
ಸಿ ಕೆ ಗುಂಡಣ್ಣ
ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ , ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ಮತ್ತು ನಿರ್ದೇಶನಕ್ಕೆ ಹೆಸರಾಗಿದ್ದ ಗೋಪಾಲಕೃಷ್ಣ ನಾಯರಿ ಅವರು ಇಂದು ಬೆಳಿಗ್ಗೆ 5.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 68 ವರುಷ ಈ ವರುಷದ ಫೆಬ್ರವರಿ ತಿಂಗಳಿಗೆ ತುಂಬುತ್ತಿತ್ತು. ಸ್ವಲ್ಪ ಸಮಯದ ಅನಾರೋಗ್ಯದಿಂದ ಬಳಲುತಗತಿದ್ದ ನಾಯರಿ, ಮಂಗಳೂರಜನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಶ್ರೀಮತಿ. ಸುಲೋಚನ, ಮಗಳು ಉದಾತ್ತ ಹಾಗು ಮೊಮ್ಮಗಳು ಮತ್ತು ಅಳಿಯರನ್ನೇ ಅಲ್ಲದೆ, ಅವಿಭಕ್ತ ಕುಟುಂಬದ ಎಲ್ಲ ಸದಸ್ಯರನ್ನೂ ಅಗಲಿದ್ದಾರೆ. ಇಂದು ಮದ್ಯಾನ್ಹ 12 ಗಂಟೆ ಒಳಗೆ ಸಾಲಿಗ್ರಾಮ ದ ಕಾರ್ಕಡದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ನಾಯರಿ ಎನ್ ಎಸ್ ಡಿ ಗೆ ಹೋಗುವ ಮುನ್ನಾದಿನದಿಂದಲೂ ಸಮುದಾಯದೊಟ್ಟಿಗೆ ಸಂಬಂಧ ಇಟ್ಟುಕೊಂಡವರು. ಎನ್ ಎಸ್ ಡಿ ಇಂದ ಬಂದ ಮೇಲೆ ನಾಗೇಶ್ ನಿರ್ದೇಶನದ ತಾಮ್ರಪತ್ರ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ಎನ್ ಎಸ್ ಡಿ ಯಲ್ಲಿ ಈ ನಾಟಕ ಅವರ ಮೇಲೆ ಬಹಳ ಗಂಭೀರವಾದ ಪ್ರಭಾವ ಬೀರಿದ ನಾಟಕ ಎಂದು ಹೇಳುತ್ತಿದ್ದರು.
ನಂತರ ಗಂಗಾಧರ ಸ್ವಾಮಿ ನಿರ್ದೇಶನದಲ್ಲಿ ಸಮುದಾಯದಲ್ಲಿ ಕೊಂದು ಕೂಗಿತ್ತು ನೋಡಾ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಬೆಂಗಳೂರು ಮತ್ತು ತುಮಕೂರಿನ ನಾಟಕ ಮನೆ ಜೊತೆಗೆ ಗಾಢ ಸಂಬಂಧ ಇಟ್ಟುಕೊಂಡಿದ್ದ ನಾಯರಿ, ಭಾಸ ನ ನಾಟಕಗಳಿಗೆ ಹೆಸರುವಾಸಿಯಾಗಿದ್ದರು. ಬೆಂಗಳೂರಿನ ಎನ್ ಎಸ್ ಡಿ ಗೆ ಕೆಲವು ಕಾರ್ಯಾಗಾರಗಳನ್ನು ಮತ್ತು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು.ಬಹಳ ಗಂಭೀರ ಸ್ವಭಾವದ ನಾಯರಿ, ಹಿರಿಯ ರಂಗ ವಿಮರ್ಶಕರಾದ ಕ.ವೆಂ ರಾಜಗೋಪಾಲರ ಪರಮ ಶಿಷ್ಯರು. ಅದೇ ರೀತಿಯಲ್ಲಿ ಎಮ್ ಇ ಎಸ್ ಕಾಲೇಜಿನ ರಂಗ ಚಟುವಟಿಕೆಗಳನ್ನು ಪ್ರಾರಂಭದ ದಿನಗಳಲ್ಲಿ ಹುಟ್ಟು ಹಾಕಿದ ಸಂಸ್ಕೃತ ವಿಭಾಗದ ಅಧ್ಯಾಪಕರಾದ ಜೆ ಶ್ರೀನಿವಾಸ ಮೂರ್ತಿ ಅವರ ಅತ್ಯಂತ ಆತ್ಮೀಯರು.

ರಘುನಂದನ ನ ಜೊತೆಯೂ ಆತ್ಮೀಯತೆಯನ್ನು ಇಟ್ಟುಕೊಂಡಿದ್ದ ನಾಯರಿ, ಕನ್ನಡ ರಂಗಭೂಮಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಒಬ್ಬ ಶ್ರೇಷ್ಟ ವ್ಯಕ್ತಿತ್ವದ ರಂಗ ನಿರ್ದೇಶಕ, ನಟ. ಇಂತಹ ತಲೆಮಾರಿನ ರಂಗಾಸಕ್ತರು ದಕ್ಕುವುದು ಬಹಳ ದುರ್ಲಭ. ಬೆಂಗಳೂರಿನಲ್ಲಿ, ನಯನ ರಂಗಮಂದಿರದಲ್ಲಿಜೆ ಶ್ರೀನಿವಾಸಮೂರ್ತಿ ನಿವೃತ್ತರಾದ ನೆಪಕ್ಕೆ, ನಾಯರಿ ಆಯೋಜಿಸಿದ್ದಒಂದು ಕಾರ್ಯಕ್ರಮದಲ್ಲಿ ಅರ್ಧ ದಿನ ಒಟ್ಟಿಗೆ ಇದ್ದುದೇ ಕೊನೆಯ ಭೇಟಿ. ಅಂದು ಹಾಸಾಕೃ ಸಹ ನಮ್ಮ ಜೊತೆಗೆ ಇದ್ದರು.
ನಂತರ ರಂಗಭೂಮಿಯ ಮಾಹಿತಿಗಾಗಿ ಊರಿನಿಂದ ಫೋನ್ ಮಾಡಿ, ಒಂದು ಅರ್ಧ ಗಂಟೆ ಮಾತನಾಡಿದ್ದೆವು. ಇಂದು ಅವರ ಫೋನಿಗೆ ಕರೆ ಮಾಡಿ, ಅವರ ಅಕ್ಕನಿಂದ ಮಾಹಿತಿ ಪಡೆಯಲು ಬಹಳ ಕಷ್ಟವೆನಿಸಿತು. ಒಂದು ಗಂಭೀರ ಆಲೋಚನೆಗಳ, ಶಿಸ್ತಿನ ರಂಗಭೂಮಿ ಬದ್ದತೆಯ ಕನಸುಗಳನ್ನು ಕಂಡಿದ್ದ, ಹತ್ತು ಹಲವು ಯೋಜನೆಗಳನ್ನು ತಲೆಯಲ್ಲಿ ಭದ್ರವಾಗಿರಿಸಿಕೊಂಡಿದ್ದ, ತನ್ನ ರಂಗ ತಂಡದ ಹೆಸರನ್ನೇ ಸಮಸ್ತರು ಎಂದು ವಿಶಿಷ್ಟವಾಗಿ ಕರೆದುಕೊಂಡಿದ್ದ, ಒಂದಿಷ್ಟು ಗಂಭೀರ ರಂಗಾಸಕ್ತರನ್ನು ಹುಟ್ಟು ಹಾಕಿದ ನಾಯರಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ….ನಮನಗಳು…






0 Comments