ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -4..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

9.4

ಗಣೇಶಗುಡಿ ಎಂಬ ಮೋಹಕ ಮಾಯೆ

ಎಷ್ಟು ಸಲ ಹೋದರೂ ತವರಿಗೆ ಮತ್ತೆ ಮತ್ತೆ ಹೋಗುವ ಹೆಣ್ಣುಮಗಳ ಹಾಗೆ ಗಣೇಶಗುಡಿ ಎಂಬ ಹಕ್ಕಿ ತವರಿನ ಕರುಳ ಬಂಧ. ಕುವೆಂಪು ಹೇಳಿದ್ದಾರೆ `ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ… ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ… ಹಾತೊರೆಯುತಿದೆ ಕಾತರಿಸುತಿದೆ ಮನಕೆ ಮನೆ ಗಿರ ಹಿಡಿದಿದೆ’ ಎಂದು. ನಾನು ಕೂಡಾ `ಹೋಗುವೆ ನಾ ನನ್ನ ಗಣೇಶಗುಡಿಗೆ,.. ಹಕ್ಕಿಯ ಬೀಡಿಗೆ ಚಿಲಿಪಿಲಿಯ ಚೆಲುವಿನ ನಾಡಿಗೆ, ಎಲ್ಲಿ ಕಾಲವು ತೇಲಿಸಿ ಸುಖದಲಿ ತಿಳೀಯದಂತೆಯೆ ಕಳೆವುದೋ… ಹಾತೊರೆಯುತಿದೆ ಕಾತರಿಸುತಿದೆ ಮನಕೆ ಹಕ್ಕಿ ಗಿರ ಹಿಡಿದಿದೆ’ ಎಂದು ಹಾಡಿಕೊಳ್ಳೋಣ ಎಂದರೆ ಹಾಡಲು ಬರದಿರುವುದರಿಂದ ಸದಾ ಹೇಳಿಕೊಳ್ಳುತ್ತಿರುವೆ… ಹೇಳಿಕೊಳ್ಳುತ್ತಲೇ ಇರುವೆ. 

ಹೌದು ನಾನು ಗಣೇಶಗುಡಿಗೆ ಹೋಗಿದ್ದೆ ಮೂರನೆಯ ಸಲ. ಆ ಸಲ ಹೋಗಲು ವಿಶೇಷ ಕಾರಣ ಹೊಸದಾಗಿ ಕೊಂಡ 600 mm ಲೆನ್ಸಿನಲ್ಲಿ ಗಣೇಶಗುಡಿಯ ಹಕ್ಕಿಗಳನ್ನು ಮತ್ತೂ ಹತ್ತಿರದಿಂದ ತೆಗೆಯಬೇಕೆನ್ನುವ ಸೆಳೆತ. ಲೆನ್ಸ್ ಕೊಂಡ ಬಳಿಕ ಮೊದಲ ಟೂರ್ ಉತ್ತಾರಖಂಡದ ಸತ್ತಾಲ್, ಚೋಪ್ತಾ ಆಗಿತ್ತು. ಗಣೇಶಗುಡಿಗೆ ಹೋಗಲೇಬೇಕೆನ್ನುವ ಆಸೆಯಿಂದ ಅಂಕೋಲಾ ಬಸ್ ಹತ್ತಿದೆ. ಅಲ್ಲಿಂದ ಡಾ. ಸೌಮ್ಯ ಜೊತೆ ಗಣೇಶಗುಡಿಗೆ ಹೊರಡಬೇಕಿತ್ತು. ಅವಳಿಗೂ ಮೂರುದಿನ ರೆಸ್ಟ್ ಮಾಡಿ ರಿಲ್ಯಾಕ್ಸ್ ಆಗಬೇಕಿತ್ತು, ನನಗೆ ಹಕ್ಕಿಗಳು ಬೇಕಿದ್ದವು. ಎರಡು ರಾತ್ರಿ ತಂಗುವಿಕೆಯ ಮೂರು ದಿನಗಳ ಯಾತ್ರೆ. ಹಳೆಯ ಕ್ಯಾಮೆರಾ, ಆದರೆ ಹೊಸ ಲೆನ್ಸ್. ಜೊತೆಗೆ ಹೊಸ ಟ್ರೈಪಾಡ್, 1.4, ಟಿ.ಸಿ, 2.00 ಟಿಸಿ. ಸಾಧನಗಳೊಡನೆ ತೆರಳಿದ್ದೆ. ರಾತ್ರಿ ಮೈಸೂರಿಗೆ ಬಂದು ಬಸ್ ಹತ್ತಿಸಿದ್ದ ನನ್ನ ಗಂಡ. ರೈಟ್ ಎಂದು ಹೇಳಿ ಬಸ್ ಮುಂದಕ್ಕೆ ಬಿಡಿಸಿದ್ದೆ.

ಬೆಳಿಗ್ಗೆ ಅಂಕೋಲಾದಲ್ಲಿ ಇಳಿದು ಮನೆ ತಲುಪಿದ್ದೆ ತಡ ಕ್ಯಾಮೆರಾ ಅಣಿಗೊಳಿಸಿ ರಣೋತ್ಸಾಹದಿಂದ ಸಿದ್ಧಳಾದೆ. ಗಣೇಶಗುಡಿಗೆ ಹೊರಡುವ ಮುನ್ನ ಒಂದು ದಿನ ಅಂಕೋಲೆಯಲ್ಲಿ, ಅದರ ಸುತ್ತಮುತ್ತ ಸುತ್ತುವ ತಿರುಗುವ ಪ್ಲ್ಯಾನ್ ಇತ್ತು. ಬೆಳ್‌ಬೆಳಿಗ್ಗೆ ತಿಂಡಿ ಗಿಂಡಿ ನೈ, ಸಮುದ್ರದ ದಂಡೆಗೆ ಸೈ ಎಂದು ಹೊರಟೆ. ಸ್ಕೂಟರ್ ಏರಿಸಿಕೊಂಡು ಕರೆದುಕೊಂಡು ಹೋದ ಸೌಮ್ಯ ಜಗತ್ತೇ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ಒಂದೆಡೆ ಕುಳಿತಳು. ನಾನೂ ಇನ್ನೊಂದೆಡೆ 100-400 ಲೆನ್ಸ್ ಹಾಕಿದ್ದ ಕ್ಯಾಮೆರಾ ಸಮೇತ ಸಿದ್ದಳಾದೆ. ನೋಡ್ತೀನಿ ನೂರಾರು ಸೀಗಲ್‌ಗಳು ಹಾರಿಹಾರಿ ಬರುತ್ತಿವೆ, ದಡದಲ್ಲಿ ಇಳಿಯುತ್ತಿವೆ. ಅತ್ತಿಂದಿತ್ತ, ಇತ್ತಿಂದತ್ತ ಗುಂಪಿನಲ್ಲಿ ಹಾರುತ್ತಿದ್ದವು. ಇದಕ್ಕಿಂತ ಇನ್ನೇನು ಸ್ವರ್ಗ ಬೇಕು. ಮರಳ ಸಾಮ್ರಾಜ್ಯದ ಮೇಲೆ ಉರುಳುರುಳಿ ಬೇಕೆನಿಸಿದ ಹಾಗೆ ಹಿಡಿದೆ, ಹಿಡಿದು ಒಳಗ್ಹಾಕಿಕೊಂಡೆ. ಅಲ್ಲಿಂದ ಎದ್ದೆ. ಸೌಮ್ಯ ಆಸ್ಪತ್ರೆಗೆ ಹೋಗಬೇಕಿತ್ತು. 

“ಆಂಟಿ ರೆಡಿಯಾಗಿಯೇ ಇರಿ ಹತ್ತು ಗಂಟೆಗೆ ಬರ್ತೀನಿ, ಕೊಲೀಗ್ ಮದುವೆ ಇದೆ, ಅದನ್ನು ಮುಗಿಸಿ ಮಧ್ಯಾಹ್ನ ಹತ್ತಿರದಲ್ಲೇ ಪ್ರವೀಣ್ ಗೆಳೆಯರ resort ಇದೆ Hornbill ಸಿಗುತ್ತವೆ ಅಲ್ಲಿಗೆ ಹೋಗೋಣ,” ಎಂದಳು. ನಾನು ಹೇಗಿದ್ದರೂ ಎವರ್ರೆಡಿ ಎಂದೆ. ಅವಳು ಮದುವೆಗೆ ರೆಡಿಯಾದಳು, ನಾನು ಹೇಗೂ ಕಾರಿನಲ್ಲಿ ನನ್ನ ಮಾಮೂಲಿ ಡ್ರೆಸ್ಸಿನಲ್ಲಿ. ಮದುವೆ ಮುಗಿಸುವ ತನಕ ಕಾರಿನಲ್ಲಿಯೇ ಇದ್ದೆ, ನಂತರ ಮಾಗೋಡು ಜಲಪಾತಕ್ಕೆ  ಹೊರಟಳು. ನಾನು! ನಾನೂ ಹಿಂಬಾಲಿಸಿದೆ ಅಷ್ಟೆ. ಎರಡು ಹಂತದಲ್ಲಿ ನೀರು ಬೀಳುವ ಜಲಪಾತ ಚೆನ್ನಾಗಿಯೇ ಇತ್ತು. ಆದರೆ ನಾನು ಬಂದಿದ್ದದು ಡಿಸೆಂಬರ್ ತಿಂಗಳಿನಲ್ಲಿ. ಬೇಡ್ತಿ ನದಿ ಕಣ್ಣೀರಿಗಿಂತ ಸ್ವಲ್ಪ ಜಾಸ್ತಿ ನೀರನ್ನು ಕೆಳಗೆ ಬೀಳಿಸುತ್ತಿತ್ತು. ಅದನ್ನೇ ವಿವಿಧ ಸ್ಪೀಡುಗಳಲ್ಲಿ ಹಿಡಿದೆ. ಅಲ್ಲಿಗೆ ಬಂದಿದ್ದ ಮಕ್ಕಳು ಉಯ್ಯಾಲೆ ಆಡುತ್ತಿದ್ದರು. ನಮ್ಮ ಮಗು ಸೌಮ್ಯ ಮತ್ತವಳ ಗೆಳತಿಗೆ ಉಯ್ಯಾಲೆಗೆ ಏರುವ ಬಯಕೆ ಹುಟ್ಟಿತು. ಉಯ್ಯಾಲೆ ಏರಿದರು, ತೂಗಿಕೊಂಡರು. ಅದನ್ನೂ ಸೆರೆ ಹಿಡಿದೆ, ಹೇಗೂ ಅಲ್ಲಿ ಹಕ್ಕಿಗಳಂತೂ ಕಾಣಸಿಗುತ್ತಿರಲಿಲ್ಲ. ಅಲ್ಲಿಂದ ರಿಸಾರ್ಟ್ ಬಳಿ ಬಂದೆವು. ದಾಟಲು ದೋಣಿಯೊಂದೆ ಸಾಧನ. ಬಳಿಕ ದೋಣಿಯೇರಿ ನದಿಯಲ್ಲಿ ಅಡ್ಡಾಡಿ ಮಲೆದಾಸ ಮಂಗಟ್ಟೆಗಳ ಚಿತ್ರ ತೆಗೆದೆ. ಅಷ್ಟರಲ್ಲಿ ರಿಸಾರ್ಟ್ ಒಡೆಯರು… “ಬನ್ನಿ ಬನ್ನಿ ಟೀ ಕುಡಿದು ಹೋಗಿ,” ಎಂದರು. ದೋಣಿಯಿಂದ  ಆ ಅಟ್ಟಣಿಗೆ ಹತ್ತಿ ಟೀ ಕುಡಿಯುವವಳಲ್ಲ. “ನೀನು ಹೋಗು ಸೌಮ್ಯ,” ಎಂದೆ. ಅವಳು ಟೀ ಕುಡಿದು ಬಜ್ಜಿ ಹಿಡಿದು ತಂದಳು. ತಿಂದು ಅಂಕೋಲಾ ಸೇರಿಕೊಂಡೆ.

ಬೆಳಿಗ್ಗೆ ಸಾರಥಿ ಸತೀಶನೊಡನೆ ಗಣೇಶಗುಡಿಯತ್ತ ನಾನು ಮತ್ತು ಸೌಮ್ಯ ಪಯಣ ಆರಂಭಿಸಿದೆವು. ಹಳೆಯ ಅನುಭವದಿಂದ ಯಲ್ಲಾಪುರದ ದಾರಿ ಹಿಡಿಯುವ ಬದಲು ಕಾರವಾರದ ರೂಟಿನಲ್ಲಿ ಹೊರಟೆವು. ಓಲ್ಡ್ ಮ್ಯಾಗಜೈನ್ ಹೌಸಿಗೆ ಬಂದಿಳಿದೆ. ಬರುತ್ತಿದ್ದಂತೆ ರೂಮಿನಲ್ಲಿ ಲಗೇಜ್ ಎಸೆದು ಕ್ಯಾಮೆರಾ ಟ್ರೈಪಾಡ್ ಸಮೇತ ಪರ್ಚ್ ಹತ್ತಿರ ಹೋದೆ. ಆದರೆ ಅಲ್ಲಿ ತಾಪತ್ರಯ ಎದುರಾಯಿತು. ಹಸಿರು ಪರದೆಯನ್ನು ಮತ್ತೂ ಮೇಲಕ್ಕೇರಿಸಿದ್ದರು. ಹಿನ್ನೆಲೆ ಯಥಾಪ್ರಕಾರ. ನನಗೆ ಬಹು ಪ್ರಿಯವಾದ asian paradise flycatcher ಬರುವ ಕಡೆಯಂತೂ ಹಸಿರು ಹಿನ್ನೆಲೆ ಇರಲಿಲ್ಲ. ಪರ್ಚ್ ಹಾಗೂ ಕ್ಯಾಮೆರಾ ಲೆವೆಲ್ ಹೊಂದಿಕೊಳ್ಳುತ್ತಿರಲಿಲ್ಲ. ಎಲ್ಲಕ್ಕಿಂತ ದೊಡ್ಡ ಸಮಸ್ಯೆ ನನಗೆ ತುಂಬಾ ಎತ್ತರವಾಗಿದ್ದ ಮರೆ. ಕಛೇರಿಯವರು ನನಗೊಂದು ಸ್ಟೂಲ್ ಕೊಡುವುದಾಗಿ ಹೇಳಿದರು.  ಮೊದಲೇ ನಿಲ್ಲುವುದೇ ಒಂದು ಸಮಸ್ಯೆ, ಅದರಲ್ಲೂ ಒಂದಡಿ ಅಗಲದ ಸ್ಟೂಲಿನ ಮೇಲೆ ನಿಲ್ಲುವುದೇ.. ಆ ಸ್ಟೂಲಿಗೂ ನನ್ನ ತೂಕಕ್ಕೂ ಹೊಂದಿಸಿಕೊಳ್ಳುವುದು ಸಾಧ್ಯ ಎನಿಸಲಿಲ್ಲ. ಎಡವಟ್ಟಾಯ್ತು, ತಲೆ ಕೆಟ್ಟೋಯ್ತು. ತಲೆ ಇನ್ನೂ ಪೂರಾ ಕೆಡುವ ಮೊದಲೇ ನಮ್ಮ ಹುಡುಗಿ ಅಲ್ಲಿಯ ನೌಕರರ ಸಹಾಯ ಪಡೆದು ಒಂದರ್ಧ ಅಡಿ ಎತ್ತರದ ಮಣ್ಣಿನ ಕಟ್ಟೆ ಕಟ್ಟಿಕೊಟ್ಟು, ಮಣ್ಣು ಜರುಗದ ಹಾಗೆ ಸುತ್ತಲೂ ಇಟ್ಟಿಗೆಯಿಂದ ಬಂಧಿಸಿ ನಿಂತು ತೆಗೆಯಲು ಅನುಕೂಲ ಮಾಡಿಕೊಟ್ಟಳು. ʼಥ್ಯಾಂಕ್ಸ್,ʼ ಎಂದು ಕಟ್ಟೆಯ ಮೇಲೇರಿ ಕ್ಯಾಮರಾಸ್ತ್ರದೊಡನೆ ಹಕ್ಕಿಯೊಡನೆ ದೃಷ್ಟಿಯುದ್ಧಕ್ಕೆ ಸಜ್ಜಾದೆ. ಸಾಲದೆಂಬಂತೆ ಆಗಾಗ ಸ್ಟೂಲ್ ಮೇಲೂ ಟ್ರಯಲ್ ಮಾಡಿ ಹಕ್ಕಿ ಹೆಕ್ಕಿಕೊಳ್ಳುತ್ತಿದ್ದೆ. 

ಸೌಮ್ಯ ಸಮಯ ಸಮಯಕ್ಕೆ ನನ್ನ, ತನ್ನ ಊಟ ತಿಂಡಿಯ ಕಡೆ ನಿಗಾ ಕೊಟ್ಟಳು. ಅಲ್ಲಿಗೆ ತಾಯ್ತಂದೆಯರ ಜೊತೆ ಬಂದಿದ್ದ ಮಕ್ಕಳ ಜೊತೆ ಮಕ್ಕಳಾಗಿ ಹಕ್ಕಿಯಾಗಿ ಆಟ ಆಡಿ ಕುಣಿದಳು. ಸೌಮ್ಯನಿಗೊಂದು ಕ್ಯಾಮೆರಾ ಕೊಟ್ಟೆ, “ನೀನೂ ಏನನ್ನಾದರೂ ತೆಗೆಯೋ,” ಎಂದು. ಆದರವಳು ಅದಕ್ಕೆ ರೆಸ್ಟ್ ಕೊಟ್ಟು, ತನಗೂ ರೆಸ್ಟ್ ಕೊಟ್ಟುಕೊಂಡು ಅಂಗಳದಲ್ಲಿದ್ದ ಕುರ್ಚಿಗಳಿಗೆ ನ್ಯಾಯ ಕೊಡುವಂತೆ ನಿದ್ದೆ ಮಾಡಿದಳು. ಹೊರಡುವ ದಿನ ಸಾರಥಿ ಬಂದು ಕಾಯುತ್ತಿದ್ದ. ಅಷ್ಟರಲ್ಲಿ ಡೈನಿಂಗ್ ಮಹಡಿಯಿಂದ ಕರೆ ಬಂದಿತು, “ಇಲ್ಲಿಂದ ಮಲಬಾರ್ ಟ್ರೋಜನ್ ಕಾಣಿಸುತ್ತಿದೆ ಬನ್ನಿ,” ಎಂದು. ಸುರುಳಿಯಾಕಾರದ ಮಹಡಿ. “ನೀವು ಹೋಗಿ ಆಂಟಿ ನಾವು ಕ್ಯಾಮೆರಾ ತರುತ್ತೇವೆ,” ಎಂದು ಸತೀಶನ ಜೊತೆಗೂಡಿ ಕ್ಯಾಮೆರಾ ಟ್ರೈಪಾಡ್ ಮಹಡಿಗೆ ತಂದುಕೊಟ್ಟಳು. 600 ಎಂ.ಎಂ ಹಾಕಿ ಕಾಕರಣೆ ಹಿಡಿದೆ. ಸಾಲದೆನಿಸಿ 1.4 ಟಿ.ಸಿ ಹಾಕಿದೆ. ಅದೂ ಸಮಾಧಾನ ಆಗದೆ 2.. ಟಿ.ಸಿಯನ್ನೂ ಹಾಕಿ ತೆಗೆದೆ. ಆದರೂ ಟ್ರೋಜನ್ ಸಮಾಧಾನದ ಸಾಮಗಾನ ಹಾಡಿಸಿತು ಎನ್ನುವಂತಿಲ್ಲ. ಅದೋ ಅದರಪ್ಪನಾಣೆ ಪರ್ಚಿಗೆ ಬರುವುದಿಲ್ಲ. ಹೋಗಲಿ ಸಿಕ್ಕಿದ ಕಡೆಯಲ್ಲಾದರೂ ಸರಿಯಾದ ಜಾಗದಲ್ಲಿ ಕೂರುತ್ತದೆಯೆ ಎಂದರೆ ಅದೂ ಇಲ್ಲ. ಸಿಕ್ಕಿದ ಸ್ವರೂಪವೇ ಕೃಪೆ ಎಂದು ಒಪ್ಪಿಸಿಕೊಂಡೆ. ಅದೂ ಹತ್ತಿರದ ಎಲ್ಲಾ ಕೊಂಬೆಗಳ ಮೇಲೂ ಜಾಗ ಚೆನ್ನಾಗಿದೆಯೆ ಎಂದು ಪರಿಶೀಲಿಸಿ ಹಾರಿ ಹೋಯಿತು. ಗಂಡು ಕಾಕರಣೆ ಕಾಣುತ್ತಿದೆ, ಹೆಣ್ಣೂ ಬರಬಹುದೆಂದು ಕಾದಿದ್ದೆ ಕಾದಿದ್ದು. ಆದರೆ ಅದು ನಾಪತ್ತೆ. ನಾನೂ ಮಹಡಿಯಿಂದ, ಕನಸಿನಿಂದ ಕೆಳಗಿಳಿದೆ.

ಸಿಕ್ಕಿದ ಹಕ್ಕಿಯನ್ನೆಲ್ಲಾ ತೆಗೆದದ್ದೇ ತೆಗೆದದ್ದು. ವಲಸೆ ಹಕ್ಕಿಗಳು ಹೆಚ್ಚಾಗಿ ಬಂದಿರಲಿಲ್ಲ. ಬಂದ ಹಾಗೆ ಹೊಡೆದು ತುಂಬಿಸಿಕೊಂಡೆ. ಏಷ್ಯನ್ ಪ್ಯಾರಡೈಸ್ ಗಂಡು ಹೆಣ್ಣುಗಳು `ಲೀಲಾ’ ಬಂದಿದೀಯಾ, ನಾವೂ ಬಂದಿದ್ದೇವೆ ಎಂದು ಹಾಜರಾತಿ ಹಾಕಿ ಹೋಗಿತ್ತು. ರಾಜಮುಡಿಯಂತೂ ನಾಲ್ಕಾರು ಸಲ ಬಂದು ಚಂದದ ಪೋಸ್ ನೀಡಿ ತಣಿಸಿತು. ಇದುವರೆಗಿನ ಬೆಸ್ಟ್ ಎನ್ನಬಹುದಾದ ಮೋನಾರ್ಕ್ ಚಿತ್ರ ಸಿಕ್ಕಿದ್ದಕ್ಕೆ ಪರಮಾನಂದ. ಇದ್ದ ಎರಡು ದಿನ ನಮ್ಮದೇ ಸಾಮ್ರಾಜ್ಯ. ಬೆಳ್ ಬೆಳಿಗ್ಗೆಯೇ ಸ್ಥಳಕ್ಕೆ ಹಾಜರು ಟ್ರೈಪಾಡ್ ಇಡಲು. ನಂತರ ಸಂಜೆ ಮಸುಕಾಗುವವರೆಗೂ ಅಲ್ಲೇ ಬಿಡಾರ, 

ಎರಡು ದಿನ ಮುಗಿದು ಮಂಡ್ಯಕ್ಕೆ ಹೊರಡಬೇಕಿತ್ತು. ನನ್ನ ನಾದಿನಿ ವೀಣಾ ನಾವು ಮುನ್ನಾರಿಗೆ ಹೋಗ್ತಾ ಇದೀವಿ, ನೀವೂ ಬನ್ನಿ ಎಂದು ಬೆಂಗಳೂರಿನಿಂದ ಕರೆದಿದ್ದೇ ತಡ, ರೆಡಿ ಎಂದೆ. ಮುನ್ನಾರಿಗಿಂತ ಹತ್ತಿರದಲ್ಲಿ ತಟ್ಟೆಕಾಡಿದೆ, ಆದರೆ ಹೋಗೀಯೇ ಬಿಡೋಣ ಎಂಬ ಕನಸು. ಹಾಗಾಗಿ ಒಪ್ಪಿಕೊಂಡ ನಾನು ಆ ರಾತ್ರಿ ಬಸ್ ಹತ್ತಿ ಮತ್ತೊಮ್ಮೆ ಗಣೇಶಗುಡಿಗೆ ಬರುವ ಯಾವ ಪ್ಲ್ಯಾನೂ ಇಲ್ಲದೆ ಬೆಂಗಳೂರಿನತ್ತ ಹೊರಟುಬಿಟ್ಟೆ. ಆದರೆ ಮನೆಗೆ ಬಂದ ಬಳಿಕ ಮತ್ತೂ ಒಂದು ಸಲ ಗಣೇಶಗುಡಿಗೆ ಹೋಗಲೇಬೇಕೆಂಬ ಆಲೋಚನೆ ಒಳಗೆ ಬಂದೇ ಬಂದಿತು ಕುಳಿತೂ ಕೊಂಡಿತು, ಲೀಲಾ ಮತ್ತೆ ಯಾವಾಗ ಮತ್ತೆ ಯಾವಾಗ ಎಂದು ಕೇಳುತ್ತಾ. 

2019ರ ಕೊನೆಯಲ್ಲಿ ನನ್ನ ಗಣೇಶಗುಡಿಯ ಮೊದಲ ಯಾತ್ರೆಯಲ್ಲಿ ಜೊತೆಗೂಡಿದ್ದ ತಂಗಿಯ ಮಗ ಡಾ. ನಿರೂಪ್ ಗಣೇಶಗುಡಿಯ ಕೆಪಿಸಿಎಲ್ ಆಸ್ಪತ್ರೆಗೆ ಸೇರುವ ಆಲೋಚನೆ ವ್ಯಕ್ತಪಡಿಸಿದ. ಹಕ್ಕಿ ಆಸೆ ನನ್ನದು, ಅವನು ಅಲ್ಲಿದ್ದರೆ ಯಾವಾಗ ಬೇಕಾದರೂ ಒಬ್ಬಳೇ ಹೋಗಿ ಬರಬಹುದು, ಎಷ್ಟು ದಿನ ಬೇಕಾದರೂ ಇರಬಹುದು. ಆದರವನು ಕುಟುಂಬವನ್ನು ಬೆಂಗಳೂರಲ್ಲಿ ಬಿಟ್ಟು ದೂರದಲ್ಲಿ ಇರಬೇಕಿತ್ತು. ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವತಃ ಗಣೇಶಗುಡಿಗೆ ಹೋಗಿ ಸ್ಥಳ ನೋಡಿದ. ಗಣೇಶಗುಡಿ ಅವನಿಗೆ ಮೋಡಿ ಮಾಡಿತು. ಅಲ್ಲಿನ ಪ್ರಶಾಂತ ವಾತಾವರಣ ಅವನ ಸ್ವಭಾವಕ್ಕೆ  ಸೂಕ್ತ ಎನಿಸಿ 2020ರ ವರ್ಷದ ಜನವರಿಯಲ್ಲಿ ಕೆಲಸಕ್ಕೆ ಸೇರಿಕೊಂಡೇಬಿಟ್ಟ. ತಂಗಿ 2020ರ ಮಾರ್ಚಿನಲ್ಲಿ ಹೋದಳು. ನಾನು ಅಸ್ಸಾಮಿನ ಪ್ರವಾಸ ಇದ್ದ ಕಾರಣ ಹೊರಡಲಾಗಲಿಲ್ಲ. ಮುಗಿಸಿದ ನಂತರ ಬರ್ತೀನಿ ಎಂದೆ. ಆದರೆ ಕೋವಿಡ್ ಕಾರಣದಿಂದ ಅಸ್ಸಾಮಿಗೂ ಹೊರಡಲಿಲ್ಲ. ಅವಳೂ ಎರಡು ತಿಂಗಳಿಗೂ ಹೆಚ್ಚು ಗಣೇಶಗುಡಿಯಲ್ಲಿ ಉಳಿದಳು. ಆ ದಿನಗಳಲ್ಲಿ ಎಷ್ಟೋ ಹಳೆಯ ನೆನಪುಗಳನ್ನು ಮೆಲುಕು ಹಾಕಿ ನೆನಪುಗಳನ್ನು ರೀಪ್ರಿಂಟ್ ಮಾಡಿಕೊಳ್ಳುತ್ತಿದ್ದೆವು.

ಗಣೇಶಗುಡಿಗೆ ಹೋಗಿಯೇ ಬಿಡುತ್ತೇನೆಂದು 2021ರ ಜನವರಿ ಕೊನೆಗೆ ಮತ್ತೊಮ್ಮೆ ಸ್ಕೆಚ್ ಎಳೆದೆ. ಆದರೆ ಹೋಗಬೇಕಾಗಿದ್ದ ದಿನಕ್ಕೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಾದ ದಿನ ನಿಗದಿತವಾಗಿತ್ತು. ಬೆಂಗಳೂರಿಗೆ ಬಂದಿದ್ದ ತಂಗಿಯ ಮಗ ಜೊತೆಗೆ ನನ್ನನ್ನು ಕರೆದೊಯ್ಯಲಾಗಲಿಲ್ಲ. ಇನ್ನೂ ಒಂದು ಸಲ ಪ್ರಯತ್ನಿಸಿದೆ- ಅಂಕೋಲಾದ ಡಾ.ಸೌಮ್ಯ ಮನೆಗೆ ಹೋಗಿ ನಾಲ್ಕೈದು ದಿನ ಕಾಲಿಗೆ ಚಿಕಿತ್ಸೆ ಪಡೆದು ಬಳಿಕ ಗಣೇಶಗುಡಿಯಲ್ಲಿ ಒಂದೆರಡು ದಿನ ಫೋಟೋಗ್ರಫಿ ಎಂದು ಗೆಳತಿ ಡಾ. ಸುಧಾ ಜೊತೆಗೆ ಹೊರಟೆ. ಅಂಕೋಲಕ್ಕೂ ಮುಟ್ಟಿದೆ. ಎರಡು ದಿನ ಕಳೆಯುವಷ್ಟರಲ್ಲಿ ನನ್ನ ಪ್ರತಿ ಟೂರಿಗೂ ಮೌನದಲ್ಲೇ ಸಮ್ಮತಿಸಿ ಕಳಿಸಿಕೊಡುತ್ತಿದ್ದ, ಬಸ್ಸಿಗೆ ಹತ್ತಿಸಿ ಹೋಗುತ್ತಿದ್ದ ನನ್ನ ಗಂಡ ಈ ಲೋಕ ಸಾಕೆಂದು ತನ್ನ ಪ್ರಾಣಪಕ್ಷಿಯ ಒಡನೆ ಮೇಲು ಲೋಕದೆಡೆಗೆ ಹೊರಟ ಕಾರಣ ಅಂಕೋಲಾದಿಂದ ಮಂಡ್ಯಕ್ಕೆ ಮರಳಿದೆ ಅಂತಿಮ ಕಾರ್ಯಗಳಿಗಾಗಿ. ಒಂದು ವರ್ಷ ಸ್ವಯಂ ಗೃಹಬಂಧನ ವಿಧಿಸಿಕೊಂಡೆ. ಯಾವ ಹಕ್ಕಿ ಟೂರಿಗೂ ಹೋಗಲಿಲ್ಲ. ಗಣೇಶಗುಡಿ ಮತ್ತೆ ಕರೆಸಿಕೊಳ್ಳುತ್ತದೆಯೋ ಏನೋ ಎಂದು ದಿನ ದೂಡುತ್ತಿದ್ದೆ.

ಆದರೆ 2022ರ ಏಪ್ರಿಲ್‌ನಲ್ಲಿ ತಂಗಿಯ ಮಗ ಡಾ.ನಿರೂಪ್ `ಲೀಲಕ್ಕಾ ನೀವು ಎಷ್ಟು ದಿನದ ಪ್ರೋಗ್ರಾಂ ಹಾಕಿದ್ದೀರಿ, ಅದಕ್ಕೆ ಎಷ್ಟು ವರ್ಷದ ಪ್ಲ್ಯಾನಿಂಗ್ ಮಾಡ್ತೀರಿ’ ಎಂದು ರೇಗಿಸುತ್ತಾ ಆಹ್ವಾನಿಸಿದ. ಮಂಡ್ಯದಿಂದ ಲೋಂಡಾಗೆ ಬಂದರೆ ನಾನು ಕರೆದುಕೊಂಡು ಬರುತ್ತೇನೆ, ಟೂರ್ ಫಿಕ್ಸ್ ಮಾಡಿಕೊಳ್ಳಿ ಎಂದ. ಎರಡು ವರ್ಷ ಕಾಲು ಕಟ್ಟಿಹಾಕಿಕೊಂಡು ಕುಳಿತ ನನಗೆ ಹಾರುವಾಸೆ ಆಯಿತು. ನನ್ನ ಕಾಲುಗಳ ಬಗ್ಗೆ ತುಂಬಾ ಯೋಚನೆ ಮಾಡುವ ಮಗಳಿಗೆ ಕ್ಷಣಕ್ಷಣಕೂ ಆತಂಕ. ಕೊನೆಗೆ ವೈದ್ಯನಿರುವಲ್ಲಿಗೇ ಹೋಗುತ್ತಿದ್ದೇನೆ ಎಂದು ಸಮಾಧಾನಿಸಿದೆ. ಲೋಂಡಾ ಟ್ರೈನ್ ಕ್ಯಾನ್ಸಲ್ ಆಗಿತ್ತು. ಸರಿ, ಮೈಸೂರಿನಿಂದ ನೇರ ಧಾರವಾಡಕ್ಕೆ ನಿಲ್ಲುವ ರೈಲಿಗೆ ಬುಕ್ ಮಾಡಿಸಿ ಮಗನಿಗೂ ಧಾರವಾಡಕ್ಕೆ ಬರಬೇಕೆಂದು ಕೇಳಿಕೊಂಡೆ. 

ಹೊರಡುವ ದಿನ ನನ್ನ ವೈದ್ಯ ಅಳಿಯ ಡಾ.ಚಂದ್ರಶೇಖರ್ ಬರೆದ ಮೊದಲ ಕವನ ಸಂಕಲನ ಅನುಭೂತಿ ಸಂಜೆ ಆರುಗಂಟೆಗೆ ಲೋಕಾರ್ಪಣೆಗೊಳ್ಳುತ್ತಿತ್ತು. ಅದರಲ್ಲೂ ಬಹು ಪರಿಚಿತರಾದ ಪ್ರೊ.ಎಂ.ಕೃಷ್ಣೇಗೌಡರೇ ಪುಸ್ತಕ ಬಿಡುಗಡೆ ಮಾಡುತ್ತಿದ್ದರು. ಸರಿ, ಎಂಟೂವರೆಯ ತನಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಮೈಸೂರಿಗೆ ಹೊರಟು ರೈಲಿನಲ್ಲಿ ಆಸೀನಳಾಗಿ ನಿಡಿದಾದ ಉಸಿರೆಳೆದೆ. ಲಗೇಜ್ ತಂದಿರಿಸಿದ ಸಾರಥಿ ನಿಲ್ದಾಣ ದಾಟುವ ಮೊದಲೇ ಅಲ್ಲಿಯವರೆಗೂ ಹಣಕಿ ಹಾಕದ ಮಳೆ ಧೋ ಎಂದು ಸುರಿಯಿತು. ನಾನಂತೂ ನಿರಾಳವಾಗಿದ್ದೆ. ಬೆಳಿಗ್ಗೆ ಎಂಟು ಗಂಟೆಗೆ ಧಾರವಾಡ ತಲುಪಿ, ಬಂದ ಮಗನ ಕಾರಿಗೆ ಹತ್ತಿ ಕಾಡಿನ ನಡುವೆ ಪಯಣ ಬೆಳೆಸಿ ಗಣೇಶಗುಡಿಯ ಓಲ್ಡ್ ಮ್ಯಾಗಜೈನ್ ಹೌಸಿನಲ್ಲಿ ಸೆಟಲ್ ಆದೆ.

ನಿಜ ಏನೆಂದರೆ ಏಪ್ರಿಲ್‌ನ ಈ ಅವಧಿಯಲ್ಲಿ ಅಲ್ಲಿ ಹೆಚ್ಚು ಹಕ್ಕಿಗಳು ಬರಲಾರವು ಎನ್ನುವ ಸತ್ಯ ಗೊತ್ತಿತ್ತು. ಎರಡು ವರ್ಷ ಮನೆಯಲ್ಲೇ ಉಳಿದ ಉಬ್ಬಸ ಕಳೆದುಕೊಂಡು ಮುಂದಿನ ಕೆಲವಾದರೂ ಟೂರ್‌ಗೆ ಹೊರಡಲು ಈ ಪ್ರವಾಸ ಅತ್ಯವಶ್ಯವಿದ್ದು ಸಮರ್ಥಳಾಗಿರುವುದನ್ನು ನನಗೆ ನಾನೇ ಸಾಬೀತು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಹಕ್ಕಿ ಸಿಗಲಿ ಬಿಡಲಿ ನಾನೇ ಮತ್ತೆ ಹಾರಬಯಸಿದ ಹಕ್ಕಿ ಎಂದುಕೊಂಡೆ ಬಂದಿಳಿದಿದ್ದೆ. ಬೇರೆ ಎಲ್ಲ ಸಲಕ್ಕಿಂತ ಈ ಸಲದ ಗಣೇಶಗುಡಿ ಯಾತ್ರೆ ವಿಭಿನ್ನ ಮತ್ತು ನಿರಾತಂಕ. ಮಗ, ದಿನಾ ಬೆಳಿಗ್ಗೆ ಬಿಟ್ಟು ಸಂಜೆ ಕರೆದುಕೊಂಡು ಹೋಗುತ್ತಿದ್ದ. ಬೆಳಿಗ್ಗೆ ಮಧ್ಯಾಹ್ನದ ಹೊಟ್ಟೆಪಾಡೂ ಅಲ್ಲಿಯೇ ಕಳೆದು ಹೋಗುತ್ತಿತ್ತು. ರಾತ್ರಿ ಮಾತ್ರ ಮನೆಯ ಊಟ. ಓಲ್ಡ್ ಮಾಗಜೀನ್ ಹೌಸಿನ ಸುರುಳಿ ಮೇಲ್ಮಹಡಿಯ ಮೆಟ್ಟಿಲುಗಳನ್ನು ಕಿತ್ತುಹಾಕಿ ಸರಳವಾಗಿ ಹತ್ತಬಹುದಾದ ಮೆಟ್ಟಿಲು ಹೊಂದಿಸಿದ್ದರು. ಆದರೂ ನನಗೆ ಕೆಳಗೆ ಊಟತಿಂಡಿ ತಂದುಕೊಟ್ಟು ಉಪಚರಿಸಿದರು. ಮ್ಯಾನೇಜರ್ ನದಾಫ್‌ರಿಂದ ಹಿಡಿದು ಪ್ರತಿಯೊಬ್ಬರೂ ಬಹಳ ವರ್ಷಗಳ ನಂತರ ಮನೆಗೆ ಮರಳಿದ ಮಗಳನ್ನು ಆದರಿಸುವಂತೆ ಆತಿಥ್ಯ ನೀಡಿದರು. ಅನ್‌ಸೀಜನ್ ಆಗಿದ್ದರಿಂದ ಹೆಚ್ಚು ಹಕ್ಕಿಪ್ರಿಯರೂ ಇರಲಿಲ್ಲ. ಹಾಗಾಗಿ ಆರಾಮವಾಗಿ ಬೇಕಾದ ಜಾಗದಲ್ಲಿ ಕ್ಯಾಮೆರಾ ಇರಿಸಿಕೊಂಡು, ಹಕ್ಕಿ ಇಲ್ಲದಿದ್ದಾಗ ಕುಳಿತುಕೊಳ್ಳಲು ಒಂದು ಟೀಪಾಯ್ ಹಾಕಿಸಿಕೊಂಡು, ಕಾಲುನೋವನ್ನು ಪೂರ್ಣ ಮರೆತು ಐದು ದಿನಗಳ ಕಾಲ ಮತ್ತೆ ಮತ್ತೆ ಬರುತ್ತಿದ್ದ ಅವವೇ ಹಕ್ಕಿಗಳನ್ನು ಸೆರೆ ಹಿಡಿಯುತ್ತಿದ್ದೆ.

ಮಗನೇ ಅಲ್ಲಿದ್ದ ಕಾರಣ ಹಿಂದಿನ ಟೂರುಗಳಲ್ಲಿ ಸಿಗದಿದ್ದ ಕೆಲವು ವಿಶೇಷ ನೋಟದ ಲಾಭ ಈ ಸಲದ ಪ್ರವಾಸದಲ್ಲಿ ದೊರೆಯಿತು. ಮಗ ಹೇಳಿದ, ಭಾನುವಾರ ಬಿಡುವಾಗಿದ್ದೇನೆ, ಸೈಕ್ಸ್ ವ್ಯೂಗೆ ಹೋದರೆ ಸೂರ್ಯಾಸ್ತಮಾನ ನೋಡಬಹುದು. ಐದು ದಿನ ಇರ‍್ತೀನಲ್ಲ ಎಂದು ಸಂಜೆಯ ಸೆಷನ್ ಅರ್ಧಕ್ಕೆ ಮೊಟಕುಗೊಳಿಸಿ ಅವನೊಡನೆ ಅಂಬಿಕಾನಗರಕ್ಕೆ ಹೊರಟು ಸೈಕ್ಸ್ ಪಾಯಿಂಟಿನಲ್ಲಿ ನದಿಯ ಹೊರಳುಗಳನ್ನು ಬೆಟ್ಟದ ತಿರುವಿನಲ್ಲಿ ರವಿರಾಯ ಮುಖ ಅಡಗಿಸಿಕೊಳ್ಳವುದನ್ನು ಕಣ್ತುಂಬಿಕೊಂಡೆ. ಮತ್ತೊಂದು ದಿನ ಸೂಪಾ ಅಣೆಕಟ್ಟೆಯಿಂದ ಸನ್‌ಸೆಟ್ ನೋಡಲು ಹೊರಡಿಸಿಕೊಂಡು ಸೂಪಾ ಡ್ಯಾಮಿನ ದರ್ಶನ ಮಾಡಿಸಿದ. ಆದರೆ ನಾವು ಹೋಗುವ ವೇಳೆಗೆ ಕಾರ್ಮೋಡಗಳೆಲ್ಲಾ ಸೂರ್ಯನ ಮೇಲೆ ಒಟ್ಟಿಗೆ ಅಟ್ಯಾಕ್ ಮಾಡಿದ ಕಾರಣ ಸೂರ್ಯ ಸಾರಿ ಹೇಳುತ್ತಾ ಅಸ್ತಮಿಸುವ ಮೊದಲೇ ಮೋಡಗಳ ಹಿಂದೆ ಮರೆಯಾದ. ಎಲ್ಲಾ ನೋಡಿ ಹೊರಡುವಷ್ಟರಲ್ಲಿ ಆಲಿಕಲ್ಲೂ ಬಿದ್ದು ತನ್ನ ಪ್ರತಾಪ ತೋರಿಸಿದ ಕಾರಣ ಮನೆ ಸೇರಿಕೊಂಡೆ, ಕೆಳಗಿಳಿದು ಆಲಿಕಲ್ಲು ಆರಿಸಿ ಬಾಯಿಗೆ ಹಾಕಿಕೊಳ್ಳಬೇಕೆಂಬ ಆಸೆಯನ್ನು ಒಳಗೇ ಉಳಿಸಿಕೊಂಡೆ. ಹಿಂದೆಲ್ಲಾ ಇಂತಹ ನೋಟ ಇರುತ್ತಲೇ ಇರಲಿಲ್ಲ. ಆದರೆ ಮಗನಿಂದಾಗಿ ಸಾಧ್ಯವಾಯಿತು.

ಭಾನುವಾರ ಮಧ್ಯಾಹ್ನ ಹನ್ನೆರಡರಿಂದ ಶುರುವಾದ ಹಕ್ಕಿ ಕ್ಲಿಕ್ ಗುರುವಾರ ಸಂಜೆ ಐದೂವರೆಯ ತನಕ ನಿರಂತರವಾಗಿ ನಡೆಯಿತು. ಈ ಪ್ರವಾಸದಲ್ಲಿ ಬ್ರೌನ್ ಹೆಡೆಡ್ ಬಾರ್ಬೆಟ್ ಎಂಬ ಲೈಫರ್ ಕಾಣುವುದರ ಜೊತೆಗೆ ಮಲಬಾರ್ ಟ್ರೋಜನ್‌ಗಳ ಒಳ್ಳೆಯ ಚಿತ್ರ ತೆಗೆಯಬೇಕೆಂಬ ಲಕ್ಷ್ಯ ಮಾತ್ರ ಇತ್ತು. ಅದರ ಮೇಲೂ ಏನಾದರೂ ಸಿಕ್ಕಿದರೆ ಎಕ್ಸ್ಟ್ರಾ ಲಾಭ. ಪ್ರತಿದಿನ ಬೆಳಿಗ್ಗೆಯೇ ಹಕ್ಕಿಗಳು ಬಂದಾವೆಂದು ನನ್ನ ಅಟೆಂಡೆನ್ಸ್ ಅಲ್ಲಿ ಹಾಕಿಯೇ ಇರುತ್ತಿದ್ದೆ. ಅಲ್ಲಿದ್ದ ಎರಡು ದಿನ ರಾತ್ರಿ ಸತತವಾಗಿ ಮಳೆ ಬಿದ್ದ ಕಾರಣ ಮರುದಿನ ಹಕ್ಕಿಗಳು ಬರುವಲ್ಲಿ ನಿಧಾನಿಸುತ್ತಿದ್ದವು. ಬಂದಾಗ ಬರಲಿ ಹಕ್ಕಿದೇವರ ದಯೆ ಇರಲಿ ಎಂದು ಧ್ಯಾನಸ್ಥಳಾಗಿ ಕೂರುತ್ತಿದ್ದೆ, ಬೋರಾದರೆ ನಿಲ್ಲುತ್ತಿದ್ದೆ, ಎರಡು ಹೆಜ್ಜೆ ನಡೆದಾಡುತ್ತಿದ್ದೆ. ಮತ್ತದೇ ಜಾಗಕ್ಕೆ ಬಂದು ಕಾಯುತ್ತಿದ್ದೆನೆ ಹೊರತು ಆ ಸ್ಥಳ ಬಿಟ್ಟು ಕದಲುತ್ತಿರಲಿಲ್ಲ. 

ಬೆಳ್‌ಬೆಳಗ್ಗೆ ಬರುವ ಹಕ್ಕಿಗಳು ನೀರಿನಲ್ಲಿ ಮುಳಗೇಳುವ ಬದಲು ಒಂದೆರಡು ಗುಟುಕು ಹೀರಿ ಹಾರಿಹೋಗುತ್ತಿದ್ದವು. ಬಂದ ಹಕ್ಕಿಗಳಾದರೋ ನೀಲಿಗೊರಳಿನ ಬಿಳಿಹೊಟ್ಟೆಯ ನೊಣಹಿಡುಕ, ವೈಟ್ ರಂಪಡ್ ಶಮಾ, ಕಪ್ಪು ಮುನ್ಚಾಚಿನ ಹರಟೆಮಲ್ಲ, ಪಫ್ ಥ್ರೋಟೆಡ್ ಹರಟೆಮಲ್ಲ, ಫುಲ್‌ವೆಟ್ಟಾ, ಟಿಕೆಲ್ಸ್ ಬ್ಲ್ಯೂ ನೊಣಹಿಡುಕ, ಹಳದಿ ಉಬ್ಬಿನ ಪಿಕಳಾರ, ಉರಿಗೊರಳಿನ ಪಿಕಳಾರ ಹೀಗೆ ಆರೆಂಟು ಹಕ್ಕಿಗಳ ಜೊತೆಗೆ ಆಗಾಗ ಪಚ್ಚೆ ಪಾರಿವಾಳದ ಆಗಮನ. ಯಾವೇ ಬಂದಾಗಲೂ ಕ್ಯಾಮೆರಾದಿಂದ ರಾಯಲ್ ಸಲ್ಯೂಟ್ ಕ್ಲಿಕ್ ಕೊಡಿಸುತ್ತಿದ್ದೆ. ಅದರಲ್ಲೂ ಮೊನಾರ್ಕ್ ಬಂದಾಗ ಬಿಡುವಿಲ್ಲದ ಕ್ಲಿಕ್ ಕ್ಲಿಕ್… ಅದೇನೋ ಮೋಹ, ತೀರದ ದಾಹ ಪುಟ್ಟನೀಲ ಹಕ್ಕಿ ಕಂಡರೆ. ನೂರರಗಟ್ಟಲೆ ಫೋಲ್ಡರುಗಳಲ್ಲಿ ಬಂಧಿಯಾಗಿದ್ದರೂ ಬಿಡದ ಮೋಹ. ಅದಕ್ಕೆ ಅಲ್ಲಿ ಬಂದ ಪಕ್ಷಿವೀಕ್ಷಕಿ ಬೆಂಗಳೂರಿನ ಆಶಾ ಹೇಳಿದ್ದು ಹೀಗೆ: ಮೇಡಂ ನೀವು ಮೊನಾರ್ಕ್ ಬಂದರೆ ನಿಮ್ಮ ಬುಲೆಟ್ ಷಾಟ್ ಸೀರಿಯಸ್ಸಾಗಿ ಹೊಡೆಯುತ್ತಲೇ ಇರುತ್ತೀರಿ ಎಂದು. ಮೊದಲ ದಿನದಿಂದ ಕೊನೆಯ ದಿನದ ತನಕ ದಿನಕ್ಕೆ ನಾಲ್ಕಾರು ಸಲ ಬಂದು ಹೋಗುತ್ತಿದ್ದ ಕರಿಮುಡಿ ನೀಲಿ ನೊಣಹಿಡುಕನನ್ನು ಬಿಡದೆ ಕಟ್ಟಿಹಾಕಿದೆ ನನ್ನ ಕ್ಯಾಮೆರಾದಲ್ಲಿ.

ಒಂದು ದಿನ ಹೀಗೆ ಚಿತ್ರವಾಗಿಸುವ ಕಾಯಕದಲ್ಲಿ ಇದ್ದಾಗ ಟ್ರೋಜನ್ ಕರೆ ಕೇಳಿತು. ಎಲ್ಲೆಂದು ಪುಂಡಲೀಕ ಹುಡುಕಿ ಹೇಳುವಷ್ಟರಲ್ಲಿ ಮರದ ಕೊಂಬೆಯ ಮರೆಗೆ ಹಾರಿತು. ಅಲ್ಲಿಂದ ಮತ್ತೊಂದು ಮರದ ಟೊಂಗೆಗೆ ಹಾರಿ ಬಂದಾಗ ನಾಲ್ಕೈದು ಕ್ಲಿಕ್‌ಗೆ ಮಾತ್ರ ಹಿಂಬದಿ ತೋರಿಸಿ ಹಾರಿಹೋಯಿತು. ಅಲ್ಲಿದ್ದಷ್ಟು ದಿನವೂ ಬಸವಳಿಯುವಷ್ಟು ಹುಡುಕಿದರೂ ಮತ್ತದು ಬರಲೇ ಇಲ್ಲ. ಈ ಸಲವಾದರೂ ಟ್ರೋಜನ್‌ನ ಚಂದದ ಚಿತ್ರ ತೆಗೆಯುವ ಆಸೆ ಹೊತ್ತು ಬಂದವಳಿಗೆ ಬೆನ್ನು ಹಾಕಿ ಮರೆಯಾಗಬೇಕೇ?

ಒಂದು ದಿನದ ಬೆಳಗನ್ನು ದಾಂಡೇಲಿಗೆ ಮೀಸಲಿಡಬೇಕೆಂದು ನಿರ್ಧರಿಸಿದ್ದೆ. ಮಗನ ಕಾರಿಗೆ ಮನೋಜನನ್ನು ಸಾರಥಿಯಾಗಿಸಿಕೊಂಡು ದಾಂಡೇಲಿಯ ಟಿಂಬರ್ ಯಾರ್ಡಿಗೆ ಬೆಳಿಗ್ಗೆ ಏಳರೊಳಗೆ ಹೋಗಿ ನಾನೇನೋ ಸೇರಿಕೊಂಡೆ. ಆದರೆ ಭಾಸ್ಕರ ಮಹಾರಾಜ ಕುಳುಕುಳು ಮಂಜು ತುಂಬಿದ್ದ ಮಬ್ಬಿನಲ್ಲಿ ಮಂಕಾಗಿ ಹೋಗಿದ್ದು ನಿರಾಶೆಯ ಮೂಡಿಗೆ ನನ್ನನ್ನು ತಳ್ಳಿಬಿಟ್ಟಿದ್ದ. ಆದರೂ ಛಲಬಿಡದ ತ್ರಿವಿಕ್ರಮನಂತೆ ಯಾರ್ಡಿನಲ್ಲಿ ಅಲೆದಾಡುತ್ತಾ ಸೂರ್ಯ ಹೊರಬರಲು ಕಾಡುತ್ತಿದ್ದೆ, ಕಾಯುತ್ತಿದ್ದೆ. ಅವನು ಬರುವತನಕ ಹೆಚ್ಚಿನ ISO ಹಾಕಿಕೊಂಡು ಹಕ್ಕಿ ಅರಸುತ್ತಿದ್ದೆ. ಮಲೆದಾಸ ಮಂಗಟ್ಟೆ ಒಂದಿಷ್ಟು ಹೊತ್ತು ಕ್ಯಾಮೆರದ ಹಸಿವಿಗೆ ಆಹಾರವಾದರೆ ಮತ್ತೊಂದೆಡೆ ಮಲೆ ಬೂದುಮಂಗಟ್ಟೆಯೂ ಒಳಸೇರಿದ. ಆದರೆ ನನ್ನ ಹುಡುಕಾಟ ಕಂದುತಲೆಯ ಕುಟ್ರನಿಗೆ ಮೀಸಲಿತ್ತು. ಆಲದ ಹಣ್ಣಿನಾಸೆಗೆ ಬರುತ್ತದೆಂದು ಆ ಮರದ ಅಡಿಯಲ್ಲೇ ಕಾಯುತ್ತಿದ್ದೆ. ಮರದ ಮೇಲ್ತುದಿಯಲ್ಲಿ ಕಾಣಸಿಕ್ಕಿದ್ದು ಬೂದುನೆತ್ತಿಯ ಹಸಿರು ಪಾರಿವಾಳಗಳು ಮಬ್ಬು ಬೆಳಕಿನಲ್ಲಿ ಮುದುರಿ ಕುಳಿತಿದ್ದವು. ಅಲ್ಲೇ ಠಳಾಯಿಸುತ್ತಿದ್ದವಳಿಗೆ ಬಿಸಿಲು ಬರುತ್ತಿದ್ದಂತೆ ಪಾರಿವಾಳಗಳು ಗರಿಗೆದರಿ ಅತ್ತಿಂದಿತ್ತ ಹಾರಿ ಕುಳಿತು ಹಣ್ಣು ತಿಂದು ಹಾರಿಹೋದವು. 

ಕ್ಯಾಮೆರ ಎತ್ತಿಕೊಂಡು ಮೆಲ್ಲಮೆಲ್ಲನೆ ಮರದ ಒಂದು ಬದಿಗೆ ಬಂದೆ. ಕುಟ್ರ ಹಾರಿ ಬಂದಿತೆನಿಸಿ ಕ್ಯಾಮೆರಾ ಕೀಲಿಸಿ ನಿಂತೆ. ಮೆಲ್ಲನೆ ಬಂದ ಕುಟ್ರ ಬಾಯಿ ತುಂಬಾ ಹಣ್ಣು ತುಂಬಿಕೊಂಡು ಮೆಲ್ಲತೊಡಗಿತು. ನನ್ನ ಲೈಫರ್ ಆಸೆ ಸಂಪೂರ್ಣವಾಯಿತು. ಮತ್ತೊಂದು ಸಲವೂ ಬಂದು ಇನ್ನಷ್ಟು ಕ್ಲಿಕ್‌ಗಳು ಸಿಕ್ಕವು. ಮತ್ತಷ್ಟು ಕ್ಲಿಕ್ಕಿಸುವ ಆಸೆಯಿಂದ ನಿಂತೆ, ಕುಳಿತೆ, ನಿಂತೆ. ಅಷ್ಟು ಹೊತ್ತಿಗೆ ಟಿಂಬರ್ ಯಾರ್ಡಿಗೆ ಮರ ಹಾಕಲು ಜನ ಬಂದರು. ಗದ್ದಲವೂ ಹೆಚ್ಚಾಯಿತು. ಕಾರು ಹತ್ತಿ ಮರದ ಕೆಳಗೆ ಕುಳಿತೆ. ಆಗ ಹಾರಿಬಂದ ಮರಗುಬ್ಬಿ ಮತ್ತೆ ಕ್ಯಾಮೆರಾ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿತು. ಅದನ್ನು ಟ್ರೈಪಾಡಿಗೆ ಹಾಕಲೂ ಬಿಡುವಾಗದೆ ಹಾಗೆ ಒತ್ತತೊಡಗಿದೆ. ನಂತರ ಬಂದ ಮಕ್ಮಲ್ ನೆತ್ತಿಯ ಮರಗುಬ್ಬಿಯೂ ಮರದ ಬುಡದುದ್ದಕ್ಕೂ ಅಡ್ಡಾಡಿ ಕೈಗೆ ಸಿಕ್ಕಿದರು. ಸಾಕು ನಡೆಯಪ್ಪಾ ಮನೋಜ ಎಂದು ಮತ್ತೆ ಎಂದಿನ ಓಲ್ಡ್ ಮ್ಯಾಗಜೈನ್ ಹೌಸಿಗೆ ಬಂದು ಪ್ರತಿಷ್ಠಾಪಿತಳಾದೆ.ಐದನೇ ದಿನ ಕೊನೆಯ ಕ್ಲಿಕ್ ಮುಗಿಸಿ ಕಾಲು ತಾಸಿನೊಳಗೆ ಸಿದ್ಧಳಾಗಿ ಕಾರೇರಿ ಧಾರವಾಡ ಸೇರಿ ರೈಲು ಹತ್ತಿ ಮಂಡ್ಯದತ್ತ ಮರುಪಯಣ ಬೆಳೆಸಿದೆ. ಓಲ್ಡ್ ಮ್ಯಾಗಜೈನ್ ಹೌಸಿನ ಎಲ್ಲರ ಬಳಿ ಮತ್ತೆ ಡಿಸೆಂಬರ್ ಅಥವಾ ಜನವರಿಗೆ ಬಂದೇ ಬರುತ್ತೇನೆಂದು ಹೇಳಿದ್ದೇನೆ, ಅವರೂ `ಬನ್ನಿ ಮೇಡಂʼ ಎಂದು ಪ್ರೀತಿಯಿಂದ ಕರೆದಿದ್ದಾರೆ. ಕೆಲವು ಪ್ರೀತಿಯ ಹಕ್ಕಿಗಳಿಗಾಗಿ ಮತ್ತೆ ಹೋಗುವ ಮನಸಂತೂ ಇದೆ. ಕಾಯುವಿಕೆಗಿಂತ ತಪವಿಲ್ಲ. ಹಾಗಾಗಿ ಆ ಅವಕಾಶಕ್ಕಾಗಿ ನಿರೀಕ್ಷಿಸುತ್ತಲೇ ಇರುತ್ತೇನೆ. ಕಾಯುವ ತಪಕ್ಕೆ ಫಲವೂ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆಯೂ ಇದೆ..

‍ಲೇಖಕರು Admin

1 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading