ಕನ್ನಡದ ಹೆಸರಾಂತ ಕವಿ ಹೃದಯ ಶಿವ.
ಕನ್ನಡ ಚಲನಚಿತ್ರಗಳಿಗೆ ಇವರು ಬರೆದಿರುವ ಹಾಡುಗಳು ಎಲ್ಲರ ಮನಕ್ಕೆ ಲಗ್ಗೆ ಇಟ್ಟಿವೆ.
ಹೃದಯ ಶಿವ ಸಾಹಿತ್ಯದ ಗಂಭೀರ ವಿದ್ಯಾರ್ಥಿ.
ಅವರು ಇತ್ತೀಚೆಗೆ ಹೊರತಂದಿರುವ ಅನಾಥಪ್ರಜ್ಞೆಯ ಒಂದು ಬರಹ ನಿಮ್ಮ ಓದಿಗಾಗಿ ಇಲ್ಲಿದೆ.
-ಹೃದಯ ಶಿವ
ಬಿ.ಸಿ.ರಾಮಚಂದ್ರ ಶರ್ಮರು ನಿಮಗೆ ಗೊತ್ತು. ಹಸಿರುಟ್ಟು ಸದಾ ಕಂಗೊಳಿಸುವ, ವರ್ಷವಿಡೀ ತಣ್ಣನೆ ಗಾಳಿಗೆ ಹಾಯೆನುವ, ಕಾವೇರಿಯ ಕಲರವಕ್ಕೆ ಕಿವಿಗೊಟ್ಟು ಧ್ಯಾನಿಸುವ ಮಂಡ್ಯ ಜಿಲ್ಲೆಯ ನಾಗಮಂಗಲ ಇವರ ಊರು. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಸೌಮ್ಯಕೇಶವ ದೇವಾಲಯವನ್ನು ಹೊಂದಿರುವ ತಾಲೂಕು ನಾಗಮಂಗಲ: ನಾಗಮಂಗಲದ ಪಶ್ಚಿಮದ ಶಿಲೆಗಳಲ್ಲಿ ಚಿನ್ನದ ನಿಕ್ಷೇಪವಿದ್ದರೂ ಅಷ್ಟೇನೂ ಲಾಭದಾಯಕವಲ್ಲ. ಅಲ್ಲಲ್ಲಿ ಕುರುಚಲು ಗಿಡಗಳನ್ನು ಹೊಂದಿರುವ ಈ ನೆಲ ಮರಳು ಮಿಶ್ರಿತ ಹಾಗೂ ಕೆಂಪು ಬಣ್ಣದ್ದು. ಈ ತಾಲೂಕು 1882ರವರೆಗೆ ಹಾಸನ ಜಿಲ್ಲೆಯಲ್ಲಿತ್ತಾದರೂ, ಆನಂತರ ಮೈಸೂರು ಜಿಲ್ಲೆಗೆ ಸೇರ್ಪಡೆಯಾಗಿ ಮಂಡ್ಯ ಪ್ರತ್ಯೇಕ ಜಿಲ್ಲೆಯಾದ ನಂತರ ಮಂಡ್ಯದ ಭಾಗವಾಗಿದೆ.
“ಕಾವ್ಯ ರಚನೆಯ ಬಗ್ಗೆ ನಿಮ್ಮ ನಿಲುವೇನು?” ಎಂದು ಯಾರಾದರೂ ಕೇಳಿದರೆ ಶರ್ಮರು ಹೇಳುವುದು, “ಕಾವ್ಯ ಕೊಡುವುದು ವಿಚಾರವಲ್ಲ, ಪರಿಕಲ್ಪನೆಯಲ್ಲ, ಕತೆ ಹೇಳುವುದು ಅದರ ಕೆಲಸವಲ್ಲ, ಅದರ ತರ್ಕ ವೈಜ್ಞಾನಿಕ ಬರಹದ ತರ್ಕವಲ್ಲ, ಮೊದಲೇ ಅರಗಿಸಿಕೊಂಡ ಕವಿಯ ಅನುಭವಕ್ಕೆ ಕಾವ್ಯ ಎರಕದ ಅಚ್ಚಲ್ಲ. ಕಾವ್ಯದ್ದು ರಸಭಾವಗಳ ಪಾತಳಿ, ಕವಿಯ ರಸಭಾವ-ವಿಚಾರಗಳನ್ನು ಸಂವಹಿಸುವುದಕ್ಕೆ ಅದು ಬಳಸುವ ತರ್ಕ ಮುತ್ತಿನ ಸರದ ಸೂತ್ರದಂತೆ. ಕವಿಯ ಮಾತು ಪ್ರತಿಮೆಗಳು ಓದುಗನಲ್ಲಿ ಪ್ರಚೋದಿಸುವ ಭಾವದ ನೆಲೆಯ ಪ್ರತಿಸ್ಪಂದನೆಯೇ ಅದರ ಅಸ್ತಿತ್ವಕ್ಕೆ ಸಾಕ್ಷಿ…”
ರಾಮಚಂದ್ರ ಶರ್ಮರು 1969ರಲ್ಲಿ ಪ್ರಕಟಿಸಿದ ತಮ್ಮ ‘ಹೇಸರಗತ್ತೆ’ ಕವನ ಸಂಗ್ರಹದ ಹೊತ್ತಿಗೆ ಕಾವ್ಯದ ಬಗ್ಗೆ ಪಡೆದಿದ್ದ ಧೃಡತೆ ಕುರಿತಂತೆ ವ್ಯಕ್ತಪಡಿಸಿದ ಮಾತುಗಳು ಈ ಮೇಲಿನವು. ತಮ್ಮ ಕವಿತೆಯ ಬಗ್ಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ನೀಡುತ್ತ, ತಾವು ಬರೆದದ್ದು ಅದ್ಭುತ ಎಂಬ ಭ್ರಮೆಯಲ್ಲಿ ತೇಲುವ ಕವಿಗಳು ವಾಸ್ತವಕ್ಕಿಳಿಯಬಹುದೆಂಬ ಆಶಾವಾದದಿಂದ ಈ ಮಾತುಗಳನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಇಷ್ಟಕ್ಕೂ ಕವಿತೆ ಬಗ್ಗೆಯೇ ಒಂದಿಷ್ಟು ಕವಿತೆ ಬರೆದಿರುವ ಶರ್ಮರು “ಒಂದೊಂದು ಕವನವೂ ಭರವಸೆಯ ವ್ಯವಸಾಯ-ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ”ಎಂದು ಬರೆಯುತ್ತಲೇ ಸಂಗೀತದ ನೆರವು ಪಡೆಯುವ ಕಾವ್ಯ ಕಾವ್ಯವಲ್ಲವೆಂದು ವಾದಿಸುತ್ತಾರೆ. ರವೀಂದ್ರನಾಥ ಟ್ಯಾಗೋರರು ಹಾಡಲೆಂದೇ ಅದೆಷ್ಟೋ ಕವಿತೆಗಳನ್ನು ಬರೆದದ್ದು ನೋಡಿ, ಅವರಿಗೆ ನೊಬೆಲ್ ಬಂದದ್ದು ನೋಡಿ ಆ ಬಗ್ಗೆ ಏನೂ ಹೇಳದೆ ಸುಮ್ಮನಾಗುತ್ತಾರೆ!
ಈ ಕವಿ ಒಂದಿಷ್ಟು ಕಾಲ ಇಥಿಯೋಪಿಯ, ಇಂಗ್ಲೆಂಡ್, ಜಾಂಬಿಯಾ ಹಾಗೂ ಮಲಾವಿಗಳಲ್ಲಿ ಇದ್ದವರು ಎಂಬುದು ಎಲ್ಲರಿಗೂ ಗೊತ್ತು. ಮಾತೃನೆಲದ ಕಾವ್ಯದ ಜೊತೆಗೆ ಪಶ್ಚಿಮದ ಕಾವ್ಯದ ಪ್ರಭಾವಕ್ಕೆ ಒಳಗಾದ ಅನೇಕ ಕನ್ನಡ ಕವಿಗಳಂತೆಯೇ ಶರ್ಮರು ಕೂಡ ಎರಡೂ ಗುಣಧರ್ಮದ ಕಾವ್ಯವನ್ನು ರಚಿಸಿದರು. ಗ್ರೀಕ್ ಪುರಾಣಗಳು, ಬೈಬಲ್, ಪಶ್ಚಿಮ ದೇಶಗಳ ಊರುಗಳು ಈ ಕಾರಣಕ್ಕೆ ಇವರ ಕವಿತೆಗಳಲ್ಲಿ ಹೊಕ್ಕಿವೆ. ಹಾಗೆಯೇ ವಿಯೆಟ್ನಾಂ ಸಮರ, ಆಧುನಿಕ ನಾಗರೀಕತೆಯ ಭೀಕರತೆ ಕುರಿದಾದ ಜಿಜ್ಞಾಸೆಗಳೂ ಇವರೊಳಗೆ ಕವಿತೆಗಳಾಗಿ ರೂಪು ತಳೆದಿವೆ. ಈ ಮಾತಿಗೆ ಇಂಬು ನೀಡಬಲ್ಲ ಕವಿತೆಯೊಂದು ಇಲ್ಲಿದೆ ನೋಡಿ:
‘ನೆನಪಿಡು: ಬುಡಕ್ಕೆ ನಿಂತು ಕತ್ತೆತ್ತಬೇಡ,
ಕತ್ತು ಖಳಕ್ಕೆನ್ನುವುದು ಖಾತ್ರಿ, ಐದಾರು
ಮೈಲಿಗಳ ದೂರ ಕ್ಷೇಮ. ಬಳುಕುತ್ತ ಮೋಡ
ಬಳಿಗೆ ಸುಳಿದೇ ಪುಳಕಗೊಂಡಿದ್ದನ್ನು ಯಾರು
ತಾನೇ ಯಾವ ಮಾತಲ್ಲಿ ಹಿಡಿದಾರು, ಹೇಳು.
ನನ್ನ ನೆತ್ತಿಗೆ ನಿಂತು ಕತ್ತಲಿಗೆ ಕೈ ನೀಡು-
ನಕ್ಷತ್ರದುಂಗುರ ತೊಡುವುದೊಂದೊಂದು ಬೆರಳು.
ಅಥವಾ, ಬೆಳಕಿದ್ದಾಗ ಬಾ, ಸುತ್ತ ನೋಡು…’
ನೋಡಿದೆ: ಆಕಾಶ ಹರಿದು ತೊಗಲು ನೆಲಕ್ಕೆ
ಚೆಲ್ಲಿದ ಹಾಗೆ ಸುತ್ತ ಹತ್ತಾರು ಸರೋವರ;
ಮಾನ ಮುಚ್ಚಲು ಕಾಡು ಬಿಚ್ಚಿದ ಛತ್ರಿ ಕುಕ್ಕೆ
ಕವುಚಿತ್ತು; ನದಿಯಾಗಿತ್ತು ನೆಲದ ಕನಿಕರ.
ಮತ್ತೆ ಮತ್ತೆ ಬಾಣ ತಿವಿದಂತೆ ಸೆಟೆದ ಶಿಶ್ನ-
ಯಾವ ಪುರುಷಾರ್ಥಕ್ಕೆ? ಎದೆ ಕೇಳಿತ್ತು ಪ್ರಶ್ನೆ.
(ಟೊರಾಂಟೋ ನಗರದ ಸಿ ಅಂಡ್ ಎನ್ ಗೋಪುರ)
…ನೀವು ಈ ಕವನವನ್ನು ಗಮನದಲ್ಲಿಟ್ಟುಕೊಂಡು ಧ್ಯಾನಿಸಿದಾಗ ರಾಮಚಂದ್ರ ಶರ್ಮರು ತಲುಪಿದ ವಾಸ್ತವ ಮತ್ತು ದಟ್ಟವಾದ ವಿಷಾದದ ಬಗ್ಗೆ ಗ್ರಹಿಸಬಲ್ಲಿರಿ. ಮನುಷ್ಯ ಕಟ್ಟಿರುವ ಕಟ್ಟಡಗಳಲ್ಲೆಲ್ಲಾ ಅತಿ ಎತ್ತರದ ಕಟ್ಟಡವಾದ ಈ ಸಿ ಅಂಡ್ ಎನ್ ಟವರ್ಸ್ 1500 ಅಡಿಗೂ ಹೆಚ್ಚು ಎತ್ತರವಿದ್ದು ಇದು ಅಮೇರಿಕಾದ ಸಿಯರ್ಸ್ ಹಾಗೂ ಹ್ಯಾಂಕಾಕ್ ಟವರುಗಳಿಗಿಂತಲೂ ಮೇಲಿದೆಯಂತೆ. ಇದರಲ್ಲಿ ಅವುಗಳಲ್ಲಿರುವಂತೆ ಅಂಗಡಿಯಾಗಲೀ, ಮನೆಯಾಗಲೀ ಇಲ್ಲವಂತೆ-ಇದರಲ್ಲಿ ಇರುವುದೊಂದೇ ಒಂದು ಮಾತ್ರ, ಅಷ್ಟೆತ್ತರಕ್ಕೆ ಜನರನ್ನು ಎತ್ತುವ ಲಿಫ್ಟ್… ನಾಗರೀಕತೆಯ ಸಾಧನೆಗಳೆಲ್ಲ ಸರಿ; ಇಲ್ಲಿಯ ಬುದ್ಧಿವಂತಿಕೆ, ಜಾಣತನ ಎಲ್ಲವೂ ಚಂದ. ಆದರೆ ಮೂಲಭೂತವಾಗಿ ಅದೆಷ್ಟೋ ದೌರ್ಬಲ್ಯ, ಕಪ್ಪುಚುಕ್ಕೆಗಳುಳ್ಳ ಈ ಬದುಕಿನಲ್ಲಿ ವಾಸ್ತವ ಮತ್ತು ಕಾಲ ಮನುಷ್ಯನನ್ನು ಅಧಃಪತನದತ್ತ ಕೊಂಡೊಯ್ಯುತ್ತಿರಬೇಕಾದರೆ ಕಲೆ, ಕೌಶಲ್ಯ ಮುಖ್ಯ; ತಂತ್ರಜ್ಞಾನ, ವಿಜ್ಞಾನವೂ ಮುಖ್ಯ. ಮಾನವ ಇತರ ಜೀವಿಗಳಿಗಿಂತ ಬುದ್ಧಿವಂತ ಅನ್ನಿಸಿಕೊಳ್ಳುವ ಭ್ರಮೆಗೆ ಪುಷ್ಟಿ ಸಿಗುವುದು ಇಂತಹ ಸಂದರ್ಭಗಳಲ್ಲಿಯೇ. ಆ ಕಟ್ಟಡದ ನಿರುಪಯುಕ್ತತೆ, ನಾಗರೀಕ ಮನುಷ್ಯನ ಹೆಮ್ಮೆ… ಎಲ್ಲದರ ಬಗ್ಗೆ ಅನುಮಾನವನ್ನು ಬಿಟ್ಟುಬಿಡಲು ಬೇಕಾದ ಔದಾರ್ಯತೆ.
ಶರ್ಮರು ಕೇವಲ ಪಾಶ್ಚಾತ್ಯ ಸಾಹಿತ್ಯದ, ಚರಿತ್ರೆಯ, ಗ್ರೀಕ್ ಪುರಾಣಗಳ ಮೊರೆ ಹೋಗುವುದರಲ್ಲೇ ತಲ್ಲೀನರಾಗಲಿಲ್ಲ. ನವ್ಯ ಕಾವ್ಯದ ಮುಂಚೂಣಿ ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ದೈತ್ಯ ಪ್ರತಿಭೆಯಿಂದ ಇಡೀ ಕನ್ನಡ ಕಾವ್ಯಕ್ಕೆ ಹೊಸದಿಕ್ಕನ್ನೇ ಸೂಚಿಸುತ್ತಾ ಸಾಮಾಜಿಕ, ರಾಜಕೀಯ ಚಿಂತನೆಯನ್ನು ಕವಿತೆಯಲ್ಲಿ ತಂದರು; ಎ.ಕೆ.ರಾಮಾನುಜನ್ ಕೂಡ ಶರ್ಮರಂತೆ ವಿದೇಶಗಳನ್ನು ಸುತ್ತಿದ್ದರೂ ತಮ್ಮದೇ ಆದ ವಿಡಂಬನೆ, ಚಮತ್ಕಾರಗಳ ಮೂಲಕ ವಿಶಿಷ್ಟ ಕಾವ್ಯಕ್ಕೆ ಅಡಿಪಾಯವಾದರು. ಶರ್ಮರ ತರಹದವರು ಕಾಲಕಾಲಕ್ಕೆ ಮನುಷ್ಯ ಪಡೆದ ಅನುಭವ, ಅರಿವು, ಅವಸಾನ ಮತ್ತು ಅವುಗಳಿಂದಾದ ಬದಲಾವಣೆಗಳನ್ನು ಗ್ರಹಿಸುವಂತಾಯಿತು. ಇಲ್ಲಿಯ ಮತ್ತು ಪಶ್ಚಿಮದೊಂದಿಗಿನ ಅನುಸಂಧಾನದ ಕುರುಹುಗಳಾಗಿ ಮನುಷ್ಯನ ತುಮುಲ, ಅಸಹಾಯಕತೆಯ ಸಾಕ್ಷ್ಯದ ರೂಪದಲ್ಲಿ ಹೊಸದೊಂದು ಚಿತ್ರಣವನ್ನು ತಮ್ಮ ಸತ್ವಶಾಲಿ ಕವಿತೆಗಳಲ್ಲಿ ಕಟ್ಟಿಕೊಡಲು ಸಾಧ್ಯವಾಯಿತು. ಹಾಗಾಗಿ ಶರ್ಮರು ಎಲ್ಲವನ್ನೂ ಗ್ರಹಿಸಬಲ್ಲವರಾಗಿದ್ದರು. ಮನುಷ್ಯನ ಆಳದ ದಿಗ್ಭ್ರಾಂತಿಯನ್ನು ಕಂಡಿದ್ದರು. ಮಾನವನ ಆಂತರ್ಯದ ಹುಳುಕುಗಳು ಮತ್ತು ಕೊಳಕುತನವನ್ನು ಕಂಡಿದ್ದರು. ಮಾನವ ತನ್ನ ದೋಷಗಳನ್ನು ಮರೆಮಾಚಿಕೊಳ್ಳಲು ಹೆಣಗಾಟ ನಡೆಸುವುದನ್ನೂ ಕಂಡಿದ್ದರು. ಯಾವುದು ಇಲ್ಲಿ ಸ್ವಾಭಾವಿಕ, ಯಾವುದು ಕೃತಕ ಎಂಬುದನ್ನು ತಾಳೆ ಹಾಕಬಲ್ಲವರಾಗಿದ್ದರು.
ಶರ್ಮರ ವ್ಯಕ್ತಿತ್ವ ಕೂಡ ತುಸು ಕ್ಲಿಷ್ಟಕರವಾದದ್ದೇ. ಮನೋವಿಜ್ಞಾನವನ್ನು ಓದಿಕೊಂಡಿದ್ದ ಇವರು ಸಂಪ್ರದಾಯದ ಮುಖವಾಡಕ್ಕೆ ಜೋತು ಬೀಳದೆ, ಸಭ್ಯತನದ ಸೋಗಿಗೆ ತಮ್ಮ ವ್ಯಕ್ತಿತ್ವವನ್ನು ಹರಾಜಿಗಿಡದೆ ಮುಕ್ತವಾಗಿ ಬರೆದರು. ಅಷ್ಟೇ ಅಲ್ಲ, ಕಾವ್ಯದ ಎಲ್ಲಾ ಸಾಧ್ಯತೆಗಳಲ್ಲಿಯೂ ಕೈಯಾಡಿಸಿ ತಮ್ಮ ಕಾವ್ಯಕ್ಕೆ ನಿಷ್ಟರಾಗಿದ್ದರು. ತಾವು ಕಂಡಿದ್ದು, ಕೇಳಿದ್ದು, ಓದಿದ್ದು… ಎಲ್ಲವನ್ನೂ ಚಿಂತನೆಗೆ ಹಚ್ಚಿ ಒಲಿದ ದ್ರವ್ಯವನ್ನು ಅಕ್ಷರಕ್ಕಿಳಿಸಿದರು. ವಿಶೇಷವಾಗಿ ಪಾಶ್ಚಾತ್ಯ ಕವಿಗಳ ಪ್ರಭಾವಕ್ಕೆ ತೀವ್ರವಾಗಿ ಒಳಗಾಗಿದ್ದರು. ಮಹಾಕವಿ ಟಿ.ಎಸ್.ಎಲಿಯೆಟ್‌ಗಾಗಿ ಅವರು ಬರೆದ ಪದ್ಯವೊಂದರ ಆರಂಭದಲ್ಲಿ,
ನೀ ಸತ್ತು
ಸುಟ್ಟು
ಮಳೆ ಬಿದ್ದು
ಹೊಳೆ ರೊಚ್ಚಿಗೆದ್ದು
ಬೆಂಬೂದಿ ಕೊಚ್ಚಿ ಗಾಳಿಗೆ ಚೆಲ್ಲಿ
ಮಣ್ಣು ಗೊಬ್ಬರವಾಗಿ ಹೋದಮೇಲೂ
ಊಳು ಪಡಸಾಲೆಯಲ್ಲಿ;
ನೆರಳು
ಬೆಳಕಾಡದಲ್ಲಿ.
ಎಂದು ಬರೆಯುತ್ತಾ ಈ ದೀರ್ಘವಾದ ಕವಿತೆಗೆ ಇತಿಶ್ರೀ ಹೇಳುವುದು ಹೀಗೆ:
ಹೊತ್ತು ಮುಳುಗುವ ಮುಂಚೆ
ಹೋದವನೇ,
ಹೋಗಿ ಬಿಡು, ಹೋಗು.
ಭೂತಶಕ್ತಿಗಳಲ್ಲಿ ಕರಗು,
ಧಾತುವಾಗು.
ಬೆಟ್ಟದಾಚೆಗೆ ಹೋಗಿ ಬಿಟ್ಟವನೇ,
ನಿತ್ಯ ಹಣ್ಣೆಲೆ ಸಂಜೆ
ಹೊತ್ತಿಗೆ ಬಂದು ಆಡಿದ್ದನ್ನೆ ಆಡಿ
ಕಾಡುವುದ ಬಿಟ್ಟುಬಿಡು.
ಹೋಗಿ ಬಾ, ಬಂಧು, ಹೋಗು
ಹೋಗಿಯೇ ಬಿಡು.
(ಇಷ್ಟಪತ್ರ)
ಈ ಕವಿತೆ ಅಮೆರಿಕಾದ ವ್ಯಾಪಾರಸ್ಥ ಅಪ್ಪ, ಕವಯಿತ್ರಿ ಅಮ್ಮನಿಗೆ ಹುಟ್ಟಿ ಅಮೆರಿಕಾದ ಪ್ರತಿಷ್ಟಿತ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅರ್ವಿಂಗ್ ಬ್ಯಾಬಿಟ್, ಜಾರ್ಜ್ ಸಂತಯಾನರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು. ಫ್ರಾನ್ಸ್ ದೇಶಕ್ಕೆ ಹೋಗಿ ಫ್ರೆಂಚ್ ಕಾವ್ಯವನ್ನು ಅಧ್ಯಯನಿಸಿ ಮೊದಲನೇ ಮಹಾಯುದ್ಧ, ರಷ್ಯಾ ಕ್ರಾಂತಿ, ಅಮೇರಿಕಾದ ಬದುಕು ಮುಂತಾದವುಗಳಿಂದ ಸಾಕಷ್ಟು ಗ್ರಹಿಸಿ, ಯೂರೋಪಿನ ಮನುಷ್ಯನ ಸಾಧನೆ, ಸಾಲುಗಳನ್ನು ಶೋಧಿಸಿ, ಮನುಷ್ಯನ ಹೋರಾಟ, ಐಹಿಕ ಸುಖ ತಂದೊಡ್ಡುವ ಗೊಂದಲ, ಸ್ಪೇನಿನ ಸರ್ವಾಧಿಕಾರ ಇತ್ಯಾದಿಗಳ ಬಗ್ಗೆ ಆಳದಲ್ಲಿ ಧ್ಯಾನಿಸಿ ತನ್ನ ಪದ್ಯ, ಗದ್ಯದ ಮೂಲಕ ಇಡೀ ಪಶ್ಚಿಮದ ನಾಗರೀಕತೆ ಪರಿಭಾವಿಸಿ, ಆವರೆಗಿದ್ದ ಸಿದ್ಧ ಕಾವ್ಯಮಾರ್ಗವನ್ನು ಮುರಿದು ತನ್ನದೇ ಹೊಸತನ ಸಿದ್ಧಿಸಿಕೊಂಡು, ಅಲ್ಲಿಯ ತನಕ ಜಗತ್ತು ಯಾರು ಶ್ರೇಷ್ಠ ಕವಿಗಳು ಎಂದು ಭಾವಿಸಿತ್ತೋ ಅವರ ಕಾವ್ಯದ ಟೊಳ್ಳುತನವನ್ನೆಲ್ಲಾ ದಾಖಲೆ ಸಮೇತ ಜಾಲಾಡಿ ನಿಷ್ಠುರ ವಿಮರ್ಶಕ ಎನ್ನಿಸಿಕೊಂಡು ಹೊಸ ಇತಿಹಾಸ ಬರೆದು ಕನ್ನಡದ ಗೋಪಾಲಕೃಷ್ಣ ಅಡಿಗರು ಸೇರಿದಂತೆ ಜಗತ್ತಿನ ಅಸಂಖ್ಯಾತ ಕವಿಗಳಿಗೆ ಸ್ಪೂರ್ತಿಯ ಸೆಲೆಯಾಗಿ ಮಾರ್ಪಟ್ಟು ಕಡೆಗೆ ಕಾಲದ ನೇಮಕ್ಕೆ ಓಗೊಟ್ಟು ತೆರಳಿದ ಟಿ.ಎಸ್.ಎಲಿಯೆಟ್ಟನ ಕುರಿತಾದ ಭಾವಪೂರ್ಣ ಕವಿತೆ.
ವಸ್ತುವೈವಿಧ್ಯತೆಗೆ ಹೆಸರಾಗಿದ್ದ ರಾಮಚಂದ್ರ ಶರ್ಮರು ತಮ್ಮ ಸಾನೆಟ್ಟುಗಳ ಸಂಕಲನ ‘ಸಪ್ತಪದಿ’ಯ ಮೂಲಕ ಬೇರೆಯದೇ ರೀತಿಯಲ್ಲಿ ಓದಿಗೆ ಸಿಕ್ಕುತ್ತಾರೆ. ಮೂವತ್ತು ಸಾನೆಟ್ಟುಗಳಿರುವ ಈ ಸಂಕಲನದ ದಾಂಪತ್ಯ ಕುರಿತ ಪದ್ಯಗಳು ಚರಿತ್ರೆ, ನಾಗರೀಕತೆ, ಮನುಷ್ಯನ ದ್ವಂದ್ವದ ಬಗ್ಗೆ ತಮ್ಮ ಕವಿತೆಗಳಲ್ಲಿ ಚರ್ಚಿಸುವ ಶರ್ಮರ ಕ್ರಿಯಾಶೀಲ ಜಗತ್ತನ್ನು, ಚಿಂತನಾ ಕ್ರಮವನ್ನು, ಅವರೊಳಗಿನ ಆರ್ದ್ರ ಮನಸ್ಸಿನ ಭಾವುಕನನ್ನು ಇನ್ನೂ ವಿಸ್ತಾರವಾಗಿ ತೆರೆದಿಡುತ್ತದೆ. ಮನುಷ್ಯನ ಆಳದಲ್ಲಿ ಅಡಗಿರುವ ಕೋಮಲ ಭಾವನೆಗಳನ್ನು, ಅವ್ಯಕ್ತ ವಿಷಾದ, ಅಸಹಾಯಕತೆ, ಬದುಕಿನ ಕಟು ವಾಸ್ತವತೆ, ಘೋರ ಸಂಕಟದ ಹಿತವನ್ನು ಇಲ್ಲಿನ ಕವಿತೆಗಳು ಮಾನವೀಯ ನೆಲೆಗಟ್ಟಿನಲ್ಲಿ ಮೊಗೆದು ಕೊಡುತ್ತವೆ-ಈ ನಿಟ್ಟಿನಲ್ಲಿ ಈ ಕವಿತೆ ಒಂದು ಸ್ಯಾಂಪಲ್:
ಮಲಗುವ ಮುಂಚೆ ಬಚ್ಚಲಿಗೆ ಹೋಗಿ ಹಲ್ಲುಜ್ಜಿ
ಗಂಗಾಳದಲ್ಲಿಟ್ಟು ಮಂಚಕ್ಕೆ ಹಿಂದಿರುಗಿ
ಓದುತ್ತಿದ್ದ ಪುಸ್ತಕದ ಪುಟ ಮಡಿಚಿ ಮುಚ್ಚಿ
ನಿಲುಪೆಟ್ಟಿಗೆಯ ಮೇಲಿಟ್ಟು ಮಾತ್ರೆಗಳ ನುಂಗಿ
ಸ್ವಿಚ್ಚೊತ್ತಲಿದ್ದಾಗ ಕಣ್ಣು ಹೊರಳಿತ್ತವಳ
ಕಡೆ…
ಅಂಗಾತ ಮಲಗಿದ್ದವಳ ಅರೆಬಿರಿದ
ತುಟಿ, ಸಣ್ಣಗೆ ಗೊರಕೆ-ಕುದಿನೀರಿದ್ದ ಕೆಟಲ
ಸಿಳ್ಳಿನ ಹಾಗೆ. ನೇರ ಬೈತಲೆಯ ಎಡಬಲದ
ಕೂದಲಿಗೆ ಅಂಚು ಕಟ್ಟಿದ ಬೆಳ್ಳಿ ಹಣೆ ಮೇಲೆ,
ಕೋತಿ ಖಯಾಲಿಗೆ ಕಿತ್ತೆಸೆದ ಎರಡು ಪರಂಗಿ
ಕಾಯಿಗಳನ್ನು ನೆನಪಿಗೆ ತಂದ ಬತ್ತಿದ ಮೊಲೆ…
ಮಂಚದೆದುರ ಗೋಡೆ ಕನ್ನಡಿ ನೆನಪಿಗೆ ನಡುಗಿ
ಕಣ್ಣ ಮುಚ್ಚಿ ಮಲಗಿದ್ದ ಹೆಣ್ಣ ವಂದಿಸಿದ.
ಸ್ವಿಚ್ಚೊತ್ತಿ ಅವಳ ಮುಂಗೈಗಾಗಿ ತಡಕಿದ.
(ಅವಳ ಹುಟ್ಟುಹಬ್ಬದ ರಾತ್ರಿ-ಅವನು)
ಶರ್ಮರ ಕವನಗಳ ಧ್ಯಾನಕ್ಕೆ ಮನಸನ್ನು ಒಡ್ಡಿಕೊಂಡಾಗ ನಮ್ಮನ್ನೆಲ್ಲ ಒಮ್ಮೆಲೇ ಅಚ್ಚರಿಗೊಳಿಸುವುದು ಅವರು ಬದುಕನ್ನು ಪ್ರೀತಿಸುತ್ತಿದ್ದ ರೀತಿ ಮತ್ತು ತಾವು ಗ್ರಹಿಸಿದ್ದೆಲ್ಲವನ್ನೂ ಕವಿತೆಗೆ ತರುವ ಪ್ರಾಮಾಣಿಕ ಯತ್ನ; ಜೀವನದ ಒಂದೊಂದು ಕ್ಷಣವನ್ನೂ ಆಸ್ವಾದಿಸುತ್ತಿದ್ದ ಈ ಕವಿ ಪ್ರಜಾವಾಣಿ ಮತ್ತು ರೇಡಿಯೋ ಮೂಲಕ ತಮ್ಮೆಲ್ಲ ಅಂತರಂಗದ ಭಾವನೆಗಳನ್ನೆಲ್ಲಾ ಜನರೊಂದಿಗೆ ಹಂಚಿಕೊಳ್ಳುತ್ತಿದ್ದುದರ ಜೊತೆಗೆ ತಮಾಷೆ, ಜಾಣತನದಿಂದ ಮಾತಾಡುತ್ತಾ ತಮ್ಮ ಕವಿತೆಗಳಲ್ಲಿನ ನಿಗೂಢತೆಯಂತೆಯೇ ತಾವೂ ಕೂಡ ಯಾರಿಗೂ ಪೂರ್ತಿ ಎಟುಕದ ನಿಗೂಢ ಸ್ವಭಾವದವರೇ ಆಗಿದ್ದವರು. ತಮ್ಮ ವಿಶಿಷ್ಟ ನುಡಿಗಟ್ಟುಗಳ ಮೂಲಕ ಕಾಮ, ಪ್ರೀತಿ, ದುಗುಡ, ವಿಷಾದ, ಸಿಟ್ಟು, ಅಂತಃಕರಣ ಎಲ್ಲವನ್ನೂ ಸಮರ್ಥವಾಗಿ ತರಬಲ್ಲವರಾಗಿದ್ದವರು. ಇವರು ಕವಿತೆ ವಾಚಿಸಲು ಶುರುಮಾಡಿದರೆ ಇಡೀ ಸಭಾಂಗಣ ಇವರ ಸಾಲುಗಳನ್ನು, ಅವುಗಳೊಳಗಿನ ಭಾವತೀವ್ರತೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಆಸ್ವಾದಿಸುತ್ತಿತ್ತಂತೆ. ನವ್ಯಕಾವ್ಯದ ಬಗ್ಗೆ ಅಸಡ್ಡೆಯ ಭಾವ ಹೊಂದಿದ್ದ ಕೆಲವು ನವೋದಯ ಕವಿಗಳು ಇವರ ಕಾವ್ಯಕ್ಕೆ ಬೆರಗಾಗಿ ನವ್ಯಕಾವ್ಯವನ್ನೂ ಗೌರವಿಸಲು ಶುರುಮಾಡಿಕೊಂಡದ್ದೂ ಸುಳ್ಳಲ್ಲ. ಇಂತಹ ಶರ್ಮಾರನ್ನು ಹತ್ತಿರದಿಂದ ಬಲ್ಲ ಲಂಕೇಶರು, “ಮೂರನೇ ವಯಸ್ಸಿನಲ್ಲೇ ತಂದೆ ತೀರಿಕೊಂಡು ಕಡುಬಡತನದಲ್ಲಿ, ನೆಂಟರಿಷ್ಟರ ಆಶ್ರಯದಲ್ಲಿ ಬದುಕಿ ಆಮೇಲೆ ಹೇಗೋ ಬಿ.ಎಸ್ಸಿ. ಮಾಡಿಕೊಂಡು ಹೈಸ್ಕೂಲಿನಲ್ಲಿ ಮೇಷ್ಟ್ರರಾಗಿದ್ದ, ರೂ. 130ರ ಪಗಾರದ ಜೊತೆಗೆ ಪ್ರಜಾವಾಣಿಯ ಲೇಖನ, ಪದ್ಯಗಳಿಗೆ ತಲಾ ರೂ. 25 ಪಡೆಯುತ್ತಿದ್ದ, ರೇಡಿಯೋ ಅವರಿಗೆ ನೀಡಿದ ‘ಸ್ಟಾರ್’ ಗುಣಕ್ಕೆ ಹೊಂದಿಕೊಳ್ಳುವಂಥ ರೂ. 30 ಸಂಭಾವನೆ ಪಡೆದರೂ ಕಾವ್ಯದ ಮಾದಕತೆಯಿಂದ, ಬದುಕುವ ಸಂಭ್ರಮದಿಂದ ತುಂಬಿದ್ದ ಶರ್ಮ ಈಗಿಲ್ಲ. ಮಾತುಗಳಲ್ಲಿ ಅದೇ ಧಾಟಿಯಿದ್ದರೂ ಯಾಂತ್ರಿಕತೆ ಕಡಿಮೆಯಾಗಿದೆ, ವರ್ತನೆಯಲ್ಲಿ ಅದೇ ವರಸೆಯಿದ್ದರೂ ಮುಂಚೆ ಎಲ್ಲರನ್ನು ಅಪಾಯದ ಅಂಚಿನಲ್ಲಿ ನಿಲ್ಲಿಸುತ್ತಿದ್ದ ಕಾಣ್ಕೆ ಸವೆದುಹೋಗಿದೆ” ಎಂಬುದಾಗಿ ಒಳ್ಳೆಯ ಬಟ್ಟೆ, ಫ್ರೆಂಚ್ ಕಾರು, ನೆಮ್ಮದಿಯ ಜೀವನ ಹೊಂದಿದ್ದ ಅರವತ್ತರಂಚಿನಲ್ಲಿದ್ದ ಶರ್ಮರ ಬಗ್ಗೆ ಬರೆಯುತ್ತಾರೆ.
ತಮ್ಮ ಅಪರೂಪದ ಕವಿತೆಗಳ ಮೂಲಕ ಒಂದು ತಲೆಮಾರನ್ನು, ಒಂದು ಕಾಲಘಟ್ಟವನ್ನು ದಾಖಲಿಸಿದ ಕ್ರೆಡಿಟ್ಟಿಗೆ ಭಾಜನರಾಗಿರುವ ರಾಮಚಂದ್ರ ಶರ್ಮರು, ‘ಈ ಶತಮಾನದ ಇಂಗ್ಲೀಷ್ ಕವನಗಳು’ ಎಂಬ ಪುಸ್ತಕದ ಮೂಲಕ ಜಗತ್ತಿನ ಅತ್ಯುತ್ತಮ ಇಂಗ್ಲೀಷ್ ಕವನಗಳನ್ನು ಕನ್ನಡ ಕಾವ್ಯಾಸಕ್ತರಿಗೆ ಅನುವಾದಿಸಿಕೊಟ್ಟ ಶರ್ಮರು ಟಿ.ಎಸ್.ಎಲಿಯೆಟ್ ಸೇರಿದಂತೆ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ, ಹೋವಾರ್ಡ್ ಫ್ರಾಸ್ಟ್, ರಾಬರ್ಟ್ ಲವೆಲ್, ನೀಲಾಂಜನೆ, ಮೆನೆಲ ಅಸ್-ಪ್ರೋಟಿಯಸ್ಸಿಗೆ ತಮ್ಮ ಕವಿತೆ ಮುಖೇನ ಅಭಿಮಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಕನ್ನಡದ ಬಹುತೇಕ ಸಾಹಿತಿಗಳೊಂದಿಗೆ ಒಳ್ಳೆಯ ಒಡನಾಟ, ಸ್ನೇಹ ಇರಿಸಿಕೊಂಡಿದ್ದರೆಂಬುದು ಮತ್ತೊಂದು ವಿಶೇಷ. ಹಾಗೆಯೇ ತಮ್ಮ ಬದುಕಿನಲ್ಲಿ ಬೇಂದ್ರೆಯ ಪಾತ್ರ-ಪ್ರಭಾವಗಳೇನು? ಎಂಬುದಾಗಿಯೂ ಶರ್ಮರು ತಮ್ಮ ಅನುಭವಕೋಶವನ್ನು ತೆರೆದುಕೊಂಡಿದ್ದಾರೆ. ಲಂಕೇಶರು ಸಂಗ್ರಹಿಸಿ ಕೊಟ್ಟಿರುವ ಶರ್ಮರ ಈ ಸಂಗ್ರಹಯೋಗ್ಯ ಮಾತುಗಳೊಂದಿಗೆ ಈ ಬರಹವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ… “1946ರ ಡಿಸೆಂಬರ್ ನನ್ನ ಜೀವನದಲ್ಲಿ ಒಂದು ಮಹತ್ವದ ಘಟನೆ ನಡೆಯಿತು. ದ.ರಾ. ಬೇಂದ್ರೆಯವರು ಬೆಂಗಳೂರಿಗೆ ಬಂದಿದ್ದರು; ಸಾಹಿತ್ಯ ಪರಿಷತ್ತಿನಲ್ಲಿ ಅವರ ಭಾಷಣ ಇತ್ತು. ಎಂದಿನಂತೆ ಬೇಂದ್ರೆ ತುಂಬಾ ಚೆನ್ನಾಗಿ ಮಾತಾಡಿದರು. ಆಮೇಲೆ ಅವರಿಗೆ ಇದ್ದಕ್ಕಿದ್ದಂತೆ ಏನೆನ್ನಿಸಿತೋ, ಸಾಹಿತಿಗಳಿದ್ದ ಆ ಸಭೆಯಲ್ಲಿ ‘ಈಗ ಎಲ್ಲರೂ ಆಶುಕವಿತೆ ರಚಿಸೋಣ ಈಗಲೇ’ ಎಂದು ಹೇಳಿ ಪರಿಷತ್ತಿನಿಂದ ಪೆನ್ನು ಕಾಗದ ತರಿಸಿ ಅಲ್ಲಿದ್ದ ನೂರೈವತ್ತು ಜನಕ್ಕೆ ಹಂಚಿ ಹೂವಿನ ಮೇಲೆ ಕಾವ್ಯ ರಚಿಸಲು ಹೇಳಿದರು; ಅವರೂ ರಚಿಸಿದರು. ನಾನು ‘ರೋಜಾ-ಸರೋಜಾ’ ಅನ್ನೋ ಕವನ ಬರೆದೆ. ಎಲ್ಲರ ಕವನಗಳನ್ನು ನೋಡಿದ ಬೇಂದ್ರೆ ನನ್ನ ಪದ್ಯವನ್ನು ಓದಿಹೇಳಿ ಮೊದಲ ಬಹುಮಾನವಾಗಿ ಅಂಗೈ ಅಗಲದ 1947ರ ಪುಟ್ಟ ಡೈರಿ ಕೊಟ್ಟರು. ಅದು ನನ್ನ ಅಮೂಲ್ಯ ವಸ್ತುವಾಗಿ ನನ್ನಲ್ಲಿ ಇನ್ನೂ ಇದೆ. ಅದು ನನ್ನ ಬದುಕಿನ ಅರ್ಥಪೂರ್ಣ ಘಟನೆ…”
ಪುಸ್ತಕ: ಅನಾಥ ಚಿಹ್ನೆ
ಬರಹಗಾರರು: ಹೃದಯ ಶಿವ
ಬೆಲೆ: 180
ಪ್ರಕಾಶಕರು: ಹರಿವು ಬುಕ್ಸ್, ನಾಗಸಂದ್ರ ಸರ್ಕಲ್, ಬಸವನಗುಡಿ
ಕೊಳ್ಳಲು: www.harivubooks.com ಅಥವಾ 80888 22171






0 Comments