ರಟ್ಟಿ ಬಲದಾಕಿ
ರುಕ್ಮಿಣಿ ಎನ್
ಮುಗಿಲ ಕೊಳ್ಳ ಹರಕೊಂಡ ಸೂರ್ಯ ಕತ್ತಲದ ಸೆರಗಿಡಿದು ಪಚ್ಚಿಮದ ತೆಕ್ಕ್ಯಾಗ ಬೀಳುವ ಗತ್ತಿನ್ಯಾಗ ಕಳ್ಳೆಜ್ಜಿ ಇರಿಸಿದ್ದ. ಹರುಕುಮುರುಕು ಬೆಳಕಿನ್ಯಾಗ ಕಸಮುಸುರಿ ಮಾಡಿ ಅಂಗಳಕ ನೀರ ಹೊಡದು ಕೊಂತೆವ್ವಾಯಿ ದೀಪ ಹಚ್ಚಿದಳು. ಒಲಿಪುಟಿಗಿಟ್ಟು ಚಾ ಕಾಸಾಕ ಮಾಡಿನ್ಯಾಗ ಗ್ಯಾಸಲೇಟೆಣ್ಣಿ ಡಬ್ಬಿಗಿ ಕೈಹಾಕುತ್ತ ಗಾಬಾದ ಮುದುಕಿ ಪಿಳಿಪಿಳಿ ಕಣ್ಣಬಿಡ್ತು. ಎದುರಿಗೆ 6 ಅಡಿ ಎತ್ತರದ ಮನ್ಷಾ ನಿಂತಿದ್ದ.
ಯಾರೆಪ್ಪಾ ನೀ? ಚಿಮನಿ ಬುಡ್ಡಿ ಢಾಳಿಸಿ ಅವನ್ಮುಂದ ಹಿಡಿದ್ಳು. ಅಂವ ಕಿರಿಮೈದುನ ಯಲ್ಲಪ್ಪನ ಅಳ್ಯಾ ಹುಚ್ಚಮಲ್ಲಪ್ಪಿದ್ದ. ಬಾಗಲದಾಗ್ಯಾಕ್ ನಿಂತಿದಿ? ಒಳ್ಯಾಕ ಬಾರಪಾ ಮಲಪ್ಪ ಅಂದಳು. ಭೇಷಿ ಅದಿರ್ಯಾ ಅತ್ತಿ? ಅನ್ನುತ್ತ ಹುಚಮಲ್ಲಪ್ಪ ಒಳನಡೆದ.
ಭೇಷ್! ಅನ್ಕೋಂತ ಹೋಗಬೇಕಷ್ಟ. ಯಾರಿರ್ಲಿ ಬಿಡ್ಲಿ ಗೇಣೊಟ್ಟಿಗಾಗಿ ಬದಕ ಮಾಡಬೇಕಪಾ. ನೀ ಇಕಡಿ? ಹೆಂಡ್ರುಮಕ್ಕಳದು ನೆನಪ ಆತೇನು? ತ್ವಾಣಗಟ್ಟ್ಯಾಗೂ ಇಲ್ಲಂತಲ್ಲ. ಎಲ್ಲೆಪಾ ನಿನ್ನ ಠಿಕಾಣಿ?
ಇವರು ಇದ ಊರಾಗ ಅದಾರನ್ನು ಸುದ್ದಿ. ಅದಕ ಬಂದೀನಿ. ಎಲ್ಲಿದಾರ ನನ್ನ ಹೆಂಡ್ರಮಕ್ಕಳ? ಅಂದ.
‘ರೇವಣ್ಯಾ.. ಏ ರೇವಣ್ಯಾ.. ಎಲ್ಲಿ ಸಾಯ್ಲಾಕ ಹೋಗಿಯೋ ಹಾಂಟ್ಯಾನ ಮಗನ? ಚಂಜ್ಯಾಗಾನ ಮನಿ ಸೇರ್ಬೇಕನ್ನು ಖಬರಿಲ್ಲೇನು? ಬಾರೋ ಮುಡುದಾರ ಬಾ’ ಅಂತ ಮುದುಕಿ ಮೊಮ್ಮಗನ ಕೂಗಿತು. ಮುದುಕಿ ದನಿಕೇಳಿ ರೇವಣ್ಯಾ ಕಾಲಿಗಿ ಬುದ್ಧಿ ಹೇಳಿದ. ಬರುತನಕ ಪುರುಸೊತ್ತಿಲ್ಲೇನು? ಒದರ್ಯಾಡಿ ಗಂಟ್ಲ ಹರಕೋತಿ ಅನ್ನುತ್ತ ಕೈಕಾಲ್ಮುಖ ತೊಳಕೊಂಡ.
ಇಬ್ಬರಿಗೂ ಚಾ ಕೊಟ್ಟು,’ನಿಮ್ಮಾಮಾಗ, ರೇಣವ್ವತ್ತಿ ಮನಿ ತೋರಿಸು’ ಅಂತ ಮಲ್ಲಪ್ಪನ ಕೂಡ ರೇವಣ್ಯಾನ ಜುಡಾ ಮಾಡಿದಳು.
ಗೋಧಿ ನುಚ್ಚೊಡಿಸಿ ಭಾಳ ದಿನ ಆತು. ರಾತ್ರಿ ಊಟಕ್ಕ ಚಜ್ಜಕ ತಿರುವಿದ್ರಾತು. ಅದ ಕಿಚ್ಚಿನ್ಯಾಗ ಒಂದೊಬ್ಬಿ ರೊಟ್ಟಿ, ಮೆಣಸಿನಕಾಯಿ ಚಟ್ನಿ ಅರೆದರೆ ನಾಳಿತನಕ ಜಟ್ಟ ಕಡಿತೈತಂತ ರೇಣವ್ವ ಇಚಾರ ಮಾಡ್ತಿದ್ಳು. ಶಾರಿ, ಪರಸ್ಯಾ ಪಾಟಿಗಂಟ ತುಗೋಂಡು ದಡೇದ ಮೌಲಾಸಾಬನ ಮನಿಗಿ ಅಭ್ಯಾಸ ಮಾಡಾಕ ಹೋಗಿದ್ದವು.
ಅತ್ತಿ.. ಅಂತ ಒದರಕೋಂತ ಬಂದ ದನಿ ಕೂನ ಹಿಡಿದು ಹೇಳಲಾ ಅಳಿಮಗನ ಅಂತ ಕಣ್ಣೆತ್ತಿ ರೇವಣ್ಯಾನ ನೋಡುದಕ ರೇವಣ್ಯಾನ ಸಂಗಾಟ ಹುಚ್ಚಮಲ್ಲಪ್ಪನೂ ಇದ್ದ. ರೇಣವ್ವನ ಸಿಟ್ಟು ನೆತ್ತಿಗೇರಿತು. ಹೆಂಡ್ರಮಕ್ಕಳು ನೆಪ್ಪಾದರೇನು? ಅಕಿ ಬೆನ್ನ ಹತ್ತಿ ಹೋಗಿದ್ಯಲ್ಲ. ಹಂಪ್ ಹರಕ್ಕೊಂಡು ಹೋಗಬೇಕಿಲ್ಲೋ. ಸತ್ತಾರೋ ಬದುಕ್ಯಾರೋ ನೋಡಾಕ ಬಂದಿಯೇನು? ಬಿರಸಾಗಿ ನುಡಿದಳು. ಯಾವುದನ್ನೂ ಕಿವಿಗಿ ಹಾಕೊಳ್ಳದೇ ಹುಚ್ಚಮಲ್ಲಪ್ಪ ದೇವರಂಗ ಸುಮ್ಮ ಕುಂತಬಿಟ್ಟಿದ್ದ. ಮನ್ಯಾಗ ತಾ ಒಬ್ಬಾಕಿನ ಅದಿನಿ ಅನ್ನುವಂಗ ರೇಣವ್ವ ಅಡಿಗಿ ನಡಿಸಿದ್ಳು. ಅಡಿಗಿ ಆದಮ್ಯಾಲ ಗಂಡಗ ಊಟ ಬಡಿಸಿ ಕೌದಿ ಕೊಟ್ಟು ಮಲಗಾಕ ಗುಡಿಗಿ ಹಚಗೊಟ್ಟಳು.
ಅಂವ ಹೋದಮ್ಯಾಲ ದಡೇದ ಗುಡುಮಾ, ತ್ವಾಟದ ನೀಲವ್ವ, ಸೈಯದರ ಖಾಜಾಬಿ, ಶಾಂಯವ್ವ, ಗೌರವ್ವ, ಬೀರಪ್ಪ, ಹನಮಂತ.. ತನ್ನ ಕಳ್ಳಬಳ್ಳಿ ಜೊತಿ ಓಣಿಗೋಣಿನ ಪಂಚಾತಿ ಸೇರಿತು. “ನಾ ಒಲ್ಲೆವಾ ಅತ್ತಿ.. ಇಂವನ ಕೂಡ ಸಂಸಾರ ಮಾಡುದು ನೀಗುದಿಲ್ಲ. ಇಂವ ಇವತ್ತ ನೆಟ್ಟಗಿರ್ತಾನ. ನಾಳಿ ಅದ ಕೈಕ ಅಂವಂದು. ವರಸಲ್ಲ ಯಾಡ್ಡೊರಸಲ್ಲ ಹನ್ಯಾಡೊರಸ ಸಂಸಾರ ಮಾಡಿನಿ. ರಗಡ ಕಂಡೀನೆವ್ವ ಇಂವನ ಸುಖದ ಸುಪ್ಪತ್ತಿಗಿ. ಇಂವ ಸುದ್ದಿದ್ರ ಕೂಸುಗೋಳನ ಉಡ್ಯಾಗ ಕಟ್ಕೊಂಡು ಹೊಟ್ಟಿ ಹೊರ್ಯಾಕ ಯಾಕ ಊರೂರು ತಿರಗ್ತಿದ್ನಿ? ಮಕ್ಕಳಿಷ್ಟ ದೊಡ್ಡವರಾದರ ಅಪ್ಪ ಕೊಡಿಸಿದ್ದು ಅಂತ ಗೇಣರಬಿ ಅಂಚಡಿ ಗೊತ್ತಿಲ್ಲವುಕ. ಕೈಯಾಗ ರೊಕ್ಕಿಲ್ಲದೇ ಕೂಳಿಗಿ ಅನೂಲಿ ಆಗಿ ಬಂದಾನ. ಹೆಂಡ್ರಮಕ್ಕಳ ಮ್ಯಾಲಿ ಜೀಂವ ಇದ್ದಿದ್ರ ನನ್ನೆದಿಗಿ ಕೊಳ್ಳಿ ಇಡುವ ಕೆಲ್ಸ ಮಾಡ್ತಿರಲಿಲ್ಲ. ಹೊತ್ತು ಹೊಂಡುಗುಡದ ಅಂವನ ಇಲ್ಲಿಂದ ಮೆಟ್ಟ ಬಿಡಸಿ ಪುಣ್ಣೆ ಕಟ್ಗೋರಿ”. ಅಂತ ರೇಣವ್ವ ತುಂಬಿದ ಕಣ್ಣಿಗಿ ಸೆರಗು ಹಿಡಿದು ಕಣ್ಣೀರ ತಗದಳು.

“ಅತ್ರ ಏನ ಬರ್ತದ ಕೋಡಿ? ಇಲ್ಲಿ ಕೇಳು, ಸಂಸಾರ ಅಂದಮ್ಯಾಲ ಗಂಡೆಂಡ್ರ ನಡಬರಕ ಯಾಡ್ಮಾತ ಬರತಾವು ಹೊಕ್ಕಾವು. ಅಂವ ಗಂಡ್ಸಿದ್ದಾನ. ಆಳುವ ಗಂಡಿಗೆ ಹತ್ತ ಹೆಣ್ತೇರು ಕಡಿಮಿ. ಅದನ ದ್ವಾಡದ ಮಾಡಿದ್ರ ಹೆಂಗಾದೀತ ಬಾಳೇವ? ಗಂಡ ದಿಕ್ಕಿಲ್ಲಿದ ಮನಿ ಅದ್ರ ನನ್ನ ಸೊಸಿಯ. ಬಂಗಾರದಂತ ಮಕ್ಕಳ ಮಾರಿ ನೋಡ್ಯರೇ ಸುಮ್ಮಾಗು” ಅನ್ನುತ್ತ ರೇಣವ್ವನ ಸ್ವಾದರತ್ತಿ ಶಾಂಯವ್ವಾಯಿ ಬುದ್ಧಿ ಹೇಳ್ತಿದ್ದಳು. ಉಳದವರೆಲ್ಲ, “ಮುದುಕಿ ಬರಬ್ಬರ ಮಾತಾಡತಾಳ” ಅಂತ ತಲಿ ಆಡಿಸಿದರು. ಆಸರಕ ಬ್ಯಾಸರಕ ಇದ್ದಾವರೇ ಮಂದಿಮಕ್ಕಳು. ಮಾತ ಮೀರಬಾರದು ಅಂತೇಳಿ, “ಆತ್ರೆವಾ, ನೀವೂ ನೋಡುವಂತ್ರೆ ಇಂವನ ಬಾಳುನುಕೀನ” ಅಂತಂದು ಪಂಚಾತಿ ಮುಗಿಸಿದಳು.
ಕಣ್ಮುಚ್ಚಿದರ ರೇಣವ್ವಗ ನಿದ್ದಿ ಬರವಲ್ದು. ಕಟಿಗೊಂಡ ಗಂಡ ಭೇಷಗ ಭೋಗಿಸಿದ ಫಲಕ್ಕ ಯಾಡ ಮಕ್ಕಳನ ಕೈಯಾಗಿಟ್ಟಿದ್ದ. ದುಡಿಯುದು ತಂದಾಕುದಿಲ್ಲ. ಹೇಂತಿ ತಂದಾಕಿದ್ರಾಗ ತಿಂದುಂಡ ಮೈಮುರ್ಯಾಂವ. ಮೈತಿಂಡಿಗಿ ಲಮಾನ್ಯಾರ ಲಕ್ಕಿ ಕೂಡ ಕಬ್ಬಿನ ಪಡದಾಗ ಮಿಸಗ್ಯಾಡುದು ರೇಣವ್ವನ ಕಿಂವಿಮ್ಯಾಲ ಬೀಳಾನ ಈ ಪತ್ರೋಳಿ ನಂಬಿದ್ರ ಜೀವನ ಆಗುದುಲ್ಲಂತ ಊರೂರು ಸುತ್ತಿ ದುಡದು ಹೊಟ್ಟಿ ಹೊರದ್ಳು.”ಯಾವಂದೋ ಕೂಡ ಓಡಿ ಹೋಗ್ಯಾಳ ಹಡಿಬಿಟ್ಟಿ” ಅನ್ನು ಸುದ್ದಿ ಕೇಳಿ ಕಳ್ಳಾಗ ಖಾರಾ ಕಲಸಿದಂಗಾಗಿ ಮಂದಿಮಕ್ಕಳ ಕೂಡ ತಂಗಳ ರೊಟ್ಟಿ ತಿಂದು ಜೀವನ ಮಾಡಿದರಾತಂತ ತವರೂರಾಗ ಮನಿ ಮಾಡಿ ಬದುಕ ನಡಿಸಿದ್ಳು. ತಾಯ್ಸತ್ತ ತಬ್ಬಲಿ ರೇಣವ್ವ. ಮಲತಾಯಿ ಧೋರಣ್ಯಾಗ ತವರಮನಿ ಬಾಗಿಲ ಎಂದೋ ಮುಚ್ಚಿತ್ತು. ಸ್ವಾದರತ್ತಿ ಶಾಂಯವ್ವ, ಕೊಂತೆದೊಡ್ಡವ್ವನ ಮಗ ಬೀರಪ್ಪ ಆಸರಾಗಿದ್ದರು. ಬಾತಕ್ಕಬಾರದ ಗಂಡ ಮತ್ತ ತನಗ ಜುಡಾ ಆದನಲ್ಲ. ಹುಚ್ಚಮಲ್ಲನ ನೆನದು ಕಣ್ಣೀರಾದಳು.
ಕರ್ಲ್ ಹೊರುದು, ಮಣ್ಣ ಹೊರುದು, ಡಾಂಬರ್ ಕೆಲಸ ಅಂತೆಲ್ಲಾ ಯಾಡ್ಯಾಡ ದಿನ ಕೆಲಸ ಮಾಡಿ ಮೂರನೇ ದಿನಕ್ಕ,”ಅವನೌವನ! ಬಿಸಿಲಿಗೆ ಮನಷ್ಯಾ ಅನೂಲಿ. ಒಂದ್ಯಾಡ ದಿನ ಆರಾಮ ಮಾಡ್ತೇನಿ” ಅಂತಂದು ಮನ್ಯಾಗ ಕುಂದ್ರಾಕ ಸುರುಮಾಡಿದ. ಕೆಲಸದ ಮಾಲಕರು ಮನಿತಕಾ ಬಂದು,”ನಿನ್ನ ಮ್ಯಾಲಿನ ನೆಂಬಿಗಿಗಿ ನಿನ್ನ ಗಂಡನ ಕೆಲಸಕ್ಕ ಇಟಗೊಂಡಿದ್ಯ. ಅಂವ ನಯಾಪೈಸೆ ದುಡ್ಯಾಂವಲ್ಲ. ಕೆಲಸದ ಮ್ಯಾಲೂ ಆಳ ಮನಷ್ಯಾರ ಸಂಗಾಟ ಬರೇ ಮಂಡ ಹಚಗೊಂಡ ಕುಂದರ್ತಾನ. ಹಿಂಗಾದರ ಪೂರಟ ಆಗುದಿಲ್ಲ. ನಾಳಿಂದ ಹ್ವಾರೇಕ ಬರುದು ಬ್ಯಾಡವ” ಅಂತ್ಹೇಳವರು. ರೇಣವ್ವ ಒಂದಿನ ಶಾಯಂವ್ವತ್ತಿ ಮನಿಗಿ ಹೋಗಿ, “ನಾಳಿಂದ, ನಿಮ್ಮ ಮಗನ ಮಡ್ಡಿಗೆ ಹಚಗೊಡ್ತೀನಿ. ಅವನಿಗಿ ಕೆಲಸ ಹಚ್ರೆಪಾ ಮಾಮಾ. ಆಡ ಮೇಸ್ಕೊಂತ ಕಟಗಿಕುಳ್ಳ ಮಾಡ್ಲಿ. ಇಂವನ ಡೊಳ್ಳಿನಂಥಾ ಹೊಟ್ಟಿಗೂ ನಾನ ತೇಗುದಾಗೈತಿ. ಎಲ್ಲಿ ಕುಂತಿದ್ನೋ ಹುಚ್ಚನಾನ ಹಾಂಟ್ಯಾ ನನಗಿದಿ ಆಗಿ. ಬಾಸಿಂಗ್ ಹರೀಲಿ” ಅಂತ ಕಲ್ಲಪ್ಪ ಮಾಮಾನ ಮುಂದ ಅತ್ತು ಬಂದಿದ್ದಳು.
ಮೂರ್ತಿಂಗಳಿಂದ ಹುಚ್ಚಮಲ್ಲಪ್ಪನ ದಿನಚರಿ ಒಂದೇ. ಸೂರ್ಯ ಮುಕುಳಿ ಮ್ಯಾಲ ಬರುತನಕ ಮಲಗುದು. ಜಳಕಜಾಪತ್ರಿ ಮುಗಿಸಿ ಆಡ ಹೊಡಕೊಂಡ ಹೊಂಟನಿಂತ್ರ ಮಡ್ಡಿ ಮುಟ್ಟುತನಕ ನಿಲ್ಲಂಗಿಲ್ಲ. ಹೊಲದಾಗ ಒಂದ ಗಿಡಕ್ಕ ಆಡುಕಟ್ಟಿ ಹಂತಿಂತಾದ ಒಂದೀಟ ತಪ್ಪಲ ಆಡಿನ ಮುಂದ ಕಟ್ಟಿದಂದ್ರ ಅವತ್ತಿನ ಕೆಲಸ ಮುಗಿತು. ಬಿಸಲ ನೆತ್ತಿಗೇರಿ ನೆಳ್ಳ ಕರಗಿ ಹೊಯ್ದಾಡು ಮಣ್ಣಿಗಿ ನೀರಡಿಸಿದ ಆಡು ಚೀರ್ಯಾಡಿದ್ರೂ ಖಬರಿಲ್ಲದೇ ಬೇನಗಿಡದ ನೆಳ್ಳಿಗಿ ಮೈಚೆಲ್ಲಿ ಮಲಗಿಬಿಡ್ತಾನ.”ಗಂಗಾಳ ಮಾಡೀನಿ ಉಣ್ಣಾಕ ಬಾರಪ್ಪಾ” ಅಂತ ಕೂಗಿದಾಗ ಸಟಾಸಟಾ ಎದ್ದು ಉಣ್ಣಾಕ ಕುಂಡ್ರತಾನಂತ ಶಾಂಯವ್ವಾಯಿ ಕತಿಮಾಡಿ ಹೇಳಿದ್ಳು.
ಹೆಂಡ್ರಮಕ್ಕಳನ ಹುಡುಕೊಂಡ ಬಂದಾಗ ಹುಚ್ಚಮಲ್ಲಪ್ಪ ಗುರುತ ಸಿಗ್ತಿರ್ಲಿಲ್ಲ. ಸೊರಗಿದ್ದ. ಹೆಣ್ತಿ ಕೈಯಾಗಿಂದು ಕಮ್ಮಕಮ್ಮಂದ ತಿಂದು ಕೊಬ್ಬಿದ ಗೂಳಿ ಆಗ್ಯಾನ. ಮಕ್ಕಳಿಗೆ ಗದರಿಸಾಕ ಸುರು ಮಾಡ್ಯಾನ. ಮೈ ತಿಂಡಿಗಿ ಹೆಣ್ತಿ ಹಾಸಿಗ್ಯಾಗ ಕರೀತಿಲ್ಲೆನ್ನುವ ಸಿಟ್ಟಿನ್ಯಾಗ ಉಪ್ಪಖಾರಾ ಹೆಚ್ಚುಕಮ್ಮಿ ಆಗೈತಂತ ಹೆಣ್ತಿ ಮ್ಯಾಗೂ ಹಾರ್ಡಾತಾನ. ಒಟ್ಟಿನ್ಯಾಗ ರೇಣವ್ವ ಜೀಂವಾತೇದು ಗಳಿಸಿದ ಮನ್ಯಾಗ ಹುಚ್ಚಮಲ್ಲ ಯಜಮಾನಕಿ ನಡಿಸಿ ಹೆಡಿಬಿಚ್ಚಿದ ಹಾಂವಿನಂಗ ಭುಸುಗುಡಾಕತ್ಯಾನ. ರೇಣವ್ವ ಮಾತ್ರ ಕೂಡಗಿ,ಮಸೂತಿ, ಮಲಗಾಣ ಊರೂರ ಅಲ್ದು ಚೀಲ ಜ್ವಾಳ, ಅರ್ಧ ಚೀಲ ಗೋಧಿ, ಯಾಡ್ಮೂರ ಗೊಬ್ಬರಚೀಲ ಶೆಂಗಾ ಮಾಡಕೊಂಡು ಸುಗ್ಗಿ ಖುಷ್ಯಾಗಿದ್ಳು. ಇತ್ತಿತ್ತಲಾಗಿ ಮಡ್ಡೀಗ್ಹೋಗುದು ನಿಲ್ಲಿಸಿದ ಹುಚ್ಚಮಲ್ಲಂದು ಬರೇ ಚೈನಿ. ಹಿಂಗಾಗಿ ಆಡು ಮನ್ಯಾಗ ನಿಂತಬಿಟ್ಟಿತ್ತು. ಶಾರಿ, ಪರಸ್ಯಾ ಪಾಳೆ ಹಂಚಿಕೊಂಡು ಸಾಲಿ ಊಟಕ್ಕ ಬಿಟ್ಟಾಗ ತಪ್ಪಲ, ನೀರನಿಡಿ ಮಾಡಿ ಮನ್ಯಾಗ ಮೇಯಿಸ್ತಿದ್ದರು.
ಒಂದಿನ, ಸಾಲಿದೇನೋ ಫಂಕ್ಷನ್ ಅಂತ ಶಾರಿ, ಪರಸ್ಯಾ ಮೂರುಚಂಜಿಕ ಮನಿಗಿ ಬಂದರು. ಹಸದ ಆಡ ಒದ್ಯಾಡಿ ಯಾಡ್ಮೂರ ಕಪೆ ಉಚ್ಚಿಮಾಡಿ ಪಡಸಾಲೆಲ್ಲ ಹಿಕ್ಕಿ ಹಾಕಿ ಗ್ವಾಡಿ, ಪಡಸಾಲಿ ಒಡದ ಚಿಪ್ಪಾಡಿ ಮಾಡಿತ್ತು. ಅಂಗೈನಾಟ ಪಡಸಾಲ್ಯಾಗ ಒಂದ್ಕಡಿ ಆಡು ಕಟ್ಟಿ ಮತ್ತೊಂದ್ಕಡಿ ತಾಯಿಮಕ್ಕಳ ಮಲಗ್ತಿದ್ರು. ಅವ್ವನ ಪಿತ್ತ ನೆತ್ತಿಗೇರಿ ಹಾರ್ಯಾಡ್ತಾಳು. ನಸೀಕಿಲೆದ್ದು ಮನಿ ಸಾರಿಸಿದರಾತಂದು ಹೆಂಡಿ ಹಿಡ್ಯಾಕ ಸಿಂದಿಹೆಡಗಿ ತುಗೊಂದು ಅಗಸಿ ಬಾಗಿಲಿಗಿ ಓಡಿದಳು. “ಮುಂಜೇನಿಂದ ಚಂಜಿತನಕಾ ಮನ್ಯಾಗ ಇರ್ತಿ. ಒಂದೀಟು ನೋಡಾಕಾಗ್ಲಿಲ್ಲೇನು? ಪರಸ್ಯಾ ಅಪ್ಪಗ ಒದರ್ಯಾಡಿದ. ಹುಚ್ಚಮಲ್ಲಗ ಸಿಟ್ಟೇರಿ ಪರಸ್ಯಾನ ಕಪಾಳಕ್ಕ ಸೊಡ್ಡಂತ ಹೊಡದ. ಮೂಗಿನ್ಯಾಗ ರಗತ ಬಳಬಳ ಉದುರಿತು. ಪರಸ್ಯಾ ಹೋಕೋ ಬಡಕೋ ಮಾಡಿದ. ರೇಣವ್ವ ಆಗಷ್ಟ ಬಂದಿದ್ಳು. ಮಗನ ಮ್ಯಾಲ ಕೈಮಾಡಿದ್ಯಾಕಂತ ಅಕಿನೂ ಒದರ್ಯಾಡಿದಳು. ಗಂಡಗ ಎದರ ಮಾತಾಡ್ತಿಯೇನ ಗಯ್ಯಾಳಿ? ನಿನೌವನ ಅಂದವನೇ ಅಕಿಗೂ ಕೈಯೆತ್ತಿದ. ನೀಕೂಡ ನಾಕೂಡ ಅಂತ ಜನ ಮೇಳೈಸಿತು. ಪರಸ್ಯಾ ಕೊಂತೆವ್ವಾಯಿ ಮನಿಲಿಂದ ಬೀರಪ್ಪನ ಕರಕೊಂಡ ಬಂದ.”ಮೈಯಾಗ ಸೊಕ್ಕ ಬಂದೈತೇನ ಮಗನ? ಹೆಂಡ್ರಮಕ್ಕಳ ಮ್ಯಾಲ ಕೈ ಮಾಡಿದರ ಮುಕ್ಳ್ಯಾನ ಎಲುವ ಮುರೀತೀನಿ” ಅಂತ ಬೀರಪ್ಪ ಧಮಕಿ ಹಾಕಿದ.
ಚಿಕ್ಕಿ ಕರಗು ಹೊತ್ತಿನ್ಯಾಗ ಗಂಟುಮೂಟೆ ಕಟಗೊಂಡು ಊರಿಗಿ ಹೊಂಟಿನಿ ಅಂತೇಳಿ ಹುಚ್ಚಮಲ್ಲಪ್ಪ ಟೇಷನ್ ದಾರಿಗುಂಟ ನಡೆದುಬಿಟ್ಟ. ಪರಿಸ್ಯಾ ಊದುಕಡ್ಡಿ ಹಿಡಿದು ದೇವರಿಗಿ ಹೊಂಟಿದ್ದ. ಶಾರಿ ಒಡದ ಪಡಸಾಲಿ ಸಾರಿಸುತ್ತಿದ್ಳು. ರೇಣವ್ವ ತಟ್ಟಿ ರೊಟ್ಟಿಬಡದು ಬುತ್ತಿ ಕಟ್ಗೋತಿದ್ಳು. ರೊಟ್ಟಿ ತಿನಕೋಂತ ಬಂದ ತ್ವಾಟದ ಲಕ್ಷ್ಮಿಂಬಾಯಿ,”ಆತಿಲ್ಲ ರೇಣಕ್ಕ? ಟ್ಯಾಕ್ಟರ್ ಹೊಂಟ ನಿಂತೈತಿ. ಇವತ್ತೆಲ್ಲಾ ಮಡಿಗೂ ಉಳ್ಳಾಗಡ್ಡಿ ಹಚ್ಚಿ ಮುಗಸಬೇಕು. ನಾಳಿಯಿಂದ ಗೋಟೆದಾರದು ಗುತ್ತಿಗಿ ಐತಿ. ಅಂವಸರ ಮಾಡು” ಅಂತ ಹೊಂಟನಿಂತ್ಳು. ನಡಿಯವ್ವಾ ಅಂತ ರೇಣವ್ವ ಬುತ್ತಿ ಗಂಟ ತಲಿಮ್ಯಾಲ ಇಟಗೊಂಡು ರೊಟ್ಟಿ ತಿನ್ಕೋಂತ ಲಕ್ಷಿಂಬಾಯಿ ಹಿಂದಿಂದ ಹೆಜ್ಜಿ ಹಾಕಿದಳು.






nice
ಧನ್ಯವಾದಗಳು. .. 🙂
bari mast iatri kathe uttar karnataka bhashe super
ಧನ್ಯವಾದಗಳು ಸರ್.. ನಿಮ್ಮ ಓದಿಗೆ ಶರಣು..
ಚನ್ನಾಗಿದೆ.
ಥ್ಯಾಂಕ್ಸ್ ಅಕ್ಕ..
ಕತೆ ತುಂಬಾ ಚೆನ್ನಾಗಿದೆ. ಹಳ್ಳಿಯ ಭಾಷೆಯ ಪದಗಳು ತುಂಬಾ ಮುದ ನೀಡಿದವು.ಅಭಿನಂದನೆಗಳು.
ಧನ್ಯವಾದಗಳು ಸರ್..
ಛಲೋ ಐತ್ರಿ ಕತಿ. ಬರಿಯೂದ ಬಿಡಬ್ಯಾಡ್ರಿ….
ಹಂಗ ಆಗಲ್ರೀ ಸರ್.. ಬರಿಯೂನು…
ಕತೆ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ಸರ್…
ಒಂದರ್ದ ತಾಸ ಸಣ್ಣ ಕಥಿ ಓದುದರಾಗ ನಾ ಎಲ್ಲೆ ಅದನಿಗಾ ಅನ್ನುದ ಮರತು.ಹಳ್ಳಿಯೊಳಗ ಒಂದ ಸುತ್ತ ಹೊಡದ ಹ್ವಾರೆಕ ಆಳ ಮಾಡಾಕ ಹ್ವಾದಾಗ ಊರಾಗಿನ ಹೆಣಮಕ್ಕಳ ಕೂಡ ಅವರ ಕಥಿ ಕೇಳ ಒಡಾಕುಟ್ಟಿ ಬಂದಂಗಾತು ನಾ……ಮಸ್ತ ಅದರೀ ಹಿಂಗ ಮುಂದುವರೆಯಲಿ ಈ ಸಣ್ಣ ಕಥೆಗಳು ದೊಡ್ಡವಾಗೊತನಕಾ…..
ಧನ್ಯವಾದಗಳು ಸರ್… ಹೂಂ ಬರಿಯೂನು ರೀ ಸರ್ 🙂