ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಘೋಷಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ೯೦ ವರ್ಷಗಳ ಸಾರ್ಥಕ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದೆ. ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಆಗಿದ್ದ ಡಿ.ವಿ ಗುಂಡಪ್ಪ(ಡಿವಿಜಿ) ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಪತ್ರಕರ್ತರ ಹಿತಕಾಯುವಲ್ಲಿ ಮುನ್ನಡೆದಿದೆ. ಜೊತೆಗೆ ಪತ್ರಕರ್ತರ ಬೌದ್ಧಿಕ ಉನ್ನತೀಕರಣಕ್ಕಾಗಿ ಸಂದರ್ಭಾನುಸಾರವಾಗಿ ಅನೇಕ ಚಟುವಟಿಕೆಗಳನ್ನು ರಾಜ್ಯದಾದ್ಯಂತ ನಡೆಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗುಣಾತ್ಮಕ ಕೊಡುಗೆಯನ್ನು ನೀಡುತ್ತಿದೆ.

ರಾಜ್ಯದ ಕಾರ್ಯನಿರತ ಪತ್ರಕರ್ತರ ಪ್ರಾತಿನಿಧಿಕ ಸಂಘಟನಾ ಸಂಸ್ಥೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತನ್ನ ಸಮುದಾಯಕ್ಕೆ ನ್ಯಾಯವೊದಗಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ವೃತ್ತಿಪರವಾಗಿ ಇನ್ನಷ್ಟು ಪ್ರೋತ್ಸಾಹಿಸುವ ಕೆಲಸ ಸಂಘದ ಅತ್ಯಂತ ಮಹತ್ವದ ಚಟುವಟಿಕೆಗಳಲ್ಲಿ ಒಂದು ಎಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ತಮ್ಮ ವರದಿಗಾರಿಕೆಗಳಿಗೆ ವಿವಿಧ ಪ್ರಶಸ್ತಿಗಳು, ದತ್ತಿ ನಿಧಿ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಸಂದರ್ಭಾನುಸಾರವಾಗಿ ಸಂಘವು ತನ್ನ ಸದಸ್ಯ ಕಾರ್ಯನಿರತ ಪತ್ರಕರ್ತರಿಗೆ ನೀಡುತ್ತಾ ಪ್ರೋತ್ಸಾಹಿಸುತ್ತಿದೆ.

ಅನೇಕ ಹಿರಿಯರು, ಸುದ್ದಿಮಾಧ್ಯಮಗಳ ಬಗ್ಗೆ ಗೌರವ ಉಳ್ಳವರು ಪತ್ರಕರ್ತರನ್ನು ಉತ್ತೇಜಿಸಲು ಮತ್ತು ಗೌರವಿಸುವ ನಿಟ್ಟಿನಲ್ಲಿ ಸಂಘದಲ್ಲಿ ಹಿರಿಯ ಸಾಧಕ ಪತ್ರಕರ್ತರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ರಾಜ್ಯ ಸಂಘವು ಆಹ್ವಾನಿತ ಉತ್ತಮ ವರದಿಗಳಿಗೆ ಪ್ರಶಸ್ತಿ ನೀಡುವುದಲ್ಲದೆ , ದತ್ತಿನಿಧಿ ಪ್ರಶಸ್ತಿಗಳ ಮೂಲಕ ಹಿರಿಯ, ಪ್ರತಿಭಾವಂತ ಪತ್ರಕರ್ತರನ್ನು ಉತ್ತೇಜಿಸುವ , ಗೌರವಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ.

ಇದುವರೆಗೂ ಈ ಎಲ್ಲ ಪ್ರಶಸ್ತಿಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಸಮ್ಮೇಳನಗಳಲ್ಲಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳನ್ನು ಇನ್ನಷು ಘನತೆಯಿಂದ ವಿತರಿಸಬೇಕೆಂಬ ಉದ್ದೇಶದಿಂದ ಪ್ರತ್ಯೇಕವಾಗಿ ನಡೆಸಲು ತೀರ್ಮಾನಿಸಿದ ಪರಿಣಾಮ ಮೊದಲ ಬಾರಿಗೆ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಮಲೆನಾಡಿನ ಹೆಬ್ಬಾಗಿಲು, ಪತ್ರಿಕೋದ್ಯಮಕ್ಕೆ ತನ್ನದೇ ಆದ ಪ್ರತಿಭೆಗಳನ್ನು ಕೊಡಮಾಡಿರುವ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗೆಯಲ್ಲಿ ಪ್ರದಾನ ಮಾಡಲಾಗುತ್ತಿದೆ.

ಈ ಸಮಾರಂಭದ ನಿರ್ವಹಣೆ ಮತ್ತು ಆತಿಥ್ಯವನ್ನು ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ವಹಿಸಿಕೊಂಡಿದೆ.

ಅ. 03 ರ ಭಾನುವಾರ ಸಂಜೆ 5.೦೦ಕ್ಕೆ ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನ ಆವರಣದಲ್ಲಿ ಆಯೋಜನೆಗೊಂಡಿರುವ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಸಂಘವು ಗುರುತಿಸಿರುವ ಪತ್ರಕರ್ತರಿಗೆ ನೀಡಲಾಗುತ್ತಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ನೆರವೇರಿಸಲಿದ್ದಾರೆ. ಕರೋನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರಿಗೆ ಆಸರೆಯಾಗಿ ನಿಂತ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ.

ಇದೇ ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ‘ಸಿಹಿಮೊಗೆ ಮಾಧ್ಯಮ’ ಹೆಸರಿನ ವಿಶೇಷ ಸ್ಮರಣ ಸಂಚಿಕೆಯನ್ನು ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ಅವರು ಬಿಡುಗಡೆ ಮಾಡಲಿದ್ದಾರೆ.

ಶಿವಮೊಗ್ಗೆಯ ಪತ್ರಿಕಾ ಛಾಯಾಗ್ರಾಹಕರ ಸಹಭಾಗಿತ್ವದಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ವಿಧಾನಪರಿಷತ್ ಸದಸ್ಯರಾದ ಶ್ರೀ ಎಸ್ ರುದ್ರೇಗೌಡ ಅವರು ಉದ್ಘಾಟಿಸಲಿದ್ದಾರೆ.

ಪ್ರಶಸ್ತಿಗಳನ್ನು ಜಿಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಆರಗಜ್ಞಾನೇಂದ್ರ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡಲಿದ್ದು,

ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರೂ ಆದ ಕೆ. ವಿ. ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಕೆ.ಬಿ. ಅಶೋಕ ನಾಯ್ಕ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್. ಅರುಣ್, ಮಹಾಪೌರರಾದ ಸುನೀತಾಅಣ್ಣಪ್ಪ, ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದಅಧ್ಯಕ್ಷ ಸಿ.ಎಸ್. ಷಡಾಕ್ಷರಿ , ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್‌ಎಸ್. ಯಡಗೆರೆ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಬಿ. ವಿ. ಮಲ್ಲಿಕಾರ್ಜುನಯ್ಯ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಏಷ್ಯಾ ವಿಭಾಗದ ಸಂಚಾಲಕ ಹೆಚ್. ಬಿ. ಮದನಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್‌ ಟೆಲೆಕ್ಸ್ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ಥಾನಿ ಗಾಯಕ ಉಸ್ತಾದ್ ಹುಮಾಯೂನ್ ಹರ್ಲಾಪುರ ಮತ್ತು ಸಂಗಡಿಗರಿಂದ ವಚನಗಾಯನ ನಡೆಯಲಿದೆ.

ಆಹ್ವಾನಿತ ಗಣ್ಯರು, ಪತ್ರಕರ್ತರು ಕೋವಿಡ್ ನಿಯಮಗಳನ್ನು ಅನುಸರಿಸಿ ಪಾಲ್ಗೊಳ್ಳಬೇಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ಕೋರಿದ್ದಾರೆ.

‍ಲೇಖಕರು Admin

26 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading