ಎನ್ ಸಂಧ್ಯಾರಾಣಿ
ನಗರ ಜೀವನ ಒಂಟಿ ಬದುಕಿನೆಡೆಗೆ ಎಸೆಯುವ ಥಣ್ಣನೆಯ ಕ್ರೌರ್ಯ, ಅನಾಥ ಪ್ರಜ್ಞೆ, ಪರದೇಸಿತನ …. ಇವೆಲ್ಲವನ್ನೂ ಜಯಂತ ಕಾಯ್ಕಿಣಿ ತಮ್ಮದೇ ಆದ ನಿರುದ್ವಿಗ್ನ ದನಿಯಲ್ಲಿ, ಆಡಂಬರವಿಲ್ಲದ ಭಾಷೆಯಲ್ಲಿ ನಿರೂಪಿಸುತ್ತಾರೆ. ಕಥೆಯಾಗಿ ಓದುವಾಗ ಇವು ಅರಿವಿಗೆ ದಕ್ಕಿಬಿಡುತ್ತದೆ, ಆದರೆ ಇದನ್ನು ರಂಗಕ್ಕಿಳಿಸಿ ಗೆಲ್ಲಿಸುವುದು ನಿರ್ದೇಶಕನಿಗೆ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಕಥೆಯನ್ನು ನಾಟಕವನ್ನಾಗಿಸುವಲ್ಲಿ ಗೆದ್ದದ್ದು ನಿನ್ನೆ ರಂಗಶಂಕರದಲ್ಲಿ ನಾಟಕ ಆಡಿದ ರಂಗ ಸೌರಭ ತಂಡ, ನಾಟಕವನ್ನು ನಿರ್ದೇಶಿಸಿದ್ದು ಭರತ್ ದಿವಾಕರ್. ಕೈಗೆತ್ತಿಕೊಂಡ ಮೂರೂ ಕಥೆಗಳಲ್ಲಿ ಮೊದಲೆರಡು ಅದ್ಭುತವಾಗಿ ಗೆಲ್ಲುತ್ತವೆ, ಮೂರನೆಯದನ್ನು ಇನ್ನು ಸ್ವಲ್ಪ ಬಿಗಿಯಾಗಿಸಬಹುದಿತ್ತೇನೋ ಅನಿಸುತ್ತದೆ.

ಅರ್ಧ ಎದ್ದ ಮೆಟ್ರೋ ಕಂಬಗಳ ಗದ್ದಲದ ನಡುವೆಯೂ ತಮ್ಮ ಗೂಡು ನಿರ್ಮಿಸಿಕೊಳ್ಳುವ ಅಸಾವರಿ ಮತ್ತು ಪೋಪಟ್ ತಮ್ಮ ತಮ್ಮ ಹೆಸರನ್ನು ಲಗ್ನ ಪತ್ರಿಕೆಯಲ್ಲಿ ಇಳಿಸುವಾಗ ಮನೆತನದ ಹೆಸರು ಗೊತ್ತಿಲ್ಲದ ಅವರ ಪರದೇಸಿತನ ಅವರ ಆ ಘಳಿಗೆವರೆಗಿನ ಸಂಭ್ರಮವನ್ನು ನುಂಗಿಹಾಕಿ ಬಿಡುತ್ತದೆ. ಮಧ್ಯವಯಸ್ಕನಾದರೂ ಅವಿವಾಹಿತನಾಗಿಯೇ ಉಳಿದ ಒಬ್ಬಾತ, ಅವನ ಏನೇನೂ ಘಟಿಸದ ಖಾಲಿ ಖೋಲಿಯಂತಹ ಬಾಳಿಗೆ ಮದುಮಗಳ ಕೆಂಪು ಮೇಲು ಹೊದಿಕೆಯಂತೆ ಬರುವ ಶಾಲಿನಿ ಸೇನ್ ಎನ್ನುವ ಹೆಸರು, ಮದುವೆಯಾಗಿ ಎರಡೇ ದಿನದಲ್ಲಿ ಅದರಿಂದ ಹೊರಬಂದ ತನ್ನ ಮಗಳ ’virginity is still intact.. ’ ಎನ್ನುವಾಗ ಆ ತಂದೆ ನುಂಗಿಕೊಳ್ಳುವ ಅವಮಾನ, ’ಊರಿನಲ್ಲಿ ಏನೋ ಇದೆ ನಿನಗೆ’ ಎಂದು ಕೇಳಿದ ಡ್ರೈವರ್ ಗೆ ’ಊರಲ್ಲಿ ನನ್ನ ಅಪ್ಪ ಇದಾರೆ’ ಎನ್ನುವ ಆ ಖಾಲಿ ತಗಡಿನ ಡಬ್ಬಿ ಜೊತೆಗೆ ಆಡುವ ಪೋರನ ಎದೆಯುಬ್ಬಿಸುವ ನುಡಿ …… ಕಥೆಯ ಪಾತ್ರಗಳೆಲ್ಲಾ ನಮ್ಮೆದುರಿಗೆ, ನಮ್ಮೊಳಗೆ. ಮೂರನೇ ಕಥೆಯಲ್ಲಿ ಒಂದು ಭವ್ಯ ಇತಿಹಾಸ ಹೊಂದಿದ್ದರೂ ಸಧ್ಯದಲ್ಲೇ ಸ್ಮಾರಕವಾಗಲಿರುವ ’ಅಪೆರಾ ಹೌಸ್’ ಚಿತ್ರ ಮಂದಿರ. ಅಲ್ಲಿ ಚಿತ್ರ ನೋಡಲು ಬಂದವರು ಯಾರೋ ಮರೆತು, ತ್ಯಜಿಸಿ ಹೋದ ಒಂದು ಫ್ಲಾಸ್ಕ್. ತನ್ನ ಒಡಲಲ್ಲಿ ಬೆಚ್ಚನೆಯ ಚಹ ತುಂಬಿಕೊಂಡು ಎಲ್ಲೆಲ್ಲಿ ಅಲೆಯುತ್ತದೆ..? ಇಂದ್ರನೀಲನ ಬಳಿಯಿಂದ ಚಹ ಅಂಗಡಿಗೆ, ನಾಚ್ ವಾಲಿಗಳ ಸುಳ್ಳು ದಾಂಪತ್ಯದ ಕನಸುಗಳ ಮನೆಗೆ, ಥೇಟರಿನ ಹುಡುಗರ ಖೋಲಿಗೆ, ಕಡೆಗೆ ತಾರ್ ದೇವ್ ನ ಮನೆಗೆ …. ಆದರೆ ಕಡೆಗೂ ಅದಕ್ಕೆ ಒಂದು ವಿಳಾಸ ಸಿಗುವುದಿಲ್ಲ, ’ಇದು ನನ್ನದು’ ಅಂತ ಯಾರೂ ಅದನ್ನು ಕ್ಲೈಮ್ ಮಾಡುವುದೇ ಇಲ್ಲ, ಕೈಗೆತ್ತಿಕೊಳ್ಳದ ಪ್ರೀತಿಯಂತೆ ತನ್ನ ಇಲ್ಲದ ವಿಳಾಸಕ್ಕಾಗಿ ಮೌನದಲ್ಲೇ ಕಾಯುತ್ತಾ, ಕಥೆಯ ಒಂದು ಪಾತ್ರವಾಗಿ, ಸಾಕ್ಷೀಪ್ರಜ್ಞೆಯಾಗಿ ಬರುವ ಫ್ಲಾಸ್ಕ್ ….
ಇಲ್ಲಿ ಎಲ್ಲರೂ ಅಸ್ತಿತ್ವಕ್ಕಾಗಿ, ಒಂದು ಗುರುತಿಗಾಗಿ, ತನ್ನದು ಮತ್ತು ಪೂರ್ತಿಯಾಗಿ ತನ್ನದು ಅನ್ನುವ ಒಂದು ಜೀವಕ್ಕಾಗಿ, ಕಡೆಗೆ ಒಂದು ವಿಳಾಸಕ್ಕಾಗಿ ಪರಿತಪಿಸುವವರೇ …. ಕಥೆ ಯಾಕೆ ನಮ್ಮದೂ ಅನ್ನಿಸಿಬಿಡುತ್ತದೆ?






ತುಂಬಾ ಒಳ್ಳೆಯ ಪ್ರಯೋಗ ‘ರಂಗಸೌರಭ’ದ್ದು. ಉತ್ತಮ ಪ್ರಯತ್ನ.