‘ಸಮುದಾಯ, ಬೆಂಗಳೂರು’ ಎರಡು ದಿನಗಳ ಗಿರೀಶ್ ಕಾರ್ನಾಡ್ ರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ತುಘಲಕ್ -100 ರ ಸಂಭ್ರಮ ನಾಟಕೋತ್ಸವವಿದೆ.
ಈ ಸಂದರ್ಭದಲ್ಲಿ ಕನ್ನಡದ ಬಹು ಮುಖ್ಯ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು ತುಘಲಕ್ ನಾಟಕವನ್ನು ನೋಡಿದ ಬಗೆ ಇಲ್ಲಿದೆ-

• ರಾಜೇಂದ್ರ ಚೆನ್ನಿ
—
ಶ್ರೇಷ್ಠ ನಾಟಕವೊಂದರ ಪ್ರದರ್ಶನ ಪರಂಪರೆಯು ಕ್ರಮೇಣವಾಗಿ ಆ ನಾಟಕದ ಭಾಗವಾಗುವುದು ಅಂದರೆ ಅದನ್ನು ನಾವು ವ್ಯಾಖ್ಯಾನಿಸುವ ಪರಿಯ ಭಾಗವಾಗುವುದು ಸಹಜವಾಗಿದೆ. ಏಕೆಂದರೆ ನಾಟಕದ ಲಿಖಿತ ಪಠ್ಯವಿದ್ದರೂ ಕೂಡ ಪ್ರತಿಯೊಂದು ಪ್ರದರ್ಶನವೂ ಒಂದು ಹೊಸ ವ್ಯಾಖ್ಯಾನವೇ ಆಗಿರುತ್ತದೆ. ಇದನ್ನು ಪಾರಂಪರಿಕ ಪ್ರದರ್ಶನ ಕಲೆಗಳ ಬಗ್ಗೆ ಒಪ್ಪುವಷ್ಟು ಸುಲಭವಾಗಿ ಲಿಖಿತ ಸಂಪ್ರದಾಯದ ನಾಟಕಗಳ ಬಗ್ಗೆ ವಿಮರ್ಶಕರು ಒಪ್ಪುವುದಿಲ್ಲ. ಏಕೆಂದರೆ ನಾಟಕದ ಪಠ್ಯದ ಜೊತೆಗೆ ಅಷ್ಟು ಸ್ವಾತಂತ್ರ್ಯ ತೆಗೆದುಕೊಳ್ಳುವುದು ಸಾಧ್ಯವಿಲ್ಲವೆನ್ನುವ ನಂಬಿಕೆ ಇದೆ. ವಾಸ್ತವವೆಂದರೆ ನಾಟಕದ ಪಠ್ಯದ ಮೈಗೆಡದೆಯೆ ಅದರ ಹೊಸ ಅರ್ಥಗಳನ್ನು ಸೃಷ್ಟಿಸಬಹುದಾಗಿದೆ. ಇದು ಗಿರೀಶ್ ಕಾರ್ನಾಡರ ‘ತುಘಲಕ್’ ನಾಟಕದ ಬಗ್ಗೆ ಅಂತೂ ಅಪ್ಪಟ ನಿಜವಾಗಿದೆ. ಈಗಾಗಲೇ ಅದು ತನ್ನ ಪ್ರದರ್ಶನಗಳ ಒಂದು biography ಯನ್ನೇ ಸೃಷ್ಟಿಸಿಕೊಂಡಿದೆ. ಅಲ್ಕಾಜಿ ‘ತುಘಲಕ್’, ಮನೋಹರ್ ಸಿಂಗ್ ‘ತುಘಲಕ್’, ಬಿ.ವಿ. ಕಾರಂತ ‘ತುಘಲಕ್’ ಹೀಗೆ ಇರುವ ಪರಂಪರೆಯಿಂದಾಗಿ ಇಂದು ‘ತುಘಲಕ್’ ಎನ್ನುವ ಒಂದು ನಾಟಕವಿಲ್ಲ. ಅನೇಕ ನಾಟಕಗಳಿವೆ. ಇದಕ್ಕೆ ಕಾರಣವೆಂದರೆ ಮೂಲಕೃತಿಯೆಂದು ಕರೆಯುವ ನಾಟಕದ ಪಠ್ಯವೇ ಒಂದು ನಾಟಕವಲ್ಲ, ಅನೇಕ ನಾಟಕಗಳ ಸಂಕಲನವಾಗಿದೆ. ಈ ಕಾರಣದಿಂದಾಗಿ ಅದನ್ನು ಐತಿಹಾಸಿಕ ನಾಟಕವೆಂದು ಓದುವುದು, ರಾಜಕೀಯ ನಾಟಕವೆಂದು ಓದುವುದು ಸಾಧ್ಯವಿದೆ, ಆದರೆ ಹಾಗೆ ಓದುವಾಗಲೇ ನಮ್ಮ ಓದು ಅಸಮಗ್ರವೆಂದು ನಮಗೆ ಅನ್ನಿಸುತ್ತದೆ. ಈಗ ಸಮುದಾಯ ಬಳಗದಿಂದ ನೂರನೇ ಪ್ರದರ್ಶನವನ್ನು ಕಾಣುತ್ತಿರುವ ಈ ನಾಟಕದಲ್ಲಿ ಅನೇಕ ನಾಟಕಗಳು ಸೇರಿಕೊಂಡಿವೆ. ಹೀಗಾಗಿ ನಾನು ಅವುಗಳಲ್ಲಿ ಒಂದು ನಾಟಕವನ್ನು ರಚಿಸಿಕೊಂಡು ಓದುತ್ತಿದ್ದೇನೆ. ಈ ನಾಟಕವು the limits of secular politics ಬಗೆಗಿನ ನಾಟಕವಾಗಿ ಓದುತ್ತಿದ್ದೇನೆ.
ಈ ಓದಿನಲ್ಲಿ ಮಹಮದ್ನ ಹಾಗೂ ನಾಟಕದ ಸಮಸ್ಯೆಯೆಂದರೆ ಸೆಕ್ಯೂಲರ್ ರಾಜಕೀಯದ ಬಿಕ್ಕಟ್ಟಾಗಿದೆ. ನಾಟಕದ ಮೊದಲ ಗುಂಪು ದೃಶ್ಯದಲ್ಲಿಯೇ ಇದು ಖಚಿತವಾಗಿ ಪ್ರಸ್ತಾಪವಾಗುತ್ತದೆ. ಇದು ಹಿಂದುಗಳು ಮುಸ್ಲಿಮ್ರು ಇಬ್ಬರೂ ಪ್ರಜೆಗಳಾಗಿರುವ, ಮುಸ್ಲಿಮ್ನು ದೊರೆಯಾಗಿರುವ ಸಾಮ್ರಾಜ್ಯದ ಬಿಕ್ಕಟ್ಟಾಗಿದೆ. ಎರಡೂ ಧರ್ಮಗಳ ಜನರಿಗೆ ಅವನು ವಿಕ್ಷಿಪ್ತವಾಗಿ ಕಾಣುತ್ತಾನೆ. ಏಕೆಂದರೆ ಅವನು ಅವರ ಸಾಮಾನ್ಯ ಗೃಹಿಕೆಗೆ ನಿಲುಕುವುದಿಲ್ಲ. ಅವನು ಒಂದು ಕಡೆಗೆ ಕಟ್ಟರ್ ಮುಸ್ಲಿಮ್ನಂತೆ ವರ್ತಿಸುತ್ತಾನೆ. ಇನ್ನೊಂದು ಕಡೆಗೆ ಒಬ್ಬ ಆಧುನಿಕ (ಅವನು ಮಧ್ಯಯುಗದ ದೊರೆಯಾಗಿದ್ದರೂ ಕೂಡ) ರಾಜಕಾರಣಿಯಂತೆ ಏಕಕಾಲಕ್ಕೆ ಧರ್ಮವನ್ನು ಮತ್ತು ಸೆಕ್ಯೂಲರ್ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾನೆ. ಹೀಗಾಗಿ ಜಝಿಯಾ ತೆರಿಗೆಯನ್ನು ಹಿಂದೂಗಳು ಕೊಡಬೇಕಿಲ್ಲವೆಂದು ಆಜ್ಞೆ ಮಾಡಿದ್ದಾನೆ. ಮುಸ್ಲಿಮ್ ಪ್ರಜೆಗಳಿಗೆ ದಿನಕ್ಕೆ ಐದು ಬಾರಿ ನಮಾಜು ಮಾಡುವುದು ಕಡ್ಡಾಯವಾಗಿದೆ. ತನ್ನನ್ನೂ ವಿಚಾರಣೆಗೆ, ಶಿಕ್ಷೆಗೆ ಸಾರ್ವಜನಿಕವಾಗಿ ಒಪ್ಪಿಸಿಕೊಳ್ಳುತ್ತಾನೆ. ಈ ದೃಶ್ಯದಲ್ಲಿ ಒಬ್ಬ ಹಿಂದೂ ವ್ಯಕ್ತಿ ಹೇಳುವಂತೆ ಅವರಿಗೆ ಹಿಂದೂ ಎನ್ನುವ ಕಾರಣಕ್ಕೆ ದ್ವೇಷ ತೋರಿಸಿದರೆ ಸಹಜವಾಗಿ ಕಾಣುತ್ತದೆ. ಸಮಾನತೆಯು ಗೊಂದಲಗೊಳಿಸುತ್ತದೆ. ಸಾಮಾನ್ಯ ಮುಸ್ಲಿಮ್ ಪ್ರಜೆಗಳಿಗೆ ಅವನು ಒಬ್ಬ ಅವಿಶ್ವಾಸಿಯಾಗಿ (ಕಾಫರ್ನಾಗಿ) ಕಾಣುತ್ತಾನೆ. ಈ ಭಾವನೆಯನ್ನು ಉಪಯೋಗಿಸಿಕೊಂಡು ಶೇಖ್ ಇಮಾಮ್ ಉದ್ದೀನ್ ಜನರನ್ನು ಮಹಮದ್ನ ವಿರುದ್ಧ ಎತ್ತಿಕಟ್ಟುತ್ತಾನೆ. ಮುಂದೆ ಮಹಮದ್ ಹೇಳುವಂತೆ ಅವನಿಗೆ ಧರ್ಮ ಹಾಗೂ ರಾಜಕೀಯವನ್ನು ಮಿಶ್ರಣ ಮಾಡುವ ಧರ್ಮ ಗುರುಗಳು ಶತ್ರುಗಳ ಹಾಗೆ ಕಾಣುತ್ತಾರೆ. ಫಿತೂರಿಗಾರರಾಗಿ ಕಾಣುತ್ತಾರೆ. ಅವನು ಶೇಖ್ನನ್ನು ಕೊಲ್ಲಿಸುವುದು ಅವನಿಗೆ ಅನಿವಾರ್ಯವಾಗಿ ಕಾಣುತ್ತದೆ.

ಇದು ಒಂದು ಉದಾಹರಣೆಯಷ್ಟೇ. ಇಡೀ ನಾಟಕದಲ್ಲಿ ಸೈದ್ಧಾಂತಿಕ ಸೆಕ್ಯೂಲರ್ ರಾಜಕೀಯಕ್ಕೂ ವಾಸ್ತವ ರಾಜಕೀಯಕ್ಕೂ ಹೊಂದಾಣಿಕೆಯೇ ಇಲ್ಲ. ಆತನ ಮಲತಾಯಿ ಹೇಳುವಂತೆ ಆಳ್ವಿಕೆಯ ಮೊದಲ ವರ್ಷಗಳಲ್ಲಿ ಅವನು ಆದರ್ಶವಾದಿಯಾಗಿದ್ದ. ಅವನಿಗೊಂದು ಕಾಣ್ಕೆ (vision) ಇತ್ತು. ತೀವ್ರವಾದ ಹುಡುಕಾಟವಿತ್ತು. ಹಾಗೆಂದು ತುಘಲಕ್ನ ಕತೆಯನ್ನು ಆದರ್ಶವಾದಿಯ ಸೋಲು ಎಂದು ನಿರೂಪಿಸಲೂ ಆಗುವುದಿಲ್ಲ. ಏಕೆಂದರೆ ಅವನು ಅಧಿಕಾರಕ್ಕೆ ಬಂದದ್ದೇ ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡಿಸಿ. ಈ ಮೂಲ ಪಾಪದ ನಂಟನ್ನು ಅವನು ಕಳಚಿಕೊಳ್ಳಲಾರ. ಹೀಗೆ ಆದದ್ದನ್ನು ಅನಿವಾರ್ಯ ಸಂದರ್ಭದಿಂದಾಗಿ ಎಂದು ಸಮಜಾಯಿಷಿ ಕೊಡಲೂ ಆಗುವುದಿಲ್ಲ. ಏಕೆಂದರೆ ಈ ನಾಟಕದೊಳಗಿನ ಇನ್ನೊಂದು ನಾಟಕವು ಅಸ್ತಿತ್ವದ ಮತ್ತು ವ್ಯಕ್ತಿತ್ವದ ಅಪರಿಹಾರ್ಯವಾದ ದ್ವಂದ್ವಗಳ ಬಗ್ಗೆ ಇದೆ. ಈ ನಾಟಕವನ್ನು ಅಸ್ತಿತ್ವವಾದಿ ತಾತ್ವಿಕತೆಯ ಚೌಕಟ್ಟಿನಲ್ಲಿಯೇ ವ್ಯಾಖ್ಯಾನಿಸಬೇಕಾಗುತ್ತದೆ. ಏಕೆಂದರೆ ಕಾರ್ನಾಡರ ಎಲ್ಲಾ ನಾಟಕಗಳ ಮೂಲ ಹಂದರವು ಅಸ್ತಿತ್ವವಾದವೇ ಆಗಿದೆ. ಯಾವ ವ್ಯಕ್ತಿಯನ್ನು ಯಾವ ಕ್ರಿಯೆಯನ್ನೂ ಶುದ್ಧವಾಗಿ ನೋಡುವುದು ಅಸಾಧ್ಯ. ಆದರ್ಶ, ಕ್ರೌರ್ಯ, ವೈಚಾರಿಕತೆ, ಹಿಂಸೆ ಇವೆಲ್ಲವುಗಳು ಬಿಡಿಸಲಾಗದಂತೆ ಬೆರೆತುಕೊಂಡಿವೆ. ತನ್ನ ಕಾಲದ ಅತಿ ದೊಡ್ಡ ತತ್ವಜ್ಞಾನಿ, ಜ್ಞಾನಿಯಾಗಿರುವ ಅವನು ವಿಕೃತ ಮನಸ್ಸಿನ ಹಿಂಸಾನAದಿಯೂ ಆಗಿದ್ದಾನೆ. ಇದರಿಂದಾಗಿ ಅವನ ಸೆಕ್ಯೂಲರ್ ರಾಜಕಾರಣವನ್ನು, ರಾಜಕೀಯ ಕ್ರಿಯೆಗಳನ್ನು ಹೇಗೆ ಅಳೆಯುವುದು? ಅವನು ಹೀಗೆ ಇಬ್ಬಂದಿಯಾಗಿರದಿದ್ದರೆ ಈ ರಾಜಕಾರಣವು ಸಫಲವಾಗುತ್ತಿತ್ತೆ? ನಾಟಕದ ಕ್ರಿಯಾ ಸರಣಿಯ ಪ್ರಕಾರ ಇಲ್ಲ. ಮಹಮದ್ನ ಸಾಮ್ರಾಜ್ಞದಲ್ಲಿ ಧರ್ಮವೆನ್ನುವುದು ಗಾಳಿ, ಬೆಳಕು ನೀರಿನಂತೆ ಒಂದು ವಾಸ್ತವವಾಗಿದೆ. ನಾಟಕದ ಬಹುಮುಖ್ಯ ಪಾತ್ರವಾದ ಅಝೀಜ್ನಿಗೆ ಇದು ಗೊತ್ತು. ಹಾಗೂ ಈ ವಾಸ್ತವದಿಂದಾಗಿ ಸೆಕ್ಯೂಲರ್ ರಾಜಕಾರಣವು ವೈರುಧ್ಯಗಳನ್ನು ಸೃಷ್ಟಿಸುತ್ತದೆ ಎನ್ನುವುದೂ ಗೊತ್ತು. ಅವನಿಗೆ ಮಹಮದ್ ಬಳಸಲು ಪ್ರಯತ್ನಿಸುವ power of theatre and theatre of power ಇವೆರಡೂ ಗೊತ್ತು. ಹಾಗೆ ನೋಡಿದರೆ ಇಡೀ ನಾಟಕದ ಪ್ರಧಾನ ವಸ್ತುವೇ theatricality ಆಗಿದೆ. ನಾಟಕದ ಪ್ರದರ್ಶನದಲ್ಲಿ ನಟ ಮತ್ತು ಮಹಮದ್ ಇಬ್ಬರೂ ನಟಿಸುತ್ತಾರೆ, ಅಭಿನಯಿಸುತ್ತಾರೆ. ಬರಬರುತ್ತ ಮಹಮದ್ನಿಗೆ ತನ್ನ ಪ್ರತಿಯೊಂದು ಕ್ರಿಯೆಯೂ ನಟನೆಯಾಗುತ್ತದೆ. ಅವನ ರಾಜಕೀಯವು Theatrical effect ನ ರಾಜಕಾರಣವಾಗುತ್ತದೆ. ಕ್ರಿಯೆಗೆ ಇರಬೇಕಾದ ನೈತಿಕ ನೆಲಗಟ್ಟೇ ಇಲ್ಲವಾಗುತ್ತದೆ. ಬಿಡಿಸಿ ಹೇಳುವುದಾದರೆ ಒಬ್ಬ ಪ್ರತಿಭಾವಂತ ನಟನು ತಾನು ಪಾತ್ರದೊಂದಿಗೆ ತಾದಾತ್ಯ ಹೊಂದಿ ಸತ್ಯವನ್ನು ಹುಡುಕಿ ಅಭಿನಯಿಸುವ ಬದಲು ತನ್ನ ನಟನೆಯ ಪರಿಣಾಮವನ್ನೇ ಧ್ಯಾನಿಸಿದಂತೆ, ಮಹಮದ್ನಿಗೆ ಪರಿಣಾಮಗಳೇ ಮುಖ್ಯವಾಗಿ ಆ ಪರಿಣಾಮಗಳು ಕ್ರಿಯೆಗಳ ಜೊತೆಗಿನ ಸಂಬಂಧವನ್ನೇ ಕಳೆದುಕೊಳ್ಳುತ್ತವೆ. ಈ ದೃಷ್ಟಿಯಲ್ಲಿ ಈ ನಾಟಕದಲ್ಲಿ ಕಾರ್ನಾಡರ ಶೋಧನೆಯು ರಾಜಕೀಯ ಕ್ರಿಯೆಗಳ authenticityಯ ಬಗ್ಗೆ ಇದೆ. ಇದು ತುಂಬಾ ತೊಡಕಿನ ಶೋಧನೆಯಾಗಿದೆ. ಏಕೆಂದರೆ ರಾಜಕೀಯದ theatre of power ಬಹಳ ಸಂಕೀರ್ಣವಾಗಿದೆ. ಇದರಲ್ಲಿ ದ್ವಂದ್ವಗಳಿವೆ. ವೈರುಧ್ಯಗಳಿವೆ. ಅನಂತಮೂರ್ತಿಯವರು ಗುರುತಿಸಿದಂತೆ ಇಲ್ಲಿ ಪರವಾಗಿದ್ದೆಲ್ಲವೂ ವಿರುದ್ಧವಾಗುವ ಸಾಧ್ಯತೆಗಳು ಯಾವಾಗಲೂ ಇವೆ.
ಇದು ಸಾಲದು ಎನ್ನುವಂತೆ ಮಹಮದ್ ದೇವರ ಹುಚ್ಚಿನ ಹುಡುಕಾಟದಲ್ಲಿಯೂ ಇದ್ದಾನೆ. ಅವನ ಮಟ್ಟಿಗೆ ಈ ಹುಚ್ಚು ದ್ವಂದ್ವಗಳನ್ನು ಮೀರುವ ಪ್ರಯತ್ನವಾಗಿದೆ. ದೌಲತಾಬಾದಿನ ಕೋಟೆಯ ಮೇಲಿನ ದೃಶ್ಯದಲ್ಲಿ ಇದನ್ನೇ ಅವನು ಯುವ ಕಾವಲುಗಾರನಿಗೆ ವಿವರಿಸಲು ಪ್ರಯತ್ನಿಸುತ್ತಾನೆ. ಒಮ್ಮೆ ಅವನು ಅನುಭವಿಸಿದ್ದ ತಾದಾತ್ಯ, ಮೀರುವಿಕೆ ಕಳೆದುಹೋಗಿ ಮತ್ತೆ ಬರಲೇ ಇಲ್ಲವೆನ್ನುವುದು ಅವನ ದುರಂತವಾಗಿದೆ. ಆದರೆ ಅಂತಹ ತೀವ್ರ ವೈಯಕ್ತಿಕವಾದ ಅನುಭವಕ್ಕೂ, ರಾಜಕೀಯದ ಅಪವಿತ್ರ ವಾಸ್ತವಗಳಿಗೂ ಏನು ಸಂಬಂಧ? ಒಂದರಲ್ಲಿ ಇನ್ನೊಂದು ಅದ್ದಿ ಹೋಗುವುದು ಅಸಾಧ್ಯವಲ್ಲವೆ? ನಾಟಕದಲ್ಲಿ ಇದಕ್ಕೆ ಉತ್ತರವಿಲ್ಲ. ಈ ಪರಿಸ್ಥಿತಿಯ ಅತ್ಯಂತ ಕ್ರೂರ ವ್ಯಂಗ್ಯವೆಂದರೆ ಖಲೀಫ್ನ ಸಂತತಿಯಾಗಿ ಬಂದವನನ್ನು ಕೊಂದು ಅವನ ವೇಷದಲ್ಲಿರುವ ಅಝೀಜ್ ಈಗ ಸಾರ್ವಜನಿಕ ಪ್ರಾರ್ಥನೆಯ ಕ್ರಮವನ್ನು ಮತ್ತೆ ಆರಂಭಿಸಿ ಮಹಮದ್ನ ಸಾಮ್ರಾಜ್ಯವನ್ನು ಪವಿತ್ರಗೊಳಿಸಬೇಕಾಗಿದೆ. ಇಲ್ಲಿಯೂ ಬೇಕಾಗಿರುವುದು ಒಂದು theatrical effect ಮಾತ್ರ. ಆದರೆ ವಾಸ್ತವ ರಾಜಕೀಯದಲ್ಲಿ ಭಾಗಿಗಳಾಗಿರುವ ಪ್ರಜೆಗಳಿಂದ ಮಹಮದ್ ಬಹುದೂರ ಹೋಗಿಬಿಟ್ಟಿದ್ದಾನೆ. ಅವರಿಗೆ ಈಗ ಪ್ರಾರ್ಥನೆಯಲ್ಲ; ಬದುಕಲು ಆಹಾರ ಬೇಕಿದೆ. ಮಹಮದ್ ನಾಟಕೀಯವಾದ ಸಾವಿನಂಥ ನಿದ್ದೆಯ ಮೊರೆಹೋಗಬಲ್ಲ ಮಾತ್ರ. ನನಗೆ ಈಗಲೂ ಬಿಡಿಸಲಾಗದ ಪ್ರಶ್ನೆಯೆಂದರೆ ಈ ನಾಟಕದೊಳಗಣ ಅನೇಕ ನಾಟಕಗಳು ಒಂದಕ್ಕೆ ಇನ್ನೊಂದು ಪೂರಕವಾಗಿವೆಯೆ? ಅಥವಾ ಒಂದು ಇನ್ನೊಂದನ್ನು ದುರ್ಬಲಗೊಳಿಸುತ್ತವೆಯೇ?






Enchanting and enlightening article, Sir … enjoyed reading it