ರಾಜೀವ ನಾರಾಯಣ ನಾಯಕ
ಚಿತ್ರಗಳು: ಶ್ಯಾಮಲಾ ಮಾಧವ
ನಮ್ಮ ಭಾವಕೋಶಗಳಲ್ಲಿ ಅಚ್ಚೊತ್ತಿರುವ ರಾಮಾಯಣ ಕತೆಗಳಲ್ಲಿ ಓದಿದ್ದ ಮತ್ತು ಚಿಕ್ಕವರಿರುವಾಗ ಯಕ್ಷಗಾನಗಳಲ್ಲಿ ಕಂಡಿದ್ದ ಉರಿಕಣ್ಣುಗಳ ಕೋರೆ ಹಲ್ಲುಗಳ ಶೂರ್ಪನಖಿಯ ಸ್ವರೂಪವು ಒಂದು ನಾಟಕ ನೋಡಿದ ಮೇಲೆ ನೋಯುವ ಮಿಡಿಯುವ ಮಮತೆಯ ಹೆಣ್ಣಾಗಿ ಬದಲಾಗಲು ಸಾಧ್ಯವೆ? ಡಾ. ಮಮತಾ ರಾವ್ ವಿರಚಿತ ಖ್ಯಾತ ರಂಗ ನಿರ್ದೇಶಕ ಎಮ್. ಗಣೇಶ ನಿರ್ದೇಶನದ “ಚಂದ್ರನಖಾಯಣ”ದಲ್ಲಿ ಇದು ಸಾಧ್ಯವಾಗುತ್ತದೆ.
ಚಂದ್ರನಖಾಯಣ ನಾಟಕವು ರಾವಣನ ಸಹೋದರಿ ಚಂದ್ರನಖಾಳನ್ನು (ಲಕ್ಷ್ಮಣನಿಂದ ಕಿವಿ ಮೂಗು ಕತ್ತರಿಸಿಕೊಂಡ ಶೂರ್ಪನಖಿ) ಕೇಂದ್ರವಾಗಿಟ್ಟುಕೊಂಡು ರಾಮಾಯಣವನ್ನು ಮರು ನಿರೂಪಿಸುತ್ತದೆ. ಸ್ವತ: ಸಹೋದರಿಯ ಗಂಡನಾದರೂ ವಿದ್ಯುತ್ ಜಿಹ್ವಾನ ಬುದ್ಧಿವಂತಿಕೆ ಮತ್ತು ಜನಪ್ರಿಯತೆಯಿಂದ ಮತ್ಸರಗೊಳ್ಳುವ ಅಸುರ ರಾವಣ ಅತನನ್ನು ಕಪಟದಿಂದ ಮುಗಿಸುತ್ತಾನೆ. ಆದರೆ ಅದು ಚಂದ್ರನಖಾಳಿಗೆ ತಿಳಿದು ಅಣ್ಣನ ವಿರುದ್ಧವೇ ಸೇಡು ತೀರಿಸಿಕೊಳ್ಳಲು ದಂಡಕಾರಣ್ಯದಲ್ಲಿದ್ದ ರಾಮನನ್ನು ಭೇಟಿಯಾಗುತ್ತಾಳೆ. ಆತನನ್ನು ಬುದ್ಧಿಪೂರ್ವಕವಾಗಿ ಕೆಣಕಿ, ಕೋಪಗೊಂಡ ಲಕ್ಷ್ಮಣನಿಂದ ಕುರೂಪಿಯಾಗಿ ಲಂಕೆಗೆ ಬಂದು ಅಣ್ಣನಲ್ಲಿ ತನಗಾದ ಅವಮಾನ ಪರಾಕ್ರಮಿ ರಾವಣನಿಗಾದ ಅವಮಾನವೆಂದು ಬಿಂಬಿಸುತ್ತಾಳೆ. ಅದೇ ಸಮಯದಲ್ಲಿ ಸೀತೆಯ ರೂಪರಾಶಿಯನ್ನೂ ವರ್ಣಿಸಿ ರಾವಣನಲ್ಲಿ ಸೀತೆಯ ಬಗ್ಗೆ ಮೋಹ ಉಂಟಾಗುವಂತೆ ಮಾಡುತ್ತಾಳೆ.

ಸೀತೆಗಾಗಿ ದಂಡಕಾರಣ್ಯಕ್ಕೆ ಹೋಗುವ ರಾವಣ ಅಸುರರಿಗೂ ಮೀರಿದ ಮಹಾಪರಾಕ್ರಮಿ ರಾಮನಿಂದ ಹತನಾಗುವನು ಎಂಬ ಅವಳ ಎಣಿಕೆ ಹುಸಿಯಾಗುತ್ತದೆ. ರಾವಣ ನೇರವಾಗಿ ರಾಮನೊಂದಿಗೆ ಕಾಳಗ ಹೂಡದೇ ಸೀತೆಯನ್ನು ಕದ್ದು ತಂದ ಫಲವಾಗಿ ರಾಮನ ವಾನರ ಸೇನೆ ಇಡೀ ಲಂಕೆಯನ್ನು ಸರ್ವನಾಶ ಮಾಡುವುದನ್ನು ಅವಳು ಕಲ್ಪಿಸಿರಲಿಲ್ಲ. ತನ್ನಿಂದ ಲಂಕೆಗೆ ಘೋರ ಅನ್ಯಾಯವಾಯಿತೆಂದು ಪಶ್ಚಾತ್ತಾಪದ ಉರಿಯಲ್ಲಿ ಬೇಯುತ್ತಾಳೆ.
ಕುಂಭಕರ್ಣ ಇಂದ್ರಜಿತು ಎಲ್ಲರನ್ನೂ ಕಳೆದುಕೊಂಡ ರಾವಣನಿಗೆ ಈಗಲಾದರೂ ಸೀತೆಯನ್ನು ರಾಮನಿಗೆ ಒಪ್ಪಿಸಿ ಯುದ್ಧವನ್ನು ನಿಲ್ಲಿಸು ಎಂದು ಕೇಳಿಕೊಳ್ಳುತ್ತಾಳೆ. ಆದರೆ ರಾವಣ ಅದಕ್ಕೆ ಸಮ್ಮತಿಸುವುದಿಲ್ಲ. ತಾನೇ ರಾಮನಲ್ಲಿಗೆ ಹೋಗಿ ಅಣ್ಣನ ಅಪರಾಧವನ್ನು, ತನ್ನ ಸೇಡಿನ ಯೋಜನೆಯ ತಪ್ಪನ್ನೂ ಮನ್ನಿಸಿ ಸೀತೆಯನ್ನು ಪಡೆದು ಸಮರ ಸಮಾಪ್ತಿಯಾಗಿಸಿ ಅಳಿದುಳಿದ ಲಂಕೆಯನ್ನು ರಕ್ಷಿಸು ಎಂದು ಬಗೆಬಗೆಯಲ್ಲಿ ಪ್ರಾರ್ಥಿಸುತ್ತಾಳೆ. ಆದರೆ ರಾಮನು ರಾವಣನನ್ನು ವಧಿಸುವುದು ತನ್ನ ಸಂಕಲ್ಪವೆಂದೂ ಅದನ್ನು ಬದಲಿಸುವುದು ಅಶಕ್ಯವೆಂದೂ ಹೇಳಿ ಯುದ್ಧ ಮುಂದುವರಿಸಿ ರಾವಣನನ್ನು ಕೊಂದು ಸೀತೆಯೊಂದಿಗೆ ಅಯೋಧ್ಯೆಗೆ ಮರಳುತ್ತಾನೆ.
ಪತಿ, ಸಹೋದರರು, ಲಂಕೆಯ ಸಕಲವನ್ನೂ ಕಳೆದುಕೊಂಡ ಚಂದ್ರನಖಾಳ ವಿಷಾದವು ಈಗ ರಾಮನ ಮೇಲೆ ಸೇಡಿಗಾಗಿ ಹವಣಿಸುತ್ತದೆ. ಕೊರವಂಜಿಯ ವೇಷದಲ್ಲಿ ಸೀತೆಯ ಅಂತ:ಪುರವನ್ನು ಸೇರುವ ಚಂದ್ರನಖಾ ಸೀತೆಯಿಂದ ಹುನಾರದಲ್ಲಿ ರಾವಣನ ಚಿತ್ರಪಟವನ್ನು ಸಿದ್ಧಗೊಳಿಸುತ್ತಾಳೆ. ಅಶೋಕವನದಲ್ಲಿ ಕಂಡ ರಾವಣನ ಕಾಲುಗಳನ್ನಷ್ಟೇ ಸೀತೆ ಚಿತ್ರಿಸಿದರೂ ಕೊರವಂಜಿಯೇ ಅದನ್ನು ಪೂರ್ತಿಗೊಳಿಸಿ ರಾವಣನನ್ನು ಸಚಿತ್ರಗೊಳಿಸುತ್ತಾಳೆ.
ಅದೇ ಸಮಯದಲ್ಲಿ ಅಂತ:ಪುರ ಸೇರುವ ರಾಮನು ಚಿತ್ರಪಟದ ರಾವಣನನ್ನು ಕಾಣುವುದಕ್ಕೂ, ಪ್ರಜೆಗಳ ಅಪವಾದ ಕೇಳುವುದಕ್ಕೂ ತಾಳೆಯಾಗಿ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಇಲ್ಲಿ ಕೂಡ ಚಂದ್ರನಖಾಳ ಸೇಡು ಆಕೆಯ ಒಡಲನ್ನೇ ಸುಡುತ್ತದೆ. ಸೀತೆಗಾಗಿ ಅವಳ ಕರುಳು ಮಿಡಿಯುತ್ತದೆ. ಆಶ್ರಮದಲ್ಲಿರುವ ಗರ್ಭಿಣಿ ಸೀತೆಯ ಆರೈಕೆಯನ್ನು ಸ್ವತ: ಮಾಡುವ ಮೂಲಕ ಮತ್ತೆ ಮಾತೃ ಹೃದಯಿಯಾಗುತ್ತಾಳೆ. ಹೀಗೆ ನಾಟಕದುದ್ದಕ್ಕೂ ಬರೀ ನೋವು ಸೇಡು ಸಂಕಟಗಳಲ್ಲಿ ಬೇಯುವ ಚಂದ್ರನಖಾ ಅಂತಿಮವಾಗಿ ಹೆಣ್ಣಿನ ಸ್ಥಾಯಿಗುಣವಾದ ಮಮತಾಮುಖಿಯಾಗುತ್ತಾಳೆ. ಕಾಲಾಂತರದಿಂದ ನಮ್ಮ ಚಿತ್ತದಲ್ಲಿದ್ದ ದುಷ್ಟ ಶೂರ್ಪನಖಿ ಮನುಷ್ಯಳಾಗಿ ಮಾತೆಯಾಗಿ ಸಜೀವಗೊಳ್ಳುತ್ತಾಳೆ.

ಪಾತ್ರಗಳನ್ನು ಮುರಿದು ಕಟ್ಟುವ ಸ್ವಾತಂತ್ರ್ಯ ಮತ್ತು ಸಾಧ್ಯತೆಗಳೇ ರಾಮಾಯಣ ಮತ್ತು ಮಹಾಭಾರತದಂಥ ಪೌರಾಣಿಕ ಕೃತಿಗಳನ್ನು ಪ್ರಸ್ತತವೂ ಅಭಿಜಾತವೂ ಆಗಿಟ್ಟಿದೆ ಅನಿಸುತ್ತದೆ. ಅದೂ ಅಲ್ಲದೇ, ಒಂದು ನಾಟಕ ವೀಕ್ಷಣೆ ಒಂದು ಪಾತ್ರದ ಪರಿಕಲ್ಪನೆಯನ್ನೇ ಬದಲಾಯಿಸುವುದು ರಂಗಭೂಮಿಗಿರುವ ಶಕ್ತಿಯನ್ನೂ ತೋರಿಸುತ್ತದೆ.
ಪುರುಷರ ಛಲ ಮತ್ತು ನಿಷ್ಠೆಗಳಂಥ ನಿಷ್ಠುರ ಗುಣಗಳಿಗೆ ಹೋಲಿಸಿದರೆ ಹೆಣ್ಣು ಹೆಚ್ಚು ಸಂವೇದನಾಶೀಲಳು. ಹೆಣ್ಣಿನ ಚಂಚಲತೆಯನ್ನು ನಾವು ಸಾಮಾನ್ಯವಾಗಿ ಋಣಾತ್ಮಕವಾಗಿ ಭಾವಿಸುತ್ತೇವೆ. ಆದರೆ ಆ ಚಂಚಲ ಗುಣವೇ ಸಂದರ್ಭಾನುಸಾರ ಆಕೆಯ ಅಂತ:ಕರಣವನ್ನು ಮೀಟಬಲ್ಲದು. ರಾಮನ ಧರ್ಮನಿಷ್ಠೆ ರಾಜಧರ್ಮ ಗರ್ಭಿಣಿ ಸೀತೆಯನ್ನೂ ಕಾಡಿಗಟ್ಟುವಷ್ಟು ಕಠೋರವಾಗುತ್ತದೆ. ಹಾಗೇ ರಾವಣನ ಅಹಂಕಾರ ಮತ್ತು ಛಲ ಸೋಲನ್ನೂ ಒಪ್ಪಿಕೊಳ್ಳದ ಹಾಗೆ ಮಾಡುತ್ತದೆ. ಆದರೆ ಚಂದ್ರನಖಾ ಮಾತ್ರ ಸೇಡು ಪ್ರತೀಕಾರದ ಭಾವವನ್ನು ತನ್ನ ಅಂತ:ಕರಣದ ಮೂಲಕ ತಣಿಸಿಕೊಳ್ಳಬಲ್ಲಳು, ನೋವನ್ನು ಮರೆತು ತಾಯಿಯಾಗಬಲ್ಲಳು.
ಮುಂಬೈನ ಮೈಸೂರು ಅಸೋಸಿಯೇಶನ್ನಿನಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ಈ ನಾಟಕವನ್ನು ರಂಗಕ್ಕೆ ಅಳವಡಿಸಿದ ರೀತಿ ಮತ್ತು ಮುಂಬೈನ ಹೊಸಮುಖಗಳನ್ನು ಬಳಸಿಕೊಂಡು ಪ್ರಸ್ತುತಪಡಿಸಿದ ರೀತಿ ಎಂ. ಗಣೇಶ್ ಅವರ ಅಪಾರ ಪ್ರತಿಭೆಗೆ ಸಾಕ್ಷಿಯಾಗಿದೆ. ಹೆಚ್ಚಿನ ಕಲಾವಿದರು ಹೊಸಬರಾದರೂ ಅಭಿನಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಚಂದ್ರನಖಾಳ ಪಾತ್ರವನ್ನು ನಾಲ್ವರು ಕಲಾವಿದೆಯರಿಂದ ಅಭಿನಯಿಸಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಅವರನ್ನು ಬದಲಾಯಿಸುವ ನಿರ್ದೇಶಕರ ತಂತ್ರವು ಆ ಪಾತ್ರದ ಭಾವಸ್ಥಿತ್ಯಂತರಗಳ ಅಭಿವ್ಯಕ್ತಿಗೂ ಪೂರಕವಾಗಿದೆ.

ಪತಿಯನ್ನು ಕಳೆದುಕೊಂಡು ಚಂದ್ರನಖಾಳಾಗಿ ನೋವು ಮತ್ತು ಪ್ರತೀಕಾರವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಸುಧಾ ಶೆಟ್ಟಿ, ತನ್ನ ಸೇಡಿನ ಯೋಜನೆಯಿಂದ ಲಂಕೆ ನಾಶವಾಗುವುದನ್ನು ಕಂಡು ಪಶ್ಚಾತ್ತಾಪದಲ್ಲಿ ಬೇಯುವ ಚಂದ್ರನಖಾಳಾಗಿ ನಳಿನಿ ಪ್ರಸಾದ ಮೆಚ್ಚುಗೆಯಾಗುತ್ತಾರೆ. ದಂಡಕಾರಣ್ಯದಲ್ಲಿ ರಾಮನನ್ನು ಓಲೈಸುವ ಚಂದ್ರನಖಾಳಾಗಿ ಕುಸುಮ ಬಲ್ಲಾಳ ಮತ್ತು ಕೊರವಂಜಿಯಾಗಿ ಕೃಪಾ ಪೂಜಾರಿ ಇಬ್ಬರೂ ಶೃಂಗಾರ ಮತ್ತು ವಯ್ಯಾರದ ಅಭಿನಯದಿಂದ ರಂಗದ ಮೇಲೆ ಲಲವಿಕೆಯನ್ನು ಜೀವಂತಿಕೆಯನ್ನು ತಂದರು.
ಮಾರೀಚನ ಪಾತ್ರಧಾರಿ ದಿನೇಶ ಅವರು ಡೈಲಾಗುಗಳ ಡೆಲಿವರಿ ಹೃದ್ಗತವಾಗಿತ್ತು. ಪ್ರಥ್ವಿರಾಜ್, ಸುರೇಂದ್ರ, ರಾಘವ, ಮಾಲತಿ ಚಂದ್ರಕಾಂತ, ವಿಜಯಾ ಕೆಂಭಾವಿ, ಗಣಪತಿ ಶಂಕರಲಿಂಗ ದಂಪತಿಗಳ ಅಭಿನಯಗಳು ಪಾತ್ರೋಚಿತವಾಗಿತ್ತು. ಮುಂಬೈನ ಪ್ರತಿಭಾವಂತ ರಂಗಕಲಾವಿದರಾದ ಮೋಹನ್ ಮಾರ್ನಾಡ್ ಮತ್ತು ಅಹಲ್ಯಾ ಬಲ್ಲಾಳರು ತಮ್ಮ ಪ್ರತಿಭೆ ಮತ್ತು ಪ್ರಸಿದ್ಧಿಯ ಹೊರತಾಗಿಯೂ ಚಿಕ್ಕ ಪಾತ್ರಗಳನ್ನು ಒಪ್ಪಿ ನಟಿಸಿದ್ದು ಅವರ ರಂಗಭೂಮಿಯ ಬಗೆಗಿನ ಪ್ರೀತಿ ಗೌರವಗಳನ್ನು ತೋರುತ್ತಿತ್ತು. ಹಾಡುಗಳು ಅರ್ಥಪೂರ್ಣವಾಗಿದ್ದವು. ಶ್ರೀ ಭಾರ್ಗವ ಭಾಗವತ ಅವರ ಹಾಡುಗಾರಿಕೆ ಮತ್ತು ಸಂಗೀತ ಭಾವನೆಗಳ ಏರಿಳಿತಕ್ಕೆ ಪೂರಕವಾಗಿತ್ತು. ಹಾಡುಗಾರಿಕೆಗೆ ಸಾತ್ ನೀಡಿದ ಜ್ಯೋತಿ ಭಟ್ ಅವರ ಇಂಪು ಧ್ವನಿ ಹಿತವಾಗಿತ್ತು. ಈ ನಾಟಕ ಪ್ರದರ್ಶನ ಮತ್ತು ಗಣೇಶ ಅವರು ಮುಂಬೈನಲ್ಲಿ ನಡೆಸಿಕೊಟ್ಟ ಒಂದು ತಿಂಗಳ ರಂಗ ತರಬೇತಿಯ ಯಶಸ್ಸಿನ ಹಿಂದೆ ಮುಂಬೈ ರಂಗಭೂಮಿಯ ಖ್ಯಾತ ನಿರ್ದೇಶಕ ಡಾ. ಭರತ ಕುಮಾರ್ ಪೊಲಿಪುರವರ ಮತ್ತು ಬೆಳಕು, ರಂಗ ಸಜ್ಜಿಕೆಯನ್ನು ಅಚ್ಚುಕಟ್ಟಾಗಿ ಮಾಡಿದ ಸಹ ನಿರ್ದೇಶಕ ಪ್ರಥ್ವಿನ್ ವಾಸು ಅವರ ಕೊಡುಗೆ ಕೂಡ ಇತ್ತು.
ಶ್ರೀರಂಗ ರಂಗೋತ್ಸವದ ನಿಮಿತ್ತ ಪ್ರದರ್ಶನಗೊಂಡ ಈ ನಾಟಕದಲ್ಲಿ ಶ್ರೀರಂಗರ ಮಗಳು ಡಾ. ಉಷಾ ದೇಸಾಯಿ ಕೂಡ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದು ಶ್ರೀರಂಗರ ರಂಗಭೂಮಿ ಪ್ರೀತಿಗೆ ಮಗಳು ಸಲ್ಲಿಸಿದ ಕಾಣಿಕೆಯಂತೆ ಕಂಡಿತು.




ರಾಮಾಯಣವನ್ನು ಮರು ನಿರೂಪಿಸಿದ 'ಚಂದ್ರನಖಾಯಣ'





ಕುತೂಹಲಕಾರಿಯಾಗಿದೆ.
ಧನ್ಯವಾದ ಮ್ಯಾಮ್…
ನಾಟಕ ನೋಡಬೇಕು ಅನಿಸುತ್ತಿದೆ.ಮಮತಾರಾವ ಭರತಕುಮಾರ್ ಅವರಿಗೆ ಅಭಿನಂದನೆ ತಿಳಿಸಿ.
ಸರ್ ನಮಸ್ತೆ…ಇಬ್ಬರಿಗೂ ಅಭಿನಂದನೆ ತಿಳಿಸುವೆ ..ಮುಖ್ಯವಾಗಿ ಮಂದರ್ತಿ ಗಣೇಶ್ ಈ ನಾಟಕವನ್ನು ಉತ್ತಮವಾಗಿ ನಿರೂಪಿಸಿದ್ದಾರೆ…ಶೂರ್ಪನಖಿ ನಮ್ಮ ಮನಸ್ಸಲ್ಲಿ ಉಳಿಯುವಂತೆ ಮಾಡಿದ್ದಾರೆ…
ಶೂರ್ಪನಖಿಯ ಕಣ್ಣಿಂದ ರಾಮಾಯಣವನ್ನು ಗ್ರಹಿಸಿದ ನಾಟಕ . ಡಾ. ಮಮತಾ ರಾವ್ ಮತ್ತು ರಂಗಕ್ಕೆ ತಂದ ತಂಡಕ್ಕೆ ತುಂಬಾ ಧನ್ಯವಾದಗಳು . ಚಂದ್ರ ನಖಿಯ ಮಾನವೀಯತೆಯ ದೃಷ್ಟಿಯಿಂದ ನೋಡುವ ಕೃತಿಕಾರರ ದೃಷ್ಟಿ ಅನನ್ಯವಾದುದು .
– ಅಶೋಕ್ ವಳದೂರ್
ನಿಜ ಅಶೋಕ್…ಧನ್ಯವಾದ
ರಾಜೀವ್ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ
ಥ್ಯಾಂಕ್ಸ್ ರಾಘವ…
ನಾಟಕದ ಚಿತ್ರ ಕಣ್ಣ ಮುಂದೆ ಬಂತು.ರಂಗಸಿದ್ಧತೆಯ ಎಲ್ಲರ ಕುರಿತೂ ಉಲ್ಲೇಖಿಸಿದ್ದು ಖುಷಿನೀಡಿತು.ಅಭಿನಂದನೆಗಳು ರಾಜೀವ ನಾಯಕ.
ಥ್ಯಾಂಕ್ಸ್ ತಮ್ಮಣ್ಣ ಸರ್…