ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಲಿತಾ ಸಿದ್ದಬಸವಯ್ಯ ಕೇಳುತ್ತಾರೆ: ತಪ್ಪೇ ಮಾಡದವರು ಯಾರಿದ್ದಾರೆ?

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಪ್ರಕಟವಾಗಿತ್ತು.

ಡಾ.ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್.ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ .

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ

ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ 

ಕಂಠೀರವ ಅವರ ಪ್ರತಿಕ್ರಿಯೆ ಹೀಗಿದೆ. ಅದು ಇಲ್ಲಿದೆ 

ಈಗ ಲಲಿತಾ ಸಿದ್ದಬಸವಯ್ಯ ಅವರು ತಮ್ಮ ಭಿನ್ನ ನೋಟವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಲಲಿತಾ ಸಿದ್ದಬಸವಯ್ಯ
ಅರವತ್ತೈದರ ಅಕ್ಕಪಕ್ಕದ ನನ್ನಂತಹವರು ಕೆಲವು ಜನ ಹೀಗೇ ಮಾತನಾಡುವಾಗ ಒಂದು ಅಭಿಪ್ರಾಯ ವ್ಯಕ್ತವಾಯಿತು. ಅದೇನೆಂದರೆ, ನಿರ್ಮಮವಾಗಿ ಯೋಚಿಸಿದರೆ ನಾವುಗಳು ತೀರಿಕೊಂಡ ಮೇಲೆ,  ಅವರಿವರಿರಲಿ ನಮ್ಮ ಮಕ್ಕಳಾದರೂ ನಮ್ಮನ್ನು ನೆನೆಯುವ ಅಗತ್ಯವಿದೆಯೇ ? 
 
ಈ ಬಗ್ಗೆ ಕೊಂಚ ಗಲಗಲ ನಡೆದು ಕೊನೆಗೆ ನಾವೆಲ್ಲರೂ ಅಂದುಕೊಂಡಿದ್ದು;  ”ಕಳೇವರ ತಗೊಂಡು ಮೆಡಿಕಲ್‌ ಕಾಲೇಜಿಗೆ‌ ಕೊಟ್ಟು ಸುಮ್ಮನಾಗ್ರಪ್ಪ, ಆಮೇಲೆ ನಿಂನಿಮ್ಮ ಕೆಲಸಕ್ಕೆ ಹೋಗಿ, ಮೂರು ದಿನದ್ದು, ತಿಂಗಳದು, ವರ್ಷದ್ದೂಂತ ನಮ್ಮ ಅಪರಕರ್ಮಗಳ ಯಾವ ವಿಪರೀತವೂ ಮಾಡಬೇಡಿ”  ಅಂತ ನಮ್ಮ ನಮ್ಮ ಮಕ್ಕಳಿಗೆ ಕಂಡೀಷನ್ನಾಗಿ  ಹೇಳಿ ಸಾಯುವುದೇ ಉಚಿತವೆಂದು. 
 
ಮೇಲೆ ಹೇಳಿದ ವಯೋಗುಂಪಿಗೆ ಸೇರಿದವರು ಸಂಪೂರ್ಣವಾಗಿ ‘ನಾನು’ ಎಂಬುದನ್ನು ಬಿಟ್ಟು ನಿಮ್ಮ ಎಲ್ಲಾ  ಆಗ್ರಹಗಳನ್ನು ತುಳಿದು ಒಮ್ಮೆ ಯೋಚಿಸಿ. ನೂರಕ್ಕೆ ಎಪ್ಪತ್ತು ಜನರಿಗಾದರೂ ಒಳಗೆ‌ ಹೀಗೇ ಅನ್ನಿಸಿರುತ್ತದೆ. ಪಿತೃ ಪಕ್ಷದಲ್ಲಿ‌ ನಮ್ಮನ್ನು ನೆನೆದು ಮಕ್ಕಳು‌ ಧೂಪ ಹಾಕುವಂಥದ್ದು ಏನು‌ ಕಡಿದು ಕಟ್ಟೆ ಹಾಕಿದ್ದೇವೆ?. ನಾವು ತಾನೇ ನಮ್ಮ ಹಿರಿಯರಿಗೆ ಧೂಪ ಹಾಕುವಾಗ ಭಾರಿ ಅಭಿಮಾನದಿಂದೇನೂ ಹಾಕುತ್ತಿಲ್ಲ. ಲಾಗಾಯ್ತಿನ ಪದ್ಧತಿ ನಡೆಸಿಕೊಂಡು ‌ಬಂದದ್ದು ಬಿಟ್ಟರೆ ಅವರಿವರು ಆಡಿಕೊಂಡಾರೆನ್ನುವುದೇ ಹೆಚ್ಚಿನ ಮನೆಗಳಲ್ಲಿನ ಅಸಲಿ ಸಂಗತಿ. ಇದನ್ನೊಪ್ಪಿಕೊಳ್ಳಲು‌ ‘ಬರುತ್ತ ಕುಯ್ಯುವ ಹೋಗುತ್ತ ತಿವಿಯುವಂತಹ’ ಪ್ರಾಮಾಣಿಕತೆ ಬೇಕು. 
 
ಇನ್ನುಳಿದ ಮೂವತ್ತು ಶೇಕಡ ಜನರಲ್ಲಿ ಯಾರೋ ಪುಣ್ಯಾತ್ಮರು/ಪಾಪಾತ್ಮರು ಜಗತ್ತು ಅವರನ್ನು ಜ್ಞಾಪಕ ಇಟ್ಟುಕೊಳ್ಳುವಂತದ್ದೇನೋ ಮಾಡಿ ಹೋಗಿದ್ದಾರೆ. ಅಂಥದ್ದೇನೋ ಇಲ್ಲದೆ ಸುಮ್ಮಸುಮ್ಮನೆ ಅವರುಗಳ ನೆನೆದು ವರ್ಷಕ್ಕೊಂದು ಪರೇವು ಮಾಡಲು ಅಥವಾ ಉಗಿದು ಉಪ್ಪು ಹಾಕಲು ನಮ್ಮ ಜನವೇನು ಅಡ್ಡ ಕಸುಬಿಗಳಲ್ಲ.
ಬುದ್ಧಿವಂತರು‌ ಈಗ‌ ತುರ್ತಾಗಿ‌ ಮಾಡಬೇಕಾದದ್ದು‌ ನಮ್ಮ ಸ್ವಾತಂತ್ರ್ಯೋತ್ಸವ ಒಂದನ್ನು ಬಿಟ್ಟು ಸರ್ಕಾರ ಇನ್ನಾವ, ಇನ್ನಾರ ದಿನಾಚರಣೆ/ಜಯಂತಿಗಳನ್ನೂ‌ ಆಚರಿಸಕೂಡದು. ಸರ್ಕಾರಿ ರಜೆ ಘೋಷಿಸಬಾರದೆಂದು‌ ಕಾನೂನು‌ ತರಲು‌ ಹೋರಾಡುವುದು. ಅದು ಬಿಟ್ಟು ಇಂತಹ‌ ಉಪಯೋಗವಿರದ ವಿಷಯಗಳನ್ನು ದೊಡ್ಡದು ಮಾಡುವುದು ತಿಳಿಗೊಂಡ ನೀರಿಗೆ ಕಲ್ಲೆಸೆಯುವುದರ ಸಮವೇ ವಿನಾಃ ಬುದ್ಧಿವಂತಿಕೆ ಅಲ್ಲ. ಅಮೂಲ್ಯವಾದ  ಬುದ್ಧಿಯನ್ನು ‌ಬಳಸಲು ಉರಿಗೊಳ್ಳಿಯಂತಹ‌ ವರ್ತಮಾನದ ಅಸಂಖ್ಯ ವಿಷಯಗಳಿವೆ. 
 
ಜನರನ್ನು ಅವರ ಪಾಡಿಗೆ ಬಿಟ್ಟು, ನಿಂನಿ‌ಮ್ಮ ಮನೆಯಲ್ಲೋ ಮಠದಲ್ಲೋ ಸಂಘದಲ್ಲೋ, ಸಂಸ್ಥೆಯಲ್ಲೋ ನಿಮಗೆ ಬೇಕಾದವರನ್ನು ನೆನೆದು ದಿನಾಚರಿಸಿಕೊಳ್ಳಿ ಎಂದು ಸರ್ಕಾರ ಓಟುಗಟ್ಟೆಯ ದಾಕ್ಷಿಣ್ಯ ಬಿಟ್ಟು ಖಚಿತವಾಗಿ ಹೇಳಬೇಕು. ಆದರೆ ವೀರಪ್ಪನ್, ಗೋಡ್ಸೆ ಇತ್ಯಾದಿಗಳ ದಿನ ಮಾತ್ರ ಮಾಡಬೇಡಿರೆಂದು ಅದೇ ಕಾನೂನಿನಲ್ಲಿ ಷರಾ ಸೇರಿಸುವುದನ್ನು ಜಾಣತನದಿಂದ ಮರೆಯಬಾರದು ಅಷ್ಟೇ.

‍ಲೇಖಕರು avadhi

15 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading