ರಾಧೆ, ಎಲ್ಲಿ ಹೋದನೋ ಮಾಧವ, ಗಾಳಿಗೂ ಸಿಗಲಿಲ್ಲ ಅವರ ಸುಳಿವು, ಪ್ರೀತಿ ಇಲ್ಲದ ಲೋಕ ಈಗ ಕಾಳಿಂಗ ಮಡುವು” ಎಂಬ ಶುಶ್ರಾವ್ಯವಾದ ಮಧುರ ಗೀತೆಯ ಮೂಲಕ,ಇವತ್ತಿನ ಸಮಾಜದಲ್ಲಿ ಮರ್ಯಾದ ಹತ್ಯೆಯು ಕರಾಳ ಮುಖವಾಗಿ ವಿಜೃಂಭಿಸುತ್ತಿರುವುದನ್ನು ಬಣ್ಣಿಸಿದ್ದಾರೆ.. ಬಸವಣ್ಣನ ಕಾಲಘಟ್ಟದಲ್ಲಿ ವರ್ಣಸಂಕರ ವ್ಯವಸ್ಥೆಯಿಂದ ಅಂತರ್ಜಾತಿ ವಿವಾಹಕ್ಕೆ ತಡೆಯೊಡ್ಡಿ ರಕ್ತಪಾತವಾಗುವುದನ್ನು ಇಲ್ಲಿ ಹೋಲಿಸಬಹುದು. ಬಸವಣ್ಣ,ಅಂಬೇಡ್ಕರ್, ಬುದ್ಧ,ಕುವೆಂಪು,ಪೆರಿಯಾರ್ ಇವರ ಸಂದೇಶದಂತೆ ಮೌಢ್ಯ ತೊಳೆದು ಶಿಕ್ಷಣ ಪ್ರಾಬಲ್ಯ ಪಡೆಯಬೇಕು, ಇವನಾರವಾ ಇವನಾರವಾ ಎಂದೆಣಿಸದಿರಯ್ಯ ಇವ ನಮ್ಮವನೆಂದು ಅಪ್ಪಿಕೊಳ್ಳುವ ಕಾಲ ಬರಬೇಕು, ಜಾತಿ ಪದ್ಧತಿಯ ಅಮಾನೀಯವಾದ ಆಚರಣೆ ತೊಲಗಬೇಕೆಂಬ ಅಂಬೇಡ್ಕರ್ ವಾದ ಮತ್ತು ಸಂವಿಧಾನಗಳ ಅನುಷ್ಠಾನ ಮನುಜ ಮತ ವಿಶ್ವಪಥ ವಾಗಬೇಕೆಂಬ ಕುವೆಂಪುರವರ ಸಂದೇಶ ಪ್ರಸ್ತುತ ಸಮಾಜದಲ್ಲಿ ಮಾರ್ಧನಿಸಬೇಕೆನ್ನುವ ಆಶಯ ನಾಟಕದುದ್ದಕ್ಕೂ ಅಭಿವ್ಯಕ್ತಗೊಂಡಿದೆ.
ಪಾರ್ಥಸಾರಥಿ ಪುರುಷೋತ್ತಮ (ಪಾಪು)ನಾಗಿ ಮಹಾಂತೇಶ್ ತಮ್ಮ ವಿಶಿಷ್ಟ ಧ್ವನಿ ಅಳವಡಿಕೆಯೊಂದಿಗೆ ಲವಲವಿಕೆಯ ಅಭಿನಯ ನೀಡಿದ್ದಾರೆ. ಮಾಧವನಾಗಿ ಮನೋಜ್ ಮುಗ್ಧತನ ಪಾತ್ರದ ಮೆರುಗನ್ನು ಹೆಚ್ಚಿಸುತ್ತದೆ, ಮೇಷ್ಟ್ರಾಗಿ ರಾಹುಲ್ ಗಮನ ಸೆಳೆಯುತ್ತಾರೆ . ರಾಧಾಳಾಗಿ ಸಿಂಚನ,ಪ್ರೇಮಿಯಾಗಿ ನಿವೇದಿಸಿಕೊಳ್ಳುವ ಮಾತುಗಳ ಇನಿದನಿಯಲ್ಲಿ ಇಷ್ಟವಾಗುತ್ತಾರೆ.ಉಳಿದಂತೆ ರಚನಾ, ಇಂಚರ,ಭುವನ್ ಯೋಗೇಶ್ ಮನೋಹರ್ ಮುಂತಾದವರು ಅಭಿನಯಿಸಿ ನಾಟಕದ ಮೆರುಗನ್ನು ಹೆಚ್ಚಿಸಿದ್ದಾರೆ.

ಸಂಗೀತ ಸಂಯೋಜನೆ ಮತ್ತು ನಿರ್ವಹಣೆಯಲ್ಲಿ ಹವೀಶ್ ಶ್ರೀನಾಥ್, ಸಂದೀಪ್,ಮಂಜುನಾಥ್, ಮಧುರ ಚೆನ್ನಿಗ,ಸುಬ್ಬಣ್ಣ, ಉತ್ಥಾನ ಇವರು ಮಾಧುರ್ಯವಾಗಿ ಹಾಡಿದ್ದಾರೆ.ಮೇಳಗಾರನಾಗಿ ಬಂಗಾರಪ್ಪ ಖುದಾನಪುರ, ರಂಗಪರಿಕರ ದಲ್ಲಿ ಬಿ ವಿಠಲ್ ಅಪ್ಪಯ್ಯ ಅವರು ಪರಿಕರಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳುವಂತೆ ವಿನ್ಯಾಸಗೊಳಿಸಿದ್ದಾರೆ. ಬೆಳಕು ಸಂಯೋಜನೆ ಮತ್ತು ನಿರ್ವಹಣೆಯಲ್ಲಿ ಎಂ.ರವಿ ಅವರು ನಾಟಕದ ರಮ್ಯತೆಯನ್ನು ಹೆಚ್ಚಿಸಿದ್ದಾರೆ. ಪ್ರತಿವಿಂಗ್ ಗಳಲ್ಲಿ ಫ್ಲೋರ್ ಲೈಟ್ ಗಳನ್ನು ಬಳಸಿಕೊಳ್ಳಬೇಕಾಗಿತ್ತು. ನೃತ್ಯ ಸಂಯೋಜನೆ ಧನುಶ್ ನಾಗ್,ವರ್ಣಕಲೆ ಸರ್ವೇಶ್ ಚೆನ್ನಾಗಿ ಮಾಡಿದ್ದಾರೆ.
ನಾಟಕದ ನಿರ್ದೇಶನ ಮತ್ತು ವಿನ್ಯಾಸಗಾರರಾಗಿ ಶಶಿಧರ ಭಾರಿಘಾಟ್ ಅವರು ಹತ್ತು ನಟರಿದ್ದರೆ ಸಾಕು ಐವತ್ತು ಪಾತ್ರಗಳನ್ನು ಸೃಷ್ಟಿಸಬಲ್ಲ ಮಾಂತ್ರಿಕ. ಮುಖವಾಡಗಳನ್ನು ಬಳಸಿ ಬೇರೆ ಬೇರೆ ಪಾತ್ರಗಳನ್ನು ಸೃಷ್ಟಿಸಬಲ್ಲರು.ನಟರ ಚಲನ ವಲನಗಳಲ್ಲಿ ಶಿಸ್ತುಗಾರಿಕೆಯನ್ನು ಗಮನಿಸಬಹುದು. ಕೋರಸ್ ನಲ್ಲಿ ಹಲವು ನಟರ ಧ್ವನಿಗಳಿಂದ ಏಕ ನಟನ ಧ್ವನಿಯಂತೆ ಹೇಳಿ ಸುವಲ್ಲಿ ಶ್ರಮಿಸಿದ್ದಾರೆ. ನಟರ ಚಲನೆಗಳನ್ನು ಒಂದು ಚೌಕಟ್ಟಿನ ಪರಿಧಿ ಯೊಳಗೆ ಸೀಮಿತಗೊಳಿಸಿಕೊಳ್ಳಬೇಕಾಗಿತ್ತು.ನೆಲಗಂಬಳಿ( ಫ್ಲೋರ್ ಮ್ಯಾಟ್ )ಬಳಸಿಕೊಂಡಿದ್ದರೆ ಇನ್ನೂ ನಾಟಕ ರಂಜನೀ ಯವಾಗಿರುತ್ತಿತ್ತು.
ಕೆ. ವೈ. ನಾರಾಯಣಸ್ವಾಮಿಯವರ ಪ್ರಭುದ್ಧವಾದ ಮೌಲ್ಯಯುತ ರಚನೆ ಮತ್ತು ಸಂಭಾಷಣೆ ನಾಟಕದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ನಾಟಕ ಬೆಂಗ್ಳೂರ್ ಪರವಾಗಿ ಆಚಾರ್ ಪ್ರೇಕ್ಷಕರಿಗೆ ಸ್ವಾಗತವನ್ನು ಬಯಸಿದರು. ನಾಟಕದ ನಿರ್ದೇಶಕರಿಗೆ ನೆನಪಿನ ಕಾಣಿಕೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜ ಮೂರ್ತಿಯವರು ನೀಡಿದರು. ಜೊತೆಯಲ್ಲಿ ಎಸ್ ಜಿ ಸಿದ್ದರಾಮಯ್ಯ, ಬಸವಲಿಂಗಯ್ಯ ಮುಂತಾದ ಗಣ್ಯರು ಸಹಕರಿಸಿದರು. ಸಹಯೋಗವನ್ನು ನೀಡಿದ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಹಕಾರ ನೀಡಿರುವ ಬಹುರೂಪಿ ಪ್ರಕಾಶನಕ್ಕೆ ಆಚಾರ್ ವಂದನೆ ಸಲ್ಲಿಸಿದರು.






0 Comments