ಲಿಬ್ಯಾದಲ್ಲಿ ಅನೇಕ ವರ್ಷಗಳನ್ನು ಕಳೆದಿರುವ ಉದಯ್ ಇಟಗಿ ಅಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳನ್ನು ಹತ್ತಿರದಿಂದ ನೋಡಿರುವವರು.
ಹತ್ತಿರವಿದ್ದೂ ಒಂದು ದೂರ ಉಳಿಸಿಕೊಂಡು ಅವನ್ನು ವಿಶ್ಲೇಷಿಸಬಲ್ಲವರು.
ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನ ಮೂರು ಭಾಗಗಳಲ್ಲಿ ’ಅವಧಿ’ ಓದುಗರಿಗಾಗಿ
***
ಗಡಾಫಿ ಮಾಡಿದ ಒಂದಷ್ಟು ತಪ್ಪುಗಳು
ಉದಯ್ ಇಟಗಿ

ಲಿಬಿಯಾದಲ್ಲಿ ಕ್ರಾಂತಿ ಎದ್ದಾಗಿನಿಂದ ನಾನು ಗಡಾಫಿಯ ಬಗ್ಗೆ ಬರೆಯುತ್ತಲೇ ಬಂದಿದ್ದೇನೆ. ಅವನಿದ್ದ ಲಿಬಿಯಾದ ಬಗ್ಗೆ ಹಾಗೂ ಅವನ ನಂತರದ ಲಿಬಿಯಾದ ಬಗ್ಗೆ ನಾ ಕಂಡಂತೆ ನೇರಾನೇರ ಬರಿದಿದ್ದೇನೆ. ಹಾಗೆ ನಾನು ಆತನ ಬಗ್ಗೆ ಬರೆದು ಆನಲೈನ್ ಪತ್ರಿಕೆಗಳೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮತ್ತು ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದರೆ ಅವನ್ನು ಓದಿದ ಬಹಳಷ್ಟು ಜನ ಗಡಾಫಿಯ ಕುರಿತಂತೆ ನನ್ನನ್ನು ಹೀಗೆ ಕೇಳಿದ್ದಾರೆ. “ನೀವು ಗಡಾಫಿಯ ಬೆಂಬಲಿಗರೇ? ಅಂದರೆ ನೀವು ಸರ್ವಾಧಿಕಾರವನ್ನು ಬೆಂಬಲಿಸುತ್ತೀರಾ? ಅವನು ನಿಜಕ್ಕೂ ಅಷ್ಟು ಒಳ್ಳೆಯವನಾಗಿದ್ದನೆ? ಹಾಗಾದರೆ ನಿಮ್ಮ ಪ್ರಕಾರ ಗಡಾಫಿ ಯಾವ ತಪ್ಪುಗಳನ್ನೂ ಮಾಡಿಲ್ಲವೇ?” ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಆಗೆಲ್ಲಾ ನಾನವರಿಗೆ “ಖಂಡಿತ ನಾನು ಸರ್ವಾಧಿಕಾರದ ಬೆಂಬಲಿಗನಲ್ಲ. ಆದರೆ ಸ್ವಂತ ಲಾಭಕ್ಕಾಗಿ ತಮಗೆ ತಲೆ ಬಾಗದವರ ಸರ್ವಾಧಿಕಾರಿಗಳ ಬಗ್ಗೆ ಏನೇನೋ ಕಥೆಗಳನ್ನು ಕಟ್ಟಿ, ಜನರ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಶ್ಚಿಮದವರ ಧೋರಣೆಯನ್ನು ಖಂಡಿಸುತ್ತೇನೆ. ಒಂದು ವೇಳೆ ಅವರು ಸರ್ವಾಧಿಕಾರವನ್ನು ಕಿತ್ತೊಗೆಯುವದಾದರೆ ಎಲ್ಲ ಕಡೆ ಕಿತ್ತೊಗೆಯಬೇಕು. ಅದು ಬಿಟ್ಟು ಜೋರ್ಡಾನ್, ಖತಾರ್, ಸೌದಿ, ಯೇಮನ್, ಬಹ್ರೇನ್, ದುಬೈ ಮುಂತಾದ ರಾಷ್ಟ್ರಗಳಲ್ಲಿನ ಸರ್ವಾಧಿಕಾರವನ್ನು ಯಾಕೆ ಬೆಂಬಲಿಸುತ್ತಾರೆ?
ಯಾಕೆಂದರೆ ಅವರೆಲ್ಲಾ ಅವರಿಗೆ ತಲೆಬಾಗುತ್ತಾರೆ ಹಾಗೂ ಅವರಿಂದ ಅವರಿಗೆ ಸಾಕಷ್ಟು ಲಾಭವಿದೆ. ಹಾಗಾಗಿ ಸುಮ್ಮನಿದ್ದಾರೆ. ಮೇಲಾಗಿ ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಸ್ಥಾಪಿತವಾದರೆ ಅದರ ಹೆಸರಿನಲ್ಲಿ ಸುಲಭವಾಗಿ ಒಳಗೆ ನುಗ್ಗಿ ಅಲ್ಲಿಯ ಅಪಾರ ನೈಸರ್ಗಿಕ ಸಂಪತ್ತನ್ನು ದೋಚುಬಹುದು.” ಎಂದು ಹೇಳಿ ಸುಮ್ಮನಾಗಿದ್ದೆ. ತದನಂತರದಲ್ಲಿ ಅವರು ಕೇಳಿದ್ದು ಸರಿಯಾಗಿದೆ. ನಾನೇಕೆ ಒಮ್ಮೆ ಇದರ ಬಗ್ಗೆ ಬರೆಯಬಾರದು ಎಂದು ಯೋಚಿಸಿ ಈ ಸಾರಿ ನಾನು ಗಾಡಾಫಿ ಮಾಡಿದ ತಪ್ಪುಗಳ ಬಗ್ಗೆ ಬರೆಯುತ್ತಿದ್ದೇನೆ. ಹಾಗೆಂದೇ ನಾನು ನನಗೆ ಪರಿಚಯವಿರುವ ಅನೇಕ ಪ್ರಜ್ಞಾವಂತ ಲಿಬಿಯನ್ರ ಬೆನ್ಹತ್ತಿ ಅವರಿಂದ ಮಾಹಿತಿ ಸಂಗ್ರಹಿಸಿದೆ. ಅವರ ಪ್ರಕಾರ ಅವನು ಮಾಡಿದ ತಪ್ಪುಗಳೇನು? ಅವುಗಳಲ್ಲಿ ಅವನ ವ್ಯಯಕ್ತಿಕ ತಪ್ಪುಗಳೆಷ್ಟು? ಅವನ ರಾಜಕೀಯ ತಪ್ಪುಗಳೆಷ್ಟು? ಅವನ ಅವನತಿಗೆ ಕಾರಣವಾದ ತಪ್ಪುಗಳೆಷ್ಟು? ಅಂತರಾಷ್ಟ್ರಿಯ ಸಮುದಾಯ ಗುರುತಿಸಿದ ತಪ್ಪುಗಳೆಷ್ಟು? ಹಾಗೂ ಅವನ ಆಡಳಿತದಲ್ಲಿದ್ದ ಲೋಪದೋಷಗಳಾವವು? ಈ ಎಲ್ಲ ವಿಷಯಗಳ ಬಗ್ಗೆ ಈ ಸಾರಿ ಇಲ್ಲಿ ವಿಶ್ಲೇಷಿಸುತ್ತಿದ್ದೇನೆ.
ಆಫ್ರಿಕಾ ಖಂಡವನ್ನು ಒಗ್ಗೂಡಿಸುವ ಅದಮ್ಯ ಬಯಕೆ: ಗಡಾಫಿಗೆ 1999 ರಿಂದಾಚೆ ಇಡಿ ಆಫ್ರಿಕಾ ಖಂಡವನ್ನು ಒಂದುಗೂಡಿಸಬೇಕು ಎನ್ನುವ ಅದಮ್ಯ ಬಯಕೆಯುಂಟಾಯಿತು. ಹಾಗೆ ನೋಡಿದರೆ ಈ ಬಯಕೆಯಿದ್ದುದು ಆಫ್ರೋ-ಅಮೆರಿಕನ್ನಾದ ಮಾರ್ಕಸ್ ಗ್ರೇವಿ ಎಂಬಾತನಿಗೆ. ಆತನೇ ಮೊಟ್ಟಮೊದಲಿಗೆ ”United States of Africa” ಎಂಬ ಪದವನ್ನು ಹುಟ್ಟುಹಾಕಿದ. ಆದರೆ ಗಡಾಫಿ ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋದನು. ಆತ ಇಡಿ ಆಫ್ರಿಕಾ ಖಂಡವನ್ನು ಒಗ್ಗೂಡಿಸುವದಲ್ಲದೆ ಅಲ್ಲಿ ಒಂದೇ ತೆರದ ಬಂಗಾರದ ನಾಣ್ಯವನ್ನು ಚಲಾವಣೆಗೆ ತಂದು ಅದರ ಮೂಲಕವೇ ಇಡಿ ಆಫ್ರಿಕಾ ಖಂಡದ ವ್ಯಾಪಾರ ವಹಿವಾಟವನ್ನು ನಡೆಸಬೇಕೆಂದುಕೊಂಡಿದ್ದ. ಒಂದುವೇಳೆ ಅವನಂದುಕೊಂಡಂತೆ ಬಂಗಾರದ ದಿನಾರನ್ನು ಚಲಾವಣೆಗೆ ತಂದಿದ್ದರೆ ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರಗಳು ತಮ್ಮ ಸಂಪನ್ಮೂಲಗಳಿಗೆ ತಕ್ಕ ಬೆಲೆಯನ್ನು ಕೇಳಿ ಬಹಳ ಬೇಗನೆ ಶ್ರೀಮಂತವಾಗಿ ಸಾಲದಿಂದ ಮತ್ತು ಬಡತನದಿಂದ ಹೊರಬರುವ ಸಾಧ್ಯತೆಗಳಿದ್ದವು. ಮಾತ್ರವಲ್ಲ ಬರೀ ಬಂಗಾರದ ದಿನಾರಿನಲ್ಲಿ ವ್ಯಾಪಾರ ವಹಿವಾಟು ನಡೆದುಹೋಗಿದ್ದರೆ ಅಷ್ಟಾಗಿ ಚಿನ್ನವನ್ನು ಹೊಂದಿರದ ಅಮೆರಿಕಾ, ಬ್ರಿಟನ್ ಮತ್ತು ಯೂರೋಪ್ ರಾಷ್ಟ್ರಗಳು ಆ ಚಿನ್ನದ ನಾಣ್ಯಕ್ಕೆ ತಕ್ಕ ಬೆಲೆಯನ್ನು ಕೊಡಲಾಗದೆ ದಿವಾಳಿಯೇಳುವ ಸಂಭವವಿತ್ತು.

ಮೇಲಾಗಿ ಗಡಾಫಿಯ ಈ ಯೋಜನೆಗೆ ಆಫ್ರಿಕಾದ ಖಂಡದ ಬಹಳಷ್ಟು ನಾಯಕರುಗಳ ವಿರೋಧವಿತ್ತು. ಏಕೆಂದರೆ ಒಂದು ಸಾರಿ “ಆಫ್ರಿಕನ್ ಯೂನಿಯನ್” ಅಂತಾದ ಮೇಲೆ ಈಗಾಗಲೇ “ರಾಜರುಗಳ ರಾಜ” ಎನಿಸಿಕೊಂಡಿದ್ದ ಗಡಾಫಿಯೇ ಅದಕ್ಕೆ ನಾಯಕನಾಗುತ್ತಾನೆ ಹಾಗೂ ಆತನ ಪ್ರಭಾವಿ ವ್ಯಕ್ತಿತ್ವದ ಮುಂದೆ ತಮ್ಮ ವ್ಯಕ್ತಿತ್ವ ಕಳಾಹೀನಗೊಳ್ಳಬಹುದು, ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಬರಬಹುದು, ಹಾಗೂ ತಾವು ತೆಗೆದುಕೊಂಡ ನಿರ್ಧಾರಗಳನ್ನು ಈತ ತಳ್ಳಿಹಾಕಬಹುದು ಎಂಬ ಭಯ ಅವರಿಗಿತ್ತು. ಹಾಗಾಗಿ ಅವರು ಆಫ್ರಿಕನ್ ಯೂನಿಯನ್ ಬದಲಿಗೆ ಎಕನಾಮಿಕ್ ಕಮ್ಯೂನಿಟಿ ಆಫ್ ಆಫ್ರಿಕಾವನ್ನು ಸ್ಥಾಪಿಸುವದರಲ್ಲಿ ವಿಶೇಷ ಒಲವು ತೋರಿಸಿದ್ದರು. ಆದರೆ ಗಡಾಫಿ “ಆಫ್ರಿಕನ್ ಯೂನಿಯನ್” ನ್ನು ಸ್ಥಾಪಿಸಲೇಬೇಕೆಂದು ಪಣ ತೊಟ್ಟು ನಿಂತಿದ್ದ. ಆದರೆ ಅತ್ತ ಅವನ ಈ ನಿರ್ಧಾರದಿಂದಾಗೊ ಕಂಗೆಟ್ಟ ಪಶ್ಚಿಮದ ರಾಷ್ಟ್ರಗಳು ಆತನನ್ನು ಹೇಗಾದರು ಮಾಡಿ ಮುಗಿಸಲೇಬೇಕೆಂದು ಪಣತೊಟ್ಟು ನಿಂತವು.
ಆತ ತೈಲ ಬೆಲೆಯನ್ನು ಏರಿಸಿದ್ದು: ಮೌಮರ್ ಗಡಾಫಿ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಅತ್ಯಂತ ಚಾಣಾಕ್ಷ ಪಾತ್ರವನ್ನು ವಹಿಸಿದ. 1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧಲಾಭವನ್ನು ಹೊಡೆಯುತ್ತಿದ್ದವು. ತೈಲಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ 1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ.
1969 ರವರೆಗೂ ಒಂದು ಬ್ಯಾರೆಲ್ನ ತೈಲದ ಬೆಲೆ ಬರೀ 40 ಅಮೆರಿಕನ್ ಸೆಂಟ್ಗಳಷ್ಟು ಮಾತ್ರವಿತ್ತು. ಆದರೆ 1969 ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ತೈಲ ಬೆಲೆ ಏರಿಕೆಗೆ ಸಂಬಧಪಟ್ಟ ಹಾಗೆ ಒಂದು ಐತಿಹಾಸಿಕ ದಾಖಲೆಯನ್ನೇ ಬರೆದ. ತನ್ನ ನೇತ್ರತ್ವದಲ್ಲಿ ತೈಲ ಉತ್ಪಾದನೆಯ ಇತರೆ ಅರಬ್ ರಾಷ್ತ್ರಗಳನ್ನು ಒಗ್ಗೂಡಿಸಿಕೊಂಡು ತೈಲ ಬೆಲೆ ಏರಿಕೆಗಾಗಿ ಒಂದು ದೊಡ್ಡ ಹೋರಾಟವನ್ನೇ ಮಾಡಿದ. ತಾವು ಉತ್ಪಾದಿಸುವ ತೈಲಕ್ಕೆ ಪಶ್ಚಿಮದವರು ತಕ್ಕ ಬೆಲೆಯನ್ನು ಕೊಡಲೇಬೇಕೆಂದು ಪಟ್ಟು ಹಿಡಿದ. ಇಲ್ಲವಾದಲ್ಲಿ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಪರಿಣಾಮವಾಗಿ ಆ ಕೂಡಲೇ ಒಂದು ಬ್ಯಾರೆಲ್ ತೈಲದ ಬೆಲೆಯನ್ನು 20 ಡಾಲರ್ಗಳಿಗೆ ಏರಿಸಲಾಯಿತು. ಮುಂದೆ 1973 ರಲ್ಲಿ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ನಡೆದ ಆರು ದಿನಗಳ ಯುದ್ಧದ ಅವಧಿಯಲ್ಲಿ ಒಂದು ಬ್ಯಾರಲ್ ಬೆಲೆ 40 ಡಾಲರ್ಗಳವರೆಗೂ ಏರಿತು. ಆ ಮೂಲಕ ತೈಲಸಂಪನ್ಮೂಲವನ್ನು ಮಾರಿಕೊಂಡರೂ ಸಂಕಕಷ್ಟದಲ್ಲಿದ್ದ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಗಡಾಫಿಯ ಈ ತೈಲ ಬೆಲೆಯ ಮರುಪರಿಶಿಲನಾ ನೀತಿ ಪಶ್ಚಿಮದವರ ನಿದ್ದೆಗೆಡಿಸಿತು. ದುರಂತವೆಂದರೆ ತೈಲ ಬೆಲೆ ಏರಿಕೆಯಲ್ಲಿ ಗಡಾಫಿ ಕೈಗೊಂಡ ಮಹತ್ವದ ಕ್ರಮಗಳು ಹಾಗು ಅವನು ಅನುಸರಿಸಿದ ನೀತಿಯನ್ನು ಬಹುತೇಕ ಅರಬ್ ರಾಷ್ಟ್ರಗಳು ಬಹಳ ಬೇಗನೆ ಮರೆತುತದಲ್ಲದೆ ಕೊನೆಕೊನೆಗೆ ಪಶ್ಚಿಮದವರೊಂದಿಗೆ ಕೈ ಜೋಡಿಸಿ ಅವನ ವಿರುದ್ಧವೇ ಪಿತೂರಿ ಮಾಡತೊಡಗಿದವು.
ಇಸ್ರೇಲ್ ವಿರೋಧಿ ನೀತಿ: ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಇಸ್ರೇಲಿಯರು ಏಕಾಏಕಿ ಪ್ಯಾಲೈಸ್ತೇನಿಯಾವನ್ನು ಆಕ್ರಮಿಸಿಕೊಂಡಾಗ ಅಲ್ಲಿ ಒಂದು ದೊಡ್ಡ ರಕ್ತಪಾತವೇ ನಡೆದುಹೋಗುತ್ತದೆ. ಇಸ್ರೇಲಿಯರ ದಾಳಿಯಲ್ಲಿ ಅನೇಕ ಊರುಗಳು ನಾಶವಾಗಿ ಎಷ್ಟೋ ಪ್ಯಾಲೈಸ್ತೇನಿಯನ್ರುದ (ಮುಸ್ಲಿಂರು) ತಮ್ಮ ಮನೆ-ಮಠ, ಹೊಲ-ಗದ್ದೆಗಳನ್ನು ಕಳೆದುಕೊಂಡು ಬೀದಿಗೆ ಬರುತ್ತಾರಲ್ಲದೇ ತಮ್ಮದೇ ನೆಲದಲ್ಲಿ ಪರಕೀಯರಾಗಿ ಜೀವಿಸತೊಡಗುತ್ತಾರೆ. ಜೆರುಸೆಲಂ ನಮ್ಮ ಪವಿತ್ರ ನಗರ, ಅದು ನಮಗೆ ಸೇರಬೇಕಾಗಿದ್ದು ಎಂದು ಇಸ್ರೇಲಿಗರು. ಇಲ್ಲ ಇದು ನಮ್ಮ ನೆಲ, ಶತಶತಮಾನಗಳಿಂದ ನಾವಿಲ್ಲಿದ್ದೇವೆ ಎಂದು ಪ್ಯಾಲೈಸ್ತೇನಿಯನ್ರುಾ. ಈ ತಿಕ್ಕಾಟ ಈಗಲೂ ಮುಂದುವರಿಯುತ್ತಿದ್ದು ಪ್ಯಾಲೈಸ್ತೇನಿಯನಾವನ್ನು ಇಸ್ರೇಲ್ನಿಂೆದ ಬಿಡುಗಡೆಗೊಳಿಸಿ ಅದನ್ನೊಂದು ಪ್ರತ್ಯೇಕ ರಾಜ್ಯವೆಂದು ಘೋಷಿಸಿ ಎಂದು ಅವರು ಕೇಳುತ್ತಲೇ ಇದ್ದಾರೆ. ಆದರೆ ಅದಿನ್ನೂ ಸಾಧ್ಯವಾಗಿಲ್ಲ. ಇದು ಸಹಜವಾಗಿ ಬರೀ ಪ್ಯಾಲೈಸ್ತೇನಿಯನ್ ಮುಸ್ಲಿಂರನ್ನಷ್ಟೇ ಅಲ್ಲದೇ ಇತರೆ ಮುಸ್ಲಿಂ ರಾಷ್ಟ್ರಗಳ ನಾಯಕರುಗಳನ್ನು ಸಹ ಕೆರಳಿಸಿತು. ಇದು ತಮ್ಮ ಜನರಿಗಾದ ಅನ್ಯಾಯ. ಇದನ್ನು ಸರಿಪಡಿಸಲೇಬೇಕೆಂದು ಬಹುತೇಕ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಒಂದಾಗಿ ಇಸ್ರೇಲ್ ಮೇಲೆ ಯುದ್ಧವನ್ನು ಘೋಷಿಸುತ್ತವೆ. ಆದರೆ ಈ ಸಮಯದಲ್ಲಿ ಅಮೆರಿಕಾದ ಮಿಲ್ಟ್ರಿ ಸಹಾಯ ಪಡೆದ ಇಸ್ರೇಲ್ ಈ ಎಲ್ಲಾ ರಾಷ್ಟ್ರಗಳನ್ನು ಆರು ದಿನಗಳಲ್ಲಿ ಹೊಡೆದುರುಳಿಸಿ ಯುದ್ಧಕ್ಕೆ ಸಮಾಪ್ತಿ ಹಾಡುತ್ತದೆ. ನಿಧಾನವಾಗಿ ಬಹಳಷ್ಟು ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ಗೆನ ಅಮೆರಿಕಾ, ಯೂರೋಪ್, ಹಾಗೂ ಇಂಗ್ಲಂಡ್ ದೇಶಗಳ ಅಪಾರ ಬೆಂಬಲವಿದೆ. ಅವರನ್ನು ಮುಟ್ಟಿದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮನಗಂಡು ಇಸ್ರೇಲಿಗರ ಬಗೆಗೆ ಒಳಗೊಳಗೆ ದ್ವೇಷವಿದ್ದರೂ ಮೇಲೆ ಮಾತ್ರ ನಗುವಿನ ಮುಖವಾಡ ಹಾಕಿಕೊಂಡು ಅವರ ಸೌಹಾರ್ದತೆಯನ್ನು ಸಂಪಾದಿಸಿಕೊಳ್ಳುವದರ ಮೂಲಕ ಅಮೆರಿಕಾ, ಯೂರೋಪ್, ಹಾಗೂ ಇಂಗ್ಲಂಡ್ ದೇಶಗಳೊಟ್ಟಿಗೆ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡವು. ಆದರೆ ಕೆಲವೇ ಕೆಲವು ದೇಶಗಳು ಮಾತ್ರ ಇಸ್ರೇಲಿಗರನ್ನು ಅಲ್ಲಿಂದ ಹೊಡೆದೋಡಿಸಲೇಬೇಕೆಂದು ಪಣತೊಟ್ಟು ನಿಂತವು. ಅವುಗಳಲ್ಲಿ ಇರಾಕ್ (ಸದ್ದಾಂ ಹುಸೇನ್), ಲಿಬಿಯಾ (ಮೌಮರ್ ಗಡಾಫಿ), ಸಿರಿಯಾ (ಬಸಾರ್ ಅಷಾದ್ ಹಾಗೂ ಅವನ ತಂದೆ) ಈಜೀಪ್ಟ್, ಸುಡಾನ್, ಲೆಬನಾನ್ ಹಾಗೂ ಇರಾನ್ ಮುಖ್ಯವಾದವುಗಳು. ನಿಮಗೆ ಗೊತ್ತಿರಲಿ-ಇಸ್ರೇಲಿಗರಿಗೆ ತೊಂದರೆ ಕೊಟ್ಟವರನ್ನು ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಟಾರ್ಗೆಟ್ ಮಾಡುತ್ತಾ ಬರುತ್ತವೆ. ಉದಾಹರಣೆಗೆ ಈ ಮೇಲೆ ಹೇಳಿದ ಎಲ್ಲಾ ರಾಷ್ಟ್ರಗಳ ಪೈಕಿ ಇರಾನ್ನ್ನು ಹೊರತುಪಡಿಸಿ ಇತರೆ ರಾಷ್ಟ್ರಗಳು ಟಾರ್ಗೆಟ್ ಆಗಿರುವದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇರಾನ್ ಕೂಡಾ ಅವರ ಹಿಟ್ ಲಿಸ್ಟಿನಲ್ಲಿದೆ ಎಂಬುದನ್ನು ನಾವು ಗಮನಿಸಬೇಕು.
ಇನ್ನು ಗಡಾಫಿ ವಿಷಯದ ಬಗ್ಗೆ ಹೇಳುವದಾದರೆ ಅವನು ಕೂಡಾ ಇಸ್ರೇಲಿಗರ ದ್ವೇಷಿಯಾಗಿದ್ದ ಮತ್ತು ಇಸ್ರೇಲಿಗರಿಂದ ಅನ್ಯಾಯಕ್ಕೊಳಗಾದ ಪ್ಯಾಲೈಸ್ತೇನಿಯನ್ರವ ಬಗ್ಗೆ ಆತನಿಗೆ ಸಹಜವಾಗಿ ಅನುಕಂಪವಿತ್ತು. ಅವನು 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈಜಿಪ್ಟಿನ ಆಗಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಜೊತೆ ಸೇರಿ ನೈಲ್ ನದಿಯ ನೀರು ಇಸ್ರೇಲಿಗರಿಗೆ ಹೋಗದಂತೆ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ಮಾತ್ರವಲ್ಲ 1967 ರಲ್ಲಿ ಕೆಲವು ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ಯುದ್ಧವನ್ನು ಘೋಷಿಸಿದಾಗ ಅದು ಕೇವಲ ಆರೇ ಆರು ದಿನಗಳಲ್ಲಿ ಎಲ್ಲರನ್ನೂ ಹೊಡೆದು ಉರಳಿಸುತ್ತದೆ. ಆಗ ಪ್ಯಾಲೈಸ್ತೇನ್ ಸಂಪೂರ್ಣವಾಗಿ ಇಸ್ರೇಲಿಗರ ಅಧಿನಕ್ಕೆ ಒಳಪಡುತ್ತದೆ. ಆ ಸಂದರ್ಭದಲ್ಲಿಯೇ ಇಸ್ರೇಲಿಗರ ದಬ್ಬಾಳಿಕೆಯಿಂದ ಪ್ಯಾಲೈಸ್ತೇನಿಯನ್ರಮನ್ನು ಸಂರಕ್ಷಿಸಲು Palestanian Liberation Organisation (PLO) ಎನ್ನುವ ಇಸ್ರೇಲ್ ವಿರೋಧಿ ಸಂಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಅದಕ್ಕೆ ಗಡಾಫಿ ಸಂಪೂರ್ಣವಾಗಿ ತನ್ನ ಆರ್ಥಿಕ ಮತ್ತು ನೈತಿಕ ಬೆಂಬಲವನ್ನು ನೀಡುತ್ತಾನೆ. ವಿಪರ್ಯಾಸವೆಂದರೆ PLO ದ ಬೆಂಬಲಿಗರನ್ನು ಮತ್ತು ಅದರ ಸದಸ್ಯೆರನ್ನೆಲ್ಲಾ ಅಂತರಾಷ್ಟ್ರೀಯ ಸಮುದಾಯ ಉಗ್ರರ ಪಟ್ಟಿಗೆ ಸೇರಿಸುತ್ತಾ ಬರುತ್ತದೆ.
ಗಡಾಫಿ ಉಗ್ರ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದು: ಇನ್ನೊಂದು ಸಾರಿ ಅಂದರೆ 1976 ಜೂನ್ 27 ರಂದು ಇಸ್ರೇಲ್ನಿಂದ ಫ್ರಾನ್ಸ್ನತ್ತ ಹೊರಟ Air France-139 ವಿಮಾನವನ್ನು PLO ದ ಬೆಂಬಲಿಗರು ಎಂದು ಹೇಳಲಾದ ನಾಲ್ಕು ಜನ ಉಗ್ರರು ಅಪಹರಿಸುತ್ತಾರೆ. ಆ ವಿಮಾನದಲ್ಲಿ ಬಹುತೇಕರು ಇಸ್ರೇಲಿಗರು ಸೇರಿದಂತೆ ಒಟ್ಟು 246 ಜನ ಪ್ರಯಾಣಿಕರಿದ್ದರು. ಇಸ್ರೇಲಿನ ಜೈಲಿನಲ್ಲಿದ್ದ ತಮ್ಮವರನ್ನು ಬಿಡುಗಡೆ ಮಾಡಿದರೆ ಮಾತ್ರ ಇವರನ್ನು ಬಿಡಲಾಗವದೆಂಬುದು ಈ ಉಗ್ರರ ಬೇಡಿಕೆಯಾಗಿತ್ತು. ಹಾಗೆ ಅಥೆನ್ಸ್ನಿಂದ ಅಪಹರಿಸಿದ ವಿಮಾನವನ್ನು ಅವರು ನೇರವಾಗಿ ಲಿಬಿಯಾದ ಬೆಂಗಾಜಿ ವಿಮಾನ ನಿಲ್ದಾಣಕ್ಕೆ ತಂದಿಳಿಸುತ್ತಾರೆ. ಅಲ್ಲಿ ಲಿಬಿಯಾದ ಅಧ್ಯಕ್ಷ ಮೊಹಮರ್ ಗಡಾಫಿಗೆ ತಾವಿದ್ದ ವಿಮಾನಕ್ಕೆ ತೈಲವನ್ನು ಕೊಡಬೇಕೆಂಬ ಬೇಡಿಕೆಯನ್ನು ಕಳಿಸುತ್ತಾರೆ. ಗಡಾಫಿ ಇಸ್ರೇಲ್ ವಿರೋಧಿ ಮತ್ತು ಪ್ಯಾಲೈಸ್ತೇನಿಯನ್ರ ಬೆಂಬಲಿಗನಾಗಿದ್ದರಿಂದ ಅವನು ಕೂಡಲೇ 42 ಟನ್ಗಳಷ್ಟು ತೈಲವನ್ನು ಕೊಟ್ಟುಕಳಿಸುತ್ತಾನೆ. ಅಲ್ಲಿಂದ ಅವರ ವಿಮಾನ ಉಗಾಂಡಕ್ಕೆ ಹೊರಡುತ್ತದೆ. ಉಗಾಂಡದ ನಾಯಕ ಈದಿ ಆಮಿನ್ ಮೊದಮೊದಲು ಇಸ್ರೇಲ್ ಜೊತೆ ಚನ್ನಾಗಿಯೇ ಇದ್ದ. ಆದರೆ 1972 ರಲ್ಲಿ ಈದಿ ಆಮಿನ್ ತನ್ನ ನೆರೆ ರಾಷ್ಟ್ರವಾದ ಕೀನ್ಯಾದ ಮೇಲೆ ದಾಳಿ ಮಾಡಲು ಇಸ್ರೇಲಿನ ಅಂದಿನ ಪ್ರಧಾನಿಗೆ ಯುದ್ಧ ವಿಮಾನಗಳನ್ನು ಒದಗಿಸಬೇಕೆಂದು ಕೇಳಿಕೊಂಡನು. ಆದರೆ ಇಸ್ರೇಲ್ ಅವನ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರಿಂದ ಅವನು ತನ್ನ ಸಂಪೂರ್ಣ ಬೆಂಬಲವನ್ನು ಇಸ್ರೇಲಿನ ಶತ್ರುವಾದ ಪ್ಯಾಲೈಸ್ತೇನಾದ ಕಡೆ ತಿರುಗಿಸುತ್ತಾನೆ. ಹಾಗಾಗಿ ಈದಿ ಆಮಿನ್ ಅವರಿಗೆ ಉಗಾಂಡದ ಎಂಟಿಬ್ಬೆ ಎನ್ನುವ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಂತೆ ಸೂಚನೆ ಕೊಡುತ್ತಾನೆ. ಆ ವಿಮಾನ ನಿಲ್ದಾಣದಲ್ಲಿ ಉಗ್ರರು ಒತ್ತೆಯಾಳೆಗಳನ್ನು ಇರಿಸುತ್ತಾರೆ. ಆದರೆ ಇಸ್ರೇಲಿನ ಸೈನಿಕರು ಅಲ್ಲಿಗೆ ರಹಸ್ಯವಾಗಿ ಬಂದಿಳಿದು ಉಗ್ರರನ್ನು ದಮನ ಮಾಡಿ ಒತ್ತೆಯಾಳುಗಳನ್ನು ಬಿಡಿಸುತ್ತಾರೆ. ಈ ಕೃತ್ಯದಲ್ಲಿ ಗಡಾಫಿ ಮತ್ತು ಈದಿ ಆಮಿನ್ ಭಾಗಿಯಾಗಿದ್ದರಿಂದ ಅವರಿಬ್ಬರೂ ಇಸ್ರೇಲಿನ ಪರಮಾಪ್ತ ಮಿತ್ರರಾದ ಅಮೆರಿಕಾ ಮತ್ತು ಬ್ರಿಟನ್ನ ಕೆಂಗಣ್ಣಿಗೆ ಗುರಿಯಾಗುತ್ತಾರೆ.






How could you miss the Lockerbie PAN AM 103 flight bombing by Libyan intelligence officer and 2 others, supported by Gadaffi..which killed a number of Indians too. He was a terrorist and a terrorist supporter..plain and simple..no amount of white washing this monster will change this fact. So was Yasser Arafat who never thought twice to kill civilians as PLO chief.
Dear Asha,
Thanks for your comment. Please wait until the second part of this article is published. You will get the answer for your question i.e. for the Lockerbie issue. In reality Libya had nothing to do with Lockerbie issue. For more details please read my next article. And I would suggest you not to assess Gaddafi based on the internet information. Because out of 10 websites, 7 or 8 will give you false information about him as they are written from the point of view of Americans or Europeans. If you want to know more about him, please go through my articles published in the same “Avadhi” previously. On your right side, if you just click on Uday Itagi column you will get the first hand information about him and Libya. Good luck and happy reading.
Thank you,
Regards
Uday Itagi