ಯುವ ಸಂಶೋಧಕರಲ್ಲಿ ಮನವಿ
ಆತ್ಮೀಯರೆ,
ಕನ್ನಡದ ಬೌದ್ಧಿಕ ವಲಯ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೊಸ ಸಂಶೋಧನೆ ವಿಷಯಗಳಿಲ್ಲದೆ ಮತ್ತು ವಿಧಾನಗಳಲ್ಲಿ ನವೀನತೆಯಿಲ್ಲದೆ ಜಡಗೊಂಡಂತೆ ಭಾಸವಾಗುತ್ತಿದೆ. ಅಲ್ಲದೆ ಹೊಸ ತಿಳುವಳಿಕೆಯ ಕೊರತೆಯಿಂದ ಬಳಲುತ್ತಿರುವಂತೆಯೂ ಕಾಣುತ್ತಿದೆ. ಈ ನಡುವೆ ಅತ್ಯುತ್ತಮವಾದ ಸಂಶೋಧನೆ ಪ್ರಬಂಧಗಳು ಪ್ರಕಟವಾದರೂ ಅವುಗಳ ಬಗೆಗೆ ಚರ್ಚೆಗಳೇ ಆಗದೆ ಅವೂ ಸಾಯುತ್ತಿವೆ. ಹೊಸ ಆಕರಗಳ ಬಳಕೆಯಿಲ್ಲದೆ ಹಳೆಯ ಜಾಡುಗಳಲ್ಲಿಯೇ ಗಿರಕಿ ಹೊಡೆಯುತ್ತಿರುವಂತೆಯೂ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿಯೇ ಗಂಭೀರವಾದ ಅಧ್ಯಯನಗಳಲ್ಲಿ ತೊಡಗಿದವರೂ ಇದ್ದಾರೆ. ಒಳ್ಳೆಯ ಬರೆಹಗಳನ್ನು ಮಾಡುತ್ತಿದ್ದಾರೆ. ಆದರೆ ಇವುಗಳು ವಿಶಾಲ ಬೌದ್ಧಿಕ ಸಮುದಾಯಕ್ಕೆ ತಲುಪುವುದೂ ಇಲ್ಲವಾಗಿದೆ. ಎಲ್ಲವೂ ದ್ವೀಪಗಳ ಚಟುವಟಿಕೆಗಳಂತೆ ನಡೆಯುತ್ತಿವೆ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕನ್ನಡ ಚಿಂತನೆ ನಿಂತ ನೀರಾಗಬಹುದು. ಹಾಗಾಗಿ ಈ ಬಿಕ್ಕಟ್ಟಿಗೆ ಬದಲಿ ಮಾರ್ಗಗಳನ್ನು ಕಂಡುಕೊಳ್ಳಲೇಬೇಕಿದೆ. ಇಂತಹ ದಾರಿಯನ್ನು ಹುಡುಕಿಕೊಳ್ಳುವ ಉದ್ದೇಶದಿಂದಲೇ ‘ಲೋಕನುಡಿ’ ವೆಬ್ ಮ್ಯಾಗಜಿನ್ ಅನ್ನು ರೂಪಿಸಲು ಇಚ್ಚಿಸಲಾಗಿದೆ. ಇದರಲ್ಲಿ ಒಳ್ಳೆಯ ಮತ್ತು ನವೀನತೆಯಿಂದ ಕೂಡಿರುವ ಸಂಶೋಧನೆಯ ಬರೆಹಗಳನ್ನು ಪ್ರಕಟಿಸುವುದು ಲೋಕನುಡಿ ಬಳಗದ ಆಶಯ. ಆ ಮೂಲಕ ಒಳ್ಳೆಯ ಸಂಶೋಧನೆಯ ಬರೆಹಗಳನ್ನು ಒಂದಡೆ ಕಲೆಹಾಕಿ ಓದುಗರಿಗೆ ಒದಗಿಸುವುದು ಇಲ್ಲಿನ ಕಾಳಜಿ.
ಇದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ ಸಾಹಿತ್ಯ ಸಮಾಜ ವಿಜ್ಞಾನಗಳಲ್ಲಿ ಹೊಸದಾಗಿ ಸಂಶೋಧನೆಗೆ ತೊಡಗುವವರಿಗೆ ಸೂಕ್ತ ಆಯ್ಕೆ ಮಾರ್ಗದರ್ಶನಗಳೇ ಇಲ್ಲದೆ ಅನಾಥರಂತೆ ಕಾಣುತ್ತಿದ್ದಾರೆ. ಸರಿಯಾದ ಮಾರ್ಗದರ್ಶನವಿಲ್ಲದೆ, ಯಾಕೆ ಸಂಶೋಧನೆಯನ್ನು ಗಂಭೀರವಾಗಿ ಆಯ್ಕೆ ಮಾಡಿಕೊಳ್ಳಬೇಕು? ಯಾವ ವಿಷಯಗಳನ್ನು ಕುರಿತು ಸಂಶೋಧನೆ ಮಾಡಬೇಕು? ಎಂಬುದರ ಬಗೆಗೆ ಸ್ಪಷ್ಟತೆಯಿಲ್ಲದೆ ಯುವಶೋಧಕರು ಕಂಗಾಲಾಗಿದ್ದಾರೆ.
ಹಾಗಾಗಿ ಹೊಸದಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿಂದ ಲೇಖನಗಳನ್ನು ಆಹ್ವಾನಿಸಿ ಆ ಲೇಖನಗಳನ್ನು ವಿಷಯ ತಜ್ಞರಿಗೆ ಕಳುಹಿಸಿ ಅವರಿಂದ ಅಭಿಪ್ರಾಯ ಪಡೆದು ಸೂಕ್ತ ಟಿಪ್ಪಣಿಗಳೊಂದಿಗೆ ಪ್ರಕಟಿಸಲಾಗುವುದು. ಆ ಮೂಲಕ ಯುವಸಂಶೋಧಕರಿಗೆ ಸೂಕ್ತ ಫೀಡ್ ಬ್ಯಾಕ್ ನೀಡುವ ಮೂಲಕ ಸಂಶೋಧನೆಯನ್ನು ಸರಿದಾರಿಯಲ್ಲಿ ಮುನ್ನಡೆಸಲು ನೆರವಾಗುವುದು ಲೋಕನುಡಿ ಬಳಗದ ಪ್ರಾಮಾಣಿಕ ಕಾಳಜಿ.
ಆದ್ದರಿಂದ ಹೊಸದಾಗಿ ಸಂಶೋಧನೆಯ ಚಟುವಟಿಕೆಗಳಲ್ಲಿ ತೊಡಗಿರುವವರು ತ ಮ್ಮ ಸಂಶೋಧನಾ ಪ್ರಬಂಧಗಳನ್ನು ಲೋಕನುಡಿಗೆ ಕಳುಹಿಸಿಕೊಡಿ. ನೀವು ಕಳುಹಿಸಿಕೊಟ್ಟ ಲೇಖನವನ್ನು ವಿಷಯ ತಜ್ಞರಿಗೆ ಕಳುಹಿಸಿಕೊಟ್ಟು ಅವರಿಂದ ಒಂದು ಟಿಪ್ಪಣಿ ಬರೆಸಿ ಪ್ರಕಟಿಸಲಾಗುವುದು. ವಿಷಯ ತಜ್ಞರು ಪ್ರಕಟಿಸಲು ಒಪ್ಪಿಗೆ ನೀಡಿದ ನಂತರ ನಿಮ್ಮ ಲೇಖನವನ್ನು ಪ್ರಕಟಿಸಲಾಗುವುದು. ಆ ಮೂಲಕ ಮುಕ್ತ ಚರ್ಚೆಗೆ, ವಾಗ್ವಾದಕ್ಕೆ ಅವಕಾಶವನ್ನು ಕಲ್ಪಿಸಲಾಗುವುದು. ಇದು ನಿಮ್ಮ ಸಂಶೋಧನೆಗೆ ನೆರವಾಗಿ ನಿಡುಗಾಲದಲ್ಲಿ ಕನ್ನಡದಲ್ಲಿ ಉತ್ತಮ ಸಂಶೋಧನೆ ಮತ್ತು ವಿಮರ್ಶೆಯ ಪರಿಸರ ಸೃಷ್ಟಿಯಾಗಲು ಕಾರಣವಾಗÀಬಹುದು. ನಿಮ್ಮ ಲೇಖನಗಳನ್ನು lokanudi2023@gmail.comಗೆ ಕಳುಹಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನವೆಂಬರ್ ಒಂದರಿಂದ ಲೋಕನುಡಿ ಸಾರ್ವಜನಿಕರಿಗೆ ಲಭ್ಯವಿದೆ. ಈ ಅವಕಾಶವನ್ನು ಯುವಸಂಶೋಧಕರು ಬಳಸಿಕೊಳ್ಳಬೇಕೆಂದು ಮನವಿ.
ಲೋಕನುಡಿ ಸಂಪಾದಕ ಬಳಗ
ಪುರುಷೋತ್ತಮ್ ಬಿಳಿಮಲೆ
ರಹಮತ್ ತರೀಕೆರೆ
ಕೆ.ಪಿ. ಸುರೇಶ್
ವೆಂಕಟೇಶ್ ನೆಲ್ಲುಕುಂಟೆ
ರಂಗನಾಥ ಕಂಟನಕುಂಟೆ






0 Comments