ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುವ ಪೀಳಿಗೆಯ ಐಕಾನ್..

-ರವೀಂದ್ರ ಕೆ ಆರ್

ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಹಾಗೂ ರವಿ ಬಸ್ರೂರು ಸ್ಟುಡಿಯೋ.

ಶ್ರೀಮತಿಯ ಅಪ್ಪ ಜನಿಸಿ ಬಾಳಿದ, ಕುಂದಾಪುರದ ಸಮೀಪವಿರುವ ಬಸ್ರೂರಿಗೆ, ಶ್ರೀಮತಿಯೊಂದಿಗೆ ಇತ್ತೀಚೆಗೆ ಹೋಗಿದ್ದೆ. ಬಹಳ ವರ್ಷಗಳಿಂದ ಸಂಪರ್ಕ ತಪ್ಪಿದ್ದ, ಈಗಲೂ ಅಲ್ಲಿರುವ ನಿಕಟ ಸಂಬಂಧಿಕರನ್ನು ಬೇಟಿ ಮಾಡಿದ್ದು ಅತೀವ ಹರ್ಷ ತಂದಿತು.

ಈ ಊರಿಗೆ ಪ್ರವೇಶಿಸುವಾಗ ಸಹಜವಾಗಿಯೇ ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯ ಪಾತ್ರ – ಚಿತ್ರಗಳು ನನ್ನ ಮನದಲ್ಲಿ ಸುಳಿದವು. ಆದರೆ, ಈಗ ಬಸ್ರೂರಿನಲ್ಲಿ ಆ ಕೃತಿಯ ಕಾಲಘಟ್ಟದ ಸಂದರ್ಭಗಳು ಮಾಯವಾಗಿ ಅನೇಕ ದಶಕಗಳೇ ಸಂದಿವೆ. ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗಳ ಹೆಚ್ಚಿನ ಹಳ್ಳಿಗಳಂತೆ ಈ ಹಳ್ಳಿಯೂ ಸಾಕಷ್ಟು ಬೆಳೆದಿದೆ, ಅಭಿವೃದ್ಧಿ ಹೊಂದಿದೆ. ಈ ಘಟ್ಟದ ಕೆಳಗಿನ ಜನರ ಕ್ರಿಯಾಶೀಲತೆ, ಶ್ರಮಶೀಲತೆ ಹಾಗೂ ಉದ್ಯಮಶೀಲತೆಗಳು ಅಚ್ಛರಿ ಮೂಡಿಸುತ್ತವೆ.

ಈ ಬಸ್ರೂರಿನ ಬೆಳವಣಿಗೆಗೆ ಕಿರೀಟವಿಟ್ಟಂತೆ, ಇಂದು ಚಲನಚಿತ್ರ ರಂಗದಲ್ಲಿ ಮಿಂಚುತ್ತಿರುವ ಹಾಗೂ ಅಪಾರ ಸದ್ದು ಮಾಡುತ್ತಿರುವ ಇಲ್ಲಿನ ಸ್ವರ ಮಾಂತ್ರಿಕ ರವಿ ಬಸ್ರೂರು ಅವರ ಮ್ಯೂಸಿಕ್ ಅಂಡ್ ಮೂವೀಸ್ ಸ್ಟುಡಿಯೋ ಇಲ್ಲಿ ಎದ್ದು ನಿಂತಿದೆ.

ರವಿ ಬಸ್ರೂರು ಅವರು ನನ್ನ ಗಮನ ಹಾಗೂ ಮನ ಸೆಳೆದದ್ದು – KGF Chapter 1 ಚಲನಚಿತ್ರದಲ್ಲಿ, “ಗರ್ಭದಿ ನನ್ನಿರಿಸೀ….” ಎಂದು, ಮಗನೇ ತಾಯಿಗೆ ಜೋಗುಳ ಹಾಡಿದಂತೆ ಭಾಸವಾಗುವ ಹಾಡಿನ, ವಿಶಿಷ್ಠ ಸ್ವರ – ಲಯದ ಸಂಗೀತ ಸಂಯೋಜನೆಯಿಂದ.

ಬಸ್ರೂರಿನ ದೊಡ್ಕೇರಿಯ ಮೂಲೆಯಲ್ಲಿ, ಕಾಡಿನ ಮಧ್ಯೆ ಸಿನೆಮಾ ಜಗತ್ತು ತೆರೆದುಕೊಂಡಂತೆ ತೋರುವ ಈ ಸ್ಟುಡಿಯೋ ಎದ್ದು ನಿಂತಿರುವ ಪರಿ ಮಾತ್ರಾ ಅಚ್ಛರಿಯೇ ಸರಿ. ಸಂಗೀತ ಸಂಯೋಜನೆಯ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಹಾಗೂ ತಂತ್ರಜ್ಞರನ್ನು ಹೊಂದಿರುವ ಈ ಸ್ಟುಡಿಯೋದ ಪ್ರತೀ ವಿನ್ಯಾಸದಲ್ಲೂ ರವಿ ಬಸ್ರೂರು ಅವರ ಕಲ್ಪನೆಯ ‘ನನ್ನ ಹಳ್ಳಿ, ನನ್ನ ಮನೆ’ ಎಂಬ ದೇಸೀತನ ಎದ್ದು ಕಾಣುತ್ತದೆ. ಒಬ್ಬ ಧೀರ ಕನಸಿಗ ಮಾತ್ರಾ ಇಂಥಹಾ ಸಾಹಸಕ್ಕೆ ಕೈ ಹಾಕಬಲ್ಲ.

ಸ್ಟುಡಿಯೋದಲ್ಲಿ ಸುಮಾರು 15 ಜನ ಕೆಲಸ ಮಾಡುತ್ತಿರಬಹುದು ಎಂದು ಪ್ರವೇಶ ದ್ವಾರದಲ್ಲಿ ಕoಡ ಪಾದರಕ್ಷೆಗಳು ಸೂಚಿಸಿದವು. ಉಳಿದಂತೆ ಇಲ್ಲಿ ನೀರವ ಮೌನ. ಎಲ್ಲರೂ ಅವರವರ ಕೆಲಸದಲ್ಲಿ ತಲ್ಲೀನ. ಸಂಗೀತದ ಸೃಜನಶೀಲತೆಯ ಕೆಲಸ ಅಪಾರ ತಾಳ್ಮೆ, ಧ್ಯಾನದ ಮೌನ, ತಲ್ಲೀನತೆಗಳನ್ನು ಬೇಡುತ್ತದೆ.

ರವಿ ಬಸ್ರೂರು ಅವರು ಇರಲಿಲ್ಲ. Digital Music Programming ರೂಮ್ ನಲ್ಲಿದ್ದ ಜಗದೀಶ್ ಎಂಬ Music programmer ನಮ್ಮನ್ನು ಕಂಡು ಮಾತನಾಡಿಸಿ ಸ್ಟುಡಿಯೋ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. ಅವರ ಕೆಲಸಕ್ಕೆ ತೊಂದರೆಯಾಗಬಾರದೆಂದು ನಾವು ಯಾವುದೇ ವಿಭಾಗಗಳಿಗೆ ಒಳ ಹೋಗದೇ, ಹೊರಗಿನಿಂದಲೇ ನೋಡಿ, ಅವರಿಗೆ ಧನ್ಯವಾದಗಳನ್ನು ತಿಳಿಸಿ, ನಿರ್ಗಮಿಸಿದೆವು.

ಇಂದು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿರುವ ಕನ್ನಡ, ತೆಲುಗು, ತಮಿಳು,ಮಲಯಾಳಂ ಹಾಗೂ ಹಿಂದಿಯ ಅನೇಕ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಅಲ್ಲದೇ ತುಳು ಚಿತ್ರಗಳಿಗೆ, ನಮ್ಮ ರಾಜ್ಯದ ಈ ಮೂಲೆಯ ಹಳ್ಳಿಯಲ್ಲಿರುವ ಸ್ಟುಡಿಯೋದಲ್ಲಿ ಸಂಗೀತದ ಸೃಷ್ಠಿ – ಸಂಯೋಜನೆಯಾಗುತ್ತಿರುವುದನ್ನು ಕಂಡು ನಮ್ಮ ನೆಲದ ಪ್ರತಿಭೆಗಳ ಬಗ್ಗೆ ಬೆರಗು ಹಾಗೂ ಅಪಾರ ಹೆಮ್ಮೆ ಮೂಡುತ್ತದೆ.

ಪ್ರಸ್ತುತ ರವಿ ಬಸ್ರೂರು, ಸಿನೆಮಾ ಗೀತ ರಚನೆ, ಗಾಯನ, ಸಂಗೀತ ಸಂಯೋಜನೆ, ಚಿತ್ರ ನಿರ್ದೇಶನ, ನಿರ್ಮಾಣ, ಲೋಹ ಶಿಲ್ಪ ಕಲಾ ಕೃತಿ ರಚನೆ – ಎಲ್ಲದರಲ್ಲೂ ತೊಡಗಿಕೊಂಡಿರುವ ಬಿಡುವಿಲ್ಲದ ಬಹುಶೃತ ಪ್ರತಿಭೆ. ಈ ಕಾರಣದಿಂದ ಇವರು ನಿಸ್ಸಂದೇಹವಾಗಿ ಇಂದಿನ ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿಯ Icon.

ಇಂಥವರ ಸಂತತಿ ಹೆಚ್ಚಾಗಲಿ.

‍ಲೇಖಕರು Admin

29 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading