ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ರೀ ನಿಮ್ ಹುಡ್ಗಿ ಸೂಪರ್ರಾಗಿ ಇದಾರ್ರೀ. ಒಳ್ಳೆ ಸಿನಿಮಾ ಹೀರೋಯಿನ್ ತರ..”

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 14

ತಿಮ್ಮಾಪುರದ ತರಲೆಗಳು

avadhi-column-rahul bw-edited2

ಒಂದು ಕೆಟ್ಟ ಕನಸಿನಿಂದ ಸೂರ್ಯನೇಳುವ ಮುಂಚೆಯೇ ಎಚ್ಚರವಾಯಿತು. ವ್ಯಾಯಾಮ ಮತ್ತು ಯೋಗ ಮಾಡಿ ಮನಸ್ಸನ್ನು ಮತ್ತೆ ಗಟ್ಟಿಗೊಳಿಸಿದೆ. ಬೆಳಗಿನ ಕಾರ್ಯಕ್ರಮ ಮುಗಿದು, ತಿಂಡಿ ತಿಂದು ಆವರಣದಲ್ಲಿ ಬಿದ್ದಿದ್ದ ಒಂದಷ್ಟು ಪ್ಲಾಸ್ಟಿಕ್ ಕಸ ಎತ್ತಿ ಕಸದ ಬುಟ್ಟಿಗೆ ಹಾಕುತ್ತಿದ್ದಾಗ ಒಬ್ಬ ಮನುಷ್ಯ ಬಂದು “ಬೆಳಿಗ್ಗೆನೇ ಸ್ವಚ್ಛ ಭಾರತ್ ಕಾರ್ಯ ಶುರುಮಾಡಿದೀರ?” ಎಂದು ಅಣಕವಾಡಿದ.

“ಇಲ್ಲ ಸ್ವಾಮಿ. ಸ್ವಚ್ಛ ಭಾರತ್ ಮಾಡಲು, ನಾನೇನು ನರೇಂದ್ರ ಮೋದಿಯೇ? ಬುದ್ಧಿವಂತರು ಕಸವನ್ನೆಸಿಯುತ್ತಾರೆ. ಪೆದ್ದರು ಸ್ವಚ್ಛ ಮಾಡುತ್ತಾರೆ. ಅಷ್ಟೇ” ಎಂದು ಮುಖಕ್ಕೆ ಹೊಡೆದೆ. ಅವನು ನಗುತ್ತಾ ಇನ್ನೇನೋ ಹೇಳಲು ಬಂದ. ಅವನ ಹತ್ತಿರ ಮಾತನಾಡಲು ನನಗೆ ಸಮಯವಿರಲಿಲ್ಲ. ಮಠದಿಂದ ಮಳಲಿ ಪ್ರೌಢಶಾಲೆಯ ದಾರಿಯನ್ನು ಹಿಡಿದು ಹೊರಟೆ.

avadhi- column- rahul- low res- editedಎರಡು ಮೈಲಿ ಹೆದ್ದಾರಿಯಲ್ಲಿ ನಡೆದು, ಎಡಕ್ಕೆ ತಿರುಗಿ ಮತ್ತೆ ಮೂರು ಮೈಲು ನಡೆಯಬೇಕು. ರಸ್ತೆಯ ಹಳ್ಳಕೊಳ್ಳಗಳಲ್ಲಿ ಮಳೆನೀರು ತುಂಬಿ ಹೊಂಡಗಳಾಗಿದ್ದವು. ಈ ಊರಿಗೇ ಬರಬಾರದಿತ್ತು ಎಂದುಕೊಳ್ಳುವಷ್ಟರಲ್ಲಿ ಒಂದು ವಿಸ್ಮಯ ಕಾದಿತ್ತು. ನೆನ್ನೆ ನೋಡಿದ್ದ ಗಾಳಿಯಿಂದ ವಿದ್ಯುತ್ ತಯಾರಿಸುವ ಬೃಹತ್ತಾದ ಯಂತ್ರಗಳು ಹತ್ತಿರವಾಗುತ್ತಿದ್ದವು. ಹಾಗೇ ನಡೆಯುತ್ತಾ ಒಂದು ಯಂತ್ರದ ಹತ್ತಿರವೇ ಹೋದೆ. 200 ಅಡಿ ಅಜಾನುಬಾಹು ಕಂಬಕ್ಕೆ, ಸುಮಾರು 75 ಅಡಿಗಳ ಉದ್ದದ ರೆಕ್ಕೆಗಳನ್ನು ಸಿಕ್ಕಿಸಿದ್ದರು. ಗಾಳಿಯ ರಭಸಕ್ಕೆ ರೆಕ್ಕೆಗಳು ಬರ್ ಬರ್ ಎಂದು ಶಬ್ದ ಮಾಡುತ್ತಾ  ಗಿರಕಿ ಹೊಡೆಯುತ್ತಿದ್ದವು.

ಪಕ್ಕದಲ್ಲಿದ್ದ ಒಂದು ಗುಡ್ಡ ಕಾಣಿಸಿತು. ಯಾವನೋ ಮಹಾತ್ಮ ಅದನ್ನು ಆಗಲೇ ಕೊರೆಯಲು ಶುರುಮಾಡಿದ್ದು, ಇನ್ನು ಕೆಲವೇ ತಿಂಗಳಲ್ಲ್ಲಿ ಆ ಗುಡ್ಡವನ್ನೇ ಮಾಯ ಮಾಡಬಹುದೆಂದುಕೊಂಡು ಆ ಗುಡ್ಡವನ್ನು ಹತ್ತಲು ಶುರುಮಾಡಿದೆ. ಗುಡ್ಡದ ತುದಿಯಲ್ಲಿ ನಿಂತು ನೋಡಿದರೆ, ಸಾವಿರಾರು ಎಕರೆ ಹೊಲ, ಗದ್ದೆ, ತೋಟಗಳ ಮಧ್ಯೆ ಇಂತಹ ನೂರಾರು ಯಂತ್ರಗಳು ತಿರುಗುತ್ತಿದ್ದ ಒಂದು ಅದ್ಭುತ ನೋಟ ಕಾಣಿಸಿತು. ನನಗೆ ಖುಷಿ ತಡೆಯಲಾಗದೆ ಒಹೋ ಎಂದು ಜೋರಾಗಿ ಕೂಗಿದೆ. ಅಷ್ಟದಿಕ್ಕಿನಿಂದ ಪ್ರತಿಧ್ವನಿಸಿತು. ಅಕ್ಕ ಪಕ್ಕ ತಿರುಗಿ ನೋಡಿದರೆ ಯಾರೂ ಕಾಣಿಸಲಿಲ್ಲ. ಇನ್ನೊಂದೆರಡು ಸಲ ಜೋರಾಗಿ ಕೂಗಿದೆ. ಯಾರೋ ಹೊಲದಿಂದ ನನಗೆ ಕೂಗಿದ ಹಾಗಾಯಿತು. ಧ್ವನಿ ಬಂದ ದಿಕ್ಕಿಗೆ ನಡೆದುಕೊಂಡು ಹೋಗಿ ಕೂಗಿದವನನ್ನು ಸ್ವಲ್ಪ ಹೊತ್ತು ಮಾತನಾಡಿಸಿಕೊಂಡು ಹೊಲಗಳನ್ನು ದಾಟಿ, ಊರು ಸೇರಿದೆ.

ಊರಿನ ಒಂದು ಹೋಟೆಲ್‍ನಲ್ಲಿ ತಿಂಡಿ ತಿಂದು ಶಾಲೆಯ ದಾರಿ ಕೇಳಿಕೊಂಡು ಶಾಲೆಯ ಆವರಣವನ್ನು ತಲುಪಿದೆ. ಸಮಯವಿದ್ದರಿಂದ ಶಾಲೆಯ ಆವರಣವನ್ನು ಒಂದು ಸುತ್ತು ಹಾಕಿದೆ. ಸ್ವಲ್ಪ ದಿನಗಳ ಮುಂಚೆ ವಿವಿಧ ಜಾತಿಯ ಹತ್ತು ಸಸಿಗಳನ್ನು ಗೇಟಿನ ಮುಂಭಾಗದಲ್ಲೇ ನೆಟ್ಟಿದ್ದರು. ಅದಲ್ಲದೆ ವಿವಿಧ ಜಾತಿಯ ಸುಮಾರು ಹತ್ತು ಸಸಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಇನ್ನು ಇಪ್ಪತ್ತೈದು ಸಸಿಗಳನ್ನು ನೆಡಲು ಅನುವಾಗುವಂತೆ, ಗುಂಡಿಗಳನ್ನು ತೋಡಿದ್ದರು. ಖುಷಿಯಿಂದಲೇ ನನ್ನ ಉಪನ್ಯಾಸ ಶುರುಮಾಡಿದೆ. ಮೋಡದ ವಾತಾವರಣವಿದ್ದರಿಂದ ತಂಪಾದ ಗಾಳಿ ಬೀಸುತ್ತಿತ್ತು. ಎಲ್ಲರೂ ಮೈದಾನದಲ್ಲೇ ಕುಳಿತು ಉಪನ್ಯಾಸ ಕೇಳಿ ಖುಷಿಪಟ್ಟರು. ಪ್ರತಿಜ್ಞೆ ಪಡೆದು ಮುಗಿಸುವಷ್ಟರಲ್ಲಿ ತುಂತುರು ಮಳೆ ಶುರುವಾಯಿತು.

ಭೂಮಿ ತಾಯಿ ವರಕೊಟ್ಟಳು ಎಂದು ಕೂಗುತ್ತಾ ತಾಯಿಗೆ ಧನ್ಯವಾದ ಸಲ್ಲಿಸಿದರು. ಆದರೂ ಶಿಕ್ಷಕರ ಇಚ್ಚಾಶಕ್ತಿಯ ಮತ್ತು ಶಿಸ್ತಿನ ಕೊರತೆ ಇಲ್ಲಿ ಕಾಣಿಸಿತು. ಅವರಲ್ಲಿ ಒಬ್ಬ ಯುವ ಶಿಕ್ಷಕರೊಬ್ಬರು ಇದರ ಬಗ್ಗೆ ಕೆಲಸಮಾಡಲು ಶಕ್ತರಂತೆ ಕಂಡರು. ಉಳಿದವರೆಲ್ಲರದೂ ಬರೀ ಕಂತೆ ಪುರಾಣಗಳು. ಅವರು ಕೊಟ್ಟ ಚಹಾ, ಉಪ್ಪಿಟ್ಟು ತಿಂದು ಮುಖ್ಯೋಪಾಧ್ಯಾಯರ ಕೊಠಡಿಗೆ ಹೋದೆ. ಶಿಸ್ತಿನ ಕೊರತೆಯಿಂದ ಮತ್ತು ಸಮಯ ಪ್ರಜ್ಞೆಯಿಲ್ಲದ ಶಿಕ್ಷಕರು ಬಹಳ ನಿಷ್ಕ್ರಿಯರಾಗಿದ್ದಾರೆಂದು, ತಾವೇನಾದರು ತಮಗಿರುವ ಅಧಿಕಾರ ಚಲಾಯಿಸಿ ಅವರನ್ನು ಸರಿ ದಾರಿಗೆ ತರಲು ಹೋದರೆ, ತಮ್ಮ ಮೇಲೇ ಗೂಬೆ ಕೂರಿಸಿ ಹಳ್ಳಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡುತ್ತಾರೆ ಎಂದು ಹೇಳುವಾಗ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ನಾನು ದಿಗ್ಭ್ರಮೆಗೊಂಡು ಕೇಳಿಸಿಕೊಳ್ಳುತ್ತಿದ್ದೆ.

ತಾವು ಆ ಶಾಲೆಯಲ್ಲಿ ಮುಂದುವರಿಯಲು ಇಷ್ಟಪಡದೆ, ತನ್ನನ್ನು ಬೇರೆ ಶಾಲೆಗೆ ವರ್ಗಾಯಿಸಲು ಕೋರಿ ಅರ್ಜಿ ಕೊಟ್ಟಿರುವುದಾಗಿ ತಿಳಿಸಿದರು. ಅವರ ಮಾತಿನಲ್ಲಿ ಕಪಟವಿರಲಿಲ್ಲ. ಬಹುತೇಕ ಶಿಕ್ಷಕರು ಸಮಯಕ್ಕೆ ಬಾರದೇ ನನ್ನ ಉಪನ್ಯಾಸದ ನಂತರ ಕೊಠಡಿಗೆ ಬಂದು ಉಪಹಾರ ತರಿಸಿ ತಿಂದು, ನಂತರ ಲೋಕ ಸಮಾಚಾರದಲ್ಲಿ ತೊಡಗಿದ್ದರು. ಯಾರೂ ತರಗತಿಗೆ ಹೋಗಿ ಪಾಠ ಮಾಡುವ ಗೋಜಿಗೇ ಹೋಗಲಿಲ್ಲ. ಇದೇ ಅವರ ದಿನಚರಿಯಿದ್ದಂತೆ ಕಾಣಿಸಿತು. ಸರ್ಕಾರದ ಸಂಬಳ ತಿಂದು ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರುವ ಇಂತಹ ಶಿಕ್ಷಕರ ಮನೆ ಉದ್ದಾರವಾಗುವುದೇ?

ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಶಾಲೆ ಕಟ್ಟಿಸಿ, ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಶಾಲೆಯ ವಸ್ತುಗಳನ್ನು ಕಾಪಾಡಲು ಒಬ್ಬ ಕಾವಲುಗಾರನ ನೇಮಕ ಮಾಡಬೇಡವೇ? ಹಳ್ಳಿಗರು ತಮ್ಮ ಊರ ಶಾಲೆಯಲ್ಲೇ ಕಳ್ಳತನ ಮಾಡುತ್ತಿರುವುದು ಹೇಸಿಗೆ ಹುಟ್ಟಿಸದೆ ಇರುತ್ತದೆಯೇ? ಶಾಲೆಯಿಂದ ಪತ್ರವನ್ನು ಪಡೆದು, ಹೊರಗೆ ಆವರಣದಲ್ಲಿ ನೆಟ್ಟಿದ್ದ ಗಿಡಗಳನ್ನು ವೀಕ್ಷಿಸುತ್ತಿದ್ದೆ.

ಈ ಅರಣ್ಯ ಇಲಾಖೆಯವರೋ, ಶಾಲೆಗೆ ಗಿಡಗಳನ್ನು ಕೊಟ್ಟು ತಾವೂ ಒಂದೆರಡು ಪೋಟೋ ತೆಗೆಸಿಕೊಂಡು ಹೊರಟು ಹೋಗುತ್ತಾರೆ. ಒಂದೆರಡು ಗಂಟೆಗಳು ಶಾಲೆಯಲ್ಲಿ ಉಳಿದು ಸಸಿ ನೆಡುವ ಬಗ್ಗೆ ಪೂರ್ಣ ಮಾಹಿತಿ ನೀಡಿ, ಅದರ ರಕ್ಷಣೆ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳನ್ನು ಜೊತೆಗೂಡಿಸಿ ತಾವೇ ಮುಂದೆ ನಿಂತು ಗಿಡಗಳನ್ನು ನೆಡಬೇಡವೇ? ಎಂಬ ಪ್ರಶ್ನೆ ಕಾಡಿತು. ಅಷ್ಟರಲ್ಲಿ ಒಂದಷ್ಟು ಶಾಲೆಯ ವಿದ್ಯಾರ್ಥಿನಿಯರು ಬಂದು ನನ್ನನ್ನು ಮುತ್ತಿಕೊಂಡರು. ಅವರಿಗೆಲ್ಲಾ ಸಸಿ ನೆಡುವುದರ ಬಗ್ಗೆ ವಿವರಿಸತೊಡಗಿದೆ. ಸಿಹಿಯಿದ್ದ ಕಡೆ ಇರುವೆಗಳು ಬರಬೇಕಲ್ಲವೇ? ಹುಡುಗಿಯರನ್ನು ನೋಡಿ, ಹುಡುಗರೂ ಬಂದರು. ನನ್ನ ವಿವರಣೆ ಮುಂದುವರಿಯಿತು. ಒಂದು ಹುಡುಗಿ ನನ್ನನ್ನು ನೋಡಿ ಮುಸಿ ಮುಸಿ ನಗುತ್ತಿದ್ದಳು.

group“ಏನ್ ಆಯ್ತ್ರೀ? ನಾನ್ ಸರಿಯಾಗಿ ಹೇಳ್ತಾಯಿಲ್ವೇನು?” ಎಂದು ಕೇಳಿದೆ.

ಅವಳು ಗಾಬರಿಯಾಗಿ, ಮತ್ತೆ ನಾಚಿಕೊಂಡು, ತನ್ನ ತುಂಟು ನಗೆ ಬೀರುತ್ತಾ “ಸರ್, ನೀವ್ ಹೇಳೋದ್ ನನ್ ಕಿವಿಯೊಳಗ್ ಹೋಗ್ಲೇ ಇಲ್ರೀ ಸರ್ರಾ” ಎಂದಳು.

“ಯಾಕ್ರೀ?” ಎಂದು ರಾಗ ತೆಗೆದೆ.

“ನೀವ್ ಹೇಳ್ತಿದ್ರಾ ನನ್ಗಾ ಗಮನ ಕೊಡಕ್ ಆಗಲ್ರೀ ಸರ್ರಾ” ಎಂದು ರೀಲು ಬಿಟ್ಟಳು. ಎಲ್ಲರೂ ಜೋರಾಗಿ ಓ ಎಂದು ಕೂಗಿ ನನ್ನ ಕಾಲು ಎಳೆಯಲು ಶುರುಮಾಡಿದ್ದರು.

“ನಿಮ್ಗಾ ಮದುವಿ ಆಗ್ಯಾತೇನ್ರಿ ಸರ್ರಾ?” ಎಂದು ಮತ್ತೊಬ್ಬಳು ಕೇಳಿದಳು.

“ಹೂಂ ರೀ. ಮದುವೆಯಾಗಿ ಎರಡು ವರ್ಷ ಆಗಿದೆ” ಎಂದು ಪೂಜಾಳ ಫೋಟೋ ತೋರಿಸಿದೆ.

“ಅಯ್ಯೋ ಯಾಕ್ರೀ? ಇಷ್ಟ್ ಬೇಗ ಮದುವಿ ಆದ್ರೀ” ಎಂದು ರಾಗ ತೆಗೆದಳು.

“ರೀ ನಿಮ್ ಹುಡ್ಗಿ ಸೂಪರ್ರಾಗಿ ಇದಾರ್ರೀ. ಒಳ್ಳೆ ಸಿನಿಮಾ ನಾಯಕಿ ತರಹ. ನಿಮ್ ಜೋಡಿ ಚಲೋ ಐತಿ ಬಿಡ್ರೀ” ಎಂದು ಪೂಜಾಳ ಫೋಟೋ ನೋಡಿದಳು. ಫೋಟೋ ಎಲ್ಲರ ಕೈಸೇರಿ ನನ್ನ ಕೈಗೆ ಬಂತು.

“ಇದು ನೋಡ್ರಿ, ನಾನು ಇಲ್ಲಿಗೆ ಬರೋ ಮುಂಚಿನ ಫೋಟೋ” ಎಂದು ನನ್ನ ಒಂದು ಪಾಸ್‍ಪೋರ್ಟ್ ಅಳತೆಯ ಫೋಟೋ ಕೊಟ್ಟೆ.

“ಚಲೋ ಐತಿ ರೀ. ನೀವು ಅಂತ ಗೊತ್ತೇ ಆಗೋಲ್ದು ರೀ” ಎಂದು ಹೇಳಿ ತನ್ನ ಕಿಸೆಯಲ್ಲಿ ತೂರಿಸಿಕೊಂಡುಬಿಟ್ಟಳು. ಬೇರೆ ಹುಡುಗಿರಿಗೇ ತೋರಿಸಲೂ ಇಲ್ಲ. ಇತರ ಹುಡುಗಿಯರೂ ಕೂಡ ನನ್ನ ಫೋಟೋ ಕೊಡುವಂತೆ ಕಾಡಿಸಿದರು. ಅಷ್ಟರಲ್ಲಿ ಕೆಲವರು ಬಂದು ಶಿಕ್ಷಕರು ಕರೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊರಟರು. ಹೋಗುವ ಮುಂಚೆ ಕೆಲವರು ನನ್ನ ಹಸ್ತಾಕ್ಷರ ಮತ್ತು ದೂರವಾಣಿ ಸಂಖ್ಯೆ ಪಡೆದುಕೊಂಡರು. ಹಲವು ಗಿಡಗಳನ್ನು ನೋಡಿ, ಅವೆಲ್ಲಾ ದೊಡ್ಡ ಮರಗಳಾಗಲೆಂದು ಹರಸಿ ಮುಂದೆ ನಡೆದೆ.

ಶಾಲೆಯ ಮುಖ್ಯೋಪಾಧ್ಯಾಯರು ನನ್ನ ತಲೆಯಲ್ಲಿ ಹಲವು ಯೋಚನೆಗಳನ್ನು ತುಂಬಿದ್ದರು. ಚಹಾ ಕುಡಿಯಲೆಂದು ಒಂದು ಅಂಗಡಿಯಲ್ಲಿ ಕುಳಿತೆ. ಹಾಗೇ ದಿನ ಪತ್ರಿಕೆಗಳಲ್ಲಿ ಕಣ್ಣಾಡಿಸಿದಾಗ, ಎರಡು ವಿಷಯಗಳು ನನ್ನ ಗಮನ ಸೆಳೆಯಿತು. ಒಂದು ನಮ್ಮ ರಾಜ್ಯದ ರೈತ ಬಾಂಧವರ ಸರಣಿ ಆತ್ಮಹತ್ಯೆ. ಯಾಕಾಗಿ ನಮ್ಮ ರೈತರು, ಹಳ್ಳಿಗರು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ? ಬೆಳೆ ಬೆಳೆಯುವ ಅನ್ನದಾತನೇ ಪ್ರಾಣ ಕಳೆದುಕೊಂಡರೆ, ಅವರನ್ನು ನಂಬಿ ಬದುಕುತ್ತಿರುವ ಕುಟುಂಬಗಳ ಗತಿ ಏನಾಗಬೇಕು? ಸರ್ಕಾರಗಳು ಬಿಸಾಕುವ ಭಿಕ್ಷೆಯನ್ನು ನಂಬಿ ಅವರು ಎಷ್ಟು ದಿನ ಜೀವನ ನಡೆಸಲಾಗುತ್ತದೆ. ನಿಮ್ಮ ಅನ್ನವನ್ನು ನಂಬಿ ಬದುಕುತ್ತಿರುವ ನಮ್ಮ ಗತೀಯೇನಾಗಬೇಕು?

ಅನ್ನದಾತರನ್ನು ಬಳಸಿಕೊಂಡು ಏಳಿಗೆ ಪಡೆಯುವವರೇ ಹೆಚ್ಚು. ಎಲ್ಲರದೂ ಒಂದೇ ಗುರಿ. ರೈತರ ಹೆಸರಿನಲ್ಲಿ ಕೊಳ್ಳೆ ಹೊಡೆಯುವುದು. ಎರಡನೇ ವಿಷಯಕ್ಕೆ ಬಂದರೆ. ಉತ್ತರಪ್ರದೇಶದ ಚಾಂಡಾಲಿ ಎಂಬ ಹಳ್ಳಿಯ ಜನರು ವಿದ್ಯುತ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ತಮ್ಮ ಶಾಸಕ ಮತ್ತು ಅಧಿಕಾರಿಗಳನ್ನು ಚೇರಿನ ಮೇಲೆ ಕೂರಿಸಿ ಹಗ್ಗದಿಂದ ಕಟ್ಟಿಹಾಕಿ ದಿಗ್ಭಂದನ ಹಾಕಿದ್ದನ್ನು ಓದಿದೆ. ಪ್ರಜೆಗಳು ಹಾಗೆಯೇ ಇರಬೇಕು. ಕೆಲಸ ಆಗದೇ ಇದ್ದರೆ, ಕೈಕಟ್ಟಿ ನಿಲ್ಲುವ ಬದಲು ಭ್ರಷ್ಟರ ಜುಟ್ಟು ಹಿಡಿದು ಕೇಳಬೇಕು.

ಹೆದ್ದಾರಿ ಹಿಡಿದು ತಿಮ್ಮಾಪುರಕ್ಕೆ ಬಂದೆ. ಶಾಲೆಯ ಮುಖ್ಯೋಪಾಧ್ಯಾಯರು ಹೊರಗೆ ಹೊರಟಿದ್ದರು. ನನಗೆ ಅವಕಾಶ ಮಾಡಿಕೊಡುವಂತೆ ಶಿಕ್ಷಕರಿಗೆ ಹೇಳಿ ಹೊರಟರು. ಕಾಕತಾಳೀಯವೆಂಬಂತೆ ಆ ದಿನವೇ ಅಲ್ಲಿ ವನಮಹೋತ್ಸವ ನಡೆಯುತ್ತಿತ್ತು. ನಾನು ಕೂಡ ಅದರಲ್ಲಿ ಪಾಲ್ಗೊಂಡು, ನನ್ನ ಉಪನ್ಯಾಸ ಕೊಟ್ಟೆ. ಸಹ ಶಿಕ್ಷಕಿಯೊಬ್ಬರು ಟೀ ಬಿಸ್ಕತ್ ಕೊಟ್ಟು ಸತ್ಕರಿಸಿದರು. ಅಲ್ಲೂ ಕೂಡ ಕಳ್ಳತನದ್ದೇ ಕಾಟ. ಶಾಲೆಯ ನೀರಿನ ಟ್ಯಾಂಕರ್‍ಗಳನ್ನು ಊರಿನ ಜನರೇ ಕದಿಯುತ್ತಾರೆ ಎಂದು ಅಲವತ್ತುಕೊಂಡರು. ಅಲ್ಲಿಂದ ಹೊರಟ ನಾನು ಶಿಗ್ಗಾಂವ್‍ಗೆ ಎಂಟು ಮೈಲುಗಳಿರಬಹುದು ಎಂದು ನಡೆಯಲು ಶುರುಮಾಡಿದೆ. ಒಂದು ಮೂರು ಮೈಲು ನಡೆದು, ಒಂದು ಅಂಗಡಿಯಲ್ಲಿ ಕುಳಿತು ಬಾಳೇಹಣ್ಣು ತಿಂದು ವಿಶ್ರಾಂತಿ ಪಡೆದೆ.

footprints-303798_960_720ಮಧ್ಯಾಹ್ನದ ಊಟವಿಲ್ಲದ ಕಾರಣ ಹೊಟ್ಟೆ ಹಸಿಯುತ್ತಿತ್ತು. ಹಾಗೇ ನಡೆದು, ಅರ್ಧ ದಾರಿ ಮುಟ್ಟುವಷ್ಟರಲ್ಲಿ ಒಂದು ಡಾಬಾದ ಮುಂದೆ ನಿಂತು ಒಬ್ಬ ಹುಡುಗ ಅಳುತ್ತಿದ್ದ. ಹೋಗಿ ಏನಪ್ಪ ಸಮಾಚಾರ ಎಂದು ಕೇಳಿದರೆ, ಅವನು ದಾಂಡೇಲಿ ಹತ್ತಿರ ಒಂದು ಹಳ್ಳಿಯವನಾಗಿದ್ದು, ಲಾರಿ ಕ್ಲೀನರ್ ಕೆಲಸದಲ್ಲಿ ಚಾಲಕನ ಜೊತೆ ಜಗಳ ಮಾಡಿಕೊಂಡಿದ್ದರಿಂದ, ಚಾಲಕ ಇವನನ್ನು ಇಲ್ಲೇ ಬಿಟ್ಟು ಹೊರಟು ಹೋದನೆಂದು ಹೇಳಿದ.

ತನ್ನ ಹತ್ತಿರ ಹಣವಿಲ್ಲದೇ ಊರು ತಲುಪಲಾಗುವುದಿಲ್ಲ ಎಂಬ ಭಯದಿಂದ ಅಳುತ್ತಿದ್ದ. ಈಗಾಗಲೇ ಒಂದಷ್ಟು ಜನರ ಸಹಾಯ ಕೇಳಿದರೂ ಪ್ರಯೋಜನವಾಗದೆ ಮಂಕಾಗಿದ್ದ. ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ಹಿಂದಿಯಲ್ಲಿ ಅವನು ಹೇಳಿದ ಕಥೆಯನ್ನು ಕೇಳಿದೆ. ಅವನು ಸತ್ಯವೇಳುತ್ತಿದ್ದಾನೆ ಎನಿಸಿತು. ಕನ್ನಡದಲ್ಲಿ  ಮತ್ತೆ ಹೇಳಲು ಹೇಳಿದೆ. ಕನ್ನಡದಲ್ಲಿ ವಿಷಯ ತಿಳಿಸಿದ. ಸರಿ ಎಂದು ನೂರಇಪತ್ತು ರೂಪಾಯಿ ಕೊಟ್ಟು ಕಳುಹಿಸಿದೆ.

ನನ್ನ ಕಾಲು ಮುಟ್ಟಿ ಕೃತಜ್ಞತೆ ಸಲ್ಲಿಸಲು ಮುಂದೆ ಬಂದ ಅವನನ್ನು ತಡೆದು ನಾನು ನನ್ನ ದಾರಿಯಲ್ಲಿ ಮುಂದುವರಿದೆ. ನಡೆದು ಜಾನಪದ ವಿಶ್ವವಿದ್ಯಾಲಯವನ್ನು ದಾಟಿ, ಶಿಗ್ಗಾಂವ್‍ನ ಸಮೀಪದ ಹೋಟೆಲ್ ಗರುಡಗೆ ಬರುವಷ್ಟರಲ್ಲಿ ರಾತ್ರಿ 07:30 ಆಗಿತ್ತು. ಕತ್ತಲಾಗಿದ್ದರಿಂದ ಆ ಹೊತ್ತಿನಲ್ಲಿ ನನಗೆ ವಾಸ್ತವ್ಯದ ವ್ಯವಸ್ಥೆ ಕಂಡುಕೊಳ್ಳುವುದು ಕಷ್ಟವಾಗಬಹುದೆಂದು ಗ್ರಹಿಸಿ, ಹೋಟೆಲ್ ಗರುಡದಲ್ಲೇ ಆ ರಾತ್ರಿ ಉಳಿಯುವುದೆಂದು ನಿರ್ಧರಿಸಿದೆ.

ಎಂಟು ಮೈಲುಗಳಿರಬಹುದೆಂದು ಬಂದರೆ ಸುಮಾರು ಹನ್ನೆರಡು ಮೈಲು ನಡೆದು ನನ್ನ ಕಾಲುಗಳು ಬಹಳವಾಗಿ ನೋಯುತಿತ್ತು. ಶೂ ತೆಗೆದು ನೋಡಿದರೆ ಪಾದಗಳ ಮೇಲೆ ಬೊಬ್ಬೆ ಬಂದಿತ್ತು. ಬೊಬ್ಬೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಾ ಕೋಣೆಯಲ್ಲಿ ನಿರುಮ್ಮಳಾಗಿ ಮಲಗಿದೆ. ವಾಸ್ತವ್ಯಕ್ಕಾಗಿ ನಾನು ಮಾಡಿದ ಮೊದಲ ಖರ್ಚು 650 ರೂಪಾಯಿ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 95 ಮೈಲುಗಳು]

‍ಲೇಖಕರು Admin

28 June, 2016

2 Comments

  1. Vihi wadawadagi

    Rada nimma hudgi enu neevu olle hero Tara idirri bidi adke heroine sikkirodu nimma baala sangaatiyagalu avaru punya madidare olleyadagali Nimage

    • ರಾದ

      ಧನ್ಯವಾದಗಳು ವಿಹಿ 🙂 ಅವಳ ರೂಪ, ಪ್ರೀತಿ, ವಿಶ್ವಾಸ, ಸಜ್ಜನಿಕೆಯ ಮುಂದೆ ನಾನು ಗೌಣ. ಅವಳನ್ನು ಪಡೆಯಲು ಪಾಪ ಪುಣ್ಯಗಳನ್ನೂ ಮೀರಿದ ಅದೃಷ್ಟ ನನ್ನದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading