ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕನ ಅಂತರಂಗ ಬಹಿರಂಗ..

ರಾಜು ಅಡಕಳ್ಳಿ

ನನ್ನ ಏಕಾಂತ ಲೋಕಾಂತವಾಗಿದ್ದರ ಫಲಶ್ರುತಿಯೇ ಈ ಹಾಸಿಗೆಯ ಹಾಸ್ಯ ವಿಲಾಸ. ಈ ಕೃತಿಯಲ್ಲಿ ಲಲಿತ ಪ್ರಬಂಧಗಳಿವೆ. ಈ ಲಲಿತ ಪ್ರಬಂಧಗಳು ಸುಲಲಿತ ಪ್ರಬಂಧವಾಗಿ ಮೊದಲು ಓದುಗರ ಮನ ಮುಟ್ಟಿದರೆ, ತದನಂತರ ಆ ಲಲಿತ ಪ್ರಬಂಧವೇ ಬಲಿತ ಪ್ರಬಂಧವಾಗಿ ಓದುಗರ ಮಸ್ತಕದ ಕದ ತಟ್ಟಿದರೆ ನನ್ನ ಶ್ರಮ ಸಾರ್ಥಕ. ಕಳೆದ ವರ್ಷ ಸ್ವಪ್ನ ಬುಕ್ ಹೌಸಿನ ಶ್ರೀ ನಿತಿನ್ ಶಾ ಮತ್ತು ಶ್ರೀ ದೊಡ್ಡೇಗೌಡರು ನನ್ನ ಪದ್ಯ ಮತ್ತು ಗದ್ಯದ ಕಾಕ್ ಟೇಲಾದ ‘ಹರಟೆ ಕಷಾಯ’ ಎಂಬ ವಿಭಿನ್ನ ಪುಸ್ತಕವನ್ನು ಪ್ರಕಟಿಸಿದಾಗ ಓದುಗರಿಂದ ತುಂಬಾ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದವು.

ಈ ‘ಕಷಾಯ’ ಕುಡಿದು ಖರ್ಚಾಗುತ್ತಿದ್ದ ಹಾಗೆ, ಸ್ವಪ್ನ ಬುಕ್ ಹೌಸಿನಿಂದ ಮತ್ತೊಂದು ನಿಮ್ಮ ಕೃತಿಗೆ ಹಸ್ತಪ್ರತಿ ಕಳುಹಿಸಿಕೊಡಿ ಎಂದು ಕಾಗದ ಬಂತು. ಆಗ ನಾನು ಸ್ವಪ್ನ ದಿಂದೆದ್ದವನಂತೆ ಲಘು ಬಗೆಯಿಂದ ಏನಾದರೂ ಹೊಸದನ್ನು ಬರೆದು ಕೊಡೋಣ ಎಂದು ಹಠಕ್ಕೆ ಬಿದ್ದೆ. ಆಗ ನನ್ನ ಬರಹಕ್ಕೆ ಸಿಕ್ಕಿದವಳೇ ಈ ಲಲಿತ. ಆದರೆ ಇದು ಲಲಿತ ಸಹಸ್ರನಾಮವಲ್ಲ, ಇದು ಲಲಿತ ಪ್ರಬಂಧ. ಕಲಿತಾ ಕಲಿತಾ ಬರಿತಾ ಬರಿತಾ ಒಲಿದು ಬಂದವಳೇ ಈ ಲಲಿತ.

ಹಿಂದೆ ನಾನು ಪ್ರಜಾವಾಣಿಯಲ್ಲಿದ್ದಾಗ ಹಾಸ್ಯ ಪೂರಿತ- ತುಂಟತನದ ಮೂರನೇ ಸಂಪಾದಕೀಯವನ್ನು ಆಗಾಗ ಬರೆಯುತ್ತಿದ್ದುದುಂಟು. ಈಗಂತೂ ವಯಸ್ಸಾಗಿದೆ. ತುಂಟತನವಂತೂ ಸಾಧ್ಯವಿಲ್ಲ. ಒಂಟಿತನವಷ್ಟೇ ಅಂಟಿಕೊಂಡಿದೆ. ಆದರೆ ಬರವಣಿಗೆಯಲ್ಲಿ ತುಂಟತನವನ್ನೋ, ಕಿಲಾಡಿತನವನ್ನೋ ಮಾಡುವಷ್ಟು ನನ್ನೊಳಗಿನ ಲೇಖಕ ಇನ್ನೂ ಯಂಗ್ ಆಗಿದ್ದಾನೆ. ಬದುಕನ್ನು ನಾವು ಗಂಭೀರವಾಗಿ ಅನುಭವಿಸುವುದು ಅನಿವಾರ್ಯವಾಗುತ್ತಿರುವ ಈ ದಿನಗಳಲ್ಲಿ, ಒಂದಷ್ಟು ಚೋದ್ಯ, ಚಿವುಟು, ಹುಸಿಕೋಪ, ನಗೆಯನ್ನು ಮರೆಯುತ್ತಾ ಬರಡಾಗುವ ಬದಲು, ಹಾಸ್ಯ ಲಾಸ್ಯಗಳ ಬಾಟಲಿಗಳ ಬಿರಡೆಯಾದರೆ ಅರ್ಥಪೂರ್ಣವಲ್ಲವೇ…

ಇನ್ನು ಹಾಸ್ಯ ಅಪಹಾಸ್ಯಗಳಲ್ಲಿ ನಾನು ಹಾಸ್ಯದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ವೆಜ್ ಮತ್ತು ನಾನ್ ವೆಜ್ ತಮಾಷೆಗಳ ಪೈಕಿ ವೆಜ್ ತಮಾಷೆಗಳನ್ನೇ ಎತ್ತಿ ಕೊಂಡಿದ್ದೇನೆ. ಹೀಗಾಗಿ ಮನೆ ಮಂದಿಯೆಲ್ಲ ಧೈರ್ಯವಾಗಿ ಈ ಪುಸ್ತಕವನ್ನು ಯಾವುದೇ ಮುಜುಗರವಿಲ್ಲದೆ ಓದಬಹುದು ಎಂಬ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಹಿರಿಯ ಓದುಗರಿಂದ ಸಿಕ್ಕಿದೆ. ನಗುವನ್ನು ಅಂಗಡಿಯಲ್ಲಿ ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಫ್ಯಾಕ್ಟರಿಯಲ್ಲಿ ಇದನ್ನು ತಯಾರಿಸುವುದಕ್ಕೂ ಆಗುವುದಿಲ್ಲ. ಆದರೆ ಪುಸ್ತಕಕ್ಕೆ ನಗಿಸುವ ಶಕ್ತಿ ಇದೆ.

ಆ ಶಕ್ತಿ ಇಲ್ಲಿ ಬಳಕೆಯಾಗಲಿ ಎಂಬುದು ನನ್ನ ಹಾರೈಕೆ. ನಮ್ಮಲ್ಲಿ ನಗು ಇರುವಷ್ಟು ಹೊತ್ತು, ನಾವು ಮಗುವಂತೆ ಇರುವುದಕ್ಕೆ ಸಾಧ್ಯ ಅಲ್ಲವೇ ? ನನ್ನ ಧನ್ಯವಾದಗಳು ಇವರೆಲ್ಲರಿಗೂ ಸಲ್ಲುತ್ತವೆ…

* ಸ್ವಪ್ನ ಬುಕ್ ಹೌಸ್ ಬಳಗ, ಶ್ರೀ ನಿತಿನ್ ಶಾ ಮತ್ತು ಶ್ರೀ ದೊಡ್ಡೇಗೌಡರಿಗೆ.

* ನನ್ನ ಬರಹಗಳಿಗೆ ಸದಾ ರೇಖಾಚಿತ್ರಗಳ ಬಲ ನೀಡುತ್ತಿರುವ ಕಲಾವಿದ ಶ್ರೀ ಸತೀಶ್ ಯಲ್ಲಾಪುರ ಅವರಿಗೆ.

* ಪತ್ರಿಕೋದ್ಯಮದಿಂದ ಪುಸ್ತಕೋದ್ಯಮದವರೆಗೆ ನನಗೆ ಹಲವು ಹಂತಗಳಲ್ಲಿ ಪ್ರೋತ್ಸಾಹ ನೀಡುತ್ತಿರುವ ಅಣ್ಣ ಶ್ರೀ ವಿಶ್ವೇಶ್ವರ ಭಟ್ ಅವರಿಗೆ…

* ನನ್ನ ನಗೆನಗೆ ಲೇಖನಗಳನ್ನು, ಬಗೆಬಗೆ ಬರಹಗಳನ್ನು ಆಗಾಗ ಪ್ರಕಟಿಸುತ್ತಿರುವ ವಿಶ್ವವಾಣಿ, ಲೋಕ ಧ್ವನಿ, ಕನ್ನಡಪ್ರಭ, ಹಾಯ್ ಬೆಂಗಳೂರು ಪತ್ರಿಕೆಗಳಿಗೆ…

* ನನ್ನ ವ್ಯಂಗ್ಯಚಿತ್ರ ಬಿಡಿಸಿಕೊಟ್ಟ ಕಲಾವಿದ ಪ್ರಜ್ವಲ್ ಹೆಗಡೆಗೆ.

* ಪುಸ್ತಕದ ವಿನ್ಯಾಸಕಾರರಿಗೆ…

* ಮುದ್ರಣ ಕಾರ್ಯ ನಿರ್ವಹಿಸಿದವರಿಗೆ…

* ನನ್ನ ನಿತ್ಯದ ಕೆಲಸಗಳನ್ನು ತಾವೇ ನಿಭಾಯಿಸುತ್ತಾ, ನನ್ನನ್ನು ಪೂರ್ಣಾವಧಿ ಬರಹಗಾರನನ್ನಾಗಿ ಮಾಡಿದ ಮಗ ನಂದನ್ ಹೆಗಡೆ ಮತ್ತು ಸೊಸೆ ನಾಗಶ್ರೀ ಅವರಿಗೆ..

* ಪ್ರೀತಿಯಿಂದ ಓದುತ್ತಿರುವ ನಿಮಗೆ…

‍ಲೇಖಕರು Admin

1 January, 2026

2 Comments

  1. ಐನಂಡ ಪ್ರಭುಕುಮಾರ್

    “ಹಾಸಿಗೆಯ ಹಾಸ್ಯ ವಿಲಾಸ” ಬರೆಹದಲ್ಲಿ ʼವೆಜ್ ಮತ್ತು ನಾನ್ ವೆಜ್ ತಮಾಷೆಗಳ ಪೈಕಿ ವೆಜ್ ತಮಾಷೆಗಳನ್ನೇ ಎತ್ತಿ ಕೊಂಡಿದ್ದೇನೆ. ಹೀಗಾಗಿ ಮನೆ ಮಂದಿಯೆಲ್ಲ ಧೈರ್ಯವಾಗಿ ಈ ಪುಸ್ತಕವನ್ನು ಯಾವುದೇ ಮುಜುಗರವಿಲ್ಲದೆ ಓದಬಹುದು.ʼ ಅಂತಿದೆ.

    ವೆಜ್‌, ನಾನ್‌ ವೆಜ್‌ ಅನ್ನುವದು ಊಟ-ತಿಂಡಿಗೆ ಮಾತ್ರವೇ ಅನ್ವಯವಾಗುವದೆಂದು ನನ್ನ ಅಭಿಪ್ರಾಯ.

    ಬರೆಹಗಳಿಗೆ ಅನ್ವಯಿಸಿದೆ ಎಂದಾದರೆ, ʼನಾನ್‌ ವೆಜ್‌ʼ ಬರೆಹಗಳು ಮನೆ ಮಂದಿಯೆಲ್ಲ ಧೈರ್ಯವಾಗಿ ಯಾವುದೇ ಮುಜುಗರವಿಲ್ಲದೆ ಓದಲಾಗದ ಬರೆಹಗಳೇ? ಅಂದರೇ, ನಾನ್‌ ವೆಜ್‌ ಯಾವ ರೂಪದಲ್ಲೂ ಮನೆಯೊಳಗಿರತಕ್ಕದಲ್ಲ ಅಂತ ಹೇಳಿದಂತಾಯಿತು. ಬಹುಶಃ ʼನಾನ್‌ ವೆಜ್‌ʼ ಬರೆಹಗಳು ಪೋಲಿ ಬರೆಹಗಳು ಎನ್ನುವ ಅಭಿಪ್ರಾಯವೇ? ಇದು ಸರಿಯಲ್ಲ. ವೆಜ್‌ ಮತ್ತು ನಾನ್‌ ವೆಜ್‌ ಪ್ರಯೋಗ ಊಟ-ತಿಂಡಿಗಳಿಗೆ ಮಾತ್ರವಿದ್ದರೆ ಚೆನ್ನು.

    • Name * ರಾಜು ಅಡಕಳ್ಳಿ

      ವೆಜ್ ಅಂದರೆ ಸರಳ ಆಹಾರ,
      ನಾನ್ ವೆಜ್ ಎಂದರೆ – ಮಸಾಲೆಯುಕ್ತ ಲಗ್ಜುರಿ ಆಹಾರ ಎಂಬ ಪರಿಭಾಷೆಯಲ್ಲಿ ಇದನ್ನು ಬರೆದಿದ್ದಷ್ಟೇ.
      ಇಲ್ಲಿ ಮಡಿವಂತಿಕೆ ಏನೂ ಇಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading