1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ’ ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು. ಕೃಷ್ಣ ಆಲನಹಳ್ಳಿಯವರ `ಪರಸಂಗದ ಗಂಡೆತಿಮ್ಮ’ ಕಾದಂಬರಿ, ಸ್ನೇಹಲತಾ ರೆಡ್ಡಿಯವರ `ಸೀತಾ’ ನಾಟಕ, ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ ಸಂತಾನ’ ಕಥೆ ಮೊತ್ತಮೊದಲಿಗೆ ಬೆಳಕು ಕಂಡಿದ್ದು `ಪಾಂಚಾಲಿ’ಯಲ್ಲಿ.
ಈ ಸಂಚಿಕೆಯ ವಿಶೇಷತೆಯೇನೆಂದರೆ ಇಲ್ಲಿ ಬರೆದ ಬಹುತೇಕ ಲೇಖಕ-ಲೇಖಕಿಯರು ನಲವತ್ತರೊಳಗಿನವರು. `ಪ್ರಾಯದ ಪೆಂಪೆ ಪೆಂಪು’ ಎಂಬ ಮಾತಿಗೆ ನಿದರ್ಶನ `ಪಾಂಚಾಲಿ’. ಈ ಸಂಚಿಕೆಯಲ್ಲಿ ಲಂಕೇಶ್ ನಡೆಸಿದ ಕುವೆಂಪು ಸಂದರ್ಶನ ಲಂಕೇಶರ ನಿಷ್ಠುರ ಮತ್ತು ತೀಕ್ಷ್ಣವಾದ ಪ್ರಶ್ನೆ ಹಾಗೂ ಕುವೆಂಪು ಅವರ ನಿರುದ್ವೇಗದ, ಮೌಲಿಕ ಉತ್ತರಗಳಿಂದ ಗಮನ ಸೆಳೆಯುತ್ತದೆ.
ಯುವಜನಾಂಗದ ಬಗ್ಗೆ ಆದರಪೂರ್ವಕ ಕಾಳಜಿಯ ಜೊತೆಗೆ ನವ್ಯ ಪ್ರಭಾವದಿಂದ ಬರೆಯುತಿದ್ದ ಆಗಿನ ಯುವಬರಹಗಾರರ ಬಗೆಗೆ ಕುವೆಂಪುಗಿದ್ದ ಅನುಮಾನ, ಸ್ವಲ್ಪಮಟ್ಟಿಗಿನ ಅಸಹನೆಯು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. `ತಾವು ಮೊದಲೇ ಎಂಟು ಪ್ರಶ್ನೆಗಳನ್ನು ಕುವೆಂಪು ಅವರಿಗೆ ಕಳಿಸಿದಾಗಿಯು ಅದಕ್ಕೆ ಕುವೆಂಪು ಉತ್ತರ ಬರೆದಿಟ್ಟುಕೊಂಡಿದ್ದು ಸಂದರ್ಶನಕ್ಕಾಗಿ ತಾವು ಅವರ ಮನೆಗೆ ಹೋದಾಗ ಕುವೆಂಪು ಬರೆದುಕೊಂಡಿದ್ದ ಉತ್ತರಗಳನ್ನು ಓದುತ್ತಾ ವಿವರಿಸತೊಡಗಿದರು.
‘ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತಿದ್ದ ವೇಳೆಗೆ ಸರಿಯಾಗಿ ಅವರು ಮೈ ಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತನಾಡುತಿದ್ದುದು ನನಗೆ ಸಂತಸ ಉಂಟುಮಾಡಿತು’ ಎಂದು ಲಂಕೇಶ್ ಕುವೆಂಪು ಅವರನ್ನು ಸಂದರ್ಶಿಸಿದ್ದಾಗಿ ಅನುಭವ ಹೇಳಿಕೊಂಡಿದ್ದಾರೆ.
ಫೋಟೋ ಕೃಪೆ : ಕೆ ಟಿ ಶಿವಪ್ರಸಾದ್
ಈ ಸಂದರ್ಶನ ಮಾಡುವಾಗ ಲಂಕೇಶ್ ಗೆ 39 ಮತ್ತು ಕುವೆಂಪು ಗೆ 70 ವರ್ಷ.
ಲಂಕೇಶ್ ಪ್ರಶ್ನೆ
ಕುವೆಂಪು ಉತ್ತರ
ಲಂಕೇಶ್ : ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ `ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ತೊಲಗಾಚೆ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ `ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೇ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್ : ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಭೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ(ಪುರಾತನ ಅಲ್ಲ) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್ : ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಷಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್ : ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಚಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆಡ ಬ್ರಹ್ಮನ್ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ. ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು `ನಿಮ್ಮಲ್ಲಿ’ ಕೆಲವರು ವೈದಿಕ ಎಂದು ನಿಂದಿಸುವಂತೆ `ಅವರಲ್ಲಿ’ ಕೆಲವರು `ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್ : ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ `ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಷಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಷಾಹಿ ಖಂಡನೆಗೆ ಕಾರಣವನ್ನು ನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ `ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು `ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ `ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ.(ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು).
ಲಂಕೇಶ್ : `ಬ್ರಾಹ್ಮಣ’ `ಶೂದ್ರ’ `ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: `ಈ ಮಾತುಗಳೆಲ್ಲ ಮತ್ತೆ ಪುರೋಹಿತಷಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವತರ್ಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ , ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ `ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಷಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ.
ಲಂಕೇಶ್ : ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: `ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್ : ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: `ನನ್ನ ಸಾಹಿತ್ಯದಲ್ಲಿ ಕಥೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ. ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ’.
Ahaa… Prastutakke kannadi kaideevigeyantha maatugalu. ibbarigu namaskaragalu.
but thanks for posting. I expected much more from this interview as Lankesh interviewed.
thank you for the post… ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ’.