ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ

ಮೊದಲ ಭಾಗ

ವಚನ, ಶರಣರ ಬಗ್ಗೆ ಬೌದ್ಧಿಕ ವಲಯ ಈಗಾಗಲೇ ದಂಡಯಾತ್ರೆ ಆರಂಭಿಸಿದೆ.  ಇದು ಸಾಕಷ್ಟು ವಾದ ವಿವಾದಗಳನ್ನು ಹುಟ್ಟು ಹಾಕಿದೆ. ನಾಡಿನ ಬಹುತೇಕ ವಿದ್ವಾಂಸರು ಈಗಾಗಲೇ ಈ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಇದರ ಮುಂದುವರಿಕೆಯಾಗಿ ಈಗ ನಾವು ರಂಜಾನ್ ದರ್ಗಾ ಲೇಖನ ಸರಣಿಯನ್ನು ಪ್ರಕಟಿಸುತ್ತಿದ್ದೇವೆ.

ವಚನಗಳ ಬಗ್ಗೆ, ಶೈವ ಧರ್ಮದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ರಂಜಾನ್ ದರ್ಗಾ ಅವರು ಬರೆದ ವಿಶೇಷ ಲೇಖನ ಸರಣಿ “ಜ್ಯಾತಿ ವ್ಯವಸ್ಥೆಗೆ ಸವಾಲಾದ ಶರಣರು” ಇಂದಿನಿಂದ ಅವಧಿಯಲ್ಲಿ ಲೇಖನ ಮಾಲೆಯಾಗಿ.

ಈ ಬಗ್ಗೆ ದರ್ಗಾ ಅವರು ಬರೆಯುತ್ತಾರೆ ಎಂದು ನಾವು ಪ್ರಕಟಿಸುತ್ತಿದ್ದಂತೆಯೇ  ನಮಗೆ ವಿಷಯದ ಪರ ಮತ್ತು ವಿರೋಧವಾಗಿ ಅನೇಕ ಫೋನ್ ಕರೆಗಳು ಮತ್ತು ಈ ಮೇಲ್ ಗಳು ಬಂದವು. ಲೇಖನ ಓದುವ ಮುಂಚೆಯೇ ಪರ ವಿರೋಧವಾಗಿ ಅಭಿಪ್ರಾಯ ಮಂಡಿಸುವ ಉತ್ಸಾಹ ಆ ಕರೆಗಳಲ್ಲಿತ್ತು.

ಈ ಲೇಖನ ಸರಣಿ ಪ್ರಕಟವಾಗುತ್ತಿರುವುದು ನಮ್ಮ ‘ಜುಗಾರಿ ಕ್ರಾಸ್ ‘ನಲ್ಲಿ. ಜುಗಾರಿ ಕ್ರಾಸ್ ಹೇಳಿಕೇಳಿ ಚರ್ಚೆಗಾಗಿಯೇ ಇರುವ ತಾಣ. ಹಾಗಾಗಿ ಬನ್ನಿ ನಿಮ್ಮ ಅಭಿಪ್ರಾಯವನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸಿ. ನಿಮ್ಮ ವಾದ ವಸ್ತುನಿಷ್ಠವಾಗಿರಲಿ ಎನ್ನುವುದು ನಮ್ಮ ಮನವಿ


ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಶರಣಸಂಕುಲ ಎಂಬ ನವಸಮಾಜವು ಜಾತಿ, ಮತ, ಕುಲ, ವರ್ಣ, ವರ್ಗ ಮತ್ತು ಲಿಂಗಭೇದಗಳಿಂದ ಮುಕ್ತವಾಗಿತ್ತು. ವಿವಿಧ ಜಾತಿಮೂಲಗಳಿಂದ ಬಂದ ಕಾಯಕಜೀವಿಗಳು ಈ ನವಸಮಾಜದಲ್ಲಿ ಒಂದಾಗಿ ಬದುಕುತ್ತಿದ್ದರು. ಕಾಯಕದೊಳಗಿನ ಜಾತಿಯ ವಿಷವನ್ನು ಹೊರಹಾಕಿದ್ದರಿಂದ ಎಲ್ಲ ಕಾಯಕಗಳಿಗೆ ಸಮಾನ ಗೌರವ ಲಭಿಸಿತ್ತು. ವೈದಿಕರು ಆಚರಿಸುವ ಮನುಧರ್ಮದ ತಾಯಿಬೇರಾದ ಕರ್ಮಸಿದ್ಧಾಂತವನ್ನು ಬಸವಣ್ಣನವರು ಅಲ್ಲಗಳೆದು ಕಾಯಕಸಿದ್ಧಾಂತದ ಮೇಲೆ ಈ ಶರಣಸಂಕುಲದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದರು.
ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳನ್ನು ಕರ್ಮಸಿದ್ಧಾಂತ ಸಂರಕ್ಷಿಸುತ್ತದೆ. ಪಾಪ ಮತ್ತು ನರಕದ ಭಯ ಮೂಡಿಸುತ್ತದೆ. ಪುಣ್ಯ ಮತ್ತು ಸ್ವರ್ಗದ ಆಸೆ ಹುಟ್ಟಿಸುತ್ತದೆ. ಮೋಕ್ಷ ಮತ್ತು ಪುನರ್ಜನ್ಮಗಳನ್ನು ಪ್ರತಿಪಾದಿಸುತ್ತದೆ. ಇಂಥ ಕರ್ಮಸಿದ್ಧಾಂತದ ಟೊಳ್ಳುತನವನ್ನು ಬಯಲಿಗೆಳೆಯುವ ಮೂಲಕ ಬಸವಣ್ಣನವರು ವೈದಿಕ ಅಥವಾ ಮನುಧರ್ಮದ ಕ್ರೌರ್ಯವನ್ನು ಎತ್ತಿತೋರಿಸಿದರು. ಇಂಥ ಕುತಂತ್ರಗಳಿಂದಬ್ರಾಹ್ಮಣರು, ರಾಜರು, ಮೇಲ್ಜಾತಿ ಮತ್ತು ಮೇಲ್ವರ್ಗದವರು’ಭೂಸುರರು’ ಮತ್ತು ‘ಮಹಾಜನರು’ಎಂದು ಕರೆಯಿಸಿಕೊಳ್ಳುತ್ತ ಬಂದಿರುವುದನ್ನು ಬಸವಣ್ಣನವರು ಗಮನಿಸಿದರು. ವೈದಿಕ ಧರ್ಮದ ಷಡ್ಯಂತ್ರದ ಮೂಲಕ ಕೆಳಜಾತಿ ಮತ್ತು ಕೆಳವರ್ಗದ ಬಹುಜನರನ್ನು ಶೋಷಣೆಗೆ ಒಳಪಡಿಸಿದ್ದನ್ನು ಬಹಿರಂಗಪಡಿಸಿದರು.ಆ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ, ವೈದಿಕರು ಸೃಷ್ಟಿಸಿದ ಎಲ್ಲ ರೀತಿಯ ಶೋಷಣೆಯ ಸಂಕೋಲೆಗಳನ್ನು ಕಳಚುವ ಚಳವಳಿಯನ್ನು ಹೂಡಿದರು.
ಕಾಯಕಜೀವಿಗಳ ಬದುಕಿನ ಸನ್ಮಾರ್ಗವಾದ ಬಸವಧರ್ಮದಲ್ಲಿ ಮಂದಿರಗಳಿಲ್ಲ, ಮೂರ್ತಿಗಳಿಲ್ಲ, ಸ್ಥಾವರಲಿಂಗಗಳಿಲ್ಲ, ಮಠಗಳಿಲ್ಲ, ಸ್ವಾಮಿಗಳಿಲ್ಲ, (ಸ್ವಾಮಿಗಳು ಇರಬೇಕಾದುದು ಬಸವ ತತ್ತ್ವ ಪ್ರಚಾರ ಮಾಡುವ ನೀತಿಜಂಗಮರಾಗಿ.ಮಠಗಳು ಪರಿವರ್ತನೆಯಾಗಬೇಕಾದುದು ಮಹಾಮನೆಗಳಾಗಿ.)ಇಷ್ಟಲಿಂಗದ ಮೂಲಕ ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾದ ದೇವರ ಪೂಜೆ ಬಿಟ್ಟರೆ ಇನ್ನಾವ ದೇವರ ಪೂಜೆ ಇಲ್ಲ. ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಒಳಗೆ ಇರುವ ಈ ಏಕದೇವನನ್ನು ಹುಡುಕಿಕೊಂಡು ಯಾವ ಕ್ಷೇತ್ರಗಳಿಗೂ ಹೋಗಬೇಕಿಲ್ಲ. ನಮ್ಮೊಳಗಿನ ಅಂತಃಸಾಕ್ಷಿ ಎಂಬ ದೇವರ ಕುರುಹು ಆದ ಇಷ್ಟಲಿಂಗವನ್ನು ಪೂಜಿಸಲು ಯಾವುದೇ ರೀತಿಯ ಖಚರ್ು ಮಾಡಬೇಕಿಲ್ಲ. ಯಾವುದೇ ಅಭಿಷೇಕಗಳೂ ಇದಕ್ಕಿಲ್ಲ. ಹೋಮ, ಹವನ, ಯಜ್ಞ, ಯಾಗಾದಿಗಳ ಮಾತೇ ಇಲ್ಲ. ಹರಕೆ ಹೊರುವ ಸಮಸ್ಯೆ ಇಲ್ಲ. ನಿಜವಾದ ಅರ್ಥದಲ್ಲಿ ಇಷ್ಟಲಿಂಗ ಪೂಜೆ ಎಂಬುದು ನಮ್ಮೊಳಗಿನ ಅಂತಃಸಾಕ್ಷಿ ಎಂಬ ಘನದ ಜೊತೆ ಬೆರೆಯುವುದೇ ಆಗಿದೆ. ಈ ಮಂಗಳಕರವಾದ ಕೂಡುವಿಕೆಗೆ ‘ಶಿವಯೋಗ’ ಎಂದೂ ಕರೆಯುತ್ತಾರೆ. ‘ಶಿವ’ ಎಂದರೆಮಂಗಳಕರವಾದುದು.’ಯೋಗ’ ಎಂದರೆ ಕೂಡುವುದು.
ಒಂದು ದೃಷ್ಟಿಯಿಂದ ಬಸವಧರ್ಮವು ಯೋಗಧರ್ಮವೇ ಆಗಿದೆ.ಇಲ್ಲಿ ಎರಡು ರೀತಿಯ ಕೂಡುವಿಕೆಗಳಿವೆ. ಮೊದಲನೆಯದಾಗಿ ಅಂತರಂಗದಲ್ಲಿ, ಸಕಲಜೀವಾತ್ಮರಿಗೆ ಲೇಸನೆ ಬಯಸುವ ಅಂತಃಸಾಕ್ಷಿಯ ಜೊತೆ ಕೂಡಿದರೆ.ಎರಡನೆಯದಾಗಿ ಬಹಿರಂಗದಲ್ಲಿ ಸಕಲಜೀವಾತ್ಮರ ಜೊತೆ ಕೂಡುವುದು.ಆ ಮೂಲಕ ಜಗತ್ತಿನಲ್ಲಿ ಸರ್ವ ಜೀವಿಗಳು ಬದುಕಲು ಯೋಗ್ಯವಾಗುವಂಥ ವಾತಾವರಣ ಸೃಷ್ಟಿಸುವುದು. ಹೀಗೆ ಇದು ಸಮಾಜಮುಖಿ ಯೋಗಧರ್ಮವಾಗಿದೆ.
ಸರ್ವಸಮತ್ವದಿಂದ ಕೂಡಿದ ಶರಣಸಂಕುಲದಲ್ಲಿ ಸಂಸ್ಕಾರ, ಸಂಸ್ಕೃತಿ, ಸಮಾಜ, ಅರ್ಥವ್ಯವಸ್ಥೆ, ಧರ್ಮದ ಮಾನವೀಯ ಸ್ಪಂದನ, ಅನುಭಾವದ ನೆಲೆ, ಕಾಯಕದ ಬೆಲೆ ಮುಂತಾದವುಗಳೆಲ್ಲ ಸರ್ವರಿಗೂ ಒಂದೇ ತೆರನಾಗಿದ್ದವು.ಇಲ್ಲಿ ಎಲ್ಲರೂ ಶರಣರು, ಅಂದರೆ ನವಮಾನವರು.ಎಲ್ಲ ರೀತಿಯ ಅಸಮಾನತೆಯಿಂದ ಮುಕ್ತರಾಗಿ ಹೊಸ ಬಾಳಿಗೆ ಬೆಳಕಾದವರು.ಇಂಥ ಬದುಕುವ ವಿಧಾನವನ್ನು ಕಂಡುಹಿಡಿದ ಬಸವಣ್ಣನವರ ಅನುಭಾವ ಸಮಾನತೆಯ ಮೇಲೆ ನಿಂತಿದ್ದರೆ, ವೈದಿಕರ ಅಧ್ಯಾತ್ಮವೆಂಬುದು ಅಸಮಾನತೆಯ ಮೇಲೆ ನಿಂತಿದೆ.ಬಸವಣ್ಣನವರ ಕಾಯಕಧರ್ಮಅಂತಃಕರಣದಿಂದ ಕೂಡಿದಸಮಷ್ಟಿಪ್ರಜ್ಞೆಯ ಕಡೆಗೆ ಒಯ್ದರೆ, ವೈದಿಕರ ಮನುಧರ್ಮ ಅಹಂಕಾರದಿಂದ ಕೂಡಿದವ್ಯಷ್ಟಿ ಪ್ರಜ್ಞೆಯ ಕಡೆಗೆ ಒಯ್ಯುತ್ತದೆ.
ಎಲ್ಲಿಯೂ ಒಂದಾಗದಂಥ ಈ ಎರಡು ಧರ್ಮಮಾರ್ಗಗಳನ್ನು ಕೂಡಿಸುವ ಪ್ರಯತ್ನ ಮಾಡುವವರು ನಿಜವಾದ ಅರ್ಥದಲ್ಲಿ ಬಸವಧರ್ಮವನ್ನು ಮನುಧರ್ಮದ ಕೂಪದಲ್ಲಿ ಎಸೆಯುವ ಉದ್ದೇಶವನ್ನೇ ಹೊಂದಿರುತ್ತಾರೆ.ಈ ಪಿತೂರಿಯನ್ನು ತಡೆಯಬೇಕಾದರೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಾಯಕಜೀವಿಗಳ ಚಳವಳಿಯನ್ನು ಮರುಮೌಲ್ಯೀಕರಣಕ್ಕೆ ಒಳಪಡಿಸುವುದು ಈ ಕಾಲದ ತುತರ್ು ಅಗತ್ಯವಾಗಿದೆ.ಕಾಯಕಜೀವಿಗಳ ಚಳವಳಿಯು ನೇರವಾಗಿ ಜಾತಿವಿರೋಧಿ ಚಳವಳಿಯೇ ಆಗಿದೆ.ಆ ಮೂಲಕ ಎಲ್ಲ ರೀತಿಯ ಶೋಷಣೆಯನ್ನು ವಿರೋಧಿಸುತ್ತ ಕಾಯಕದ ಗೌರವವನ್ನು ಕಾಪಾಡುವಂಥದ್ದಾಗಿದೆ.
ವೈದಿಕರು ವಿವಿಧ ಕಾಯಕಗಳನ್ನು ಮುಂದೆ ಮಾಡಿ ಮೇಲು ಕೀಳು ಭಾವನೆಯ ಜಾತಿಗಳನ್ನು ಸೃಷ್ಟಿಸಿದರು.ಪ್ರತಿಯೊಬ್ಬರು ತಮ್ಮ ತಮ್ಮ ಕಾಯಕಗಳಿಗೇ ಅಂಟಿಕೊಂಡಿರುವಂತೆ ಮಾಡಿದರು.ಆ ಮೂಲಕ ಈ ಶ್ರೇಣೀಕೃತ ಸಮಾಜ ಸದಾ ಯಥಾಸ್ಥಿತಿಯಲ್ಲೇ ಮುಂದುವರಿಯುವಂತೆ ನೋಡಿಕೊಂಡರು.ಜನರು ಕಾಯಕಗಳಲ್ಲಿ ಅಷ್ಟೇ ಅಲ್ಲದೆ ನೂರೆಂಟು ದೇವರುಗಳಲ್ಲಿ ಹರಿದು ಹಂಚಿ ಹೋಗುವಂಥ ಬಹುದೇವೋಪಾಸನಾ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಡವರ ದೇವರುಗಳು ಮತ್ತು ಶ್ರೀಮಂತರ ದೇವರುಗಳೆಂಬ ಭೇದವನ್ನು ತೋರ್ಪಡಿಸಿದರು.ವೈದಿಕರ ಶಿಷ್ಟದೇವತೆಗಳಿಗೆ ಶೂದ್ರರ ಕ್ಷುದ್ರ ದೇವತೆಗಳು ಬಿಟ್ಟಿ ಕೂಲಿ ಮಾಡುವ ಆಳುಗಳಾದವು.ಹೀಗೆ ಶೂದ್ರರು, ಅತಿಶೂದ್ರರು ಮತ್ತು ಅವರ ದೇವತೆಗಳೆಲ್ಲ ಸೇರಿ ಒಂದು ಬೃಹತ್ ಶೋಷಿತ ವರ್ಗವಾಗಿ ರೂಪುಗೊಂಡರು.ಬಹುಜನರಿಂದ ಕೂಡಿದ ಈ ಉತ್ಪಾದಕ ವರ್ಗಕ್ಕೆ ಶೂದ್ರ ವರ್ಣ ಎಂದು ಕರೆಯಲಾಯಿತು.ಅಲ್ಪ ಜನರಿಂದ ಕೂಡಿದ ಅನುತ್ಪಾದಕ ವರ್ಗದಲ್ಲಿ ಮೂರು ವರ್ಣಗಳು ರಾರಾಜಿಸಿದವು. ಶೂದ್ರರನ್ನು ಅಕ್ಷರ ವಂಚಿತರನ್ನಾಗಿಸಿ, ಓದುತ್ತ ಬರೆಯುತ್ತ ಕಾಲ ಕಳೆಯುವ ಬ್ರಾಹ್ಮಣ ವರ್ಣ, ಕೊಲ್ಲುವುದು ಮತ್ತು ಸಾಯುವುದನ್ನೇ ನಂಬಿದ್ದ ಕ್ಷತ್ರಿಯ ವರ್ಣ ಹಾಗೂ ಕೊಳ್ಳುವುದು ಮತ್ತು ಮಾರುವುದರ ಮೇಲೆ ಅವಲಂಬಿತವಾದ ವೈಶ್ಯವರ್ಣದ ಜನರುಜೀವನಾವಶ್ಯಕ ವಸ್ತುಗಳನ್ನು ಉತ್ಪಾದಿಸಲಿಲ್ಲ. ಆದರೆ ಬಹುಜನರಾದ ಶೂದ್ರರು ಈ ಮೂರೂ ವರ್ಣದವರಿಗೆ ಅವಶ್ಯಕವಾದ ಎಲ್ಲ ವಸ್ತುಗಳನ್ನು ಉತ್ಪಾದಿಸುವುದರಲ್ಲೇ ಬದುಕನ್ನು ಸವೆಸಿದರು. ಈ ದುಡಿಯುವ ಜನ ಯಾವುದೇ ತೆರನಾದ ಐಶಾರಾಮಿ ಜೀವನವನ್ನು ಸಾಗಿಸಲಿಲ್ಲ. ದುಡಿಯುವುದೇ ಅವರ ಸ್ವಾತಂತ್ರ್ಯವಾಗಿತ್ತು!ಆ ದುಡಿಯದೆ ಇರುವ ಮೇಲಿನ ಮೂರು ವರ್ಣಗಳ ಜನ ಐಶಾರಾಮಿ ಜೀವನವಿಧಾನವನ್ನು ತಮ್ಮದಾಗಿಸಿಕೊಂಡಿದ್ದರು.
ಈ ಅನುತ್ಪಾದಕ ವರ್ಣದವರಿಗೆ ಜನಿವಾರ ಇದೆ.ಆದರೆ ಉತ್ಪಾದನೆಯಲ್ಲಿ ತೊಡಗಿ ಬಡತನದಲ್ಲೇ ಜೀವ ಸವೆಸುವ ಬಹುಜನರಾದ ಶೂದ್ರರಿಗೆ ಜನಿವಾರ ಇಲ್ಲ. ಇಡೀ ವ್ಯವಸ್ಥೆಯೊಳಗಿನವರ್ಣಭೇದನೀತಿಯ ಸಂಕೇತವಾಗಿ ಜನಿವಾರವೆಂಬ ದಾರ ಇರುವುದು ವಿಚಿತ್ರ ಆದರೆ ಸತ್ಯ.ಬಸವಣ್ಣನವರು ಜನಿವಾರಕ್ಕೆ ‘ನೇಣು’ ಎಂದು ಕರೆದಿದ್ದಾರೆ.ಇಡೀಶೂದ್ರ ಜನಾಂಗದವ್ಯಕ್ತಿತ್ವಕ್ಕೆ ಈ ಜನಿವಾರನೇಣಾಗಿ ಪರಿಣಮಿಸಿದ್ದನ್ನು ಬಸವಣ್ಣನವರು ಗುರುತಿಸಿ ಎಂಟು ಶತಮಾನಗಳು ಗತಿಸಿದರೂ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿಲ್ಲ. ಬದುಕಿನ ಎಲ್ಲ ರಂಗಗಳಲ್ಲೂ ಜಾತಿಗಳದ್ದೇ ಪ್ರಾಬಲ್ಯ ಎದ್ದು ಕಾಣುತ್ತಿದೆ.ಕೆಳಜಾತಿಗಳವರು ಶೋಷಣೆಯಿಂದ ಹೊರಬರಲು ತಮ್ಮ ಜಾತಿಗಳ ಮೊರೆ ಹೊಕ್ಕರೆ, ಮೇಲ್ಜಾತಿಯವರು ಶೋಷಣೆಯನ್ನು ಗಟ್ಟಿಗೊಳಿಸುವುದಕ್ಕಾಗಿ ಜಾತಿ ವ್ಯವಸ್ಥೆಯನ್ನು ಕಾಪಾಡುತ್ತಿದ್ದಾರೆ.

