-ಶ್ರೀಪಾದ ಹೆಗಡೆ
ನವರಾತ್ರಿ ಮುಗಿದು ವಿಜಯ ದಶಮಿ. ನವರಾತ್ರಿ ಸತತ ಒಂಬತ್ತು ರಾತ್ರಿಗಳ ಶಕ್ತಿ ದೇವತೆಯ ಆರಾಧನೆಯಾದರೆ ಹತ್ತನೇಯ ದಿನದ ವಿಜಯ ದಶಮಿ ರಾವಣನ ಹತ್ಯೆ ಮಾಡಿ ರಾಮ ವಿಜಯಿಯಾದ ದಿನವೆಂದು ಪ್ರತೀತಿ ಪಡೆದಿದೆ. ನವರಾತ್ರಿಯನ್ನು ಶಕ್ತಿ ದೇವತೆಯ ಆರಾಧನೆಯಾಗಿಯೇ ದೇಶದ ಎಲ್ಲ ಭಾಗಗಳಲ್ಲಿ ಆಚರಿಸುವ ಸಂಪ್ರದಾಯವಿದೆ. ಇದಕ್ಕೆ ಅಪವಾದ ಎನ್ನುವಂತೆ ವೈಷ್ಣವ ಬ್ರಾಹ್ಮಣರ ಒಂದು ಪಂಗಡ ಶಕ್ತಿ ದೇವತೆಯ ಆರಾಧನೆಯ ಬದಲಾಗಿ ವಿಷ್ಣುವಿನ ಬೇರೆ ಬೇರೆ ರೂಪಗಳನ್ನು ಈ ಒಂಬತ್ತು ದಿನಗಳ ಕಾಲ ಪೂಜಿಸುತ್ತಾರೆ. ಆದರೆ ವಿಜಯ ದಶಮಿ ಆಚರಣೆಯಲ್ಲಿ ಏಕತೆ ಇಲ್ಲ. ಪೂರ್ತಿಯಾಗಿ ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಇದನ್ನು ರಾವಣನ ಮೇಲೆ ರಾಮನ ವಿಜಯದ ದಿನವೆಂದು ಆಚರಿಸುವ ಸಂಪ್ರದಾಯವಿಲ್ಲ. ಉತ್ತರ ಭಾರತದಲ್ಲಿ ಮುಖ್ಯ ಧಾರೆಯಲ್ಲಿ ರಾವಣನ ಗೊಂಬೆ ತಯಾರಿಸಿ ಅದಕ್ಕೆ ಬೆಂಕಿ ಹಚ್ಚುವ ಆಚರಣೆ ಇದ್ದರೂ ಕೆಲವು ಪ್ರದೇಶಗಳಲ್ಲಿ, ಕೆಲವು ಪಂಗಡಗಳಲ್ಲಿ ಮತ್ತು ಕೆಲವು ಬುಡಕಟ್ಟುಗಳಲ್ಲಿ ಅಲ್ಲಿಯೂ ಈ ಆಚರಣೆ ನಿಷಿದ್ಧವಾಗಿದೆ ಬದಲಾಗಿ ಅವರು ಅಂದು ರಾವಣನನ್ನು ಪೂಜಿಸುತ್ತಾರೆ. ರಾವಣನ ದೇವಸ್ಥಾನಗಳೂ ಕೆಲವೆಡೆ ಇವೆ. ಇನ್ನು ಶ್ರೀಲಂಕಾದಲ್ಲಿಯಂತೂ ರಾವಣನನ್ನು ಒಬ್ಬ ಶೂರ ಹಾಗೂ ಉದಾತ್ತ ರಾಜನೆಂದು ಗೌರವಿಸಲಾಗುತ್ತದೆ.
ಉತ್ತರ ಪ್ರದೇಶದ ಕಾನಪುರ ಮತ್ತು ಬಿಸ್ರಕ್ ಎಂಬ ಊರುಗಳಲ್ಲಿ, ಮಧ್ಯ ಪ್ರದೇಶದ ವಿಧಿಶಾ, ಚತ್ತೀಸಗಡದ ಮಂಡಸೌರ್ ಮತ್ತು ರಾಜಸ್ಥಾನದ ಜೋಧಪುರ, ಆಂಧ್ರದ ಕಾಕಿನಾಡ, ಹಿ.ಪ್ರ.ದ ಕಂಗ್ರಾ ಮತ್ತು ನಮ್ಮದೇ ರಾಜ್ಯದ ಕೋಲಾರ ಜಿಲ್ಲೆಯ ಮಾವಳ್ಳಿಯಲ್ಲಿ ರಾವಣನ ದೇವಸ್ಥಾನಗಳಿವೆ. ಅವನಿಗೆ ಅಲ್ಲಿ ಪೂಜೆ ಸಲ್ಲುತ್ತವೆ.
ರಾಜಸ್ತಾನದ ಶ್ರಿಮಾಲಿ ಎಂಬ ಬ್ರಹ್ಮಣ ಪಂಗಡ ರಾವಣನನ್ನು ತಮ್ಮ ವಂಶಸ್ಥನೆಂದು ಗೌರವಿಸಿ ಪೂಜಿಸುತ್ತದೆ. ಗುಜರಾತದ ಸಾಚೋರಾ ಬ್ರಾಹ್ಮಣರು ಮತ್ತು ಮಥುರಾದ ಸಾರಸ್ವತ ಬ್ರಾಹ್ಮಣರು ಸಹ ಅವನನ್ನು ತಮ್ಮ ವಂಶಸ್ಥನೆಂದು ಗೌರವಿಸಿ ಪೂಜಿಸುತ್ತವೆ. ಇವರಾರೂ ರಾವಣನನ್ನು ರಾಕ್ಷಸನೆಂದಾಗಲಿ, ದುಷ್ಟನೆಂದಾಗಲಿ ಪರಿಗಣಿಸುವುದಿಲ್ಲ.
ಇನ್ನು ಮಧ್ಯ ಭಾರತದ ಪ್ರಮುಖ ಬುಡಕಟ್ಟು ಜನಾಂಗವಾದ ಗೊಂಡರು ರಾವಣನನ್ನು ತಮ್ಮ ಜನಾಂಗದ ಪುರಾತನ ರಾಜನೆಂದು ಮತ್ತು ಹತ್ತನೇಯ ಧರ್ಮ ಗುರುವೆಂದದೂ, ಹದಿನೇಂಟನೇಯ ’ಲಿಂಗೊ’ ಎಂದೂ ನಂಬುತ್ತಾರೆ ಮತ್ತು ಅವನ ಪೂಜೆ ಮಾಡುತ್ತಾರೆ. ದಸರೆಯ ದಿನ ಪಾರಸ್ವಾಡಿ ಎಂಬ ಊರಿನಲ್ಲಿ ರಾವಣನ ಪ್ರತಿಮೆಯನ್ನು ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಾರೆ.
ಮಂಡಸೌರ್ (ಮ.ಪ್ರ.) ದಲ್ಲಿ ರಾವಣನನ್ನು ತಮ್ಮ ಊರಿನ ಅಳಿಯ (ಮಂಡೋದರಿಯ ತವರೂರು) ಎಂದು ನಂಬುತ್ತಾರೆ. ಅಲ್ಲಿ ವಿಜಯ ದಶಮಿಯ ದಿನ ರಾವಣನ ಮರಣವನ್ನು ಸಂಭ್ರಮಿಸಾಲಾಗುವುದಿಲ್ಲ ಬದಲಾಗಿ ದುಃಖ ಆಚರಿಸಲಾಗುತ್ತದೆ.
ಇನ್ನು ಜೈನ ಪುರಾಣದ ಪ್ರಕಾರ ರಾಮ ಮತ್ತು ರಾವಣ ಇಬ್ಬರೂ ಶ್ರದ್ಧಾವಂತ ಜೈನರು. ಮತ್ತು 63 ಶಲಾಕಾ ಪುರುಷರಲ್ಲಿ ಇಬ್ಬರು. ರಾವಣ ಅತಿಮಾನವನಾದ ವಿದ್ಯಾಧರ ರಾಜ. ಅವನ ವಧೆ ಲಕ್ಷ್ಮಣನಿಂದ ಆಗುತ್ತದೆ, ರಾಮನಿಂದಲ್ಲ.
ಹೀಗೆ ರಾವಣನ ಬಗೆಗೆ ವಿವಿಧ ರೀತಿಯ ಕಲ್ಪನೆ ಮತ್ತು ನಂಬಿಕೆಗಳಿವೆ. ಹಾಗಾಗಿಯೇ ಏ ಕೆ ರಾಮಾನುಜನ್ ಮೂರುನೂರು ರಾಮಾಯಣಗಳನ್ನು ಶೋಧಿಸಿ ಬರೆದಿದ್ದರು. ರಾವಣನನ್ನು ದುಷ್ಟನೆಂದು ಚಿತ್ರಿಸಿದ ಮುಖ್ಯ ಧಾರೆಯದೇ ನಿಜವಾಗಿರಬೇಕಿಲ್ಲ. ಅದರಲ್ಲೂ ಕೆಡುಕಿನ ಮೇಲಿನ ವಿಜಯದ ದಿನವೆಂದು ರಾವಣನ ಗೊಂಬೆಗೆ ಬೆಂಕಿ ಇಕ್ಕುವ ಆಚರಣೆಯಂತೂ ದೇಶದ ಬಹು ಭಾಗಗಳಲ್ಲಿ ಇಲ್ಲ. ಆದರೆ ಬಲಾಢ್ಯ ಗುಂಪೊಂದು ತನ್ನ ಈ ನೆರೇಟಿವ್ ನ್ನು ದೇಶದ ಮೇಲೆ ಹೇರುತ್ತಲೇ ಬಂದಿದೆ.
ಇನ್ನು ಮುಖ್ಯಧಾರೆಯ ಗ್ರಂಥವಾದ ವಾಲ್ಮೀಕಿ ರಾಮಾಯಣದ ಸೀತೆ ಅಗ್ನಿ ಪ್ರವೇಶ ಮಾಡಿ ಅವಳು ಅಕಳಂಕಿತೆ ಎಂದು ಸಿದ್ಧವಾಗುವ ಪ್ರಸಂಗ ರಾವಣನ ಘನ ವ್ಯಕ್ತಿತ್ವವನ್ನೂ ಪರೋಕ್ಷವಾಗಿ ಸೂಚಿಸುತ್ತದೆ. ಸೀತಾಪಹರಣಕ್ಕೆ ರಾವಣನ ಹೆಣ್ಣುಬಾಕತನ ಕಾರಣವಾಗಿರಲಿಲ್ಲ ಎನ್ನುವುದಕ್ಕೆ ಇದು ಪ್ರಮಾಣವಾಗುತ್ತದೆ. ಆದರೆ ರಾಮಾಯಣ ಕಾವ್ಯವನ್ನು ಹೀಗೆ ಓದುವುದನ್ನು ಸಾಂಸ್ಕೃತಿಕ ರಾಜಕಾರಣದ ಸಾಂಪ್ರದಾಯಿಕ ಶಕ್ತಿಗಳು ವಿರೋಧಿಸುತ್ತವೆ. ತಮ್ಮದೇ ಆದ ನೆರೇಟಿವ್ ನ್ನು ಸಮಾಜದ ಮೇಲೆ ಹೇರುತ್ತವೆ. ಹೆಣ್ಣನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿರುವುದನ್ನು ಪುರಾಣ- ಇತಿಹಾಸಗಳಲ್ಲಿ ಹೇರಳವಾಗಿ ಕಾಣಬಹುದು. ರಾಮ-ಲಕ್ಷ್ಮಣರು ರಾವಣನ ತಂಗಿ ಶೂರ್ಪನಖಿಗೆ ಮಾಡಿದ ಹೇಯ ಕೃತ್ಯ ಮತ್ತು ಅಮಾನವೀಯ ನಡತೆಯೇ ಸೀತೆಯ ಅಪಹರಣಕ್ಕೆ ಕಾರಣವಾಯಿತು ಎನ್ನುವುದನ್ನು ಯಾರಾದರೂ ಇದರಿಂದ ತರ್ಕಿಸ ಬಹುದಾಗಿದೆ. ಆರ್ಯ ಮತ್ತು ದ್ರಾವಿಡರ ನಡುವಿನ ರಾಜಕೀಯವನ್ನು ಮರೆಮಾಚಿ ರಾವಣನನ್ನು ದುಷ್ಟ ಮತ್ತು ಹೆಣ್ಣುಬಾಕನನ್ನಾಗಿಯೂ ಮತ್ತು ರಾಮನನ್ನು ಪುರುಷೋತ್ತಮನೆಂದು ಬಿಂಬಿಸುವುದರ ಹಿಂದೆ ಒಂದು ದೊಡ್ಡ ಸಾಂಸ್ಕೃತಿಕ ರಾಜಕಾರಣವನ್ನು ಕಾಣಬಹುದಾಗಿದೆ.
ರಾವಣನ ವ್ಯಕ್ತಿತ್ವದ ಬಗ್ಗೆ ಭಾರತದ ಬೇರೆ ಬೇರೆ ಪ್ರದೇಶ ಮತ್ತು ಪಂಗಡಗಳಲ್ಲಿ ಇರುವ ವಿಭಿನ್ನವಾದ ನಂಬಿಕೆಯೂ ಇದನ್ನು ಪುಷ್ಟೀಕರಿಸುತ್ತದೆ. ತಮ್ಮ ತತ್ವ ಸಿದ್ದಾಂತಕ್ಕೆ ಹೊಂದದ ವ್ಯಕ್ತಿಗಳ ವಿರುದ್ಧ ಸುಳ್ಳು ಕತೆ ಕಟ್ಟಿ ಅವರ ತೇಜೋ ವಧೆ ಮಾಡುತ್ತಾ ಬಂದಿರುವುದು ಹಿಂದಿನ ಕಾಲದಿಂದಲೂ ನಡೆದು ಬಂದ ವಿದ್ಯಮಾನ. ಅದಕ್ಕೆ ಕೊನೆಯ ಬಲಿ ಪಶು ಗಾಂಧೀಜಿ. ಗಾಂಧಿ ಗತಿಸಿ ಇನ್ನೂ ಒಂದು ಶತಮಾನ ಮುಗಿಯುವುದರೊಳಗೆ ಇತಿಹಾಸ ತಿರುಚಿ ಸುಳ್ಳು ಬೊಗಳಿ ಅವರನ್ನು ಖಳನನ್ನಾಗಿ ಬಿಂಬಿಸುವ ಸಾಂಸ್ಕೃತಿಕ ರಾಜಕಾರಣ ಬಹು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ಇಂದು ನಾವೇ ಸಾಕ್ಷಿಯಾಗಿದ್ದೇವೆ. ಸಾತ್ವಿಕ ವ್ಯಕ್ತಿ ಗಾಂಧಿಯನ್ನೇ ಬಿಡದಿದ್ದವರು ರಾಜನಾಗಿದ್ದ ರಾಜಸ ವ್ಯಕ್ತಿತ್ವದ ರಾವಣನನ್ನು ಬಿಟ್ಟಿರುತ್ತಾರೆಯೇ! ಏರು ಧ್ವನಿಯ ಮತ್ತು ಅಬ್ಬರದ ಆಚರಣೆಗಳಲ್ಲಿ ಹಲವೊಮ್ಮೆ ಸತ್ಯ ನೆಲೆಸಿರುವುದಿಲ್ಲ, ಅವುಗಳ ನಡುವೆ ನಾವು ಸೂಕ್ಷ್ಮವಾಗಿ ಕಿವಿಗೊಟ್ಟು ಆಲಿಸಿದರೆ ಮಾತ್ರ ಕೇಳುವ ಕ್ಷೀಣ ಪ್ರತಿಭಟನೆಯ ದನಿಗಳಲ್ಲಿ ಅದು ಅಡಗಿರುತ್ತದೆ. ರಾವಣನನ್ನು ಗೌರವಿಸುವ ಕೆಲವು ಅಲ್ಪ ಸಂಖ್ಯಾತ ಪಂಗಡಗಳು ಮತ್ತು ಬುಡಕಟ್ಟು ಜನರ ಕ್ಷೀಣ ದನಿಗಳಲ್ಲಿ ಸತ್ಯ ಅಡಗಿರುವ ಸಾಧ್ಯತೆಯೇ ಹೆಚ್ಚು ಅನಿಸುತ್ತಿದೆ.






0 Comments