ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುವ ಭೀಜ ಸಂರಕ್ಷಕರ ಅನುಕರಣೀಯ ಪಯಣ…

ಡಾ ರಾಮಕೃಷ್ಣ

ಸುಂದರ್, ಯುವರಾಜ್, ಪ್ರದೀಪ್ ಕುಮಾರ್, ರಾಜಶೇಖರ್, ಭುವನೇಶ್ ಮತ್ತು ಪ್ರದೀಪ್ ಇವರೆಲ್ಲಾ ತಮಿಳುನಾಡಿನ ಯುವ ಭೀಜ ಸಂರಕ್ಷಕರು. ಕೆಲವರು ಸಿವಿಲ್ /ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಮುಗಿಸಿ ಕೈ ತುಂಬಾ ಹಣ ಸಂಪಾದಿಸುವ ಕೆಲಸದಲ್ಲಿದ್ದವರು ಉಳಿದವರು ಡಿಗ್ರಿಗಳನ್ನು ಮುಗಿಸಿ ತಮ್ಮ ಹಿರಿಯರ ವೃತ್ತಿಪರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದವರು.

ಆದರೆ ಕಳೆದ 4-5 ವರ್ಷಗಳಿಂದ ಇವರುಗಳಿಗೆಲ್ಲಾ ಒಂದೇ ಗುರಿ, ಮುಂದಿನ ಪೀಳಿಗೆಗೆ ನಾಟಿ ಭೀಜ ಉಳಿಸಿ ಬೆಳೆಸುವುದು. ತಮ್ಮ ತಮ್ಮ ಕೆಲಸಗಳಿಗೆ ತಿಲಾಂಜಲಿ ಹೇಳಿ, ತಮಿಳು ನಾಡು ಮತ್ತು ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಅಲೆದಾಡಿ 500 ಕ್ಕೂ ಹೆಚ್ಚು ನಾಟಿ ತರಕಾರಿ ತಳಿಗಳ ಭೀಜಗಳನ್ನು ಸಂಗ್ರಹಿಸಿ ವೆಲ್ಲೂರು, ಪಾಂಡಿಚೇರಿ, ಸಿರ್ಕಳಿ ಇತ್ಯಾದಿ ಪ್ರದೇಶಗಳಲ್ಲಿ ಮಳೆ ಆಧಾರಿತ ಹಾಗೂ ಸಹಜ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಬೆಳೆದು ತರಕಾರಿ ಬೆಳೆಗಾರರಿಗೆ ವಿತರಿಸುತ್ತಿದ್ದಾರೆ !

ಮೊನ್ನೆ ಮೈಸೂರಿನಲ್ಲಿ ನಡೆದ ಗೆಡ್ಡೆ ಗೆಣಸು ಮೇಳಕ್ಕೆ ಬಂದ ಈ ಯುವಕರು ಬೆಳವಲ ಪರಿಸರ ಕೃಷಿ ಕ್ಷೇತ್ರಕ್ಕೆ ಆಗಮಿಸಿ ಟೊಮೆಟೊ, ಬದನೆ , ಈರುಳ್ಳಿ , ಸೌತೆ ಮತ್ತು ಬೆಳ್ಳುಳ್ಳಿ ಭೀಜೋತ್ಫಾದನಾ ತಾಕುಗಳಿಗೆ ಭೇಟಿ ನೀಡಿದಾಗ ಪರಸ್ವರ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಬೆಳವಲದಲ್ಲಿ ಕಟಾವಿನ ಹಂತ ದಲ್ಲಿರುವ ನೀಳ ತುಪ್ಪದ ಹೀರೆ ಈ ಯುವಕರಿಗೆ ಅತ್ಯಂತ ಆಕರ್ಷಕವಾಗಿ ಕಂಡು ಬಂದು ಭೀಜಗಳಿಗೆ ಮತ್ತೆ ಬರುವುದಾಗಿ ಹಾಗೂ ಬರುವಾಗ ತಮ್ಮ ಬಳಿ ಇರುವ ವಿಶೇಷ ತಳಿಗಳನ್ನೂ ಸಹ ತರುವುದಾಗಿ ತಿಳಿಸಿದರು.

ಈ ಯುವಕರು ಕೃಷಿ ಮತ್ತು ಪರಿಸರದ ಬಗ್ಗೆ ತೋರಿದ ಬದ್ಧತೆ ನನಗೆ ತುಂಬಾ ಇಷ್ಟವಾಗಿ ಅವರೊಂದಿಗೆ ಮತ್ತಷ್ಟು ಚರ್ಚೆ ಮಾಡಲಾಯಿತು. ಈ ಸಂವಾದದಲ್ಲಿ ಮೂಡಿಬಂದ ಕೆಲವು ಅಂಶಗಳನ್ನು ಬೇಸಾಯದ ಕಡೆಗೆ ಬೆನ್ನು ತೋರಿಸುತ್ತಿರುವ ಯುವಕರಿಗೆ ಸ್ವಲ್ಪ ಮಟ್ಟಿಗಾದರೂ ಸ್ಪೂರ್ತಿದಾಯಕ ವಾಗಬಹುದೆಂದು ಭಾವಿಸಿ ಇಲ್ಲಿ ನೀಡಲಾಗಿದೆ.

★ ಸಸ್ಯ ವೈವಿಧ್ಯತೆ ಮನುಕುಲದ ಸದೃಢತೆಯ ದಾರಿದೀಪ. ನಮ್ಮನ್ನು ನಾವು ಉಳಿಸಿಕೊಳ್ಳಲು ಸ್ಥಳೀಯ ತಳಿಗಳನ್ನು ಉಳಿಸಿ ಅಭಿವೃದ್ಧಿ ಮಾಡ ಬೇಕಾಗುತ್ತದೆ.
★ 4-5 ದಶಕದ ಹಿಂದೆ ಇದ್ದ ಶೇಕಡ 90 ಭಾಗ ಸ್ಥಳೀಯ ತಳಿಗಳು ಪ್ರಸ್ತುತ ವಿನಾಶದ ಅಂಚಿನಲ್ಲಿವೆ .
★ ಬಹು ರಾಷ್ಟ್ರೀಯ ಭೀಜ ಕಂಪನಿಗಳು ಸ್ಥಳೀಯ ತಳಿಗಳನ್ನು ಪೋಷಕ ತಳಿಗಳನ್ನಾಗಿ ಉಪಯೋಗಿಸಿಕೊಂಡು ಹೈಬ್ರಿಡ್ ಅಥವಾ ವಂಶವಾಹಿನಿ ಮಾರ್ಪಾಟು ತಳಿಗಳನ್ನಾಗಿ ಅಭಿವೃದ್ಧಿ ಮಾಡಿ ಸ್ಥಳೀಯ ತಳಿಗಳ ನೆಲೆಯನ್ನು ನಾಶ ಮಾಡುತ್ತಿದ್ದಾರೆ
★ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗಳು ಸ್ಥಳೀಯ ತಳಿಗಳ ಅಭಿವೃದ್ಧಿಯಲ್ಲಿ ಹೆಚ್ಚು ಅಶಕ್ತಿ ತೋರಿಸುತ್ತಿಲ್ಲ.
★ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಡಿಗ್ರಿ ಪಡೆದ ಯುವಕರೂ ಸಹ ಹಳ್ಳಿಗಳ ಕಡೆ ತಿರುಗಿ ನೋಡುತ್ತಿಲ್ಲದಿರುವ ವಾತಾವರಣದಲ್ಲಿ ವಯಸ್ಸಾದ ಹಿರಿಯರು ಕೃಷಿ ಕೆಲಸಗಳನ್ನು ನಿಭಾಯಿಸಲು ಸಾದ್ಯವಾಗುತ್ತಿಲ್ಲ.
★ ಹೀಗಾಗಿ ಕೃಷಿ ವಲಯದ ಉಳಿವಿಗಾಗಿ , ಬೆಳೆ ವೈವಿಧ್ಯತೆಗೆ ಅಗತ್ಯವಿರುವ ಸ್ಥಳೀಯ ಸಸ್ಯ ತಳಿಗಳು ಪೂರ್ಣ ನಶಿಸಿ ಹೋಗುವ ಮುನ್ನ ಅವುಗಳನ್ನು ಕಾಪಾಡುವ ಜವಾಬ್ದಾರಿಯನ್ನು ಯುವಕರು ತೆಗೆದುಕೊಳ್ಳಬೇಕಾಗುತ್ತದೆ.
★ಹಾಗಂತ ಯುವಕರು ಬೇರೆ ವೃತ್ತಿಯಿಂದ ಬರುವ ಆಧಾಯ ವನ್ನು ಸಂಪೂರ್ಣವಾಗಿ ಕಳೆದುಕೊಂಡು ಕೃಷಿ ಆದಾಯವನ್ನೇ ನಂಬಿಕೊಂಡು ಆರ್ಥಿಕವಾಗಿ ಸೊರಗಬೇಕಿಲ್ಲ.
★ಹಣ ಸಂಪಾದನೆ ವೃತ್ತಿಗಳಲ್ಲಿ ಸ್ವಲ್ಪ ಸಮಯ ಕಡಿಮೆ ಮಾಡಿ ಪರಿಸರ ಕೃಷಿ, ಅಳಿವಿನಂಚಿನಲ್ಲಿರುವ ಸಸ್ಯ, ಭೀಜ, ಪ್ರಾಣಿ ಸಂಕುಲಗಳನ್ನು ಉಳಿಸುವಲ್ಲಿ ತಮ್ಮ ಸಮಯವನ್ನು ಹಂಚಿ ಕೊಳ್ಳಬೇಕಾಗುತ್ತದೆ ಅಥವಾ ಕೃಷಿಯಲ್ಲಿ ಸಂಪೂರ್ಣ ವಾಗಿ ತೊಡಗಿಸಿಕೊಳ್ಳ ಬಯಸುವ ಯುವಕರು ಹೆಚ್ಚಿನ ವರಮಾನಕ್ಕಾಗಿ ಕೃಷಿ ಪೂರಕವಾದ ಡೈರಿ, ಕುರಿ, ಕೋಳಿ, ಮೇಕೆ ಸಾಕಾಣಿಕೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಸ್ಥಳೀಯ ಅನುಕೂಲಗಳಿಗುಣವಾಗಿ ಸಹ ಕೈಗೊಳ್ಳಬಹುದು.

ಈ ಯುವಕರ ಕೈ ಹಿಡಿದಿರುವುದು ಸಹ ಇಂತಹ ಪಯತ್ನಗಳೇ ! ಸುಂದರ್ ಭೀಜ ಸಂರಕ್ಷಣೆ ಜೊತೆಗೆ ಫೋಟೋಗ್ರಫಿ ಮಾಡುತ್ತಿದ್ದರೆ ಪ್ರದೀಪ್ ಕುಮಾರ್ ಕೋಳಿಸಾಗಾಣಿಕೆ ಯನ್ನು ಉಪ ಕಸುಬಾಗಿ ಆಯ್ದು ಕೊಂಡಿದ್ದಾರೆ. ಭುವನೇಶ್ವರ್ ನಾಯಿಗಳ ಸಂತಾನೋತ್ಪತ್ತಿ, ರಾಜ ಶೇಖರ್ ವಿಡಿಯೋಗ್ರಾಫಿ, ಯುವರಾಜ್ ತೋಟದ ಜೊತೆ ಶಿಲ್ಪ ಕಲೆಯಲ್ಲಿ ಹಾಗೂ ಪ್ರದೀಪ್ ಭೀಜದ ಉಂಡೆಗಳನ್ನು ಮಾಡಿ ಮಾರಾಟ ಮಾಡುವ ಕೆಲಸ ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರುಗಳ ನಡೆ ಮತ್ತಷ್ಟು ಯಶಸ್ವಿಯಾಗಿ, ಯುವ ಪೀಳಿಗೆಗೆ ಆದರ್ಶಪ್ರಾಯವಾಗಲೆಂದು ಹಾರೈಸೋಣ!

‍ಲೇಖಕರು Admin

17 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading