ಕಿರಣ್ ಭಟ್ ಹೊನ್ನಾವರ
ಐವತ್ತು ವರ್ಷಗಳ ನಂತರ ‘ಕಾಳೀ ನಾಡಕಂ’ ಮತ್ತೆ ಆರಂಭವಾಗಿದೆ.
ಈ ಹಿಂದೆ ಕಾಳಿ ಪಾತ್ರ ವಹಿಸಿದಾಕೆ ರಾಕ್ಷಸ ‘ದಾರುಕನ್’ನನ್ನ ರಂಗದಲ್ಲೇ ಕೊಂದ ಮೇಲೆ ಈ ನಾಟಕ ನಿಂತು ಹೋಗಿತ್ತು.
ಈಗ ಎಲ್ಲ ಬದಲಾಗಿದೆ. ನಾಟಕಕ್ಕೆ ಸಡಗರ, ಗತ್ತು ಬಂದಿದೆ. ತಯಾರಿಯೂ ಜೋರಾಗಿಯೇ ಇದೆ. ಪ್ರದರ್ಶನ ಕೂಡ ವೈಭವ ಪಡೆದುಕೊಂಡಿದೆ. ವರ್ಣಮಯವಾಗಿದೆ.
ಆದರೆ ಇತಿಹಾಸ ಮರುಕಳಿಸುವದರೊಂದಿಗೆ ನಾಟಕ ವಿಚಿತ್ರ ತಿರುವು ಪಡೆದುಕೊಂಡುಬಿಡುತ್ತದೆ. ಮತ್ತೆ ಕೊಲೆಯಾಗಿದೆ. ಕಾಳಿ ಪಾತ್ರವಹಿಸಿದ ಶೋಷಿತ, ದಲಿತ ಹೆಣ್ಣುಮಗಳು ದಾರುಕನ್ ಪಾತ್ರವಹಿಸಿದ ಮೇಲ್ಜಾತಿಯ ರಾಮಾ ಕುರುಪ್ ನನ್ನು ಕೊಂದುಬಿಟ್ಟಿದ್ದಾಳೆ.
ಈ ಘಟ್ಟದಲ್ಲಿ ಆರಾಧನೆ ಹೊಸ ತಿರುವು ಪಡೆಯುತ್ತದೆ.
ಭಕ್ತರು, ‘ಕಾಳಿ’ ಲೋಕಕ್ಕೆ ನ್ಯಾಯ ಕೊಟ್ಟಿದ್ದಾಳೆ ಎಂದು ಕೈಮುಗಿದರೆ, ಪೋಲೀಸರು ಇದೊಂದು ಅಪರಾಧ ಎನ್ನುತ್ತ ತನಿಖೆಗೆ ಸುರು ಹಚ್ಚಿಕೊಳ್ಳುತ್ತಾರೆ. ಮೀಡಿಯಾಗಳಿಗಂತೂ ಇದೊಂದು sensational report. ಈ ಜಂಜಾಟಗಳ ಮಧ್ಯೆ ಕಾಳಿ ಪಾತ್ರಧಾರಿ ಶೋಷಿತ ಮಹಿಳೆ ಎತ್ತಿದ ಪ್ರಶ್ನೆಗಳು ಹಾಗೇ ಉಳಿದುಬಿಡುತ್ತವೆ.
ಈ ವರ್ಷದ ಮಲಯಾಳಂ ನ ಬಹು ಚರ್ಚಿತ ನಾಟಕ.
‘ಕಾಳಿ ನಾಡಕಂ’ ಎನ್ನುವ ಆರಾಧನೆಯ ಹಿನ್ನೆಲೆಯ ನಾಟಕವಿದು. ನಾಟಕದಲ್ಲಿ ಕಾಳಿ ರಾಕ್ಷಸನನ್ನು ಕೊಂದು ಜಗತ್ತಿಗೆ ನ್ಯಾಯ, ವ್ಯವಸ್ಥೆ ಒದಗಿಸುತ್ತಾಳೆ. ಪ್ರಸ್ತುತ ಪ್ರಯೋಗದಲ್ಲಿ ನಡೆಯುವ ಕೊಲೆ ಕಾಳಿಯ ಕತೆಯನ್ನು ವರ್ತಮಾನಕ್ಕೆ ತಳಕು ಹಾಕುತ್ತದೆ.ಇಲ್ಲಿ ಕಾಳಿ ದೈವಪೀಠ ದಿಂದ ಕೆಳಗೆ ಬಂದು ಜಗತ್ತನ್ನ ಶೋಷಣೆಯೊಂದ ಮುಕ್ತ ಮಾಡಿದ್ದಾಳೆ.
ಹೀಗೆ ಎರಡು ಪಾತಳಿಗಳಲ್ಲಿ ನಡೆಯುವ ನಾಟಕ ಕಥೆ ಹೇಳುವ, ನಟನೆಯ ಶೈಲಿಯನ್ನು realistic ಆಗಿ ಉಳಿಸಿಕೊಳ್ಳುತ್ತಲೇ, ನಾಟಕದೊಳಗೆ ಆರಾಧನೆಯ ಶೈಲಿಗಳನ್ನೂ ಒಳಗೊಳ್ಳುವದರೊಂದಿಗೆ ವಿಶಿಷ್ಟ ಎನಿಸುತ್ತದೆ.
ನಿರ್ದೇಶನ: Chandra Dasan










0 Comments