
ಶ್ರೀಧರ ಬಳಗಾರ
—–
ರಾಜೇಂದ್ರ ಚೆನ್ನಿಯವರ “ಸಾಂಸ್ಕೃತಿಕ ರಾಜಕೀಯ” ‘ಇಂದಿನ ಇತಿಹಾಸ’ವನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಇತಿಹಾಸವನ್ನು ಗ್ರಹಿಸುವ ಕ್ರಮದಲ್ಲೆ ರಾಜಕೀಯ ಇರುವುದನ್ನು ಕೃತಿ ಪರೋಕ್ಷವಾಗಿ ಚಿತ್ರಿಸುತ್ತದೆ. ದೈನಿಕವನ್ನು ತನ್ನ ಹಿತಾಸಕ್ತಿಗೆ ತಕ್ಕಂತೆ ನಿಯಂತ್ರಿಸುವ ಶಕ್ತಿಯನ್ನೇ ನಾನು ರಾಜಕೀಯ ಎಂದು ಕರೆದಿರುವುದು. ಇತಿಹಾಸ ಗತಕಾಲದ ವಾಸ್ತವದ ದಾಖಲೆ ಎಂಬುದು ಪೂರ್ಣ ಸತ್ಯವಲ್ಲ; ಭೂತವನ್ನು ಅರಿಯುವಲ್ಲಿ ನೆನಪು ಮತ್ತು ಕಲ್ಪನೆಯ ಪಾತ್ರವಿರುವುದಾದರೂ ವರ್ತಮಾನದಲ್ಲಿ ನಿಂತು ಗ್ರಹಿಸುವವನ ವೈಯಕ್ತಿಕ ನೋಟದ ಪ್ರಭಾವವನ್ನು ಗಮನಿಸದಿರಲು ಸಾಧ್ಯವಿಲ್ಲ. ಸಾಕ್ಷ್ಯಾಧಾರಗಳ ವಿಶ್ವಾಸಾರ್ಹತೆ ಮತ್ತು ಅವುಗಳ ವ್ಯಾಖ್ಯಾನಗಳು ವಸ್ತುನಿಷ್ಠವೆಂದೇನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇತಿಹಾಸದ ಅಧ್ಯಯನಕ್ಕಿರುವ ಈ ಮಿತಿಯನ್ನು ವಿಮರ್ಶೆ ಕೃತಿಯ ಮೂಲಕ ಮೀರುವುದರಿಂದಲೇ ಅದು ಹೆಚ್ಚು ಅಧಿಕೃತ ಎಂದನಿಸುವುದು. ವಿಮರ್ಶೆಯ ಹೊಸ ಮಾದರಿಯೊಂದನ್ನು ಸಾಹಿತ್ಯ ಪಠ್ಯದ ಅಧ್ಯಯನದ ಮೂಲಕ ಶೋಧಿಸಿ, ಪಠ್ಯದ ವಿಮರ್ಶೆಗೆ ಅದೇ ಮಾದರಿಯನ್ನು ಅನ್ವಯಿಸಿದ್ದು ಚೆನ್ನಿಯವರ ಗುಣ ವಿಶೇಷವಾಗಿದೆ.
ಕೃತಿ ತನಗೆ ಅಗತ್ಯವಿರುವ ಮಾನದಂಡಗಳನ್ನು ತಾನೇ ಸೃಷ್ಟಿಸಿಕೊಳ್ಳುವುದರಿಂದ ಸಿದ್ಧ ಸೂತ್ರಗಳ ಅಥವಾ ಸಿದ್ಧಾಂತಗಳ ಜೀತದ ಅಪಾಯದಿಂದ ವಿಮರ್ಶೆ ತಪ್ಪಿಸಿಕೊಂಡಿದೆ. ಇದರಿಂದ ಕೃತಿ ಮತ್ತು ಅದರ ವಿಮರ್ಶೆ ಪರಸ್ಪರ ಸಂವಾದದಲ್ಲಿ ತೊಡಗಿಕೊಳ್ಳುವ ಅವಕಾಶವನ್ನು ಒದಗಿಸಿಕೊಳ್ಳುತ್ತವೆ. ಆದ್ದರಿಂದ ಇಲ್ಲಿ ಒಂದು ಮತ್ತೊಂದಕ್ಕೆ ಪ್ರಧಾನವಾಗಲಿ, ಅಧೀನವಾಗಲಿ ವರ್ತಿಸುವುದಿಲ್ಲ ಎಂಬುದನ್ನು ಮರೆಯಬಾರದು.

ಇಲ್ಲಿ ಚೆನ್ನಿಯವರು ಸಾಂಸ್ಕೃತಿಕ ಅಧ್ಯಯನದ ಮಾದರಿಯೊಂದನ್ನು ಪ್ರಾಯೋಗಿಕವಾಗಿ ಪ್ರಸ್ತುತಗೊಳಿಸಿದ್ದಾರೆ. ಈ ಮಾದರಿ ಅವರಿಗೆ ಹೊಳೆದದ್ದು ಕೃತಿನಿಷ್ಠ ವಿಮರ್ಶೆಯನ್ನು ಸ್ವೀಕರಿಸಿ ಮಾಡಿದ ಬೇಂದ್ರೆ ಕಾವ್ಯದ ಅಧ್ಯಯನದಲ್ಲಿ ತೋಚಿದ ನ್ಯೂನತೆಗಳಿಗೆ ಪ್ರತಿಕ್ರಿಯಿಸಿದಾಗ. ಕನ್ನಡದ ಸಂದರ್ಭದಲ್ಲಿ ರಾಜಕೀಯ, ಸಾಮಾಜಿಕ ಚಿಂತನೆಗಳು ಮತ್ತು ಸಾಹಿತ್ಯ ಕೃತಿಯ ವಿಮರ್ಶಾತ್ಮಕ ಬರೆಹಗಳು ಪರಸ್ಪರ ಸಂಬಂಧವಿಲ್ಲದಂತೆ ನಡೆಯುತ್ತಿರುವುದರಿಂದ ವಿಮರ್ಶೆ ಬಹುಮುಖಿ ಪರಂಪರೆಯ ಹಿನ್ನಲೆ ಅಥವಾ ಸಾಂಸ್ಕೃತಿಕ ನೆನಪುಗಳ ಸಂಪರ್ಕವನ್ನು ಕಳಚಿಕೊಂಡಿದೆ ಎನ್ನುವುದು ಅವರು ಕಂಡಿರಿಸಿದ ಸತ್ಯ.
ಸಾಹಿತ್ಯವು ಸಮುದಾಯದ ಜೊತೆಗಿನ ಸಂವಹನ ಮಾರ್ಗವಾಗಿರುವುದನ್ನು ವಿಮರ್ಶೆ ಗುರುತಿಸುವಂತಾಗಲು ವಿಶಿಷ್ಟವಾದ epistemology ಅಗತ್ಯವನ್ನು ಚೆನ್ನಿಯವರು ಪ್ರತಿಪಾದಿಸುತ್ತಿದ್ದಾರೆ. ಕೃತಿಯ ಸಂಪೂರ್ಣ ಗ್ರಹಿಕೆಗೆ ವಿಮರ್ಶೆಗೆ cultural capital ಅವಶ್ಯಕವೆಂದು ಅವರ ನಂಬಿಕೆಯ ದೃಷ್ಟಿಕೋನ. ವಿಮರ್ಶೆ ಲೇಖಕನ ವೈಯಕ್ತಿಕ ಪ್ರತಿಭಾ ಸ್ವರೂಪದ ವಿಶ್ಲೇಷಣೆಗೆ ಸೀಮಿತಗೊಳ್ಳದೆ ಅವನ ಕೃತಿಯನ್ನು ಹೆಚ್ಚು ಸಂಕೀರ್ಣವಾದ ಸಾಮಾಜಿಕ, ಸಾಂಸ್ಕೃತಿಕ ಚೌಕಟ್ಟುಗಳಲ್ಲಿಟ್ಟು ನೋಡುವ ಅವಶ್ಯಕತೆಯನ್ನು ಅವರು ಒತ್ತಿ ಹೇಳುತ್ತಿದ್ದಾರೆ. ಇಂಥಾದ್ದೊಂದು epistemology ತರ್ಕ, ದೃಷ್ಟಾಂತ ಮತ್ತು ವ್ಯಾಖ್ಯಾನವನ್ನು ತನ್ನ ಸಲಕರಣೆಯನ್ನಾಗಿ ಉಪಯೋಗಿಸಿಕೊಳ್ಳುವುದಕ್ಕೆ ಚೆನ್ನಿಯವರ ಬರೆಹಗಳು ಸಾಕ್ಷಿಗಳಾಗಿವೆ.
ಅಂಬೇಡ್ಕರ್ ಅವರ ಮತಾಂತರವನ್ನೂ ಒಳಗೊಂಡು ಇನ್ನೂ ಅನೇಕ ತೀರ್ಮಾನಗಳು ಹಾಗೂ ಕ್ರಿಯೆಗಳು ‘ಸಾಂದರ್ಭಿಕ’ವಾಗಿದ್ದು ಅವು ಪರಸ್ಪರ ಸಾಂಗತ್ಯ ಹೊಂದಿರಲಿಲ್ಲವೆಂದು ಕೆಲವು ವಿದ್ವಾಂಸರು ಮಾಡಿದ ವ್ಯಾಖ್ಯಾನಗಳು ಅವಸರದ ಓದಿನ ತಪ್ಪುಗಳೆಂದು ಚೆನ್ನಿಯವರು ಪ್ರಮಾಣೀಕರಿಸುವುದು ಅಂಬೇಡ್ಕರ್ ಅವರ ಒಟ್ಟು ಕ್ರಿಯೆಗಳ ಹಿಂದಿರುವ ಅರ್ಥಪೂರ್ಣ ತರ್ಕದ ಹಿನ್ನಲೆಯನ್ನು ಸಮಗ್ರವಾಗಿ ತೆರೆದಿಡುವುದರಿಂದ ಸಾಧ್ಯವಾಗಿದೆ. ಆನಂದ ತೇಲ್ತುಂಬ್ಡೆಯವರ ಚಿಂತನೆಗಳ ವಿಶ್ಲೇಷಣೆಯ ಹಾದಿಯಲ್ಲಿ ಅವರು ‘ಚರಿತ್ರೆಯ ವ್ಯಂಗ್ಯವೆಂದರೆ ಗಾಂಧಿಯವರ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅನುಯಾಯಿಗಳೆಂದರೆ ಗಾಂಧಿಯವರನ್ನು ಇಷ್ಟಪಡದ ದಲಿತ ಸಮುದಾಯಗಳೇ’ ಎಂಬಂಥ ಅಪೂರ್ವ ಒಳನೋಟಗಳನ್ನು ಶೋಧಿಸಲು ಸಾಧ್ಯವಾದದ್ದು ಚರಿತ್ರೆಯ ಒಳಗೂ ಹೊರಗೂ ನಿಂತು ನೋಡುವ ಅಖಂಡ ದೃಷ್ಟಿಗೆ ಮಾತ್ರ.

ಚರಿತ್ರೆಯ ಸರಿಯಾದ ಓದಿಗೆ ರೂಪಕ ಅದೆಷ್ಟು ಅಗತ್ಯ ಎನ್ನುವ ಸತ್ಯವನ್ನು ಶೇಕ್ಸ್ಪಿಯರ್ನ ಕ್ಯಾಲಿಬನ್ ಪಾತ್ರದ ಕಲ್ಪನೆಯನ್ನು ಉದಾಹರಿಸದ್ದನ್ನು ನೋಡಬಹುದು: ‘೧೬ನೇ ಶತಮಾನದಿಂದ ಆರಂಭವಾಗುವ ಸಮುದ್ರ ಪರ್ಯಟನಗಳು, ವಲಸೆಗಳು, ಅತ್ಯಂತ ಕ್ರೂರವಾದ ವಸಾಹತುಶಾಹಿಯನ್ನು ಮುಂದಿನ ಶತಮಾನಗಳಲ್ಲಿ ಸ್ಥಾಪಿಸಿದವು. ಹಾಗೆ ಆಗುವ ಮೊದಲೇ ಪಶ್ಚಿಮವು ತಾನು ಮತ್ತು ಇತರರು ಎಂದು ಮನುಷ್ಯ ಜಗತ್ತನ್ನು ಇಬ್ಭಾಗ ಮಾಡಿಕೊಂಡು ಮಾನಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿದ್ಧವಾಗಿತ್ತು. ಹೀಗೆ ರಚಿಸಲ್ಪಟ್ಟ ‘ಇತರ’ನ ಅತ್ಯಂತ ಪ್ರಭಾವಿ ವ್ಯಕ್ತಿತ್ವವೇ ಶೇಕ್ಸ್ಪಿಯರ್ನ ಕ್ಯಾಲಿಬನ್’. ಇಂಥ ಭವಿಷ್ಯ ಸೂಚಕ ದೂರದರ್ಶಿತ್ವ ರೂಪಕ ಪ್ರತಿಭೆಗೆ ಮಾತ್ರ ಸಾಧ್ಯ.
ಚರಿತ್ರೆಯ ಚಲನಶೀಲತೆ ಮತ್ತು ಜಡತೆಯನ್ನು ಒಟ್ಟಂದದ ವೈದೃಶ್ಯದ ನಿರೂಪಣೆಯಲ್ಲಿ ಸಾಕ್ಷೀಕರಿಸಲು ಚೆನ್ನಿಯವರ ಜಾಗ್ರತ ಪ್ರಜ್ಞೆ ಮುಕ್ತವಾಗಿರುವುದಕ್ಕೆ ಉದಾಹರಣೆಯಾಗಿ ದಲಿತ ಅಧ್ಯಯನಗಳಲ್ಲಿ ಗೇಲ್ ವ್ಯಕ್ತಪಡಿಸಿದ ವೈಚಾರಿಕ ಕಾಳಜಿಗಳನ್ನು ಚರ್ಚಿಸುವುದನ್ನು ಉಲ್ಲೇಖಿಸಬಹುದು. ‘ವಿಶೇಷವಾಗಿ ಜನರ ಕಸುಬು ಹಾಗೂ ಕಾಯಕಗಳಿಂದ ಅಸಮಾನತೆಯ ವ್ಯವಸ್ಥೆಯನ್ನು ತಿರಸ್ಕರಿಸಿ ಮನುಷ್ಯಪರವಾದ ಜಗತ್ತನ್ನು ಕಟ್ಟುವ ಜನರ ಹಂಬಲವನ್ನು ಅನುಭಾವಿಗಳು, ಭಕ್ತಕವಿಗಳು ಅಭಿವ್ಯಕ್ತಿಸಿದ ಭವಿಷ್ಯದ ಆದರ್ಶ ರಾಜ್ಯದ ಪರಿಕಲ್ಪನೆಯನ್ನು’, ‘ಗತಕಾಲದ ಯುಗವನ್ನೇ ಶ್ರೇಷ್ಠವೆಂದುಕೊಂಡು ಆಧುನಿಕ ಕಾಲವನ್ನು ಜಾತಿ ಹಾಗೂ ವರ್ಣಸಂಕರಗಳ ಕಲಿಯುಗವೆಂದು ನೋಡುವ ವೈದಿಕ ಬ್ರಾಹ್ಮಣ ಪರಂಪರೆ’ಯ ಜತೆಗಿಟ್ಟು ನೋಡುವ ವಿಧಾನ ಒಳ ಹೆಣಿಗೆಯ ಸಂಘರ್ಷಪೂರ್ಣ ನೇಯ್ಗೆಯ ಚರಿತ್ರೆಯನ್ನು ಪ್ರವೇಶಿಸಲು ಅಗತ್ಯವಿರುವ ಕಿಟಕಿಯನ್ನು ತೆರೆಯುತ್ತದೆ.
ಚರಿತ್ರೆಯ ದಾರ್ಶನಿಕ ತಿಳುವಳಿಕೆಗೆ ರೂಪಕವೊಂದರ ಮಹತ್ವವನ್ನು ಪ್ರಸ್ತಾಪಿಸಲು ಚೆನ್ನಿಯವರು ಮರೆಯುವುದಿಲ್ಲ. ಇದಕ್ಕಾಗಿ ಆಧುನಿಕ ಭಾರತದ ಪ್ರಮುಖ ಚಿಂತಕರಲ್ಲೊಬ್ಬರಾದ ಗಣೇಶ್ ದೇವಿಯವರ ವಿಶಿಷ್ಟ ನೋಟಕ್ರಮಗಳನ್ನು ಪರಿಚಯಿಸುತ್ತಾರೆ. ದೇವಿಯವರು ಉಲ್ಲೇಖಿಸಿದ ‘ಆರ್ಫಿಯಸ್ನ ಹಾಡು’ ಎಂಬ ಪುರಾಣ ಕಥೆಯನ್ನು ಚೆನ್ನಿಯವರು ನೆನಪಿಸುತ್ತಾರೆ.

ಈ ಪುರಾಣವು ಇಂದಿನ ಜಗತ್ತಿನಲ್ಲಿ ನಮ್ಮೆಲ್ಲರ ‘ನಿರಾಶಾ ಕಾಲದ ಕರ್ತವ್ಯ’ದ ರೂಪಕವೂ ಆಗುತ್ತದೆ. ವಿಜ್ಞಾನದ ಅಮಾನುಷ ವಸ್ತುನಿಷ್ಠತೆಯನ್ನು ಚೆನ್ನಿಯವರು ದೇವಿಯವರ ಚಿಂತನೆಯ ಮುಖ್ಯ ಕಾಣ್ಕೆಯಾಗಿ ನೋಡುತ್ತಾರೆ. ‘ಶ್ರೇಷ್ಠವಾದುದದನ್ನು ಸಾಧಿಸಿರುವ ಆಧುನಿಕ ವಿಜ್ಞಾನವು ಆಧುನಿಕತೆಯ ಅನೇಕ ಸೂತಕಗಳನ್ನೂ ಹೊತ್ತುಕೊಂಡಿರುವುದರಿಂದ ಅದು ಮನುಷ್ಯ ಜೀವಿಗಳ ಕ್ರಿಯಾಶೀಲತೆಯನ್ನೂ imagination ಅನ್ನು ನಾಶಮಾಡುವ ಶಕ್ತಿಯನ್ನೂ ಹೊಂದಿದೆ….’ ಎಂಬ ಆಘಾತಕಾರಿ ಸತ್ಯವನ್ನು ಗಂಭೀರವಾಗಿ ಪರಿಗಣಿಸಲು ಒತ್ತಾಯಿಸುತ್ತಾರೆ.
ವಿಮರ್ಶೆಯ ಬಗೆಗಿನ ಚೆನ್ನಿಯವರ ಒಲವು ಶೇಕ್ಸ್ಪಿಯರ್ ಸಾಹಿತ್ಯದ ವಿವಿಧ ನೋಟಕ್ರಮಗಳ ವಿಶ್ಲೇಷಣೆಯಲ್ಲಿ ಇನ್ನಷ್ಟು ಖಚಿತವಾಗಿ ಪ್ರಕಟವಾಗಿದೆ. ಲಂಡನ್ ಸಂಸ್ಕೃತಿಯ ಪ್ರಧಾನ ಅಭಿವ್ಯಕ್ತಿಯಾಗಿ, ಜನಸಮುದಾಯದ ಅಭಿವ್ಯಕ್ತಿಯಾಗಿ ಎಲಿಜೆಬೆತ್ ಯುಗದ ರಂಗಭೂಮಿಯನ್ನು ಅರ್ಥೈಸಿಕೊಂಡಾಗ ಮಾತ್ರ ಶೇಕ್ಸ್ಪಿಯರ್ನ ಪ್ರತಿಭೆಯ ವಿಶಿಷ್ಟತೆಯನ್ನು ಅರಿಯಬಹುದೆಂಬ ವಾದ ಪ್ರಸ್ತುತವಾಗಿದೆ. ಸಾರ್ವಜನಿಕ ಮಾಧ್ಯಮವಾಗಿದ್ದ ಅಂದಿನ ರಂಗಭೂಮಿ ಪಡೆದುಕೊಂಡಿದ್ದ ಪ್ರದರ್ಶನಕಲೆಯ ಸ್ವರೂಪ, ನಾಟ್ಯಗೃಹಗಳು, ಪ್ರದರ್ಶನದ ರೀತಿಗಳು, ರಂಗಮಂದಿರಗಳ ಮಾಲೀಕತ್ವ, ಅಭಿನಯ ಸಂಪ್ರದಾಯಗಳು ಮತ್ತು ವೈವಿಧ್ಯಪೂರ್ಣ ಪ್ರೇಕ್ಷಕ ವರ್ಗ-ಇವೆಲ್ಲವುಗಳ ಅರಿವಿಲ್ಲದೇ ಶೇಕ್ಸಪಿಯರ್ನನ್ನು ಓದುವುದು ದಾರಿ ತಪ್ಪಿಸುವ ಕೆಲಸವೆಂದೂ ಅವನ ನಾಟಕಗಳನ್ನು ಸಾಹಿತ್ಯಕ ಪಠ್ಯಗಳನ್ನಾಗಿ ಓದುವ ಕ್ರಮಗಳಿಂದಾಗಿ ಸಾಹಿತ್ಯ ವಿಮರ್ಶೆ ಕಟ್ಟಿಕೊಂಡಿರುವ ಶೇಕ್ಸ್ಪಿಯರ್ ನಿಜವಾದ ನಾಟಕಕಾರ ಶೇಕ್ಸ್ಪಿಯರ್ ಅಲ್ಲವೇ ಅಲ್ಲವೆಂಬ ತೀರ್ಮಾನಕ್ಕೆ ಬರುತ್ತಾರೆ.
ಚರಿತ್ರೆಯಲ್ಲಿ ಯುಗಧರ್ಮಕ್ಕೂ ಕಲಾ ಪ್ರಕಾರಕ್ಕೂ ಇರುವ ಅಪೂರ್ವ ಹೊಂದಾಣಿಕೆಯ ಹಿನ್ನಲೆಯಲ್ಲಿ ಚೆನ್ನಿಯವರು ಸತ್ಯದ ತಾರ್ಕಿಕ ಅಂತ್ಯಕ್ಕೆ ತನ್ನ ವಾದವನ್ನು ಎಳೆದೊಯ್ಯಲು ಹಿಂಜರಿಯುವುದಿಲ್ಲ.
ಶೇಕ್ಸ್ಪಿಯರ್ ಬಹುವ್ಯಕ್ತಿತ್ವಗಳನ್ನು ಹೊಂದಿದ ಅಥವಾ ವ್ಯಕ್ತಿತ್ವವೇ ಇಲ್ಲವಾಗಿ ಆ ಯುಗದ ಅನುಭವಗಳು ಹಾದುಹೋಗುವ ಒಂದು ಮಾಧ್ಯಮ ಮಾತ್ರವಾಗಿದ್ದನೆಂದೂ ಅವನ ನಾಟಕವು ಮನುಷ್ಯ ಸ್ವಭಾವವನ್ನೂ ಮೀರಿದ ಚರಿತ್ರೆಯಿಂದ ಹುಟ್ಟುವ ಜನಾಂಗೀಯ ವೈಷಮ್ಯದ ಬಗ್ಗೆ ಇದೆ ಎಂದೂ ಅವನ ನಾಟಕಗಳ ನಾಯಕರು ಮಾಡುವ ವೈಯಕ್ತಿಕ ಆಯ್ಕೆಗಳಿಗೆ ಇಡೀ ಮನುಷ್ಯ ಕುಲವನ್ನು ಪ್ರತಿನಿಧಿಸುವ ಶಕ್ತಿ ಇದೆ ಎಂಬ ಹೇಳಿಕೆಗಳನ್ನು ಗಮನಿಸಬೇಕು. ಹಾಗಾಗಿ ಅವನ ನಾಟಕಗಳನ್ನು ಅವನು ಬದುಕಿದ ಚರಿತ್ರೆ ಹಾಗೂ ಸಮಾಜಗಳ ಮೂರ್ತ ವಾಸ್ತವಗಳ ಹಿನ್ನೆಲೆಯಲ್ಲಿ ಓದಿದಷ್ಟೂ ಆ ನಾಟಕಗಳಿಗೆ ನಿಜವಾದ ಸಮಕಾಲೀನ ಪ್ರಸ್ತುತತೆ ಬರುತ್ತದೆ ಎಂಬುದರ ಬಗ್ಗೆ ಅವರಿಗೆ ಅನುಮಾನವಿಲ್ಲ.
ಯಶವಂತ ಚಿತ್ತಾಲರ ಕತೆಗಾರಿಕೆಯ ಬಗ್ಗೆ ಅಲ್ಲ ಅವರ ಕತೆಗಾರಿಕೆಯ ಮೂಲಕ ಬರೆಯುವಾಗ ಚೆನ್ನಿಯವರು ಸಮುದಾಯದ ಸಾಂಸ್ಕೃತಿಕ ವಾಸ್ತವದಾಚೆಯ ಸುಪ್ತ ಲೋಕದತ್ತ ಸಾಗುವ ಚಿತ್ತಾಲರ ಸೃಜನಶೀಲನ ಹೆಜ್ಜೆಗಳ ನಿಗೂಢ ಸದ್ದುಗಳನ್ನು ಆಲಿಸುತ್ತಾರೆ. ಮನುಷ್ಯ ಪ್ರಜ್ಞೆಯ ಅರಿವಿಗೂ ಮೀರಿದ ಆಳದ ದುರ್ಗಮ ಪಾತಳಿಗಳನ್ನು ಶೋಧಿಸುವತ್ತಲೇ ಇರುವ ಅವರ ಕಥನದ ಚಲನೆಯನ್ನು ಗುರುತಿಸುತ್ತಾರೆ. ಚಿತ್ತಾಲರ ಬರೆಹದ ಸಾಫಲ್ಯವಿರುವುದು ಸುಪ್ತಪ್ರಜ್ಞೆಯೂ ಸೇರಿದಂತೆ ಮನುಷ್ಯ ಪ್ರಜ್ಞೆಯ ಆಂತರ್ಯವನ್ನು ಸಾಮಾಜಿಕ ವಾಸ್ತವಗಳೊಂದಿಗೆ ಬೆಸೆಯುವುದರಲ್ಲಿದೆ ಎಂಬುದು ಚೆನ್ನಿಯವರ ಮೂಲ ಗ್ರಹಿಕೆಯ ವಿಸ್ತರಣೆಯಾಗಿದೆ.

ಜಾತಿವ್ಯವಸ್ಥೆಯ ವಿಕೃತಿಗಳ ಮೂಲವನ್ನು ಚೆನ್ನಿಯವರು ಹಿಂದುಗಳ ಆನುವಂಶಿಕ ಸ್ವಭಾವದಲ್ಲಿ ನೊಡದೆ ಜಾತಿವ್ಯವಸ್ಥೆಯ ಸಾಮಾಜಿಕ ರಚನೆಯಲ್ಲಿ ಹಾಸುಹೊಕ್ಕಾಗಿರುವ ಅತಾರ್ಕಿಕ ನಂಬಿಕೆಯ ಸಿದ್ಧಾಂತದಲ್ಲಿ ಗುಪ್ತಗಾಮಿನಿಯಾಗಿರುವುದನ್ನು ಶೋಧಿಸುತ್ತಾರೆ. ‘ಇಲ್ಲಿ ಸಿದ್ಧಾಂತವೆಂದರೆ ನಮ್ಮ ಲೋಕ ಗ್ರಹಿಕೆಯನ್ನು, ಆ ಗ್ರಹಿಕೆಯನ್ನು ಆಧರಿಸುವ ನಂಬಿಕೆಗಳನ್ನು, ಆ ನಂಬಿಕೆಗಳಿಗೆ ಅನುಸಾರವಾಗಿರುವ ಕ್ರಿಯೆ ಹಾಗೂ ಸಾಮಾಜಿಕ ನಡುವಳಿಕೆಗಳನ್ನು ಸಮಗ್ರವಾಗಿ ನಿಯಂತ್ರಿಸುವ ವ್ಯಾಖ್ಯಾನವಾಗಿದೆ….ಪ್ರಜ್ಞೆ ಹಾಗೂ ನಡುವಳಿಕೆಗಳನ್ನು ಜಾಗೃತ ಹಾಗೂ ಸುಪ್ತ ಸ್ಥಿತಿಗಳಲ್ಲಿ ನಿಯಂತ್ರಿಸುವ ಸಿದ್ಧಾಂತವಾಗಿದೆ’ ಎನ್ನುವ ಒಳನೋಟಕ್ಕೆ ಸಾಮಾನ್ಯವಾಗಿ ಅಂದುಕೊಂಡಂತೆ ಜಾತಿ ವ್ಯವಸ್ಥೆ ಕೇವಲ ‘ಶ್ರಮ ವಿಭಜನೆ’ ಎಂಬುದು ಸತ್ಯವಲ್ಲ ಬದಲಿಗೆ ‘ಶ್ರಮಿಕರ ವಿಭಜನೆ’ ಎಂದ ಅಂಬೇಡ್ಕರ್ ಮಾತಿನ ಸೂಕ್ಷ್ಮ ಅರ್ಥವಾಗಲು ಸಾಧ್ಯ.
ಅತ್ಯಂತ ಅಪಾಯಕಾರಿ ವೇಗದೊಂದಿಗೆ ಬದಲಾಗುತ್ತಿರುವ ಲೋಕರೂಪಕ್ಕೆ ಪೂರಕವಾಗಿ ತನ್ನ ಗ್ರಹಿಕಾ ಕ್ರಮವನ್ನು ತಾತ್ವಿಕವಾಗಿ ಬದಲಾಯಿಸಿಕೊಳ್ಳುವುದು ಚೆನ್ನಿಯವರಿಗೆ ವರ್ತಮಾನದ ತುರ್ತಾದ ಅಗತ್ಯವೆಂದು ಅನಿಸಿದೆ. ಆ ಕಾರಣಕ್ಕಾಗಿಯೇ ಅವರು ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯನ್ನು ಮರು ಓದಿಗೆ ಒಳಪಡಿಸುತ್ತಾರೆ. ಕೃತಿಯೊಂದು ತನ್ನ ಸಮಕಾಲೀನ ರಾಜಕೀಯ ಸಂದರ್ಭವನ್ನು, ಚಾರಿತ್ರಿಕ ಒತ್ತಡಗಳನ್ನು ತನ್ನೊಳಗಿನ ವಸ್ತು-ಆಶಯದೊಂದಿಗೆ integrate ಮಾಡಿಕೊಳ್ಳುವುದರತ್ತ ಅವರ ಗಮನವಿದೆ. ‘ಅವಸ್ಥೆ’ಯಲ್ಲಿ ಶಾಂತವೇರಿ ಗೋಪಾಲಗೌಡರ ಹೋರಾಟವನ್ನು ಕರ್ನಾಟಕದ ರಾಜಕೀಯದೊಂದಿಗೆ integrate ಮಾಡಲು ಅನಂತಮೂರ್ತಿಯವರಿಗೆ ಸಾಧ್ಯವಾಗದೆ ಕಾದಂಬರಿಯಲ್ಲಿ ಬಿರುಕು ಉಂಟಾಗಿರಬಹುದೆಂದು ಸಂದೇಹ ಪಡುತ್ತಾರೆ. ಕಾದಂಬರಿಯ ಕೊನೆಯ ಪುಟದಲ್ಲಿ ಕೃಷ್ಣಪ್ಪ ಒಳಗನ್ನು ಹೊರಗಿನೊಂದಿಗೆ ಹೊಂದಿಸಲು ಆಗಿಲ್ಲ ಎನ್ನುತ್ತಾನೆ. ಒಳಗು ಹೊರಗುಗಳನ್ನು ಒಂದುಗೂಡಿಸಿ integrate ಮಾಡುವುದಲ್ಲ, ಈ ಎರಡು ಜಗತ್ತುಗಳಲ್ಲಿ integrate ಸಾಧಿಸುವುದು ಸಾಧ್ಯವಾಗಿದೆಯೇ ಎಂದು ನೋಡಬೇಕೆಂದು ಅತ್ಯಂತ ಮುಖ್ಯವಾದ ಕಾದಂಬರಿಯೊಳಗಿನ ಬಿಕ್ಕಟ್ಟನ್ನು ಗಮನಿಸುವಂತೆ ಆಗ್ರಹಿಸುತ್ತಾರೆ. ಅಂದರೆ, ಚೆನ್ನಿಯವರ ವಿಮರ್ಶಾ ಪ್ರಜ್ಞೆ ಕೃತಿಯನ್ನು ಸಂದರ್ಭ ಮುಕ್ತ ದ್ವೀಪದಂತೆ ನೋಡದೆ ಸಾವಯವ ಸಾಂಸ್ಕೃತಿಕ ಸಂಬಧಗಳ ಸಂಕೀರ್ಣ ಅನುಭವಗಳ ಉತ್ಪಾದನೆಯಾಗಿ ವಿಶ್ಲೇಷಿಸಲು ಬದ್ಧವಾಗಿರುತ್ತದೆ.
ಬಸವರಾಜ ಕಟ್ಟೀಮನಿಯವರ ಕಾದಂಬರಿಗಳ ಚರ್ಚೆಯ ಹಿನ್ನೆಲೆಯಾಗಿ ಚೆನ್ನಿಯವರು ಚರಿತ್ರೆಯಲ್ಲಿ ಚಾಲ್ತಿಗೆ ಬಂದ ರಾಷ್ಟ್ರ ಮತ್ತು ದೇಶ ಎಂಬ ಎರಡು ರೂಪಕಗಳನ್ನು ಉಲ್ಲೇಖಿಸಿರುವುದು ಆಕಸ್ಮಿಕವಲ್ಲ. ಅವರು ವ್ಯಾಖ್ಯಾನಿಸಿದಂತೆ ರಾಷ್ಟ್ರವೆನ್ನುವುದು ಒಂದು ಅಮೂರ್ತ ಸೈದ್ಧಾಂತಿಕ ರಚನೆ; ದೇಶವೆನ್ನುವುದು ಚರಿತ್ರೆ, ಸಾಮಾಜಿಕ ರಚನೆಗಳು, ಮೂರ್ತ ರಾಜಕೀಯ ವಾಸ್ತವಗಳು ಇವುಗಳಿಗೆ ಬದ್ಧವಾಗಿರುವ ವಿದ್ಯಮಾನ. ನಾನು ಇದನ್ನು ಉದಾಹರಿಸಲು ಕಾರಣವೇನೆಂದರೆ ಹೇಗೆ ಚೆನ್ನಿಯವರು ಕಟ್ಟೀಮನಿಯವರ ಕಾದಂಬರಿಯ ವಿಮರ್ಶೆಗೆ ಅಗತ್ಯವಾದ ಸಾಂಸ್ಕೃತಿಕ ನೆಲೆಯನ್ನು ಕಟ್ಟಿಕೊಳ್ಳಲು ಮರೆಯುವುದಿಲ್ಲವೆಂದು ಸೂಚಿಸಲಷ್ಟೆ.

ಭಾರತದ ರಾಜಕಾರಣವು ಪ್ರಜಾಪ್ರಭುತ್ವದಿಂದ ಚುನಾಯಿತ ಸರ್ವಾಧಿಕಾರಕ್ಕೆ ಬಂದು ತಲುಪುವ ಸಂದರ್ಭದಲ್ಲಿ ರಾಜಕಾರಣಿಗಳ ಸಾರ್ವಜನಿಕ ವರ್ತನೆಯನ್ನು ಆಳದಲ್ಲಿರುವ ಸಾಂಸ್ಕೃತಿಕ ರೋಗದ ಮೇಲಿನ ಲಕ್ಷಣವೆಂದು ಅಧ್ಯಯನ ಮಾಡುವ ಅಗತ್ಯವನ್ನು ಚೆನ್ನಿಯವರು ಬೀಸು ಹೇಳಿಕೆಯಾಗಿ ನೀಡುವುದಿಲ್ಲ. ಏಕೆಂದರೆ ಈ ಹೇಳಿಕೆಗಳನ್ನು ಗೇಬ್ರಿಯಲ್ ಮಾರ್ಕ್ವೇಜ್ನ Autumn of the Patriarch ಕೃತಿಗಳ ಹಾಗೂ ಲ್ಯಾಟಿನ್ ಅಮೇರಿಕನ್ “ಸರ್ವಾಧಿಕಾರಿ ಕಾದಂಬರಿ” ಪ್ರಕಾರದ ಕೃತಿಗಳಲ್ಲಿ ಅಧಿಕೃತಗೊಳಿಸುತ್ತಾರೆ.
ಪ್ರಜಾಪ್ರಭುತ್ವವನ್ನು ಚುನಾವಣಾ ರಾಜಕೀಯವಾಗಿ ಒಪ್ಪಿಕೊಂಡು ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಬೆಳಸಿಕೊಂಡಿಲ್ಲವಾದ್ದರಿಂದ ಭಾರತದ ಸಮಾಜ ಅವನತಿಯ ಹಾದಿಯಲ್ಲಿರುವುದಕ್ಕೆ ವಿಷಾದಿಸುತ್ತಾರೆ. ಇಂಥ ಹೇಳಿಕೆಗಳನ್ನು ಮಾಡುವಾಗ ಚೆನ್ನಿಯವರು ಅವುಗಳಿಗಿರುವ ಚಾರಿತ್ರಿಕ ಒತ್ತಡ, ಸಾಂಸ್ಕೃತಿಕ ಹಿನ್ನಲೆ ಮತ್ತು ರಾಜಕೀಯ ವಿಪರ್ಯಾಸಗಳನ್ನು ಪರಿಗಣಿಸುವುದನ್ನು ಮರೆಯುವುದಿಲ್ಲ. ಹಾಗಾಗಿ ಚೆನ್ನಿಯವರ ವಿಮರ್ಶೆಗೆ ಕೃತಿಗಳು ಪುರಾವೆಗಳಾಗಿ, ಸಾಂಸ್ಕೃತಿಕ ಸಂದರ್ಭಗಳು ಪ್ರಮಾಣಗಳಾಗಿ, ಚಾರಿತ್ರಿಕ ಕಥನಗಳು ಸಮಗ್ರ ಹಿನ್ನಲೆಯಾಗಿ ಒದಗುತ್ತವೆ.
ಶ್ರೇಷ್ಠ ಬರಹಗಾರ ಮಾಡಬಹುದಾದ ಕೆಲಸವೆಂದರೆ ಒಂದು ಭಾಷಿಕ ಸಮುದಾಯದ ಭಾವಪ್ರಪಂಚ ಹಾಗೂ ವೈಚಾರಿಕತೆಗಳಿಗೆ ಕೆಲವು ಮಾದರಿಗಳನ್ನು ಸೃಷ್ಟಿಸುವುದಾಗಿದೆ ಎಂಬ ಹೇಳಿಕೆಯನ್ನು ಸ್ವತಃ ಚೆನ್ನಿಯವರ ವಿಮರ್ಶಾ ಮಾದರಿಗೆ ಅನ್ವಯಿಸಬಹುದಾಗಿದೆ. ಮತೀಯ ಮತ್ತು ರಾಜಕೀಯ ವ್ಯವಸ್ಥೆಗಳು ತಮ್ಮ ದಬ್ಬಾಳಿಕೆಯ ಅಸ್ತಿತ್ವಕ್ಕಾಗೆ ವಿರೋಧಿಸುತ್ತಲೇ ಇರುವ ಜೀವಪರ ಪರ್ಯಾಯ ಜಗತ್ತನ್ನು ಚೆನ್ನಿಯವರ ಬರಹ ಹಲವು ನೆಲೆಗಳಲ್ಲಿ ಹುಡುಕಾಟ ನಡೆಸುತ್ತಿರುವುದರಿಂದ ಅವರ ಚಿಂತನೆಯ ಮಾದರಿ ಅತ್ಯಂತ ಪ್ರಸ್ತುತವೆನಿಸುತ್ತದೆ.
ಅರಾಜಕ ಆಕಾಶದಲ್ಲಿ ನಕ್ಷತ್ರ ಮಿನುಗುವಂತೆ ಚೆನ್ನಿಯವರ ಚಿಂತನೆಗಳು ಅಸ್ತವ್ಯಸ್ತವೂ ಅಸಂಗತವೂ ಆಗಿರುವ ದುರಿತ ಕಾಲದಲ್ಲಿ ಅರ್ಥಪೂರ್ಣ ಆಕೃತಿಯಾಗಿ ಹರಳುಗಟ್ಟಿರುವುದು ಕುತೂಹಲಕರ ವಿದ್ಯಮಾನವಾಗಿದೆ. ‘ಮೆಟ್ಟಿಲುಗಳಿಲ್ಲದ ಬಹುಮಹಡಿಗಳ ಕಟ್ಟಡಗಳ’ ಅರಗಿನ ಮನೆಯಿಂದ ಬಿಡುಗಡೆಯಾಗಲು ಚೆನ್ನಿಯವರು ಹೊಸ ಹೊರದಾರಿಯನ್ನು ತೋರಿಸಿದ್ದಾರೆ.






0 Comments