ಕೆ. ಪುಟ್ಟಸ್ವಾಮಿ
ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ದೀಪಾವಳಿಯ ಹಬ್ಬಕ್ಕೆ ಹಿಂದೀ ಭಾಷೆಯಲ್ಲಿ ಶುಭ ಕೋರಿ ಶುಭಾಶಯ ಪತ್ರಗಳನ್ನು ನಾಡಿನ ಗಣ್ಯರಿಗೆ ಕಳಿಸಿದ್ದಾರೆ.
ಈ ಶುಭಾಶಯಗಳು ರಾಜ್ಯದ ಮುಖ್ಯಮಂತ್ರಿಗಳಿಗೂ, ಶಿಕ್ಷಣ ಮಂತ್ರಿಗಳಿಗೂ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕ.ಸಾ.ಪ , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಅಪ್ರಾ ಅಧ್ಯಕ್ಷರಿಗೂ ತಲುಪಿರಬಹುದು. ಇದು ಹುಡುಕಿದರೆ ಒಂದು ಕನ್ನಡ ಮತ್ತು ಇಂಗ್ಲಿಷ್ ಪದವೂ ಸಿಗದ ಅಪ್ಪಟ ಹಿಂದೀ ಶುಭಾಶಯ ಪತ್ರ.
ರಾಜ್ಯದ ಬೊಕ್ಕಸದಿಂದ ಪಾವತಿಸಿ ರೂಪಿಸಿದ ಶುಭಾಶಯ ಪತ್ರ. ರಾಜ್ಯಪಾಲರು, ಸಂವಿಧಾನ ಕಲ್ಪಿಸಿರುವ ಅವಕಾಶಗಳನ್ನು ಬಳಸಿ ನೇಮಕವಾಗುತ್ತಾರೆ. ರಾಷ್ಟ್ರಪತಿಯವರು ಹೇಗೆ ಭಾರತ ಗಣರಾಜ್ಯದ ಮುಖ್ಯಸ್ಥರೊ ಹಾಗೆ ರಾಜ್ಯಕ್ಕೆ ರಾಜ್ಯಪಾಲರು. ಹೆಸರಿಗೆ ಇಬ್ಬರೂ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮುಖ್ಯಸ್ಥರಾದರೂ, ಅವರ ಹೆಸರಲ್ಲೇ ಆಡಳಿತ ನಡೆದರೂ, ನೀತಿ ನಿರೂಪಣೆ, ಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಕಾರ್ಯಕಾರಿ ಅಧಿಕಾರ (executive powers) ಇರುವುದು ಸಚಿವ ಸಂಪುಟಕ್ಕೆ ಮತ್ತು ಅದರ ಮುಖ್ಯಸ್ಥ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗೆ ಮಾತ್ರ.
ಸಚಿವ ಸಂಪುಟ ಅಂಗೀಕರಿಸಿ ಅದರ ಶಿಫಾರಸ್ಸಿನಂತೆ ಜಾರಿಯಾಗಿರುವ ಆಡಳಿತ ಭಾಷೆಯೊಂದನ್ನು ರಾಜ್ಯಪಾಲರು ಈ ರೀತಿ ಕಡೆಗಣಿಸಬಹುದೇ? ರಾಜ್ಯಪಾಲರು ಸಂವಿಧಾನದ ಪ್ರಕಾರವೇ ರಾಜ್ಯಾಡಳಿತ ವ್ಯವಸ್ಥೆಯನ್ನು ನಡೆಸಬೇಕು. ರಾಜ್ಯವು ಆಡಳಿತ ಭಾಷೆಯಾಗಿ ಕನ್ನಡ ನುಡಿಯನ್ನು ಅಂಗೀಕರಿಸಿರುವ ಕಾರಣ ಎಲ್ಲ ಸರ್ಕಾರದ ಕಚೇರಿಗಳೂ ಕನ್ನಡವನ್ನು ಬಳಸಬೇಕು.
ಮುಂದಿನ ಪರಿಣಾಮಗಳ ಅರಿವಿಲ್ಲದೆ ಒಂದಾನೊಂದು ಕಾಲದಲ್ಲಿ ನಮ್ಮ ರಾಜ್ಯವು ಅಂಗೀಕರಿಸಿದ ತ್ರಿಭಾಷಾ ನೀತಿಯ ಪ್ರಕಾರವೇ ಕೇಂದ್ರದ ಉದ್ಯಮಗಳು, ಕೇಂದ್ರದ ಕಚೇರಿಗಳು ಕನ್ನಡದಲ್ಲಿಯೂ ಮಾಹಿತಿ ನೀಡುವುದು, ಫಲಕ ಹಾಕುವುದು, ಕಡ್ಡಾಯ. ಕನ್ನಡದಲ್ಲಿ ಪತ್ರ ಬರೆದರೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಮಹಾಲೇಖಪಾಲರ ಕಚೇರಿಗಳು, ಅಂಚೆ ಕಚೇರಿಗಳು, ಎಲ್ ಐ ಸಿ., ಇತ್ಯಾದಿ ಅವುಗಳನ್ನು ಅಂಗೀಕರಿಸಿ ಕ್ರಮವಹಿಸುತ್ತವೆ.
ರೈಲ್ವೆ ಇಲಾಖೆ ಈ ಹಿಂದೆ ನೀಡುತ್ತಿದ್ದ ಟಿಕೆಟ್‍ಗಳಲ್ಲಿ ಪ್ರಯಾಣದ ಸ್ಥಳಗಳನ್ನೂ ಕನ್ನಡದಲ್ಲಿಯೂ ಮುದ್ರಿಸುತ್ತಿತ್ತು. ಅಂಥದರಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರ ಕಚೇರಿಯು ಕನ್ನಡವನ್ನು ಈ ರೀತಿ ಕಡೆಗಣಿಸುವುದೆಂದರೆ ಒಂದೋ ಕನ್ನಡಿಗರ ಮೇಲೇ ಭಾಷೆಯ ಹೇರಿಕೆ ಸುಲಭವೆಂದು ಭಾವಿಸಿರಬೇಕು. ಯಾಕೆಂದರೆ ಇದರ ವಿರುದ್ಧ ದನಿ ಎತ್ತುವವರನ್ನು ರೋಲ್ ಕಾಲ್ ಗಿರಾಕಿಗಳು ಎಂದು ಕನ್ನಡಿಗರೇ ಕನ್ನಡಿಗರನ್ನು ಬಾಯಿ ಮುಚ್ಚಿಸಬಲ್ಲರು ಅಥವಾ ರಾಷ್ಟ್ರೀಯತೆಯ ರೋಗ ಹಿಡಿಸಿಕೊಂಡ ಕನ್ನಡಿಗರು ಇದನ್ನು ವಿರೊಧಿಸಲಾರರೆಂಬುದನ್ನು ಅವರು ಬಲ್ಲರು.
ತಮಿಳುನಾಡಿನಲ್ಲಿ ಇಂಥ ಪ್ರಯೋಗವನ್ನು ಅಪ್ಪಿತಪ್ಪಿಯೂ ಮಾಡುವುದಿಲ್ಲ. ಮಾಡಲು ಸಾಧ್ಯವೂ ಇಲ್ಲ. ಅಥವಾ ನಾವು ಏನು ಬೇಕಾದರು ಮಾಡಿ ದಕ್ಕಿಸಿಕೊಳ್ಳಬಲ್ಲವೆಂಬ ಉತ್ತರದವರ ದಾರ್ಷ್ಟ್ಯವು ಇದರ ಹಿಂದೆ ಕೆಲಸ ಮಾಡಿರಬಹುದು. ಹಿಂದೀ ಮತ್ತು ಗುಜರಾತಿ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ ರಾಜ್ಯಪಾಲನೊಬ್ಬ ತನಗೆ ಗೊತ್ತಿರುವ ಭಾಷೆಗಳು ಸಮಸ್ತ ಕರ್ನಾಟಕದ ಜನತೆಗೆ ಗೊತ್ತಿರಲೇಬೇಕೆಂದು ತೋರಿಸುವ ದಾರ್ಷ್ಟ್ಯದಂತೆ ಇದು ಕಾಣುತ್ತದೆ.
ಇದು ಕೇವಲ ಭಾಷೆಯ ಪ್ರಶ್ನೆಯಷ್ಟೇ ಅಲ್ಲ. ಸಂಸ್ಕೃತಿಯ ಪ್ರಶ್ನೆಯೂ ಹೌದು. ಈ ಶುಭಾಶಯ ಪತ್ರದಲ್ಲಿ “ಶುಭ ದೀಪಾವಳಿ ಮತ್ತು ನೂತನ ವರ್ಷದ ಶುಭ ಕಾಮನೆಗಳು” ಎಂದು ಹಾರೈಸಿದ್ದಾರೆ. ಉತ್ತರದ ಕೆಲವೆಡೆ ದೀಪಾವಳಿ ಹೊಸ ವರ್ಷದ ಆರಂಭವಾಗಿರಬಹುದು. ಆದರೆ ನಮಗೆ ಉಗಾದಿಯೇ ಹೊಸ ವರ್ಷದ ಆರಂಭ. ಇದೂ ಸಹ ಒಂದು ಬಗೆಯ ಹೇರಿಕೆಯೇ.
ಇರಲಿ, ಮೂಲ ಪ್ರಶ್ನೆಯೆಂದರೆ ರಾಜ್ಯಪಾಲರ ಕಚೇರಿಯು ರಾಜ್ಯದ ಭಾಷೆಯನ್ನು ಕಡೆಗಣಿಸುವಷ್ಟು, ಅದರ ಇರುವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದಷ್ಟು ಅಹಂ ಪ್ರದರ್ಶಿಸಬಹುದೇ? ಕನ್ನಡ ಭಾಷೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲೆಂದೇ ಸ್ಥಾಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಡೆಯನ್ನು ಹೇಗೆ ಎದುರಿಸುತ್ತದೆ? ಅ ಬಗ್ಗೆ ಕುತೂಹಲವಿದೆ.
0 Comments