ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕನಾಥ್ ನೆನಪಿಸಿದ ವಿದ್ಯಾರ್ಥಿಗಳು!

ಎಂ.ಆರ್.ಕಮಲ  

ಕೆಲಸಕ್ಕೆ ಸೇರಿದ ಹೊಸದರಲ್ಲಿ ಅದೇನು ಉತ್ಸಾಹ, ಇಡೀ ಜಗತ್ತನ್ನೇ ಬದಲಿಸಿಬಿಡುತ್ತೇವೆ ಅನ್ನುವ ಕ್ರಾಂತಿಕಾರಕ ಮನೋಭಾವ! ಎಂಇಎಸ್  ಕಾಲೇಜಿನ ಎಂಪಿಎಲ್ ಶಾಸ್ತ್ರಿ, ಕನ್ನಡ ಅಧ್ಯಯನ ಕೇಂದ್ರದ ಜಿ ಎಸ್ ಎಸ್  ಅವರಂಥ ಶಿಸ್ತಿನ ಮುಖ್ಯಸ್ಥರ, ಮೇಷ್ಟ್ರುಗಳ ಗರಡಿಯಲ್ಲಿ ಪಳಗಿ ಬಂದವರು ನಾವು. ಎರಡು ನಿಮಿಷವೂ ತರಗತಿಗೆ ತಡವಾಗಿ ಬಾರದ, ಮಹಾ ನಿಯತ್ತಿನ ಮೇಷ್ಟ್ರುಗಳ ಆದರ್ಶಗಳನ್ನು ತಲೆಗೆ ತುಂಬಿಕೊಂಡು ಓಡಾಡುತ್ತಿದ್ದ ಕಾಲ! ನಮ್ಮ ಮೇಷ್ಟ್ರುಗಳಂತೂ ತಮ್ಮ ಮೇಷ್ಟ್ರುಗಳೆಲ್ಲ ಎಷ್ಟು ಸಿದ್ಧತೆಯನ್ನು ಮಾಡಿಕೊಂಡು ಬಂದು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನುವುದನ್ನು ಕೊಂಚ ವರ್ಣರಂಜಿತವಾಗಿಯೇ ಹೇಳುತ್ತಿದ್ದರು!

ನಾವು ನೋಡುತ್ತಿದ್ದ ಅನೇಕ ಚಲನಚಿತ್ರಗಳು ಸಹ ಇಂಥ ವಿಷಯಗಳನ್ನೇ ಹೇಳುತ್ತಿದ್ದವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಗಿರಡ್ಡಿ ಗೋವಿಂದರಾಜರ `ಹಂಗು’ ಕತೆಯ ಆಧಾರಿತ ಚಿತ್ರವಂತೂ ತಲೆಯಲ್ಲಿ ಕೂತು ಬಿಟ್ಟಿತ್ತು (ಕಥಾ ಸಂಗಮ). ಆದರ್ಶ ಮತ್ತು ಕಟು ವಾಸ್ತವಗಳ ನಡುವೆ ಸಿಕ್ಕು ತೊಳಲುವ ಪ್ರಿನ್ಸಿಪಾಲ್, ಕೊನೆಗೂ ತನ್ನ ಆದರ್ಶಗಳಿಗೆ ಬದ್ಧನಾಗುತ್ತೇನೆಂದು ಹೊರಡುವ ಜಿ. ಕೆ. ಗೋವಿಂದರಾವ್, (ಪ್ರಿನ್ಸಿಪಾಲ್) ಅವರನ್ನು ಭ್ರಷ್ಟಗೊಳಿಸಲು ಯತ್ನಿಸುವ ಲೋಕನಾಥ್ ನಮ್ಮ ಭಾವಕೋಶದ ಭಾಗವೇ ಆಗಿಹೋಗಿದ್ದರು. ಯಾವ ಕಾರಣಕ್ಕೂ ನಾವು ವ್ಯವಸ್ಥೆಗೆ ಹೊಂದಿಕೊಂಡು ಭ್ರಷ್ಟರಾಗುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಕೊನೆಕೊನೆಗೆ ಅನುಭವಿಸಿದ ತೀವ್ರ ನೋವುಗಳನ್ನು ಬರೆಯುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾಪಿ ಹೊಡೆಯುವಾಗ ಸಿಕ್ಕಿ, ಪ್ರಿನ್ಸಿಪಾಲರಿಂದ ಅವಮಾನಿತನಾಗಿ `ಹಾವಿನ ದ್ವೇಷ, ಹನ್ನೆರಡು ವರುಷ’ ಎಂದು ಹಾರಾಡುತ್ತಿದ್ದ, ಚೀರಾಡುತ್ತಿದ್ದ `ಮಹಾನ್ ಸ್ವಾಭಿಮಾನಿ’ `ರಾಮಾಚಾರಿ’ ಶಿಷ್ಯರ ಯುಗವು ಅದೇ ಆಗಿತ್ತು ಅನ್ನುವುದೊಂದು ವಿಪರ್ಯಾಸ.

ನನಗಾಗ ಮೆಲುದನಿಯಲ್ಲಿ ಬುದ್ಧಿ ಹೇಳುವ `ಚಾಮಯ್ಯ ಮೇಷ್ಟ್ರು’ ಬುದ್ಧಿ ಸ್ವಲ್ಪವೂ ಇರಲಿಲ್ಲ. `ಈ ಅಂಜದ ಎದೆಯಲ್ಲಿ ನಂಜೇ ಇಲ್ಲ, ಬಗ್ಗುವ ಆಳಲ್ಲ’ ಎಂದು ವಿದ್ಯಾರ್ಥಿಗಳ ಎಲ್ಲ ಅಶಿಸ್ತುಗಳಿಗೂ ಸೆಡ್ಡು ಹೊಡೆಯುವ ರಾಮಾಚಾರಿಣಿಯಾಗಿದ್ದ ನನಗೆ ನನ್ನದೇ ಆದರ್ಶದಲ್ಲಿ ಈ ವಿದ್ಯಾರ್ಥಿಗಳ ಸಂಕಟ ಅಷ್ಟೊಂದು ಅರ್ಥ ಆಗುತ್ತಿರಲಿಲ್ಲ ಎನ್ನುವುದೇ ಸತ್ಯ. ಸರಿಯಾದ ಸಮಯಕ್ಕೆ ಬಾರದ, ಪಠ್ಯ ಪುಸ್ತಕ ತಾರದ ವಿದ್ಯಾರ್ಥಿಗಳು ವಿದ್ಯಾರ್ಥಿಗಳೇ ಆಗಿರಲಿಲ್ಲ. ಪರೀಕ್ಷೆಯಲ್ಲಿ ಆಚೀಚೆ ನೋಡುವವರಿಗಂತೂ ಮಹಾನ್ ದುಸ್ವಪ್ನವಾಗಿದ್ದೆ. (ಶಿವನಹಳ್ಳಿ ಕಾಲೇಜಿಗೆ ಬರುವ ಹೊತ್ತಿಗೆ ಮನೆ ಮನೆಗೆ ಹಾಲು ಹಾಕುವ, ಸುದ್ದಿ ಪತ್ರಿಕೆಗಳನ್ನು ಹಂಚುವ ವಿದ್ಯಾರ್ಥಿಗಳಿಗೆ ಅರ್ಧ ಗಂಟೆ ತಡವಾಗಿ ಬರುವುದಕ್ಕೆ ನಾನೇ ಅನುಮತಿ ಕೊಟ್ಟು ಬಿಡುತ್ತಿದ್ದೆ! ಕಾಲವೇ ನಿನಗೆ ನಮಸ್ಕಾರ)

ನಾನು ಆನೇಕಲ್ ನಲ್ಲಿದ್ದಾಗ invigilationಗೆ ಈ ಮೇಡಂ ಬಾರದಿರಲಿ ಎಂದು ಅನೇಕರು ಮೊದಲೇ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರು. ಆಗ ತಾನೇ ಕೆಲಸಕ್ಕೆ ಸೇರಿದ್ದ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ತಿಮ್ಮಾರೆಡ್ಡಿ, ರಸಾಯನಶಾಸ್ತ್ರದ ರಾಜಶೇಖರ್, ಸಸ್ಯಶಾಸ್ತ್ರದ ಆಫ್ಸರ್ ಬಾಬು ಮುಂತಾದವರೆಲ್ಲ ಹೆಚ್ಚು ಕಮ್ಮಿ ನನ್ನಂತಿದ್ದರು. ರೆಡ್ಡಿಯವರದು ಮಹಾನ್ ಕೋಪದ ಸ್ವಭಾವ. ನನಗಿಂತ ತುಸು ಹೆಚ್ಚೇ ಇದ್ದರು. ಬಾಬುವಿನದ್ದು ಮೃದು ಮನಸ್ಸು. ನನಗಿಂತ ಸಿಟ್ಟಿನಲ್ಲಿ ಕಮ್ಮಿ. ಆದರೆ ರಾಜಶೇಖರ್ ಅವರ ಸ್ವಭಾವ ನನ್ನದನ್ನು ಹೋಲುತ್ತಿತ್ತು.

ಈ ಕಾಲೇಜಿನ ಮಕ್ಕಳು ಮಹಾನ್ ಪ್ರತಿಭಾವಂತರಾಗಿದ್ದು, ಗಂಟೆಗಟ್ಟಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬಲ್ಲ ಶಕ್ತಿ ಉಳ್ಳವರಾಗಿದ್ದರು. ಆದರೆ ಹೆಚ್ಚಿನ ಮಕ್ಕಳು ಓದದೇ ಕಾಪಿ ಹೊಡೆದು ಪಾಸಾಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು. ಪರೀಕ್ಷೆಗೆ ಪಠ್ಯ ಪುಸ್ತಕದ ಸಮೇತ ಬರುತ್ತಿದ್ದರಲ್ಲದೆ, ಎಷ್ಟೋ ಬಾರಿ ಉತ್ತರ ಹುಡುಕಲು ಮೇಷ್ಟ್ರುಗಳ ನೆರವನ್ನು ಕೇಳುತ್ತಿದ್ದರು!ಕೆಲವರು ಚಾಕು, ಚೂರಿಗಳನ್ನು ತಂದು ಅದನ್ನು ಡೆಸ್ಕ್ ಮೇಲೆ ಚುಚ್ಚಿ ಇಟ್ಟುಕೊಂಡು ಮೇಷ್ಟ್ರುಗಳಿಗೆ ಸಂದೇಶ ರವಾನಿಸುತ್ತಿದ್ದರು. ಇನ್ನು ಪರೀಕ್ಷೆಯ ಹಾಲ್ ನಲ್ಲಿ ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡುತ್ತ, ಚೆನ್ನಾಗಿ ಬರೆಯುವವನ ಹಾಳೆಗಳನ್ನು ಕಿತ್ತುಕೊಂಡು ಹೋಗುತ್ತಿದ್ದರು. ಪರೀಕ್ಷೆ ಮುಗಿದ ಮೇಲೆ ಅವನಿಗೆ ತನ್ನ ಹಾಳೆಗಳನ್ನು ಜೋಡಿಸಿಕೊಳ್ಳುವುದೇ ಬಹು ಕಷ್ಟವಾಗಿಬಿಡುತ್ತಿತ್ತು.

ಅಲ್ಲಿಗೆ ವರ್ಗಾವಣೆಯಾಗಿ ಹೋದ ಮೊದಲ ವರ್ಷ ನಮ್ಮ ಕ್ರಾಂತಿಕಾರಿ ತಂಡವನ್ನು ಪರೀಕ್ಷೆಯ invigilators ಆಗಿ ಹಾಕಲಿಲ್ಲ. ನಮ್ಮ ಪ್ರಿನ್ಸಿಪಾಲರು ನಮ್ಮೆಲ್ಲರನ್ನೂ ಕರೆದು ಕೂರಿಸಿ, `ಇಲ್ಲಿಯ ವಾತಾವರಣ ಸ್ವಲ್ಪ ಹೀಗೆ, ನೋಡಿಯೂ ನೋಡದಂತೆ ಇದ್ದು ಬಿಡಿ’ ಎಂದರು. ನಾವದಕ್ಕೆ ಒಪ್ಪುತ್ತೇವೆಯೇ? ನಾಳೆ ಅವರೆಲ್ಲರನ್ನು ಒದ್ದು ಕೂರಿಸುತ್ತೇವೆ ಎಂದು ಪ್ರಿನ್ಸಿಪಾಲರಿಗೆ ಬೆಂಬಲ ಕೊಡುವಂತೆ ಮಾತಾಡಿದೆವು. ಕೊನೆಗೆ ಒಪ್ಪಿಕೊಂಡರು. ನಿವೃತ್ತಿಯ ಅಂಚಿನಲ್ಲಿದ್ದ ಅವರಿಗೆ ನಮ್ಮ ನಡವಳಿಕೆಗಳು ಆತಂಕ ಹುಟ್ಟಿಸಿದ್ದೇ ಹೆಚ್ಚು! ಮರುದಿನ ಪರೀಕ್ಷಾ ಕೋಣೆಗೆ ಹೋಗುತ್ತಿದ್ದ ನಮ್ಮನ್ನು ನೋಡಿ ವಿದ್ಯಾರ್ಥಿಗಳೆಲ್ಲ ಜೋರಾಗಿ ಕಿರುಚಿದರು. ಯಾವ ಮೇಷ್ಟ್ರು ಬಂದರೆ ಪಾಸಾಗಿಬಿಡಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ನಮ್ಮನ್ನು ಕಂಡ ತಕ್ಷಣ ನಿರಾಸೆಯ ದನಿಯಲ್ಲಿ `ಅಯ್ಯೋ’ ಎಂದರು.

ಪರೀಕ್ಷೆ ಆರಂಭವಾಯಿತು. ಆಗೆಲ್ಲ ಇದ್ದಕ್ಕಿದ್ದಂತೆ Squad ಬಂದು ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುತ್ತಿದ್ದರಲ್ಲ! ಅವರು ಕಾರಿನಲ್ಲಿ ಬಂದ ತಕ್ಷಣ ವಿಷಯ ತಿಳಿಸುವುದಕ್ಕೆ ಒಂದು ಬಗೆಯಲ್ಲಿ ಶಿಳ್ಳೆ ಹಾಕಲು ಪ್ರತಿ ಕಾಲೇಜಿನ ಕಾಂಪೋಂಡ್ ಮೇಲೆ ಹತ್ತಾರು ಹಳೆಯ ವಿದ್ಯಾರ್ಥಿಗಳು ಕೂತಿರುತ್ತಿದ್ದರು. ನಾನು, ರೆಡ್ಡಿ, ರಾಜಶೇಖರ್ ಪಕ್ಕ ಪಕ್ಕದ ಕೋಣೆಯಲ್ಲಿ ಕಣ್ಣಿಗೆ ಕಾಣುವಂತೆಯೇ ಇದ್ದೆವು. ರೆಡ್ಡಿಯ ತರಗತಿಯಲ್ಲಿ ಯಾವನೋ ಚಾಕುವನ್ನು ಡೆಸ್ಕ್ ಗೆ ನೆಟ್ಟ. ಅದೇ ಊರಿನವರಾದ ರೆಡ್ಡಿ ಅದನ್ನು ಕಿತ್ತು ಆಚೆಗೆ ಎಸೆದರು! `ಹೊರಗೆ ಬಾ, ನೋಡ್ಕೋತೀನಿ’ ಎಂದಿದ್ದು ಕೇಳಿತು. `ನಿನ್ನನ್ನು ನೋಡ್ಕೋತೀನಿ ಬಾರಲೇ’ ಎಂದು ರೆಡ್ಡಿ ಕೂಗಿದ್ದು ಕೇಳಿಸಿತು! ಆ ಹುಡುಗ ಅರ್ಧ ಗಂಟೆಯಾದ ಮೇಲೆ ಮೇಜಿನ ಮೇಲೆ ಪೇಪರ್ ಎಸೆದು ಹೋದ.

ನನ್ನ ಕೋಣೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಮಿಸುಕಾಡಲು ಆರಂಭಿಸಿದ್ದರು. ಅಕ್ಕಪಕ್ಕ ನೋಡುತ್ತಿದ್ದರು. `ಒದ್ದು ಆಚೆಗೆ ಓಡಿಸುತ್ತೇನೆ’ ಎಂದು ಗರ್ಜಿಸಿದೆ. `ನೀವೇನು ಓಡಿಸೋದು, ನಾನೇ ಹೋಗ್ತೀನಿ’ ಎಂದು ಒಬ್ಬ ಎದ್ದು ಪೇಪರ್ ಸಮೇತ ಓಡಿದ. ನಾನು ಹೆದರಿ ಕಿರುಚಿದೆ. ಅಲ್ಲಿದ್ದ ಕೆಲಸಗಾರರು ಅವನನ್ನು ಹಿಡಿದು, ಪೇಪರ್ ತೆಗೆದುಕೊಂಡು ಬಂದರು. ಅಕಸ್ಮಾತ್ ಅವನೇನಾದರೂ ಅದನ್ನು ಮನೆಗೆ ಎತ್ತಿಕೊಂಡು ಹೋಗಿದ್ದರೆ ನಾನು ಪೊಲೀಸ್ ಸ್ಟೇಷನ್, ಕೋರ್ಟ್ ಅಂತೆಲ್ಲ ಅಲೆಯಬೇಕಾಗಿತ್ತು. ಅಷ್ಟರಲ್ಲಿ ಕಾಂಪೌಂಡ್ ಮೇಲೆ ಕೂತಿದ್ದವರು ಶಿಳ್ಳೆ ಹೊಡೆದರು. ಅದೆಲ್ಲೆಲ್ಲಿ ಪುಸ್ತಕಗಳನ್ನು, ಕಾಪಿಚೀಟಿಗಳನ್ನು ಬಚ್ಚಿಟ್ಟುಕೊಂಡಿದ್ದರೋ ಕೋಣೆಯಲ್ಲಿ, ಕಿಟಕಿಯಲ್ಲಿ ತೂರತೊಡಗಿದರು. ಒಬ್ಬ ಹುಡುಗನಂತೂ ನನ್ನ ಕೈಗೆ ಪುಸ್ತಕವನ್ನು ಹೊರಹಾಕಲು ಕೊಟ್ಟ! ಕೋಣೆಯ ತುಂಬಾ ಕಾಪಿ ಚೀಟಿಗಳು ಹಾರಾಡುತ್ತಿವೆ! ನಾನು ಹಿಡಿದು ಹೊರ ಹಾಕಲು ಶುರುಮಾಡಿದೆ. ಸ್ವಲ್ಪ ಸಭ್ಯಸ್ಥರು ಅಂದರೆ ಆ ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳೇ ಆಗಿದ್ದರು. ಪ್ರಿನ್ಸಿಪಾಲ್ ಬಹಳ ಹುಷಾರಾಗಿ ಆ ತರಗತಿಯ ಕಡೆಗೆ ಜಾಗೃತದಳದವರನ್ನು ಕರೆದೊಯ್ದರು! ಅವರು ಮರಳಿ ಬರುವುದರಲ್ಲಿ ನಾನು ಕಂತೆ ಕಂತೆ ಕಾಪಿ ಚೀಟಿಗಳನ್ನು ಆರಿಸಿ ಹೊರ ಹಾಕಿದ್ದಾಯ್ತು. ನನ್ನ ಆದರ್ಶಗಳೆಲ್ಲ ಗಾಳಿಯಲ್ಲಿ ದಿಕ್ಕಾಪಾಲಾಗಿ ಚದುರುತ್ತಿರುವುದನ್ನು ನೋಡಿ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.

ನನಗೆ ಎಷ್ಟು ಮೈ ಉರಿದುಹೋಗಿತ್ತೆಂದರೆ ಒಬ್ಬ ಹುಡುಗನನ್ನು ಪರೀಕ್ಷೆಯಲ್ಲಿ ಅಲುಗಲು ಬಿಡಲಿಲ್ಲ. ರಾಜಶೇಖರ್ ಸಹ. ರೆಡ್ಡಿಯೇನೋ ಅದೇ ಊರಿನವರಾದ್ದರಿಂದ ಒಂದು `ಹವಾ’ ಇಟ್ಟುಕೊಂಡಿದ್ದರು. ದೂರದೂರಿನಿಂದ ಬರುತ್ತಿದ್ದ ನಾವು ಅನಾಥರೇ ಆಗಿದ್ದೆವು. ಪರೀಕ್ಷೆ ಮುಗಿಸಿ ಬಸ್ ಸ್ಟಾಂಡ್ ನಲ್ಲಿ ನಿಂತಾಗ ಎಲ್ಲೆಲ್ಲಿಂದಲೋ ಕಲ್ಲುಗಳು ತೂರಿ ಬಂದವು. ನಾವು ನಮ್ಮ ಪುಸ್ತಕಗಳನ್ನು ಗುರಾಣಿಯನ್ನಾಗಿ ಮಾಡಿಕೊಂಡೆವು! ಅಷ್ಟುಹೊತ್ತಿಗೆ ಬಸ್ ಬಂದಿದ್ದರಿಂದ ಬಚಾವಾದೆವು. ಮರುದಿನ ನಾವು ನಾಲ್ವರಿಗೂ ಪರೀಕ್ಷೆಯ ಕೆಲಸದಿಂದ ಸ್ವತಃ ಪ್ರಿನ್ಸಿಪಾಲರೇ ನಿವೃತ್ತಿಗೊಳಿಸಿದ್ದರು! ಅದೇನೇ ಇರಲಿ, ಒಂದೆರಡು ವರ್ಷಗಳಲ್ಲಿ ಇಂಥದ್ದೆಲ್ಲ ನಿಂತು ಹೋಗಿದ್ದು ನಿಜ. ಅದೇ ಹುಡುಗರೇ ನಮ್ಮನ್ನು ಅದೆಷ್ಟು ಹಚ್ಚಿಕೊಂಡರೆಂದರೆ ನನಗೆ ಈಗಲೂ ಫೋನ್ ಮಾಡುತ್ತಾರೆ.

(ಈ ಚಿತ್ರದಲ್ಲಿ ನಾನು ಮೇಡಂ ತರಹ ಕಾಣಿಸ್ತಿದ್ದೀನಾ?ಈ ತರಲೆಗಳನ್ನು ಮರೆಯುವುದು ಹೇಗೆ?)

‍ಲೇಖಕರು Avadhi

31 December, 2018

1 Comment

  1. M R Kamals

    ಧನ್ಯವಾದ ಅವಧಿ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading