ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈಲ್ವೆಮಕ್ಕಳು…

ರಹಮತ್ ತರಿಕೆರೆ

ನನಗೆ ಬೀಳುವ ಕನಸುಗಳಲ್ಲಿ ಎರಡು ಸನ್ನಿವೇಶಗಳು ಮತ್ತೆಮತ್ತೆ ಬರುತ್ತವೆ. ಮೊದಲನೆಯದು- ಬೆಟ್ಟದ ತುದಿಯಲ್ಲಿ ಅಥವಾ ಮನೆಮಾಳಿಗೆಯ ಅಂಚಿನಲ್ಲಿ ನಡೆಯುತ್ತಿದ್ದೇನೆ. ತೀರಾ ಇಕ್ಕಟ್ಟಾದ ಜಾಗ, ಆಳದಲ್ಲಿ ಕೆಳಗಿನ ನೆಲ ಕಾಣುತ್ತಿದೆ. ಜೀವ ಅಂಗೈಯಲ್ಲಿಟ್ಟು ಬೀಳುಭಯದಿಂದ ಕಂಪಿಸುತ್ತಿದ್ದೇನೆ. ಕನಸೊಡೆದು ಎಚ್ಚರವಾಗುತ್ತದೆ. ಎರಡನೆಯದು-ರೈಲನ್ನು ಹಿಡಿಯಲು ಓಡುತ್ತಿದ್ದೇನೆ. ಇನ್ನೇನು ಹಿಡಿಯಬೇಕು, ಸಿಕ್ಕಿತು ಎನ್ನುವಲ್ಲಿ ಸಿಗದೆ ತಪ್ಪಿಸಿ ಹೋಗುತ್ತಿದೆ. ಈ ಕನಸುಗಳ ಅರ್ಥವೇನೊ ತಿಳಿಯದು. ಎರಡನೆಯ ಕನಸಿನ ಮೂಲವನ್ನು ಊಹಿಸಬಲ್ಲೆ. ಅದು ಬಿಎ ಓದುವಾಗ, ಪ್ರತಿನಿತ್ಯವೂ ಕಾಲೇಜಿಗೆ ಹೋಗುವಾಗ ರೈಲನ್ನು ಹಿಡಿಯಲು ಮಾಡುತ್ತಿದ್ದ ಪರದಾಟ. ಬಾವಿಯಿಂದ ನೀರು ಸೇದಿ ಹಂಡೆ-ತೊಟ್ಟಿ ತುಂಬಿಸಿ, ಮಿಂದು, ಉಂಡು, ಬುತ್ತಿ ಕಟ್ಟಿಕೊಳ್ಳುವಷ್ಟರಲ್ಲಿ ಹೇಗೊ ತಡವಾಗುತ್ತಿತ್ತು. ಹಾದಿಯಲ್ಲೇ ಸಿಗ್ನಲ್ ಬಿದ್ದಿರುವುದನ್ನು ಕಂಡೊ ಸಿಳ್ಳನ್ನು ಕೇಳಿಯೊ ಅಡ್ಡಗಲ್ಲಿಗಳಲ್ಲಿ ಅಥವಾ ಖಾಲಿಬಿದ್ದ ಮಾರುಕಟ್ಟೆಯ ಮಾಳದಲ್ಲಿ ಓಡುತ್ತಿದ್ದೆ. ಚಲಿಸುವ ಗಾಡಿ ಹತ್ತುವುದು, ಬಾಗಿಲಲ್ಲಿ ಕಂಬಿ ಹಿಡಿದು ದೇಹವನ್ನು ಗಾಳಿಗೊಡ್ಡಿ ನಿಲ್ಲುವುದು ಕ್ರಮೇಣ ಅಭ್ಯಾಸವಾಯಿತು.

ಆದರೂ ಕೆಲವೊಮ್ಮೆ ಸ್ಟೇಶನ್ ಪ್ರವೇಶಿಸುವಾಗ ಟ್ರೈನಿನ ಕೊನೆಯ ಡಬ್ಬಿ, ತನ್ನ ಕಪ್ಪು ಹಿಂಬದಿಯ ಮೇಲೆ ಕೆಂದೀಪ ಮಿನುಗಿಸುತ್ತ ಅಡಿಕೆ ತೋಟಗಳ ನಡುವೆ ಕಣ್ಮರೆಯಾಗುತ್ತಿತ್ತು. ಇದಲ್ಲದೆ ಹಲವು ಕಾರಣಗಳಿಂದ ನನ್ನ ಬಾಲ್ಯ-ತಾರುಣ್ಯ-ಯೌವನಗಳ ಬಹುಪಾಲು ವರ್ಷ, ರೈಲುಹಳಿ ಬದಿಯ ಮನೆಗಳಲ್ಲಿ ಕಳೆದವು. ಮನೆಗೆ ನೂರು ಮಾರುಗಳಷ್ಟು ದೂರದಲ್ಲಿ ರೈಲ್ವೆಹಳಿಯಿತ್ತು. ರೈಲಿನ ಸಿಳ್ಳು ಕೇಳಿದರೆ ಮನೆಯೊಳಗಿಂದ ಪುತುಕ್ಕನೆ ಹೊರಬಂದು, ಡಬ್ಬಿಯೊಳಗಿನ ಅಜ್ಞಾತ ಪಯಣಿಗರತ್ತ ಕೈಬೀಸುತ್ತಿದ್ದೆವು. ಅತ್ತಲಿಂದ ಸ್ಪಂದನೆ ಸಿಕ್ಕರೆ ಕೇಕೆ ಹಾಕುತ್ತಿದ್ದೆವು. ನಮ್ಮೂರಲ್ಲಿ ರೈಲು ಸಾರ್ವಜನಿಕ ಗಡಿಯಾರವಿದ್ದಂತೆ. ಸ್ಕೂಲಿನ ಮಕ್ಕಳು, ಕೂಲಿಕಾರರು, ದುಡಿಸಿಕೊಳ್ಳುವ ಮಾಲಕರು ಅಥವಾ ಅಂಗಳ ಗುಡಿಸುವಿಕೆಗೆ ಗೃಹಿಣಿಯರು ಅದನ್ನು ಬೇಶರತ್ತಾಗಿ ನೆಮ್ಮಿದ್ದರು. ಈ ಅರ್ಥದಲ್ಲಿ ನನ್ನ ತಲೆಮಾರಿನವರು ಸತ್ಯಜಿತ್‌ರಾಯರ `ಪಥೇರ್ ಪಾಂಚಾಲಿ’ ಸಿನಿಮಾದ ಅಥವಾ ನಿಸಬೆತಳ `ರೈಲ್ವೆ ಚಿಲ್ಡ್ರನ್’ ಕಾದಂಬರಿಯ ಮಕ್ಕಳು. ಶಿವಮೊಗ್ಗೆಗೆ ಪದವಿ ಓದಲು ಮೂರು ವರ್ಷ ರೈಲಲ್ಲೇ ಬದುಕು ಕಳೆಯಿತು.

ಮೈಸೂರಿನಲ್ಲಿದ್ದಾಗ, ನಮ್ಮ ಹಾಸ್ಟೆಲನ್ನು ಸವರಿಕೊಂಡೇ ಚಾಮರಾಜನಗರದ ಪ್ಯಾಸೆಂಜರ್ ಹೋಗುತ್ತಿತ್ತು. ಈಗಿರುವ ಹೊಸಪೇಟೆಯಲ್ಲೂ ಮನೆ ರೈಲ್ವೆಹಳಿಗೆ ಸಮೀಪದಲ್ಲಿದೆ. ಬೆಳಗಿನ ಜಾವ ತಿರುಪತಿ-ಕೊಲ್ಹಾಪುರ ಗಾಡಿ ಕೂಗಿ ಎಬ್ಬಿಸುತ್ತದೆ. ರಾತ್ರಿ ಊಟದ ಬಳಿಕ ಟೆರೇಸನ್ನು ಏರಿದರೆ ಹಂಪಿ ಎಕ್ಸ್ ಪ್ರೆಸ್ ಬೆಂಕಿಹುಳದಂತೆ ಹೋಗುವುದು ಕಾಣುತ್ತದೆ. ಸಂಜೆಮುಂಜಾನೆ ವಾಕಿಂಗಿಗೆ ಹೋದರೆ ರೈಲ್ವೇಗೇಟನ್ನು ದಾಟಬೇಕು. ನಾನೂ ಬಾನು ರೈಲ್ವೆಗೇಟ್ ಹಾಕಿದ್ದರೆ ನುಸುಳಿ ಬರಲು ಅವಸರಿಸುವುದಿಲ್ಲ. ರೈಲನ್ನು ನೋಡಿಕೊಂಡೇ ಬರುತ್ತೇವೆ. ಮೊಮ್ಮಕ್ಕಳು ರಜೆಗೆ ಬಂದರೆ ಈ ಗೇಟಿಗೆ ಕರೆತಂದು ನಮ್ಮ ಹುಚ್ಚನ್ನು ಅವಕ್ಕೂ ಹತ್ತಿಸುತ್ತೇವೆ. ರೈಲುಕಂಬಿ ಜತೆಯಲ್ಲಿದ್ದರೂ ಎಂದೂ ಕೂಡುವುದಿಲ್ಲ ಎನ್ನಲಾಗುತ್ತದೆ. ಆದರೆ ಕಂಬಿಗಳ ಮೇಲೆ ಓಡಾಡುವ ಗಾಡಿಗಳು ಮಾತ್ರ ಅಗಲಿದ ಜೀವಗಳನ್ನು, ದೂರದ ಊರುಗಳನ್ನು ಒಂದುಗೂಡಿಸುತ್ತ ಬಂದಿವೆ.

ಬೀರೂರು-ಶಿವಮೊಗ್ಗ ನಡುವೆ ಸಂಚರಿಸುತ್ತಿದ್ದ ಆರು ಡಬ್ಬಗಳ ಪ್ಯಾಸೆಂಜರ್ ಗಾಡಿ, ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಹೋಗಿಬರುವ ಪಯಣಿಕರನ್ನು ಬೀರೂರು ಜಂಕ್ಷನಿನಲ್ಲಿ ಇಳಿಸಿಕೊಂಡು, ಮಲೆನಾಡ ಊರುಗಳಿಗೆ ಕರೆತರುತ್ತಿತ್ತು. ಊರುಮಂಜು ಬಣ್ಣದ ಡಬ್ಬಿಗಳ ತುದಿಗೆ ಕಪ್ಪನೆಯ ಇಂಜಿನ್ನು. ಅದಕ್ಕೆ ದೊಡ್ಡ ಡ್ರಮ್ಮಿನಂತಹ ನೀರುಕುದಿಸುವ ನೀಳಹಂಡೆ; ಮೇಲೆ ಕೆಂಪನೆಯ ಪಟ್ಟಿಗಳು. ಹಿಂದೆ ಕಲ್ಲಿದ್ದಲು ತುಂಬಿದ ತೊಟ್ಟಿ. ದೊಡ್ಡಚಕ್ರಗಳಿಗೆ ಎಲ್ಲಿಂದಲೊ ತಟ್ಟನೆ ನುಗ್ಗಿಬಂದ ತೋಳೊಂದು ದಬ್ಬುವಂತೆ ಪಿಸ್ಟನ್ನು. ಛುಸ್ಸೆಂದು ಬಿಳೀ ಆವಿಯನ್ನು ಸಶಬ್ದವಾಗಿ ಚೆಲ್ಲುವ ಆರ್ಭಟೆ. ಆಗಸದಲ್ಲಿ ಕಾರ್ಮೊಡ ಕವಿವಂತೆ ಕಪ್ಪನೆ ಹೊಗೆ ಬಿಡುವ ಅದರ ತಾಕತ್ತು. ತೊಟ್ಟಿಯಿಂದ ಕಲ್ಲಿದ್ದಲನ್ನು ಎಸೆಗುದ್ದಲಿಯಲ್ಲಿ ತೋಡಿ ಒಲೆಗೆಸೆಯುತ್ತ ಧಗೆಗೆ ಬೆವೆತ ಸಹಾಯಕರು; ಮಸಿಬಟ್ಟೆಯನ್ನು ತಲೆಗೆ ಸುತ್ತಿ, ಬೆತ್ತದ ಚಕ್ರವನ್ನು ಫ್ಲಾಟ್‌ಫಾರಂ ಮೇಲೆ ಎಸೆದು, ಇನ್ನೊಂದು ಚಕ್ರವನ್ನು ತೋಳುಚಾಚಿ ಸ್ವೀಕರಿಸುತ್ತಿದ್ದ ಚಾಲಕರ ಚಕಮಕಿ. ರಾತ್ರಿಹೊತ್ತು ಒಲೆಯ ಧಗಧಗಿಸುವ ಬೆಂಕಿಯನ್ನೂ ಹೊಗೆಯಲ್ಲಿ ಹಾರುವ ಕಿಡಿಗಳನ್ನೂ ಕಾಣಿಸುವ ಅದರ ಪರಿ. ನಿಜಕ್ಕೂ ಅದೊಂದು ಆಗಸಲೋಕದಿಂದ ನಮ್ಮ ಉಪಭೋಗಕ್ಕೆ ನೆಲಕ್ಕಿಳಿದ ಮಾಯಾವಿ ವಾಹನ.

ನಮ್ಮ ಸೀಮೆಯ ಸಹಸ್ರಾರು ಜನ, ಕಾಲೇಜು ಮೆಟ್ಟಿಲು ಹತ್ತಿ, ಪದವಿ ಮುಗಿಸಿ ಬದುಕು ಕಟ್ಟಿಕೊಂಡಿದ್ದರ ಹಿಂದೆ ಪ್ಯಾಸೆಂಜರ್ ಬಂಡಿಗಳ ಪಾತ್ರವಿದೆ. ವಿದ್ಯಾರ್ಥಿಗಳಾದ ನಮಗೆ ಮರಿಯಾನೆಯಂತಿದ್ದ ಅಂದಾನಪ್ಪ ಮತ್ತು ತೆಳ್ಳಗೆ ಬೆತ್ತದಂತಿದ್ದ ಫರ್ನಾಂಡಿಸ್ ಎಂಬ ಚಾಲಕರು ಅತಿ ಪರಿಚಿತರಾಗಿದ್ದರು. ಅಂದಾನಪ್ಪನ ಮುಖ ಕಂಡೊಡನೆ `ಓಹ್, ಇವತ್ತು ಮೊದಲ ಪಿರಿಯಡ್ ಗೋತ್ತಾ ’ ಎಂದು ಉದ್ಗರಿಸುತ್ತಿದ್ದೆವು. ಕಾರಣ, ಅಂದಾನಪ್ಪ ಸಾವಕಾಶದ ಮನುಷ್ಯ. ಗಾರ್ಡು ಸೀಟಿ ಬಜಾಯಿಸಿದರೂ ಕಟ್ಟಕಡೆಯ ಪ್ರಯಾಣಿಕ ಹತ್ತಿದ್ದನ್ನು ಖಚಿತ ಮಾಡಿಕೊಂಡು, ಪ್ಲಾಟ್‌ಫಾರಮ್ಮಿನಿಂದ ಸಾವಧಾನ ಗಾಡಿ ಚಲಾಯಿಸುತ್ತಿದ್ದನು. ಮೊಸರಹಳ್ಳಿ ಎಂಬ ಸ್ಟೇಶನ್ನು, ಹೊಲಗದ್ದೆಗಳ ಮಧ್ಯೆ ಏಕಾಂಗಿಯಾಗಿ ನಿಂತ ಮರದಂತೆ, ಊರಿಂದ ದೂರವಿತ್ತು. ಪಯಣಿಕರು ಸೊಂಟದವರೆಗೂ ಬೆಳೆದಿದ್ದ ರಾಗಿ ಹುಚ್ಚೆಳ್ಳು ಅವರೆ ಹೊಲಗಳ ಮೂಲಕ, ಸಣಕಲು ಬದುಗಳ ಮೇಲೆ ಕಸರತ್ತು ಮಾಡುತ್ತ ಓಡಿ ಬರುತ್ತಿದ್ದರು. ಅವರಲ್ಲಿ ವಿದ್ಯಾರ್ಥಿಗಳೂ, ಹಾಲುಹೈನ ತರಕಾರಿ ಹೊತ್ತವರೂ, ಆಸ್ಪತ್ರೆಗೆ ಹೋಗುವ ಎಳಗೂಸಿನ ಬಾಣಂತಿಯರೂ ಇರುತ್ತಿದ್ದರು. ರೈಲು ಅವರಿಗಾಗಿ ನಿಂತು ಕಾಯುತ್ತಿತ್ತು. ಆದರೆ ಫರ್ನಾಂಡಿಸ್ ಬಂದ ದಿನ, ಬೇಗೆ ಊರು ತಲುಪುವ ಉಮೇದಿನಿಂದ ಖುಶಿ ಪಡುತ್ತಿದ್ದೆವು. ರೈಲಿಳಿದ ಬಳಿಕ ಇಂಜಿನ್ ಬಳಿ ಹೋಗಿ ಚೆನ್ನಾಗಿ ಓಡಿಸಿದಿರಿ ಎಂದು ಕೈಕುಲುಕುತ್ತಿದ್ದೆವು.

ಫರ್ನಾಂಡಿಸ್‌ಗೆ, ಸಹಪಾಠಿ ಹುಡುಗಿಯರನ್ನು ಮೆಚ್ಚಿಸಲು ದೌಡಿಕೊಂಡು ಬಂದು ಹತ್ತುವ, ಬಾಗಿಲಲ್ಲೇ ನೇತಾಡುವ ಹುಡುಗರನ್ನು ಕಂಡರೆ ಆಗದು. ರೋಮಿಯೋಗಳಿಗೆ ಬುದ್ಧಿಕಲಿಸಲು ನಿಲ್ದಾಣದಲ್ಲೇ ಅತಿಯಾಗಿ ವೇಗ ಹೆಚ್ಚಿಸಿ ಅವರಿಗೆ ರೈಲನ್ನು ತಪ್ಪಿಸುತ್ತಿದ್ದನು. ರೈಲೆಂದರೆ, ಮನೆಯಲ್ಲಿ ನಾವು ವಾಸವಿರುವ ಕೋಣೆಗಳನ್ನು ಜೋಡಿಸಿ ಹಳಿಯ ಮೇಲೆ ಓಡಿಸಿದಂತೆ. ಕಂಬಿಗಳಿಲ್ಲದ ಕಿಟಕಿಗಳಲ್ಲಿ ಕತ್ತು ಹೊರಹಾಕಿ ಕೂತರಂತೂ, `ಉಲಗನ್ ಸುಟ್ರ ವಾಲಿಬನ್’. ಆಸುಪಾಸಿನ ದೃಶ್ಯಾವಳಿಗಳು ಸಕಸಕ ಹಿಂದೆ ಹೋಗುತ್ತ ಚಲನಚಿತ್ರ ನೋಡಲು ಥೀಯೇಟರಿನಲ್ಲಿ ಕೂತಂತಾಗುತ್ತದೆ. ಭದ್ರಾವತಿಯಲ್ಲಿ ಹಳಿಬದಿಯ ಮನೆಗಳ ಮುಂದೆ ಹುಡುಗಿಯರು, ಕಸಗುಡಿಸುವ, ರಂಗೋಲಿ ಹಾಕುವ, ಬಟ್ಟೆ ಒಣಹಾಕುವ ದೃಶ್ಯಗಳೂ ಕಾಣುತ್ತಿದ್ದವು. ನಮ್ಮ ಸೀನಿಯರ್ ವಿದ್ಯಾರ್ಥಿಗಳು ಸೀಟಿ ಹೊಡೆವ, ಟಾಟಾ ಮಾಡುವ, ಸಿನಿಮಾ ನಟಿಯ ಹೆಸರಲ್ಲಿ ಕೂಗುವ ಕಾರ್ಯ ಮಾಡುತ್ತಿದ್ದರು. ಹೆಚ್ಚಿನ ಹುಡುಗಿಯರು ಮುಗುಳ್ನಗುತ್ತ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಅವರ ಅಪ್ಪಂದಿರು, ಟೆರೇಸಿನಲ್ಲಿ ಬೀಡಿಸೇದುತ್ತ ನಿಂತಿರುತ್ತಿದ್ದ ಡೊಳ್ಳುಹೊಟ್ಟೆಯ ಲುಂಗಿಯುಟ್ಟ ಬನೀನುಧಾರಿಗಳು, ಡಬ್ಬಿಗಳತ್ತ ಕೆಕ್ಕರಿಸಿ ನೋಡುತ್ತಿದ್ದರು. ಒಮ್ಮೆ ಒಬ್ಬಾಕೆ ಟೆರೇಸಿನ ಮೇಲೆ ನಿಂತು ಹುಡುಗರಿಗೆ ಪೊರಕೆ ಮತ್ತು ಪಾದರಕ್ಷೆಯನ್ನು ತೋರಿಸಿದ್ದಳು. ಅದನ್ನು ವಾನರಸೇನೆ ಉತ್ತೇಜನವಾಗಿ ಸ್ವೀಕರಿಸಿತೇ ಪರಂತು ಅಪಮಾನವಾಗಿ ಅಲ್ಲ.

ಉಗಿಬಂಡಿ ಭದ್ರಾ, ತುಂಗಾ ಹೊಳೆಗಳನ್ನು ಢಗಾಧಡ್ ಢಗಾದಡ್ ಲಯದಲ್ಲಿ ದಾಟುತ್ತಿತ್ತು. ತುಂಗೆಯನ್ನು ದಾಟುವಾಗ ಪ್ರವಾಹ ಮಟ್ಟವನ್ನು ಅಳೆವ ಮಾಪುಗೋಲಂತಿದ್ದ ಮಂಟಪದತ್ತ ಅದು ಮುಳುಗಿತೇ ಇಲ್ಲವೇ ಎಂದು ಚೆಕ್ ಮಾಡುತ್ತಿದ್ದೆವು. ಬೇಸಗೆಯಲ್ಲಿ ಒಗೆದುಹಾಕಿದ ಬಿಳೀ ಪತ್ತಲದಂತೆ ತೆಳ್ಳಗೆ ಹರಿವ ಹೊಳೆ, ಮಳೆಗಾಲದಲ್ಲಿ ಗಿಡಮರ ಕಸಕಡ್ಡಿ ಹೊತ್ತುಕೊಂಡು ಸುಳಿಗಳನ್ನು ನಿರ್ಮಿಸುತ್ತ ರುದ್ರಭೀಕರವಾಗುತ್ತಿತ್ತು. ಭದ್ರೆಯ ಪ್ರವಾಹ ಅಪರೂಪ. ಅದು ಪೇಪರ್ ಮಿಲ್ಲು ಮತ್ತು ಕಬ್ಬಿಣದ ಕಾರ್ಖಾನೆಯ ಬಿಡುನೀರಿನ ಸಂಗದಿಂದ ಸದಾ ಕಾಫಿ ಡಿಕಾಕ್ಷನ್. ರಾಸಾಯನಿಕಗಳ ಬೆಳ್ನೊರೆಯು ಅದರ ಕಪ್ಪನ್ನು ಮತ್ತಷ್ಟು ಕಡುವಾಗಿಸಿರುತ್ತಿತ್ತು. ಫ್ಯಾಕ್ಟರಿಗಳು ಕರಿಬಿಳಿಯ ಹೊಗೆ ಮತ್ತು ಜ್ವಾಲೆಯನ್ನು ಆಗಸಕ್ಕುಗುಳುವ ಚಿಮಿನಿಗಳಿಂದ ರಣಭೂಮಿಯಂತೆ ಕಾಣುತ್ತಿದ್ದವು. ಮರದ ತಿರುಳನ್ನು ಕೊಳೆಯಿಸುವ ಪೇಪರ್ ಮಿಲ್ಲಿನಿಂದ ಕಟುವಾದ ದುರ್ವಾಸನೆ ಸೂಸುತ್ತಿತ್ತು. ಇದನ್ನೊಮ್ಮೆ ಆಘ್ರಾಣಿಸಿದ ಅಪ್ಪ, ಇಲ್ಲಿನವರ ಹೊಟ್ಟೆಹುಳಗಳೆಲ್ಲ ಈ ವಾಸನೆಯಿಂದ ಸತ್ತುಹೋಗಿರಬೇಕು ಎಂದು ಅಭಿಪ್ರಾಯಪಟ್ಟನು.

ರೈಲಿಗೆ ಸಂಬಂಧಿಸಿದಂತೆ ಇಂತಹ ಎಷ್ಟೊ ನೆನಪಿನ ಚಿತ್ರಗಳು ಮನಸ್ಸಿನ ಬುಟ್ಟಿಯಲ್ಲಿ ತುಂಬಿಕೊಂಡಿವೆ. ಅವುಗಳಲ್ಲಿ ಅಪ್ಪ ಸ್ಟೇಶನ್ನಿನಲ್ಲಿ ನನಗಾಗಿ ಕಾಯುತ್ತಿದ್ದ ಚಿತ್ರ ಮಾತ್ರ ಉಜ್ವಲವಾಗಿ ಬೆಳಗುತ್ತ ಉಳಿದಿದೆ. ಅದೊಂದು ಮಳೆಗಾಲದ ದಿನ. ವಾರದ ಮೊದಲೇ ಅಪ್ಪನಿಗೆ ರೈಲ್ವೆಪಾಸು ಮುಗಿದಿದೆಯೆಂದೂ ನವೀಕರಿಸಲು ಐದೂವರೆ ರೂಪಾಯಿ ಬೇಕೆಂದೂ ತಿಳಿಸಿದ್ದೆ. ಅವನು ಮರೆತುಬಿಟ್ಟನೊ ಅಥವಾ ಮಳೆಗಾಲದಲ್ಲಿ ಸಾಮಾನ್ಯವಾಗಿ ಆಗುವಂತೆ ಕುಲುಮೆಯ ಒಲೆ ಹೊತ್ತಿರಲಿಲ್ಲವೊ ತಿಳಿಯದು. ಅಪ್ಪ ನಾನು ಎಂಟೂವರೆಯಾದರೂ ಸಿದ್ಧವಾಗದೆ ಇರುವುದನ್ನು ಗಮನಿಸಿದ: `ಯಾಕೋ ಕಾಲೇಜಿಲ್ಲೇನು ಇವತ್ತು?’ `ಮೊನ್ನೆನೇ ಹೇಳಿದ್ನಲ್ಲ, ಪಾಸಿಗೆ ದುಡ್ಡು ಬೇಕಂತ’ `ಅರರೇ, ಎಂಥ ಕೆಲಸ ಆಯ್ತಲ್ಲ.‌ ನಾನು ಸ್ಟೇಶನ್ ಹತ್ರ ಇರ್ತೀನಿ. ರಡಿಯಾಗಿ ಬಂದಿರು’ಅಂದು ಬೆಳಬೆಳಗ್ಗೇನೆ ಜಿರ್ರನೆ ಮಳೆ.

ನಾನು ಸ್ಟೇಶನ್ನಿಗೆ ಹೋದೆ. ಛತ್ರಿಯಿದ್ದರೂ ನೆಂದಿದ್ದ ಅಪ್ಪ ಬಾಗಿಲಲ್ಲೇ ನಿಂತಿದ್ದ. ಅವನ ಕೈಯಲ್ಲಿ ಎಲ್ಲಿಂದಲೊ ಸಂಪಾದಿಸಿ ತಂದ ಐದು ರೂಪಾಯಿ. ಅದು ಒದ್ದೆಯಾಗಿತ್ತು. ಅವನ ಮುಖದಲ್ಲಿ ವಿಶಿಷ್ಟ ಹೊಳಪಿತ್ತು. ಪಾಸನ್ನು ನವೀಕರಿಸಿ ಗಾಡಿ ಹತ್ತಿದೆ. ಅಪ್ಪ ಕೈಬೀಸಿದ. ಗಾಡಿ ಚಲಿಸಿತು. ಮನೆಗೆ ಹೋಗು ಎಂಬಂತೆ ಕೈಬೀಸಿದೆ. ಮಳೆಯ ಕಾರಣ ಅವನ ಆಕೃತಿ ದೂರವಾಗುತ್ತ ಮಂಜಾಗುತ್ತ ರೈಲು ತಿರುವುದಾಗ ಕಾಣೆಯಾಯಿತು.ಇದಾಗಿ ಅರ್ಧಶತಮಾನ ಕಳೆದಿದೆ. ಅವನು ರೊಕ್ಕ ಹೇಗೆ ಹೊಂಚಿದನೆಂದು ನಾ‌ನು ಕೇಳಲಿಲ್ಲ. ಆದರೆ ಆತ ಒದ್ದೆಮುದ್ದೆಯಾಗಿದ್ದ ಐದು ರೂಪಾಯಿ ಹಸಿರು ನೋಟನ್ನು ಹಿಡಿದು, ನನ್ನನ್ನೇ ಕಾಯುತ್ತ ನಿಂತಿದ್ದ ದೃಶ್ಯಮಾತ್ರ ಮನದ ಹಾಳೆಯಲ್ಲಿ ಅಚ್ಚೊತ್ತಿದೆ: ಕೆಸರು ನೆಲದಲ್ಲಿ ಇಟ್ಟಹೋದ ಹೆಜ್ಜೆಯಂತೆ, ವಿಗ್ರಹದಲ್ಲಿ ಉಳಿದ ಉಳಿಯ ಕಚ್ಚಿನಂತೆ, ಒರಟಾದ ಕೊಂಬೆಗೆ ಬಿಟ್ಟ ಹೂವಿನಂತೆ.

‍ಲೇಖಕರು avadhi

18 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading