ನೀ ಬರುವ ಹಾದಿಯಲಿ ಹೂ ಹಾಸಿ ಕಾದೆನಾ..
ಚಂದ್ರ ಸೌಗಂಧಿಕಾ
7ನೇ ಶ ‘ಮೃಣಾಲಿ ಸೋನಾ’ ರೇವತಿ, 7ರುವ ದಾರಿಯಲ್ಲಿ ಮಕ್ಕಳು ‘ಗುಡುಗುಡು ಗುಮ್ಮಟ ದೇವರಿಗೆ ದಾರಿ ಬಿಡಿ, ಎಂದು ಜೋರಾಗಿ ಹೇಳುತ್ತಾ ಓಡುತ್ತಿದ್ದರು. ಅದೊಂದು ಗುಂಗು. ಆ ಗುಂಗಿನಿಂದ ಮಕ್ಕಳು ಹೊರಬರಲಾಗುತ್ತಿರಲಿಲ್ಲ. ಅಕ್ಟೋಬರ್ ರಜೆಯಲ್ಲಿ ಈ ನಾಟಕವು ಸೋಣಂಗೇರಿಯ ಹಲವು ಮನೆಯಂಗಳದಲ್ಲಿ ಪ್ರದರ್ಶನಗೊಂಡಿತು.
ನಂತರ ಮಂಗಳೂರಿನ ಟೌನ್ ಹಾಲ್ ನ ಎದುರು ಒಂದು ಪ್ರದರ್ಶನವನ್ನು ನೀಡಿದೆವು. ಸೋನಾರ ಗೆಳೆಯರಾದ ಜಿ.ಎನ್.ಮೋಹನ್, ಎಂ.ಜಿ. ಕೆಜೆ, ಶಿವರಾಂ ಪೈಲೂರು. ನಾದ ಶೆಟ್ಟಿ. ಅವರನ್ನೊಳಗೊಂಡ ಸಮಾನ ಮನಸ್ಕರ ತಂಡವೊಂದು ನಮ್ಮನ್ನು ಅಲ್ಲಿಗೆ ಆಹ್ವಾನಿಸಿತು. ನಾಟಕದಲ್ಲಿ ಹುಲಿಯ ಪಾತ್ರದ ಪ್ರವೇಶ ಅಬ್ಬರದಿಂದ ಕೂಡಿತ್ತು. ಎರವಲು ಚೆಂಡೆ ಯೊಂದನ್ನು ನಾವು ಪಡೆದುಕೊಂಡಿದ್ದೆವು.
ಮಂಗಳೂರಿನಲ್ಲಿ ಹುಲಿಯ ಪ್ರವೇಶ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಯಿತು. ಜೋರು ಸದ್ದಿನ ಬಳಿಕ ಆರು ವರ್ಷದ ಪುಟ್ಟ ಪ್ರತಾಪ ದೊಡ್ಡ ಹುಲಿಯ ಮುಖವನ್ನು ಹಾಕಿ ಪ್ರವೇಶಗೈದ. ಶಿಳ್ಳೆ ಕರತಾಡನದ ಸದ್ದು. ನಾಟಕ ಮುಗಿಸಿ ಸೋಣಂಗೇರಿ ಮರಳಿ ಬರುವಾಗಲೂ ಮಕ್ಕಳು ಗುಮ್ಮಟ ದೇವರಿಗೆ ದಾರಿ ಬಿಡಿ ಹಾಡುತ್ತಲೇ ಇದ್ದರು. ಸೋಣಂಗೇರಿಯಲ್ಲಿ ಹಾಡಲು ಕೆಲವು ಮಕ್ಕಳನ್ನು ಆಯ್ಕೆ ಮಾಡಿದೆವು. ಆ ಮಕ್ಕಳು ನಾಟಕ ಆರಂಭವಾಗುವಾಗ ನಮ್ಮೊಂದಿಗೆ ಹಾಡುತ್ತಿದ್ದರೆ ಆರಂಭವಾಗಿ ನಾಟಕದ ಹತ್ತು ನಿಮಿಷದ ಬಳಿಕ ಕಾಣಿಸುತ್ತಿರಲಿಲ್ಲ.
ನಂತರ ನಮಗೆ ಗೊತ್ತಾಯಿತು ಅವರು ಪ್ರೇಕ್ಷಕರ ಮೊದಲ ಸಾಲಿನಲ್ಲಿ ಕುಳಿತು ನಾಟಕ ನೋಡುತ್ತಿದ್ದಾರೆ ಎಂದು. ಆಡಿನ ಮರಿಯು ಅಜ್ಜಿ ಮನೆಗೆ ಹೊರಟಾಗ ಕಾಡಿನಲ್ಲಿ ಬೇರೆ ಪ್ರಾಣಿಗಳಂತೆ ಒಂದು ದೊಡ್ಡ ಹೆಬ್ಬಾವು ಕೂಡ ಎದುರಾಗುತ್ತದೆ. ಅದರ ಉದ್ದ ಸುಮಾರು ಇಪ್ಪತ್ತು ಅಡಿ ಅದನ್ನು ಹಳೆಯ ಬಟ್ಟೆ ಮತ್ತು ಹತ್ತಿಯಿಂದ ಮಾಡಲಾಯಿತು. ಆಗ ‘ಕಾವಾ’ದಲ್ಲಿ ಅಧ್ಯಯನ ಮಾಡುತ್ತಿದ್ದ ಕುಸುಮಾಧರ ಸೋನಾ ಮತ್ತು ಅವರ ಗೆಳೆಯರು ‘ಸುರೇಶ್ ಹಂದಾಡಿ’ಯವರು ಅದನ್ನು ನಿಜವಾದ ಹೆಬ್ಬಾವಿನಂತೆ ಮಾಡಿದ್ದರು.
ಆ ಹೆಬ್ಬಾವನ್ನು ಹೊತ್ತುಕೊಂಡು ಆಡಿನ ಮರಿಯ ಪಾತ್ರ ಮಾಡಿದ ಮೊಟ್ಟೆ ಸುನೀಲ್. ಎಂ.ವಿ ಅದರೊಂದಿಗೆ ಹೊರಳಾಡುವ ದೃಶ್ಯ ಬೆಳಕು ಮತ್ತು ಸಂಗೀತದ ಸಂಯೋಜನೆಯಲ್ಲಿ ತುಂಬಾ ಮುದ ನೀಡಿತ್ತು.. ಸುಮಾರು ಐದಡಿ ಎತ್ತರದ ಡೋಲು ಒಂದನ್ನು ವೆಲ್ಡಿಂಗ್ ಮಾಡಿಸಿ ಶಾಲೆಯ ಅಂಗಳಕ್ಕೆ ತರಲಾಯಿತು. ಅದರ ಮೇಲೆ ಗೋಣಿಯನ್ನು ಹೊದಿಸಲಾಯಿತು. ನಂತರ ಅದಕ್ಕೆ ಸೆಗಣಿಯನ್ನು ಬಳಿಯಲಾಯಿತು. ಆಗ ಅದೊಂದು ಚರ್ಮದ ಡೋಲಿ ನಂತೆ ಕಾಣುತ್ತಿತ್ತು. ಸುಂದರವಾದ ದೃಶ್ಯ ಅಲ್ಲಿ ಮೂಡುತ್ತಿತ್ತು.
ಮೋಹನ್ ಸೋನಾರ ತಂದೆಯವರು ಸೋಣಂಗೇರಿ ನಡುಮನೆ ವೆಂಕಟರಮಣ ಗೌಡರು. ತುಂಬಾ ಗೌರವಾನ್ವಿತ ಸರಳ ಜೀವಿ. ನಾಡಿನ ಶ್ರೇಯೋಭಿವೃದ್ಧಿಗಾಗಿ ಯಾವತ್ತೂ ಶ್ರಮಿಸಿದವರು. ಮಕ್ಕಳೆಲ್ಲರ ಮುದ್ದಿನ ತಾತ. ಮನೆಯಲ್ಲಿ ಮಕ್ಕಳೆಲ್ಲರ ಮುದ್ದಿನ ಅವ್ವ ಸೋನಾರ ಅಮ್ಮ. ಮತ್ತು ಕುಸುಮಾಧರರ ಅಮ್ಮ. ಬಯಲು ಚಿತ್ರಾಲಯ ಆರಂಭದ ಕಾಲದಲ್ಲಿ ಮೋಹನ್ ಸೋನಾರ ಮನೆಯಲ್ಲಿ ನೂರಾರು ಜನ ಬೆಳಗಿನ ತಿಂಡಿ. ಮಧ್ಯಾಹ್ನದ ಊಟ ರಾತ್ರಿ ಯಊಟ. ತಿಂಗಳಾನುಗಟ್ಟಲೇ ನಡೆದ ಈ ಕಾರ್ಯಕ್ರಮಕ್ಕೆ ಮನೆಯ ಹೆಂಗಸರೆಲ್ಲ ಸೇರಿ ಭೋಜನ ಸಿದ್ಧಪಡಿಸುತ್ತಿದ್ದರು. ಅವರೆಲ್ಲರೂ ಅದೊಂದು ಸಂಭ್ರಮದ ಸಡಗರದ ಕೆಲಸವೆಂದೇ ಅದನ್ನು ಮಾಡುತ್ತಿದ್ದರು.
ಆಧುನಿಕ ವ್ಯವಸ್ಥೆಗಳಿಲ್ಲದ ಅಡುಗೆ ಮನೆಗಳಲ್ಲಿ ಅವರು ರುಬ್ಬುವ ಕಲ್ಲುಗಳಲ್ಲಿ ರುಬ್ಬಿ ತಿಂಡಿ ಸಾಂಬಾರು ರುಚಿ ರುಚಿಯಾದ ಅಡುಗೆಯನ್ನು ಮಾಡಿ ಮಾಡಿ ಬಂದವರಿಗೆಲ್ಲರಿಗೂ ಆದರ ಆತಿಥ್ಯ ನೀಡಿದರು. ಅದೊಂದು ಉತ್ಸವ ಅಥವಾ ಜಾತ್ರೆಯ ರೀತಿ ನಡೆದಿತ್ತು. ಸೋನಾ ಮನೆಯಲ್ಲಿ ರಾಮಕ್ಕ ಟೀಚರ್, ಪುಷ್ಪಕ್ಕ, ಯಶೋದಮ್ಮ, ‘ಶ್ವೇತನಅಮ್ಮ’ಮಾಧವಿ ಸೋನಾ’ ಇವರೆಲ್ಲರೂ ಹಗಲಿರುಳು ಅಡುಗೆಯ ಸಿದ್ಧತೆಗಳನ್ನು ಮಾಡಿಕೊಂಡೇ ಇರುತ್ತಿದ್ದರು. ಅವರೆಲ್ಲರೂ ಎಲ್ಲ ಮಕ್ಕಳಿಗೆ ತಾಯಂದಿರಂತೆ ಪ್ರೀತಿಯಿಂದ ಮಾಡಿ ಬಡಿಸುತ್ತಿದ್ದರು ರುಕ್ಮಯಣ್ಣ, ಗೋಪಣ್ಣ, ಶೇಷಗಿರಿ, ಅಣ್ಣಾ, ಕಾಡಪ್ಪ ಎಲ್ಲರೂ ಮನೆಯ ಕೆಲಸಗಳಲ್ಲಿ ಸಹಕಾರ ನೀಡಿದ್ದರು.
ಬಯಲು ಚಿತ್ರಾಲಯ ಸುದ್ದಿಗಳು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ದೇಶದಾದ್ಯಂತ ಪ್ರಕಟವಾದಂತೆ ಸೋಣಂಗೇರಿ ಬರುವ ಜನ ಸಂಖ್ಯೆಯೂ ಹೆಚ್ಚಾಗಿತ್ತು. ಊರಿನಲ್ಲಿ ಬೇರೆ ಊಟದ ಹೊಟೇಲು ಗಳಾಗಲಿ ಚಹಾದ ಹೋಟೆಲುಗಳು ಇಲ್ಲ. ಸೋಣಂಗೇರಿ ‘ಶೇಖಾಲಿ’ ಅವರ ಹೊಟೇಲಿನಲ್ಲಿ ಬೋಂಡಾ ಮತ್ತು ಚಹಾ ಸಿಗುತ್ತಿತ್ತು. ಅಷ್ಟು ದೊಡ್ಡ ಗಾತ್ರದ ಬೋಂಡ ವನ್ನು ನಾನು ತಿಂದದ್ದು ಪ್ರಥಮವಾಗಿ ಅಲ್ಲಿಯೇ. ಮುಂದೆ ಎಂದಿಗೂ ನಾನು ಅಂತ ಬೋಂಡ ವನ್ನು ತಿಂದೇ ಇಲ್ಲ. ಆದರೆ ಈಗ ಅಲ್ಲಿ ಆ ಹೋಟೆಲ್ ಇಲ್ಲ..
ರಿಹರ್ಸಲ್ ಸಂದರ್ಭದಲ್ಲಿ ದೂರದಿಂದ ಬರುವ ಮಕ್ಕಳನ್ನು ಕರೆದು ಸೋನರು ವಿಚಾರಿಸುತ್ತಿದ್ದರು ಅವರಿಗೆ ಪ್ರಯಾಣದ ವೆಚ್ಚಗಳ ಅಗತ್ಯವಿದ್ದರೆ ಅದನ್ನು ತಾನೇ ಕೊಡುತ್ತಿದ್ದರು. ಮತ್ತು ಆ ವಿಚಾರವನ್ನು ಅವರು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ನಿರ್ಲಿಪ್ತ ಮನೋಭಾವ. ನಿಶ್ಚಿಂತೆಯ ಮುಖಭಾವ. ಮಂದಹಾಸ.
ಹಿಂಗಾರು ಮಳೆಯ ಆರಂಭದ ದಿನಗಳಲ್ಲಿ ನಡುಮನೆಯಲ್ಲಿ ಸಂಜೆಯ ವೇಳೆ ತಾತ ಅಟ್ಟದಲ್ಲಿ ಡಬ್ಬದಲ್ಲಿ ತುಂಬಿಸಿಟ್ಟಿದ್ದ ಗೋಡಂಬಿಯನ್ನು ಹೊರಗೆ ತರುತ್ತಿದ್ದರು. ಹೊರಗೆ ಗುಡುಗು ಮಿಂಚು ಮಳೆ ಧೋ ಎಂದು ಸುರಿಯುತ್ತಿದ್ದರೆ ತಾತನ ಸುತ್ತ ಮಕ್ಕಳು ಮಕ್ಕಳ ಜೊತೆ ನಾವೆಲ್ಲರೂ ಸೇರಿ ಒಲೆಯ ಬಳಿಯಲ್ಲಿ ಸುತ್ತ ಕೂರುತ್ತಿದ್ದೆವು .
ತಾತ ಗೋಡಂಬಿಯನ್ನು ಕೆಂಡದ ನಡುವೆ ಹಾಕಿ ಅದು ಕಪ್ಪಾದಾಗ ಹೊರಗೆ ತೆಗೆದು ಗೋಡಂಬಿಯ ಹೊರ ಕವಚವನ್ನು ಮರದ ಸುತ್ತಿಗೆಯಿಂದ ಬಡಿದು ಒಂದು ಚಿಕ್ಕ ಬುಟ್ಟಿಯಲ್ಲಿ ಹಾಕಿ ಬಳಿಕ ಅದನ್ನು ಎಲ್ಲರಿಗೂ ಹಂಚುತ್ತಿದ್ದರು ಅಂದು ಕೆಂಡದಲ್ಲಿ ಬೆಂದ ಗೋಡಂಬಿಯ ರುಚಿ ಈಗಲೂ ಹಾಗೆಯೇ ಇದೆ. 2006 ಏಪ್ರಿಲ್ ಇಪ್ಪತ್ತೇಳು ರಂದು ತಾತ ನಮ್ಮನ್ನಗಲಿದರು. ನಂತರ ಮೋಹನ್ ಸೋನಾ ಅವರು ತಾತ ಗೋಡಂಬಿಯನ್ನು ಹಂಚುವ ಒಂದು ತೈಲ ವರ್ಣ ಕಲಾಕೃತಿಯನ್ನು ರಚಿಸಿದರು.
ಸೋನರ ಮನೆಗೆ ಹೋದಾಗಲೆಲ್ಲ ಕಲಾಕೃತಿಯನ್ನು ನಾನು ಮನದಣಿಯೆ ನೋಡಿ ಬರುತ್ತಿದ್ದೆ. ನಾವು ಸೋನಾ ರೊಂದಿಗೆ ಇನ್ನು ಅನೇಕ ನಾಟಕಗಳನ್ನು ಮಾಡಬೇಕಿತ್ತು. ಅವರು ಬಣ್ಣಗಳನ್ನು ಬೆರೆಸುವಾಗ ಬೆರಗುಗಣ್ಣಿನಿಂದ ನೋಡಬೇಕಿತ್ತು. ಅವರಿಗೆ ಕಣ್ಣ ಚಹಾ ಮಾಡಿಕೊಡಬೇಕಿತ್ತು. ಬಿದಿರು ಮೆಳೆಗಳ ಕಾಡು ಹಾದಿಯಲ್ಲಿ ಹರಿವ ತೊರೆ ಝರಿ ಜಲಪಾತದ ಬಳಿ ಕಾಲಾಡಿಸುತ್ತಾ ಕುಳಿತು ಪುಳಕಗೊಂಡು. ಹಾಡಬೇಕಿತ್ತು..
ಆ ಬೆಟ್ಟ ಕಂದರ ದಾಟಿ ಮೊದಲ ಬಾರಿಗೆ ಬಂದೆ ಹೊಂಚಾಕಿ ಕಾದಾರ ನೀ ಬರುವ ದಾರಿಲಿ
ನೀ ಬರುವ ಹಾದಿ ಯಲಿ ಹೂ ಹಾಸಿ ಕಾದೆನಾ ಸಾಸಿರ ಹಣತೆ ನೀ ಮನೆಯಲಿ.
ಜೋ …ಜೋ … ಜೋ… ಜೋ… ಜೋ ..
ಇದು ಗುಡುಗುಡು ಗುಮ್ಮಟ ದೇವರಿಗೆ ದಾರಿ ಬಿಡಿ ನಾಟಕದ ಹಾಡು. ಸಂದರ್ಭ ಅಜ್ಜಿಯು ಆಡಿನ ಮರಿಯನ್ನು ಜೋಗುಳ ಹಾಡಿ ಮಲಗಿಸುವುದು .
ಮಕ್ಕಳೆ.. ಮತ್ತೆ ನಾವು ಆ ಜೋಗುಳ ಹಾಡನ್ನು ಹಾಡಬೇಕು ಬನ್ನಿ.ʼ
0 ಪ್ರತಿಕ್ರಿಯೆಗಳು