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಹಾಮಾನವತಾವಾದಿ ಬಸವಣ್ಣನವರಿಗೆ ಅಗ್ರಹಾರದೊಳಗಿನ ಜೀವನವಿಧಾನದ ನೇರ ಅನುಭವವಿತ್ತು.ಸೂಕ್ಷ್ಮಮತಿಗಳಾದ ಬಸವಣ್ಣನವರು ಶೋಷಣೆಯ ವಿವಿಧ ಮೂಲಗಳನ್ನು ಅರಿತುಕೊಂಡು ಬಹಳ ಎಚ್ಚರಿಕೆಯಿಂದ ಈ ಕಾಯಕಜೀವಿಗಳ ಚಳವಳಿಯನ್ನು ಆರಂಭಿಸಿದರು.ಜಾತಿಗಳನ್ನು ಸಂಕರಗೊಳಿಸಿ ಕಾಯಕಜೀವಿಗಳನ್ನು ದುಡಿಯುವ ವರ್ಗವಾಗಿ ಸಂಘಟಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.
ಶೋಷಿತ ಜಾತಿಗಳನ್ನು ಕೂಡಿಸಿ ವರ್ಗವಾಗಿ ಪರಿವರ್ತನೆಗೊಳಿಸುವ ಬಸವಸೂತ್ರವನ್ನು ಶೂದ್ರರು ಮತ್ತು ಅತಿಶೂದ್ರರು ಅರ್ಥ ಮಾಡಿಕೊಳ್ಳದೆ ಇರುವುದು ಐತಿಹಾಸಿಕ ದುರಂತವಾಗಿದೆ.ಪಂಚಮ ವರ್ಣ ಎಂಬುದು ಇಲ್ಲ. ‘ಚಾತುರ್ವರ್ಣಂ ಮಯಾಸೃಷ್ಟಂ ಗುಣ ಕರ್ಮವಿಭಾಗಶಃ’ ಎಂದುಭಗವದ್ಗೀತೆಯಲ್ಲಿಹೇಳಲಾಗಿದೆ.ಆತ್ಮಗೌರವಕ್ಕಾಗಿ ವೈದಿಕದ ಕ್ರೌರ್ಯದವಿರುದ್ಧಹೋರಾಡಿದಶೂದ್ರರನ್ನುಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪೃಶ್ಯರನ್ನಾಗಿಸಲಾಯಿತು.ಹಾಗೆ ಬಹಿಷ್ಕಾರಕ್ಕೊಳಗಾದವರನ್ನು ಪಂಚಮರೆಂದು ಕರೆಯಲಾಯಿತು.ಈ ಪಂಚಮರೇ ಅತಿಶೂದ್ರರು.ಅನ್ಯಾಯದ ಸಾಮಾಜಿಕ ಬಹಿಷ್ಕಾರ ಅವರ ಪೀಳಿಗೆಗೆ ಮುಂದವರಿಯುತ್ತ ಸಾಗಿದ್ದರಿಂದಲೇ ಅಸ್ಪೃಶ್ಯ ಜಾತಿಗಳು ಹುಟ್ಟಿಕೊಂಡವು.ಬಸವಣ್ಣನವರ ಚಳವಳಿ ಎಂದರೆ ಶೂದ್ರರು ಮತ್ತು ಅತಿಶೂದ್ರರು ಒಗ್ಗಟ್ಟಾಗಿ ಮಾಡಿದ ಚಳವಳಿ ಎಂಬ ಸತ್ಯವನ್ನು ಅರಿತು ಸುಲಿಗೆ ಇಲ್ಲದ ಜಾತ್ಯತೀತ ಸಮಾಜ ನಿರ್ಮಾಣ ಮಾಡುವುದು ಮಾನವತಾವಾದಿಗಳ ಕರ್ತವ್ಯವಾಗಿದೆ.
ಯುರೋಪಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ಹುಟ್ಟಿದ್ದು 13ನೇ ಶತಮಾನದಲ್ಲಿ.18ನೇ ಶತಮಾನದಲ್ಲಿ ಆರಂಭವಾದ ಔದ್ಯೋಗಿಕ ಕ್ರಾಂತಿಯ ನಂತರ ಸಂಘಟಿತ ದುಡಿಯುವ ವರ್ಗ ರೂಪುಗೊಂಡಿತು.ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರು ಕಾಯಕಜೀವಿಗಳ ತತ್ತ್ವಜ್ಞಾನವನ್ನು ವೈಜ್ಞಾನಿಕವಾಗಿ ಬರೆದದ್ದು 19ನೇ ಶತಮಾನದಲ್ಲಿ.ದುಡಿಯುವ ಜನರ ಗಮನಾರ್ಹ ಚಳವಳಿಗಳು ಆರಂಭವಾದದ್ದು ಕೂಡ 19ನೇ ಶತಮಾನದಲ್ಲೇ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಜಗತ್ತಿನಲ್ಲಿ ಕಾಯಕಜೀವಿಗಳ ಮೊದಲ ಸಂಘಟಕ ಎಂಬ ಕೀರ್ತಿಗೆ ಭಾಜನರಾಗುತ್ತಾರೆ.
ಈ ಕಾಯಕಜೀವಿಗಳ ಸಂಘಟನೆ ವಿವಿಧ ಆಯಾಮಗಳಿಂದ ಕೂಡಿದ್ದಾಗಿದೆ. ಜಾತಿಸಂಕರದಿಂದಸಮಾನ ಹಕ್ಕುಗಳನ್ನು ಪಡೆಯುವ ಮೂಲಕ ಬರುವ ಗಣ ಪ್ರಜ್ಞೆ, ವಿವಿಧ ಕಾಯಕಜೀವಿಗಳ ಸಮೂಹ ನಾಯಕತ್ವದ ಮೂಲಕ ಬರುವ ಅಮರಗಣ ಪ್ರಜ್ಞೆ.ಸುಖ ದುಃಖಗಳಲ್ಲಿ ಜನಸಮುದಾಯ ಒಂದಾಗಿರುವಂತೆ ನೋಡಿಕೊಳ್ಳುವಂಥ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂಥ ಏಕದೇವ ಪ್ರಜ್ಞೆ.ಜ್ಞಾನ ವಿಸ್ತಾರದ ಅಕ್ಷರ ಪ್ರಜ್ಞೆ, ಸ್ತ್ರೀಪುರುಷ ಸಮಾನತಾ ಪ್ರಜ್ಞೆ, ಕಾಯಕ ಪ್ರಜ್ಞೆ, ಪ್ರಸಾದ ಪ್ರಜ್ಞೆ ಮತ್ತುದಾಸೋಹ ಪ್ರಜ್ಞೆಯಿಂದಾಗಿ ಶರಣಸಂಕುಲದಕಾಯಕಜೀವಿಗಳಿಗೆ ಹೊಸ ಜೀವನವಿಧಾನದ ದರ್ಶನವಾಯಿತು.’ಅಸ್ಪೃಶ್ಯ ಮತ್ತು ಬಡ ಹಿಂದುಳಿತ ಜಾತಿಗಳಲ್ಲಿ ಜನ್ಮತಾಳುವುದು ಅಪಮಾನಕರ’ ಎಂಬ ವಾತಾವರಣವನ್ನು ಬದಲಿಸುವುದರ ಮೂಲಕ ಬಡವರೊಳಗೆ ಸ್ವಾಭಿಮಾನ ಮೂಡಿಸುವಲ್ಲಿ ಬಸವಣ್ಣನವರು ಸಫಲರಾದರು. ‘ಮನೆ ನೋಡಾ ಬಡವರು ಮನ ನೋಡಾ ಘನ… … ಕೂಡಲಸಂಗನ ಶರಣರು ಸ್ವತಂತ್ರಧೀರರು’ ಎಂದು ಹೇಳುತ್ತ, ದುಡಿದು ತಿನ್ನುವ ವರ್ಗವೇ ಆತ್ಮಗೌರವವುಳ್ಳ ವರ್ಗ ಎಂಬುದನ್ನು ಪ್ರತಿಪಾದಿಸಿದರು.ಅಪಮಾನಕ್ಕೊಳಗಾಗಬೇಕಾದವರು ಇತರರನ್ನು ಕೀಳಾಗಿ ನೋಡುವವರು ಮತ್ತು ಶೋಷಕರು ಎಂಬ ಸತ್ಯವನ್ನು ಜನಸಮುದಾಯ ಅರಿಯುವಂತೆ ಮಾಡಿದರು.
ತಮ್ಮ ಕಾಯಕದಿಂದ ಬರುವ ಜೀವನಾನುಭವದ ಮೂಲಕ ಅನುಭಾವದ ಎತ್ತರಕ್ಕೇರಿ ವಚನ ರಚನೆ ಮಾಡಿದ ಶರಣರು ವಿಶಿಷ್ಟವಾದ ಕಾಯಕಜೀವಿಗಳಾಗಿ ಕಂಗೊಳಿಸುತ್ತಾರೆ.ಎಲ್ಲರೀತಿಯಿಂದಲೂ ಹೊಸ ಸಾಮಾಜಿಕ ವ್ಯವಸ್ಥೆಯನ್ನು ಪಡೆದ ಶರಣರ ನವಮಾನವಧರ್ಮಪಾಲನೆಗೆ ಅಂತಃಕರಣವೇ ಮಾರ್ಗದರ್ಶಿಯಾಗಿತ್ತು.ಕಾಯಕದ ಅನುಭವದಿಂದ ಅನುಭಾವದ ಮಟ್ಟಕ್ಕೆ ಏರುವ ಇಂಥ ಶರಣಸಂಕುಲದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಬಸವಣ್ಣನವರು’ಅನುಭವ ಮಂಟಪ’ವನ್ನು ರಚಿಸಿದ್ದರು.ಅದಕ್ಕೆ ಕೆಳವರ್ಗದ ನಾಯಕತ್ವ ನೀಡಿದ್ದರು.ಆ ಅನುಭವ ಮಂಟಪದಲ್ಲಿ ವಿವಿಧ ಕಾಯಕ ಮತ್ತು ಸಾಮಾಜಿಕ ಸ್ತರಗಳಿಂದ ಬಂದ 770 ಪ್ರತಿನಿಧಿಗಳು (ಅಮರಗಣಂಗಳು) ಇದ್ದರು.ದುಡಿಯುವ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ತಾಣವಾದ ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳಲ್ಲಿ ಮಹಿಳಾ ಪ್ರತಿನಿಧಿಗಳು ಮತ್ತು ಯುವಕರು ಕೂಡ ಭಾಗವಹಿಸುತ್ತಿದ್ದರು.ವೈದಿಕರು ಹಿರಿತನ್ನಕ್ಕೆ ಮಹತ್ವ ಕೊಡುತ್ತ ಅವರ ಕಂದಾಚಾರವನ್ನೇ ಮುಂದಿನ ಪೀಳಿಗೆ ಪಾಲಿಸಬೇಕು ಎಂಬ ಕಟ್ಟಳೆಗಳನ್ನು ಹಾಕುತ್ತಿದ್ದರು.ಆದರೆ ‘ಅಜಕೋಟಿ ವರ್ಷದವರೆಲ್ಲಹಿರಿಯರೆ’ ಎಂದುಶರಣರಲ್ಲಿ ಚಿಕ್ಕವಯಸ್ಸಿನಅವಿರಳ ಜ್ಞಾನಿ ಚನ್ನಬಸವಣ್ಣನವರು ಪ್ರಶ್ನಿಸಿದರು.ವಯಸ್ಸಿನ ಬದಲಿಗೆ ಅರಿವು ಪ್ರಧಾನವಾದ ವ್ಯವಸ್ಥೆಗೆ ಅನುಭವ ಮಂಟಪ ನಾಂದಿಯಾಯಿತು.
ಈ ಅನುಭವ ಮಂಟಪ ಆಧುನಿಕ ಸಂಸತ್ತಿನ ರೂಪುರೇಷೆಗಳನ್ನು ಒಳಗೊಂಡಿದೆ.ಅನುಭವ ಮಂಟಪದ ಶೂನ್ಯಸಿಂಹಾಸನವನ್ನೇರಿದ ಅಲ್ಲಮಪ್ರಭುಗಳು ಲೋಕಸಭಾಧ್ಯಕ್ಷರಂತೆ ಕಾಣುತ್ತಾರೆ.ಸಮಾಜದ ವಿವಿಧ ಸ್ತರಗಳಿಂದ ಬಂದ ಅಮರಗಣಂಗಳು ಸಂಸತ್ ಸದಸ್ಯರ ಹಾಗೆ ಇದ್ದಾರೆ.ಅಮರಗಣಂಗಳಿಗೆ ಸಿಕ್ಕ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ, ಅವರು ಮನುವಾದಿ ಸಮಾಜದಲ್ಲಿ ಅನುಭವಿಸಿದ ಜಾತಿಗಳ ನೋವಿನ ಪರಿಗಣನೆ ಇದೆ. ಹೀಗಾಗಿ ಮಂಡಲ್ ಆಯೋಗದ ತರ್ಕವೂ ಇಲ್ಲಿದೆ.ವಯಸ್ಕರ ಶಿಕ್ಷಣ ಪದ್ಧತಿಯನ್ನು ಬಸವಣ್ಣನವರು ಆರಂಭಿಸಿದ್ದರು ಎಂಬುದಕ್ಕೆ ಬಹುಪಾಲು ಅಮರಗಣಂಗಳು ವಯಸ್ಕರಾದ ಮೇಲೆ ಅಕ್ಷರ ಕಲಿತದ್ದೇ ಸಾಕ್ಷಿ.ಅದೇ ರೀತಿಯಲ್ಲಿ ಮಹಿಳೆಯರು ಮತ್ತು ದಲಿತರಿಗೂ ಶಿಕ್ಷಣದವ್ಯವಸ್ಥೆ ಮಾಡಲಾಗಿತ್ತು.ಈ ಪ್ರಯತ್ನದ ಫಲವಾಗಿ ಅವರೆಲ್ಲ ವಚನಗಳನ್ನು ಬರೆದರು.ವಚನಕಾರರಲ್ಲಿ ಬಹುಪಾಲು ಮಂದಿ ಕೆಳಜಾತಿಗಳಿಂದಲೇ ಬಂದವರಾಗಿದ್ದಾರೆ.ಇದು ಕೂಡ ಭಾರತದಲ್ಲಿ ನಡೆದ ವಿಶಿಷ್ಟ ಪ್ರಯೋಗವೇ ಆಗಿದೆ.ಕನ್ನಡದಲ್ಲಿ ಹಿಂದುಳಿದ ಜಾತಿಗಳಿಂದ ಬಂದ ವಚನಕಾರರು ವಿಶ್ವಮಾನ್ಯವಾದ ಸಾಹಿತ್ಯ ರಚನೆ ಮಾಡುವ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದ್ದಿಲ್ಲ ಎಂಬುದು ಗಮನಾರ್ಹವಾಗಿದೆ.
ಒಂದು ಸಮಾಜವನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ಪ್ರಭುತ್ವಕ್ಕೆ ಸಂವಿಧಾನದ ಅವಶ್ಯಕತೆ ಇದೆ.ಜಗತ್ತಿನ ಯಾವ ಮೂಲೆಯಲ್ಲೂ ಸಂವಿಧಾನ ಸೃಷ್ಟಿಯಾಗದ ಸಂದರ್ಭದಲ್ಲಿ ವಚನಕಾರರ ವಚನಗಳು ನವಸಮಾಜದ ಸಂವಿಧಾನದ ಅಂಶಗಳಂತೆ ಕಾಣುತ್ತವೆ. 1215ರಲ್ಲಿ ಇಂಗ್ಲಂಡ್ನಲ್ಲಿ ಕಿಂಗ್ ಜಾನ್ ಮತ್ತು ಜಮೀನುದಾರರ ಮಧ್ಯೆ ಒಪ್ಪಂದ ಏರ್ಪಟ್ಟಿತು. ರಾಜನ ಅಧಿಕಾರವನ್ನು ಮೊಟಕುಗೊಳಿಸಿದಂಥ ವಿಶ್ವದ ಈ ಮೊದಲ ಒಪ್ಪಂದಕ್ಕೆ ಮ್ಯಾಗ್ನಾಕಾರ್ಟಾ (ಮಹಾ ಒಪ್ಪಂದ) ಎಂದು ಕರೆಯುತ್ತಾರೆ. 13ನೇ ಶತಮಾನದ ಈ ಒಪ್ಪಂದ ‘ಜಗತ್ತಿನ ಸಂವಿಧಾನಗಳ ತಾಯಿ’ ಎಂದು ಸಂವಿಧಾನ ತಜ್ಞರು ಭಾವಿಸಿದ್ದಾರೆ.ಆದರೆ ನಮ್ಮ ಶರಣರು 12ನೇ ಶತಮಾನದಲ್ಲೇ ಬರೆದ ವಚನಗಳು ಸಂವಿಧಾನದ ಅಂಶಗಳಿಂದ ಮತ್ತು ಮಾನವ ಹಕ್ಕುಗಳಿಂದ ತುಂಬಿವೆ ಎಂಬುದನ್ನು ಅರಿತುಕೊಳ್ಳುವಲ್ಲಿ ಮತ್ತು ಜಗತ್ತಿಗೆ ತಿಳಿಸುವಲ್ಲಿ ನಾವು ಸೋತಿದ್ದೇವೆ.
ಪ್ರಜಾಪ್ರಭತ್ವ ನಿರ್ಮಾಣದಲ್ಲಿ ಜನಭಾಷೆಯನ್ನು ಆಡಳಿತದ ಭಾಷೆಯನ್ನಾಗಿಸುವುದು ಅವಶ್ಯವಾಗಿದೆ.ಯಾವ ಭಾಷೆಯೂ ದೇವಭಾಷೆಯಾಗಿರುವುದಿಲ್ಲ. ಅಂಥ ಭ್ರಮೆಯನ್ನು ಸೃಷ್ಟಿಸುವುದರ ಮೂಲಕ ಆಳುವ ವರ್ಗ ತನ್ನ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುತ್ತದೆ.ತನ್ನ ಭಾಷೆಯಲ್ಲೇ ಧರ್ಮಶಾಸ್ತ್ರ ಸೃಷ್ಟಿಸುತ್ತದೆ. ಆಗ ದುಡಿಯವ ವರ್ಗಕ್ಕೆ ಧರ್ಮ ಮತ್ತು ಆಡಳಿತದ ಲಾಭಗಳು ಕನ್ನಡಿಯ ಗಂಟುಗಳಾಗಿ ಉಳಿಯುತ್ತವೆ. ವೈದಿಕರು ಸಂಸ್ಕೃತ ದೇವಭಾಷೆ ಎಂಬ ಭ್ರಮೆ ಹುಟ್ಟಿಸಿದರು.ಧರ್ಮವನ್ನು ಆ ಭಾಷೆಯಲ್ಲೇ ಹೆಣೆದರು.ಅದೇ ಭಾಷೆಯಲ್ಲಿ ಆಡಳಿತದ ಜಾಲವನ್ನು ಸೃಷ್ಟಿಸಿದರು.ಜನಭಾಷೆಗಳನ್ನು ಕೀಳಾಗಿ ಕಂಡರು. ದುಡಿಯುವ ವರ್ಗಕ್ಕೆ ಸಂಸ್ಕೃತ ಭಾಷೆ ನಿಲುಕದಂತೆ ನೋಡಿಕೊಂಡರು.ಹೀಗಾಗಿ ಶೂದ್ರರು ಆಡಳಿತ ವ್ಯವಸ್ಥೆಯಿಂದ ಮತ್ತು ಧರ್ಮದಿಂದ ವಂಚಿತರಾಗಿ ಸುಲಿಗೆಗೆ ಒಳಗಾಗುವುದೇ ತಮ್ಮ ಕರ್ಮ ಎಂದುಕೊಂಡರು. ಬುದ್ಧನ ಹಾಗೆ ಬಸವಣ್ಣನವರಿಗೂ ಈ ಭಾಷಾಮೋಸದ ಅರಿವಾಗಿತ್ತು. ಅಂತೆಯೆ ಅವರು ಜನಭಾಷೆಯಾದ ಕನ್ನಡವನ್ನು ಧರ್ಮಭಾಷೆಯಾಗಿ ರೂಪಿಸಿದರು.ಆಗ ಕನ್ನಡ ಜನಪದಕ್ಕೆ ವೈದಿಕ ವ್ಯವಸ್ಥೆಯ ಕ್ರೌರ್ಯದ ಅರಿವಾಗತೊಡಗಿತು. ಇಡೀ ದಕ್ಷಿಣ ಭಾರತದಲ್ಲಿ ಮೂಡಿ ಬಂದ ಮೊದಲ ಧರ್ಮ ಇದಾಗಿದ್ದು ದುಡಿಯುವ ವರ್ಗದ ವಿಶ್ವವ್ಯಾಪಿ ಪ್ರಜ್ಞೆಯನ್ನು ಹೊಂದಿದೆ!
ಇನ್ನೂ ಇದೆ..

‍ಲೇಖಕರು avadhi

24 June, 2013

47 Comments

  1. mmshaik

    indina samaajakke hidida kannadi..muulathha naavugalu namma darmagaLnne sariyaagi arthyisikodilla…!!!!indina swamijigaLige anna BASAVANNANA hesarettaluu arhateyilla…!!!!!!!!!!!

  2. nagraj.harapanahalli

    ವಚನ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಡ ಇರಲಿಲ್ಲ ಎಂದು ಪ್ರತಿಪಾದಿಸ ಹೊರಟ ಮನು ಸಂಕುಲಕ್ಕೆ ರಂಜಾನ್ ದರ್ಗಾ ಅವರ ಬರಹ ಸರಿಯಾದ ಉತ್ತರ ನೀಡಿದೆ …ಇಡೀ ವಚನ ಚಳುವಳಿಯ ಸಾರವನ್ನು ಹಿಡಿದಿಟ್ಟ ದರ್ಗಾ ಅವರ ಬರಹ ಅವರ ಅಧ್ಯಯನದ ಆಳ ಮತ್ತು ಅಗಲವನ್ನು ತಿಳಿಸುವಂತಿದೆ. ಯಾವ ಮಠದ ಸ್ವಾಮಿಗಳು… ದರ್ಗಾ ಅವರ ಜೊತೆ ವಾದಕ್ಕೆ ನಿಲ್ಲಲಾರರು .ನಕಲಿ ಸಂಶೋಧಕರೂ ಕೂಡ …….

    • Aravind Mitra

      Sir, The Heathen group doesn’t say that Vachanas are not against the caste system. Vachans were against everything that disturbed the spiritual journey and caste system is one of the restrains that would impede a man’s spiritual journey.

      • Ramjan Darga

        ಅರವಿಂದ ಮಿತ್ರ ಅವರು ಹೇಳುವುದು ಸಂವೇದನಾಶೀಲವಾಗಿದೆ. ಅವರ ವಿಚಾರ ಬಾಲು ಗುಂಪಿನವರ ವಿಚಾರವಾಗಿದ್ದರೆ ಸಂತೋಷ. ಶರಣರು ಅನುಭಾವಕ್ಕೆ ವಿರುದ್ಧವಾದುದೆಲ್ಲವನ್ನೂ ತಿರಸ್ಕರಿಸಿದರು. ಅವುಗಳಲ್ಲಿ ಜಾತಿ,ಕುಲ,ಲಿಂಗಭೇದ,ವರ್ಗಭೇದ ಮತ್ತು ಅಸ್ಪೃಶ್ಯತೆ ಕೂಡ ಬರುತ್ತವೆ.

    • Amaresh

      Who is nakali? Please clarify to avoid misunderstanding.

      • Ramjan Darga

        ಅಮರೇಶ್ ಅವರು ಬಿಜನಳ್ಳಿಯ ಚಮ್ಮಾವುಗೆಗಳ ಬಗ್ಗೆ ಬರೆಯುತ್ತ ‘ಸ್ಥಾವರಕ್ಕಳಿವುಂಟು’ ಎಂದು ಶರಣರು ಹೇಳಿದ್ದನ್ನು ನಾನು ಮರೆತಿರುವುದಾಗಿ ತಿಳಿಸಿದ್ದಾರೆ. ಅವುಗಳಿಗಾಗಿ ಸ್ಮಾರಕ ಭವನ ನಿರ್ಮಿಸಬೇಕೆಂಬ ನನ್ನ ಆಶಯವನ್ನು ಅಲ್ಲಗಳೆದಿದ್ದಾರೆ. ಅದು ಸ್ಥಾವರ ಎಂದು ವಾದಿಸಿದ್ದಾರೆ. ಬಸವತತ್ತ್ವದ ಪ್ರಕಾರ ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರ! ಸೂರ್ಯ, ಚಂದ್ರ, ಪೃಥ್ವಿ ಕೂಡ ಸ್ಥಾವರ. ನಾನು ಮತ್ತು ಅಮರೇಶ್ ಕೂಡ ಸ್ಥಾವರರೆ. ಆದರೆ ನಮ್ಮೊಳಗೆ ಜೀವವಿರುವ ವರೆಗೆ ಮಾತ್ರ ಚಲನಶೀಲರಾಗಿರುತ್ತೇವೆ. ಗಂಟೆಗೆ ಸಾವಿರ ಮೈಲಿ ಹೋಗುವ ವಿಮಾನ ಕೂಡ ಸ್ಥಾವರ. ಅದರೊಳಗಿನ ಇಂಧನ ಮುಗಿದ ಮೇಲೆ ಅದು ನಿಷ್ಕ್ರಿಯವಾಗಿರುತ್ತದೆ. ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರವೆ. ಅದಕ್ಕೆ ಸಾವು ಎಂಬುದು ಕಟ್ಟಿಟ್ಟ ಬುತ್ತಿ. ಅಂತೆಯೆ ಅಲ್ಲಮ ಪ್ರಭುಗಳು ‘ರೂಪಿಂಗೆ ಕೇಡುಂಟು’ ಎಂದು ಹೇಳುತ್ತಾರೆ. ಚೈತನ್ಯದಿಂದ ವಸ್ತುವಿನ ನಿರ್ಮಾಣವಾಗಿದೆ. ಆ ವಸ್ತು ಕೊನೆಗೊಂದು ದಿನ ನಿರ್ನಾಮವಾಗಿ ಚೈತನ್ಯವಾಗುತ್ತದೆ. ಈ ವೈಜ್ಞಾನಿಕ ಸತ್ಯವನ್ನು ಶರಣರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಆ ಕಾರಣದಿಂದಲೇ ಬಸವಣ್ಣನವರು ‘ಸ್ಥಾವರ ಜಂಗಮ ಒಂದೆ ಎಂಬೆ’ ಎಂದೂ ಹೇಳಿದ್ದಾರೆ. ಜಂಗಮ ಎಂಬುದೇ ಚೈತನ್ಯ, ಸ್ಥಾವರ ಎಂಬುದೆ ವಸ್ತು. (ಜಂಗಮಕ್ಕೆ 8 ಅರ್ಥಗಳಿವೆ) ಈ ಸಂದರ್ಭದಲ್ಲಿ ಅದು ಚೈತನ್ಯ ಎಂಬ ಅರ್ಥ ಕೊಡುತ್ತದೆ.

  3. Aravind Mitra

    The title of this column “Vachanada Mele Dandetti…” is misleading. The Heathen group is not for or against Vachanas. I mean they are not questioning vachanas but the interpretations of Vachanas.

    • Ramjan Darga

      ಶೀರ್ಷಿಕೆ ಸಂಪಾಕರಿಗೆ ಸಂಬಂಧಿಸಿದ್ದು. ಅವರು ಯೋಚನೆ ಮಾಡಿಯೇ ಕೊಟ್ಟಿದ್ದಾರೆ.

  4. Amaresh

    Nothing new.

    • Ramjan Darga

      ಹೌದು ಯಾವುದೂ ಹೊಸದಲ್ಲ. ಆದರೆ ಎಲ್ಲವೂ ಸತ್ಯ.

  5. Amaresh

    Dear Friends, ಹರಳಯ್ಯನ ಚಮ್ಮಾವುಗೆ ಬಗ್ಗೆ ಬರೆಯುತ್ತಾ ದರ್ಗಾ ಅವರು “ಹರಳಯ್ಯನವರ ವಚನಗಳು ಸಿಕ್ಕಿಲ್ಲ. ಆದರೆ ಅವರು ಬಸವಣ್ಣನವರಿಗೆ ಕೊಟ್ಟ ಕಲಾತ್ಮಕ ಚಮ್ಮಾವುಗೆಗಳು ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿವೆ. ಬಸವಣ್ಣನವರು ಸ್ಪರ್ಶಿಸಿದ ಇನ್ನೊಂದು ಚರವಸ್ತು ಈ ಜಗತ್ತಿನಲ್ಲಿ ಉಳಿದಿಲ್ಲವಾದ ಕಾರಣ ಈ ಚಮ್ಮಾವುಗೆಗಳು ಅಮೂಲ್ಯವಾಗಿವೆ… ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಎಡ ತೊಡೆಯ ರೂಪಾಯಿ ಅಗಲ ಚರ್ಮ ಎಡ ಚಮ್ಮಾವುಗೆಯಲ್ಲಿ ಇದೆ. ಅದೇರಿತಿ ಹರಳಯ್ಯನವರ ಬಲ ತೊಡೆಯ ರೂಪಾಯಿಯಗಲ ಚರ್ಮ ಬಲ ಚಮ್ಮಾವುಗೆಯಲ್ಲಿದೆ. ” ಅಂತ ಹೇಳಿದ್ದಾರೆ
    ದರ್ಗಾ ಅವರು ಹರಳಯ್ಯನ ಚಮ್ಮಾವುಗೆ ಎಂದು ನಂಬಿರುವ ಹರಳಯ್ಯನ ಚಮ್ಮಾವುಗೆಯನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದರೆ ಅದರ ಸತ್ಯಾಸತ್ಯತೆ ಹೊರಬರುವ ಸಾಧ್ಯತೆ ಇದೆ. ಆದರೆ ದರ್ಗಾ ಅವರು ವೈಜ್ಞಾನಿಕ ಪರೀಕ್ಷೆಯ ಗೊಡವೆಗೆ ಹೋಗದೆ “ರಾಜ್ಯಸರ್ಕಾರ ಕೂಡಲೆ ಕ್ರಮಕೈಗೊಂಡು ಶರಣರ ಈ ಏಕೈಕ ಚರವಸ್ತುವನ್ನು ಸರ್ಕಾರದ ಸೊತ್ತೆಂದು ಘೋಷಿಸಬೇಕು. ಬಸವಕಲ್ಯಾಣ ಪ್ರಾಧಿಕಾರದ ಅಡಿಯಲ್ಲಿ, ಬಿಜನಳ್ಳಿಯಲ್ಲಿಯೇ ಈ ಚಮ್ಮಾವುಗೆಗಳಿಗಾಗಿ ನಯನಮನೋಹರವಾದ ಸ್ಮಾರಕಭವನವನ್ನು ನಿಮಿಸಬೇಕು” ಅಂತ ಆಗ್ರಹಿಸಿದ್ದಾರೆ! ಸ್ಥಾವರಕ್ಕಳಿವು ಎಂದು ವಚನಕಾರರೇ ಹೇಳಿದ್ದನ್ನು ಮರೆತುಬಿಟ್ಟಿದ್ದಾರೆ.

    • Ramjan Darga

      ನನ್ನ ‘ಅವಧಿ’ ಲೇಖನದಲ್ಲಿ ಇಲ್ಲದ ವಿಚಾರವಿದು. ನಾನು ಬಿಜನಳ್ಳಿಗೆ 3 ಸಲ ಹೋಗಿದ್ದೇನೆ. ಚಮ್ಮಾವುಗೆಗಳ ಅಟ್ಟೆಗಳಲ್ಲಿ ರೂಪಾಯಿ ಅಗಲವಿರುವ ಚರ್ಮದ ತುಕಡಿಗಳನ್ನೂ ನೋಡಿದ್ದೇನೆ. ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದ್ದು, ಅವು ಮಾನವ ಚರ್ಮದ ತುಕಡಿಗಳು ಎಂಬುದು ಸಿದ್ಧವಾಗಿದೆ ಎಂದು ಅವುಗಳ ಉಸ್ತುವಾರಿ ಮಾಡುವವರು ತಿಳಿಸಿದ್ದಾರೆ. ಅವಧಿಗೆ ಚೆಮ್ಮಾವುಗೆಗಳ ಚಿತ್ರವನ್ನೂ ಕಳುಹಿಸಿದ್ದೇನೆ. ಅಮರೇಶ್ ಅವರಿಗೆ ಮನವರಿಕೆಯಾಗದಿದ್ದರೆ ಬಿಜನಳ್ಳಿಗೆ ಹೋಗಿ ಬರುವುದು ಲೇಸು.

  6. Satyanarayana BR

    <<>>
    ಲೇಖಕರ ಈ ಅಭಿಪ್ರಾಯ ಸಕಾರಣವಾಗಿಯೇ ಇದೆ. ಈ ಕಾರಣದಿಂದಲೇ ಏನೋ, ಸಂಪ್ರದಾಯ ಮೂಢರ ಕೆಂಗಣ್ಣಿಗೆ, ನಿರಾಕರಣಗೆ ವಚನಚಳುವಳಿ ಮತ್ತು ವಚನ ಸಾಹಿತ್ಯ ಒಳಗಾಗಬೇಕಾಯಿತು. ಅವುಗಳ ಮಹತ್ವವನ್ನು ಮಸುಕಾಗಿಸುವ ವ್ಯವಸ್ಥಿತ ಸಂಚು ಅಂದಿನಿಂದಲೆ ಅಂದರೆ ಸುಮಾರು 850 ವರ್ಷಗಳಿಂದಲೇ ನಡೆದುಕೊಂಡು ಬಂದಿದೆ. ಈಗಲೂ ನಡೆಯುತ್ತಿದೆ. ಬಹುಶಃ ಮುಂದೆಯೂ ನಡೆಯುತ್ತದೆ ಕೂಡಾ. ಇಂತಹ ಸಂಚಿನಲ್ಲಿ ಹೊರಗಿನವರು ಸೃಷ್ಟಿಸುವ ಆತಂಕಕ್ಕಿಂತ, ಬೆಳಗಾಗ ಎದ್ದು ಶರಣರ ಹೆಸರು ಹೇಳುವ ಒಳಗಿನವರು ಸೃಷ್ಟಿಸುವ ಆತಂಕವೇ ಹೆಚ್ಚು ಅಪಾಯಕಾರಿಯಾಗಿದೆ.
    ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಸಾಲೊಂದೇ ಸಾಕು; ವಚನಗಳ ಜೀವಂತಿಕೆ, ಚಲನಶೀಲತೆಯನ್ನು ಅರ್ಥ ಮಾಡಿಕೊಳ್ಳಲು. ಹೊಸದೇನಿಲ್ಲ ಎಂದು ಕೈವಾರಿಸಿದಷ್ಟು ಸುಲಭವಲ್ಲ, ವಚನಗಳ ಚಲನಶೀಲತೆಯನ್ನು ನಿರಾಕರಿಸುವುದು. ಬಸವನ ಅನುಯಾಯಿಗಳೇ ಸ್ಥಾವರಸ್ವರೂಪಿಯಾದ ಮಂಟಪ, ಮಹಾಮಂಟಪ, ದೇವಾಲಯ, ನೂರು ಇನ್ನೂರು ಅಡಿಎತ್ತರದ ವಿಗ್ರಹಗಳನ್ನು ಮಾಡಿಸುತ್ತಾ ಮಠ-ಮತ ರಾಜಕೀಯ ಮಾಡುತ್ತಿದ್ದಾಗ್ಯೂ, ಅಂತವರ ನಡುವೆಯೂ ವಚನಗಳು ತಮ್ಮ ಚಲನಶೀಲತೆಯನ್ನು ಕಳೆದುಕೊಂಡಿಲ್ಲ ಎಂಬುದು ಗಮನಾರ್ಹ.
    ಸಾಮಾನ್ಯವಾಗಿ ಜಾತಿ, ವರ್ಗ, ವರ್ಣ ವಿಷಯಗಳು, ಆಹಾರಪದ್ಧತಿ, ಸಮಾನತೆ, ಮಹಿಳೆ ಮೊದಲಾದ ವಿಷಯಗಳು ಬಂದಾಗಲೆಲ್ಲಾ ವಚನಗಳು ಚರ್ಚೆಗೆ ಬರುತ್ತವೆ ಎಂಬುದೂ ಅವುಗಳ ಸಾರ್ವಕಾಲಿಕತೆಗೆ, ಸಾಕ್ಷಿಯಾಗಿದೆ. ಇಂತಹ ಚರ್ಚೆಯಲ್ಲಿ ವ್ಯಕ್ತವಾಗುವ ಪರ-ವಿರೋಧವಾದ ನಿಲುವನ್ನೂ ತಾಳಿಕೊಳ್ಳುವ, ಅದರ ಮೂಲಕ ಮತ್ತೂ ಪ್ರಸ್ತುತವಾಗುತ್ತಾ ಹೋಗುವುದರಿಂದಲೇ ಅವು ಹೆಚ್ಚು ಚಲನಶೀಲವಾಗಿವೆ.
    ಯಾರೊ, ಯಾವುದೋ ಕಾರಣದಿಂದಲೋ ವಚನಗಳ ಉದ್ದೇಶ ಜಾತಿನಿರಾಕರಣೆಯಾಗಿರಲಿಲ್ಲ, ವಚನ ಚಳುವಳಿಯ ಉದ್ದೇಶವೂ ಅದಾಗಿರಲಿಲ್ಲ ಎಂದಾಕ್ಷಣ ಯಾರೂ ವಚನಗಳ ಬಗ್ಗೆ, ಅವುಗಳ ಮಹತ್ವದ ಬಗ್ಗೆ ಆತಂಕಕ್ಕೆ ಒಳಗಾಗಬೇಕಿಲ್ಲ. ಪರಿಸರದಂತೆ ತನ್ನನ್ನು ತಾನು ಶಕ್ತವಾಗಿಸಿಕೊಳ್ಳುವ, ಆ ಮೂಲಕ ಮತ್ತೂ ಗಟ್ಟಿಯಾಗುವ ಶಕ್ತಿ ವಚನ ಸಾಹಿತ್ಯಕ್ಕಿದೆ. ನಮ್ಮ ವ್ಯವಸ್ಥೆ (ಜಾತಿ, ಮೇಲುಕೀಳು, ಅಸ್ಪೃಷ್ಯತೆ,ಅಸಮಾನತೆ,….) ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿರುವುದರಿಂದಲೇ ಎಂಟನೂರು ಐವತ್ತು ವರ್ಷಗಳ ನಂತರವೂ ವಚನಗಳ ಮಹತ್ವವೂ ಹೆಚ್ಚಾಗುತ್ತಾ ಸಾಗುತ್ತಿದೆ. ಗಮನಿಸಬೇಕು: ಒಂದೊಮ್ಮೆ ಎಲ್ಲವೂ ಸುಧಾರಣೆಯಾದರೂ ವಚನಗಳು ಬೇರೊಂದು ರೂಪದಲ್ಲಿ ಪ್ರಸ್ತುತವಾಗಿಯೇ ಉಳಿಯುತ್ತವೆ, ಅವುಗಳಿಗಿರುವ ಬಹುಆಯಾಮದ ಅರ್ಥವಂತಿಕೆಯಿಂದ! ಏಕೆಂದರೆ ಅವು ಕೇವಲ ಬಹಿರಂಗಕ್ಕೆ ಸಂಬಂಧಿಸಿದವುಗಳು ಮಾತ್ರವಾಗಿರದೆ, ಅಂತರಂಗಕ್ಕೂ ಸಂಬಂಧಿಸಿದವುಗಳಾಗಿವೆ.
    ಹಾಗೆ ನೋಡಿದರೆ, ವಚನಗಳು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಾ ಹೋಗುತ್ತಿರುವುದು, ಮಠಗಳ ಕಾರಣದಿಂದಲ್ಲ; ಮಠಗಳಿಂದ ಒಂದು ಮಾನಸಿಕ ದೂರವನ್ನು ಕಾಪಾಡಿಕೊಂಡಿರುವ ಸಾಮಾನ್ಯ ಜನರಿಂದ, ಓದುಗರಿಂದ, ಹಾಗೂ ಬರಹಗಾರರಿಂದ!
    ಇಂತಹ ಒಂದು ಚರ್ಚೆಗೆ ತೆರೆದುಕೊಂಡಿರುವ ರಂಜಾನ್ ದರ್ಗಾ ಅವರಿಗೂ, ವೇದಿಕೆಯಾಗಿರುವ ಅವಧಿಗೂ ಅಭಿನಂದನೆಗಳು

  7. samyuktha

    ಫೇಸ್ಬುಕ್ ನ ಒಂದು ಕಾಮೆಂಟಿನಲ್ಲಿ ಅಶೋಕ್ ಶೆಟ್ಟರ್ ಸರ್ ಅವರು. ರಂಜಾನ್ ದರ್ಗಾ ಅವರು ಇನ್ನೂ ಯಾಕೆ ಈ ವಚನಗಳ ಬಗೆಗಿನ ಚರ್ಚೆಗೆ ತಮ್ಮ ನಿಲುವು ವ್ಯಕ್ತ ಪಡಿಸುತ್ತಿಲ್ಲ ಎಂದು ಕೋಪದಿಂದಲೇ ಹೇಳಿದ್ದರು. ಅವರ ಆ ಪ್ರತಿಕ್ರಿಯೆ ಎಷ್ಟು ಸಮಂಜಸ ಎಂದು ಈ ಲೇಖನ ತಿಳಿಸುತ್ತದೆ. ಗಟ್ಟಿ ಮಾತಿನ,ಸಕಾಲಿಕ ಬರಹ!

    • Somalinga Kharge

      ಹೌದಲ್ಲವೇ! ಈಗ ರಂಜಾನ್ ಸರ್ ಸ್ವತಃ ಅವಧಿ ವೇದಿಕೆಯಲ್ಲಿ ವಚನಗಳ ಬಗ್ಗೆ ಚರ್ಚೆಗೆ ಇಳಿದಿರುವುದರಿಂದ ಅಶೋಕ್ ಶೆಟ್ಟರ್ ಸರ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿ ಚರ್ಚೆಯ ಘನತೆ ಹಾಗೂ ಗಾಂಭೀರ್ಯವನ್ನು ಹೆಚ್ಚಿಸಬೇಕು ಅಂತ ಸವಿನಯ ಪ್ರಾರ್ಥನೆ. ಈ ಹಿಂದೆ ಶೆಟ್ಟರ್ ಸರ್ ಹಾಗೂ “ದಂಡೆತ್ತಿ ಬಂದವರು” ನಡುವೆ ಸ್ವಲ್ಪ ಪ್ರಮಾಣದ ಚರ್ಚೆ ಆಗಿತ್ತು. ಶೆಟ್ಟರ್ ಸರ್ “ಪರಿಕಲ್ಪನೆಗಳನ್ನು ಕಟ್ಟಿ, ಹೈಪಾಥಿಸಿಸ್ ಗಳನ್ನು ರೂಪಿಸಿ, ಥೀಸೀಸ್ ಹೊಸೆಯುವದು ಶರಣರ ಮಿಶನ್ ಆಗಿರಲಿಲ್ಲ” ಅಂತ ಮಾರ್ಮಿಕವಾಗಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದರು. ಆದರೆ “ದಂಡೆತ್ತಿ ಬಂದವರು” ಶೆಟ್ಟರ್ ಸರ್ ಅವರಿಗೆ “The discussion is whether this is a particular type of movement called anti caste movement? No doubt there was ಜಾತಿ ಬೇಧ, and criticism of such practice as ಅನ್ಯಾಯ in the literature. But what we have to take note of is that such criticisms are common to all the ಆಧ್ಯಾತ್ಮಿಕ traditions right from ಉಪನಿಷದ್, through Buddhism and Jainism to ಅದ್ವೈತ and ಭಕ್ತಿ traditions. These traditions consider any such ಬೇಧ along with several other human qualities as ಉಪಾಧಿ and instruct the follower to avoid them. There is a common agreement that a ಜ್ಞಾನಿ has to get rid of them. But none of these traditions including ವಚನ say that ಜಾತಿ and ಕುಲ should be eradicated from the world itself” ಅಂತ ಪ್ರತ್ಯಾಸ್ತ್ರ ಹೂಡಿದರು. ಆದರೆ ಪ್ರತ್ಯಾಸ್ತ್ರಕ್ಕೆ ಅವರು ಉತ್ತರ ಕೊಡಲಿಲ್ಲ. ಬಹುಶಃ “ದಂಡೆತ್ತಿ ಬಂದವರು” ಜೊತೆಗೆ ಚರ್ಚೆ ಮುಂದುವರೆಸಲು ಶೆಟ್ಟರ್ ಸರ್ ಅವರಿಗೆ ಆ ಸಂದರ್ಭದಲ್ಲಿ ಆಸಕ್ತಿ ಇಲ್ಲದೇ ಹೋಗಿರಬಹುದು ಅಥವಾ ರಂಜಾನ್ ಸರ್ ಬರೆದ ಮೇಲೆ ಉತ್ತರಿಸುವ ಅಂತ ಸುಮ್ಮನಿದ್ದಿರಬಹುದು. ಈಗ ರಂಜಾನ್ ಸರ್ ಅವರೇ ಮುಂಚೂಣಿ ವಹಿಸಿರುವುದರಿಂದ ಶೆಟ್ಟರ್ ಸರ್ ಕೂಡ ಅಂಜಿಕೆಯಿಲ್ಲದೆ ಚರ್ಚೆಯಲ್ಲಿ ಭಾಗವಹಿಸಿ “ದಂಡೆತ್ತಿ ಬಂದವರು” ತುಟಿ ಬಿಚ್ಚದ ಹಾಗೆ ಮಾಡಬೇಕು ಅಂತ ಪ್ರಾರ್ಥನೆ.

  8. Somalinga Kharge

    ರಂಜಾನ್ ಸರ್, “ಆತ್ಮಗೌರವಕ್ಕಾಗಿ ವೈದಿಕದ ಕ್ರೌರ್ಯದ ವಿರುದ್ಧ ಹೋರಾಡಿದ ಶೂದ್ರರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪೃಶ್ಯರನ್ನಾಗಿಸಲಾಯಿತು.ಹಾಗೆ ಬಹಿಷ್ಕಾರಕ್ಕೊಳಗಾದವರನ್ನು ಪಂಚಮರೆಂದು ಕರೆಯಲಾಯಿತು.ಈ ಪಂಚಮರೇ ಅತಿಶೂದ್ರರು. ಅನ್ಯಾಯದ ಸಾಮಾಜಿಕ ಬಹಿಷ್ಕಾರ ಅವರ ಪೀಳಿಗೆಗೆ ಮುಂದವರಿಯುತ್ತ ಸಾಗಿದ್ದರಿಂದಲೇ ಅಸ್ಪೃಶ್ಯ ಜಾತಿಗಳು ಹುಟ್ಟಿಕೊಂಡವು” ಅಂತ ಬರೆದಿದ್ದೀರಿ. ನೀವು ಬರೆದಿರುವುದು ಸತ್ಯವೇ ಆಗಿದ್ದರೆ ವೈದಿಕರದ್ದು ನಿಜಕ್ಕೂ ಘೋರ ಹಾಗೂ ಅಕ್ಷಮ್ಯ ಅಪರಾಧ. ಆದರೆ ನಿಮ್ಮದು ಬರೆ ಆಧಾರರಹಿತ ಆಪಾದನೆ ಅಂತ “ದಂಡೆತ್ತಿ ಬಂದವರು” ಹೇಳಬಹುದು. ಅವರ ಬಾಯಿ ಮುಚ್ಚಿಸುವಂತಹ ಪುರಾವೆಗಳನ್ನು ದುರದೃಷ್ಟವಶಾತ್ ನೀವು ಮೇಲಿನ ಲೇಖನದಲ್ಲಿ ಕೊಟ್ಟಿಲ್ಲ, ಈ ಹಿಂದೆ ಲಡಾಯಿ ಬ್ಲಾಗಿನಲ್ಲಿ ಪ್ರಕಟವಾದ ದೀರ್ಘ ಲೇಖನದಲ್ಲೂ ಕೊಟ್ಟಿಲ್ಲ. “ದಂಡೆತ್ತಿ ಬಂದವರು” ಅಷ್ಟೇ ಅಲ್ಲ ಆಧಾರ ಪುರಾವೆಗಳನ್ನೇ ನೆಚ್ಚಿಕೊಂಡಿರುವ ಆಧುನಿಕ ಇತಿಹಾಸ ಶಾಸ್ತ್ರ ಕೂಡ ಈ ಕುರಿತು ತಕರಾರು ತೆಗೆಯುವುದು ನಿಸ್ಸಂದೇಹ. ಆಧಾರ ಪುರಾವೆಗಳಿಲ್ಲದೇ ಕೇವಲ ಸದುದ್ದೇಶದಿಂದ ಚರಿತ್ರೆ ಹೀಗಿತ್ತು ಹೀಗಿರಲಿಲ್ಲ ಅಂತ ಇಂದಿನ ವೈಜ್ಞಾನಿಕ ಯುಗದಲ್ಲಿ ಸಾಧಿಸಲಾಗದು. ಆದುದರಿಂದ ನೀವು ಮುಂದಿನ ಬರಹದಲ್ಲಾದರೂ “ಆತ್ಮಗೌರವಕ್ಕಾಗಿ ವೈದಿಕದ ಕ್ರೌರ್ಯದ ವಿರುದ್ಧ ಹೋರಾಡಿದ ಶೂದ್ರರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪೃಶ್ಯರನ್ನಾಗಿಸಲಾಯಿತು” ಎಂಬುದಕ್ಕೆ “ದಂಡೆತ್ತಿ ಬಂದವರು” ತುಟಿ ಬಿಚ್ಚಲಾಗದಂತಹ ಆಧಾರ ಪುರಾವೆಗಳನ್ನು ಕೊಡಿ ಅಂತ ನಿಮ್ಮನ್ನು ವಿನಯಪೂರ್ವಕವಾಗಿ ಆಗ್ರಹಪಡಿಸುತ್ತೇನೆ. “ಆತ್ಮಗೌರವಕ್ಕಾಗಿ ವೈದಿಕದ ಕ್ರೌರ್ಯದ ವಿರುದ್ಧ ಹೋರಾಡಿದ ಅತಿಶೂದ್ರರಾದ ಪಂಚಮ” ರಲ್ಲೇ ಅಸ್ಪೃಶ್ಯತೆ ಹಾಗೂ ಜಾತಿಭೇದ ಕಂಡುಬರುವುದಕ್ಕೆ ಏನು ಕಾರಣಗಳಿರಬಹುದು ಅಂತ ಕೂಡ ಬೆಳಕು ಚೆಲ್ಲಿ “ದಂಡೆತ್ತಿ ಬಂದವರು” ಎತ್ತಬಹುದಾದ ತಕರಾರುಗಳಿಗೆ ಮೊದಲೇ ಉತ್ತರ ಕೊಡಿ. ನಿಮಗೆ ನನ್ನಿ.

    • Ramjan Darga

      ಅಂಬೇಡ್ಕರರ ಇಂಗ್ಲಿಷ್ ಏಳನೇ ಸಂಪುಟದಲ್ಲಿ, 237ನೇ ಪುಟದಿಂದ 266ನೇ ಪುಟಗಳ ವರೆಗೆ ಓದಿರಿ. ಅಸ್ಪ್ರಶ್ಯರು ಯಾರು? ಅವರೇಕೆ ಅಸ್ಪೃಶ್ಯರಾದರು ಎಂಬುದರ ಬಗ್ಗೆ ವಿವರಣೆ ಸಿಗುವುದು.

    • shivaganga rumma

      kharge sir avare manglore vijaya avaru sangrahisida ambedkarara jeevana sadhane pustakada 4th puta nodi

  9. nagraj.harapanahalli

    ವಚನ ಚಳುವಳಿ ಜಾತಿ ಪದ್ಡತಿ, ವರ್ಣ ವ್ಯವಸ್ಥೆಯ ವಿರುದ್ಡ ಇರಲಿಲ್ಲ ಎಂಬುದೇ ನಕಲಿ ಸಂಶೋಧನೆ. ಇದನ್ನು ಪ್ರತಿಪಾದಿಸ ಹೊರಟದ್ದು ನಕಲಿ ಅಲ್ಲದೇ ಮತ್ತಿನ್ನೇನು ? ಪುರೋಹಿತಶಾಹಿ ಪ್ರತಿನಿಧಿಗಳಂತೆ ಸತ್ಯವನ್ನೇ ತಿರುಚ ಹೊರಟು , ಈಗ ರಂಜಾನ್ ಅವರ ಬಳಿ ಪುರಾವೆ ನೀಡಿ ಅಂದರೆ…..ನೀವು ವ್ಯಾಖ್ಯಾನಿಸಿರುವುದು ವಚನಗಳನ್ನು ಆಧರಿಸಿ, ವಚನಗಳನ್ನು ಮೂಗಿನ ನೇರೆಕ್ಕೆ ಮನಬಂದಂತೆ ವ್ಯಾಖ್ಯಾನಿಸಿ ಅದನ್ನೇ ಸಂಶೋಧನೆ ಎಂದರೆ ಅದು ನಕಲಿ ಅಲ್ಲದೇ ಮತ್ತಿನ್ನೇನು? ವಿತಂಡವಾದ ಬೇಡ. ನಕಲಿಗೆ ವೇತನ ಸಿಕ್ಕಿದ್ದರೆ ಮೌನ ವಹಿಸಿ. ವ್ಯಾಖ್ಯಾನವನ್ನ ಕಸದ ಬುಟ್ತಿಗೆ ಎಸೆಯಿರಿ.

    • Aravind Mitra

      Nagraja sir, please try to understand the context in which Balu and the group are placing vachanas. They have not said that Vachanas “do not speak against the caste.” They just say that caste system is denied by vachanakaras only as a medium to achieve the state of sayujya and salvation. I request you to read the articles published on nilume in detail before making sweeping statements. And balu group is not undermining the importance of vachanas.

      • Ramjan Darga

        ‘ಜಾತಿಗಳೇ ಇಲ್ಲ’ ಎಂದು ಹೇಳುವುದು. ‘ಮುಕ್ತಿಯನ್ನು ಸಂಪಾದಿಸುವುದಕ್ಕಾಗಿ ವಚನಕಾರರು ಜಾತಿಯನ್ನು ವಿರೋಧಿಸಿದರು’ ಎಂದು ಹೇಳುವುದು ವಿರೋಧಾಭಾಸದಿಂದ ಕೂಡಿಲ್ಲವೆ? ಕೂಡಲಸಂಗನ ಶರಣರು ಅಚ್ಚ ಲಿಂಗೈಕ್ಯರು. ಅವರು ಜೀವಂತವಿದ್ದಾಗಲೇ ಮುಕ್ತಿಯನ್ನು ಹೊಂದುವವರು.

  10. Amaresh

    “ವಚನಗಳನ್ನು ಮೂಗಿನ ನೇರೆಕ್ಕೆ ಮನಬಂದಂತೆ ವ್ಯಾಖ್ಯಾನಿಸಿ ಅದನ್ನೇ ಸಂಶೋಧನೆ ಎಂದರೆ” this is exactly what Ranjan Darga has done? Look he superimposes modern institutions and ideologies to vachanas!!

    • Ramjan Darga

      ಹಾಗದರೆ ವೇದಗಳಲ್ಲಿ ಹೇಳಿದ್ದು ಸರಿಯೊ? ನೀವು ಟೀಕಿಸುವುದು ಯಾರ ಮೂಗಿನ ನೇರಕ್ಕೆ?

  11. ಉದಯಕುಮಾರ್ ಹಬ್ಬು

    ವಚನಗಳ ಸಾರವೇ ಸಮಾನತೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನಗಳಾಗಿವೆ. ಶಿವ ಭಕ್ತರನ್ನೆಲ್ಲ ಒಂದೇ ಎಂಬೆ ಇದುವೇ ಬಸವಣ್ಣನ ಅಧ್ಯಾತ್ಮ ಸಿದ್ಧಾಂತವಾಗಿದೆ. ಭಕ್ತಿಯ ಮೂಲಕ ಕಾಯಕದಲ್ಲಿ ಶಿವನನ್ನು ಕಾಣು. ಮತ್ತು ಅಸ್ಪ್ರಷ್ಯರು ಜಪಾನಿನಲ್ಲಿಯೂ ಇದ್ದರೆ ಎಂದು ಮರಾಠಿ ದಲಿತ ಕಾದಂಬರಿಕಾರರೊಬ್ಬರು ಬರೆಯುತ್ತಾರೆ. ಅಲ್ಲಿ ಅಸ್ಪ್ರಶ್ಯರನ್ನು ಬರಾಕುಮಿ ಎಂದು ಕರೆಯಲಾಗುತ್ತದೆ.ಅಲ್ಲಿ ಅಸ್ಪ್ರಶ್ಯತೆ ಬರಲು ಕಾರಣರಾರು ಹಾಗೆ ನಮ್ಮ ದೇಶದಲ್ಲಿನ ಅಸ್ಪ್ರಶ್ಯತೆಗೆ ಯಾರು ಕಾರಣರು?ಎಲ್ಲ ವರ್ಣದವರನ್ನು ಶೂದ್ರರನ್ನೂ ಮತ್ತು ಅತಿ ಶೂದ್ರರನ್ನೂ ಒಗ್ಗೂಡಿಸುವ ಬಗೆ ಹೇಗೆ? ಇದೆ ಬಹುಶಃ ಬಸವಣ್ಣನ ಮುಖ್ಯ ಅಜೆಂಡಾವಾಗಿತ್ತೇ?

    • Ramjan Darga

      ಜಾತಿ ವಿಚಾರ ಜಪಾನಿನಲ್ಲೂ ಈಜಿಪ್ತನಲ್ಲೂ ಇದೆ. ಉಳಿದೆಡೆ ಜಾತಿಗಳು ಮತ್ತು ಅಸ್ಪೃಶ್ಯತೆ ಇಲ್ಲದಿದ್ದರೂ ವೃತ್ತಿ ಸಂಘಗಳಿದ್ದವು. ಇವುಗಳೀಗೆ ಗಿಲ್ಡ್ ಗಳೆಂದು ಕರೆಯುತ್ತಾರೆ. ಆದರೆ ವರ್ಣವಾದ ಎಲ್ಲೆಡೆ ಇದೆ. ದಕ್ಷಿಣ ಆಫ್ರಿಕಾದ ಕರಿಯರಲ್ಲೂ 10 ಮುಖ್ಯ ವರ್ಣಗಳಿವೆ. ಮಂಡೇಲಾ ಅವರು ಅತಿ ಚಿಕ್ಕ ಜನಸಂಖ್ಯೆಯ ಕಪ್ಪು ಜನಾಂಗಕ್ಕೆ ಸೇರಿದವರು. ಜುಲು ಜನಾಂಗ ಅತಿ ದೊಡ್ಡದು. ಆದರೆ ಆ ಜನಾಂಗದ ನಾಯಕ ಮಂಗೊಸುತು ಬುಥಲೆಜಿಗೆ ಕರಿಯರ ಒಗ್ಗಟ್ಟನ್ನು ಸಾಧಿಸಲಿಕ್ಕಾಗಲಿಲ್ಲ. ಮಂಡೇಲಾ ಆ ಪ್ರಯತ್ನ ಮಾಡಿದರು.
      ಹೀಗೆ ತುಳಿತಕ್ಕೊಳಗಾದವರು ಎಲ್ಲೆಡೆ ಹರಿದು ಹಂಚಿ ಹೋಗಿದ್ದರಿಂದಲೇ ಇಂದಿಗೂ ಶೋಷಣೆ ಮುಂದುವರಿದಿದೆ.

  12. Girish

    ಅರವಿಂದ ಮಿತ್ರ ಅವರೇ ನಿಮ್ಮ ಪ್ರಕಾರ ನಿಲುಮೆಯಲ್ಲಿ ಪ್ರಕಟವಾಗಿರುವ ಲೇಖನಗಳು ಮಾತ್ರ ಸತ್ಯ …. ನೀವು ಕೂಡ ನಿಮ್ಮ ಮೂಗಿನ ನೇರಕ್ಕೆ ವಚನಗಳನ್ನು ವ್ಯಾಖ್ಯಾನಿಸುತ್ತಿದ್ದಿರ ಅಲ್ಲವೇ ?
    ಅಮರೇಶ್ ಅವರೇ ವಚನಗಳನ್ನು ಬಿಡಿ ಬಿಡಿಯಾಗಿ ಓದಿದರೆ ಅರ್ಥ ಆಗುವುದು ಕಷ್ಟ .. ಕೆಲವು ವಚನಗಳನ್ನು ಅರ್ಥೈಸಿಕೊಳ್ಳಲು ಬೇರೆ ವಚನಗಳ ಜ್ಞಾನ ಇರಬೇಕಾದ ಅಗತ್ಯ ಇದೆ .. ನೀವು ಕೂಡ ವಚನ ಸಾಹಿತ್ಯ ವನ್ನು ಮಾಡಲು ಮತ್ತು ಅದರ ಮಹತ್ವವನ್ನು ನಾಶ ಮಾಡಲು ಇರುವ ‘ದಂಡೆತ್ತಿ ಬಂದವರು ‘ ಗುಂಪಿಗೆ ಸೇರಿರುವ ಹಾಗಿದೆ ನಿಮ್ಮ ಪ್ರತಿಕ್ರಿಯೆಗಳು

  13. ಸಹನಾ

    ವಚನಗಳ ಕುರಿತ ಆಧುನಿಕ interpretations ಗಳನ್ನು ವಿಮರ್ಶಿಸಿದರೆ ಅವದನ್ನು ವಚನಗಳ ಮೇಲೇನೆ ದಂಡೆತ್ತಿ ಬಂದವರು ಎಂದೇಕೆ ಬರೀತೀರಿ. ತಪ್ಪುಪ್ಪಾಗಿ ನಿರೂಪಿಸಿ ವಚನಗಳನ್ನು ಕ್ರಿಶ್ಚಿಯನ್ ಮತ್ತು ಪಾಶ್ಚಿಮಾತ್ಯ ಐಡಿಯಾಲಜಿಗಳಾಗಿಸುತ್ತಿರುವ ದರ್ಗಾರಂತಹವರ ವಿವರಣೆಗಳೇ ವಚನಗಳ ಮೇಲಿನ ದಾಳಿ ಎಂದೇಕೆ ಅನಿಸುವುದಿಲ್ಲ? ಇದು ವಚಗಳನ್ನು ಸರಿಯಾಗಿ ತಿಳಿದುಕೊಳ್ಳುವ ಪ್ರಯತ್ನವಲ್ಲ ಬದಲಿಗೆ ವಚನಗಳ ಮೇಲಿನ ದರ್ಗಾರ ನಿರೂಪಣೆಗಳಿಗೆ ಬಹುಪರಾಕ್ ಹೇಳುವ ವೇದಿಕೆ ಇದು. ಬಹುಪರಾಕ್ ಹೇಳಿ ಇಲ್ಲದಿದ್ದರೆ ನಾವು ನಿಮ್ಮನ್ನು ಅದೇ ‘ದಂಡೆತ್ತಿಬಂದ’ ಗುಂಪಿಗೆ ಸೇರಿಸಬೇಕಾಗುತ್ತದೆ ಅಂದರೆ ಏನು ಅರ್ಥ?

    • Ramjan Darga

      ಸಹನಾ ಅವರ ಅಸಹನೆಗೆ ಮಿತಿ ಇಲ್ಲ ಎನಿಸುತ್ತಿದೆ. ಪ್ರಶ್ನೆ ಕೇಳಿದರೆ ಉತ್ತರಿಸಬಹುದು. ವಿತಂಡ ವಾದ ಮಾಡಿದರೆ ಯಾರಿಗೂ ಪ್ರಯೋಜನವಿಲ್ಲ. ಈ ರೀತಿಯ ವಾದಕ್ಕೆ ಮನುವಾದಿ ಕುತಂತ್ರವೆನ್ನುವರು.

      • ಸಹನಾ

        ದರ್ಗಾ ರವರು ಬೌದ್ದಿಕ ಚರ್ಚೆಗಳಲ್ಲಿ ಉಪದೇಶ/ಪ್ರವಚನಗಳನ್ನು ನೀಡುವದನ್ನು ಬಿಟ್ಟು ತರ್ಕಬದ್ದವಾದ ವಾದ ಮಂಡಿಸಿದರೆ ಈ ಚರ್ಚೆ ವೈಜ್ಞಾನಿಕ ನೆಲೆಯಲ್ಲಿ ಮುಂದುವರಿಯಬಹುದು. ಕಾಲ ಬದಲಾಗಿದ್ದು ಮನುವಾದಿಯ ಗುಮ್ಮ ತೋರಿಸಿ ಈಗ ಪಾಂಡಿತ್ಯ ಮೆರೆಯುವ ಕಾಲದಲ್ಲಿ ನಾವಿಲ್ಲ. ಇದು ವಸಾಹತೋತ್ತರ ಚಿಂತನಾ ಯುಗ. ಮನು ಮತ್ತಿತರ ಧರ್ಮಶಾಸ್ತ್ರಗಳನ್ನು ಒಯ್ದು ತಿಪ್ಪೆಗುಂಡಿಗೆ ಎಸೆಯಿರಿ. ಅವಕ್ಕೂ ನಮ್ಮ ಜೀವನಕ್ಕೂ ಯಾವ ಸಂಬಂದವೂ ಇಲ್ಲ. ಅವನ್ನು ಕಟ್ಟಿಕೊಂಡು ನನಗೇನೂ ಆಗಬೇಕಿಲ್ಲ. ನಾನೂ ಸೇರಿದಂತೆ ಹಲವರು ತಾರ್ಕಿಕ ಪ್ರಶ್ನೆಗಳನ್ನು ಕೇಳಿ ಮತ್ತು ನಿಮ್ಮ ವಾದದಲ್ಲಿರುವ ಧೋಷಗಳನ್ನು ತೋರಿಸಿದ್ದೇವೆ. ಉಪದೇಶ ಬಿಟ್ಟು ತಾರ್ಕಿಕ ನೆಲೆಯಲ್ಲಿ ಉತ್ತರಿಸಿ . ಇಲ್ಲದಿದ್ದರೆ ಇಂದಿನ ಪೀಳಿಗೆಯ ಮುಂದಿರುವ ವೈಜ್ಞಾನಿಕ ವಾದಗಳ ನೆಲೆಯಲ್ಲಿ ಉಪದೇಶಗಳು ಜೊಳ್ಳಾಗಿಬಿಡುತ್ತದಷ್ಟೇ..(ಹಾಗೆಯೇ ಸಮಯ ಮೀರಿ ಯಾವಗಲೋ ಬಂದು ಎರಡು ಸಾಲು ಬರೆದರೆ ಎಲ್ಲರಿಗೂ ಉತ್ತರಿಸಿಬಿಟ್ಟ ಭಾವ ಸಿಗಬಹುದು. ಆದರೆ ಅದು ಚರ್ಚೆಯಾಗದು.)
        ಸಹನಾ

        • Ramjan Darga

          ಪ್ರಶ್ನೆಗೆ ಉತ್ತರವಿದೆ. ವಿತಂಡವಾದಕ್ಕೆ ಇಲ್ಲ.

          • ಸಹನಾ

            ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ತೀಕ್ಷ್ಣ ಪ್ರಶ್ನೆಗಳು ಇರುವ ಕಡೆ ಬಿಟ್ಟು ಇಲ್ಲಿ ಉತ್ತರಿಸುತ್ತಿದ್ದೀರಿ. ನಿಮ್ಮ ಉತ್ತರಗಳೂ ಉತ್ತರಗಳಹೆಸರಿನ ಉಪದೇಶಗಳಾಗಿವೆಯಷ್ಟೆ.
            PUC student also know that capitalism emerged after industrial revolution. The Industrial Revolution was the transition to new manufacturing processes in the period from about 1760 to some time between 1820 and 1840. only the word ‘capital’ used in 13th century. the word and idea of ‘capitalism’ to refer free market economy started after 18 century.

          • ಸಹನಾ

            ಫೇಸ್ ಬುಕ್ ನಲ್ಲಿ ನಿಮ್ಮ ಈ ಲೇಖನ ಸರಣಿಗೆ ಸಂಬಂದಿಸಿದಂತೆ ಹೀಗೊಂದು ಸ್ಟೇಟಸ್ ಮೆಸೇಜು ಇತ್ತು:
            ಹಿರಿಯ ರಾಜ್ಯಶಾಸ್ತ್ರ ಪ್ರಾಧ್ಯಪಕರೊಬ್ಬರು ಹೀಗೆ ಹೇಳುತ್ತಿದ್ದರು:” ಅಲ್ಲಯ್ಯ, ಪ್ರಾಚೀನ ಭಾರತೀಯ ಚಿಂತನೆಯಲ್ಲಿ ವಿಮಾನ ತಂತ್ರಜ್ಞಾನ ಸೇರಿದಂತೆ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳೆಲ್ಲವೂ ಇತ್ತು, ಪ್ರಜಾಪ್ರಭುತ್ವವಿತ್ತು, ಗಣರಾಜ್ಯವಿತ್ತು, ಚುನಾಯಿತ ಪ್ರಾತಿನಿಧಿಕ ಸರ್ಕಾರವಿತ್ತು, ಕಲ್ಯಾಣ ರಾಜ್ಯವಿತ್ತು, ಉದಾರವಾದವಿತ್ತು, ಸಂವಿಧಾನಿಕ ಪ್ರಭುತ್ವವಿತ್ತು ಅನ್ನೋರನ್ನು ಬಲಪಂಥೀಯ ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು/ಮೂಲಭೂತವಾದಿಗಳು ಎನ್ನುತ್ತಾರೆ. ನಿಜ ಒಪ್ಪೋಣ. ಅದೇ ವಚನಗಳ ಚಿಂತನೆಯಲ್ಲಿ ಮಾನವಹಕ್ಕು ಇತ್ತು, ಸ್ತ್ರೀವಾದ ಇತ್ತು, ವಿಶ್ವಸಂಸ್ಥೆಯ ಆಶಯ ಇತ್ತು, ಪರಿಸರವಾದ ಇತ್ತು, ಸಾಮಾಜಿಕ ನ್ಯಾಯ ಇತ್ತು, …… ಹೀಗೆ ಹೇಳೋರು ಹೇಗಯ್ಯ ಅವರಿಗಿಂತ ಭಿನ್ನ ಮತ್ತು ಪ್ರಗತಿಪರ ಆಗ್ತಾರೆ. ಇವರು ಅವರಷ್ಟೇ ಮತ್ತು ಇನ್ನೂ ಹೆಚ್ಚಿನ ಬಲಪಂಥೀಯ ಸಾಂಸ್ಕೃತಿಕ ರಾಷ್ಟ್ರೀಯವಾದಿಗಳಲ್ವ???? (ಏಕೆಂದರೆ ಅವರನ್ನಾದರೂ ನೀವು ವೈಧಿಕ/ಪುರೋಹಿತಶಾಹಿಗಳೆಂದು ಟೀಕಿಸಿ ಧಕ್ಕಿಸಿಕೊಳ್ಳಬಹುದು ಆದರೆ ಇವರ ಈ ನಿಲುವುಗಳನ್ನು ಇದಲ್ಲ ನಿಜವೇನಪ್ಪ ಅವನ್ನು ಪುರಾವೆ ಸಹಿತ ಸಾಭೀತು ಮಾಡಲಿಕ್ಕಾಗುತ್ತಾ ಅಂತ ಪ್ರಶ್ನೆ ಮಾಡೋಂಗೆ ಇಲ್ಲ. ನಿಮ್ಮ ಯೋಚನೆಯನ್ನೇ ಬಲವಂತವಾಗಿ ಬಂದ್ ಮಾಡಿಬಿಡ್ತಾರೆ!!!) “

          • Ramjan Darga

            ಮಂಕಲಿ ಗೋಶಾಲರಂಥ ಶೂನ್ಯಧ್ಯಾನ ಪರಂಪರೆಯವರು, ಲೋಕಾಯತರು, ನಾಥಪಂಥೀಯರು, ಜೈನರು, ಬೌದ್ದರು, ಉಪನಿಷತ್‍ಕಾರರು ಮುಂತಾದವರ ಪರಂಪರೆಯಲ್ಲಿ ಖಂಡಿತವಾಗಿಯೂ ಪ್ರಜಾಪ್ರಭುತ್ವವಾದಿ ಮತ್ತು ಮಾನವ ಘನತೆಯ ಅಂಶಗಳಿವೆ. ಅವೆಲ್ಲವುಗಳ ಸಾರದೊಂದಿಗೆ 12ನೇ ಶತಮಾನದ ಕಾಲಘಟ್ಟದಲ್ಲಿ ಅತ್ಯಾಧುನಿಕ ಚಿಂತನೆಯೊಂದಿಗೆ ಮಾನವ ವಿಮೋಚನೆಯ ತತ್ತ್ವಗಳನ್ನು ಕಾರ್ಯಗತಗೊಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ.
            ಜಾತಿ ಕುಲ ವರ್ಣಗಳ ಕೊಳಕು ಮನಸ್ಸುಗಳಿಂದಾಗಿಯೇ ನಮ್ಮ ದೇಶ ಪರಕೀಯರನ್ನು ಎದುರಿಸುವಲ್ಲಿ ವಿಫಲವಾಯಿತು. ಪರಕೀಯರಿಗೆ ದೇಶೀಯ ಶಕ್ತಿಗಳು ಸಹಾಯ ಮಾಡದೆ ಇದ್ದಿದ್ದರೆ ದೇಶದ ಇತಿಹಾಸದ ಗತಿಯೇ ಬೇರೆಯಾಗುತ್ತಿತ್ತು. ಜಾತಿಗಳೆಂಬ ಹೆಗ್ಗಣಗಳು ದೇಶದ ಅಡಿಪಾಯವನ್ನೇ ಅಸ್ಥಿರಗೊಳಿಸುತ್ತ ಬಂದಿದ್ದರೂ ಸಹನಾ ಅವರು ಹೇಳಿದ ಆ ಹಿರಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಜಾತಿಗುರುಡರಾಗಿದ್ದುದು ಸಖೇದಾಶ್ಚರ್ಯ ಹುಟ್ಟಿಸುತ್ತದೆ. ದಲಿತರ ಮತ್ತು ಇತರೆ ಕೆಳಜಾತಿ ಜನರ ನೋವಿಗೆ ಸ್ಪಂದಿಸದ ಬುದ್ಧಿಜೀವಿಗಳು ನನಗೆ ಕ್ರೂರ ಪ್ರಾಣಿಗಳಿಗಿಂತಲೂ ಭಯಂಕರವಾಗಿ ಕಾಣುತ್ತಾರೆ. ಹೀಗೇ ಮುಂದುವರಿದರೆ ಒಂದು ದಿನ ಜಾತಿವಾದಿಗಳ ಮತ್ತು ಧರ್ಮಾಂಧರ ಫ್ಯಾಸಿಸ್ಟ್ ವ್ಯವಸ್ಥೆ ಭಾರತದಲ್ಲಿ ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.

          • Ramjan Darga

            ನಿಮ್ಮ ತೀಕ್ಷ್ಣ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಉತ್ತರಿಸಲು ಸದಾ ಸಿದ್ಧ. ಬೀಟಿಂಗ್ ಅರೌಂಡ್ ದಿ ಬುಷ್ ಹ್ಯಾಸ ನೋ ಮೀನಿಂಗ್.

          • Ramjan Darga

            ನಿಮ್ಮ ತೀಕ್ಷ್ಣ ಪ್ರಶ್ನೆಗಳನ್ನು ಪಟ್ಟಿ ಪಾಡಿ.

          • ಸಹನಾ

            only primery school teachers give homework sir, it is a open debate. i have made many comments none of them have properly addressed except distorting questions and misinterpreting the vacanas.

        • Anonymous

          ದರ್ಗಾ ಅವರು ವಾಸ್ತವಿಕ ಪ್ರಶ್ನೆಗಳನ್ನು ಎತ್ತಿ ಬರೆದಿರುವುದು, ಅನೇಕರಿಗೆ ಮಿರ್ಚಿ ತಿಂದಂತಾಗಿದೆ. ಕಾಲ ಬದಲಾಗಿದೆ ಎಂದೆನಿಸಿದರೂ ವೈದಿಕ ಶಾಹಿಯ ಪಳಿಯುಳಿಕೆಗಳಿನ್ನೂ ಜೀವಂತವಾಗಿವೆ ಸಹನಾ ಅವರೆ. ನೀವು ಧರ್ಮ ಮತ್ತು ತತ್ವಗಳೆಂದು ನಂಬಿರುವುದು ಮನು ಚಿಂತನೆಗಳನ್ನು ಮಾತ್ರ. ಅವೆಲ್ಲವೂ ದಯವಿಲ್ಲದ ಧರ್ಮಗಳು ಮಾತ್ರ. ಅವುಗಳು ಎಂದಿಗೂ ಸಕಲ ಜೀವಾತ್ಮರಿಗೆ ಲೇಸಬಯಸುವಂಥವುಗಳಲ್ಲ.

          • Amaresh

            ವಚನಗಳನ್ನು ತಮ್ಮ ಐಡಿಯಾಲಜಿಗೆ ತಕ್ಕ ಹಾಗೆ ಮಿರ್ಚಿ ಹಾಕಿ ಮಿಸಳ್ ಭಾಜಿ ಮಾಡಿದರೆ ವಾಸ್ತವಿಕ ಪ್ರಶ್ನೆಗಳನ್ನೆತ್ತಿದ ಹಾಗೆ ಆಗುತ್ತದೆಯೇ?! ಮನುಗುಮ್ಮ ಹೊರಿಸಿ ದರ್ಗಾ ಅವರ ವಾದದಲ್ಲಿರುವ ಲೋಪ ದೋಷಗಳನ್ನು ಮುಚ್ಚಿ ಹಾಕುವ ಪ್ರಯತ್ನ ಬಿಡಿ ಅನಾಮಿಕ ಕಾಮೆಂಟಿಗರೆ (ನೀವು ಬಹುಶಃ ದರ್ಗಾ ಅವರೇ ಇರಬಹುದು ಎಂಬ ಎಲ್ಲಾ ಅನುಮಾನಗಳನ್ನು ನಿಮ್ಮ ಕಮೆಂಟು ಹುಟ್ಟಿಸುತ್ತಿದೆ).

    • Ramjan Darga

      ಯಾವುದು ತಪ್ಪು ನಿರೂಪಣೆ ಹೇಳಿ ನೋಡುವಾ?

  14. ಕೃಷ್ಣಪ್ರಕಾಶ ಬೊಳುಂಬು

    ಯುರೋಪಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ 13ನೇ ಶತಮಾನದಲ್ಲಿ ಹುಟ್ಟಿತು ಎನ್ನುತ್ತೀರಿ. ಹೀಗೆ ಹೇಳಲು ಏನು ಆಧಾರವಿದೆ?

    • Ramjan Darga

      ಯುರೋಪಿನ ಚರಿತ್ರೆಯನ್ನು ಓದಿ.

      • ಕೃಷ್ಣಪ್ರಕಾಶ ಬೊಳುಂಬು

        ನಾನು ಕೇಳಿದ ಪ್ರಶ್ನೆಯಲ್ಲಿ ಸಣ್ಣದೊಂದು ತಪ್ಪಾಗಿದೆ. ನಾನು ಕೇಳಬೇಕಾಗಿದ್ದುದು ಫ್ಯೂಡಲ್ ವ್ಯವಸ್ಥೆಯ ಬಗ್ಗೆ.
        ಸಂಪತ್ತು ಒಟ್ಟುಗೂಡಿಸುವ ಕ್ಯಾಪಿಟಲಿಸಂ ಎಂಬ ಅರ್ಥದಲ್ಲಿ ೧೩ನೆಯ ಶತಮಾನದಲ್ಲಿ ರೂಪುಗೊಂಡದ್ದೇನೋ ನಿಜವೇ. ಆದರೆ ನೀವಿಲ್ಲಿ ದೀನರನ್ನು ಶೋಷಿಸುವ ಫ್ಯೂಡಲ್ ವ್ಯವಸ್ಥೆಯ ಸಂಕಲ್ಪದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದೀರಿ. ಸಂಪತ್ತನ್ನು ಒಟ್ಟುಗೂಡಿಸುವ ಕ್ಯಾಪಿಟಲಿಸ್ಟ್ ವ್ಯವಸ್ಥೆ ಮತ್ತು ದೀನರನ್ನು ಶೋಷಿಸುವ ಫ್ಯೂಡಲ್ ವ್ಯವಸ್ಥೆ ಎಂಬ ಎರಡು ಪ್ರತ್ಯಾಭಾಸಗಳನ್ನು ಸೇರಿಸಿ ಮಾತನಾಡುತ್ತಿರುವ ಕಾರಣದಿಂದಲಾಗಿ ಉಂಟಾಗಿರುವ ಗೊಂದಲ ಇದು.

        • Ramjan Darga

          ಕೃಷ್ಣಪ್ರಕಾಶ ಅವರೆ, ಪ್ರಿಮಿಟಿವ್ ಕಮ್ಯೂನಿಸಂ (ಆದಿಮ ಸಮತಾವಾದ), ಗುಲಾಮಿ ವ್ಯವಸ್ಥೆ, ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ಸಮಾಜವಾದಿ ವ್ಯವಸ್ಥೆ ಎಂಬ ಐದು ವ್ಯವಸ್ಥೆಗಳನ್ನು ಜಗತ್ತು ಕಂಡಿದೆ. ಸಮಾಜವಾದ ಎಂಬುದು ಸಮತಾವಾದದ ಗುರಿಯ ಕಡೆಗೆ ಹೋಗುವಂಥದ್ದು. ಗುಲಾಮಿ, ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದುಡಿಯುವ ವರ್ಗ ಬಹಳಷ್ಟು ಹಿಂಸೆಯನ್ನು ಅನುಭವಿಸಿದೆ.ಆದರೆ ವ್ಯವಸ್ಥೆಗಳು ಬದಲಾದಂತೆಲ್ಲ ಹಿಂಸೆಯ ಸ್ವರೂಪವೂ ಬದಲಾಗುತ್ತ ಬಂದಿದೆ. ಗುಲಾಮಿ ವ್ಯವಸ್ಥೆಯಲ್ಲಿ ಹಿಂಸೆಯ ಸ್ವರೂಪ ಅತ್ಯಂತ ಕ್ರೂರವಾಗಿತ್ತು. ಜೀಸಸ್ ಕ್ರೈಸ್ತ ರೋಮನ್ ಗುಲಾಮಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದು ನಮ್ಮ ಗಮನಕ್ಕೆ ಬರುತ್ತಿಲ್ಲ. ಬಸವಣ್ಣನವರ ಕಾಲದಲ್ಲಿ ಫ್ಯೂಡಲ್ ವ್ಯವಸ್ಥೆ ಇತ್ತು. ರಾಜಮನೆತನಗಳು ಈ ವ್ಯವಸ್ಥೆಯ ಪಳೆಯುಳಿಕೆಗಳು. ಈ ವ್ಯವಸ್ಥೆಯಲ್ಲಿ ಗಿಲ್ಡ್ ಅಂದರೆ ಸಂಘಗಳು ಹುಟ್ಟಿಕೊಂಡವು. ಭಾರತದಲ್ಲಿ ಈ ವೃತ್ತಿಸಂಘಗಳ ಜಾತಿಗಳಾಗಿ ರೂಪುಗೊಂಡವು. ಇವೆಲ್ಲ ಶೋಷಣೆಯ ವಿವಿಧ ರೂಪಗಳೇ ಅಗಿವೆ. 1449ರಲ್ಲಿ ಒಟ್ಟೊಮನ್ ತುರ್ಕರು ಏಷ್ಯಾಮೈನರ್ ಅಂದರೆ ಇಂದಿನ ಟರ್ಕಿಯಲ್ಲಿನ ಕಾನ್‍ಸ್ಟಂಟಿನೋಪಲ್ ಅನ್ನು ರೋಮನ್‍ರಿಂದ ಗೆದ್ದು ಇಸ್ತಾನ್‍ಬುಲ್ ಆಗಿ ಪರಿವರ್ತಿಸಿದಾಗ ಯುರೋಪಿನಲ್ಲಿ ಉಳಿಗಮಾನ್ಯ ಪದ್ಧತಿ ಕೊನೆಗೊಂಡಿತು ಎಂದು ಹೇಳುತ್ತಾರೆ.ಯುರೋಪಿನಲ್ಲಿ ನಡೆದ ಔದ್ಯೋಗಿಕ ಕ್ರಾಂತಿಯ ನಂತರ 18ನೇ ಶತಮಾನದಲ್ಲಿ ವಿಶ್ವದಲ್ಲಿ ಬಂಡವಾಳಶಾಹಿ ತನ್ನ ಕರಾಳ ಹಸ್ತಗಳನ್ನು ಚಾಚತೊಡಗಿತು. ಇಂದು ಸಾಮ್ರಾಜ್ಯಶಾಹಿಗಳು ಇಡೀ ಜಗತ್ತನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದುಕೊಳ್ಳಲು ಹವಣಿಸುತ್ತಿದ್ದಾರೆ. ಭಾರತದಲ್ಲಿ ಅಸಂಖ್ಯ ಎನ್ನುವಷ್ಟು ಇರುವ ಜಾತಿ ಉಪಜಾತಿ ಮತ್ತು ಕುಲಗೋತ್ರಗಳಿಂದಾಗಿ ಶೋಷಣೆಯ ವಿರುದ್ಧ ಹೋರಾಡುವುದು ಕಠಿಣಸಾದ್ಯವಾಗಿದೆ. ಆದ್ದರಿಂದ ಜಾತಿಗಳಿಲ್ಲ ಭಾರತವನ್ನು ನಿರ್ಮಿಸುವುದು ಅವಶ್ಯವಾಗಿದೆ.

          • ಕೃಷ್ಣಪ್ರಕಾಶ ಬೊಳುಂಬು

            ರಂಜಾನ್ ದರ್ಗಾ ಅವರೇ, ಈ ವಿವರಣೆ ನಿಮ್ಮ ಮೂಲ ಲೇಖನದ ಭಾಗವಾಗಿದ್ದಿದ್ದರೆ ಲೇಖನವನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕೆಂಬುದರ ಬಗ್ಗೆ ಸ್ಪಷ್ಟತೆ ಇರುತ್ತಿತ್ತು. ಈ ವಿವರಣೆಯನ್ನು ನೀವು ನೀಡುವ ಮೂಲಕ ಮಾರ್ಕ್ಸಿಸ್ಟ್ ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಿಮ್ಮ ಲೇಖನವನ್ನು ಗ್ರಹಿಸಬೇಕೆಂಬ ಸೂಚನೆಯನ್ನಿತ್ತಿರಿ.
            ಯೇಸು ಕ್ರಿಸ್ತ ರೋಮನ್ ಗುಲಾಮಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಬಗೆಗಿನ ಹೇಳಿಕೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಬಲ್ಲ ವಸ್ತು. ಆದರೆ “1449ರಲ್ಲಿ ಒಟ್ಟೊಮನ್ ತುರ್ಕರು ಏಷ್ಯಾಮೈನರ್ ಅಂದರೆ ಇಂದಿನ ಟರ್ಕಿಯಲ್ಲಿನ ಕಾನ್‍ಸ್ಟಂಟಿನೋಪಲ್ ಅನ್ನು ರೋಮನ್‍ರಿಂದ ಗೆದ್ದು ಇಸ್ತಾನ್‍ಬುಲ್ ಆಗಿ ಪರಿವರ್ತಿಸಿದಾಗ ಯುರೋಪಿನಲ್ಲಿ ಉಳಿಗಮಾನ್ಯ ಪದ್ಧತಿ ಕೊನೆಗೊಂಡಿತು” ಎಂದರೆ ಒಪ್ಪಲು ಸಾಧ್ಯವಿಲ್ಲ. ನನ್ನ ಅವಲೋಕನದಂತೆ ಫ್ಯೂಡಲ್ ವ್ಯವಸ್ಥೆ ಕೊನೆಗೊಳ್ಳಲು ಪರೋಕ್ಷವಾಗಿ ಬಂಡವಾಳಶಾಹಿತ್ವ ಹೇತುವಾಯಿತು. ವ್ಯಾಪಾರ ಮತ್ತು ಹಣದ ಬಳಕೆ ಹೆಚ್ಚಾದದ್ದರಿಂದಾಗಿ ಒಡೆಯರ ಬಗೆಗಿನ ಸೇವಕರ ಭಯ-ಭಕ್ತಿ ಕ್ರಮೇಣ ಮಾಯವಾಗುತ್ತ ಬಂದಿತು, ಪ್ರಭುಗಳು ತಮ್ಮ ಭೂಮಿಯನ್ನು ಬಾಡಿಗೆಗೆ ನೀಡತೊಡಗಿದರು. ಸೇವಕರು ವ್ಯಾಪಾರವೃತ್ತಿಯನ್ನು ಕೈಗೊಂಡು ಪ್ರಭುಗಳಿಗೆ ಸಲ್ಲಬೇಕಾದುದನ್ನು ಹಣದ ಮೂಲಕ ಸಲ್ಲಿಸುತ್ತಲೂ ಕ್ರಮೇಣ ಕೊಂಡುಕೊಳ್ಳುತ್ತಲೂ ನಿಧಾನವಾಗಿ ಫ್ಯೂಡಲ್ ವ್ಯವಸ್ಥೆ ಕೊನೆಗೊಂಡಿತು ಎಂಬ ವಿವರಣೆ ಸಮರ್ಥನೀಯವಾದುದು.
            ಒಂದೆಡೆ ಬಸವಣ್ಣನವರು ಜಗತ್ತಿನಲ್ಲಿ ಕಾಯಕಜೀವಿಗಳನ್ನು ಮೊದಲ ಬಾರಿಗೆ ಸಂಘಟಿಸಿದರು ಎನ್ನುತ್ತೀರಿ, ಇನ್ನೊಂದೆಡೆ ಬಸವಣ್ಣನವರ ಕಾಲದಲ್ಲಿ ಫ್ಯೂಡಲ್ ವ್ಯವಸ್ಥೆಯಿದ್ದಿತು ಎನ್ನುತ್ತೀರಿ. ಬಸವಣ್ಣನವರ ಕಾಲದಲ್ಲಿ ನಿಜವಾಗಿ ಇದ್ದ ಸಾಮಾಜಿಕ ವ್ಯವಸ್ಥೆ ಯಾವುದು?
            ಜಾತಿಗಳಿಲ್ಲದ ಭಾರತವನ್ನು ನಿರ್ಮಿಸಬೇಕು ಎನ್ನುತ್ತೀರಿ, ಶೋಷಣೆಯ ವಿರುದ್ಧ ಹೋರಾಡಲು ಜಾತಿಗಳು ಅಡ್ಡಿಯಾಗುತ್ತಲಿವೆ ಎನ್ನುತ್ತೀರಿ. ಆದರೆ ಯಾವ ಶೋಷಣೆಯ ವಿರುದ್ಧ ಹೋರಾಡಿ ಜಯಿಸಬೇಕಾಗಿದೆಯೋ ಆ ಶೋಷಣೆ ಯಾರಿಂದಲಾಗಿ ಉಂಟಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ನಿಮ್ಮ ವಿವರಣೆಯಲ್ಲಿಲ್ಲ.
            ಇಲ್ಲಿಗೆ ನಿಲ್ಲಿಸುತ್ತೇನೆ, ಇನ್ನೊಮ್ಮೆ ಸಿಗುವ.

          • Ramjan Darga

            1) ಯೇಸು ಕ್ರಿಸ್ತ ರೋಮನ್ ಗುಲಾಮಗಿರಿಯ ವಿರುದ್ಧ ಹೋರಾಡಿದ ಮಹಾಪುರುಷ.
            2) 1215ರಲ್ಲಿ ಕಿಂಗ್ ಜಾನ್ ಮತ್ತು ಜಹಗೀರುದಾರರ ಮಧ್ಯೆ ನಡೆದ ಮ್ಯಾಗ್ನಾಕಾರ್ಟಾ ಒಪ್ಪಂದದಲ್ಲಿ ಮೊದಲ
            ಬಾರಿಗೆ ರಾಜನ ಅಧಿಕಾರವನ್ನು ಮೊಟಕುಗೊಳಿಸಲಾಯಿತು. ‍ಫ್ಯೂಡಲ್ ಸಮಾಜದ ಮೇಲಿನ ಮೊದಲ
            ಆಘಾತವಿದು.
            3) “1449ರಲ್ಲಿ ಒಟ್ಟೊಮನ್ ತುರ್ಕರು ಏಷ್ಯಾಮೈನರ್ ಅಂದರೆ ಇಂದಿನ ಟರ್ಕಿಯಲ್ಲಿನ ಕಾನ್‍ಸ್ಟಂಟಿನೋಪಲ್
            ಅನ್ನು ರೋಮನ್‍ರಿಂದ ಗೆದ್ದು ಇಸ್ತಾನ್‍ಬುಲ್ ಆಗಿ ಪರಿವರ್ತಿಸಿದಾಗ ಯುರೋಪಿನಲ್ಲಿ ಉಳಿಗಮಾನ್ಯ ಪದ್ಧತಿ
            ಕೊನೆಗೊಂಡಿತು ಎಂದು ಹೇಳುತ್ತಾರೆ.” ಈ ಒಂದು ಅಭಿಪ್ರಾಯ ನಿಮಗೆ ತಿಳಿಸಿರುವೆ ಮಾತ್ರ.
            4) ಫ್ಯೂಡಲ್ ಸಮಾಜವನ್ನು ಬಗ್ಗುಬಡಿದೇ ಬಂಡವಾಳಶಾಹಿ ಸಮಾಜ ಬಂದಿರೋದು.
            5) ಮಾನವ ಸಮಾಜದ ಇತಿಹಾಸ ವರ್ಗ ಹೋರಾಟದ ಇತಿಹಾಸವೇ ಆಗಿದೆ. ವರ್ಗ ಹೋರಾಟವನ್ನು
            ಆರಂಭಿಸಿದವರು ಬಸವಣ್ಣನವರರಲ್ಲ. ಹಾಗೆಂದು ಎಲ್ಲಿಯೂ ಬರೆದಿಲ್ಲ. ಆದರೆ ದುಡಿಯವ ಜನರನ್ನು
            ವಿಶ್ವದಲ್ಲೇ ಮೊದಲಿಗೆ ಸಂಘಟಿಸಿದವರು ಬಸವಣ್ಣನವರು.
            6) ದುಡಿಯುವ ಜನರು ಗುಲಾಮಿ ಸಮಾಜ ಮೊದಲು ಮಾಡಿ ಎಲ್ಲ ಸಮಾಜಗಳಲ್ಲೂ ಇದ್ದರು. ಬಸವಣ್ಣನವರಿದ್ದ
            ಫ್ಯೂಡಲ್ ವ್ಯವಸ್ಥೆಯಲ್ಲೂ ಇದ್ದರು.
            7) ಎಲ್ಲ ಜಾತಿ ಮತ್ತು ಧರ್ಮಗಳಲ್ಲಿನ ಶೋಷಕ ವರ್ಗದಿಂದ ಶೋಷಣೆ ನಡೆಯುತ್ತಿದೆ. ಜಾತಿಗಳು ಕೂಡ ಈ
            ಶೋಷಣೆಯಲ್ಲಿ ಭಾಗಿಯಾಗಿವೆ. ಎಲ್ಲ ಜಾತಿ ಮತ್ತು ಧರ್ಮಗಳ ಬಡವರು ಒಂದಾಗಿ ಹೋರಾಡಿದಾಗ ಮಾತ್ರ
            ಶೋಷಣೆಯನ್ನು ತಡೆಗಟ್ಟಲು ಸಾಧ್ಯ. ಜಾತಿಗಳು ಬಡವರನ್ನು ಒಗ್ಗೂಡಿಸುವಲ್ಲಿ ದೊಡ್ಡ ಅಡ್ಡಗಲ್ಲುಗಳಾಗಿವೆ.

          • Ramjan Darga

            ಕೃಷ್ಣಪ್ರಸಾದ ಅವರೇ,
            ನಿಮ್ಮ ಗಂಭೀರ ಚಿಂತನೆಯಿಂದ ಕೂಡಿದ ಪ್ರಶ್ನೆಗಳು ಬಹಳ ಖುಷಿ ಕೊಟ್ಟವು.

  15. DR.SHASHIKANT.PATTAN

    ಪುಸ್ತಕ ಪರಿಚಯ
    —————————–
    ರಂಜಾನ್ ದರ್ಗಾ ಅವರ “ಜ್ಯಾತಿ ವ್ಯವಸ್ಥೆಗೆ ಸವಾಲಾದ ಶರಣರು”ಎರಡು ಅಧ್ಯಾಯ ದ್ವಂದ್ವ ನೀತಿಯವು .
    ———————————————————————————————-
    ರಂಜಾನ್ ದರ್ಗಾ ಒಬ್ಬ ಪ್ರಗತಿಪರ ಲೇಖಕರು ಮತ್ತು ಆತ್ಮೀಯರು .ಅವರ ಬಹುತೇಕ ಪುಸ್ತಗಳನ್ನು ಕವನಗಳನ್ನು ಓದಿದ್ದೇನೆ .
    ಅವರ ಎರಡು ಅಧ್ಯಾಯ ದ್ವಂದ್ವ ನೀತಿಯನ್ನು ಮತ್ತು ಗೊಂದಲ ಹುಟ್ಟಿಸುವ ಅಧ್ಯಾಯಗಳಾಗಿವೆ. ೬ ಮತ್ತು ೭
    ೧ .ಕನ್ನಡದ ಏಕೈಕ ಧರ್ಮ ಗ್ರಂಥ ಗುರುವಚನ ಅಧ್ಯಾಯ ೬ ಪುಟ ೬೭
    ೨.ಸಾಮಾಜಿಕ ನ್ಯಾಯದ ಪರುಷಕಟ್ಟೆ ಅಧ್ಯಾಯ ೭ .ಪುಟ ೮೦
    ೧ -ಗುರುವಚನ ಕನ್ನಡ ಏಕೈಕ ಧರ್ಮ ಗ್ರಂಥವೇ?
    ——————————————–
    ಬಸವಾದಿ ಶರಣರ ಸಮಗ್ರ ವಚನಗಳು ಧರ್ಮ ಗ್ರಂಥ – ರೇವ್ ಉತ್ತಂಗಿ ಚೆನ್ನಪ್ಪನವರ ಮತ್ತು ಡಾ ಎಸ ಆರ್ ಗುಂಜಾಳರ ಹೇಳಿದ ಸತ್ಯವನ್ನು ಮುಂದೆ ಬಸವ ಸೇವಾ ಪ್ರತಿಷ್ಠಾನದವರು ಬೀದರ ಇವರು ಪ್ರಕಟಿಸಿದ ಅಂದರೆ ಅಕ್ಕ ಅನ್ನಪೂರ್ಣ ಅವರು ಕ್ರತಿಚೌರ್ಯ ಮಾಡಿದ ಗ್ರಂಥ ಕನ್ನಡದ ಏಕೈಕ ಧರ್ಮ ಗ್ರಂಥ ಅಂತ ರಂಜಾನ್ ದರ್ಗಾ ಅವರು ಪ್ರತಿಪಾದಿಸುವದು ಸಂಪೂರ್ಣ ತಪ್ಪು.
    ಮಾಹೇಶ್ವರ ದೀಕ್ಷೆ ಸಂದರ್ಭದಲ್ಲಿ ಬಸವಣ್ಣನವರ ಷಟ್ಸ್ಥಲ ವಚನ
    ಅಲ್ಲಮಪ್ರಭುಗಳ ಮಂತ್ರ ಗೌಪ್ಯ
    ಮತ್ತು ಚೆನ್ನ ಬಸವಣ್ಣನವರ ಕರಣ ಹಸಿಗೆ
    ಈ ತಾಡೊಲೆಗಲ ಜೊತೆಗೆ ಶೂನ್ಯ ಸಂಪಾದನೆ ಕಟ್ಟನ್ನು ವಟುಗಳಿಗೆ ನೀಡಲಾಗುತಿತ್ತು.
    ಇದನ್ನು ಮೊದಲು ಸಿದ್ಧ ನಂಜೇಶ ದಾಖಲಿಸಿದನೆಂದು ರೇವ್ ಉತ್ತಂಗಿ ಚೆನ್ನಪ್ಪನವ್ರು ಡಾ ಎಸ ಆರ್ ಗುಂಜಾಳ ಅವರ ಬಳಿ ಹೇಳಿದ್ದರೆಂದು.
    ಇಂತಹ ಅನೇಕ ಅಂತೆ ಕಂತೆಗಳ ಧಾಖಲೆಯ ಮೇಲೆ ಒಂದು ಕೊಟ್ಟಿ ಧರ್ಮ ಗ್ರಂಥ ಅಕ್ಕ ಅಣ್ಣ ಪೂರ್ಣ ಅವರು ರಚಿಸಿ ಅಂದ್ರೆ ಜೆರಾಕ್ಸ್ ಮಾಡಿ ಮುದ್ರಣ ಮಾಡಿದರು.
    ಅಕ್ಕ ಅನ್ನಪೂರ್ಣ ರಚಿತ ಈ ಕೊಟ್ಟಿ ಕ್ರತಿಚೌರ್ಯ ಕೃತಿಯೇ ಗುರುವಚನ ಕನ್ನಡ ಏಕೈಕ ಧರ್ಮ ಗ್ರಂಥ ಅಂತಾ ರಂಜಾನ್ ದರ್ಗಾ ಸಮರ್ಥಿಸಿಕೊಂಡಿದ್ದಾರೆ.
    ರಂಜಾನ್ ದರ್ಗಾ ಅವರಿಗೆ ಸತ್ಯ ಏನೆಂದು ಗೊತ್ತು ಅಕ್ಕ ಅನ್ನಪೂರ್ಣ ಅವರನ್ನು ಓಲೈಸುವ ದ್ರಷ್ಟಿಯಿ೦ದಾ ಹೀಗೆ ಹೇಳಿರ ಬಹುದು.
    ಇದರಲ್ಲಿ ಅಕ್ಕನ ಕೊಡುಗೆ ಶೂನ್ಯ ರಂಜಾನ ದರ್ಗಾರ೦ತಹ ಹಿರಿಯ ಸಾಹಿತಿಗಳ ಬಲದಿಂದ ಇಂತಹ ಹುಚ್ಚು ವ್ಯವಹಾರಕ್ಕೆ ಅಕ್ಕ ಕೈ ಹಾಕಿದ್ದಾಳೆ.ಈ ಅಧ್ಯಾಯದಲ್ಲಿ ಅಕ್ಕನ ತಪ್ಪನ್ನು ಮುಚ್ಚಿ ಅವಳನ್ನು ವೈಭವಿಸುವ ಪ್ರಯತ್ನ ನಡೆದಿದೆ.
    ೨ . .ಸಾಮಾಜಿಕ ನ್ಯಾಯದ ಪರುಷಕಟ್ಟೆ ಅಧ್ಯಾಯ ೭ .ಪುಟ ೮೦
    ಸಾಮಾಜಿಕ ನ್ಯಾಯದ ಪರುಷ ಬಸವಣ್ಣನ ಕಾಲದ ವಿವರಣೆ ಸಮಗ್ರವಾಗಿ ಕೊಡದೆ ,ಅಕ್ಕ ೨೫ ಕೋಟಿ ಹಣದಲ್ಲಿ ನಿರ್ಮಿಸುವ ಪರುಷ ಕಟ್ಟೆಯು
    ವೈಭವದ ಸಂಕೆತವಾಗಬಾರದು,ಶರಣರ ತ್ಯಾಗ ಮತ್ತು ಬಲಿದಾನ ನಮ್ಮ ಪೀಳಿಗೆಗೆ ನಿರಂತರವಾಗಿ ಜ್ಞಾಪಿಸುವ ಸಂಕೆತವಾಗಬಾರದು ಅಂತ ಹೇಳುತ್ತಾ ಅಕ್ಕನ ಪರುಷ ಕಟ್ಟೆಯ ನೀಲನಕ್ಷೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.ಪರುಷ ಕತ್ತೆ ಜನರ ಅಹವಾಲನ್ನು ಕೇಳುವ ಜನತಾ ದರ್ಬಾರು ಮತ್ತು ನ್ಯಾಯ ಒದಗಿಸುವ ಸುಂದರ ವ್ಯವಸ್ಥೆ. ಪರುಷ ಕಟ್ಟೆಯ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳದೆ ವರ್ಣ ಸಂಕರ ಇತ್ಯಾದಿ ವಿಷಯಗಳ ನಿರೂಪಣೆ ಮಾಡಿ ಲೇಖಕರು ಅಕ್ಕನ ನೀಲ ನಕ್ಷೆಗೆ ಪೀಠಿಕೆ ಹಾಕಿದ್ದಾರೆ.
    ಇವೆರಡು ಅಧ್ಯಾಯ ಹೊರತು ಪಡೆಸಿದರೆ ಉಳಿದಂತೆ ಅಂತಹ ಹೊಸತೇನು ಪ್ರತಿಪಾದಿಸದ ಪುಸ್ತಕ -“ಜ್ಯಾತಿ ವ್ಯವಸ್ಥೆಗೆ ಸವಾಲಾದ ಶರಣರು”
    ಪ್ರಕಾಶಕರು- ಲೋಹಿಯಾ ಪ್ರಕಾಶನ ಬಳ್ಳಾರಿ ೨೦೧೩
    —————————————————————————————————————————————————-
    ಡಾ ಶಶಿಕಾಂತ ಪಟ್ಟಣ -ಪೂನಾ

Trackbacks/Pingbacks

  1. ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೨ « ಅವಧಿ / avadhi - [...] ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೨ June 25, 2013 by Avadhikannada (ಭಾಗ ಒಂದು ಇಲ್ಲಿದೆ) [...]
  2. ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೩ « ಅವಧಿ / avadhi - [...] ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೩ June 26, 2013 by Avadhikannada (ಭಾಗ ೧ ಕ್ಕೆ ಇಲ್ಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading