
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
16.1
ಭೂಲೋಕದ ಸ್ವರ್ಗ ಎನಿಸಿಕೊಂಡ ಕಾಶ್ಮೀರದ ಕನಸು ಕಾಣದೆ ಇರಲು ಯಾರಿಗಾದರೂ ಸಾಧ್ಯವೆ? ನನಗೂ ಕಾಶ್ಮೀರದ ಕನಸುಗಳಿದ್ದವು, ಇವೆ. ಹಕ್ಕಿಯಾನಕ್ಕೆ ತೊಡಗಿಕೊಳ್ಳುವ ಮುನ್ನವೇ ಜಮ್ಮು-ಕಾಶ್ಮೀರದ ಪ್ರವಾಸ ಮಾಡಿದ್ದೆ. ಬಹಳ ಹಿಂದೆ ಅಂದರೆ 1980ರಲ್ಲಿ, ನಾನು ಉಪನ್ಯಾಸಕಿಯಾಗಿದ್ದ ಮಂಡ್ಯದ ಬಾಲಕರ ಸರ್ಕಾರಿ ಕಾಲೇಜಿನ ಅಧ್ಯಾಪಕರು ತಮ್ಮ ಕುಟುಂಬ ವರ್ಗದವರೊಡನೆ ಪ್ರಿನ್ಸಿಪಾಲರಾಗಿದ್ದ ನಮ್ಮಪ್ಪನ ಮುಂದಾಳತ್ವದಲ್ಲಿ ಇಪ್ಪತ್ತೈದು ದಿನಗಳ ಏಷ್ಯನ್ ಟ್ರಾವೆಲ್ಸ್ ಮೂಲಕ ವ್ಯವಸ್ಥೆ ಮಾಡಿದ ಉತ್ತರ ಇಂಡಿಯಾದ ರೈಲುಪ್ರವಾಸ ಕೈಗೊಂಡಿದ್ದೆವು, ಲಡಾಖ್ ಕಾಶ್ಮೀರಿನ ಒಂದು ಭಾಗವೇ ಆಗಿದ್ದಾಗ ಈ ಪ್ರವಾಸ ಆಗಿತ್ತು. ರೈಲು ಹೋಗಲಾರದ ಶ್ರೀನಗರಕ್ಕೆ ಜಮ್ಮುವಿನಿಂದ ಬಸ್ ಮೂಲಕ ತಲುಪಿ ನಾಲ್ಕು ದಿನವಿದ್ದು ಮರಳಿದ್ದೆವು. ರೋಲ್ ಫಿಲ್ಮ್ ಹಾಕುವ ಆಗ್ಫಾ ಕ್ಯಾಮೆರಾ ಹಿಡಿದೇ ಹೋಗಿದ್ದ ಕಾರಣ ಆ ಕಪ್ಪುಬಿಳುಪು ಚಿತ್ರಗಳು ಹೋಗಿದ್ದ ನೆನಪನ್ನುಳಿಸಿವೆ.
ಶ್ರೀನಗರದ ಡಾಲ್ ಲೇಕ್, ಮೊಗಲ್ ಗಾರ್ಡನ್, ಚಸ್ಮೆಶಾಹಿ ಗಾರ್ಡನ್, ಶಂಕರಾಚಾರ್ಯರ ಆಲಯ, ಶ್ರೀನಗರದ ಅಂಗಡಿಬೀದಿ ಹಾಗೂ ಗುಲ್ಮಾರ್ಗ್, ಪೆಹಲ್ಗಾವ್ಗಳನ್ನು ವೀಕ್ಷಿಸಿದ್ದೆವು. ಚಳಿಗೆ ಕಾಶ್ಮೀರಿಗರು ಪುಟ್ಟ ಬಿದಿರಿನ ಬುಟ್ಟಿಯಲ್ಲಿ ಮರದ ಹೊಟ್ಟು ತುಂಬಿ ನಡುವೆ ಕೆಂಡವಿರಿಸಿ ಆ ಬುಟ್ಟಿಯನ್ನು ಹೊಟ್ಟೆಯ ಮೇಲೆ ಕಟ್ಟಿಕೊಳ್ಳುತ್ತಾರೆ. ಶ್ರೀನಗರದ ಅಂಗಡಿ ಬೀದಿಯಲ್ಲಿ ಸಂಜೆ ಚಳಿ ತಡೆಯದೆ ನಡುಗುತ್ತಿದ್ದ ನನಗೆ ಅಂಗಡಿಯವನಿತ್ತ ಕೆಂಡ ತುಂಬಿದ ಮಡಿಕೆಯ ಬುಟ್ಟಿ ಹಿಡಿದು ಬೆಚ್ಚಗೆ ಮಾಡಿಕೊಳ್ಳಲು ನೆರವಾದದ್ದು ನೆನಪಿನಲ್ಲಿದೆ. ಅದಕ್ಕಿಂತ ಹೆಚ್ಚು ನೆನಪುಗಳಲ್ಲಿರುವುದು ಪೆಹಲ್ಗಾವ್ನ ಹಿಮಾವೃತ ಬೆಟ್ಟಗಳು. ಅಲ್ಲಿ ಎಷ್ಟೇ ಒತ್ತಾಯಿಸಿದರೂ ಮ್ಯೂಲ್ ಮೇಲೆ ಹತ್ತಲಿಲ್ಲ, ಸವಾರಿಯನ್ನೂ ಮಾಡಲಿಲ್ಲ. ಆದರೆ ಅಮ್ಮ-ಅಪ್ಪ ಅವುಗಳ ಮೇಲೇರಿ ರೌಂಡ್ ಹೊಡೆದಿದ್ದರು. ನಾನೇ ಮೊಂಡು ಎಂದರೆ ನಮ್ಮಪ್ಪ ಜಗಮೊಂಡ. ನಮ್ಮಮ್ಮನನ್ನು ಒತ್ತಾಯಿಸಿ ಕೂರಿಸಿ ಸವಾರಿ ಮಾಡಿಸಿದ್ದರು. ಅಮ್ಮ ನಾಚಿ ಆರೋಹಿಸಿ ಸವಾರಿಸಿದ್ದರು. ಹಿಮಪರ್ವತಗಳು ಕನಸಿನಲ್ಲಿ ಸುಳಿಯುತ್ತವೆ, ಕರೆಯುತ್ತವೆ. ಹಿಮಾಲಯ ಕರೆಯುತ್ತಿದೆ ಹೊರಟೇ ಬಿಡೋಣವೆಂದರೆ ಇಹದ ಬದುಕಿನಲ್ಲಿ ವಿಶೇಷ ವಿರಕ್ತಿ ಹುಟ್ಟಲೇ ಇಲ್ಲ, ನಾನೂ ಹಿಮಾಲಯಕ್ಕೆ ಹೋಗಲೇ ಇಲ್ಲ. ಆದರೂ ಹಿಮಾಲಯ ಕರೆಸಿಕೊಂಡಿತು ಬೇರೆಯೇ ಕಾರಣಕ್ಕಾಗಿ, ಹಕ್ಕಿಗಳ ಮೂಲಕ. ಹುಚ್ಚು ಹತ್ತಿಸಿತು, ನನ್ನನ್ನೂ ಹತ್ತಿಸಿಕೊಂಡಿತು. ಎಷ್ಟು ಸಲ ಹೋದರೂ ಹಿಮಾವೃತ ಶಿಖರಗಳ ಸೆಳೆತ ಹೆಚ್ಚುತ್ತಲೇ ಇದೆಯೆ ವಿನಾ ಇಳಿಯುತ್ತಿಲ್ಲ. ಇಳಿಯುವುದಾದರೂ ಯಾಕೆ ಬೇಕು?

ಕಾಶ್ಮೀರದ ಆ ನೋಟಗಳು ಚಿತ್ರಗಳ ಮೂಲಕ ಮನದಲ್ಲುಳಿದು ಹಕ್ಕಿಗೆ ಹೊರಡಲು ಪ್ರಾರಂಭಿಸಿದ ಮೇಲೆ ಕಾಶ್ಮೀರವೂ ಕೈ ಬೀಸಿ ಕರೆಯಿತು. ನಾನು 1980ರಲ್ಲಿ ಹೋಗಿ ಬಂದ ಬಳಿಕ ಕಾಶ್ಮೀರದ ನದಿಗಳಲ್ಲಿ ನೀರು ಹರಿದದ್ದಕ್ಕಿಂತ ರಕ್ತ ಹರಿದದ್ದೇ ಹೆಚ್ಚು. ಭಯೋತ್ಪಾದನೆಯ ನೆರಳಲ್ಲಿ ನಲುಗಿ ಹೋಗಿರುವ ಶ್ರೀನಗರ-ಕಾಶ್ಮೀರ ಮುಟ್ಟಲಾಗದ ಅನೂಹ್ಯ ಲೋಕ ಎನಿಸಿಬಿಟ್ಟಿದೆ. ಆದರೂ ಎಂದಾದರೂ ಹಕ್ಕಿಗಾಗಿ ಶ್ರೀನಗರ ಹೋಗಬೇಕೆಂಬ ಕನಸು ಒಳಗೆ ಇದ್ದೇ ಇದೆ. 2019ರಲ್ಲಿ ಜಮ್ಮು ಕಾಶ್ಮೀರ ವಿಭಜಿತವಾಯತು. ಇಡಿಯಾಗಿದ್ದ ರಾಜ್ಯ ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ಎರಡು ಕೇಂದ್ರಾಡಳಿತ ಪ್ರದೇಶ ಆಗಿವೆ.
ಚೀನಾ, ಟಿಬೆಟ್ ಹಾಗೂ ಪಾಕಿಸ್ತಾನದ ಗಡಿಗಳಿಂದ ಸುತ್ತುವರಿದ ಲಡಾಖ್ ಅಸಂಖ್ಯ ಕೊಳ್ಳಗಳಿಂದ ಕೂಡಿದ್ದು ಚಂದ್ರ ಮುರಿದುಬಿದ್ದ ತಾಣ ಎನ್ನುವಂತಿದೆ. ಹಿಮಾಚ್ಛಾದಿತ ಗಿರಿಶಿಖರಗಳು ಬೆಳ್ಳನೆ ಹೊಳೆಯುವುದರಿಂದ ಈ ಹೋಲಿಕೆಯೂ ಸಮಂಜಸ. ದೇಶದ ಉಳಿದ ಪ್ರವಾಸಿ ತಾಣಗಳಿಗಿಂತ ಬಹಳ ಭಿನ್ನವಾದ ಲಡಾಖ್ ಪ್ರತಿಯೊಬ್ಬ ಪ್ರವಾಸಿಗರ ಕನಸಿನ ತಾಣ. ಹೈಪಾಸ್ಗಳ ನಾಡಾದ, ಸಾಹಸ ವಿಹಾರಗಳಿಗೆ ಹೆಸರುವಾಸಿಯಾದ ಲಡಾಖ್ನಲ್ಲಿ ಎತ್ತ ನೋಡಿದರೂ ಬೋಳುಪರ್ವತಗಳು, ಧೂಳಿನ ಬಯಲು ಪ್ರದೇಶಗಳು, ಸರೋವರಗಳು, ಎತ್ತರದ ಪರ್ವತ ಹಾದಿಗಳಿವೆ. ಈ ತಣ್ಣನೆಯ ಮರುಭೂಮಿಯ ನಾಡಿನ ಪ್ರಯಾಣವು ಜೀವಮಾನಕ್ಕೆ ಆಗುವಷ್ಟು ನೆನಪುಗಳನ್ನು ಕೊಡುತ್ತದೆ. ನನ್ನಲ್ಲಿಯೂ ಸಹಾ ನೆನಪುಗಳನ್ನು ಮರೆಯಲಾರದಂತೆ ಉಳಿಸಿವೆ. ತೀರಾ ಇತ್ತೀಚಿನವರೆಗೂ ಲಡಾಖ್ ಪಕ್ಷಿ ಛಾಯಾಗ್ರಾಹಕರ ನೆಚ್ಚಿನ ತಾಣ ಆಗಿರಲಿಲ್ಲ. ಇಲ್ಲಿನ ವಾತಾವರಣದಲ್ಲಿ, ಸಂಪರ್ಕದ ಅವ್ಯವಸ್ಥೆಯಲ್ಲಿ ಹಕ್ಕಿ ಅನ್ವೇಷಣೆ ಕಷ್ಟಸಾಧ್ಯವಿತ್ತು. ರಸ್ತೆ ಸಂಪರ್ಕ ಸುಧಾರಿಸಿದ ಬಳಿಕ ಪಕ್ಷಿ-ಪ್ರಾಣಿಪ್ರಿಯರಿಗೆ ಲಡಾಖ್ ಬಹು ಪ್ರಿಯವಾದ ನೆಲೆಯಾಗಿದೆ.

ಇಂತಹ ಲಡಾಖಿಗೆ ಹನ್ನೆರಡು ದಿನಗಳ ಹಕ್ಕಿ ಟೂರ್ ಆಯೋಜಿಸಿದ ಖುಷ್ಬೂ `ಅಮ್ಮಾ ಈ ಹನ್ನೆರಡು ದಿನಗಳ ಟೂರ್ ಮುಗಿದ ನಂತರ ನಾವು ನೀವು ಮಾತ್ರ ನುಬ್ರ ವ್ಯಾಲಿಗೆ ಐದು ದಿನ ಹೋಗೋಣ’ ಎಂದರು. ಲಡ್ಡು ಬಂದು ಬಾಯಿಗೆ ಬಿದ್ದಿತಲ್ಲವೆ. ದುಸರಾ ಮಾತಿಲ್ಲದೆ ಟೂರಿಗೆ ಒಪ್ಪಿಗೆ ಕೊಟ್ಟೆ. ಒಟ್ಟು ಹದಿನೇಳು ದಿನ ಹಕ್ಕಿಯಲೆತ. ಹಾರುವ ಹಕ್ಕಿಗೆ ಕನಸುಗಳ ರೆಕ್ಕೆಗಳು ಒಡಮೂಡಿದವು. ಸ್ಥಳೀಯ ಜನರಷ್ಟೆ ಮಿಲಿಟರಿ ಮಂದಿಯೂ ಹೆಚ್ಚಿಗಿರುವ ೫೯೧೪೬ ಚದರ ಕಿ.ಮೀ. ವಿಸ್ತಾರದ ಸಮುದ್ರಮಟ್ಟದಿಂದ ೮೦೦೦ ದಿಂದ ೧೩೦೦೦ ಅಡಿಗಳಷ್ಟು ಎತ್ತರದಲ್ಲಿರುವ ಲಡಾಖ್ ವಾತಾವರಣ ಹೇಗಿದೆ ಎನ್ನುವುದರ ಕಡೆಗೆ ನಾನು ಹೆಚ್ಚು ನಿಗಾ ಇಡಲಿಲ್ಲ.
ಹಕ್ಕಿಗಳ ಹಿಂದೆ ಹೋಗುವ ಹುಚ್ಚಿನ ಹಕ್ಕು ಪಡೆದ ಮೇಲೆ ಅವುಗಳ ಹಿಂದೆ ಹೋಗಬೇಕು… ಮುಗಿಲಾದರೇನು… ದಿಗಿಲಾದರೇನು… ಲಡಾಖಿನ ಪಯಣಕ್ಕೆ ಒಪ್ಪಿಗೆಯ ಅಂಕಿತ ಬಿದ್ದು ಹೋಗಿತ್ತು… ಎದ್ದೆ, ಸಿದ್ಧವಾದೆ, ಹೊರಟೆ. ಬೆಂಗಳೂರಿನಿಂದ ದೆಹಲಿಗೆ ಹಾರಿದೆ. ಅಲ್ಲಿ ರಾಹುಲ್ ಮನೆಯಲ್ಲಿ ಒಂದು ದಿನ… ದಿನವಲ್ಲ, ಒಪ್ಪತ್ತು ಉಳಿದೆ. ಮರುದಿನ ನಸುಕಿನ ಮಸುಕು ಕಳೆಯುವಷ್ಟರಲ್ಲಿ ದೆಹಲಿಯನ್ನು ಹಿಂದೆ ಬಿಟ್ಟು ಸಾವಿರದೈನೂರು ಕಿ.ಮೀ ದೂರದ ಒಂದು ಗಂಟೆಯ ಪಯಣದ ಲೇಹ್ ದಾರಿಗೆ ವಿಮಾನದ ಕಿಟಕಿ ಸಾಥ್ ನೀಡಿದ ವಾಯುಯಾನದ ಸೊಗಸು ಶಬ್ದಾತೀತ. `ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ’ ಎಂದು ಸಾಲು ಸಾಲು ಕಣಿವೆಗಳನ್ನು ಮುದ್ದಿಸುವ ಚೆಲುವನ್ನು ಕಿಟಕಿಯಿಂದ ನೋಡುತ್ತಿದ್ದಂತೆ ಕಾಲ ಸಾಗಿದ್ದೇ ಗೊತ್ತಾಗಲಿಲ್ಲ. ಗಿರಿಪಂಕ್ತಿಗಳ ನಡುವೆ ಸಮುದ್ರ ಮಟ್ಟದಿಂದ 10680 ಅಡಿಗಳ ಎತ್ತರದಲ್ಲಿರುವ Kushok Bakula Rimpochee Airportನ ಅತ್ಯಂತ ಪುಟ್ಟ ರನ್ ವೇಯಲ್ಲಿ ಇಳಿಯಿತು. 13ನೇ ದಲೈಲಾಮಾ ಹೆಸರಿನ ಈ ಪುಟ್ಟ ವಿಮಾನನಿಲ್ದಾಣ ಇತ್ತ ಸಾರ್ವಜನಿಕರ ಪ್ರವಾಸಕ್ಕೆ, ಅತ್ತ ಮಿಲಿಟರಿಗೂ ಬಳಕೆಯಾಗುತ್ತದೆ.

ಎರಡು ಹೆಜ್ಜೆ ಹಾಕಿದರೆ ಹೊರಗೆ ಬಂದೇಬಿಡುವ ವಿಮಾನ ನಿಲ್ದಾಣ ದಾಟಿ ಲೇಹ್ನ ಅಂಗಳಕ್ಕೆ ಬರುತ್ತಿದ್ದಂತೆ ಎದುರುಗೊಂಡವರು ಲಡಾಖ್ ಟೂರಿನ ಸ್ಥಳೀಯ ವ್ಯವಸ್ಥೆಗಳ ಉಸ್ತುವಾರಿಗ ಲೋಬ್ಜಾಂಗ್ ವಿಶುದ್ಧ. ಎರಡು ಕಾರುಗಳಿಗೆ ನಮ್ಮನ್ನೂ ನಮ್ಮ ಲಗೇಜನ್ನೂ ಭರ್ತಿ ಮಾಡಿ ಐದು ಕಿ.ಮೀ ದೂರದ ವಾಸ್ತವ್ಯದ ಓಯಸಿಸ್ ವಿಲ್ಲಾಗೆ ತಲುಪಿಸಿದರು. ಹೋಟೆಲ್ ದೂರವಿರದಿದ್ದರೂ ಕಿರಿದಾದ ರಸ್ತೆಗಳಲ್ಲಿ ನುಸುಳಿ ಬಂದ ಕಾರಿನಿಂದಿಳಿದು ಮೆಟ್ಟಿಲು ಹತ್ತಿ ನಡೆಯಬೇಕಿತ್ತು. ಅಲ್ಲಿಂದ ಲೇಹ್ ಅರಮನೆಯ, ಸ್ಟಾಕ್ ಕಾಂಗ್ರಿಯ ಹಿಮಾಚ್ಛಾಧಿತ ಶಿಖರದ ನೋಟದ ಸೊಗಸಿಗೆ ಹತ್ತುವ ನಡೆಯುವ ಕಷ್ಟ ಕಡಿಮೆಯೆನಿಸಿತು.
ಲಡಾಖ್ ಪ್ರವಾಸಕ್ಕೆ ಗುಜರಾತಿನ ಉದ್ಯಮಿ ಸುಧೀರ್ ಝವೇರಿ, ಅವರ ಮಡದಿ ಶೋಭ, ಹಕ್ಕಿ ಚಿತ್ರ ತೆಗೆಯುವ ಅವರ ಧೈರ್ಯ ಮಗ, ಬೆಂಗಳೂರಿನ ಕನ್ನಡಿಗ ಮೋಹನ್, ರಾಹುಲ್, ಖುಷ್ಬೂ, ಅಂಕುರ್ ಹಾಗೂ ನಾನು ಸೇರಿ ಎಂಟು ಜನರಿದ್ದೆವು. ಮೊದಲ ದಿನ ಹೊಟೇಲಿನಲ್ಲೆ ಉಳಿದುಕೊಂಡು ಲಡಾಖಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು, ಪಕ್ಷಿಛಾಯಾಗ್ರಹಣಕ್ಕೆ ಹೋಗುವಂತಿಲ್ಲ ಎಂದು ಆರ್ಡರಿಸಿದರು. ಯಾವುದೇ ಹಕ್ಕಿ ಪ್ರವಾಸಕ್ಕೆ ಹೋದರೂ ಹೋದ ಕೂಡಲೇ ಲಗೇಜ್ ಇರಿಸಿ ಕ್ಯಾಮೆರಾ ಹಿಡಿದು ಹಕ್ಕಿ ಹಿಂದೆ ಓಡುತ್ತಿದ್ದ ನಮಗೆ ಲಡಾಖಿನಲ್ಲಿ acclimatization ಆಗೋದು ಅನಿವಾರ್ಯ ಅಗತ್ಯವೆಂಬ ಎಚ್ಚರಿಕೆ ನೀಡಿದರು. ನನಗಿದೆಲ್ಲಾ ಅಗತ್ಯವಿಲ್ಲ, ಏಕೆಂದರೆ ಕಾಲೊಂದನ್ನು ಉಳಿದಂತೆ ಆರೋಗ್ಯವಾಗಿ ಗಟ್ಟಿಮುಟ್ಟಾಗಿ ಇರುವವಳೆಂದು ನಂಬಿಕೊಂಡಿದ್ದೆ, ನನ್ನನ್ನೆ ಗಟ್ಟಿಯಾಗಿ ನಂಬಿಸಿಕೊಂಡಿದ್ದೆ, ಇತರರಿಗೂ ನಂಬಿಸಿದ್ದೆ ಎಂದುಕೊಂಡಿದ್ದೆ.

ಲಡಾಖಿನಲ್ಲಿ ಸಮುದ್ರ ಮಟ್ಟದಿಂದ ಹೆಚ್ಚು ಎತ್ತರಕ್ಕೆ ಬೇಗನೆ ಹೋಗುವುದರಿಂದ ಪ್ರಾಣವಾಯು ಆಮ್ಲಜನಕದ ಸಾಂದ್ರತೆ ಕ್ಷೀಣವಾಗಿ ಉಸಿರಾಟಕ್ಕೆ ತೊಡಕಾಗುವುದು. ಈ ಕಾರಣದಿಂದಲೇ ಪ್ರವಾಸಕ್ಕೆ ಹೊರಡುವ ಮೊದಲೆ ರಾಹುಲ್ ದಿನಾ ಸುಟ್ಟ ಬೆಳ್ಳುಳ್ಳಿ ತಿನ್ನಿ ಎಂದಿದ್ದ. ಲಡಾಖಿನಲ್ಲಿ ಡೈಮಾಕ್ಸ್ ಮಾತ್ರೆ ನಿತ್ಯ ಸೇವಿಸಲೇಬೇಕೆಂದು ಆರ್ಡರಿಸಿದ್ದ. ಸುಟ್ಟ ಬೆಳ್ಳುಳ್ಳಿ ತಿನ್ನುವ ಬದಲು ಬೆಳ್ಳುಳ್ಳಿ ಕ್ಯಾಪ್ಸುಲ್ ತಿಂದೆ. ವೈದ್ಯೆ ಮಗಳು ನನ್ನೆಲ್ಲ ಟೂರಿಗೆ ಇವು ನಿಮಗೆ ಬೇಕಾದೀತೆಂದು ಮಾತ್ರೆಗಳನ್ನು ತಂದಿರಿಸುತ್ತಾಳೆ, ನುಂಗದಿದ್ದರೂ ನೋವಿನ ಮಾತ್ರೆಗಳನ್ನೂ ಸಹ. ಅಗತ್ಯಕ್ಕಿಂತ ಹೆಚ್ಚಿಗೆ ಡೈಮಾಕ್ಸ್ ತಂದುಕೊಟ್ಟಿದ್ದಳು. ನಾನೂ ಭಾರಿ ಅಲರ್ಟ್ ಆಗಿದ್ದೆ. ಲೇಹ್ಗೆ ಹೋಗುತ್ತಿದ್ದಂತೆ ಡೈಮಾಕ್ಸ್ ನುಂಗಲಾರಂಭಿಸಿದೆ. ಆದರೆ ನುಂಗಿಯೂ ಏನಾಯ್ತು, ಏಕಾಯ್ತು ಎನ್ನುವ ವಿಷಯಕ್ಕೆ ನಂತರ ಬರುವೆ. ಲಡಾಖ್ ವಾತಾವರಣಕ್ಕೆ ದೇಹವು ಒಗ್ಗಿಕೊಳ್ಳಲು ಸಾಕಷ್ಟು ಸಮಯ ಅಗತ್ಯ. ಮೊದಲ ಎರಡು ದಿನ ಹೆಚ್ಚು ಶ್ರಮ ವಹಿಸಬಾರದು. ಲೇಹ್ಗೆ ನೇರವಾಗಿ ಬಂದವರು ಮೊದಲ ದಿನ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಎರಡನೇ ದಿನವನ್ನು ಲಘು ಪ್ರಯಾಣಕ್ಕಾಗಿ ಮಾತ್ರ ಇರಿಸಿಕೊಳ್ಳಬೇಕು. ಸಾಕಷ್ಟು ನೀರು ಕುಡಿಯಬೇಕು. ಹಸಿವಾಗದಿದ್ದರೂ ತಿನ್ನಬೇಕು. ಎಲ್ಲ ನಿಯಮಗಳು ಪಾಲಿಸುವ ಸಲುವಾಗಿಯೇ ಇರುವುದು. ಆದರೆ ಆಚರಣೆಗೆ ತರುವ ಹೊತ್ತಿನಲ್ಲಿ ಎಷ್ಟು ಪರ್ಸೆಂಟ್ ಜಾರಿಯಾಗುತ್ತವೆ ಎನ್ನುವುದು ಮುಖ್ಯ.
ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳಲೆಂದು ನೀವು ಹೊರಗೆ ಹೋಗುವಂತಿಲ್ಲ ಎಂದಿದ್ದರೆ ವಿನಾ ಹೊಟೇಲಿನ ಆವರಣಕ್ಕೆ ಇಳಿಯಬೇಡಿ ಎಂದಿರಲಿಲ್ಲವಲ್ಲ. ಸಿಕ್ಕಿದರೆ ಹಕ್ಕಿ ಸಿಗಲಿ, ಇಲ್ಲದಿದ್ದರೆ ಕಂಡದ್ದನ್ನೆ ಫೋಟೋ ಮಾಡೋಣ ಎಂದು ಕ್ಯಾಮೆರಾ ಹೊತ್ತು ಆವರಣಕ್ಕಿಳಿದೆ. ಹಕ್ಕಿ ಟೂರಿಗೆಂದು ಬಂದ ದಿನ ಶುಭಾರಂಭ ಮಾಡದಿದ್ದರೆ ಹೇಗೆ? ಆವರಣದಲ್ಲಿ ಕಣ್ಣು ಹರಿಸಿದರೆ ಅಂಗಳದಲ್ಲಿ ಒಂದೆಡೆ ಲಾನ್ ಇದ್ದರೆ, ಇನ್ನೊಂದೆಡೆ ಮೂಲಂಗಿ, ಕಾಲಿಫ್ಲವರ್, ಆಲೂಗಡ್ಡೆ, ಪಾಲಕ್ ಬೆಳೆಸಿದ್ದರು. ನಡುನಡುವೆ ಸೇಬಿನ ಗಿಡವೂ ಇದ್ದವು. ಹೀಗೆ ಅಂಗಳದಲ್ಲಿ ಬೆಳೆದ ತರಕಾರಿ ನಮ್ಮ ತಿಂಡಿ ಊಟಗಳಲ್ಲಿ ಸೇರುತ್ತಿದ್ದವು.

ಕ್ಯಾಮೆರಾ ಹೊತ್ತು ಹೊರಬಂದ ನನ್ನನ್ನು ನೋಡಿದ ಗುಬ್ಬಿ ನನ್ನ ಬದಲು ತಾನೇ ಅಲ್ಲಿದ್ದ ಕುರ್ಚಿಯ ಮೇಲೇರಿತು. ಇತ್ತೀಚಿನ ದಿನಗಳಲ್ಲಿ ಗುಬ್ಬಿಯೂ ಅಪರೂಪವಾದ್ದರಿಂದ ಅದನ್ಯಾಕೆ ಬಿಡಲಿ, `ಬಾ ಬಾ ಗುಬ್ಬಿ’ ಎಂದು ಕ್ಲಿಕ್ಕಿಸಿದೆ. ಎಲೆಗಳ ಸಂಧಿಯಲ್ಲಿ ವಾರ್ಬ್ಲರ್, ಗ್ರೇಟ್ ಟಿಟ್ ಕಾಣಿಸಿ ಅವನ್ನೂ ಸೆರೆಹಿಡಿದೆ. ಓರಿಯೆಂಟಲ್ ಟರ್ಟಲ್ ಡವ್ ಕೂಡಾ ಬಂದಿತು. ಅಷ್ಟರತನಕ ಮರ, ಮಾಳಿಗೆಯ ಮೇಲಿದ್ದ eurasian magpie ಲಾನಿಗೆ ಬಂದಿಳಿದು ನನಗೆ ಲೈಫರಾಯಿತು. ಆದರೆ ಲಡಾಖಿನವರಿಗೆ ಅದೊಂದು ತೆರದ ಕಾಗೆ. ಇದರ ಚಿತ್ರವನ್ನೂ ತೆಗೆಯುತ್ತಾರೆಯೆ ಎಂಬ ಔದಾಸೀನ್ಯದ ನೋಟ. ಮೊದಲ ದಿನವೇ ಲೈಫರ್ ಸಿಕ್ಕಿದ ಸಂಭ್ರಮ. ನಂತರದ ಲಡಾಖ್ ಪ್ರವಾಸದಲ್ಲಿ ಎಲ್ಲೆಲ್ಲಿ ನೋಡಿದರೂ ನಮ್ಮೂರುಗಳಲ್ಲಿ ಕಾಗೆಗಳನ್ನು ಕಂಡಂತೆ eurasian magpie ಕಾಣಸಿಗುತ್ತಿದ್ದವು. ಅದನ್ನು ಹತ್ತಿರದಿಂದ ನೋಡಿದಾಗ ಅದರ ಬಣ್ಣಗಳ ಸಂಯೋಜನೆಯ ಸೊಬಗಿಗೆ ಖುಷಿಯಾಯಿತು.
ಹಕ್ಕಿಯೊಂದು ಲಾನಿನಲ್ಲಿ ನೆಲ ಕೆದಕುತ್ತಿತ್ತು. ನನ್ನ ಚಿತ್ತ ಅತ್ತ ಹರಿದು ಚಿತ್ರಗ್ರಾಹಕದಲ್ಲಿ ಚಿತ್ತಾರಗಳಾದವು. ಆ ಹಕ್ಕಿಯೂ ಚಂದ, ಹಕ್ಕಿಯ ಹೆಸರೂ ಚಂದ. ಚಂದ್ರಮಕುಟ. ಚಂದದ ಮಕುಟ ಬಿಚ್ಚಿದಾಗಿನ ಸೊಗಸಿಗೆ ಮಾತೂ ಮೌನ. ಉದ್ದದ ಬಾಗಿದ ಕೊಕ್ಕಿನಿಂದ ನೆಲಕೆದಕುವ ಇದರ ಮತ್ತೊಂದು ಹೆಸರು ನೆಲಕುಟುಕ. ಎಲ್ಲೆಲ್ಲೂ ಸಿಗುವ common hoopoe ತುಂಬಾ common ಆದರೂ ಕಂಡಾಗ ಕ್ಯಾಮೆರಾ ಹಿಡಿ ಎಂದು ಕೂಗಿ ಕರೆದು ಕ್ಲಿಕ್ಕಿಸುತ್ತದೆ. ಅಷ್ಟರಲ್ಲಿ ನಾಯಿಯೊಂದು ಬಂತು, ಚಂದ್ರಮಕುಟ ಹಾರಿಯೇ ಹೋಯಿತು. ಹಕ್ಕಿ ಹೋದರೇನಾಯಿತು ಹೂ ಇದೆಯಲ್ಲ ನೋಡು ಎಂದು ನನ್ನನ್ನು ನಾನೇ ಸಮಾಧಾನಿಸಿಕೊಳ್ಳಲು ಅಂಗಳದಲ್ಲಿ ಅರಳಿದ್ದ ಕೆಂಪುಬಣ್ಣದ ಪಾಪಿ ಅಲ್ಲಲ್ಲ ಪಾಪ್ಪಿ(poppy ) ಹೂಗಳಿಗೆ ಕ್ಯಾಮೆರಾ ಹಿಡಿದೆ.

ಬೆಳಿಗ್ಗೆಯಿಂದ ಓಯಸಿಸ್ ವಿಲ್ಲಾದಲ್ಲಿ ವಿರಮಿಸಿದವರೆಲ್ಲ ವಾತಾವರಣಕ್ಕೆ ಒಗ್ಗಲೆಂದು ಸಂಜೆ ಐದು ನಿಮಿಷದ ನಡಿಗೆಯಷ್ಟು ಹತ್ತಿರದಲ್ಲಿದ್ದ ಲೇಹ್ ಮಾರ್ಕೆಟ್ಟಿಗೆ ಹೊರಟರು. ಗತ್ಯವಾದುದನ್ನು ಆನ್ಲೈನಿನಲ್ಲೇ ಕೊಳ್ಳುವುದರಿಂದ ನನಗೆ ನಮ್ಮೂರಿನಲ್ಲೆ ಅಂಗಡಿಬೀದಿಗಳಲ್ಲಿ ಸುತ್ತುವ ಅಭ್ಯಾಸ ತಪ್ಪಿಹೋಗಿ ಅಂಗಡಿಗಳಿಗೆ ಎಂಟ್ರಿ ಕೊಡುವುದು ಕಡಿಮೆ. ಯಾವ ಊರಿಗೆ ಹೋದರೂ ಕೊಳ್ಳುವ ಕಾರ್ಯವಿಲ್ಲ, ಊರು ಸುತ್ತುವ ಕೆಲಸವೂ ಇಲ್ಲ. ಹೋದ ಸ್ಥಳದ ನೆನೆಪಿಗೆ ಏನಾದರೂ ಕೊಳ್ಳಬೇಕಿಲ್ಲ, ನೆನಪಾಗಿ ತೆಗೆದ ಹಕ್ಕಿಗಳೆ ಚಿತ್ರಗಳಾಗುತ್ತವಲ್ಲ. ಮತ್ಯಾಕೆ ಹೆಚ್ಚಿನ ಆಸೆ. ಮಾರ್ಕೆಟ್ಟಿಗೆ ಹೋದವರಲ್ಲಿ ಒಬ್ಬರಿಗೆ ಉಸಿರಾಟದ ಸಮಸ್ಯೆ ಆಯಿತು. ಅವರ ಬಳಿ ಹ್ಯಾಂಡಿ oxygen ಸಿಲಿಂಡರಿದ್ದ ಕಾರಣ ಮ್ಯಾನೇಜ್ ಮಾಡಿದರೆಂದು ತಿಳಿಯಿತು. ವಿಷಯ ತಿಳಿದು ಅವರನ್ನು ಕಂಡು ಮಾತಾಡಿಸಿದೆನೇ ವಿನಾ ಸೀರಿಯಸ್ಸಾಗಿ ವಿಷಯ ಗ್ರಹಿಸಲಿಲ್ಲ. ಗ್ರಹಿಸಿ ಮುನ್ನೆಚ್ಚರಿಕೆ ವಹಿಸಬೇಕಿತ್ತೇನೊ. ಆದರೆ ಕಾಲದ ನಿರ್ಧಾರ ಬೇರೆ ಆಗಿದ್ದಾಗ ನಾನು ಬೇರೆ ಹೇಗೆ ಆಲೋಚಿಸಲಿ? ಲೀಲಾ ನೀನೇ ನಿನ್ನ ಕಥೆಯ ಪುಟಗಳನ್ನು ಮೊದಲೇ ಹೀಗೆಂದು ಹೇಗೆ ಬರೆದಿಟ್ಟುಕೊಳ್ಳುವೆ ಹೇಳು? ಬರೆದುಕೊಳ್ಳಲು ಸಾಧ್ಯವಿದೆಯೆ?
ಮರುದಿನದಿಂದ ನಮ್ಮ ಹಕ್ಕಿ ಸುತ್ತಾಟ ಆರಂಭ. ಶೇ-ಥಿಕ್ಸೆ ಜೌಗು ಪ್ರದೇಶಗಳು ಲೇಹ್ಗೆ ಹದಿನೈದು-ಇಪ್ಪತ್ತು ಕಿ.ಮೀ ದೂರದಲ್ಲಿವೆ. ಅದರ ಸುತ್ತಮುತ್ತ ನಡೆಯುತ್ತಿದ್ದ ನಮ್ಮ ಹಕ್ಕಿ ಹುಡುಕಾಟಕ್ಕೆ ಸಾಕ್ಷಿಯಾಗಿ ಶೆಯ್ ಮಾನೆಸ್ಟ್ರಿ ನಸುನಗುತ್ತಾ ನೋಡುತ್ತಿತ್ತು. ಮಾನೆಸ್ಟ್ರಿಯ ಮುಂದಿನ ವಿಶಾಲವಾದ ಬಯಲಲ್ಲಿ ದನಕರು ಮೇಯುತ್ತಿದ್ದವು. ಶೆಯ್ ಗೊಂಪಾ ಸೇರಿದಂತೆ ಸುತ್ತಮುತ್ತಣ ನಿಸರ್ಗಕ್ಕೆ ಕ್ಯಾಮೆರಾ ಹಿಡಿಯುತ್ತಿರುವಾಗ ಹಾದಿಯಲ್ಲಿ ಬಂದ ಲಡಾಖಿಗರನ್ನೂ ಸೆರೆಹಿಡಿದೆ. ಸ್ಟಾಕ್ನಾ ಮಾನೆಸ್ಟ್ರಿ ಸಿಂಧೂ ನದಿಯ ಎಡದಂಡೆಯಲ್ಲಿ ಲೇಹ್ನಿಂದ 21 ಕಿಲೋಮೀಟರ್ ದೂರದಲ್ಲಿದ್ದರೆ, ಇತ್ತ ಸ್ಪಿಟುಕ್ ಮಾನೆಸ್ಟ್ರಿಯೂ ಕಾಣುತ್ತಿತ್ತು. ಬಹುತೇಕ ಗೊಂಪಾ ಅಥವಾ ಮಾನೆಸ್ಟ್ರಿಗಳು ಬೆಟ್ಟದ ಮೇಲೆ ಇದ್ದು ಹಿಂದಿದ್ದ ಬೆಟ್ಟಗಳ ಹಿನ್ನೆಲೆಯಲ್ಲಿ ಎದ್ದು ಕಾಣಿಸುತ್ತಿದ್ದವು. ಗಿಡ-ಪೊದೆ, ನೀರು ಕಂಡಲ್ಲೆಲ್ಲಾ ಹಕ್ಕಿ ಹುಡುಕುತ್ತಿದ್ದಾಗ citrine wagtail ಗಂಡು ಹೆಣ್ಣು ಸಿಕ್ಕವು. ನಂತರ ಆ ಪ್ರದೇಶಕ್ಕೆ ಸೀಮಿತವಾದ mountian chiffchaff ಮರದ ಮೇಲೆ ಮೂರು ಮರಿಗಳಿಗೆ ಉಣಿಸುತ್ತಿದ್ದ ಚಿತ್ರ ಸಿಕ್ಕಿ ಮತ್ತೊಂದು ಲೈಫರ್ ಸಿಕ್ಕಿತು. ನೀಲಿಗೊರಳ ಹಕ್ಕಿಯೂ ಕೆಳಗಿನಿಂದ ನಾನಿಲ್ಲಿದ್ದೇನೆ ನೋಡು ಎಂದು ಕೂಗಿ ಲೈಫರ್ ಆಯಿತು. ಗುಂಡು ಗುಂಡನೆಯ ಕಲ್ಲುಗಳಿಂದ ಕೂಡಿ ಹರಿಯುತ್ತಿದ್ದ ನೀರಿನ ಬಳಿಗೆ ಉಳಿದವರಂತೆ ನಡೆದು ಹೋಗಲಾರದ ನನಗೆ ಐಬಿಸ್ ಬಿಲ್ಲಿನ ರೆಕಾರ್ಡ್ ಷಾಟ್ ಮಾತ್ರ ಸಿಕ್ಕಿತು.

ರಾಹುಲ್, ಅಂಕುರ್ ಮುಂದೆ ಯುರೇಷಿಯನ್ ಮ್ಯಾಗ್ಪೈ ಹಾರಿ ಬಂದವು, ಒಂದಲ್ಲ ಹಲವು. ಇಬ್ಬರಿಗೂ ಅದರ ಚಂದದ ಷಾಟ್ ತೆಗೆಯುವ ಆಸೆ. ಅದರ ಹಿಂದೆ ಮೆಲ್ಲಗೆ ಹೊರಟರು. ಇವರು ಬರುವುದನ್ನು ನೋಡಿ ಕುಪ್ಪಳಿಸುತ್ತಾ ಹಾರುತ್ತಾ ಹೋಗುತ್ತಿತ್ತು. ಇವರೂ ಅದರ ಹಿಂದೆ ಕ್ಯಾಮೆರಾ ಹೊತ್ತು ಹೋದರು. ಸ್ವಲ್ಪ ಹೊತ್ತಿನ ಬಳಿಕ ಖುಷ್ಬೂ ಕೂಡಾ ಕ್ಯಾಮೆರಾ ಹೆಗಲಿಗೇರಿಸಿಕೊಂಡರೂ ಸ್ವಲ್ಪ ದೂರ ಹೋಗಿ ಅಲ್ಲೇ ಕುಳಿತರು. ಅವರ ಹಿಂದೆ ಹೋಗದ ನಾನು ಅತ್ತಿತ್ತ ಹಕ್ಕಿಗಾಗಿ ಕಣ್ಣಾಡಿಸುವಷ್ಟರಲ್ಲಿ ಅಲ್ಲಿಗೆ ಬಂದ ಪುಟ್ಟ ಬಾಲಕನನ್ನು ಕಥನದ ನಾಯಕನನ್ನಾಗಿಸಿಕೊಂಡೆ, ಆತನ ಮುಖಭಾವಗಳನ್ನು ಒಂದು ಚಿತ್ರಕಥೆಯಾಗಿ ಹೆಣೆಯುತ್ತಾ ಫೋಟೊಗಳನ್ನು ತೆಗೆದೆ. “ಈ ಹಸಿರು ಬಯಲಿನಲ್ಲಿ ಖುಷಿಯಾಗಿ ಆಟ ಆಡೋಣವೆಂದು ಬಂದೆ. ಅಲ್ಯಾರಪ್ಪ ಬರುತ್ತಾ ಇರೋದು. ಹಾಯ್ ಅಲ್ಲಾ, ನಮ್ಮಜ್ಜಿ ಬರುತ್ತಿದ್ದಾರೆ. ಏನಪ್ಪಾ ಮಾಡಲಿ? ಅವರು ಇಲ್ಲಿಗೆ ಬಂದ ಮೇಲೆ ಬಿಡ್ತಾರಾ? ನನ್ನ ಎಳೆದುಕೊಂಡೆ ಹೋಗ್ತಾರೆ. ಕೈಯಲ್ಲಿ ಕಡ್ಡಿ ಬೇರೆ ಹಿಡಿದಿದ್ದಾರೆ. ಆಯಿತು ಅಜ್ಜಿ ಕೈ ಹಿಡ್ಕೊಂಡು ಹೋಗೋದೂ ಖುಷಿನೆ. ನಮ್ಮಜ್ಜಿ ಕೈಯಲ್ಲಿದ್ದ ಕಡ್ಡಿ ಮೆಲ್ಲಮೆಲ್ಲಗೆ ನನ್ ಕೈಗೆ ಬಂದುಬಿಡ್ತಪ್ಪ. ಅವರು ಇನ್ನು ನನಗೆ ಹೊಡೆಯಕ್ಕಾಗಲ್ಲ. ನಮ್ಮಜ್ಜಿ ಎಲ್ಲಾದರೂ ಹೊಡೆಯುತ್ತಾರಾ? ನಿಮಗೆ ನಿಜ ಹೇಳಲಾ, ನಮ್ಮಜ್ಜಿ ಕಡ್ಡಿ ಹಿಡ್ಕೊಂಡು ಬಂದದ್ದು ಹಸು ಮೇಯ್ಸೋಕೆ, ನನಗೆ ಹೊಡೆಯೋದಕ್ಕೆ ಅಲ್ಲ. ಹಸು ಎಲ್ಲಿದೆ ಅಂದ್ರಾ… ನೋಡಿ ದೂರದಲ್ಲಿ ಮೇಯ್ತಾ ಇದೆ.” ಹೀಗೆ ಮಗು ಹೇಳಿದಂತೆ ಚಿತ್ರಕಥೆ ಹುಟ್ಟಿತು, ಅದಕ್ಕೆ ಬೇಕಾದ ಚಿತ್ರಗಳು ಕ್ಲಿಕ್ಕಾಗುತ್ತಾ ಹೋದವು. ಹಕ್ಕಿ ಬದಲು ಮಗು ಸಿಕ್ಕಿತಲ್ಲ. ಕೆಲವು ಸಲ ಚಿತ್ರ ತೆಗೆಯುವಾಗಲೇ ಚಿತ್ರಕ್ಕೆ ಬೇಕಾದ ಕಥೆಯು ಜೊತೆಜೊತೆಗೆ ಹುಟ್ಟಿಕೊಳ್ಳುತ್ತದೆ. ಲಡಾಖ್ ಆದರೇನು… ಯಾವ ಊರಾದರೇನು ಅಜ್ಜಿಯರು ಅಜ್ಜಿಯರೆ. ಈ ಅಜ್ಜಿಯಂದಿರು ಮೊಮ್ಮಕ್ಕಳ ಕೈಹಿಡಿದು ನಡೆಯೋದು, ನಡೆಸೋದು ಮೊಮ್ಮಕ್ಕಳ safteyಗಾ ಅಥವಾ ಅಜ್ಜಿಯರ safteyಗೊ, ನನಗೆ ಡೌಟು. ನಾನು ಅಜ್ಜಿಯಾಗಿ ಇಂತಹ ಕೆಲಸ ಹೆಚ್ಚು ಮಾಡಲೇ ಇಲ್ಲ. ಮೊಮ್ಮಕ್ಕಳ ಕೈಹಿಡಿದು ನಡೆಸುವ ದಿನಗಳಲ್ಲಿ ಪ್ರಿನ್ಸಿಪಾಲಗಿರಿಯ ಒತ್ತಡದಲ್ಲಿ ಮುಳುಗಿದ್ದೆ. ಕೆಲಸ ಬಿಟ್ಟರೆ ಬೇರೆ ಲೋಕವೇ ಇಲ್ಲ ಎನ್ನುವ ಸ್ವಭ್ರಮೆಯಲ್ಲಿದ್ದ ನನಗೆ ಹಗಲಿಡಿ ಕಾಲೇಜಿನಲ್ಲಿ ಮನೆಗೆ ಬಂದ ಮೇಲೂ ಹೊತ್ತು ತರುತ್ತಿದ್ದ, ನಾನಾಗೇ ಮೈಮೇಲೆ ಎಳೆದುಕೊಳ್ಳುತ್ತಿದ್ದ ಕೆಲಸಗಳಲ್ಲಿರುತ್ತಿದ್ದೆ. 2015ರಲ್ಲಿ ಸರ್ಕಾರಿ ಸೇವೆಯ ಚಾಕರಿಯಿಂದ ನಿವೃತ್ತಳಾಗಿ ಬರುವಷ್ಟರಲ್ಲಿ ಮೊಮ್ಮಕ್ಕಳೆ ನನ್ನ ಕೈಹಿಡಿದು ನಡೆಸುವಷ್ಟು ಬೆಳೆದು ಪ್ರಬುದ್ಧರಾಗಿದ್ದರು. ಈಗಲೂ ನನ್ನಲ್ಲಿ ಕೊರಗು ಉಳಿದಿದೆ, ಊರಿನ ಮಕ್ಕಳಿಗೆಲ್ಲ ಕಥೆ ಹೇಳಿದ ಆಡಿ ಕುಣಿಸಿದ ನಾನು ನನ್ನ ಮನೆಯ ಮುದ್ದು ಕಂದಮ್ಮಗಳ ಇಂತಹ ಸುಖಸಾನಿಧ್ಯದಿಂದ ವಂಚಿತಳನ್ನಾಗಿಸಿಕೊಂಡೆ ಎಂದು. ಅಜ್ಜಿಯ ಕೈಹಿಡಿದು ನಡೆದ ಮಗುವನ್ನು ನೋಡುವಾಗ ಹಿಂದಿನದನ್ನು ನೆನೆದು ಮನಸ್ಸು ಕೊಂಚ ವಿಚಲಿತವಾಯಿತು. ಕಳೆದ ಕಾಲ ಕಳೆದೆ ಹೋಯಿತು. ಕೊರಗುವ ಬದಲು ಬೇರೆ ದಾರಿಯಲ್ಲಿ ಅವರೊಡನೆ ಸುತ್ತಾಡುವ ಆಡುವ ದಾರಿಗಳಿವೆ ಅಲ್ಲವೆ. ಆದ್ದರಿಂದಲೇ ಈಗ ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ ಆಗಿದ್ದೇನೆ ಎಂಬ ಸಮಾಧಾನ ಇದೆ, ಕಥೆ ಹೇಳುತ್ತಿಲ್ಲ… ಅವರಿಗೆ ಕೊಡುವ ಸಮಯ ಅವರಿಗೆ ಮೀಸಲಾಗಿದೆ. ನನ್ನ ಚಿತ್ರದ ಕಥೆಯ ಮಗುವೂ ಅಜ್ಜಿಯ ಕೈಹಿಡಿದು ಅಜ್ಜಿ ಕೈಯಲ್ಲಿದ್ದ ಕೋಲೂ ಹಿಡಿದು ನಡೆದು ಹೋಯಿತು, ನಾನೂ ಮುಂದೆ ನಡೆದೆ.









0 Comments