ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುವ ’ತುಘಲಕ್’


ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಕಾರ್ನಾಡ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, ’ಸಮುದಾಯ’ ಬೆಂಗಳೂರು ಕನ್ನಡದಲ್ಲಿ ’ತುಘಲಕ್’ ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು. ಹೊಸಕಾಲದ ರಂಗ ಸಾಧ್ಯತೆ ಮತ್ತು ಅರ್ಥದ ಅಗತ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಿಸಿದ ಸಮುದಾಯ, ಇದೇ ಆಗಸ್ಟ್ 1, 2014 ಶುಕ್ರವಾರ ಹನುಮಂತನಗರದ ಕೆ. ಹೆಚ್. ಕಲಾಸೌಧ ದಲ್ಲಿ ರಂದು ಈ ನಾಟಕದ 27 ನೇ ಪ್ರದರ್ಶನ ನೀಡಲಿದೆ.
ಮೇಲ್ನೋಟಕ್ಕೆ ’ತುಘಲಕ್’ ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ.

ಧರ್ಮ ದ್ವೇಷದಿಂದ ಒಡೆದು ಚೂರಾದ ತನ್ನ ರಾಜ್ಯವನ್ನು ಶಾಂತಿ ಮತ್ತು ಸಾಮರಸ್ಯದ ತಳಹದಿಯ ಮೇಲೆ ಕಟ್ಟ ಬಯಸುವ ತುಘಲಕ್ ನಿಗೆ ಎದುರಾಗುವುದು, ಧರ್ಮಾಂಧರ ವಿರೋಧ ಮತ್ತು ರಾಜಕಾರಣವನ್ನು ತಮ್ಮ ಹತೋಟಿಯಲ್ಲಿರಿಸಲು ಹುನ್ನಾರ ನಡೆಸುವ ಅಂದಿನ ವ್ಯಾಪಾರಿ ವರ್ಗವಾದ ಅಮೀರರು.
ಈ ನಾಟಕದ ಕುರಿತು ಡಾ. ವಿಜಯಮ್ಮ ರವರು ಮತ್ತು ಬೊಳುವಾರು ಮೊಹಮ್ಮದ್ ಕುಂಞ ಹೀಗೆ ಹೇಳಿದ್ದಾರೆ.

ಇತಿಹಾಸವನ್ನು ಹೊಸದಾಗಿ ಕಟ್ಟುವ ಸಮುದಾಯದ ನಾಟಕ ‘ತುಘಲಕ್’
ಸಮುದಾಯ, ಬೆಂಗಳೂರು , ಈ ನಾಟಕವನ್ನು ರಂಗಕ್ಕೆ ಅಳವಡಿಸುವ ಮೂಲಕ ಮತ್ತೆ ನೆನಪುಗಳನ್ನು ವರ್ತಮಾನದ ವಾಸ್ತವಕ್ಕೆ ತಂದು ನಿಲ್ಲಿಸಿದೆ. ಅಂದಿನ ಪ್ರಯೋಗದ ಯಾವ ಛಾಯೆಯೂ ಇಲ್ಲದ, ಹೊಸ ರಂಗ ವಿನ್ಯಾಸ ಈ ನಾಟಕದ ಒಂದು ವಿಶೇಷ. ಹಾಗೆಯೇ ‘ಸಿಂಹ’ರ ತುಘಲಕ್ ಪಾತ್ರದ ‘ಹಾಂಗ್ ಓವರ್’ ನಿಂದ ಹೊರಬಂದ ಒಂದು ವಿಶಿಷ್ಟ ಶೈಲಿಯ ಪಾತ್ರ ವಿನ್ಯಾಸ, ಅಭಿನಯ, ರಂಗ ವಿನ್ಯಾಸ ಹೊಂದಿದ ಈ ನಾಟಕ, ಇತಿಹಾಸವನ್ನು ಹೊಸದಾಗಿ ಕಟ್ಟುವ ಒಂದು ಯಶಸ್ವಿ ಪ್ರಯತ್ನ.

ಹೊಸ ತಂತ್ರಜ್ಞರು ನಟರು, ಯಾರಿಗೇನು ಕಡಿಮೆ ಇಲ್ಲ ಮತ್ತು ಯಾವುದೇ ನೆರಳಿನ ಹಂಗಿಲ್ಲದೇ ತನ್ನತನವನ್ನು ಸಾಬೀತು ಪಡಿಸುವ ಪ್ರಯೋಗವಿದು. ಸಮುದಾಯ, ತುಘಲಕ್ ಪ್ರಯೋಗದ ಒಂದು ಸಿದ್ಧಮಾದರಿಯನ್ನು ಮುರಿದು, ಹೊಸತನ್ನು ಕಟ್ಟಿದೆ. ನಾಟಕ ಕೃತಿಯ ರಂಗ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಮುದಾಯ, ಬೆಂಗಳೂರು ತಂಡಕ್ಕೆ, ತಂತ್ರಜ್ಞರಿಗೆ, ಕಲಾವಿದರಿಗೆ ರಂಗಪ್ರೇಮಿಗಳು ಕೃತಜ್ಙತೆ ಸಲ್ಲಿಸಲೇಬೇಕು.
-ಡಾ|| ವಿಜಯಮ್ಮ
ಇಪ್ಪತ್ತೈದು ಬಾರಿ ‘ತುಘಲಕ್’
ದೆಹಲಿಯ ಚಕ್ರವರ್ತಿಯೆಂದು ಚರಿತ್ರಕಾರರು ನಮ್ಮನ್ನೆಲ್ಲ ನಂಬಿಸಿದ್ದ ತುಘಲಕನನ್ನು ಓರ್ವ ಅಪ್ರತಿಮ ಆಡಳಿತಗಾರ ಎಂದು ದಾಖಲಿಸುವ ಜೊತೆಗೇ ಆತನಿಗೆ ಐಲು ದೊರೆ, ಕನಸುಗಾರ, ನಿರ್ದಯಿ, ಕ್ರೂರಿ ಇತ್ಯಾದಿಯಾಗಿ ವಿಶೇಷಣಗಳನ್ನೂ ದಯಪಾಲಿಸಿದ್ದಾರೆ. ಇತಿಹಾಸಕಾರರಿಗೆ ಆತ ಯಾವ ಬಗೆಯಲ್ಲಿ ಸವಾಲಾಗಿದ್ದಾನೋ, ಅದೇ ಬಗೆಯಲ್ಲಿ ಶತಮಾನದಷ್ಟು ಹಿಂದೆ ಕಾರ್ನಾಡರು ರಚಿಸಿದ್ದ ತುಘಲಕ್ ನಾಟಕವು ನಾಟಕ ಭಾರತದ ಬಹುತೇಕ ಎಲ್ಲ ನಿರ್ದೇಶಕರುಗಳಿಗೆ, ಕಲಾ ನಿರ್ದೇಶಕರುಗಳಿಗೆ, ನಟ ನಟಿಯರಿಗೆ, ಬೆಳಕು ತಜ್ಞರಿಗೆ, ರಂಗ ವಿನ್ಯಾಸಕಾರರಿಗೆ ಸಾರ್ವಕಾಲಿಕ ಸವಾಲು ಆಗಿಯೇ ಉಳಿದುಕೊಂಡಿದೆ. ಆದ್ದರಿಂದಲೇ ಈ ನಾಟಕದ ಪ್ರದರ್ಶನವು ನಮ್ಮ ಕಾಲದ ಸರ್ವೋತ್ತಮ ಸಮರ್ಥ ನಟ ನಟಿಯರ ಸಂಗಮದಲ್ಲಿದ್ದಾಗಲೂ ಎರಡನೇ ಪ್ರಯೋಗಕ್ಕೂ ಮುಗ್ಗರಿಸಿ ಮಕಾಡೆ ಮಲಗಿದ್ದ ದಾಖಲೆಗಳಿವೆ. ಹೀಗಿದ್ದರೂ ಮಲಯಾಳಿ ಶ್ಯಾಮ್ ಕುಟ್ಟಿ ಹಾಗೂ ಕನ್ನಡಿಗ ಡಾ. ಶ್ರೀಪಾದ್ ಭಟ್ಟರು ‘ಸಮದಾಯ’ಕ್ಕಾಗಿ ‘ತುಗಲಕ್’ ಜೊತೆಗೆ ಆಡಿದ ‘ಚದುರಂಗ’ದಾಟವು ಇದೀಗ ಇಪ್ಪತ್ತೈದನೇ ಪ್ರಯೋಗಕ್ಕೆ ಸಜ್ಜುಗೊಂಡಿರುವುದು ಸಂತಸದ ಸಂಗತಿ. ರಂಗದ ‘ಮುನ್ನೆಲೆ’ ಮತ್ತು ‘ಹಿನ್ನೆಲೆ’ಯಲ್ಲಿರುವ ಎಲ್ಲ ಕಲಾವಿದರಿಗೆ ಅಭಿನಂದನೆಗಳು.
-ಬೊಳುವಾರು ಮೊಹಮ್ಮದ್ ಕುಂಞ
 

‍ಲೇಖಕರು G

24 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading