–ಕಿರಣ್ ಭಟ್
ವಿಜಯನಗರ ʼಬಿಂಬʼ ಹಲವು ವರ್ಷಗಳಿಂದ ಮಕ್ಕಳ ಜೊತೆ ತನ್ನನ್ನು ತೊಡಗಿಸಿಕೊಂಡು ಮಕ್ಕಳಿಗಾಗಿ ಹಲವು ಬಗೆಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ರಂಗಭೂಮಿಯ ಚಟುವಟಿಕೆ ಅವುಗಳಲ್ಲಿ ಮುಖ್ಯವಾದದ್ದು. ಮಕ್ಕಳಿಗಾಗಿ ವಾರಾಂತ್ಯದ ರಂಗ ತರಗತಿಗಳನ್ನು ನಡೆಸುವ ʼಬಿಂಬʼ ಅವಧಿಯ ಕೊನೆಯಲ್ಲಿ ತರಗತಿಯಲ್ಲಿ ಸಿದ್ಧವಾದ ನಾಟಕಗಳನ್ನು ಪ್ರದರ್ಶಿಸುತ್ತದೆ. ಇತ್ತೀಚಿನ ಇಂಥ ಪ್ರದರ್ಶನದಲ್ಲಿ ಎರಡು ಮಕ್ಕಳ ನಾಟಕಗಳು ಪ್ರದರ್ಶಿತವಾದವು.
ಹಂಬಲ್ಪುರಬಾದಲ್ ಸರ್ಕಾರ್ ರ ʼಹಟ್ಟಮಲಾರ್ ಒಪಾರೆʼ (ಹಟ್ಟಮಲಾರ್ ನಿಂದಾಚೆ) ನಾಟಕದ ನಾಟಕದ ಕನ್ನಡ ರೂಪ ಇದು. ‘ದೊಡ್ಡ ಮನುಷ್ಯರ ಊರಿʼ ನ ಒಂದು ಕಳ್ಳರ ಗ್ಯಾಂಗ್ ಕಳ್ಳತನದಲ್ಲಿ ನಿಸ್ಸೀಮ. ನೋಡ ನೋಡುತ್ತಿದ್ದಂತೆ ಎಲ್ಲವನ್ನೂ ಮಾಯ ಮಾಡಬಲ್ಲ ಇವರು ಕನ್ನ ಕೊರೆಯುವಲ್ಲೂ ಸಿದ್ಧಹಸ್ತರು. ʼಮೃಚ್ಛಕಟಿಕʼ ದ ಕಳ್ಳನಂತೆ ಕಲಾತ್ಮಕವಾಗಿ ಕನ್ನ ಕೊರೆಯುವವನೊಬ್ಬ ಇವರ ಬಾಸ್.
ಅದ್ಯಾವುದೋ ಕಳ್ಳತನ ಮಾಡುವಾಗ, ಕೊಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡ ಇವರನ್ನು ಊರ ಜನ ನೋಡಿಬಿಡುತ್ತಾರೆ. ಗುಂಪಾಗಿ ಅಟ್ಟಿಸಿಕೊಂಡು ಹೋಗುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಈ ಗ್ಯಾಂಗ್ ಮೇಲೇಳುವದು ʼಹಂಬಲ್ಪುರʼವೆಂಬ ಊರಿನಲ್ಲಿ.ಅದೊಂದು ವಿಚಿತ್ರ ಊರು ಆ ಊರಿನಲ್ಲಿ ಎಲ್ಲಾ ಫ್ರೀ. ಊಟ ಫ್ರೀ, ಹಣ್ಣು ಫ್ರೀ, ಎಳನೀರೂ ಫ್ರೀ. ಕಾಸು ಎಂದರೇ ಗೊತ್ತಿಲ್ಲದ ಊರು ಇದು.ಬಾಗಿಲುಗಳೇ ಇಲ್ಲದ ಮನೆಗಳು, ಅಂಗಡಿಗಳು. ಬೀಗವೇ ಇಲ್ಲದ ಕಪಾಟುಗಳು. ಇಂಥ ಊರಲ್ಲಿ ಕಳ್ಳತನ ಮಾಡುವ ಹೊಂಚು ಹಾಕುತ್ತದೆ ಈ ಗ್ಯಾಂಗ್. ಮುಂದಿರುವದೇ ಮಜಾ.

ಬಾದಲ್ ಸರ್ಕಾರ್ ಸಮಾಜೋ ರಾಜಕೀಯ ವಸ್ತುಗಳನ್ನು ಹಾಸ್ಯದ ಲೇಪನದೊಂದಿಗೆ ಇಡುವದರಲ್ಲಿ ಸಿದ್ಧಹಸ್ತರು. ಇಲ್ಲಿಯೂ ಅವರು ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಾರೆ. ಚಿಂತೆಯೇ ಇಲ್ಲದೇ ಆರಾಮಾಗಿ ಬದುಕುತ್ತಿರುವ ʼಹಂಬಲ್ಪುರʼದ ಜನರಿಗೆ ಕಾಸಿನ ವಿಷಯವೇ ತಿಳಿದಿಲ್ಲ ಎನ್ನುವದರೊಂದಿಗೆ ಹಣವೇ ಎಲ್ಲವೂ ಅಲ್ಲ ಎಂದು ಮಕ್ಕಳಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಾರೆ. ಹಣದ ಹಿಂದೆಯೇ ಓಡುತ್ತಿರುವ ಸದ್ಯದ ಸಾಮಾಜಿಕ ಸ್ಥಿತಿಯ ಕುರಿತು ಎಚ್ಚರಿಸುತ್ತಾರೆ. ನಾಟಕದ ಕೊನೆಯಲ್ಲಿ ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿಯುವದರೊಂದಿಗೆ ಒಳ್ಳೆಯ ಸಂದೇಶವನ್ನೂ ರವಾನಿಸುತ್ತಾರೆ.
ನಾಟಕದ ಆರಂಭದಲ್ಲೇ ರೂಪಾಯಿ ನಾಣ್ಯಗಳ ಸಂಕೇತಗಳನ್ನೂ, ʼರೂʼ ಎನ್ನುವ ರಾಗದೊಂದಿಗೆ ಹಾಡನ್ನೂ ಪ್ರಾರಂಭಿಸುವ ನಿರ್ದೇಶಕಿ ಸುಶ್ಮಾ ನಾಟಕಕ್ಕೊಂದು ಅರ್ಥಪೂರ್ಣವಾದ ಪ್ರವೇಶಿಕೆಯನ್ನು ಕೊಡುತ್ತಾರೆ.ನಾಟಕದುದ್ದಕ್ಕೂ ತಮಾಶೆಯ ದೃಶ್ಯಗಳಿವೆ. ಕೊಟ್ಟಿಗೆಯ ದೃಶ್ಯದಲ್ಲಿ ಸಾಂಕೇತಿಕವಾಗಿ ಉಪಯೋಗಿಸಿದ ಹಸುವಿನ ಮುಖವೂ. ಮುಂದಿನ ನದಿ ದಾಟುವ ದೃಶ್ಯವೂ ತುಂಬ ಕಲಾತ್ಮಕವಾಗಿವೆ.ಸಾಕಷ್ಟು ದೊಡ್ಡ ಸಂಖ್ಯೆಯ ಮಕ್ಕಳನ್ನೂ, ಗುಂಪು ದೃಶ್ಯಗಳನ್ನೂ ಸೊಗಸಾಗಿಯೇ ಸಂಭಾಳಿಸುತ್ತಾರೆ. ʼತೂತುʼ ಕೊರೆದ ನಂತರ ಅದರೊಳಗಿಂದ ಹಾದು ಬರುವ ಬೆಳಕೂ, ಅದರ ಮೂಲಕ ನಡೆಯುವ ಚಲನೆಗಳೂ, ಆಕರ್ಷಕವಾಗಿವೆ.(ಬೆಳಕು;ಶಿವಕುಮಾರ್)ಸುಂದರ ವಿನ್ಯಾಸಗಳಿವೆ. ಎಲ್ಲ ಮಕ್ಕಳೂ ಅವರೇ ಹಾಡುತ್ತ ಅಭಿನಯಿಸುತ್ತಾರೆ.
ಸೆಟ್ ಗಳನ್ನೂ, ಪರಿಕರಗಳನ್ನೂ ತಾವೇ ಎತ್ತಿಟ್ಟುಕೊಳ್ಳುತ್ತ ಇಡಿಯ ಪ್ರಕ್ರಿಯೆಯ ಭಾಗವಾಗುತ್ತಾರೆ.

ಕಾಪಿಚಟ್ ಕಳ್ಳೇಕಾಯ್‌ಮೆಲು ದನಿಯ ಬೆಕ್ಕಿಗೆ ಹುಲಿಯಂತೆ ಕೂಗಬೇಕಿದೆ. ಪಟ್ಟದ ಬೊಂಬೆಗಳಿಗೆ ಬಾರ್ಬಿ ಡಾಲ್, ಹಲ್ಕ್ ಆಗುವ ಕನಸು. ʼಕಾಕಾʼ ಎನ್ನೋ ಹುಡುಗನಿಗೆ ಕಾಪಿ ಹೊಡೆದು ಪಾಸಾಗಬೇಕಿದೆ. ಹೀಗೆ ʼಇನ್ನೊಂದಾಗುವʼ ಕನಸು ಹೊತ್ತವರ ಕತೆಯನ್ನು ಮೂವರು ಕತೆಗಾರರು ಕಟ್ಟುವಕ್ಕೆ ಶುರುಮಾಡುತ್ತಾರೆ.
ಪ್ರತಿ ಕತೆಯೂ ಥಟ್ಟನೆ ಮುಗಿದುಹೋದಾಗ ಕನಸು ನನಸಾಗಿಸಿಕೊಳ್ಳಲಾರದ ಪಾತ್ರಗಳು ಗಲಾಟೆ ಶುರುಮಾಡುತ್ತವೆ. ಈ ಮಧ್ಯೆ ಪ್ರವೇಶಿಸುವ ಇಬ್ಬರು ಅಜ್ಜಿಯಂದಿರು ಕತೆಗಾರರ ಜೊತೆಗೂಡಿ ಕತೆ ಮುಂದುವರಿಸುತ್ತ ಹೋಗುತ್ತಾರೆ…ʼ ನಾವು, ನಾವೇ ಆಗ್ಬೇಕುʼ ಎನ್ನುತ್ತ ನಮ್ಮದೇ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎನ್ನುವತ್ತ ಬೊಟ್ಟುಮಾಡುವ ಈ ನಾಟಕದ ತುಂಬ ಹಲವು ಬಗೆಯ ಪಾತ್ರಗಳಿವೆ. ನಗು ತರಿಸುವ ಮಾತುಗಳಿವೆ.ಹಾಡುಗಳಿವೆ. ಎಲ್ಲ ಸಂದರ್ಭದಲ್ಲೂ ರಂಗದ ತುಂಬ ಮಕ್ಕಳಿರುತ್ತಾರೆ. ನಾಟಕದ ವಿನ್ಯಾಸ ಸುಂದರವಾಗಿದೆ. ಮಕ್ಕಳ ನಾಟಕಗಳ ಅಂದವೇ ಗುಂಪು ದೃಶ್ಯಗಳು. ನಾಟಕದ ನಿರ್ದೇಶಕ ಎಸ್.ವಿ.ಕಶ್ಯಪ್ ಅವುಗಳನ್ನುಸುಂದರವಾಗಿ ಕಟ್ಟಿಕೊಡುತ್ತಾರೆ. ಹಕ್ಕಿ, ಪ್ರಾಣಿಗಳು, ವೈವಿಧ್ಯಮಯ ಪಾತ್ರಗಳಿರುವದರಿಂದ ಲವಲವಿಕೆಯಿದೆ. ಆದರೆ, ದ್ವಿತೀಯಾರ್ಧದ ಕೊನೆಯ ಭಾಗದಲ್ಲಿ ನಾಟಕ ಸ್ವಲ್ಪ ಗೋಜಲಾಗುತ್ತದೇನೋ ಎನಿಸುತ್ತದೆ.
ಎರಡೂ ನಾಟಕಗಳನ್ನು ಡಾ.ಎಸ್.ವಿ.ಕಶ್ಯಪ್ ರಚಿಸಿದ್ದಾರೆ. ಬಾದಲ್ ಸರ್ಕಾರ್ ರ ʼಹಟ್ಟಮಲಾರ್ ಒಪಾರೆʼ ಯನ್ನು ʼಹಂಬಲ್ಪುರʼ ವಾಗಿಸುವಾಗ ಕಶ್ಯಪ್ ʼ ಕಾಪಿ ಚಟ್ʼ ಆಗುವದಿಲ್ಲ. ಕನ್ನಡದ ಮಕ್ಕಳ ಸಂದರ್ಭಕ್ಕೂ ಮಕ್ಕಳ ಗುಂಪುಗಳಿಗೂ ಹೊಂದುವಂತೆ ನಾಟಕವನ್ನು ವಿಸ್ತರಿಸಿಕೊಳ್ಳುತ್ತಾರೆ. ಅಲ್ಲಲ್ಲಿ ʼಪಂಚ್ʼ ಗಳಿವೆ. ನಗು ಉಕ್ಕಿಸುವ ಮಾತುಗಳಿವೆ. ಅಷ್ಟೇ ಚಂದದ ಹಾಡುಗಳಿವೆ. ಮಕ್ಕಳು ಹೆಜ್ಜೆ ಕಾಕುವಂತೆ ಮಾಡುವ ಸಂಗೀತವಿದೆ. ಸ್ಕಂದ, ಅಚಿಂತ್ಯ ರಿಗೆ ಶಹಬ್ಬಾಸ್. ಮಕ್ಕಳ ನಾಟಕಗಳಿಗೆ ಮೆರಗು ತರೋದೇ ಬಣ್ಣ, ಬಟ್ಟೆ.
ಮಾಲತೇಶ್ ಬಡಿಗೇರ್ ಸೊಗಸಾದ ಪ್ರಸಾದನ ಮಾಡಿದ್ದಾರೆ. ಶೋಭಾ ವೆಂಕಟೇಶ್ ರ ವಸ್ತ್ರ ವಿನ್ಯಾಸವೂ ಸೊಗಸಾಗಿದೆ. ಬೃಂದಾ ಎರಡೂ ನಾಟಕಗಳ ಜೊತೆಗಿದ್ದಾರೆ. ಮಕ್ಕಳು ಒಬ್ಬರಿಗಿಂತ ಒಬ್ಬರು ಚಂದವಾಗಿ ಅಭಿನಯಿಸಿದ್ದಾರೆ. ಹಾರಿದ್ದಾರೆ, ಕುಣಿದಿದ್ದಾರೆ. ಇಡಿಯ ನಾಟಕದ ಯಶಸ್ಸೂ ಅವರಿಗೇ ಸಲ್ಲುತ್ತದೆ.

ಹಾಗೆಯೇ ಚಪ್ಪಾಳೆ ಕೂಡ. ವಿಶ್ವನಾಥ್ ಮಂಡಿ ಸುಂದರ ಪರಿಕರ ರಚಿಸಿದ್ದಾರೆ.
ಎರಡೂ ನಾಟಕಗಳನ್ನು ನೋಡಿದಾಗ, ನಾಟಕಗಳ ಅವಧಿ ಸ್ವಲ್ಪ ಜಾಸ್ತಿ ಆಯಿತೇನೋ ಎನಿಸುತ್ತದೆ. ಪ್ರೇಕ್ಷಕ ಮಕ್ಕಳನ್ನು ಹಿಡಿದಿಡುವ ಹಾಗೆ ಅವಧಿಯನ್ನು ಸ್ವಲ್ಪ ತಗ್ಗಿಸಬಹುದೇನೋ.
ʼವಿಜಯನಗರ ಬಿಂಬʼ ದ ವೆಂಕಟೇಶ್ ಸರ್, ಶೋಭಾ ವೆಂಕಟೇಶ್, ಎಸ್.ವಿ.ಸುಶ್ಮಾ, ಎಸ್.ವಿ. ಕಶ್ಯಪ್, ಡಾ.ಬೃಂದಾ ರ ಪರಿಶ್ರಮ ಈ ನಾಟಕಗಳ ಹಿಂದಿದೆ. ಎರಡು ಒಳ್ಳೆಯ ಮಕ್ಕಳ ನಾಟಕಗಳಿಗಾಗಿ ʼಬಿಂಬʼ ಕ್ಕೆ ಧನ್ಯವಾದಗಳು.






0 Comments