ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಘುನಾಥ ಚ ಹ ಕಂಡಂತೆ ‘ಭರತದ ಮಧ್ಯಾಹ್ನ’

ರಘುನಾಥ ಚ ಹ

ಜೀವದ ಘನತೆ ಮತ್ತು ಜೀವನದ
ಸಾರ್ಥಕತೆಯ ಶೋಧದ ಕಥೆಗಳು

ಕವಿ-ಕಥೆಗಾರ ಚಿಂತಾಮಣಿ ಕೊಡ್ಲೆಕೆರೆ ಅವರ ಬರವಣಿಗೆ, ಮಾಗಿದ ನಂತರವಷ್ಟೇ ತೊಟ್ಟು ಕಳಚಿಕೊಳ್ಳುವ ಹಣ್ಣಿನ ಪ್ರಕೃತಿ ಸಹಜ ನಡವಳಿಕೆಯಂತೆ ಸಹಜವಾದುದು. ಓದುಗರನ್ನು ಮೆಚ್ಚಿಸುವುದು ಅಥವಾ ರಂಜಿಸುವುದು ಅವರ ಬರವಣಿಗೆಯ ಉದ್ದೇಶವಲ್ಲ. ತನ್ನ ಅನುಭವ ಮತ್ತು ಜಿಜ್ಞಾಸೆಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಮೂಲಕ, ಬದುಕಿನ ಸಾಧ್ಯತೆಗಳನ್ನು ಸಾಧ್ಯವಾದಷ್ಟೂ ನಿಚ್ಚಳಗೊಳಿಸುವುದು ಅವರ ಒಟ್ಟೂ ಬರವಣಿಗೆಯ ಉದ್ದೇಶವಿದ್ದಂತಿದೆ. ಬರವಣಿಗೆ ಎನ್ನುವುದು ಬರಹಗಾರ ಮತ್ತು ಸಹೃದಯರ ನಡುವಿನ ಅನುಸಂಧಾನ ಆಗಿರುವಂತೆಯೇ, ಬರೆಯುವವನ ಆತ್ಮಸಂತೋಷದ ಮಾರ್ಗವೂ ಹೌದು ಎನ್ನುವುದನ್ನು ಚಿಂತಾಮಣಿ ಕೊಡ್ಲೆಕೆರೆ ಅವರ ಬರಹಗಳು ಸೂಚಿಸುತ್ತಿರುವಂತೆ ಕಾಣಿಸುತ್ತದೆ. ಈ ಸಾಧ್ಯತೆಯೇ, ಇಪ್ಪತ್ತೊಂದು ಕಥೆಗಳ ಪ್ರಸಕ್ತ ಸಂಕಲನದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ.
ಕಥನದ ಸ್ವಾರಸ್ಯ ಅಥವಾ ರೋಚಕತೆಯನ್ನು ಓದುಗರಿಗೆ ದಾಟಿಸುವುದು ‘ಭರತದ ಮಧ್ಯಾಹ್ನ’ ಸಂಕಲನದ ಕಥೆಗಳ ಉದ್ದೇಶವಲ್ಲ. ನಿರ್ದಿಷ್ಟ ಸಂದರ್ಭವೊ೦ದರ ಭಿತ್ತಿಯನ್ನು ಕಾಣಬಹುದಾದರೂ, ಈ ಕಥೆಗಳು ಬದುಕಿನ ಹಲವು ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನಗಳಾಗಿ ಗಮನಸೆಳೆಯುತ್ತವೆ. ಜೀವದ ಘನತೆ ಮತ್ತು ಜೀವನದ ಸಾರ್ಥಕತೆಯ ಹಂಬಲವನ್ನು ಈ ಸಂಕಲನದ ಕಥೆಗಳು ಬೇರೆ ಬೇರೆ ನೆಲೆಗಳಲ್ಲಿ ಚರ್ಚಿಸುತ್ತವೆ.

‘ಭರತದ ಮಧ್ಯಾಹ್ನ’ ಸಂಕಲನದ ಬಹುತೇಕ ಕಥೆಗಳು ಇಬ್ಬರು ಅಪರಿಚಿತ ವ್ಯಕ್ತಿಗಳ ನಡುವಿನ ಮುಖಾಮುಖಿಯಲ್ಲಿ ಘಟಿಸುತ್ತವೆ ಅಥವಾ ದೀರ್ಘ ಕಾಲದ ನಂತರ ಭೇಟಿಯಾದವರಿಗೆ ಸಂಬ೦ಧಿಸಿವೆ. ಈ ಭೇಟಿ ವ್ಯಕ್ತಿಗಳ ಭೇಟಿಯಾಗಿರುವಂತೆಯೇ, ವ್ಯಕ್ತಿಯೊಬ್ಬ ಊರಿಗೆ ಮರಳುವ ಇಲ್ಲವೇ ಬಾಲ್ಯದ ಸಂಗತಿಗಳಿಗೆ ಮರಳಿದಾಗಿನ ವೃತ್ತಾಂತಗಳೂ ಆಗಿವೆ. ಭೇಟಿಯಾಗುವ ವ್ಯಕ್ತಿಗಳಲ್ಲೊಬ್ಬರು ಶಾಲಾ ಮಾಸ್ತರರಾಗಿರುವುದು ಅಥವಾ ಸಮಾಜದ ಪಾಲಿಗೆ ಮಾಸ್ತರರಾಗಿರುವುದು ಕೂಡ ಕುತೂಹಲಕರ. ಬದುಕಿನ ಹಲವು ಸಾಧ್ಯತೆಗಳ ಹುಡುಕಾಟದಂತೆ ಕಾಣಿಸುವ ಈ ಕಥೆಗಳು ಒಂದು ಇನ್ನೊಂದರಲ್ಲಿ ಚಾಚಿಕೊಂಡಿರುವ೦ತೆಯೂ ಕಾಣಿಸುತ್ತವೆ. ಈ ಮಾತುಗಳನ್ನು ‘ಅತಿಥಿ’ ಮತ್ತು ‘ಅನಂತಮಾಸ್ತರರ ರಾಮಕಥಾ’ ಕಥೆಗಳ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ‘ಅನಂತಮಾಸ್ತರರ ರಾಮಕಥಾ’ ಕಥೆಯಲ್ಲಿ ಬಹುಕಾಲದ ನಂತರ ಸಿಕ್ಕ ಮಾಸ್ತರರ ಮನೆಗೆ ಶಿಷ್ಯ ಆಹ್ವಾನಿತನಾಗಿ ಹೋಗುತ್ತಾನೆ. ‘ಅತಿಥಿ’ ಕಥೆಯಲ್ಲಿ ವಿಚಾರಗೋಷ್ಠಿಯೊಂದರಲ್ಲಿ ಎದುರಾಗುವ ಹಿರಿಯ ನಾಗರಿಕರೊಬ್ಬರ ಮನೆಗೆ ನಿರೂಪಕ ಹೋಗುತ್ತಾನೆ. ಆತಿಥೇಯರಿಬ್ಬರೂ ಅವಿವಾಹಿತರು, ಒಂಟಿಯಾಗಿ ಬದುಕುತ್ತಿರುವವರು. ಸಮಾಜಕ್ಕೆ ಗಂಧದಚಕ್ಕೆಯಾಗಿ ಬದುಕುತ್ತಲೇ, ಸಮಾಜದೊಂದಿಗೆ ಅಂತರವನ್ನೂ ಸಾಧಿಸಿರುವವರು. ಈ ಇಬ್ಬರೂ ಎತ್ತುವ ಪ್ರಶ್ನೆಗಳು, ಆಯಾ ಕಥೆಗಳನ್ನು ಮೀರಿ, ಇಲ್ಲಿನ ಎಲ್ಲ ಕಥೆಗಳ ತಾತ್ವಿಕತೆಯನ್ನು ಸೂಚಿಸುವಂತಿವೆ.

ರಾಮಕಥೆಯ ಅನಂತ ಮಾಸ್ತರರ ಬದುಕಿಗೊಂದು ಆದರ್ಶದ ನೆಲೆಯಿದೆ. ಅನಾಮಧೇಯ ಗುರುಗಳ ಮೂಲಕ ದೊರೆತ ರಾಮಾಯಣ ಅವರ ಬದುಕಿನ ಸೂತ್ರವಾಗಿ ಸ್ರೋತವಾಗಿ ಪರಿಣಮಿಸಿದೆ. ತಮಗೆ ದಕ್ಕಿದ ರಾಮಕಥೆಯನ್ನು ಕಾದಂಬರಿ ರೂಪದಲ್ಲಿ ಪ್ರಕಟಪಡಿಸಲು ಮಾಸ್ತರರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ, ಭಕ್ತಿ ಮತ್ತು ಸೃಜನಶೀಲ ಶಕ್ತಿ ಎರಡರ ಅನುಸಂಧಾನದ೦ತಿದೆ. ‘ಇಲ್ಲೀಗ ತಾಕಲಾಟ ನಿಮ್ಮ ಭಕ್ತಿಗೆ ಮತ್ತು ಸೃಜನಶೀಲ ಶಕ್ತಿಗೆ. ಇದರಲ್ಲಿ ಯಾವುದಕ್ಕೆ ಜಯವಾದರೂ ನನಗೆ ಸಂತೋಷವೇ’ ಎನ್ನುವ ಶಿಷ್ಯನ ಮಾತಿಗೆ ಗುರುಗಳು ನೀಡುವ ಉತ್ತರ: ‘ಎರಡೂ ಗೆಲ್ಲುವ ಹಾದಿ ಹುಡುಕುತ್ತಾ ಇದ್ದೇನೆ ನಾನು.’ ಭಕ್ತಿ ಸೃಜನಶೀಲ ಶಕ್ತಿಯ ಮೂಲಕ ಜೀವಪರವಾಗಬೇಕು ಎನ್ನುವ ಇಂಗಿತ ಮಾಸ್ತರರ ಮಾತಿನಲ್ಲಿರುವಂತಿದೆ. ವಿವರಿಸಲು ಹೋದರೆ ಅರ್ಥ ಕೆಡುವಂತಿರುವ ಮಾಸ್ತರರ ಮಾತಿನಲ್ಲಿ ಬಹುದೊಡ್ಡ ತಿಳಿವಳಿಕೆಯಿದೆ ಹಾಗೂ ಆ ತಿಳಿವಳಿಕೆ ಈ ಕಾಲಕ್ಕೆ ಅಗತ್ಯವಾದುದಾಗಿದೆ.

‘ಅತಿಥಿ’ ಕಥೆಯ ಹಿರಿಯರು ಕೂಡ ಅನಂತ ಮಾಸ್ತರರಂತಹವರೇ. ಸಾಹಿತ್ಯಿಕ ಚಳವಳಿಗಳ ಕುರಿತು ಅವರು ನಡೆಸುವ ಚರ್ಚೆ, ತಲೆಮಾರುಗಳ ನಡುವಿನ ಅಂತರದ ಕುರಿತ ಜಿಜ್ಞಾಸೆಯೂ ಹೌದು. ‘ನಿಮ್ಮ ನವ್ಯೋತ್ತರದಲ್ಲಿ ನಾನಿಲ್ಲವೋ? ನನ್ನ ಸಂಕಟ ಮತ್ತು ದರ್ಶನ ನಿಮ್ಮನ್ನು ತಾಕುವುದಿಲ್ಲವೋ?’ ಎನ್ನುವ ಅವರ ಪ್ರಶ್ನೆಗೆ ಉತ್ತರ ಹೇಳಬೇಕಾದುದು ಕಥೆಯಲ್ಲಿನ ನಿರೂಪಕನಷ್ಟೇ ಅಲ್ಲ; ಅದು ಕಥೆ ಓದುವವರು ಉತ್ತರಿಸಬೇಕಾದುದ ಪ್ರಶ್ನೆಯೂ ಹೌದು. ‘ಬರಹಗಾರರು ನೀವು, ಹಣೆಪಟ್ಟಿಗಳ ಬಂಧನವಿಲ್ಲದ ಸಂಪೂರ್ಣ ಸ್ವಾತಂತ್ರ್ಯದಲ್ಲಿ ಬರೆಯಬೇಕಲ್ಲವೆ, ಮುಕ್ತರಾಗಿ, ನಿರ್ಭಯವಾಗಿ?’ ಎನ್ನುವ ಉದ್ಗಾರಕ್ಕೆ, ಈ ಹೊತ್ತಿನ ಸಾಹಿತ್ಯಸಂಕಟಗಳ ಹಿನ್ನೆಲೆಯಲ್ಲಿ ವಿಶೇಷ ಮಹತ್ವವಿದೆ.

‘ನದಿಯ ಹಾಗೆ, ಕೆಂಗುಲಾಬಿಯ ಹಾಗೆ…’ ಕಥೆಯಲ್ಲೂ ಒಬ್ಬ ಮಾಸ್ತರರಿದ್ದಾರೆ. ಅವರೂ ಅವಿವಾಹಿತರು. ಊರಿಗೆ ಬೇಕಾದವರು. ಊರಿಗಾಗಿ ಬದುಕುವವರು. ಪ್ರೇಮಪತ್ರ ಬರೆದುಕೊಡುವಂತೆ ದುಂಬಾಲು ಬೀಳುವ ಶಿಷ್ಯನೊಬ್ಬ ಮಾಸ್ತರರ ನೆನಪುಗಳ ರಮ್ಯ ಖಾಸಾಪುಟವೊಂದನ್ನು ಕೆದಕಿಬಿಡುತ್ತಾನೆ. ಎರಡು ತಲೆಮಾರುಗಳ ಮನಸ್ಥಿತಿಯನ್ನು ಮುಖಾಮುಖಿಯಾಗಿಸುವ ಈ ಕಥೆ, ಕಾವ್ಯದ ಚೆಲುವನ್ನೂ ಬಿಗುವನ್ನೂ ಒಳಗೊಂಡಿರುವ ರಚನೆ.

‘ಅತಿಥಿ’ ಹಾಗೂ ‘ನದಿಯ ಹಾಗೆ, ಕೆಂಗುಲಾಬಿಯ ಹಾಗೆ…’ ಕಥೆಗಳಲ್ಲಿರುವ ಸಾಹಿತ್ಯ ಮತ್ತು ಬದುಕಿನ ಸಾಧ್ಯತೆಗಳನ್ನು ತಳುಕು ಹಾಕುವ ಪ್ರಯತ್ನ ಮತ್ತಷ್ಟು ಯಶಸ್ವಿಯಾಗಿ ವಿಸ್ತರಣೆಗೊಂಡಿರುವುದು ‘ಶ್ರೀನಿವಾಸನ್ ಹೇಳಿದ ಕಥೆ’ಯಲ್ಲಿ. ‘ಕಥೆಯನ್ನು ಹುಡುಕಿ ಹೊರಟ ಕಥೆಗಳು’ ಎನ್ನುವ, ಶೀರ್ಷಿಕೆಯ ಅಡಿ ಟಿಪ್ಪಣಿಯನ್ನು ಸಮರ್ಥಿಸುವಂತೆ, ನಿರೂಪಣೆಗೊಳ್ಳಬೇಕಾದ ಕಥೆಯೊಂದಿಗೆ ಉಪಕಥೆಗಳು ಸೊಗಸಾಗಿ ಹೆಣೆದುಕೊಂಡಿವೆ. ಕಥೆಯೊಂದರ ಹಲವು ಆಯಾಮಗಳಂತೆ, ರೂಪಾಂತರಗಳ೦ತೆ ಓದಿಸಿಕೊಳ್ಳುವ ‘ಶ್ರೀನಿವಾಸನ್ ಹೇಳಿದ ಕಥೆ’, ಬದುಕಿನ ಹಲವು ಚಾಚುಗಳಂತೆಯೂ ಕಾಣಿಸುತ್ತದೆ.

ಕೇಶಪ್ಪಚ್ಚಿ ಎನ್ನುವ ಬೆಳೆದ ಹುಡುಗನ ನಿಗೂಢ ಭಾವಲೋಕದ ಕಥೆ, ಸಂಕಲನದ ಶೀರ್ಷಿಕೆಯೂ ಆಗಿರುವ ‘ಭರತದ ಮಧ್ಯಾಹ್ನ’. ಹುಡುಗರ ಪಾಲಿಗೆ ಕೇಶಪ್ಪಚ್ಚಿ ಹೀರೊ. ದೊಡ್ಡವರ ಪಾಲಿಗೆ, ನೆರವಿಗೆ ಒದಗಿಬರುವ ಸಹಾಯಕ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ, ಇದ್ದಕ್ಕಿದ್ದಂತೆ ಮರೆಯಾಗುವ ಕೇಶಪ್ಪಚ್ಚಿ, ತನ್ನ ಗೆಳೆಯರೊಂದಿಗೆ ನಡೆಸುವ ದೋಣಿಸಾಹಸದ ಸನ್ನಿವೇಶ, ಅವನು ಆವರೆಗೆ ಬಿಂಬಿಸಿಕೊ೦ಡಿದ್ದ ಸಾಹಸಮಯ ವ್ಯಕ್ತಿತ್ವದ ಟೊಳ್ಳುತನವನ್ನು ಎಲ್ಲರೆದುರು ಬಯಲಿಗೆ ಮಾಡುತ್ತದೆ. ಪ್ರಾಣಾಪಾಯಕ್ಕೆ ಸಿಕ್ಕ ಹುಡುಗರು ಹೇಗೋ ದಡ ಸೇರುತ್ತಾರೆ. ಆದರೆ, ಕಥೆಯ ಕೊನೆಯಲ್ಲಿ ಸ್ಫೋಟಗೊಳ್ಳುವ ಕೇಶಪ್ಪಚ್ಚಿಯ ಅಸಹಾಯಕತೆ ಎಲ್ಲರ ಮನಸ್ಸಲ್ಲೂ ವಿಷಾದ ಹುಟ್ಟಿಸಿಬಿಡುತ್ತದೆ. ಅಣ್ಣಂದಿರ ಕುರಿತಾಗಿ ಅವನ ಮನಸ್ಸಿನೊಳಗೆ ಉಳಿದಿರುವ ಭಯಕ್ಕೆ ಕಥೆಯಲ್ಲಿ ಸ್ಪಷ್ಟ ಕಾರಣವಿಲ್ಲ. ಸೋದರ ಸಂಬ೦ಧಗಳಲ್ಲಿನ ಕ್ರೌರ್ಯವೇ ನಮ್ಮ ಅಳತೆಗೆ ಮೀರಿದ್ದಾಗಿ, ಸಂಕೀರ್ಣವಾಗಿ ಕಾಣುವಾಗ, ಸಮಾಜದಲ್ಲಿ ಹೆಪ್ಪುಗಟ್ಟಿರುವ ಕ್ರೌರ್ಯವನ್ನು ಅರ್ಥ ಮಾಡಿಕೊಳ್ಳುವುದೆಂತು? ‘ಭರತದ ಮಧ್ಯಾಹ್ನ’ದ ಕೇಶಪ್ಪಚ್ಚಿ ನಮ್ಮೆಲ್ಲರೊಳಗೂ ಇರುವ ವ್ಯಕ್ತಿಯೇ ಹೌದೆನ್ನಿಸಿಬಿಟ್ಟು, ಅವನ ಅಸಹಾಯಕತೆ ಮತ್ತು ತಳಮಳ ನಮ್ಮದೂ ಅನ್ನಿಸುತ್ತದೆ.

‘ದೇವರ ಮಾತು’ ಕಥೆಯ ಶ್ರೀನಿವಾಸ ಕೂಡ ಕೇಶಪ್ಪಚ್ಚಿಯಂಥವನೇ. ಮನೆಯಿಂದ ಹೊರದಬ್ಬಿಸಿಕೊಂಡು, ನೆಲೆ ಹುಡುಕಿಕೊಂಡು ಅಲೆಯುತ್ತಿರುವ ಅವನಿಗೆ ದೊರೆತಿರುವ ಆಸ್ತಿ, ದೇವತಾಮೂರ್ತಿಗಳು. ಆ ಮೂರ್ತಿಗಳೊಂದಿಗೆ ಊರೂರು ಅಲೆಯುತ್ತ, ಕೊನೆಗೊಂದು ಸ್ಥಳದಲ್ಲಿ ನೆಲೆಗೊಳ್ಳಬಹುದು ಅನ್ನಿಸಿದಾಗ, ‘ಈ ಜಾಗ ನಿಮಗೆ ಒಪ್ಪಿಗೆಯೇ?’ ಎಂದು ದೇವರುಗಳೊಂದಿಗೆ ಶ್ರೀನಿವಾಸ ಮಾತುಕತೆ ಆರಂಭಿಸುತ್ತಾನೆ. ಈ ಮಾತುಕತೆಯ ಕೊನೆಯಲ್ಲಿ, ದುಡಿದು ತಿನ್ನುವುದು ನಿನ್ನಿಂದ ಸಾಧ್ಯವಾಗದೆ ಹೋದರೆ, ‘ಈ ಸಮುದ್ರದಲ್ಲಿ ನಮ್ಮನ್ನು ಎಸೆದುಬಿಡು. ನಿನ್ನ ಹಾದಿ ನಿನಗೆ. ನಮ್ಮ ಹಾದಿ ನಮಗೆ’ ಎಂದು ದೇವರುಗಳು ಹೇಳುವುದು ಮಾರ್ಮಿಕವಾಗಿದೆ. ಶ್ರೀನಿವಾಸನಿಗೇನೊ ಭಾವುಕ ನೆಲೆಗಟ್ಟಿನಲ್ಲಾದರೂ ಆಸರೆಗೆ ದೈವಗಳಿವೆ. ಆ ಮಟ್ಟಿಗೆ ಕೂಡ ಕೇಶಪ್ಪಚ್ಚಿ ನತದೃಷ್ಟ.

ಕೇಶಪ್ಪಚ್ಚಿ, ಶ್ರೀನಿವಾಸರ ಸಾಲಿನಲ್ಲಿಯೇ ಗುರ್ತಿಸಬಹುದಾದ ಪಾತ್ರ ವೆಂಕಣ್ಣಭಾವನದು. ಗಂಡಿನ ಬಳಗಕ್ಕೂ ಸೇರದ, ಹೆಣ್ಣಿನ ಪೈಕಿಯೂ ಅಲ್ಲದ ವೆಂಕಣ್ಣ ಮದುವೆಯೊಂದರಲ್ಲಿ ಎಲ್ಲ ಜವಾಬ್ದಾರಿಗಳನ್ನೂ ಆಸ್ಥೆಯಿಂದ ನಿರ್ವಹಿಸುತ್ತಾನೆ. ಕೇಶಪ್ಪಚ್ಚಿಯಂತೆ ವೆಂಕಣ್ಣನ ಅಂತರ೦ಗದಲ್ಲೂ ಒಂದು ಸಂಕಟ ಇರುವಂತಿದೆ. ಮದುವೆ ಮುಗಿಸಿಕೊಂಡು ತನ್ನ ದಾರಿಯ ಹಿಡಿಯುವ ಆತನ ಮೇಲೆ ಕಳ್ಳತನದ ಆರೋಪ ಬರುತ್ತದೆ. ಆರೋಪ ಸುಳ್ಳೆನ್ನುವುದು ತಿಳಿದಾಗ, ಅನುಮಾನದಿಂದ ಹಿಡಿದು ನಿಲ್ಲಿಸಿದವರು ಕ್ಷಮೆ ಕೋರುತ್ತಾರೆ. ಆಗ ವೆಂಕಣ್ಣಭಾವ ಹೇಳುವ ಮಾತು: ‘ಸರಳತೆ ಸುಲಭವಲ್ಲ. ಬೇಗ ಅನುಮಾನಕ್ಕೊಳಗಾಗೋದು ಕೂಡ ಅದೇ.’ ಈ ಮಾತು ವೆಂಕಣ್ಣನನ್ನು ಶಂಕಿಸಿದವರಿಗಷ್ಟೇ ಅಲ್ಲ – ಕೇಶಪ್ಪಚ್ಚಿ, ವೆಂಕಣ್ಣ, ಶ್ರೀನಿವಾಸರಂಥವರನ್ನು ಅರ್ಥ ಮಾಡಿಕೊಳ್ಳಲು ಸೋತ ಒಟ್ಟಾರೆ ಸಮಾಜದ ಮನಸ್ಥಿತಿಯ ವಿಶ್ಲೇಷಣೆಯಂತಿದೆ.

ಚಿಂತಾಮಣಿ ಅವರ ಕಥೆಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಪಾತ್ರ ದೈವದ್ದು. ಈ ದೈವ, ಆತ್ಮಸಾಕ್ಷಿಯೂ ಹೌದು, ಆತ್ಮಬಂಧುವೂ ಹೌದು. ಆರೋಗ್ಯಕರ ಬದುಕಿಗೆ ಅಗತ್ಯವಾದ ಒಂದು ಮೌಲ್ಯವೂ ಹೌದು. ಬಿಟ್ಟುಬಂದ ಊರನ್ನು ಹುಡುಕಿಕೊಂಡು ಬರುವ ‘ಹೆಡ್ ಮಾಸ್ತರರ ಸೈಕಲ್’ ಕಥೆಯಲ್ಲಿ ದೇವಿಯೊಂದಿಗೆ ಮಾಸ್ತರರು ಚರ್ಚಿಸುತ್ತಾರೆ. ಭಾವಲೋಕದಲ್ಲಿ ನಡೆಯುವ ಈ ಮಾತುಕತೆ, ಕಥೆಗಾರರ ಭಕ್ತಿಯ ವಾಸ್ತವವಾದಿ ನೆಲೆಗಟ್ಟನ್ನು ಸೂಚಿಸುವಂತಿದೆ. ಈ ಕಥೆಯ ಜೊತೆಯಲ್ಲಿ ಗಮನಿಸಬಹುದಾದ ‘ದೇವಿಯ ಪಾತ್ರ’ ಸಂಕಲನದ ಮುಖ್ಯ ಕಥೆಗಳಲ್ಲೊಂದು. ಅಭಿಮಾನಿಗಳ ಪಾಲಿಗೆ ದೇವಿಯೇ ಆಗಿರುವ ಆಶಾದೇವಿ ಹೆಸರಿನ ಜನಪ್ರಿಯ ನಟಿಗೆ, ಜನಪ್ರಿಯತೆ ಇಳಿಮುಖವಾಗುತ್ತಿರುವ ದಿನಗಳಲ್ಲಿ ಎದುರಿಸಬೇಕಾಗಿ ಬಂದಿರುವ ಸಂದಿಗ್ಧವೊ೦ದರ ಕುರಿತ ಕಥೆಯಿದು. ‘ದೇವಿ ಮಹಾತ್ಮೆ’ ಎನ್ನುವ ಚಿತ್ರದಲ್ಲಿ ದೇವಿಯ ಪಾತ್ರವನ್ನು ನಿರ್ವಹಿಸುವ ಅವಕಾಶ ಆಶಾದೇವಿಯನ್ನು ಹುಡುಕಿಕೊಂಡು ಬಂದಿದೆ. ಇಳಿಮುಖವಾದ ಜನಪ್ರಿಯತೆಯನ್ನು ಹೆಚ್ಚಿಸುವ ಅವಕಾಶವಾಗಿ ದೇವಿಯ ಪಾತ್ರ ಕಾಣಿಸುತ್ತಿದೆ. ಆದರೆ, ಆ ಪಾತ್ರವನ್ನು ನಿರ್ವಹಿಸಲು ಆಕೆಗೆ ಅಳುಕಿದೆ. ಆ ಅಳುಕನ್ನು ದಾಟುವ ಯೋಚನೆಯಲ್ಲಿ ಆಕೆಗೆೆ ನೆನಪಾಗುವುದು, ಕರಾವಳಿಯ ಮೂಲೆಯೊಂದರ ಅಭಿಮಾನಿ. ಆ ಅಭಿಮಾನಿ ದೇವಿ ಮಂದಿರವೊ೦ದರಲ್ಲಿ ಅರ್ಚಕ. ತನ್ನ ಆರಾಧ್ಯ ನಟಿಯ ಆಗಮನದಿಂದ ಅವನ ಮನೆಯಲ್ಲಿ ಹಬ್ಬದ ಸಂಭ್ರಮ ಉಂಟಾಗುತ್ತದೆ. ನಟಿಯ ಪ್ರಶ್ನೆ ಅಭಿಮಾನಿಯ ಮುಂದೆ ಬಂದಾಗ, ಆತ ಕೊಂಚವೂ ಅಳುಕಿಲ್ಲದೆ ಪಾತ್ರ ನಿರ್ವಹಿಸುವುದೇ ಸರಿ ಎನ್ನುತ್ತಾನೆ. ತಾನು ಪೂಜಿಸುವ ದೇವಿಯಲ್ಲಿ ಕಾಣುವ ಬೆಳಕನ್ನೇ, ಕಲಾದೇವಿಯಲ್ಲೂ ಆತ ಕಾಣುತ್ತಾನೆ. ‘ಜಗತ್ತಿನ ಎಲ್ಲ ಹೆಣ್ಣುಮಕ್ಕಳೂ ದೇವಿಯಾಗಲು ಅರ್ಹರು. ಅಲ್ಲ, ಅವರು ದೇವಿಯರೇ’ ಎನ್ನುವುದು ಆತನ ಸ್ಪಷ್ಟ ನಿಲುವು. ಇಷ್ಟಾದರೂ ದೇವಿಯ ಪಾತ್ರ ನಿರ್ವಹಿಸಲು ಆಶಾದೇವಿ ಒಪ್ಪುವುದಿಲ್ಲ. ದೇವಿಯ ಸನ್ನಿಧಾನದಲ್ಲಿ ಆಕೆಯ ಅಳುಕು ಅರಿವಾಗಿ ರೂಪಾಂತರಗೊಳ್ಳುತ್ತದೆ. ಎಲ್ಲವನ್ನೂ ದೇವಿಯ ಪಾತ್ರವನ್ನಾಗಿ ನೋಡುವ ಸಹೃದಯ ಹಾಗೂ ಮನುಷ್ಯ ಮಾತ್ರಳಾಗಿಯೇ ಉಳಿಯಬಯಸುವ ಕಲಾವಿದೆ – ಈ ಇಬ್ಬರೂ ನಾವು ನಮ್ಮದಾಗಿಸಿಕೊಳ್ಳಬೇಕಾದ ಎರಡು ಮನೋಧರ್ಮಗಳನ್ನು ಸೂಚಿಸುವಂತಿದ್ದಾರೆ. ಭಾವಲೋಕ ಮತ್ತು ಭಕ್ತಿಲೋಕಗಳ ನಡುವಣ ವ್ಯತ್ಯಾಸ ಬಹುತೇಕ ಸಂದರ್ಭಗಳಲ್ಲಿ ತೆಳುಗೆರೆಯಾಗಿಯಷ್ಟೇ ಉಳಿದಿರುತ್ತದೆ. ಆದರೆ, ಚಿಂತಾಮಣಿ ಕೊಡ್ಲೆಕೆರೆ ಅವರ ಕಥೆಗಳಲ್ಲಿನ ಭಕ್ತಿ ಮೈಮರೆವೆ ಉಂಟುಮಾಡುವ೦ತಹದ್ದಲ್ಲ. ಅರಿವಿನ ಎಚ್ಚರವನ್ನು ಕಳೆದುಕೊಳ್ಳದೆಯೇ ಮನಸ್ಸನ್ನು ಪ್ರಸನ್ನಗೊಳಿಸುವ ಭಕ್ತಿ ಇಲ್ಲಿಯದು. ಈ ಎಚ್ಚರದ ಕಾರಣದಿಂದಾಗಿಯೇ, ರಾಮಾಯಣ ಪಾರಾಯಣವನ್ನೇ ಬದುಕನ್ನಾಗಿಸಿಕೊಂಡಿರುವ ಅನಂತ ಮಾಸ್ತರರಿಗೆ, ರಾಮಭಕ್ತಿಯ ಉತ್ಕಟ ಸ್ಥಿತಿಯಲ್ಲೂ ಸೀತಾದೇವಿಯ ಕುರಿತು ಮನುಷ್ಯಸಹಜ ಅನುಕಂಪದಿ೦ದ ಸ್ಪಂದಿಸುವುದು ಸಾಧ್ಯವಾಗಿದೆ.

‘ಭರತದ ಮಧ್ಯಾಹ್ನ’ ಸಂಕಲನದ ಕಥೆಗಳಲ್ಲಿನ ಪಾತ್ರಗಳನ್ನು ಕಥೆಗಾರರು ಅತ್ಯಂತ ಘನತೆಯಿಂದ, ಸಾವಧಾನದಿಂದ ಚಿತ್ರಿಸಿದ್ದಾರೆ. ಇಲ್ಲಿನ ಮನುಷ್ಯಪ್ರಕೃತಿಗೆ ಸಂವಾದಿಯಾಗಿ ಅಘನಾಶಿನಿ ನದಿಯ ಪ್ರಕೃತಿಯಿರುವುದು ಕಥೆಗಳಿಗೆ ವಿಶೇಷ ಆರ್ದ್ರತೆ ತಂದುಕೊಟ್ಟಿದೆ. ತಾರ್ಕಿಕ ಅಂತ್ಯಗಳನ್ನು ಕಟ್ಟಿಕೊಡುವ ಉತ್ಸಾಹವೂ ಇಲ್ಲಿನ ಕಥೆಗಳಲ್ಲಿ ಕಾಣಿಸುವುದಿಲ್ಲ. ಸಹೃದಯರ ಮನಸ್ಸಿನಲ್ಲಿ ಕಥೆ ಬೆಳೆಯಲು ಕಥೆಗಾರರು ಸಾಕಷ್ಟು ಅವಕಾಶಗಳನ್ನು ಉಳಿಸಿದ್ದಾರೆ. ತಮ್ಮ ಅನುಭವಗಳನ್ನು ಸಹೃದಯರಿಗೆ ದಾಟಿಸುವ ಸಂದರ್ಭದಲ್ಲೇ, ಆ ಅನುಭವದ ಪುಳಕಕ್ಕೆ ಕಥೆಗಾರರೂ ಮೈಮನಸ್ಸುಗಳನ್ನು ಒಪ್ಪಿಸಿಕೊಂಡಿದ್ದಾರೆ. ಪೂರ್ವಗ್ರಹಗಳಿಲ್ಲದ ಮನಸ್ಸಿನ ಗೆಲ್ಲುಗಳಂತೆ ಈ ಸಂಕಲನದ ಕಥೆಗಳು ನಮ್ಮನ್ನು ಮಾತಿಗೆಳೆಯುತ್ತವೆ, ಒಳಗೊಳ್ಳುತ್ತವೆ. ಪ್ರಸನ್ನ ಮನಸ್ಥಿತಿ ಇಲ್ಲಿನ ಕಥೆಗಳಲ್ಲಿದೆ. ಜೀವನದ ದಾರುಣ ಸಂಗತಿಗಳನ್ನು ಸಾವಧಾನದಿಂದ, ಕಹಿಯಿಲ್ಲದೆ ಹೇಳುವುದು ಸಾಧ್ಯವಾಗಿದೆ. ಮೇಲ್ನೋಟಕ್ಕೆ ಸಾಮಾನ್ಯವೆಂದು ತೋರುವ ಸಂಗತಿಗಳ ಮೂಲಕವೇ ಬದುಕಿನ ಸತ್ಯಗಳ ಕುರಿತು ಯೋಚಿಸುವ ಹಚ್ಚುವ ಈ ಕಥೆಗಳನ್ನು, ಜನಪ್ರಿಯ ಸಿದ್ಧ ಮಾದರಿಗಳಿಗೆ ಪರ್ಯಾಯದಂತೆಯೂ ನೋಡಲಿಕ್ಕೆ ಸಾಧ್ಯವಿದೆ. ಕಟ್ಟುವ ಕ್ರಿಯೆಯ ಕಸುಬುದಾರಿಕೆಯಿಂದಲೂ ಚಿಂತಾಮಣಿ ಕೊಡ್ಲೆಕೆರೆ ಅವರ ಕಥೆಗಳು ಗಮನಸೆಳೆಯುತ್ತವೆ. ಇಲ್ಲಿನ ಭಾಷೆ ಸರಳ, ನೇರ. ಕಥೆಯ ಶೀರ್ಷಿಕೆಗಳಲ್ಲೂ ಯಾವುದೇ ಕಸರತ್ತಿಲ್ಲ. ನಿರಾಭರಣ ಸುಂದರಿಯ೦ಥ ಈ ಕಥೆಗಳು ಸರಳತೆಯನ್ನು ಒಂದು ಗುಣವನ್ನಾಗಿ ನೆಚ್ಚಿರುವ ಹಾಗೂ ತಮ್ಮ ಅಂತಃಸತ್ವವನ್ನು ಆಧರಿಸಿವೆ ಹಾಗೂ ಕಥೆಗಾರರ ಆತ್ಮವಿಶ್ವಾಸ ಮತ್ತು ಪ್ರಯೋಗಶೀಲತೆಯ ಹಂಬಲದಲ್ಲಿ ಮೂಡಿರುವ ರಚನೆಗಳಾಗಿವೆ.

ಚಿಂತಾಮಣಿ ಕೊಡ್ಲೆಕೆರೆ ಅವರೊಂದಿಗೆ ಒಡನಾಡಿದವರು, ಅವರ ಸಮಚಿತ್ತ ಹಾಗೂ ಸ್ನೇಹಮಯ ವ್ಯಕ್ತಿತ್ವವನ್ನು ಬಲ್ಲರು. ಆ ಒಡನಾಟದ ಸುಖ ಅವರ ಕಥೆಗಳಲ್ಲೂ ಅನುಭವಕ್ಕೆ ಬರುವಂತಿದೆ. ತಮ್ಮ ಕಥೆಗಳಿಗೆ ನನ್ನಿಂದ ಪ್ರತಿಕ್ರಿಯೆ ಬಯಸಿರುವುದು ನನ್ನ ಬಗೆಗಿನ ಅವರ ವಾತ್ಸಲ್ಯದ ವಿಸ್ತರಣೆಯಂತೆ ನಾನು ಭಾವಿಸಿದ್ದೇನೆ. ಸಾಹಿತ್ಯದ ವಿದ್ಯಾರ್ಥಿಯಾಗಿ ‘ಭರತದ ಮಧ್ಯಾಹ್ನ’ ಸಂಕಲನದ ಕಥೆಗಳ ಓದು ನನಗೊಂದು ವಿಶಿಷ್ಟ ಅನುಭವ. ಈ ವಿಶೇಷ ಅನುಭವ ಕಲ್ಪಿಸಿದ್ದಕ್ಕಾಗಿ ಚಿಂತಾಮಣಿ ಕೊಡ್ಲೆಕೆರೆ ಅವರಿಗೆ ಕೃತಜ್ಞತೆಗಳು.

‍ಲೇಖಕರು avadhi

28 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading