ಬನಶಂಕರ ಆರಾಧ್ಯ
। ಅವರ ಫೇಸ್ ಬುಕ್ ನಿಂದ ।
2000 ನೇ ಇಸವಿ ಜುಲೈ 30 ವರನಟ ಡಾ. ರಾಜ್ ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾದ ದಿನ.
ಅಂದು ಭೀಮನ ಅಮಾವಾಸ್ಯೆ ರಾತ್ರಿ ಚಾಮರಾಜನಗರದಿಂದ ಸುಮಾರು 25 ಕಿ.ಮೀ. ದೂರವಿರುವ ಗಾಜನೂರಿನ ಡಾ. ರಾಜ್ ಕುಮಾರ್ ಅವರ ಮನೆಯಿಂದ ವೀರಪ್ಪನ್ ರಾಜ್ ರನ್ನು ಕಿಡ್ ನ್ಯಾಪ್ ಮಾಡಿದ್ದ.
ಮಾರನೆಯದಿನ ಬೆಳಕು ಹರಿಯುವ ಮುನ್ನವೇ ‘ಆಂದೋಲನ’ ವರದಿಗಾರನಾಗಿದ್ದ ನಾನು ಮತ್ತು ಛಾಯಾಗ್ರಾಹಕ ಸಿ.ಆರ್. ವೆಂಕಟರಾಮು ಗಾಜನೂರಿನ ರಾಜ್ ಮನೆಯಲ್ಲಿದ್ದೆವು.
ಪಾರ್ವತಮ್ಮ ರಾಜ್ ಕುಮಾರ್ ಅವರು ಅಂದು ಮಧ್ಯರಾತ್ರಿ ಚಾಮರಾಜನಗರಕ್ಕೆ ಬಂದು ವಿಷಯ ತಿಳಿಸಿದ ಪ್ರಮುಖರಲ್ಲಿ ‘ಆಂದೋಲನ’ ಸಂಪಾದಕ ರಾಜಶೇಖರಕೋಟಿ ಸಹ ಒಬ್ಬರು. ಬೆಳಗಿನ ಜಾವ 4.30 ಗಂಟೆಗೆ ಲ್ಯಾಂಡ್ ಲೈನಿಗೆ (ಆಗಿನ್ನೂ ಮೊಬೈಲ್ ಫೋನ್ ಬಂದಿರಲಿಲ್ಲ) ಕರೆ ಮಾಡಿದ ಕೋಟಿಯವರು ರಾಜ್ ಕುಮಾರ್ ರನ್ನು ವೀರಪ್ಪನ್ ಕಿಡ್ ನ್ಯಾಪ್ ಮಾಡಿದ್ದಾನೆ. ನೀವು ಕೂಡಲೇ ಗಾಜನೂರಿಗೆ ಹೋಗಿ ಎಂದರು.
ಸುದ್ದಿ ಕೇಳಿ ದಂಗಾಗಿ ಹೋದೆ. ಟೂವೀಲರ್ ನಲ್ಲಿ ಗಾಜನೂರಿಗೆ ಹೋಗುತ್ತಿದ್ದರೆ ಮಬ್ಬು ಮಬ್ಬು. ತಾಳವಾಡಿ ತಲುಪಿದಾಗ ಬೆಳಗಾಗಿತ್ತು. ಆದರೆ ಅಲ್ಲಿನ ಜನರಿಗೂ ಅಪಹರಣದ ವಿಷಯ ತಿಳಿದಿರಲಿಲ್ಲ. ರಾಜ್ ಅಪಹರಣವಾದ ನಂತರ ಅವರ ಮನೆಗೆ ಮೊದಲು ಹೋದ ಸುದ್ದಿಗಾರರು ಮಾತ್ರವಲ್ಲ, ಹೊರಗಿನ ಜನರು ನಾವಿಬ್ಬರೇ. ರಾಜ್ ತೋಟದಲ್ಲಿ ಕಬ್ಬು ಕಟಾವು ಮಾಡಲು ಅಷ್ಟೊತ್ತಿಗೇ ಬಂದಿದ್ದ ಆಳುಗಳಿಗೂ ಕಿಡ್ ನ್ಯಾಪ್ ವಿಷಯ ತಿಳಿಯದೇ ಕುಶಾಲಿನಿಂದ ಮಾತಾಡಿಕೊಂಡು ಕುಳಿತಿದ್ದರು.

ನಾವು ಹೋದಾಗ ರಾಜ್ ಅಳಿಯ ಗೋಪಾಲ್ ಮ್ಲಾನವದನರಾಗಿ ಆತಂಕದಿಂದ ಕೂತಿದ್ದರು. ನಾವು ಹೋದ ತಕ್ಷಣ ವಿಷಯ ವಿವರಿಸಲು ಅವರಿಗಾಗುತ್ತಿಲ್ಲ. ರಾಜ್ ಮನೆಯವರಾರೂ ಮಾತಾಡುತ್ತಿಲ್ಲ. ಆಗ ಮನೆಯ ಹೊರಗಿದ್ದ ಸಹ ನಟರಾದ ವಡ್ಡ ನಾಗರಾಜ, ಶ್ರೀನಿವಾಸ್ ಹಿಂದಿನ ರಾತ್ರಿ ನಡೆದ ಘಟನೆಗಳನ್ನು ನಮಗೆ ವಿವರಿಸಿದರು.
ಬಳಿಕ ಗೋಪಾಲ್ ಸಾವರಿಸಿಕೊಂಡು ಘಟನೆಯನ್ನು ವಿವರಿಸಿದರು. ರಾಜ್ ಟಿವಿ ನೋಡುತ್ತಾ ಕುಳಿತಿದ್ದ ಜಾಗ, ಅಲ್ಲಿಗೆ ದಿಢೀರೆಂದು ನುಗ್ಗಿದ ವೀರಪ್ಪನ್ , ಬಂದೂಕು ತೋರಿಸಿ ಯಾರೂ ಮಾತಾಡಬೇಡಿ ಮಾತಾಡಿದ್ರೆ ಸುಟ್ಟು ಬಿಡ್ತೀನಿ ಎಂದ ಎಂಬಿತ್ಯಾದಿ ವಿವರ ನೀಡಿದರು. ಅವರ ಮನೆಯವರನ್ನೆಲ್ಲ ಮಾತಾಡಿಸಿಕೊಂಡು ನೂರಾರು ಫೋಟೋ ತೆಗೆದುಕೊಂಡು ನಾವಿಬ್ಬರು ಹೊರಡಲು ಅಣಿಯಾದೆವು. ಆಗ ಇದ್ದ ಕನ್ನಡದ ಏಕೈಕ ಚಾನೆಲ್ ‘ಉದಯ’ದಲ್ಲಿ ಬೆಳಿಗ್ಗೆ 7 ಗಂಟೆಗೆ ವರನಟ ಡಾ. ರಾಜ್, ವೀರಪ್ಪನ್ ನಿಂದ ಅಪಹರಣ ಎಂಬ ಸುದ್ದಿಸಾಲುಗಳು ಶುರುವಾದವು. ‘ಜನರಿಂದ ನಾನು ಮೇಲೆ ಬಂದೆ..’.ಎಂಬ ‘ಶಬ್ದವೇದಿ’ ಚಿತ್ರದ ಹಾಡನ್ನು ಪ್ರಸಾರ ಮಾಡಲಾಯಿತು.
ಆಗ ಜನರಿಗೆ ವಿಷಯ ತಿಳಿಯಿತು. ಕಬ್ಬು ಕಟಾವು ಮಾಡುತ್ತಿದ್ದ ಆಳುಗಳು ಕೆಲಸ ನಿಲ್ಲಿಸಿ ಓಡಿಬಂದರು. ಈಚೆ ಬಂದರೆ ತಾಳವಾಡಿ, ಗಾಜನೂರಿನ ಜನ ರಾಜ್ ರ ತೋಟದ ಹಳೆಯ ಮನೆಯತ್ತ ಬರತೊಡಗಿದ್ದರು. ನಾವು ಆಂದೋಲನದ ಬೆಳಗಿನ ವಿಶೇಷ ಸಂಚಿಕೆಗೆ ಸುದ್ದಿ ಕೊಡಲು ಚಾಮರಾಜನಗರದತ್ತ ದೌಡಾಯಿಸಿದೆವು. ಸುಮಾರು ಬೆಳಿಗ್ಗೆ 11-12 ಗಂಟೆಗೆಲ್ಲ ಡಾ. ರಾಜ್ ಕುಮಾರ್ ಅಪಹರಣದ ಸುದ್ದಿ ಹೊತ್ತ ಆಂದೋಲನ ಮುದ್ರಣವಾಯಿತು.
ಆನಂತರ ನಡೆದದ್ದು 108 ದಿನಗಳ ಅರಣ್ಯ ಕಾಂಡ.
ರಾಜ್ ರನ್ನು ತಲಮಲೈ, ಸತ್ಯಮಂಗಲ, ದಿಂಬಂ ಅರಣ್ಯದಲ್ಲಿ ವೀರಪ್ಪನ್ ಅಡಗಿಸಿಕೊಂಡು ಅವರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಅಲೆಸುತ್ತಿದ್ದ. ನಾವೊಂದಿಷ್ಟು ವರದಿಗಾರರು ಕಾಡಿನಲ್ಲಿ ಏನಾದರೂ ಸುದ್ದಿ ಸಿಗಬಹುದೆಂದು ದಿನಾ ಗಾಜನೂರಿಗೆ ಬಂದು ಅಲ್ಲಿಂದ ತಲಮಲೈ, ದಿಂಬಂ, ಗೇರುಮಾಳ, ಸತ್ಯಮಂಗಲ ಕಾಡು ಕಡೆಗೆ ಹೋಗುತ್ತಿದ್ದೆವು. ಎಲ್ಲರೂ ವಾಸುವಿನ ಒಂದು ಹಳೆಯ ಅಂಬಾಸಿಡರ್ ಕಾರಿನ ಬಾಡಿಗೆ ಶೇರ್ ಮಾಡಿಕೊಂಡು ಹೋಗುತ್ತಿದ್ದೆವು.
ನಾನು, ಆಗ ತಾನೇ ಲಾಂಚ್ ಆಗಲು ತಯಾರಿ ನಡೆಸುತ್ತಿದ್ದ ‘ಈಟೀವಿ’ ನ್ಯೂಸ್ ನ ಎಸ್.ಎಂ. ನಂದೀಶ್, ‘ರೇಷ್ಮೆ ನಾಡು’ ಎ ಡಿ’ಸಿಲ್ವ, ‘ಪ್ರಜಾ ನುಡಿ’ ಪ್ರಕಾಶ್ ಬೆಲ್ಲದ್, ‘ಕನ್ನಡಪ್ರಭ’ದ ಭಾವಸಾರ್, ಛಾಯಾಗ್ರಾಹಕರಾದ ವೆಂಕಟರಾಮು, ಬಿಳಿಗಿರಿ ಶ್ರೀನಿವಾಸ್ ರಾಜ್ ಕುಮಾರ್ ನಮಗೇ ಸಿಕ್ಕಿಬಿಡುತ್ತಾರೇನೋ ಎಂಬ ಹುಮ್ಮಸ್ಸಿನಲ್ಲಿ ಸುತ್ತುತ್ತಿದ್ದೆವು! ಕರ್ನಾಟಕ ತಮಿಳುನಾಡಿನ ಮಾತ್ರವಲ್ಲದೆ ರಾಷ್ಟ್ರೀಯ ವರದಿಗಾರರು ಗಾಜನೂರಿಗೆ ದಿನಾ ಬರುತ್ತಿದ್ದರು.
ಬಿಬಿಸಿ, ಸಿ ಎನ್ ಎನ್ ವರದಿಗಾರರು ಸಹ ಹೆಲಿಕಾಪ್ಟರ್ ನಲ್ಲಿ ಬಂದು ರಾಜ್ ಕುಮಾರ್ ಮನೆಯ ಬಳಿ ಚಿತ್ರೀಕರಣ ಮಾಡಿದರು. ನಾವು ಅದನ್ನೂ ಸುದ್ದಿ ಮಾಡಿದೆವು!

ಈ 108 ದಿನಗಳಲ್ಲಿ ಕೆಲವು ಪತ್ರಿಕೆಗಳಲ್ಲಿ ಸತ್ಯ, ವದಂತಿ, ಸುಳ್ಳು ಎಲ್ಲವೂ ವರದಿಯಾದವು! ಕಾಡಿನ ಮಧ್ಯದಲ್ಲಿ ಹೊಗೆ ಕಂಡರೆ, ಅಲ್ಲಿ ವೀರಪ್ಪನ್ ಬಿಡಾರ ಹೂಡಿ ಅಡಿಗೆ ಮಾಡಿದ್ದಾನೆ ಅಂತ ಬರೆಯುತ್ತಿದ್ದರು! ತಲಮಲೈ ಕಾಡಿನ ಮಧ್ಯೆ ಇರುವ ರಾಮರ ಪಾದ ದೇವರ ಗುಡಿಯ ಬಳಿ, ಭಕ್ತಾದಿಗಳು, ಪರ ಮಾಡಲು ಮೂರು ಕಲ್ಲು ಹಾಕಿ ಒಲೆ ಮಾಡಿ ಅನ್ನ ಬೇಯಿಸಿದ್ದರೆ, ಅದರ ಫೋಟೋ ಹಾಕಿ, ವೀರಪ್ಪನ್ ಅಡುಗೆ ಮಾಡಿರುವ ಜಾಗ ಎಂದು ಬರೆಯುತ್ತಿದ್ದರು!
ಕಾಡಿನಲ್ಲಿ ಸಿಕ್ಕಿದ ದನಮೇಯಿಸುವ ಹುಡುಗನೊಬ್ಬ, ಬಿಳಿ ಪಂಚೆ ಶರಟು ಹಾಕಿದವರನ್ನು ಬಂದೂಕು ಹಿಡಿದು ಕೆಲವರು ಕರೆದೊಯ್ಯುತಿದ್ದುದನ್ನು ಕಂಡೆ ಎಂದ… ಎಂದು ಸತ್ಯದ ತಲೆ ಮೇಲೆ ಹೊಡೆದ ಹಾಗೆ ಬರೆಯುತ್ತಿದ್ದರು! ಅದನ್ನೇ ನಾಳೆಗೆ ಇನ್ನೊಂದು ಪತ್ರಿಕೆಯವರು ಕಾಪಿ ಮಾಡುತ್ತಿದ್ದರು!
ಈ ಮಧ್ಯ ರಾಜ್ ಜೊತೆಯಲ್ಲಿದ್ದ ನಾಗಪ್ಪಮಾರಡಗಿ ಕಾಡಿನಿಂದ ತಪ್ಪಿಸಿಕೊಂಡು ಚಾಮರಾಜನಗರದ ಎಸ್ಪಿ ಮನೆಗೆ ಬಂದು, ಅಲ್ಲಿ ಆತನಿಂದ ಮಾಹಿತಿ ಪಡೆಯಲು ರಾತ್ರಿಯೆಲ್ಲಾ ಕಾದದ್ದು, ಇತ್ತ ನಾಡಿನಲ್ಲಿ ನಡೆಯುತ್ತಿದ್ದ ಗಲಾಟೆಗಳು, ವದಂತಿಗಳು, ಅಭಿಮಾನಿಗಳ ಆಕ್ರೋಶ, ಯಾವ ಸುದ್ದಿ ಮಿಸ್ಸಾಗಿ ಎಡಿಟರ್ ನಮ್ಮನ್ನು ಬೈಯುತ್ತಾರೋ ಎಂಬ ಆತಂಕ. ವೀರಪ್ಪನ್ ಸುದ್ದಿ ಎಂದರೆ ಆಂದೋಲನ ಎಂಬ ಕಾಲ ಅದು.
ನನ್ನಿಂದ ಯಾವ ಸುದ್ದಿಯಾದರೂ ಮಿಸ್ ಆಗಲಿ ಬಿಟ್ಟರೆ ಎಂದು ರಾತ್ರಿ 1 ಗಂಟೆಯಾದರೂ ಕಾದು ಪತ್ರಿಕೆ ಮುದ್ರಣಕ್ಕೆ ಹೋದ ಬಳಿಕ ಮಲಗುತ್ತಿದ್ದೆ. ಲ್ಯಾಂಡ್ ಲೈನ್ ಫೋನು ಹಿಡಿದು ಸತ್ಯಮಂಗಲ ಪೊಲೀಸರಿಗೆ, ತಮಿಳು ಪತ್ರಿಕೆಗಳ ವರದಿಗಾರರಿಗೆ ಕರೆ ಮಾಡುತ್ತಿದ್ದೆ…
ಹೀಗೆ ಅಣ್ಣಾವ್ರು ಕಾಡಿನಲ್ಲಿದ್ದಾಗ ನಾವು, ಅವರು ಆದಷ್ಟು ಬೇಗ ಬಿಡುಗಡೆಯಾದರೆ ಸಾಕೆನ್ನುವಷ್ಟು ಮಟ್ಟಿಗೆ ಬೆಂಡಾಗಿ ಹೋದೆವು. . . ಅಂದಿನ ಅನುಭವಗಳನ್ನು ನೆನೆಸಿಕೊಂಡರೆ ಈಗಲೂ ಮೈ ಜುಂ ಎನ್ನುತ್ತದೆ.
ಆ ಸಂದರ್ಭದಲ್ಲಿ ನಾವು ಅಡ್ಡಾಡಿದ ಕ್ಷಣಗಳ ಕೆಲವು ಫೋಟೋಗಳು. ಮೊದಲ ಫೋಟೋ, ರಾಜ್ ಬಿಡುಗಡೆಯಾದ ಕೆಲ ದಿನಗಳ ನಂತರ ಪಾರ್ವತಮ್ಮ ರಾಜ್‍ಕುಮಾರ್ ಅವರು ಮೊದಲ ಬಾರಿಗೆ ಗಾಜನೂರಿಗೆ ಬಂದಾಗ ನಾವು ಸಂದರ್ಶಿಸಿದ್ದು. ಈಟೀವಿ ನಂದೀಶ್ ಮತ್ತು ನಾನು. ಚಿತ್ರದಲ್ಲಿರುವ ಈ ಹಳೆಯ ಮನೆಯಲ್ಲಿ ರಾಜ್ ಕುಮಾರ್ ಅಪಹೃತರಾದರು. ಇದು ಅವರು ಜನಿಸಿದ ಮನೆಯಲ್ಲ. ಅವರು ಸಿನಿಮಾ ಸೇರಿದ ನಂತರ ಕಟ್ಟಿಸಿದ ಅವರ ನೆಚ್ಚಿನ ಸಾಧಾರಣ ಮನೆ. ರಾಜ್ ಬಿಡುಗಡೆಯಾಗಿ ಬಂದ ಕೆಲವು ತಿಂಗಳ ನಂತರ ಇದನ್ನು ನೆಲಸಮ ಮಾಡಲಾಯಿತು.
ಇಲ್ಲಿನ ಫೋಟೊಗಳನ್ನು ರೀಲ್ ಕ್ಯಾಮರಾ ದಲ್ಲಿ ತೆಗೆದಿದ್ದು ಬಿಳಿಗಿರಿ ಶ್ರೀನಿವಾಸ್.








ಇನ್ನೊಂದಿಷ್ಟು ಬರೆಯಬಹುದಾಗಿತ್ತು.
ಅಂತೂ ಬಿಡುಗಡೆಯಾಗಿ ಬಂದರಲ್ಲ