ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -2

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

9.2

ಬಂದೆನಲ್ಲ ನಾನು ಓಹೋ OMHಗೆ

ಅಂತೂ ಇಂತೂ ಬೆಳಕು ಬರುವುದನ್ನು ಕಾಯುತ್ತಾ ಇರುಳ ಹಾದಿ ಸವೆಸುತ್ತಾ ಬೇಂದ್ರೆಯ ಈ ಕವಿತೆಯ ಸಾಲುಗಳು ತೆರೆ ತೆರೆಯಾಗಿ ಮನಃಪಟಲದಲ್ಲಿ ಮೂಡಿತು.

`ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯಿತಣ್ಣ

ನಕ್ಷತ್ರ ಜಾರಿ ತಮವೆಲ್ಲ ಸೋರಿ ಮಿಗಿಲಹುದು ಬಾನ ಬಣ್ಣ…’

ನಕ್ಷತ್ರಗಳು ಜಾರುವ ಮುಗಿಲಿಗೆ ಬಣ್ಣ ಏರುವ ಮೊದಲೆ, ನಮಗೆ ಹಕ್ಕಿ ಮಾರ್ಗದರ್ಶಿ ಹೇಳಿದ್ದ ಟೈಂಗೆ ಅಲ್ಲಿಗೆ ಹೋಗೋಕೆ Ready ಆದೆವು. ಸ್ವೆಟರ್ ಮೇಲೊಂದು ಶಾಲೂ ಹೊದ್ದು ಮಬ್ಬು ಬೆಳಕಿನಲ್ಲಿ ನಾವಿದ್ದ ತಾಣದಿಂದ ನಡೆದು ಮಾರ್ಗದರ್ಶಿ ಇದ್ದ ತಾಣಕ್ಕೆ ಅಂಜುತ್ತಾ ಅಳುಕುತ್ತಾ ತೆವಳುತ್ತಾ ತೆರಳಿದೆವು. ನಮ್ಮ ಮುಖವೇ ನಮಗೆ ಸ್ಪಷ್ಟವಾಗಿ ಕಾಣದ ಈ ಮಬ್ಬಿನಲ್ಲಿ ಯಾವ ಹಕ್ಕಿ ಕಂಡಾವೋ ಕಾಣೆ ಎಂಬ ಅನುಮಾನದ ಬಿರುಗಾಳಿ ಬೀಸಿ ಬೀಸಿ ಹೊಡೆಯುತ್ತಿತ್ತು. ಅವನು ಬ್ಲ್ಯಾಕ್‌ ಟೀ ಕುಡಿದು ಹೋಗೋಣ ಎಂದದ್ದರಿಂದ ಅದನ್ನು ಕುಡಿಯುವವರು ಕುಡಿದ ಬಳಿಕ ಎದ್ದೆವು. ಮತ್ತೆ ನಡಿಗೆ, ಕೆಲವು ದಾರಿಗಳಲ್ಲಿ ಕರೆದೊಯ್ದ. ನಾವೂ ಸದ್ದಿಲ್ಲದೆ ಆ ಸದ್ದಿರದ ಪಸುರುಡೆಯ ಕಾನನದ ನಡುವೆ ನಡೆದೇ ಹೋದೆವು. spotting scope ಬೆನ್ನಿನ ಮೇಲೇರಿಸಿಕೊಂಡು ಕೈಯಲ್ಲಿ Binocular ಹಿಡಿದು, ಜೋಳಿಗೆಯಲ್ಲಿ ಹಕ್ಕಿಬುಕ್ಕು ಹಿಡಿದು ಸನ್ನದ್ಧನಾಗಿ ಕೊಲಂಬಸ್, ವಾಸ್ಕೋಡಿಗಾಮರಂತೆ ಕಾಣುತ್ತಿದ್ದ. ಉತ್ತರ ಭಾರತೀಯನಾದ ಅವನೊಡನೆ ವಿಹಗ ವಿಹಾರನ್ವೇಷಣೆ ಮಾಡಲು ಕಾಲುನಡಿಗೆಯಲ್ಲಿ ಕತ್ತಲಲ್ಲಿ ಅವನು ಒಯ್ದೆಡೆಗೆ ಹೋದೆವು. ಆಕಳಿಸುತ್ತಾ ಮೈಮುರಿದ ಸೂರಪ್ಪ `ಜೇನ್ನೊಣದ ಎದೆಗೆ ಹೂಬಾಣ ಹೂಡಿ ಜುಮ್ಮೆಂದು ಬಿಟ್ಟ ಬಾಣ ಗುಡಿ ಗೋಪುರಕ್ಕು ಬಲೆ ಬೀಸಿ ಬಂದ ಅಗೋ ಬೆಳಕು ಬೇಟೆಗಾರ’ ಆಗಿ ಬಂದ. ಕಂಡ ಹಕ್ಕಿಗಳನ್ನು ಗೈಡ್ ತನ್ನ ಉಪಕರಣದಲ್ಲಿ ತೋರಿಸುತ್ತಾ ಬೆರಗು ಹುಟ್ಟಿಸಿದ. ಆ ಗಳಿಗೆಗೆ Spotting Scope ಕೊಳ್ಬೇಕು ಅನ್ನಿಸೋ ಆಸೆ ಹುಟ್ಟಿಯೇಬಿಟ್ಟಿತು. ಅದರಲ್ಲಿ ನಮ್ಮ ಕಣ್ಣಿಗೆ ಕಂಡ ಹಕ್ಕಿಗಳು ಕಣ್ಸೆರೆಯಾದವು ಅಷ್ಟೆ. ನೋಡುತ್ತಾ ನೋಡುತ್ತಾ ಮೈಲಿಗಟ್ಟಲೆ ನಡೆಯುತ್ತಾ, ಸುಯ್ಯುತ್ತಾ ಹೋದೆ, ಕಾಲುನೋವಿಗೆ. ಸೂರಕ್ಕಿ, Bee eater, Horn bill, ಬುಲ್ ಬುಲ್, ಗಿಳಿ, ಕುಟ್ರ, ಕಾಜಾಣಗಳು ನೋಟಕ್ಕೆ ದಕ್ಕಿದವು.  Sprangled tailed drongo, White bellied shama, Malbar Parakeet ಇತ್ಯಾದಿ ಪೊದೆಗಳಲ್ಲಿ, ಎತ್ತರದ ಮರಗಳಲ್ಲಿ ಕಂಡವು ಅಷ್ಟೆ. ಕೆಂಪುತಲೆಯ ಕಪ್ಪು ಮರಕುಟುಕನನ್ನು ಹುಡುಕಿ ಅತ್ತಿತ್ತ ಅಲೆದೆ. ಅದೂ ಅತ್ತಿತ್ತ ಹಾರಾಡಿ ಆಟವಾಡಿಸಿ ಕೊನೆಗೂ ಹೇಗೋ ಸೆರೆಯಾಯಿತು. ಬಾಳೆಯ ಮೋತೆಯ ಬಳಿ speed ಆಗಿ ಹಾರಾಡುತ್ತಿದ್ದ spider hunter Shake Shaky ಚಿತ್ರವಾಯಿತು. Malbar Giant Squirrel ನೀವು ಹಕ್ಕಿ ನೋಡೋಕೆ ತಾನೇ ಹೋಗ್ತಾ ಇರೋದು ಹೋಗಿ ಹೋಗಿ ಎಂದು ತನ್ನಷ್ಟಕ್ಕೆ ಮೋರೆದಿರುವಿ ಮರೆಯಾಯಿತು. ಕಾಳಿ ನದಿಯ ಸೇತುವೆ ಬಳಿ ಕಳಿಂಗ ಕಾಣಿಸಿದರೂ ನಾವು ಉಸಿರುಗರೆದೆವು. 

ಬರ್ಡ್ ಗೈಡಿನ ಗೈಡಿಂಗ್ ಸಮಯ ಖತಂ. ಅವನು ಮರಳಲು ಸಿದ್ಧನಾದ. ಆದರೆ ನಮ್ಮ ಕಥೆ ಗತಿ ಏನು? ಎಲ್ಲಿಗೆ ಹೋಗಬೇಕೆಂದು ತಿಳಿಯದಂತಹ ಮೂಢಾತ್ಮರಾಗಿದ್ದೆವು. ಕಿಂದರಜೋಗಿಯ ಹಿಂದೆ ಹೋದಂತೆ ಅವನ ಹಿಂದೆ ನಡೆಯುತ್ತಾ ನಡೆಯುತ್ತಾ ಕಾಳಿ ಅಣೆಕಟ್ಟೆಯ ಸಮೀಪದವರೆಗೂ ಹೋಗಿ ಹೈರಾಣಾಗಿದ್ದೆವು. ಮರಳಿ ಬರುವ ಸ್ಥಿತಿಯಲ್ಲಿರದ ಅವಸ್ಥೆ ಕಂಡ ಆತನೇ ಫೋನ್ ಮಾಡಿ ಜೀಪ್ ತರಿಸಿ ಮರಳಿ ಬಿಡಾರಕ್ಕೆ ಬಿಟ್ಟ. ಮತ್ತಲ್ಲೆ ಊಟ, ಕೂತಲ್ಲೇ ತೂಕಡಿಕೆ ಇರುಳು ಸಾಲದ ನಿದ್ದೆಗೆ. ಮತ್ತೊಮ್ಮೆ ಪ್ರವೀಣನೊಡನೆ ಬಿಸಿಬಿಸಿ ವಾದ ನಡೆದ ಬಳಿಕ `ರೆಡಿಯಾಗಿರಿ ಎರಡು ಗಂಟೆ ವೇಳೆಗೆ, ನಿಮ್ಮನ್ನು Old Magazine Houseಗೆ ಬಿಡುತ್ತಾರೆ, ಸಂಜೆಗೆ ನಾವೇ ಬರ್ತೀವಿ’ ಎಂದು ಸಾಂತ್ವನಿಸಿದ. ಆಹಾ! ಕನಸೂ ನನಸಾಗುವ ಸಮಯ. 

ಕಾಳಿ ನದಿಯ ದಂಡೆಯಲ್ಲಿ ಮಧ್ಯಾಹ್ನದ ಗಣೇಶಗುಡಿಯ ಕನಸಿಗೆ ಕಾವು ಕೊಡುತ್ತಾ ಕಾಯುತ್ತಾ ಕೂತೆ.  ನದಿ ದಂಡೆಯಲ್ಲಿ ಕಾಯುವುದು ಕಾವು ತರುವಂತದ್ದಲ್ಲ. ಬದಲಾಗಿ ತಂಪೀಯುವಂತದ್ದು.  ಅಷ್ಟರಲ್ಲಿ ನಮ್ಮ ಹಿಂದಿನ ದಿನದ ಭಯಕ್ಕೆ ಧೈರ್ಯ ತುಂಬಿದ್ದ ಮೈಸೂರಿನ ರಂಗನಾಥಗೌಡ-ಸವಿತಾ ಪಕ್ಷಿ-ಪ್ರಾಣಿ ಪ್ರಿಯ ದಂಪತಿಗಳು ತಮ್ಮಿಬ್ಬರು ಮಕ್ಕಳೊಡನೆ ಮರುಪಯಣಕ್ಕೆ ಸಿದ್ಧರಾಗಿ ಟಾಟಾ-ಬರ್ಲಾ ಎಂದರು. ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಪ್ರತಿ ವರ್ಷವೂ ಇಂತಹ ಅಲೆದಾಟದ ಯೋಜನೆಯಲ್ಲಿ ಸಂಭ್ರಮಿಸುವ ಅವರಿಗೆ ಬೈ ಬೈ ಹೇಳಿ ಬೀಳ್ಕೊಟ್ಟೆವು, ನಾಲ್ಕಾರು ಪಟ ಹಿಡಿದ ಬಳಿಕ. ನಂತರ ಅವರ ಇಬ್ಬರೂ ಮಕ್ಕಳೂ ಹಿಂದಿನ ದಿನ ರಾತ್ರಿ ಸ್ಟೇ ಮಾಡಿದ್ದ ಗುಡಾರದ ಬಿಡಾರಕ್ಕೆ ಹೋಗಿ ನೋಡಿದೆವು. ಒಳಗೂ ಹೋಗಿ ಅಲ್ಲಿದ್ದ ಬೆಡ್ ಗಳ ಮೇಲೆ ಕುಳಿತು ಸೆಲ್ಫಿ ತೆಗೆದು ನಾವೂ ಈ ರಾತ್ರಿ ಇದರಲ್ಲಿ ಉಳಿಯೋಣ ಎಂದು ಮಾತಾಡಿಕೊಂಡೆವು. ಆದರೆ ರಾತ್ರಿಯಾಗುವಷ್ಟರಲ್ಲಿ ಬಿಡಾರದಲ್ಲಿ ಬಿಡದಿ ಬಿಡುವ ನಮ್ಮ ನಿರ್ಧಾರ ಕರಗಿ ಆವಿಯಾಗಿ ರಾತ್ರಿ ರೂಮಿನಾಚೆಗೂ ಹೋಗುವ ಧೈರ್ಯ ಸಾಲದೆ ಕೊಠಡಿಯಲ್ಲೇ ಕಟ್ಟಿಹಾಕಿಕೊಂಡೆವು. 

ಮಧ್ಯಾಹ್ನ ಗಾಡಿ ಬರುವವರೆಗೂ ಸುತ್ತ ಮುತ್ತಾ ಕಣ್ಣೋಟಕ್ಕೆ ನಿಲುಕುವ ಹಕ್ಕಿಗಳಿಗಾಗಿ ಅರಸಿದೆ. ಆಕಾಶದೆತ್ತರದ ಮರದ ಸಂಧಿಗೊಂದುಗಳಲ್ಲಿ ಕಂಡ ಚಿತ್ರಪಕ್ಷಿಯ ಜೋಡಿ ಕುತೂಹಲ ಕೆರಳಿಸಿದವು, ತಮ್ಮ ಬಣ್ಣಗಳಿಂದಾಗಿ. ಹೆಣ್ಣು ಚಿತ್ರಪಕ್ಷಿ ಹಳದಿ ಬಣ್ಣದಲ್ಲಿದ್ದರೆ, ಗಂಡಿನ ಬಣ್ಣ ಕಡುಕಿತ್ತಳೆ. ಹಾಗಾಗಿ ಒಂದು ಬಣ್ಣದ್ದು ಕಾಣಸಿಕ್ಕರೆ ಇನ್ನೊಂದು ಬಣ್ಣದ್ದು ಅಲ್ಲೇ ಇರುತ್ತದೆನ್ನುವುದು ಗ್ಯಾರಂಟಿ. ಅಲ್ಲಿಯೇ ಮರದ ರೆಂಬೆ-ಕೊಂಬೆಗಳ ಮೇಲೆ ನೇರಳೆ ಬಣ್ಣದ ಮರಗುಬ್ಬಿ (Velvet Fronted nut hatch) ಕೀಟಗಳಿಗಾಗಿ ಸರ್ಕೀಟ್ ಹೊಡೆಯುತ್ತಿತ್ತು. ತಲೆ ಎತ್ತಿದರೆ ಮರದ ಮೇಲಿದ್ದ Malbar Hornbill ಸವಾಲು ಹಾಕಿತು,  ನಾನಿಲ್ಲಿದ್ದೇನೆ ನೀವು Old magazine houseಗೆ ಹೋಗ್ತೀರಾ ಎಂದು. ಅದರ ಮಾತು ಕಿವಿಗೆ ಬಿದ್ದರೂ ಗಣೇಶಗುಡಿಯ ಹಕ್ಕಿಗಳಿಗಾಗಿಯೇ ಬಂದ ನಾವು `ನಿನ್ನನ್ನೂ ಮರೆಯುವುದಿಲ್ಲವಪ್ಪ’ ಎಂದು ಸಾಂತ್ವನಗೈದು ಸಿದ್ಧವಾದೆವು ಮುಂದಿನ ಮಾಂತ್ರಿಕ ಲೋಕದ ಪಯಣಕ್ಕೆ. ಜೀಪೂ ಬಂದಿತು, ನಾವೂ ಹೊರಟೆವು. ಸೇರಬೇಕಾಗಿದ್ದ ನೆಲೆಗೆ ಅವರು ಸೇರಿಸಿ ಹೋದರು. ನಾನೂ ಮೈಯೆಲ್ಲಾ ಕಣ್ಣಾಗಿ ಹಕ್ಕಿಯನ್ನು ಅರಸುತ್ತಾ ಒಳಗೆ ಬಂದೆ.

ನಾನು ಅಲ್ಲಿಯ ಬಗ್ಗೆ ಕಟ್ಟಿಕೊಂಡಿದ್ದ ಚಿತ್ರ ಬೇರೆಯಾಗಿತ್ತು. ಕಣ್ಣಿನ ಸುತ್ತಳತೆಯಲ್ಲೆಲ್ಲಾ ಹಕ್ಕಿಗಳು ಕಾಣಸಿಗುತ್ತವೆ ಅಂದುಕೊಂಡಿದ್ದೆ. ಆದರೆ ಅಲ್ಲಿದ್ದ ಹಸಿರು ಪರದೆಯ ಹಿಂದೆ ನಾವು ಕಾಯಬೇಕೆಂದು ಅತ್ತ ಬದಿಯಲ್ಲಿ ಅವುಗಳ ಸಮಯಕ್ಕೆ ಹಕ್ಕಿ ಬರುತ್ತವೆಂದು ಸೂಚನೆ ನೀಡಿದರು. ನಿಧನಿಧಾನವಾಗಿ ಹಸಿರು ಪರದೆಯ ಬಳಿಗೆ ಬಂದೆ. ಬಂದು ನೋಡುತ್ತೇನೆ, ಹೊರಲು ಒಬ್ಬರ Assistance ಬೇಕು ಅನ್ನಿಸುವಷ್ಟು ಬೃಹತ್ Lensಗಳ ಸರದಾರರು Tripod ಮೇಲೆ ತಮ್ಮ High end Cameraಗಳನ್ನು ಸಜ್ಜುಗೊಳಿಸಿ ದೇಶದ ಗಡಿಗಳಲ್ಲಿ ಹತ್ಯಾರಗಳಿಂದ ಸಜ್ಜುಗೊಳಿಸಿಕೊಂಡ ಸೈನಿಕರಂತೆ camouflage ಅಥವಾ ಹಸಿರು ಬಟ್ಟೆಗಳಲ್ಲಿ `ನಾಮೆಲ್ಲಂ ಒಂದೆ ಗರಡಿಯೊಳ್ ಓದಿದ ಮಾನಸರೆವು’ ಎನ್ನುವ `ಸಮಾನ ಶೀಲೇಶು ವ್ಯಸನೇಶು ಸಖ್ಯಂ’ ಎಂಬಂತೆ ಸಮಾನ ಪಕ್ಷಿಚಿತ್ರ ವ್ಯಸನಶೀಲರಾದ ಹದಿನೈದು-ಇಪ್ಪತ್ತು ಗರಡಿಯಾಳ್ ಶಿಸ್ತಾಗಿ ಮೊದಲೇ ನಿಂತುಬಿಟ್ಟಿದ್ದಾರೆ. ಅವರಲ್ಲೊಬ್ಬರು ಇಳಿವಯಸಿನ ಬಿಳಿಗಡ್ಡದ ಋಷಿಯಂತೆ ಕಾಣುತ್ತಿದ್ದ ಬಿಹಾರದ ಪಾಟ್ನಾ ವಿ.ವಿ.ಯ ನಿವೃತ್ತ ಮನಶ್ಯಾಸ್ತ್ರ ಪ್ರಾಧ್ಯಾಪಕರು. ಅವರು ತಾವು ತೆಗೆದ ಹಕ್ಕಿಗಳಲ್ಲಿ ಕೆಲವನ್ನು ಲೋಹವಾಗಿಸಿ ಹಾಕಿಕೊಂಡರೇನೋ ಎಂಬಂತೆ ಹಕ್ಕಿಗಳ ಬಿಲ್ಲೆಗಳನ್ನು ತಮ್ಮ ಹ್ಯಾಟಲ್ಲಿ ಹಾಕಿಕೊಂಡಿದ್ದರು. ಅವರ ಮಡದಿ ನಿವೃತ್ತ IAS ಅಧಿಕಾರಿ ಬೈನಾಕ್ಯುಲರ್ ಹಿಡಿದು ನನಗೆ ಹಕ್ಕಿಗಳನ್ನು ನೋಡುವುದರಲ್ಲೇ ತುಂಬಾ ಖುಷಿ, ಗಂಡನಿಗೆ ಹೀಗೆ ಕಂಪನಿ ಕೊಡ್ತೇನೆಂದು ಬರಿಗಣ್ಣಿಗೆ ಕಾಣಿಸುವ ಹಕ್ಕಿಗಳನ್ನು ಬೈನ್ಯಾಕ್ಯುಲರಿನಿಂದ ನೋಡುತ್ತಿದ್ದರು. ಆ ನಿವೃತ್ತ ಪ್ರಾಧ್ಯಾಪಕರು ಅಲ್ಲಿದ್ದ ಮಗುವಿಗೆ ತಮ್ಮ ಹ್ಯಾಟಿನಲ್ಲೊಂದು ಬಿಲ್ಲೆಯನ್ನು ಬಿಚ್ಚಿಕೊಟ್ಟಾಗ ನಾನೂ ಆಸೆಗಣ್ಣಿಂದ ನೋಡುತ್ತಿದ್ದೆ, ನಾನು ಕೇಳಲಿಲ್ಲ, ಅವರೂ ಕೊಡಲಿಲ್ಲ.

Old Magazine House ಎಂದರೆ ಹಕ್ಕಿಗಳ ಚಲನಶೀಲ ಲೋಕ. ಬೆಳಿಗ್ಗೆ ಮಂದವಾಗಿರುವ ಹಕ್ಕಿಗಳ ಸಂಚಾರ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಏರುಗತಿಗೆ ಸಾಗಿ ಐದು-ಐದೂವರೆಯ ಹೊತ್ತಿಗೆ ಮಿಂಚಿನಂತೆ ಬರುವ-ಹಾರುವ ಕ್ರಿಯೆ ತೀವ್ರವಾಗುತ್ತಾ ನಿಧಾನವಾಗಿ ತಟಸ್ಥವಾಗುತ್ತದೆ. ಹಕ್ಕಿಗಳ ಆಗಮನಕ್ಕೆ ತಕ್ಕಂತೆ ಅಂಗಳದಲ್ಲಿ ಸಂಚಲನ, ಸಂವಹನ ಇರುತ್ತಿತ್ತು. ಇದ್ದವರ ಮೌನ ಮತ್ತು ಮಾತುಗಳ ನಡುವೆ ತಗುಲಿಸಿದ್ದ ಸೈಲೆನ್ಸ್ ಬೋರ್ಡ್ ನಾನು ಏನು ಮಾಡಲಿ ಎಂದು ಮಿಕಮಿಕ ನೋಡುತ್ತಿತ್ತು.

ಅತ್ತಿಂದ ಇತ್ತಿಂದ, ಎತ್ತೆಂತಲಿಂದ ಹಕ್ಕಿಗಳು ಹಾರಿ ಬರುತ್ತಿದ್ದವು. ಸುಯ್ಯೆಂದು ಬರುತ್ತಿದ್ದವನ್ನು ಕ್ಷಣಾರ್ಧದಲ್ಲಿ ಸೆರೆ ಹಿಡಿಯಬೇಕಿತ್ತು. ಹಕ್ಕಿ ಛಾಯಾಗ್ರಹಣದಲ್ಲಿ ಅಂಬೆಗಾಲಿಡುತ್ತಿದ್ದ ನಾನು ಅಳುಕು ಹೆಜ್ಜೆಗಳಲ್ಲಿ ನಡುಗುವ ಕೈಗಳಲ್ಲಿ ನನ್ನ Canon 5D Mark III, Canon 100 – 400 Lens ಹಾಕಿದ ಕ್ಯಾಮೆರಾ ಹಿಡಿದೆ. ಅಲ್ಲಿದ್ದ ಘಟಾನುಘಟಿಗಳ ಸಂಧಿಗಳಲ್ಲಿ ಒಮ್ಮೆ ಅತ್ತ, ಇನ್ನೊಮ್ಮೆ ಇತ್ತ ತೂರಿಕೊಳ್ಳುತ್ತಾ ಚಿತ್ರ ತೆಗೆಯಲಾರಂಭಿಸಿದೆ. ತೆಗೆದ ಚಿತ್ರ ಹೇಗೆ ಬಂದವೋ ಬಿಟ್ಟವೋ ಮುಖ್ಯವಲ್ಲ, ಕ್ಲಿಕ್ ಕ್ಲಿಕ್ ಅನ್ನೋದು ಮುಖ್ಯವಾಗಿತ್ತು. ಯೋಚನೆ ಮಾಡೋಕೂ ಟೈಂ ಇರಲಿಲ್ಲ. ಎಷ್ಟಾದರೂ ಅಳಿಯನ ಕುರುಡು ಬೆಳಗಾದ ಮೇಲೆ ತಾನೇ ಅರಿವಾಗುವುದು. ಈ ಸಲ ಸರಿಯಾಗಿ ಬರದೇ ಇದ್ದರೆ, ಮುಂದೆ ಇನ್ನೊಂದು ಸಲ ಬಂದರಾಯ್ತೆಂಬ ಧೈರ್ಯ ಜೊತೆಗಿತ್ತು.

ನಾನು ಹಿಂದೆ ನೋಡಿಯೂ ಇರದಿದ್ದ ಕೆಲವು ಹಕ್ಕಿಗಳು ಹಾರಿ-ತೂರಿ ಪುಳಕ ಹುಟ್ಟಿಸಿದವು. Black-naped Monarch (ಕಪ್ಪು ಹಿಂಗತ್ತಿನ ರಾಜಹಕ್ಕಿ) ಬಂದಾಗ ಗುಬ್ಬಿಗಿಂತ ಸಣ್ಣದಾದ ಅದರ ನೀಲಿಬಣ್ಣದ ಅದರ ನೆತ್ತಿಯ ಮೇಲೆ ಕಪ್ಪು ಮಚ್ಚೆ. ವಾಹ್  ಸೃಷ್ಟಿ ನಾ ಸೋತೆ, ನಾ ಸೋತೆ, ನಿನ್ನ ಚೆಲುವಿಗೆ. ಆ ನೀಲಿ, ಆ ಕಪ್ಪು ಜುಟ್ಟು. ಪರಮಾಕರ್ಷಣೆಯ ಸೆಲೆಯಾದ ಈ ಪುಟ್ಟ ಹಕ್ಕಿ ಪೊದೆಯ ನಡುವಿಂದ ಹಾರಿ ಬಂದ High Speedನಲ್ಲಿಯೇ OMHನ Trade Mark ಆದ Perch ಮೇಲೆ ಕೂತಾಗ ಅದಕ್ಕೆ Camera Focus ಮಾಡೋವಷ್ಟರಲ್ಲಿ ಕೆಳಗಿದ್ದ ನೀರಿನಲ್ಲಿ ಮುಳುಗೆದ್ದು ಪೊದೆಯೊಳಗೆ ಮರೆಯಾಗುತ್ತಿತ್ತು.  ಅಷ್ಟೂ ಪಕ್ಷಿಪ್ರಿಯರು ಮೈಯಲ್ಲಿ ಮಿಂಚು ಸಂಚಾರವಾದಂತೆ ಉಸಿರು ಬಿಗಿಹಿಡಿದು ಸೆರೆ ಹಿಡಿಯುತ್ತಿದ್ದರು. ಕಪ್ಪು ಜುಟ್ಟು ಇಲ್ಲದ ಹೆಣ್ಣೂ ಆಗಾಗ ದರ್ಶನ ನೀಡುತ್ತಿತ್ತು. ಈ ನಡುವೆ ಕರಿತಲೆ ಹರಟೆಮಲ್ಲ (Dark-fronted babbler) ಹಾರಿ ಬಂದಿತು. ಬೇರೆ ಬೇರೆ Babbler (ಹರಟೆಮಲ್ಲ)ಗಳನ್ನು ನೋಡಿದ್ದೆ, ಆದರೆ ಇವ ಹೊಸಬ. ಜೋಡಿಯಾಗಿ ಬಂದ ಈ ಹಕ್ಕಿಗಳಲ್ಲಿ ಒಂದು ಕ್ಷಣಕಾಲ ಇದ್ದು ಹಾರಿತು.  ಇನ್ನೊಂದು ಅತ್ತ, ಇತ್ತ ಕೂತು-ತಿರುಗಿ ನೋಡಿ ಕೆಳಗಿದ್ದ ನೀರಿಗಿಳಿಯಿತು. ನೀರಿನಲ್ಲಿ ನಲಿಯಲು ರೆಕ್ಕೆ ಬಿರಿದಿತು. ಯಾಕೋ ಕ್ಲಿಕ್ ಮಾಡುವ ಬದಲು ಆ ನೀರಾಟ ನೋಡುತ್ತಾ ಮೈಮರೆತೆ.

ಹಕ್ಕಿಗಳ ಹಾರಾಟ ನೋಡುತ್ತಿದ್ದಂತೆ ಹಕ್ಕಿಯೊಂದು ಕಣ್-ಮನ ಸೆಳೆಯಿತು. ಈ ಕಿತ್ತಳೆ-ತಲೆಯ ಸಿಳ್ಳಾರ(Orange Headed Thrush)ವನ್ನು ಅಂಕೋಲಾದಲ್ಲಿ ಹಿಂದಿನ ದಿನ ನೋಡಿದ್ದೆ, ನಿಜ.  ಆದರೀಗ Full ಖುಷ್. ಸಿಳ್ಳಾರ ಹಾರಿ ಬಂದು ಕುಳಿತು ಸುತ್ತಮುತ್ತ ನೋಡಿತು. ಕ್ಲಿಕ್, ಕ್ಲಿಕ್ ಅನ್ನಿಸುತ್ತಿದ್ದಂತೆ ಅಲ್ಲಿಂದ ಮತ್ತೊಂದು Perch ಮೇಲೆ ಕುಳಿತಿತು. ನೀರಿಗಿಳಿಯಲೇ ಎನ್ನುವಂತೆ ಇತ್ತ ತಿರುಗಿತು, ನಾವು ಹೂ ಎಂದರೂ ಸರಿಯೇ, ಅನ್ನದಿದ್ದರೂ ಸರಿಯೇ ಅದು ನೀರಿಗಿಳಿಯದೆ ಇರುತ್ತಿರಲಿಲ್ಲ. ಬಂದ ಹಕ್ಕಿಗಳಲ್ಲಿ ಕೆಲವು ಬರಿದೆ ನೀರು ಕುಡಿದು ಹಾರಿದರೆ, ಇನ್ನು ಕೆಲವು Flying and immersion bath ಮಾಡದೆ ಹೋಗುತ್ತಿರಲಿಲ್ಲ. ಈ ಸಿಳ್ಳಾರಗಳು ಎಷ್ಟು ಸಲ ಬಂದರೂ ನೀರಿನೊಳಗಿಳಿದು ಜಳಕ ಮಾಡಿ ಸ್ವಲ್ಪ ಒಣಗಿಸಿಕೊಂಡೇ ಹೋಗುತ್ತಿದ್ದವು. 

ಅತ್ತ ಬಣ್ಣ ಬಣ್ಣದ ಹಕ್ಕಿಗಳ ಮೆರವಣಿಗೆ ನೀರಾಟ ಸಾಗುತ್ತಲೇ ಇತ್ತು. ಇತ್ತ ನಿಂತ ನಿಲುವಿನಲ್ಲೇ ಕ್ಯಾಮೆರಾದಲ್ಲಿ ಕಣ್ಣು ನಾಟಿಸಿದವರ ಉಸಿರು ಮಾತ್ರ ಕೇಳಿಸುತ್ತಿತ್ತು  ಜೊತೆಗೆ ಕ್ಲಿಕ್, ಕ್ಲಿಕ್ ಕ್ಲಿಕ್ sound ಕೂಡಾ. ಉಳಿದಂತೆ ನೀರವತೆ. ಯಾರೊಬ್ಬರ ಸದ್ದಿಲ್ಲ, ಸೊಲ್ಲಿಲ್ಲ. ಹಳದಿ ಹುಬ್ಬಿನ ಪಿಕಳಾರ(Yellow Browed Bulbul) ಹಾರಿ ಮೀಯುವ ಇರಾದೆಯಲ್ಲಿದ್ದಂತೆ ಕಪ್ಪುತಲೆಯ ಹರಟೆಮಲ್ಲ (Dark fronted Babbler) ಬಂದಿಳಿಯಿತು. ಸಹಮನಸ್ಕರಾಗಿ ನೀರನ್ನು ಈಂಟುತ್ತಿದ್ದ, ಮೀಯುತ್ತಿದ್ದ, ನೀರಾಟ ಆಡುತ್ತಿದ್ದುದನ್ನು ನೋಡುತ್ತಿದ್ದ ನನಗೆ ಈ ಹರಟೆಮಲ್ಲ ಪಿಕಳಾರವನ್ನು ದುರುದುರು ನೋಡಿದ್ದನ್ನು ಕಂಡು ಇದೇನಪ್ಪಾ ಈ ವರಸೆ ಎಂದುಕೊಂಡೆ. ಪಾಪದ ಪಿಕಳಾರ ಪಿಳಿಪಿಳಿ ನೋಡುತ್ತಾ ಹಾಗೆ ಮುಗ್ಧವಾದ ಮುದ್ದುಮುಖದಿಂದ ಕೂತಿತ್ತು. ಮೊದಲೇ ಕೋಪಿಷ್ಠ ಹಕ್ಕಿಯಾದ ಕಪ್ಪುತಲೆಯ ಹರಟೆಮಲ್ಲ ಒಮ್ಮೆ ರೆಕ್ಕೆಬಿರಿದು ಹೆದರಿಸಿತು. ಪಿಕಳಾರ ಅಂಜಿ ಹಾರಿ ಅಂಚಿಗೆ ಕೂತರೂ ಹರಟೆಮಲ್ಲನ ಒರಟಾಟ ನಿಲ್ಲಲಿಲ್ಲ. ಮತ್ತೆ ಮತ್ತೆ ದುರುಗುಟ್ಟಿ ನೋಡುತ್ತಲೇ ಇತ್ತು. ಬೇಸತ್ತ ಪಿಕಳಾರ ಹಾರಿ Perch ಮೇಲೇರಿ ಮೊಗದಿರುವಿ ಕೂತಿತು. ಹರಟೆಮಲ್ಲ ತಿರುಗಿ ಕೆಕ್ಕರಿಸಿ ನೋಡಿತು. ನಾನು ಅಪ್ರತಿಭಳಾಗಿ ಹಕ್ಕಿಗಳ ಜುಗಳಬಂಧಿ ಜಗಳ ನೋಡುತ್ತಾ ಇದ್ದೆ. ಪಿಕಳಾರಕ್ಕೆ ಏನನ್ನಿಸಿತೋ ಏನೋ ಮತ್ತೆ ಇತ್ತ ತಿರುಗಿತು. ಅಷ್ಟೇ ಅಲ್ಲ ಮತ್ತೆ ಹಾರಿ ಬಂದು Bowlನ ಅಂಚಿನಲ್ಲಿ ಕುಳಿತು ಹರಟೆಮಲ್ಲನ ಕಡೆಗೊಮ್ಮೆ ನೋಡಿದಾಗ ಹೆದರಿದ ಹರಟೆಮಲ್ಲ ಪುರ್ರೆಂದು ಹಾರಿತು. ಆಹಾ! ಪೆದ್ದುಮುದ್ದಿನಂತಿದ್ದ ಪಿಕಳಾರದ ಆತ್ಮಸ್ಥೈರ್ಯವೇ! ಎಂತಾ ಒಳ್ಳೆ ನೋಟ, ಪಾಠ! ಪಿಕಳಾರದ ಮಹಾಧೈರ್ಯ ಬೆರಗು ಹುಟ್ಟಿಸಿತು. 

ಅದೇ ಲಹರಿಯಲ್ಲಿದ್ದಂತೆ ಬಹುದಿನಗಳ ಕನಸೊಂದು ಈಡೇರುವ ಸಮಯವೂ ಸನ್ನಿಹಿತವಾಯಿತು. ಬಿಳಿಯ ಉದ್ದಬಾಲದ ರಾಜಹಕ್ಕಿ [Indian paradise flycatcher] ಪೊದೆಯ ಒಳಗೆ ಇದೆ, ಇನ್ನೇನು ಬರಬಹುದುಮ ಅದು ಕೂಗು ಹಾಕಿದೆ, ಎಚ್ಚರ ಎಂದ Guide. ರಾಜರು ಬರುತ್ತಿದ್ದಾರೆ, ಎಚ್ಚರ, ಎಚ್ಚರ ಎಂದು ಭಟರು ಎಚ್ಚರಿಸಿ ಜಾಗೃತಗೊಳಿಸುವಂತೆ ಈ ಸೂಚನೆ ಅನ್ನಿಸಿತು. ನಿಜ, ಈ ಹಕ್ಕಿ ತನ್ನ ಚೆಲುವಿನಿಂದ ರಾಜಹಕ್ಕಿಯೇ! ಅದರಲ್ಲೂ ಉದ್ದದ ಬಿಳಿಯ ಬಾಲದ ಮೂರಿಂಚಿನ ಗಂಡು ರಾಜಹಕ್ಕಿಗೆ ಒಂಬತ್ತಿಂಚಿನ ಬಾಲದ ಗತ್ತು. ಇದರ ಚಿತ್ರ ತೆಗೆಯಲು ಎಲ್ಲರಲ್ಲೂ ಕಾತುರ, ನಿರೀಕ್ಷೆಗಳು. ಹೋದೆಡೆಯೆಲ್ಲಾ ರಾಜಹಕ್ಕಿಗಾಗಿ ಹುಡುಕಾಟ ನಡೆಸಿದ್ದೆ. ಬಂಡೀಪುರದಲ್ಲಿ ಹೆಣ್ಣು ರಾಜಹಕ್ಕಿ ಪುಟ್ಟ ಬಟ್ಟಲಿನ ಗೂಡಿನಲ್ಲಿ ಕಾವಿಗೆ ಕೂತಿದ್ದ ದೃಶ್ಯ ಸೆರೆಯಾಗಿತ್ತು. ಆದರೆ ಗಂಡು ಇನ್ನೂ ಕ್ಲಿಕ್ ಆಗಿರಲಿಲ್ಲ. ಹಾಗಾಗಿ ಸೂಚನೆ ಬಂದ ತಕ್ಷಣ ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದೆ. ಆಹಾ! ಬಂತು ಬಂತು, ಕರೆಂಟ್ ಬಂತು ಅನ್ನೋ ಹಾಗೆ ಹಾರಿ ಬಂತು ರಾಜಹಕ್ಕಿ. ಅರೆಕ್ಷಣದಲ್ಲಿ ಅದರ ಮುಖಭಾವ ಬದಲಾಯಿತು. ಕೆಕ್ಕರಿಸುತ್ತಾ ಕೂಗು ಹಾಕಿತು. ಕೆಳಗೆ ಬಾಗಿ ನೋಡಿತು. ನೀರಿಗಿಳಿದು ಇಳಿದ ವೇಗದಲ್ಲೇ ಮತ್ತೆ pavilionಗೆ ಮರಳಿತು.

ಕ್ಯಾಮೆರಾಗಳು ಕ್ಲಿಕ್, ಕ್ಲಿಕ್ ಕ್ಲಿಕ್ ಗಳಲ್ಲಿತ್ತು. ನಾನು ಹೇಗೋ ತಡಬಡಾಯಿಸುತ್ತಾ ಕನಸಿನ ಹಕ್ಕಿಯನ್ನು ಸೆರೆಹಿಡಿಯಲು ಸಾಹಸಿಸಿದೆ. ಅದು ಮರಳಿ ಹಾರಿಹೋದ ಬಳಿಕ ಅಲ್ಲಿದ್ದವರಲ್ಲಿ ಗೆಲುವಿನ ನಗು-ಮಾತು ಚಿಮ್ಮಿದವು, ನನ್ನನ್ನೂ ಸೇರಿದಂತೆ. ನನಗೆ ಗೊತ್ತಿತ್ತು ಅದರ Sharp Image ಸಿಕ್ಕಿಲ್ಲ ಎಂದು. ಆದರೆ ನೋಡಿದ ತೃಪ್ತಿಗಿಂತ ಮತ್ತಿನ್ನೇನು ಬೇಕು. ನಾನಿರುವವರೆಗೂ ಹುಡುಕಬಹುದಲ್ಲವೆ. ಹುಡುಕಾಟದಲ್ಲಿದ್ದೇನೆ. ಅದರ ಚೆಲುವನ್ನು ಸೆರೆ ಹಿಡಿಯಲೇಬೇಕೆಂದು. ನಾನಿನ್ನು ಫುಲ್ ಖುಷ್ ಆಗಿಲ್ಲ. ಕಾಯುತ್ತಿದ್ದೇನೆ, ಮತ್ತೂ ಅವಕಾಶಗಳಿಗಾಗಿ.

ಕ್ಷಣ ಕಳೆಯುತ್ತಿದ್ದಂತೆ ಹಳದಿ ಬುಲ್ಬುಲ್ (Yellow brewed bulbul) ಮೆಲ್ಲನೆ ಬಂದು ಕುಳಿತು ಅತ್ತಿತ್ತ ನೋಡತೊಡಗಿತು. ಒಂಟಿತನ ಸಹ್ಯವೆನಿಸದೆ ಸಂಗಾತಿಗಾಗಿ ಹುಡುಕಾಡಿ ಮೆಲ್ಲನೆ ಕೂಗಿ ಕರೆಯಿತು.  ಕೆಲವು ಕಾಲ ಕರೆಯುತ್ತಿದ್ದಂತೆ ಹಾರಿ ಬಂದ ಸಂಗಾತಿ ಏನೇನ್ನುವಂತೆ ಪ್ರಶ್ನಾರ್ಥಕ ನೋಟ ಬೀರಿತು. ಜಲಲ ಜಲಲ ಜಲಧಾರೆ ಎನ್ನುತ್ತಾ ನೀರಿಗಿಳಿಯೋಣವೇ ಎನ್ನುವ ಬೇಡಿಕೆ ನೋಟದಲ್ಲಿತ್ತು.  ಓ.ಕೆ ಎಂದು ಡೈವ್ ಹೊಡೆದು ಆಡಿ Relax ಮಾಡಿದವು.

Old magazine houseನ ಮೊದಲ ದಿನ ಎರಡು-ಎರಡೂವರೆಗೆ ಪ್ರಾರಂಭವಾದ ಹಕ್ಕಿಗಳ ನೀರ್ ಪಯಣ ಒಮ್ಮೊಮ್ಮೆ ಒಂಟಿಯಾಗಿ, ಕೆಲವೊಮ್ಮೆ ಹೆಚ್ಚು ಸಂಖ್ಯೆಗಳಲ್ಲಿ ಇತ್ತು. ಚಿತ್ರ ತೆಗೆಯುವವರು ಭಾರಿ ಸ್ಪೀಡಲ್ಲಿ ಇರಬೇಕಿತ್ತು.  ನಾಲ್ಕು-ನಾಲ್ಕೂವರೆಗೆ ಹಕ್ಕಿಗಳ ಓಡಾಟ ಹೆಚ್ಚುತ್ತಾ ಬಂದು ಬೆಳಕು ಮಂದಗತಿಗೆ ಬರುತ್ತಿದ್ದಂತೆ  ಇಳಿಮುಖವಾಯಿತು. Shooting ಯಾ clicking ಮುಕ್ತಾಯ ಮಾಡಲೇಬೇಕಿತ್ತು. ನಾವು ಬೇರೆ ಅಲ್ಲಿ ವಾಸ್ತವ್ಯ ಹೂಡಿದವರಲ್ಲ.  ಹಾಗಾಗಿ ಬೆಳಿಗ್ಗೆ ಬೇಗ ಬರುವ ಆಲೋಚನೆ ಬಂದು ವಿಚಾರಿಸಿದ್ದಕ್ಕೆ ಬೆಳಿಗ್ಗೆ ಅಷ್ಟಾಗಿ ಹಕ್ಕಿಗಳು ಬರಲ್ಲ, ನೀವು ಬಂದರೂ ಪ್ರಯೋಜನವಿಲ್ಲ ಎಂಬ ಖಡಕ್ ಉತ್ತರ ಸಿಕ್ಕಿತು.

ನೀರಿಗೆ ಎರಡು ಕಾರಣಕ್ಕಾಗಿ ಬರುತ್ತಿದ್ದವು. ಒಂದೋ ನೀರು ಕುಡಿಯಲು ಇಲ್ಲವೆ ಸ್ನಾನ ಮಾಡಿ ತಂಪು ಮಾಡಿಕೊಳ್ಳಲಿಕ್ಕೆ. ಏನಾದರೂ ನೀರಿಗೆ ಬೀಳುವ ಚಂದ ತೆಗೆಯಬಹುದೆ ವಿನಾ ರೆಕ್ಕೆಪುಕ್ಕ ಎಲ್ಲ ಒದ್ದೆಮುದ್ದೆ ಮಾಡಿಕೊಂಡ ಬಳಿಕ ಚಂದ ಅನ್ನಿಸಲಿಲ್ಲ. ನೀರಿಗೆ ಬೀಳುವ ಮುನ್ನ ಪರ್ಚ್ ಮೇಲೆ ಕುಳಿತಾಗ ಕ್ಲಿಕ್ಕಿಸಿಕೊಳ್ಳಬೇಕಿತ್ತು. ಹಕ್ಕಿಗಳನ್ನು ಕ್ಯಾಮೆರಾದಿಂದ ಚಚ್ಚಿ ಚಚ್ಚಿ ಹಾಕುತ್ತಿದ್ದಂತೆ ಕತ್ತಲೂ ಕಣ್ಣಿಗಿಳಿಯಲಾರಂಭಿಸಿತು. ಆ ವೇಳೆಗೆ ಅಂಕೋಲಾದಿಂದ ಸೌಮ್ಯ, ಪ್ರವೀಣ್ ಅಲ್ಲಿಗೇ ಬಂದರು. ಸಂಜೆ ಕೊಟ್ಟ ಸೂಪ್ ಕುಡಿದು ಬೋಂಡಾ ತಿಂದು, ಕ್ಯಾಂಪ್ ಫೈರಿನಲ್ಲಿ ಬೆಚ್ಚಗೆ ಮಾಡಿಕೊಂಡ ಬಳಿಕ ಅವರು ನಮ್ಮನ್ನು ಹೊತ್ತು ಒಯ್ದದ್ದು ಅದೇ ವೈಟ್ ಲಿಲಿಗೆ. ಆದರೆ ಆ ರಾತ್ರಿ ಕಾಳಿಯ ನೀರಿನ ಮೊರೆತ ಬಹುತೇಕ ನಿಂತೇ ಹೋಗಿತ್ತು, ನದಿಯಲ್ಲಿ ನೀರು ಕಡಿಮೆ ಬಿಟ್ಟಿದ್ದರಿಂದ. ಆದ್ದರಿಂದ  ಆ ಇರುಳು ಭಯಾನಕ ಅನ್ನಿಸಲಿಲ್ಲ, ಜೊತೆಗೆ ನಮ್ಮವರು ನಮ್ಮ ಜೊತೆಗೆ ಇದ್ದಾರೆನ್ನುವ ಧೈರ್ಯ,

ಮಂಗಟ್ಟೆಗಳಿಗಾಗಿ ಬೆಳಿಗ್ಗೆ ದಾಂಡೇಲಿಯತ್ತ ಹೊರಡುವ ಮುನ್ನ omhಗೆ ಬಂದು ನಿರಾಶೆಯಿಂದ ಹೊರಟೆವು. ಸೂರ್ಯ ಆಗಾಗ್ಗೆ ಗಿಡ-ಮರಗಳ ಸಂಧಿಯಲ್ಲಿ ದರ್ಶನ ನೀಡಿ ಪುಳಕಗೊಳಿಸುತ್ತಿದ್ದ. ನರಿರಾಯ ದರ್ಶನವಿತ್ತು ಪರಾರಿಯಾಯಿತು. ನರಿಮುಖ ನೋಡಿದೆವು ಅದೃಷ್ಟ, ದಾಂಡೇಲಿಯಲ್ಲಿ ಹಕ್ಕಿಗಳ ದರ್ಶನ ಆಗುತ್ತೆ ಎಂದುಕೊಂಡೆವು. ಭತ್ತದ ಗದ್ದೆ ಎದುರಾದಾಗ ತಂಗಿಯ ಕಣ್ಣಿಗೆ ಅಲ್ಲಿದ್ದ ಬೆದರುಗೊಂಬೆ ಚಂದವೆನಿಸಿತು. ಭತ್ತದ ತೆನೆಗೆ ಮುತ್ತಿಗೆ ಹಾಕಿ ತೆನೆಯನ್ನು ಕಚ್ಚಿ ಹಾರಿದ ಕೆಂದಲೆ ಗಿಳಿಗಳು ತಂತಿಯ ಮೇಲಿನ ಸರ್ಕಸ್ಸಿನಲ್ಲಿ ತೆನೆಯಿಂದ ಕಾಳು ಒಕ್ಕಿಕೊಳ್ಳುತ್ತಿದ್ದವು. ದಾಂಡೇಲಿಯ ಸರ್ಕಲ್ಲಿನಲ್ಲಿ ಕಂಡ ಸಮವಸ್ತ್ರಧಾರಿಣಿಯನ್ನು ಕೇಳಿದರೆ Wrong side direct ಮಾಡಿ ನಾಲ್ಕಾರು ಮೈಲಿ ಮುಂದೆ ಹೋಗಿ ವಾಪಸ್ ಬಂದೆವು. ಕೊನೆಗೂ Timber yardಗೆ ತಲುಪಿದೆವು.

ಆದರೆ ಮಂಗಟ್ಟೆಗಳು! ಮಂಗಟ್ಟೆ ಮಾತ್ರವಲ್ಲದೆ ಇನ್ನಷ್ಟು ಹಕ್ಕಿಗಳು ಸಿಕ್ಕೇ ಸಿಗ್ತವೆ ಎಂದು ಖಾತ್ರಿಯಾಗಿ ಹೇಳಿದ್ದರು. ಹಾದಿತಪ್ಪಿ ಅಲೆದು, ಹೊಟ್ಟೆಪಾಡೂ ಮುಗಿಸಿ Timber yardಗೆ ಹೋದರೆ ಒಂದೆರಡು ದಾಸಮಂಗಟ್ಟೆ ಫಿಗ್ ಮರದ ತುದಿಯಲ್ಲಿ ನಾವಿಲ್ಲಿದ್ದೇವೆ ನೋಡಿರೆಂದು ಸಿಗ್ನಲ್ ಕೊಟ್ಟವು. ಬಂದೆವು ತಾಳಿರಪ್ಪ ಎನ್ನುವಷ್ಟರಲ್ಲಿ ಅವೂ ಹಾರಿ ಆಕಾಶಯಾನಿಯಾದವು. ಆಮೇಲೆ ಅರಿವಾಯಿತು ನರಿ ನೋಡಿಯೂ ನಮ್ಮ ಲಕ್ ಕ್ಲಿಕ್ ಆಗಿಲ್ಲವೆಂದು. ಕೈಗೆ ಸಿಗದ ನರಿಯ ಮೇಲೆ ಸಿಟ್ಟು ಮಾಡಿಕೊಂಡರೂ ಪ್ರಯೋಜನ ಇರಲಿಲ್ಲ. ಅಲ್ಲಿದ್ದವರು ಲೇಟಾಗಿ ಬಂದ್ರಿ ಅಂದರು. ಅವರು ಅನ್ನೋದೇನು ನಮಗೆ ಗೊತ್ತಾಗಿತ್ತು.  ಹತ್ತೂವರೆ-ಹನ್ನೊಂದು ಗಂಟೆಯ ಉರಿಬಿಸಿಲಲ್ಲಿ ಅವುಗಳೂ ಹೊಟ್ಟೆಪಾಡಿಗೆ ಹೋಗದೆ ಕಾಯ್ತಾ ಇರ್ತಾವಾ. 

ನಾವು Yardನಲ್ಲಿ ಅಲೆದೆವು, ಸುಸ್ತಾಯಿತು. ಕೂತುಕೊಳ್ಳೋದೆಲ್ಲಿ ಎಂದು ಚಿಂತೆ ಮಾಡೋ ಅಗತ್ಯವಿರಲಿಲ್ಲ. Timber yardನಲ್ಲಿದ್ದೆವಲ್ಲ, ಕೂತು ಸುಧಾರಿಸಿಕೊಂಡೆವು. ಕ್ಯಾಮೆರಾ ಕೈಯಿಂದ ಕೈಗೆ ಅಡ್ಡಾಡಿ ನಮ್ಮನ್ನೇ ಕ್ಲಿಕ್ ಮಾಡುತ್ತಿದ್ದವು. ಮಂಗಟ್ಟೆಗಳನ್ನು ಹುಡುಕಿಕೊಂಡು ಬಹುತೇಕ ಮಂಗಗಳಾಗಿ ಬೇಸ್ತು ಬಿದ್ದು ಬಂದೆವು. ಪುನಃ ಕಾಳಿ ನದಿ ಬಳಿ ಹೋದೆವು, ಮಂಗಟ್ಟೆ ಸಿಕ್ಕೀತೆಂದು. ಮಧ್ಯಾಹ್ನದ ಬಿರುಬಿಸಿಲಲ್ಲಿ ಮರದ ತುತ್ತತುದಿಯಲ್ಲಿದ್ದ ಒಂದೆರಡು ಮಂಗಟ್ಟೆಗಳು ನಮ್ಮ ದರ್ಶನದಿಂದ ದೂರ, ಬಹುದೂರ ಹಾರಿಹೋದವು ನಮ್ಮನ್ನಲ್ಲೇ ಬಿಟ್ಟು. ವಿಧಿ ಇಲ್ಲದೆ ರೆಸಾರ್ಟ್ಗೆ ಮರಳಿ ಉದರದ ಉದ್ಧಾರ ಮಾಡಿ OMHನಲ್ಲಿ ಪ್ರತಿಷ್ಠಾಪಿತರಾದೆವು. ಗಣೇಶಗುಡಿಯ ಕೊನೆಯ ಸೆಷನ್ ಅದು. ಐದು ಗಂಟೆಗೆ ಹೊರಡಬೇಕೆಂಬ ಪ್ರವೀಣನಿಂದ ಸೂಚನೆ ಸಿಕ್ಕಿದ್ದರೂ ಅರ್ಧ ಮುಕ್ಕಾಲು ಗಂಟೆ ಸಿಕ್ಕಿದವನ್ನೆಲ್ಲಾ ಕ್ಯಾಮೆರಾದ ಒಳಗೆ ತುರುಕಿಕೊಂಡೆವು. 

ಎರಡು ದಿನದಲ್ಲಿ ಕನಿಷ್ಠ ಇಪ್ಪತ್ತಕ್ಕೂ ಹೆಚ್ಚು ಲೈಫರ್‌ಗಳು ದಕ್ಕಿದ್ದವು. ಮರಳಿ ಅಂಕೋಲಾ ಸೇರಿದೆವು. ಅಂಕೋಲಾದಿಂದ ಮಂಗಳೂರಿಗೆ, ಅಲ್ಲಿಂದ ಮಂಡ್ಯದ ಕಡೆಗೆ ಹೊರಡಬೇಕಿತ್ತು, ಅಲ್ಲಿಗೆ ಬಂದ ಮನೆಮಂದಿಯ ಜೊತೆಯಲ್ಲಿ. ಮುಂದಿನ ಸಲ ಗಣೇಶಗುಡಿಗೆ ಬರುವಾಗ ಟ್ರೈಪಾಡ್ ಸಮೇತ ಬರಬೇಕೆಂದು ನಿರ್ಧರಿಸಿದೆ. ಇಳಿದ ನನ್ನ ವಯಸ್ಸಿನ ನೆಲೆ ಅರಿಯದೆ Hand heald ಆಗಿ ಹಕ್ಕಿ ಫೋಟೊ ತೆಗೆದೇ ತೆಗೆಯುತ್ತೇನೆಂಬ ಹುಮ್ಮಸ್ಸಿನಿಂದ ಕೂಡಿದ್ದವಳಿಗೆ ಸೂಜಿ ಚುಚ್ಚಿದ ಬಲೂನಿನ ಸ್ಥಿತಿ. ಮೊದಲೇ ಸೆಟ್ಟಿಂಗಿನ ಆಳ ಅಗಲದ ಮಾಹಿತಿಯ ಕೊರತೆ, ಇದರ ಜೊತೆಗೆ ಟ್ರೈಪಾಡಿಲ್ಲದೆ ಬ್ಲರ್ರೋ ಬ್ಲರ್ರು. ನನ್ನ ಮುಂದಿನ ನಡಿಗೆ ಟ್ರೈಪಾಡಿನ ಒಡನೆ ನಿರ್ಧಾರ ಸಿದ್ಧವಾಯಿತು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

18 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading