ಹಿಂತಿರುಗುವ ಹೆಜ್ಜೆಗಳು!
ದಿನದ ಸಮಯಕ್ಕಿಂತ ತುಸು ಬೇಗವೇ ಎದ್ದಿದ್ದೆ ಅಂದು. ಬೆಳಕಾಗುವ ಮುನ್ನವೇ ಸ್ನಾನ ಮುಗಿಸಿ, ತಯಾರಾಗಿ ನಾವಿದ್ದ ಕ್ಲಸ್ಟರ್ ಅನ್ನು ಇನ್ನೊಂದು ಸುತ್ತು ಸುತ್ತಲು ಹೊರಟೆ. ಅಲ್ಲಿಲ್ಲಿ ಮತ್ತಷ್ಟು ಕ್ಲಿಕ್ ಗಳು, ಮತ್ತೆ ಉದಯರವಿಯೊಂದಿಗೆ ಏಕಾಂತದ ಘಳಿಗೆಗಳು.. ಎಲ್ಲ ಮುಗಿಸಿ ಟೆಂಟ್ ಗೆ ಬರುವಷ್ಟರಲ್ಲಿ ನಂದನ್ ಎದ್ದಿದ್ದ. ಲಗು-ಬಗೆಯಿಂದ ಅವನನ್ನೂ ಹೊರಡಲು ಅಣಿಗೊಳಿಸಿ, ಅವನ ಫೋಟೋಗ್ರಾಫಿಗೂ ಒಂದಿಷ್ಟು ಅವಕಾಶ ಕೊಟ್ಟು, ಕೊನೆಯ ಬಾರಿ ಎನ್ನುವಂತೆ ಟೆಂಟ್ ಅನ್ನು ಒಮ್ಮೆ ಗಾಢವಾಗಿ ದಿಟ್ಟಿಸಿ ಬೆಳಗಿನ ಉಪಹಾರಕ್ಕೆ ಹೊರಟೆ, ನಂದನ್ ನೊಟ್ಟಿಗೆ. ನಂತರ ಲಗೇಜ್ ನೊಡನೆ ವಾಪಸ್ ಭುಜ್ ಕಡೆಗೆ ಪಯಣ.
ಮಾರ್ಗ ಮಧ್ಯದಲ್ಲಿ ಸ್ಥಳೀಯ ಕಲಾವಿದರು ವಾಸಿಸುವ ಒಂದು ಕಲಾಗ್ರಾಮಕ್ಕೆ ಭೇಟಿ. ಸ್ಥಳೀಯ ಕಲಾವಿದರ ಮನೆಗಳನ್ನು, ಅವರ ಕಾರಿಗರಿಗಳನ್ನು, ಅವುಗಳನ್ನು ಮಾಡುವ ಪ್ರಕ್ರಿಯೆಯನ್ನು ನೋಡುವ ಅವಕಾಶ. ಎಲ್ಲಿ ನೋಡಿದರಲ್ಲಿ ಬಣ್ಣ! ಚಿಕ್ಕ ಹುಡುಗಿಯರಿಂದ, ಮುಪ್ಪಾನು ಮುದುಕಿಯರ ವರೆಗೆ ಎಲ್ಲರೂ ಮಾರಾಟದ ಭರಾಟೆಯಲ್ಲಿ. ಅಲಂಕಾರಿಕ ಆಭರಣಗಳು, ಬೊಂಬೆಗಳು, ಗೋಡೆ ಫಲಕ, ಕನ್ನಡಿಗಳು, ರಜಾಯಿ ಇತ್ಯಾದಿಗಳು ಮಾರಾಟಕ್ಕಿದ್ದ ವಸ್ತುಗಳು. ಆ ಹಳ್ಳಿಯ ಆಟ-ನೋಟ ಚಂದವಿತ್ತು. ಆದರೆ ಅಲ್ಲಿನ ಜನ ಫೋಟೋ ಕ್ಲಿಕ್ಕಿಸಬಾರದೆಂದು ಹೇಳುತ್ತಿದ್ದರು, ಪುಟ್ಟ-ಪುಟ್ಟ ಚಂದದ ಜೀವಂತ ಬೊಂಬೆಗಳು ಮಾತ್ರ ಪೋಸ್ ಕೊಡಲು ಸದಾ ಸಿದ್ಧ! ಮಾರಾಟದಲ್ಲಿ ಮಗ್ನಳಾಗಿದ್ದ ಆ ಹುಡುಗಿಯ ನೋಟಕ್ಕೆ ನಾ ಕಳೆದೇ ಹೋದೆ. ಅದೆಷ್ಟು ಆಭರಣಗಳು ಅವಳ ಮುಖದ ತುಂಬಾ, ತಲೆಯ ತುಂಬಾ! ಹಾಗೇ ನಡೆದಾಡುತ್ತಿರುವಾಗ, ಮನೆಯೊಂದರಲ್ಲಿ ಫಳ-ಫಳ ಹೊಳೆಯುವ ಗಾಜಿನಿಂದಲಂಕೃತ ತೊಟ್ಟಿಲಲ್ಲಿ ತೂಗುವ ಮಗು, ಮನೆ ಹೊರಗೆ ಅಂಗಳದಲ್ಲಿ ಮಲಗಿರುವ ವಯಸ್ಸಾದ ಅಜ್ಜಿ.. ಪಕ್ಕದಂಗಳದಲ್ಲಿ ಕೇಕೆ ಹಾಕಿಕೊಂಡು ಆಡುತಿದ್ದ ಪುಟ್ಟ ಕಂದಮ್ಮಗಳು… ಮೌನ ಕವಿತೆ! ಅದರ ಭಾವದೊಡನೆ ಬಸ್ ಗೆ ಮರಳಿದ ನಾನು. ಭುಜ ತಲುಪಿದಾಗ ಸಮಯ ೧೨ ಗಂಟೆ. ಮತ್ತೆ ರೈಲ್ವೆ ಸ್ಟೇಶನ್ ನಿಂದ ಏರ್ಪೋರ್ಟ್ ಕಡೆ ಪಯಣ. ಸರಳ, ಸುಗಮ ಚೆಕ್-ಇನ್ , ಸೆಕ್ಯುರಿಟಿ ಚೆಕ್ ಮತ್ತು ಮುಂಬೈ ವಿಮಾನಕ್ಕೆ ಕಾಯುವಿಕೆ, ಮಧ್ಯಾನದ ಮ್ಯಾಗಿ ಭೋಜನ.
ಮುಂಬೈ ತಲುಪಿದಾಗ ಮುಸ್ಸಂಜೆ ಸಮಯ. ಮತ್ತೆ ಬೆಂಗಳೂರಿಗೆ ವಿಮಾನವಿದ್ದದ್ದು ನಡುರಾತ್ರಿಯಲ್ಲಿ. ಮಧ್ಯೆ ತುಂಬಾ ಗಂಟೆಗಳ ಕಾಲಾವಕಾಶ. ಭುಜ್ ನಿಂದ ಬರುವಾಗ ವಿಮಾನದಲ್ಲಿದ್ದ ಸಹ ಪಯಣಿಗರೊಬ್ಬರು ಹೇಳಿದಂತೆ ಹತ್ತಿರದ ಜುಹೂ ಬೀಚ್ ಗೆ ಹೋಗಿ ಬರುವುದಾ? ಎಂದು ಮನಸಲ್ಲೇ ಲೆಕ್ಕಾಚಾರ ಮಾಡಿ, ಮುಂಬೈ ವಿಮಾನ ನಿಲ್ದಾಣದ ಹೊರಗೆ ಬಂದು ಬಿಟ್ಟೆ. ಹ್ಯಾಂಡ್ ಬ್ಯಾಗ್ ಬಿಟ್ಟರೆ ಬೇರೆ ಲಗೇಜುಗಳ ಚಿಂತೆಯಿರಲಿಲ್ಲ. ಪ್ರಿಪೇಯ್ಡ್ ಟ್ಯಾಕ್ಸಿಯಲ್ಲಿ ಜುಹೂ ಬೀಚ್ ಗೆ ಹೊರಟರೆ ಬೆಂಗಳೂರನ್ನು ಮೀರಿಸುವಂಥ ಟ್ರಾಫಿಕ್. ಮಾರ್ಗ ಮಧ್ಯೆ ಮುಂಬೈನ ಸ್ನೇಹಿತರಿಗೊಂದಿಷ್ಟು ಫೋನಾಯಿಸಿ ಹೊತ್ತು ಕಳೆದದ್ದು. (ಒಂಥರಾ ಸುರಕ್ಷತಾ ಟೆಕ್ನಿಕ್ ಸಹ ಅದು!) ಜುಹೂ ಬೀಚ್ ತಲುಪಿದಾಗ ಕತ್ತಲಾಗಿತ್ತು. ಸಮುದ್ರ ಸಮೀಪಿಸುತ್ತಿದ್ದಂತೆ ತಣ್ಣನೆ ಗಾಳಿ, ಮುಂಬೈ ಬದುಕಿನ ಅತಿ ಚಿಕ್ಕ ರಿಲ್ಯಾಕ್ಸ್ಡ್ ಝಲಕ್. ಅದನ್ನು ಬಾನೇರಿ ತಣ್ಣಗೆ ನೋಡುತ್ತಿದ್ದ ಚಂದ್ರ, ಶಿವಾಜಿ ಪುತ್ಥಳಿಯ ಹಿಂದಿನಿಂದ. ಯಾಕೋ ಸಮುದ್ರದ ಬಳಿ ಹೋಗುವ, ನೀರಿನಲ್ಲಿ ಕಾಲು ಮುಳುಗಿಸುವ ಮನಸಿರಲಿಲ್ಲ ಆಗ.
ನಂದನ್ ಗೆ ನಮೂನೆ-ನಮೂನೆ ಆಟಿಕೆಗಳು, ಆಯ್ಕೆ ಮಾಡಿಕೊಳ್ಳಲು. ಅದು ಬೇಕು, ಇದು ಬೇಕು, ಬೇಡಿಕೆಗಳ ಪಟ್ಟಿ ಕ್ಷಣ-ಕ್ಷಣಕ್ಕೂ ಉದ್ದವಾಗುತ್ತಿತ್ತು. ಆ ಪಟ್ಟಿಯಿಂದಲೇ ಒಂದನ್ನು ಆಯ್ದು ಅವನಿಗೆ ಕೊಡಿಸಿದರೆ, ಅದನ್ನಾಡಲು ಅವನು ಸಮುದ್ರ ದಂಡೆಯಲ್ಲಿ ಓಡಿದ. ನಾನಲ್ಲೇ ಕಾಲು ಚಾಚಿ ಕೆಲ ಹೊತ್ತು ಕುಳಿತಿದ್ದೆ. ಮರಳಲ್ಲಾಡುವ ಮಕ್ಕಳು, ಪೀಪಿ ಮಾರುವವರು,ಚಹಾ ಮಾರುವವರು, ಸೋಪಿನ ಗುಳ್ಳೆ ಬಿಡುವವರು, ಶೇಂಗಾ ಮಾರುವವರು, ಬಂಬೈ ಮಿಠಾಯಿ ಮಾರುವವರು, ವಾಯು ವಿಹಾರಕ್ಕೆಂದು ಬಂದ ಜನ, ಮೇಲೆ ಹಾರುವ ವಿಮಾನಗಳು, ಆಟವಾಡಿಸುವವ ಹೇಳಿದಂತೆ ಚೇಷ್ಟೆ ಮಾಡುತ್ತಿದ್ದ ಮಂಗ, ಕೇಳಲೋ ಬೇಡವೋ ಎಂದು ಕೇಳಿ ಬರುತ್ತಿದ್ದ ಸಮುದ್ರದ ಭೋರ್ಗರೆತ, ಬದುಕಲ್ಲಿ ಜೀವಂತ!
ನಂತರ ಅಲ್ಲೇ ಪಕ್ಕದಲ್ಲಿದ್ದ ಝಗ-ಮಗಿಸುವ, ಬಣ್ಣ-ಬಣ್ಣದ ಚಾಟ್ ಗಲ್ಲಿಯಲ್ಲಿ ಪಾವ್ ಭಾಜಿ, ಪಾನಿ ಪೂರಿ, ಮಸಾಲ ಪುರಿ, ಗೋಲಾ ಎಲ್ಲವನ್ನೂ ಸ್ವಾಹಾ ಎಂದೆನಿಸಿ, ಮತ್ತೆ ವಿಮಾನ ನಿಲ್ದಾಣದ ಹಾದಿ ಹಿಡಿದದ್ದು. ಅಲ್ಲಿಗೆ ಮರಳಿದಾಗ ವಿಮಾನ ನಿಲ್ದಾಣ ಖಾಲಿ ಹೊಡೆಯುತ್ತಿತ್ತು. ನಂದನ್ ಗೆ ನನಗೆ ಇಬ್ಬರಿಗೂ ನಿದ್ದೆ.. ಅಂತೂ-ಇಂತೂ ತೂಕಡಿಕೆಯಲ್ಲೇ ಸರಿಯಾದ ಸಮಯಕ್ಕೆ ಸರಿಯಾದ ವಿಮಾನವನ್ನೇ ಹತ್ತಿದ್ದು. ನಡುರಾತ್ರಿಯಾದ್ದರಿಂದ ವಿಮಾನದಲ್ಲೂ ನಿದ್ದೆ. ವಿಮಾನ ಬೆಂಗಳೂರಿನ ನೆಲ ಚುಂಬಿಸಿ, ನಾವು ಕೆಳಗಿಳಿದಾಗ ಬೆಳಗಿನ ಜಾವ. ನಮ್ಮ ಲಗೇಜ್ ಗಳನ್ನು ಪಡೆದು ಮತ್ತೆ ಟ್ಯಾಕ್ಸಿಏರಿ ಮನೆ ಕಡೆ ಹೊರಟಾಗ ಚಂದ್ರನಿನ್ನೂ ಬಾನಲ್ಲಿ ಹೊಳೆಯುತ್ತಿದ್ದ. ನಾ ಮತ್ತೆ ಗುನುಗಿದೆ ‘ ಬಾನಿಂದ ಬಾ ಚಂದಿರ… ಈ ಭೂಮಿಯೇ ಸುಂದರ … ‘
(ಮುಗಿಯಿತು)






ಫೋಟೋಗಳು & ನಿಮ್ಮ ನಿರೂಪಣೆ ನಮ್ಮ ಮುಂದೆ ’ರಣ್ ಉತ್ಸವ’ವನ್ನು ಚಿತ್ರೀಕರಿಸಿಕೊಡುತ್ತಿವೆ.. ಇದಿಲ್ಲಿಗೆ ನಿಲ್ಲದಿರಲಿ.. ಈಗಾಗಲೇ ಸುತ್ತು ಬಂದಿರುವ ಇತರೆ ಊರುಗಳು ನಮಗೆ ದಕ್ಕಲಿ… 🙂 🙂
🙂